ಚುನಾವಣಾ ಫಲಿತಾಂಶಗಳು ಮತ್ತು ಯೋಗೇಂದ್ರ ಯಾದವರ ವಿಶ್ಲೇಷಣೆಯ ಸಮಸ್ಯೆಗಳು

ಈ ಮೂರೂ ರಾಜ್ಯಗಳ ಗೆಲುವು-ಅದರಲ್ಲೂ ಹೆಚ್ಚು ಅಂತರದ ಗೆಲುವು, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸಾಮಾಜಿಕ ನೆಲೆಗಳ ಬೆಂಬಲದಿಂದ ಪಡೆದುಕೊಂಡ ಗೆಲುವು -2024ರ ಚುನಾವಣೆಯಲ್ಲಿ ಇನ್ನಷ್ಟು ಕೋಮು ಧ್ರುವೀಕರಣದ ಅಜೆಂಡಾಗಳ ಮೂಲಕ ಗೆಲ್ಲಲು ಬಿಜೆಪಿಯ ಹಾದಿಯನ್ನು ಸುಲಭಗೊಳಿಸಿದೆ. ಅದರಲ್ಲೂ ಮ. ಪ್ರದೇಶಗಳಂತಹ ರಾಜ್ಯಗಳಲ್ಲಿ ಸತತವಾಗಿ 20 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಜನರು ಭ್ರಷ್ಟಾಚಾರವನ್ನು ಮರೆತು ಹಿಂದುತ್ವಕ್ಕೆ ವೋಟು ಹಾಕಿರುವುದು, ಬಿಜೆಪಿ ರಾಜಕಾರಣದ ಮಟ್ಟಿಗೆ ಹೊಸ ಹುರುಪು ಕೊಟ್ಟಿರುವುದಂತೂ ಸತ್ಯ. ಒಟ್ಟಾರೆ ಹಿಂದಿ ಪ್ರದೇಶವು 240 ಕ್ಕೂ ಹೆಚ್ಚು ಸೀಟುಗಳನ್ನು ಹೊಂದಿದೆ. ಹೀಗಾಗಿ ಈ ಗೆಲುವು 2024ನ್ನು ಸುಲಭಗೊಳಿಸಿದೆ.

Update: 2023-12-06 05:23 GMT

Photo: Twitter/PTI

ಐದು ರಾಜ್ಯಗಳ ಚುನಾವಣಾ ಫಲಿತಾಂಶಗಳು ಬಂದಿವೆ. ಹಲವರಿಗೆ ನಿರೀಕ್ಷಿತ. ಕೆಲವರಿಗೆ ಅನಿರೀಕ್ಷಿತ. ಒಟ್ಟಿನಲ್ಲಿ ನೋಡಿದಾಗ ಮೋದಿ ನೇತೃತ್ವದ ಆರೆಸ್ಸೆಸ್ ಅಜೆಂಡಾದ ಬಿಜೆಪಿ ಐದೂ ರಾಜ್ಯಗಳಲ್ಲೂ ಉತ್ತಮವಾದ ವೋಟು ಮತ್ತು ಸೀಟುಗಳನ್ನು ಪಡೆದುಕೊಂಡು 2024ರ ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ತೆಲಂಗಾಣದಲ್ಲಿ ಬಿಟ್ಟರೆ ಕಾಂಗ್ರೆಸ್ ಬೇರೆ ಯಾವುದೇ ರಾಜ್ಯಗಳಲ್ಲಿ ಸೀಟುಗಳ ಲೆಕ್ಕದಲ್ಲಾಗಲೀ ಅಥವಾ ವೋಟುಗಳ ಲೆಕ್ಕದಲ್ಲಾಗಲೀ ಉತ್ತಮವಾದ ಸಾಧನೆಯನ್ನು ತೋರಿಲ್ಲ.

ಮ. ಪ್ರದೇಶದಲ್ಲಿ ಕಳೆದ 20 ವರ್ಷಗಳಿಂದ ಅಧಿಕಾರದಲ್ಲಿರುವ ಅತ್ಯಂತ ಭ್ರಷ್ಟ ಬಿಜೆಪಿ ಸರಕಾರವನ್ನೇ ಈ ಬಾರಿಯೂ ಮತದಾರರು ಮೊದಲಿಗಿಂತ ಹೆಚ್ಚಿನ ಮತಗಳೊಂದಿಗೆ ಆಯ್ಕೆ ಮಾಡಿಕೊಂಡಿದ್ದಾರೆ. ರಾಜಸ್ಥಾನ ಮತ್ತು ಛತ್ತೀಸ್‌ಗಡಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸನ್ನು ಕೆಳಗಿಳಿಸಿ ಬಿಜೆಪಿಗೆ ಅಧಿಕಾರ ನೀಡಿದ್ದಾರೆ ಮತ್ತು ತೆಲಂಗಾಣದಂತಹ ನೆಲೆಯೇ ಇಲ್ಲದ ರಾಜ್ಯದಲ್ಲೂ ಬಿಜೆಪಿಗೆ ಮೊದಲಿಗಿಂತ ಎರಡು ಪಟ್ಟು ವೋಟುಗಳನ್ನೂ ಮತ್ತು ಸೀಟುಗಳನ್ನೂ ಕೊಟ್ಟಿದ್ದಾರೆ.

