ಸಂಘಿ ಫ್ಯಾಶಿಸಂನ ಶತ್ರುಗಳಾಗದ ವಿರೋಧ ಪಕ್ಷಗಳು ಜನಮಿತ್ರರಾಗಬಲ್ಲರೇ?

ಕಾಂಗ್ರೆಸ್ ಆದಿಯಾಗಿ ವಿರೋಧ ಪಕ್ಷಗಳು ಕೂಡ ಬಿಜೆಪಿಯಂತೆ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ನೂಲಿನಲ್ಲಿ ಹೆಣೆದ ಭಿನ್ನ ವಿನ್ಯಾಸದ ಅರಿವೆಯಷ್ಟೆ. ಹೀಗಾಗಿ ಅವಕ್ಕೆ ಚುನಾವಣೆಯಾಚೆಗೆ ಬಿಜೆಪಿಯೊಂದಿಗೆ ರಾಜಕೀಯ, ಆರ್ಥಿಕ ಮತ್ತು ಸೈದ್ಧಾಂತಿಕ ಕ್ಷೇತ್ರಗಳಲ್ಲಂತೂ ವೈರುಧ್ಯಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಹೀಗಾಗಿ ಚುನಾವಣಾ ಕಣದಲ್ಲೂ ಈ ವಿರೋಧ ಪಕ್ಷಗಳು ಜನತೆಯ ಪರವಾಗಿ ಬಿಜೆಪಿಯನ್ನು ಕಟ್ಟಿಹಾಕಬಹುದು ಎಂದು ನಿರೀಕ್ಷಿಸಲಾಗುವುದಿಲ್ಲ. ಆದರೂ 2024ರ ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆಗೆ ಹೋದಾಗ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ವಿರೋಧ ಪಕ್ಷದ ಅಭ್ಯರ್ಥಿಗೆ ವೋಟು ಹಾಕಬೇಕು. ಆದರೆ ಇದರಿಂದ ಬಿಜೆಪಿ ಸೋಲುವುದಿಲ್ಲ ಮತ್ತು ವಿರೋಧ ಪಕ್ಷಗಳು ಫ್ಯಾಶಿಸ್ಟ್ ಅಪಾಯದಿಂದ ದೇಶವನ್ನು ಕಾಪಾಡಲಾರರು ಎಂಬ ಅರಿವಿನೊಂದಿಗೇ ವೋಟು ಹಾಕಬೇಕು.

Update: 2024-02-28 05:43 GMT
Editor : Thouheed | Byline : ಶಿವಸುಂದರ್

ಬಿಜೆಪಿ ಮತ್ತು ಸಂಘೀ ಫ್ಯಾಶಿಸಂ ಭಾರತದ ಜನತೆಯ ಪ್ರಧಾನ ಶತ್ರು ಎಂಬುದರಲ್ಲಿ ಕನಿಷ್ಠ ರಾಜಕೀಯ ಪ್ರಜ್ಞೆಯುಳ್ಳ ಯಾರಿಗೂ ಸಂದೇಹವಿರಲಾರದು. ಆದ್ದರಿಂದಲೇ 2024ರ ಚುನಾವಣೆಯಲ್ಲಿ ಬಿಜೆಪಿ ಸೋಲಬೇಕೆಂಬುದು ಈ ದೇಶದ ಭವಿಷ್ಯದ ಬಗ್ಗೆ ನೈಜ ಕಾಳಜಿ ಇರುವ ಎಲ್ಲರ ಅಂತರಾಳದ ಆಶಯವಾಗಿಬಿಟ್ಟಿದೆ.

ಈ ದೇಶದಲ್ಲಿ ಕೆಲವು ಅತ್ಯಂತ ಮೂಲಭೂತ ಬದಲಾವಣೆಯನ್ನು ತರಬೇಕಾಗಿರುವುದರಿಂದ 2024ರಲ್ಲಿ ಮೋದಿ ಪ್ರಧಾನಿಯಾಗುವುದು ಅತ್ಯಗತ್ಯ ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಠರಾವು ಪಾಸು ಮಾಡಿದೆ. ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟನೆ ಮಾಡುತ್ತಾ ಮೋದಿಯವರು ಮುಂದಿನ ಒಂದು ಸಾವಿರ ವರ್ಷಗಳ ಭಾರತದ ಭವಿತವ್ಯಕ್ಕೆ ಇಂದು ಅಡಿಪಾಯ ಬಿದ್ದಿದೆ ಎಂದು ಘೋಷಿಸಿದಾಗಲೇ ಈ ದೇಶದ ಸೀತೆಯರು, ಶಂಭೂಕರು ಮತ್ತು ಏಕಲವ್ಯರುಗಳಿಗೆ ಬರಲಿರುವ ಮೂಲಭೂತ ಬದಲಾವಣೆಗಳ ಸೂಚನೆ ಸಿಕ್ಕಿದೆ.

2024ರಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಂದ ನಂತರ ಭಾರತದ ಸಂವಿಧಾನಕ್ಕೆ ಮುಕ್ತಾಯ ಹಾಡುವುದು ಸಂಘಪರಿವಾರದ ಅಷ್ಟೇನೂ ಹಿಡನ್ ಅಲ್ಲದ ಅಜೆಂಡಾ.

ಈ ದೇಶದ ದೀನ ದಲಿತರಿಗೆ ಮತ್ತು ಮುಸ್ಲಿಮರಿಗೆ ನಾಗರಿಕತ್ವ ನಿರಾಕರಣೆ ಅಥವಾ ಹಕ್ಕುಗಳಿಲ್ಲದ ನಿರಾಶ್ರಿತರನ್ನಾಗಿಸುವುದು, ಸಿಎಎ, ಎನ್‌ಪಿಆರ್/ಎನ್‌ಆರ್‌ಸಿ, ಲವ್ ಜಿಹಾದ್ ಕಾಯ್ದೆಗಳು, ಹಿಂದೂ ನಾಗರಿಕ ಸಂಹಿತೆ ಹೇರಿಕೆ, ಮಾಂಸ ನಿಷೇಧ ಇತ್ಯಾದಿಗಳ ಜೊತೆಗೆ ಧಾರ್ಮಿಕ ಸ್ವಾತಂತ್ರ್ಯದ ನಿರ್ಬಂಧ, ಸಾಮಾಜಿಕ-ಆರ್ಥಿಕ ಹಕ್ಕುಗಳ ನಿರಾಕರಣೆ, ಅವಕಾಶ ಹಾಗೂ ಸ್ಥಾನಮಾನಗಳಲ್ಲಿನ ಸಮಾನತೆಯ ಬದಲು ಶ್ರೇಣೀಕರಣದ ಮರುಸ್ಥಾಪನೆ, ಭ್ರಾತೃತ್ವದ ಬದಲು ಗುಲಾಮಗಿರಿ, ಹಕ್ಕುಗಳ ಬದಲು ಕರ್ತವ್ಯ, ಭಾರತದ ಅರೆ ಒಕ್ಕೂಟ ಮತ್ತು ಅರೆ ಗಣರಾಜ್ಯದ ಸ್ವರೂಪವನ್ನು ಅಧಿಕೃತವಾಗಿ ಅಳಿಸಿಹಾಕುತ್ತಾ ಸಾರಾಂಶದಲ್ಲಿ ಬ್ರಾಹ್ಮಣಶಾಹಿ-ಬಂಡವಾಳಶಾಹಿಗಳ ಸಾಮ್ರಾಜ್ಯ ಸ್ಥಾಪಿಸುವುದು ಸಂಘಿಗಳ ದೂರದ ಉದ್ದೇಶ. 2024ರ ಚುನಾವಣೆಯಲ್ಲಿ ಗೆದ್ದು ಬಂದರೆ ಅವುಗಳಲ್ಲಿ ಹಲವನ್ನು ಅಥವಾ ಬಹುಪಾಲನ್ನು ಹೇರುವ ಸನ್ನಾಹದಲ್ಲಿ ಸಂಘಿಗಳಿದ್ದಾರೆ.

