ಗಾಝಾ ಬಗ್ಗೆ ಮಾತನಾಡಿದ್ದಕ್ಕೆ ಗುರಿ ಮಾಡಲಾಗುತ್ತಿದೆ: ಬಾಬ್ ವೈಲನ್
PC: x.com/SuppressedNws
ಸೋಮರ್‌ಸೆಟ್: ಗಸ್ಟನ್ಬರಿ ಉತ್ಸವದ ಕಾರ್ಯಕ್ರಮದಲ್ಲಿ ಯಹೂದಿ ವಿರೋಧಿ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ ಎಂಬ ಆರೋಪವನ್ನು ರ್‍ಯಾಪ್ ಗಾಯಕ ಬಾಬ್ ವೈಲನ್ ಅಲ್ಲಗಳೆದಿದ್ದಾರೆ. ವೈಲನ್ ಹೇಳಿಕೆ ಬಗ್ಗೆ ಪೊಲೀಸರು ತನಿಖೆಗೆ ಆದೇಶಿಸಿದ್ದು, ರಾಜಕಾರಣಿಗಳು, ಬಿಬಿಸಿ ಮತ್ತು ಉತ್ಸವ ಆಯೋಜಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಗಾಝಾ ಯುದ್ಧದ ಬಗ್ಗೆ ಮಾತನಾಡಿದ ಕಾರಣಕ್ಕೆ ತಂಡವನ್ನು ಗುರಿ ಮಾಡಲಾಗುತ್ತಿದೆ ಎಂದು ಬ್ಯಾಂಡ್ ತಂಡ ಹೇಳಿಕೆ ನೀಡಿದೆ. ನೈರುತ್ಯ ಇಂಗ್ಲೆಂಡ್ ನಲ್ಲಿ ಆಯೋಜಿಸಿದ್ದ ಉತ್ಸವದಲ್ಲಿ ಪ್ರೇಕ್ಷಕರಿಂದ "ಡೆತ್ ಟೂ ದ ಐಡಿಎಫ್ (ಇಸ್ರೇಲ್ ಡಿಫೆನ್ಸ್ ಫೋರ್ಸಸ್)" ಎಂಬ ಘೋಷಣೆಗಳು ಕೇಳಿಬಂದ ಹಿನ್ನೆಲೆಯಲ್ಲಿ ತಂಡದ ಮುಖ್ಯಸ್ಥ ಬಾಬ್ ವೈಲನ್ ಅವರು ಅಪರಾಧ ಎಸಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಬ್ರಿಟನ್ ಸರ್ಕಾರ ಇದನ್ನು ದ್ವೇಷಭಾಷಣದ ಭೀತಿ ಹುಟ್ಟಿಸುವಂಥದ್ದು ಎಂದು ಕರೆದಿದ್ದು, ಯಹೂದಿವಿರೋಧಿ ಭಾವನೆಗಳನ್ನು ನೇರಪ್ರಸಾರ ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಬಿಬಿಸಿ ಹೇಳಿದೆ. ಅಮೆರಿಕದ ಅಧಿಕಾರಿಗಳು ಈ ಸಂಗೀತ ಕಲಾವಿದರ ವೀಸಾ ರದ್ದುಪಡಿಸಿದ್ದಾರೆ.
ಹಮಾಸ್ ವಿರುದ್ಧದ ಇಸ್ರೇಲ್ ಯುದ್ಧ ವಿಶ್ವಾದ್ಯಂತ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಿದ್ದು, ಫೆಲಸ್ತೀನ್ ಪರ ಪ್ರತಿಭಟನೆಗಳು ಹಲವು ರಾಜಧಾನಿಗಳಲ್ಲಿ ಮತ್ತು ಕ್ಯಾಂಪಸ್ ಗಳಲ್ಲಿ ನಡೆಯುತ್ತಿವೆ. ಇಸ್ರೇಲ್ ಹಾಗೂ ಇಸ್ರೇಲ್ ಬೆಂಬಲಿಗರು ಈ ಪ್ರತಿಭಟನೆಯನ್ನು ಯಹೂದಿ ವಿರೋಧಿ ಎಂದು ಕರೆದಿದ್ದರೆ, ವಿರೋಧಿಗಳ ಧ್ವನಿಯನ್ನು ಅಡಗಿಸುವ ಪ್ರಯತ್ನ ಇದು ಎಂದು ಇಸ್ರೇಲ್ ವಿರೋಧಿಗಳು ವಿಶ್ಲೇಷಿಸಿದ್ದಾರೆ.