ಇದು ಸೀಟುಗಳ ಲೆಕ್ಕದಲ್ಲಿ. ಇದ್ದವರಲ್ಲಿ ಹೆಚ್ಚು ವೋಟು ಪಡೆದವರನ್ನು ಗೆದ್ದವರು ಎಂದು ಘೋಷಿಸುವ ಭಾರತದ ಚುನಾವಣಾ ಪದ್ಧತಿಯಲ್ಲಿ ಕೇವಲ ಸೀಟುಗಳ ಪ್ರಮಾಣಗಳು ಮತದಾರರ ಮನಸ್ಥಿತಿಯ ಸರಿಯಾದ ಚಿತ್ರಣ ಕೊಡುವುದಿಲ್ಲ. ಅದಕ್ಕೆ ವೋಟು ಪ್ರಮಾಣ ಮತ್ತು ಯಾವ್ಯಾವ ಜನವರ್ಗಗಳು ಎಷ್ಟೆಷ್ಟು ವೋಟು ಹಾಕಿದ್ದಾರೆ ಎಂಬ ವಿಶ್ಲೇಷಣೆಯ ಅಗತ್ಯ.. ಈವರೆಗೆ ದಕ್ಕಿರುವ (ಇಂಡಿಯಾ ಟುಡೆ-ಆಕ್ಸಿಸ್) ವೋಟುಗಳ ಸಾಮಾಜಿಕ ವಿಶ್ಲೇಷಣೆಯ ಪ್ರಕಾರ ಬಿಜೆಪಿ ಎಲ್ಲ ರಾಜ್ಯಗಳಲ್ಲೂ ಒಬಿಸಿ ಸಮುದಾಯಗಳಲ್ಲಿ. ಮಹಿಳೆಯರಲ್ಲಿ ಅತ್ಯಂತ ಹೆಚ್ಚಿನ ಪ್ರಭಾವ ಹೊಂದಿದೆ ಹಾಗೂ ಈ ಚುನಾವಣೆಗಳಲ್ಲಿ ವಿಶೇಷವಾಗಿ ರಾಜಸ್ಥಾನ, ಛತ್ತೀಸ್‌ಗಡ ಮತ್ತು ಮ. ಪ್ರದೇಶಗಳಲ್ಲಿ ದಲಿತರು ಮತ್ತು ಆದಿವಾಸಿಗಳೂ ಕಾಂಗ್ರೆಸ್‌ಗಿಂತ ಬಿಜೆಪಿಗೇ ಹೆಚ್ಚಿನ ವೋಟುಗಳನ್ನು ಹಾಕಿದ್ದಾರೆ.

ಅಂದರೆ ಬಿಜೆಪಿಯ ಕಾರ್ಪೊರೇಟ್ ಬ್ರಾಹ್ಮಣವಾದಿ ಹಿಂದುತ್ವ ಸಿದ್ಧಾಂತದ ಬಲಿಪಶುಗಳೇ ಬಿಜೆಪಿಯನ್ನು ಕಾಂಗ್ರೆಸ್‌ಗಿಂತ ಉತ್ತಮ ಪರಿಹಾರ ಎಂದು ಭಾವಿಸಿದ್ದಾರೆ. ಏಕೆಂದರೆ ಕಾಂಗ್ರೆಸ್ ತಾನು ಇದಕ್ಕೆ ಪರ್ಯಾಯ ಎಂದು ಅಧಿಕಾರದಲ್ಲಿದ್ದಾಗಲೂ ಸಾಬೀತು ಮಾಡಿಲ್ಲ. ಈಗಂತೂ ಅಧಿಕಾರಕ್ಕೆ ಬರುವ ಶಕ್ತಿಯನ್ನೂ ಉಳಿಸಿಕೊಂಡಿಲ್ಲ.

ಹೀಗಾಗಿ ಈ ಸೋಲನ್ನು ಸೋಲೆಂದು, ವೈಫಲ್ಯವನ್ನು ವೈಫಲ್ಯವೆಂದು ಸ್ಪಷ್ಟವಾಗಿ ಗುರುತಿಸುವುದು ಕಾಂಗ್ರೆಸನ್ನು ಉಳಿಸಬಯಸುವವರೂ, ದೇಶವನ್ನು ಉಳಿಸಬಯಸುವವರೂ ಮಾಡಬೇಕಾದ ಮೊದಲ ಕೆಲಸ.