2025ರಲ್ಲಿ ಆರೆಸ್ಸೆಸ್ ಸ್ಥಾಪನೆಯಾಗಿ ನೂರು ವರ್ಷಗಳಾಗುತ್ತಿರುವ ಹೊತ್ತಿನಲ್ಲಿ ಭಾರತವನ್ನು ಸಾಂವಿಧಾನಿಕ ಹಿಂದೂ ಗಣತಂತ್ರವನ್ನಾಗಿ ಘೋಷಿಸುವುದು ಅದರ ಉದ್ದೇಶ. ಅದಕ್ಕೆ ಬೇಕಿರುವ ಸಾಮಾಜಿಕ ಹಾಗೂ ರಾಜಕೀಯ ಸಮ್ಮತಿಯನ್ನು ಕ್ರೋಡೀಕರಿಸುವುದು ಅವರ 2024ರ ಚುನಾವಣೆ ಯೋಜನೆಯ ಅಂತರ್ಗತ ಭಾಗವೂ ಆಗಿದೆ.

ಆದ್ದರಿಂದ 2024ರ ಲೋಕಸಭಾ ಚುನಾವಣೆಯು ಒಂದು ಗಣರಾಜ್ಯವಾಗಿ ಭಾರತದ ಅಳಿವು ಉಳಿವಿನ ಬಹುಮುಖ್ಯ ಸಮರವಾಗಿದೆ. ಹೀಗಾಗಿಯೇ ಭಾರತವು ಗೆಲ್ಲಬೇಕೆಂದು ಆಶಿಸುವರೆಲ್ಲಾ, ಬಿಜೆಪಿ ಸೋಲಬೇಕೆಂದು ಬಯಸುವುದು ಸಹಜವಾಗಿದೆ.

ಆದರೆ ಆಶಿಸಿದ ಮಾತ್ರಕ್ಕೆ ಬಿಜೆಪಿ ಸೋಲುವುದೇ? ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಬಿಜೆಪಿಯನ್ನು ಸೋಲಿಸುವ ಇರಾದೆ ಅಥವಾ ಸಾಮರ್ಥ್ಯವನ್ನು ಹೊಂದಿವೆಯೇ? ಬೃಹತ್ ಸಂವಿಧಾನದ ಮೇಳಗಳು, ಕೇರಿಗೆ-ಕಚೇರಿಗೆ ಸೀಮಿತವಾಗುವ ಜಾಥಾಗಳು, ಕೇರಿ ಕೇರಿಗಳಲ್ಲಿ, ಹಟ್ಟಿಗಳಲ್ಲಿ ನಡೆಯುತ್ತಿರುವ ಹಿಂದುತ್ವದ ಸಂಘಟನೆಯನ್ನು ವಿಫಲಗೊಳಿಸಬಲ್ಲದೇ? ಬಿಜೆಪಿ ಒಲವಿನ ಜನರಲ್ಲಿ ನ್ಯಾಯಪ್ರಜ್ಞೆ ಹುಟ್ಟಿಸುವುದೇ? ಎಲ್ಲಕ್ಕಿಂತ ಮುಖ್ಯವಾಗಿ ಬಹುಸಂಖ್ಯಾತ ಮತದಾರರಿಗೆ ಎಟುಕದ ವಿರೋಧ ಪಕ್ಷಗಳು ಮತ್ತು ಸಂವಿಧಾನದ ಆಶಯಗಳು ಎಟುಕುತ್ತಿರುವ ಬಿಜೆಪಿಗಿಂತ ಮುಖ್ಯವೆಂದು ಅನಿಸುತ್ತಿದೆಯೇ?

ಬಿಜೆಪಿ ಸೋಲಬೇಕೆಂದು ಬಯಸುವವರು ಮತ್ತು ಈ ದೇಶವನ್ನು ಗಣರಾಜ್ಯವನ್ನಾಗಿ ಉಳಿಸಬಯಸುವವರು ಗಾಂಧಾರಿ ಕುರುಡಿನ ಪಟ್ಟಿಯನ್ನು ಕಳಚಿ ಈ ಪ್ರಶ್ನೆಗಳಿಗೆ ಎದುರಾಗಬೇಕಿದೆ.

ಬೇರುಬಿಡುತ್ತಿರುವ ಹಿಂದುತ್ವ-ಬೇರಿಲ್ಲದ ‘ವಿರೋಧ’

ಕಳೆದ ಮೂವತ್ತು ವರ್ಷಗಳಲ್ಲಿ ಸಂಘಿ-ಬಿಜೆಪಿಯ ಈ ಸಿದ್ಧಾಂತ ದೇಶದ ಜನಮಾನಸದಲ್ಲಿ ಆಳವಾಗಿ ಬೇರುಬಿಡುತ್ತಿದೆ. ಅದಕ್ಕೆ 2019ರ ಲೋಕಸಭಾ ಚುನಾವಣೆಯೇ ಸಾಕ್ಷಿ. 2014ರ ಚುನಾವಣೆಯಲ್ಲಿ ಕನಿಷ್ಠ ಉದ್ಯೋಗ ಸೃಷ್ಟಿ, ಕಪ್ಪು ಹಣ ರದ್ದತಿ ಇನ್ನಿತ್ಯಾದಿ ಹುಸಿ ಭರವಸೆಗಳನ್ನಾದರೂ ನೀಡಿದ ಬಿಜೆಪಿ, 2019ರಲ್ಲಿ ಕೇವಲ ಹಿಂದೂ ರಾಷ್ಟ್ರ, ಬಲಿಷ್ಠ ನಾಯಕತ್ವ, ಮುಸ್ಲಿಮ್‌ದ್ವೇಷ ಇವುಗಳನ್ನೇ ಮುಂದು ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಿತು. ಆ ವೇಳೆಗಾಗಲೇ ದೇಶದ ಕೋರ್ಟು, ಚುನಾವಣಾ ಆಯೋಗ ಇನ್ನಿತ್ಯಾದಿ ಸಂಸ್ಥೆಗಳು ಮೋದೀಕರಣಗೊಂಡಿದ್ದು ನಿಜವಾದರೂ ಜನರು ಕೂಡ 2014ಕ್ಕಿಂತ ಹೆಚ್ಚಿನ ಬಹುಮತಗಳೊಂದಿಗೆ ದ್ವೇಷ ಕಕ್ಕುವ ಮೋದಿಯನ್ನು, ಚೋಟಾ ಮೋದಿಗಳನ್ನು, ಪ್ರಜ್ಞಾಸಿಂಗ್, ಅನಂತ ಕುಮಾರ್ ಹೆಗಡೆ, ಸೂರ್ಯನಂತಹವರನ್ನು ಆಯ್ಕೆ ಮಾಡಿದರು.