ಆದರೆ ಸೋತಾಗ ಸೋತವರ ಮನಸ್ಥೈರ್ಯ ಕುಗ್ಗುವುದು ಸಹಜ. ಹಾಗೆಂದು ಸೋತವರಿಗೆ ಹುಸಿ ಹುರುಪನ್ನು ತುಂಬಲು ಅರ್ಧ ಸತ್ಯ ಅಥವಾ ಆಯ್ದ ಸತ್ಯವನ್ನು ಮಾತ್ರ ಹೇಳುವುದು ದೇಶಕ್ಕೂ ಮತ್ತು ಕಾಂಗ್ರೆಸ್‌ಗೂ ಅನ್ಯಾಯವನ್ನೇ ಮಾಡಿದಂತಾಗಬಹುದು.

ಸಮಾಜಕ್ಕಾಗಲೀ, ಪಕ್ಷಗಳಿಗಾಗಲೀ, ಚಳವಳಿಗಾಗಲೀ, ನೈಜವಾದ ಮನಸ್ಥೈರ್ಯ ಮತ್ತು ಬದಲಾವಣೆ ಬರುವುದು ಇರುವುದನ್ನು ಇರುವಂತೆ ಸ್ವೀಕರಿಸಿ, ಅದನ್ನು ಬದಲಿಸಲು ಬೇಕಾದ ಸರ್ಜರಿಗೆ ಸಿದ್ಧವಾಗುವುದರಲ್ಲಿ ಮಾತ್ರ.

ಇಷ್ಟೆಲ್ಲಾ ಏಕೆ ಹೇಳಬೇಕಾಯಿತೆಂದರೆ ಈ ದೇಶದ ಪ್ರಮುಖ ಸಮಾಜ ಶಾಸ್ತ್ರಜ್ಞ, ಚುನಾವಣಾ ವಿಶ್ಲೇಷಣಾ ಪರಿಣಿತ ಹಾಗೂ ಫ್ಯಾಶಿಸಮ್ ವಿರುದ್ಧದ ಹೋರಾಟದಲ್ಲಿ ತನ್ನನ್ನು ತಾನೇ ಅರ್ಪಿಸಿಕೊಂಡು ಈಗ ಸಾಮಾಜಿಕ ಕಾರ್ಯಕರ್ತರಾಗಿ ಮರುಹುಟ್ಟು ಪಡೆದಿರುವ ಪ್ರೊ. ಯೋಗೇಂದ್ರ ಯಾದವ್ ಅವರು ಈ ಚುನಾವಣೆಗಳ ಬಗ್ಗೆ ಮಾಡಿರುವ ವಿಶ್ಲೇಷಣೆಯಲ್ಲಿ ಆಯ್ದ ಸತ್ಯಗಳನ್ನು ಮಾತ್ರ ಹೇಳುವ ಪ್ರಮಾದಗಳು ಕಾಣಿಸಿಕೊಂಡಿವೆ.

(ಆಸಕ್ತರು ಅವರ ಸಂಪೂರ್ಣ ವಿಶ್ಲೇಷಣೆಯನ್ನು ಈ ಕೊಂಡಿಯಲ್ಲಿ ಓದಬಹುದು:https://thewire.in/politics/bjp-assembly-elections-hat-trick-2024)

ಈ ವಿಶ್ಲೇಷಣೆಯ ಹಿಂದೆ ಇರಬಹುದಾದ (ಬಿಜೆಪಿಯ ಗೆಲುವಿನ ಅಬ್ಬರವು ಫ್ಯಾಶಿಸ್ಟ್ ವಿರೋಧಿ ಹೋರಾಟಗಾರ ಮನಸ್ಥೈರ್ಯ ಉಡುಗಬಾರದೆಂಬ) ಸದಾಶಯವನ್ನು ಗೌರವಿಸುತ್ತಲೇ..

.. ಅವರು ಮತ್ತು ಅಂತಹ ಹಲವಾರು ಪ್ರಾಮಾಣಿಕ ಫ್ಯಾಶಿಸ್ಟ್ ವಿರೋಧಿ ಚಿಂತಕರು ಕಾಂಗ್ರೆಸ್‌ಗೆ ಅಂತಹ ದೊಡ್ಡ ಸೋಲಾಗಿಲ್ಲ- ಬಿಜೆಪಿಗೆ ಅಂತಹ ದೊಡ್ಡ ಗೆಲುವಾಗಿಲ್ಲ ಎಂದು ಮಾಡುತ್ತಿರುವ ವಿಶ್ಲೇಷಣೆಗಳು ಈ ಕಾರಣಗಳಿಗಾಗಿ ತಪ್ಪು ಎಂದು ಮಂಡಿಸಬಯಸುತ್ತೇನೆ.