ಆ ನಂತರದ ಬಹುಪಾಲು ಶಾಸನಸಭಾ ಚುನಾವಣೆಗಳಲ್ಲಿ ಬಿಜೆಪಿಯ ವೋಟು ಪ್ರಮಾಣ ಹಿಂದಿನ ಹತ್ತು ವರ್ಷಗಳಿಗೆ ಹೋಲಿಸಿದರೆ ಏರುತ್ತಲೇ ಹೋಗಿದೆ. ಉತ್ತರ ಭಾರತವನ್ನು ಬಿಡಿ, ಕರ್ನಾಟಕದಲ್ಲಿ ಚುನಾವಣೆ ಸೋತರೂ ಅದರ ವೋಟು ಗಳಿಕೆಯ ಪ್ರಮಾಣಕ್ಕೆ ಧಕ್ಕೆ ಆಗಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದ್ದರೂ ಬಿಜೆಪಿಯ ವೋಟು ಗಳಿಕೆಯ ಪ್ರಮಾಣ ಎರಡು ಪಟ್ಟು ಹೆಚ್ಚಿದೆ. ತಮಿಳುನಾಡು ಮತ್ತು ಕೇರಳಗಳಲ್ಲೂ ಸೀಟು ಪಡೆದುಕೊಳ್ಳದಿದ್ದರೂ ರಾಜಕೀಯ ಮಾನ್ಯತೆಯನ್ನು ಪಡೆದುಕೊಳ್ಳುತ್ತಿದೆ ಮತ್ತು ವೋಟು ಗಳಿಕೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಿದೆ.

ಉತ್ತರ ಭಾರತದಲ್ಲಿ ಇತ್ತೀಚೆಗೆ ನಡೆದ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ವೋಟು ಗಳಿಕೆಯ ಪ್ರಮಾಣ ದಲಿತರಲ್ಲಿ ಮತ್ತು ಒಬಿಸಿಗಳಲ್ಲಿ ಮತ್ತು ಆದಿವಾಸಿಗಳಲ್ಲಿ ಶೇ. 3-10ರಷ್ಟು ಹೆಚ್ಚಿದೆ. ಆ ರಾಜ್ಯಗಳಲ್ಲಿ ಕಾಂಗ್ರೆಸ್‌ನ ವೋಟು ಪ್ರಮಾಣ ಪಾತಾಳಕ್ಕೆ ಕುಸಿಯದೆ ಹೋಗಿರಲು ಏಕೈಕ ಕಾರಣ ಮುಸ್ಲಿಮರ ವೋಟು ಹಿಂದಿನ ಚುನಾವಣೆಗಿಂತ ಶೇ. 25-40ರಷ್ಟು ಹೆಚ್ಚುವರಿಯಾಗಿ ಬಿದ್ದಿರುವುದು.

ಇದು ಇಂದಿನ ವಾಸ್ತವ. ಇದು ಸಾಧ್ಯವಾಗಿರುವುದಕ್ಕೆ ಕಾರ್ಪೊರೇಟ್ ಬಲ, ಕಾರ್ಪೊರೇಟ್ ಮಾಧ್ಯಮಗಳ ಕೂಡಾವಳಿ, ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಎಲ್ಲವೂ ಕಾರಣ. ಅದೆಲ್ಲಕ್ಕಿಂತ ಮುಖ್ಯವಾಗಿ ಇವೆಲ್ಲವನ್ನೂ ಬಳಸಿಕೊಂಡು ಅದು ಸಮಾಜದಲ್ಲಿ ಸೃಷ್ಟಿಸಿರುವ ಕೋಮುವಾದಿ ದ್ವೇಷ ಧ್ರುವೀಕರಣ ಇದರ ಅಡಿಪಾಯ. ಹಿಂದುತ್ವದ ವೋಟ್ ಬ್ಯಾಂಕ್ ಬಂಧುತ್ವವಾಗಿ ಬದಲಾಗದೆ ಬಿಜೆಪಿ ಸೋಲದು.

ಹೀಗಾಗಿ ಬಿಜೆಪಿ ಮತ್ತೊಂದು ಚುನಾವಣಾ ಪಕ್ಷ ಮಾತ್ರವಲ್ಲ ಅದು ಪ್ರತಿನಿತ್ಯ ಹಲವು ಆಯಾಮಗಳಲ್ಲಿ ಜನರನ್ನು ತನ್ನ ರಾಜಕೀಯ ಮತ್ತು ಸೈದ್ಧಾಂತಿಕ ಯೋಜನೆಗಳ ಸುತ್ತ ಸಂಘಟಿಸುತ್ತಾ ಒಂದು ಹಿಂದುತ್ವ ಮತ ಸಮಾಜವನ್ನು ಕಟ್ಟುತ್ತಿದೆ. ಈ ಹಿಂದುತ್ವ ಮತಬ್ಯಾಂಕು ಸಹಜವಾಗಿಯೇ ಹಿಂದೂ ರಾಷ್ಟ್ರವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಒಮ್ಮೆ ಅಧಿಕಾರಕ್ಕೆ ಬಂದ ಮೇಲೆ ಹಿಂದುತ್ವ ಅಜೆಂಡಾಗೆ ಪ್ರಭುತ್ವದ ಬಲವೂ ಸೇರಿಕೊಂಡು ಹಿಂದುತ್ವದ ಯಾಜಮಾನ್ಯ ಸಮಾಜದ ಮೇಲೆ ಗಟ್ಟಿಯಾಗುತ್ತಿದೆ. ಅಲ್ಲದೆ ವಿರೋಧಿ ಹಾಗೂ ಪ್ರಜಾತಾಂತ್ರಿಕ ಧ್ವನಿಗಳು ಭ್ರಷ್ಟಗೊಳ್ಳುತ್ತಿವೆ ಅಥವಾ ದಮನಗೊಳ್ಳುತ್ತಿವೆ.

ಅಂದರೆ ಕಳೆದ ನೂರು ವರ್ಷಗಳಿಂದ,

-ಅದರಲ್ಲೂ ಕಳೆದ ಹತ್ತು ವರ್ಷಗಳಲ್ಲಿ ಸಂಘಿಗಳು ಸಮಾಜದಲ್ಲಿ ಸೃಷ್ಟಿಸಿರುವ ಹಿಂದುತ್ವ ಯಾಜಮಾನ್ಯವನ್ನು ಬಂಧುತ್ವದ ರಾಜಕಾರಣದಿಂದ ಸೋಲಿಸದೆ,

-ಜನಮಾನಸದೊಳಗೆ ಇಳಿದಿರುವ ಅದರ ಬೇರುಗಳನ್ನು ಕಡಿಯದೆ,

-ಹಿಂದೂ ರಾಷ್ಟ್ರದ ಸಂಚನ್ನು ರಾಜಕೀಯವಾಗಿ, ಸಂಘಟಿತವಾಗಿ ಮತ್ತು ಸೈದ್ಧಾಂತಿಕವಾಗಿ ಮತ್ತು ನೈತಿಕವಾಗಿ ಸೋಲಿಸದೆ..

ಬಿಜೆಪಿ ಚುನಾವಣೆಯಲ್ಲಿ ಸೋಲುವುದಿಲ್ಲ.

ಹೀಗಾಗಿ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಬೇಕೆಂದರೂ ಜನರನ್ನು ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ಪರ್ಯಾಯ ಪ್ರಜಾತಾಂತ್ರಿಕವಾಗಿ ಗೆದ್ದುಕೊಳ್ಳದೆ ಸಾಧ್ಯವಿಲ್ಲ.

ವಿರೋಧ ಪಕ್ಷಗಳೋ? ಒಂದೇ ನೂಲಿನ ಅರಿವೆಗಳೋ?

ಆದರೆ ಕಾಂಗ್ರೆಸ್‌ಗಾಗಲೀ, ಇತರ ವಿರೋಧ ಪಕ್ಷಗಳಿಗಾಗಲೀ ಆ ಉದ್ದೇಶವೂ ಇಲ್ಲ, ಸಿದ್ಧತೆಯೂ ಇಲ್ಲ. ಹೀಗಾಗಿಯೇ ಎದುರಾಳಿಯೇ ಇಲ್ಲದ ಯುದ್ಧದಲ್ಲಿ ಬಿಜೆಪಿ ಒಂದೊಂದೇ ರಾಜ್ಯಗಳನ್ನು, ಜನಸಮುದಾಯಗಳನ್ನು ಗೆಲ್ಲುತ್ತಾ ಸಾಗಿದೆ. 1984ರಲ್ಲಿ ಕಾಂಗ್ರೆಸ್ ಲೋಕಸಭೆಯಲ್ಲಿ 414 ಸೀಟುಗಳನ್ನು ಪಡೆದಿತ್ತು, ದೇಶಾದ್ಯಂತ ಶೇ. 49.2 ವೋಟು ಶೇರು ಪಡೆದಿತ್ತು. 2019ರಲ್ಲಿ ಅದು ಕೇವಲ 52 ಸೀಟುಗಳಿಗೂ ಮತ್ತು ಶೇ. 19 ವೋಟು ಶೇರಿಗೂ ಇಳಿದಿದೆ. 1984ರಲ್ಲಿ ಕೇವಲ ಎರಡು ಸೀಟುಗಳನ್ನು ಮತ್ತು ಶೇ. 7 ವೋಟು ಶೇರನ್ನು ಮಾತ್ರ ಪಡೆದಿದ್ದ ಬಿಜೆಪಿ 2019ರಲ್ಲಿ ಶೇ. 36ರಷ್ಟು ವೋಟು ಶೇರು ಮತ್ತು 303 ಸೀಟುಗಳನ್ನು ಪಡೆದಿದೆ. ಅಂದರೆ ಕಳೆದ 40 ವರ್ಷಗಳಲ್ಲಿ ಕಾಂಗ್ರೆಸ್ ಅರ್ಧದಷ್ಟು ಕುಸಿದಿದ್ದರೆ ಬಿಜೆಪಿ ಹತ್ತಾರು ಪಟ್ಟು ಬೆಳೆದಿದೆ. ಬೆಳೆದಿರುವುದು ಬಿಜೆಪಿ ಮಾತ್ರವಲ್ಲ, ಕೋಮು ದ್ವೇಷ, ಅಸಮಾನತೆ. ಕುಸಿದಿರುವುದು ಸಂವಿಧಾನ ಮತ್ತು ಸಮಾಜದ ನ್ಯಾಯಪ್ರಜ್ಞೆ.

ಏಕೆಂದರೆ ಸಾರದಲ್ಲಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳೂ ಬಿಜೆಪಿಯಂತೆ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ನೂಲಿನಲ್ಲಿ ಹೊಲಿದ ಅರಿವೆಗಳೇ ಆಗಿವೆ.

ವಾಸ್ತವವೆಂದರೆ ಇಂದು ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದವರು ರಾತ್ರಿ ಕಳೆಯುವುದರೊಳಗೆ ಬಿಜೆಪಿ ಸೇರುತ್ತಿದ್ದಾರೆ. ಮೊನ್ನೆ ಮೊನ್ನೆ ಬಿಜೆಪಿ ಸೇರಿದ ಮಹಾರಾಷ್ಟ್ರದ ಅಶೋಕ್ ಚವಾಣ್ ಅವರನ್ನೂ ಒಳಗೊಂಡಂತೆ ಇಂದು ಬಿಜೆಪಿಯಲ್ಲಿರುವ ಹಲವಾರು ನಾಯಕರು, ಸಂವಿಧಾನದ ವಿರುದ್ಧ ದಾಳಿಯನ್ನು ಮಾಡುತ್ತಾ ಭಾರತದ ಸಾಮಾಜಿಕ ಹಂದರವನ್ನು ಛಿದ್ರಛಿದ್ರಗೊಳಿಸುತ್ತಿರುವ ಬಿಜೆಪಿಯ ಹಲವಾರು ಮುಖ್ಯಮಂತ್ರಿಗಳು, ಕೇಂದ್ರ ಮಂತ್ರಿಗಳು ಕಾಂಗ್ರೆಸ್‌ನ ಹಿರಿಯ ನಾಯಕರುಗಳೇ ಆಗಿದ್ದರು. ಹೀಗಾಗಿಯೇ ಇಂದಿನ ಕಾಂಗ್ರೆಸ್ ಎಂದರೆ ನಾಳಿನ ಬಿಜೆಪಿ, ಇಂದಿನ ಬಿಜೆಪಿ ಎಂದರೆ ನಿನ್ನೆಯ ಕಾಂಗ್ರೆಸ್ ಎಂಬಂತಾಗಿದೆ.

ಅಶೋಕ ವಿಶ್ವವಿದ್ಯಾನಿಲಯದ ‘ತ್ರಿವೇದಿ ಸೆಂಟರ್ ಫಾರ್ ಪೊಲಿಟಿಕಲ್ ಡೇಟಾ’ ಮಾಡಿರುವ ಅಧ್ಯಯನದ ಪ್ರಕಾರ ಇಂದು ಭಾರತದ 30 ಶಾಸನ ಸಭೆಗಳಲ್ಲಿರುವ ಅಂದಾಜು ಬಿಜೆಪಿಯ 1,200 ಶಾಸಕರಲ್ಲಿ 700ಕ್ಕೂ ಹೆಚ್ಚಿನವರು ಇತರ ಪಕ್ಷಗಳಿಂದ ವಲಸೆ ಹೋದವರು. ಪ್ರಧಾನವಾಗಿ ಕಾಂಗ್ರೆಸ್‌ನಿಂದ!

ಇನ್ನು ಜೆಡಿಎಸ್, ಜೆಡಿಯು ಇತ್ಯಾದಿ ಪಕ್ಷಗಳ ಬಗ್ಗೆ ಹೆಚ್ಚು ಮಾತಾಡುವ ಅಗತ್ಯವೇ ಇಲ್ಲ. ಆ ಪಕ್ಷಗಳಿಗೆ ಭಾರತ ಗಣರಾಜ್ಯವನ್ನು ಮತ್ತು ಸಂವಿಧಾನವನ್ನು ಉಳಿಸಿಕೊಳ್ಳುವುದಕ್ಕಿಂತ ತಮ್ಮ ವರ್ಗ ಹಾಗೂ ಪಕ್ಷದ ಹಿತಾಸಕ್ತಿಯನ್ನು ಉಳಿಸಿಕೊಳ್ಳುವುದು ಮುಖ್ಯ. ಆಪ್, ಬಿಎಸ್‌ಪಿ, ಎಸ್‌ಪಿ ಯಂಥ ಪಕ್ಷಗಳೂ ಅಯೋಧ್ಯೆಯಲ್ಲಿ ಬಿಜೆಪಿಗಿಂತ ಭವ್ಯ ರಾಮಮಂದಿರವನ್ನು ತಾವು ಕಟ್ಟುತ್ತೇವೆ ಎಂದು ಘೋಷಿಸಿ ಹಿಂದುತ್ವ ರಾಜಕೀಯ ಇನ್ನಷ್ಟು ಬೇರೂರುವಂತೆ ಸಹಕರಿಸಿದವು.

ಫ್ಯೂಡಲ್ ರಾಜ್ ಹಿಂದುತ್ವದ ದಾಯಾದಿಯೇ ವಿನಃ ಶತ್ರುವಲ್ಲ!

ಟಿಎಂಸಿಯಂಥ ಪಕ್ಷಗಳು ತಮ್ಮ ರಾಜ್ಯದಲ್ಲಿ ಹರಿಬಿಟ್ಟಿರುವ ಗೂಂಡಾರಾಜ್ಯದ ದಮನ ಬಿಜೆಪಿಯನ್ನು ಆ ರಾಜ್ಯದಲ್ಲಿ ಬೇರೂರುವಂತೆ ಮಾಡುತ್ತಿದೆ. ಇದೇ ಕಾರಣಗಳಿಗಾಗಿಯೇ 2019ರ ಲೋಕಸಭಾ ಚುನಾವಣೆ ಯಲ್ಲೂ ಮತ್ತು 2021ರ ಪ. ಬಂಗಾಳ ಶಾಸನ ಸಭಾ ಚುನಾವಣೆಯಲ್ಲೂ, ಆ ರಾಜ್ಯದ ಆದಿವಾಸಿಗಳು ಮತ್ತು ದಲಿತರನ್ನೂ ಒಳಗೊಂಡಂತೆ ಹೆಚ್ಚಿನ ಹಿಂದೂ ವೋಟುಗಳು ಬಿಜೆಪಿಗೆ ಬಿದ್ದಿತು. ಇದೀಗ ಸಂದೇಶ್‌ಖಾಲಿಯಲ್ಲಿ ಆದಿವಾಸಿ ದಲಿತರ ಮೇಲೆ ಮತ್ತು ಮಹಿಳೆಯರ ಆ ಪಕ್ಷದ ನಾಯಕ ನಡೆಸಿರುವ ದೌರ್ಜನ್ಯವನ್ನು ಸಮರ್ಥಿಸಿಕೊಳ್ಳಲು ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಸಂಘಿ ರೇಪಿಸ್ಟುಗಳನ್ನು ಸಮರ್ಥಿಸಿಕೊಳ್ಳಲು ಏನೇನು ವಾದ ಬಳಸುತ್ತಿದ್ದರೋ ಅದನ್ನೆಲ್ಲಾ ಟಿಎಂಸಿ ಬಳಸುತ್ತಿದೆ.

ಮುಖ್ಯ ಆರೋಪಿ ಮುಸ್ಲಿಮನಾಗಿದ್ದರೂ, ಇತರ ಇಬ್ಬರು ಪ್ರಧಾನ ಆರೋಪಿಗಳು ಹಿಂದೂಗಳೇ ಆಗಿರುವುದರಿಂದ ಪ್ರಕರಣಕ್ಕೆ ಕೋಮುವಾದಿ ಬಣ್ಣ ಕೊಡಲು ಬಿಜೆಪಿ ವಿಫಲವಾಗಿದೆ. ಈ ಮುಖ್ಯ ಆರೋಪಿ ಶಹಜಹಾನ್ ಈ ಹಿಂದೆ ಸಿಪಿಎಂ ಹಾಗೂ ಕಾಂಗ್ರೆಸ್‌ನಲ್ಲಿದ್ದು ಈಗ ಟಿಎಂಸಿ ಸೇರಿಕೊಂಡಿದ್ದವರು. ಅವರ ಅನುಚರರು ಈ ಹಿಂದೆ ಬಿಜೆಪಿಯಲ್ಲಿದ್ದು ಈಗ ಟಿಎಂಸಿ ಸೇರಿಕೊಂಡವರು. ಆದರೆ ನೊಂದವರಿಗೆ ಟಿಎಂಸಿಯೇ ಅಲ್ಲಿ ಪ್ರಧಾನ ಶತ್ರು. ಬಿಜೆಪಿ ಕೋಮುವಾದಿ, ಅದನ್ನು ಸೋಲಿಸಲು ಟಿಎಂಸಿಗೆ ವೋಟು ಕೊಡಿ ಎಂದು ಸಂದೇಶ್‌ಖಾಲಿಯಲ್ಲಿ ಕೇಳಬೇಕೆಂದರೆ ಟಿಎಂಸಿ ಬಿಜೆಪಿಗಿಂತ ಜನರಿಗೆ ಭಿನ್ನವಾಗಿ ನೈತಿಕವಾಗಿ ಜನಪರವಾಗಿ ಕಾಣುವ ರಾಜಕೀಯವನ್ನು ರಾಜ್ಯಮಟ್ಟದಲ್ಲೂ ಅನುಸರಿಸಬೇಕಲ್ಲವೇ? ಅದಿಲ್ಲದೆ ಫ್ಯೂಡಲ್ ಜಾತಿವಾದಿ ರಾಜಕಾರಣದಿಂದ ತಳಮಟ್ಟದಲ್ಲಿ ಬೇರೂರುತ್ತಿರುವ ಸಂಘಿಗಳನ್ನು ಸೋಲಿಸಲಾಗುವುದೇ? ಇದರ ಪರಿಣಾಮ ಚುನಾವಣೆಯಲ್ಲೂ ಕಾಣುವುದು ಸಹಜವೇ ಅಲ್ಲವೇ?

1977ರ ಜನತಾ ಪಾರ್ಟಿಯ ದುರಂತ ಮತ್ತು 2024ರ I.N.D.I.A.

ಇದಲ್ಲದೆ, 1977ರಂತೆ ಸಮಾನ ಶತ್ರುವಿನ ವಿರುದ್ಧ ವಿರೋಧ ಪಕ್ಷಗಳ ಐಕ್ಯತೆ ಈ ಬಾರಿಯೂ ಹರಳುಗಟ್ಟಿ ಬಿಜೆಪಿಯನ್ನು ಸೋಲಿಸಬಹುದು ಎಂಬ ಆಶಯ I.N.D.I.A. ಹುಟ್ಟುಹಾಕಿದೆ. ಕಾಂಗ್ರೆಸ್‌ನ ಸರ್ವಾಧಿಕಾರದ ವಿರುದ್ಧ ಆಗ ಪರಸ್ಪರ ವಿರೋಧಿ ರಾಜಕೀಯ ನೆಲೆಗಳ ಪಕ್ಷಗಳು ಇಂದಿರಾಗಾಂಧಿ ಸರಕಾರವನ್ನು ಸೋಲಿಸಬೇಕೆಂಬ ಒಂದೇ ಅಜೆಂಡಾದಿಂದ ಜನತಾ ಪಕ್ಷ ಮಾಡಿಕೊಂಡು ಒಟ್ಟುಗೂಡಿ ಚುನಾವಣೆಯನ್ನು ಎದುರಿಸಿದವು ಹಾಗೂ ಇಂದಿರಾ ಗಾಂಧಿಯನ್ನು ಸೋಲಿಸಿದವು. ಇದು ಈ ಸಂದರ್ಭಕ್ಕೂ ಮಾದರಿ ಎಂದು ಬಹಳಷ್ಟು ಜನ ಭಾವಿಸುತ್ತಾರೆ.

ಆದರೆ ಈ ‘ಐಕ್ಯತೆಯ ಟೊಳ್ಳುತನ’ ಎರಡೂವರೆ ವರ್ಷಗಳಲ್ಲೇ ಬಯಲಾಯಿತು. ಕೇವಲ ಎರಡೂವರೆ ವರ್ಷಗಳಲ್ಲಿ ಮೂವರು ಪ್ರಧಾನ ಮಂತ್ರಿಗಳಾದರು ಮತ್ತು ಅಧಿಕಾರದ ಲಾಲಸೆ ಮತ್ತು ಪರಸ್ಪರ ವಿರುದ್ಧ ಸೈದ್ಧಾಂತಿಕ ನೆಲೆಯ ಪಕ್ಷಗಳ ಹೊಂದಾಣಿಕೆ ಅಸಾಧ್ಯವಾಗಿ ಜನತಾ ಸರಕಾರ ಕುಸಿದು ಬಿತ್ತು.

ನಂತರ 1980ರಲ್ಲಿ ನಡೆದ ಚುನಾವಣೆಯಲ್ಲಿ ಅದೇ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷ ದೇಶಕ್ಕೆ ತಾನು ಮಾತ್ರ ಸ್ಥಿರ ಸರಕಾರ ಹಾಗೂ ಸುಭದ್ರ ಸರಕಾರ ಕೊಡಲು ಸಾಧ್ಯ ಎಂಬ ನೆಲೆಯಲ್ಲಿ ಚುನಾವಣೆಯನ್ನು ಎದುರಿಸಿತು ಹಾಗೂ ಶೇ. 42.6 ವೋಟುಗಳು ಮತ್ತು 353 ಸೀಟುಗಳೊಂದಿಗೆ ಭರ್ಜರಿ ಗೆಲುವನ್ನು ಸಾಧಿಸಿತು. ಜನತಾ ಪಕ್ಷ ಮತ್ತು ಅದರಿಂದ ಟಿಸಿಲೊಡೆದ ಭಾರತೀಯ ಜನತಾ ಪಕ್ಷ ಧೂಳೀಪಟವಾಗಿದ್ದವು.

ಇಂದು ಅದೇ ರೀತಿಯ ಪರಿಸ್ಥಿತಿ ಪುನರಾವರ್ತನೆಯಾಗುತ್ತಿದೆ. ಮೋದಿ ಸರ್ವಾಧಿಕಾರದ ವಿರುದ್ಧ ವಿರೋಧ ಪಕ್ಷಗಳು, ಎಲ್ಲವೂ ಅಲ್ಲ, I.N.D.I.A. ಅಡಿ ಒಂದಾಗಿವೆ. ಆದರೆ ಚುನಾವಣೆಗೆ ಮುಂಚೆಯೇ ದೊಡ್ಡ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಸೀಟು ಹೊಂದಾಣಿಕೆಗಳಾಚೆ ಪರಸ್ಪರ ಸಮಾನ ಉದ್ದೇಶಗಳು ಕೂಡ 1977ರಲ್ಲಿ ವಿರೋಧ ಪಕ್ಷಗಳಿದ್ದಷ್ಟು ಇಲ್ಲ.

2024- ನಾಲ್ಕು ಅಪಾಯಕಾರಿ ಸಾಧ್ಯತೆಗಳು

ಹೀಗಾಗಿ ಬರಲಿರುವ ಚುನಾವಣೆಗಳಲ್ಲಿ ಈ ಕೆಳಗಿನ ಸಾಧ್ಯತೆಗಳಿವೆ:

ಸಾಧ್ಯತೆ ಒಂದು- ಬಿಜೆಪಿಗೆ ಈಗಿರುವಷ್ಟು ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಬಹುಮತ ದೊರೆತು ಮೋದಿ ಮೂರನೇ ಬಾರಿ ಅಧಿಕಾರ ರಚಿಸುವುದು. ಇದು ಭಾರತಕ್ಕೆ ಒದಗಬಹುದಾದ ಅತಿ ದೊಡ್ಡ ಅಪಾಯ. ಏಕೆಂದು ಪ್ರಾರಂಭದಲ್ಲೇ ಚರ್ಚಿಸಿದ್ದೇವೆ.

ಸಾಧ್ಯತೆ ಎರಡು- ಬಿಜೆಪಿಗೆ ಸ್ವತಂತ್ರ ಬಹುಮತ ಬರದೇ ಎನ್‌ಡಿಎ ಗೆ ಬಹುಮತ ದಕ್ಕುವುದು. ಆಗಲೂ ದೊಡ್ಡ ವ್ಯತ್ಯಾಸವಿಲ್ಲ. ಅಪಾಯದ ಪ್ರಮಾಣವೇನೂ ತಗ್ಗುವುದಿಲ್ಲ.

ಸಾಧ್ಯತೆ ಮೂರು- ಎನ್‌ಡಿಎಗೆ ಬಹುಮತ ಕಡಿಮೆಯಾಗಿ ಇತರ ವಿರೋಧ ಪಕ್ಷಗಳ ಸಂಸದರನ್ನು ನೂರಾರು ಕೋಟಿ ರೂ.ಗೆ ಖರೀದಿ ಮಾಡಿ, ಅಥವಾ ವಿರೋಧ ಪಕ್ಷಗಳನ್ನು ಒಡೆದು ಬಿಜೆಪಿ ಸರಕಾರ ರಚಿಸುವುದು.

ಸಾಧ್ಯತೆ ನಾಲ್ಕು- ಎನ್‌ಡಿಎ ಮತ್ತು ಬಿಜೆಪಿಗೆ ಸರಕಾರ ರಚಿಸಲು ಬೇಕಾದ 272ಕ್ಕಿಂತ ತುಂಬಾ ಕಡಿಮೆ ಸೀಟುಗಳು ಅಂದರೆ 200-220 ಕ್ಕೆ ಬಂದು ನಿಲ್ಲಬಹುದು ಮತ್ತು I.N.D.I.A. ಸರಕಾರ ರಚಿಸುವುದು. ಸದ್ಯದ ಪರಿಸ್ಥಿತಿಯಲ್ಲಿ ಈ ಸಾಧ್ಯತೆ ತುಂಬಾ ಕಡಿಮೆಯಾದರೂ, ಬಿಜೆಪಿ ಸೋಲ ಬೇಕು ಎಂಬ ಸದಾಶಯ ಇರುವವರೆಲ್ಲರ ನಿರೀಕ್ಷೆ ಮತ್ತು ಆಶಯವಿದು.

ಆದರೆ ಅದರಿಂದ ಭಾರತಕ್ಕೆ ಒದಗಿರುವ ಅಪಾಯ ತಗ್ಗಬಹುದೇ? ಹಾಗೊಂದು ವೇಳೆ 1977ರ ಜನತಾ ಪಕ್ಷಕ್ಕಿಂತಲೂ ಸಡಿಲವಾದ ಮೈತ್ರಿ ಹೊಂದಿರುವ I.N.D.I.A.ಅಧಿಕಾರಕ್ಕೆ ಬಂದರೆ ಯಾವ ರಾಜಕಾರಣ ತೆರೆದುಕೊಳ್ಳಬಹುದು. ಇತಿಹಾಸದಿಂದ ಯಾವ ಪಾಠವನ್ನು ಕಲಿಯದವರೇ ರಾಜಕೀಯದಲ್ಲಿರುವುದರಿಂದ ಜನರಾದರೂ ಇತಿಹಾಸ ಪ್ರಜ್ಞೆ ಇಟ್ಟುಕೊಳ್ಳುವುದು ಅತ್ಯಗತ್ಯ.

77-80ರ ಅನುಭವದ ಹಿನ್ನೆಲೆಯಲ್ಲಿ ನೋಡಿದರೆ ಅಸ್ತಿತ್ವಕ್ಕೇ ಸಂಚಕಾರ ಬಂದರೂ ಚುನಾವಣೆಗೆ ಮುನ್ನ ಯಾವುದೇ ಸ್ಪಷ್ಟ ಐಕ್ಯತೆ ಪ್ರದರ್ಶಿಸದ ರಾಜಕೀಯ ಏಕರೂಪತೆ ಇರದ I.ಓ.ಆ.I.ಂ. ಪಕ್ಷಗಳು ಅಧಿಕಾರಕ್ಕೆ ಬಂದರೆ ಬಿಜೆಪಿಯನ್ನು ದೂರವಿಡಬೇಕು ಎನ್ನುವ ಏಕೈಕ ಕಾರಣಕ್ಕೆ ತಮ್ಮ ಪಟ್ಟಭದ್ರ ಹಿತಾಸಕ್ತಿಗಳನ್ನು ತ್ಯಾಗ ಮಾಡಿ ಸರಕಾರ ಉಳಿಸಿಕೊಳ್ಳುವರೇ?

ಈಗಾಗಲೇ ನೋಡಿದಂತೆ ವಿರೋಧ ಪಕ್ಷಗಳಿಗಾಗಲೀ, ಕಾಂಗ್ರೆಸ್‌ಗಾಗಲೀ ಫ್ಯಾಶಿಸಂ ಜೊತೆ ಅಂತಹ ಮಾರಣಾಂತಿಕ ವೈರುಧ್ಯವಿಲ್ಲ. ಬಿಜೆಪಿಯ ಹಿಂದೆ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಕಾರ್ಪೊರೇಟ್ ಬಂಡವಾಳಶಾಹಿಗಳ ಸರ್ವಸಮ್ಮತ ಬೆಂಬಲವಿದೆ. ಕಾರ್ಪೊರೇಟ್ ಮಾಧ್ಯಮಗಳು ಕೂಡ ಒಳಗಿನ ಹಾಗೂ ಹೊರಗಿನ ಬೆಂಬಲದೊಂದಿಗೆ ಸರಕಾರದ ಕಾಲೆಳೆಯುತ್ತವೆ ಮತ್ತು ಸಂವಿಧಾನಕ್ಕೆ ಬಿಜೆಪಿ ಮಾಡಿರುವ ಹಾನಿಯನ್ನು ಸರಿತಿದ್ದುವ ಯಾವುದೇ ನೆಪಮಾತ್ರದ ಕ್ರಮಗಳನ್ನು ದೇಶದ್ರೋಹಿ ಕ್ರಮಗಳಂತೆ ಚಿತ್ರಿಸಿ ದೇಶದಲ್ಲಿ ಅರಾಜಕತೆ ಹುಟ್ಟುಹಾಕುತ್ತವೆ. ಹೀಗಾಗಿ ಬೇರುಗಳಲ್ಲಿದ I.N.D.I.A.ಸರಕಾರವನ್ನು ಒಳಗಿನ ಹಾಗೂ ಹೊರಗಿನ ಬೆಂಬಲದೊಂದಿಗೆ ಅಸ್ಥಿರಗೊಳಿಸುವ ಅಥವಾ ಬೀಳಿಸುವ ಸಾಧ್ಯತೆಯೇ ಹೆಚ್ಚು. ಅದನ್ನು ಜನಬೆಂಬಲದ ಮೂಲಕ ಉಳಿಸಿಕೊಳ್ಳುವ ಬೇರುಗಳೂ ಈ ಪಕ್ಷಗಳಿಗಿಲ್ಲ. ಹೀಗಾಗಿ I.N.D.I.A. ಸರಕಾರದ ವರ್ಷಕ್ಕಿಂತ ಹೆಚ್ಚು ಅವಧಿ ಉಳಿಯುವ ಸಾಧ್ಯತೆ ಕಡಿಮೆ. ಅಧಿಕಾರದಲ್ಲಿದ್ದಾಗಲೂ ಹಿಂದುತ್ವದ ಅಜೆಂಡಾಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಸಾಧ್ಯತೆ ಇನ್ನೂ ಕಡಿಮೆ.

ಆಗ ಆಗುವ ಅಪಾಯ ಮೊದಲ ಮೂರು ಅಪಾಯಗಳಿಗಿಂತ ದೊಡ್ಡದು.

ಒಂದು ಅಥವಾ ಎರಡು ವರ್ಷಗಳೊಳಗೆ I.N.D.I.A. ಸರಕಾರ ಕುಸಿದುಬಿದ್ದರೆ ನಂತರ ನಡೆಯುವ ಚುನಾವಣೆಯಲ್ಲಿ ಹಿಂದೂ ಸರಕಾರದಿಂದ ಮಾತ್ರ ಸ್ಥಿರ ಸರಕಾರ ಎಂಬ ಘೋಷಣೆಯಡಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ, ಅದನ್ನು ಮುಂದಿನ ಒಂದೆರೆಡು ದಶಕಗಳ ಕಾಲ ಅಲುಗಾಡಿಸುವುದು ವಿರೋಧ ಪಕ್ಷಗಳಿಗೆ ಕಷ್ಟವಾಗಬಹುದು.

ಹೀಗಾಗಿ ಹೇಗೆ ನೋಡಿದರೂ ಭಾರತಕ್ಕೆ ಎದುರಾಗಿರುವ ಫ್ಯಾಶಿಸ್ಟ್ ಅಪಾಯವನ್ನು ಚುನಾವಣಾ ರಾಜಕಾರಣವಾಗಲೀ, ವಿರೋಧ ಪಕ್ಷಗಳಾಗಲೀ ದೂರ ಮಾಡುವ ಸಾಧ್ಯತೆ ಕಾಣುತ್ತಿಲ್ಲ.

ಶತ್ರುವಿನ ಶತ್ರುಗಳಾಗದವರು ಮಿತ್ರರಲ್ಲ; ಸಮರವಿಲ್ಲದೆ ಪರಿಹಾರವಿಲ್ಲ

ಬಿಜೆಪಿ ಭಾರತದ ಜನತೆಯ ಪ್ರಧಾನ ಶತ್ರುವೆನ್ನುವುದು ಹಗಲಿನ ಸೂರ್ಯನಷ್ಟೆ ನಿಜ. ಆದರೆ ವಿರೋಧ ಪಕ್ಷಗಳು ಜನಮಿತ್ರರೇ? ಹೀಗಾಗಿ ಶತ್ರುವಿನ ಶತ್ರು ಮಿತ್ರ ಎಂಬಂತೆ ಬಿಜೆಪಿಯನ್ನು ವಿರೋಧಿಸುವ ವಿರೋಧ ಪಕ್ಷಗಳು ಜನತೆಯ ಮಿತ್ರರಾಗಬೇಕಿತ್ತು. ಆದರೆ ವಿರೋಧ ಪಕ್ಷಗಳಿಗೆ ಬಿಜೆಪಿ ಮತ್ತು ಸಂಘಿ ಫ್ಯಾಶಿಸಂ ಜೊತೆ ಚುನಾವಣಾ ಸಂಘರ್ಷವಿದೆಯೇ ವಿನಾ ಶತ್ರುತ್ವವಿಲ್ಲ.

ಏಕೆಂದರೆ ಈ ಮೊದಲೇ ಚರ್ಚಿಸಿದಂತೆ ಕಾಂಗ್ರೆಸ್ ಆದಿಯಾಗಿ ವಿರೋಧ ಪಕ್ಷಗಳು ಕೂಡ ಬಿಜೆಪಿಯಂತೆ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ನೂಲಿನಲ್ಲಿ ಹೆಣೆದ ಭಿನ್ನ ವಿನ್ಯಾಸದ ಅರಿವೆಯಷ್ಟೆ. ಹೀಗಾಗಿ ಅವಕ್ಕೆ ಚುನಾವಣೆಯಾಚೆಗೆ ಬಿಜೆಪಿಯೊಂದಿಗೆ ರಾಜಕೀಯ, ಆರ್ಥಿಕ ಮತ್ತು ಸೈದ್ಧಾಂತಿಕ ಕ್ಷೇತ್ರಗಳಲ್ಲಂತೂ ವೈರುಧ್ಯಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಹೀಗಾಗಿ ಚುನಾವಣಾ ಕಣದಲ್ಲೂ ಈ ವಿರೋಧ ಪಕ್ಷಗಳು ಜನತೆಯ ಪರವಾಗಿ ಬಿಜೆಪಿಯನ್ನು ಕಟ್ಟಿಹಾಕಬಹುದು ಎಂದು ನಿರೀಕ್ಷಿಸಲಾಗುವುದಿಲ್ಲ.

ಆದರೂ 2024ರ ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆಗೆ ಹೋದಾಗ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ವಿರೋಧ ಪಕ್ಷದ ಅಭ್ಯರ್ಥಿಗೆ ವೋಟು ಹಾಕಬೇಕು. ಆದರೆ ಇದರಿಂದ ಬಿಜೆಪಿ ಸೋಲುವುದಿಲ್ಲ ಮತ್ತು ವಿರೋಧ ಪಕ್ಷಗಳು ಫ್ಯಾಶಿಸ್ಟ್ ಅಪಾಯದಿಂದ ದೇಶವನ್ನು ಕಾಪಾಡಲಾರರು ಎಂಬ ಅರಿವಿನೊಂದಿಗೇ ವೋಟು ಹಾಕಬೇಕು.

2024ರ ನಂತರ ಕೂಡಲೇ ಅಥವಾ ಸ್ವಲ್ಪ ಸಮಯದಲ್ಲೇ ನಡೆಯಲಿರುವ ಸಮಗ್ರ ಫ್ಯಾಶಿಸ್ಟ್ ದಾಳಿಯ ವಿರುದ್ಧ ಜನರಿಗೆ ಅರಿವು ಮೂಡಿಸುತ್ತಾ ಸಂಘರ್ಷಕ್ಕೆ ಸಿದ್ಧವಾಗಬೇಕು. ಅದು ಮಾತ್ರ ಈ ದೇಶವನ್ನು ಸಂಘಿ ಫ್ಯಾಶಿಸಂನಿಂದ ಬಚಾವು ಮಾಡಬಲ್ಲದು. ಮಿಕ್ಕಿದ್ದೆಲ್ಲಾ ಕಂಫರ್ಟ್ ರೆನ್‌ನ ಭ್ರಮೆಗಳು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News