1. ಕಾಂಗ್ರೆಸ್ ಅಧಿಕಾರ ಕಳೆದುಕೊಂಡರೂ ಬಿಜೆಪಿಗಿಂತ ಹೆಚ್ಚಿನ ವೋಟುಗಳನ್ನು ಪಡೆದುಕೊಂಡಿದೆಯೇ?

ಕಾಂಗ್ರೆಸ್‌ನ ಸೋಲು ಅಷ್ಟು ಚಿಂತಾಕ್ರಾಂತವಾಗಿಲ್ಲ ಎಂದು ಸಾಬೀತು ಮಾಡಲು ಯೋಗೇಂದ್ರ ಯಾದವ್ ಮತ್ತು ಅವರಂತೆಯೇ ಹಲವಾರು ಚಿಂತಕರು ಈ ನಾಲ್ಕೂ ರಾಜ್ಯಗಳಲ್ಲಿ ಕಾಂಗ್ರೆಸ್ ಪಡೆದ ಒಟ್ಟಾರೆ ವೋಟುಗಳು ಬಿಜೆಪಿಗಿಂತ ಜಾಸ್ತಿ ಇದೆ ಎಂಬ ಅಂಶವನ್ನು ಮುಂದಿಡುತ್ತಾರೆ.

ನಾಲ್ಕು ರಾಜ್ಯಗಳಲ್ಲಿ ಒಟ್ಟಾರೆಯಾಗಿ ಬಿಜೆಪಿಗೆ 4.81 ಕೋಟಿ ವೋಟುಗಳು ಬಂದಿದ್ದರೆ ಕಾಂಗ್ರೆಸ್‌ಗೆ 4.9 ಕೋಟಿ ವೋಟುಗಳು ಬಂದಿವೆ. ಹೀಗಾಗಿ ಅಧಿಕಾರ ಕಳೆದುಕೊಂಡರೂ ಕಾಂಗ್ರೆಸ್‌ಗೆ ಬಿಜೆಪಿಗಿಂತ 9 ಲಕ್ಷ ವೋಟುಗಳು ಹೆಚ್ಚಿಗೆ ಬಂದಿದೆ ಎಂಬುದು ಅವರ ಮೊದಲ ಪ್ರತಿಪಾದನೆ. ಈ ಗಣಿತದಲ್ಲಿ ತಪ್ಪಿಲ್ಲ. ಆದರೆ ರಾಜಕೀಯ ಗಣಿತದಲ್ಲಿ ತಪ್ಪಿದೆ. ಒಂದು ಉದ್ದೇಶಪೂರ್ವಕ ಲೋಪವಿದೆ. ಮೇಲ್ನೋಟಕ್ಕೆ ಈ ಲೆಕ್ಕಾಚಾರವೂ ಚುನಾವಣೆ ನಡೆದ ನಾಲ್ಕು ರಾಜ್ಯಗಳಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಪೈಪೋಟಿಯಲ್ಲಿದ್ದು ಸೀಟುಗಳ ಲೆಕ್ಕದಲ್ಲಿ ಬಿಜೆಪಿ ಗೆದ್ದಿದ್ದರೂ ಕಾಂಗ್ರೆಸ್‌ಗೆ ಹೆಚ್ಚು ವೋಟುಗಳು ಬಂದಿವೆ ಎಂಬ ತಪ್ಪು ಅಭಿಪ್ರಾಯವನ್ನು ನೀಡುತ್ತವೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಪೈಪೋಟಿಯಲ್ಲಿ ಇದ್ದದ್ದು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡಗಳಲ್ಲಿ ಮಾತ್ರ. ತೆಲಂಗಾಣದಲ್ಲಿ ಪೈಪೋಟಿಯಿದ್ದದ್ದು ಬಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವೆ. ಅಲ್ಲಿ ಬಿಜೆಪಿ ಯಾವತ್ತೂ ಅಂತಹ ದೊಡ್ಡ ರಾಜಕೀಯ ಸ್ಪರ್ಧಿಯಾಗಿರಲಿಲ್ಲ.

ಹೀಗಾಗಿ ಒಟ್ಟಾರೆ ವೋಟುಗಳ ಪ್ರಮಾಣದ ಅಂಶವನ್ನು ಪರಿಗಣಿಸಬೇಕೆಂದರೆ ರಾಜಸ್ಥಾನ, ಮ. ಪ್ರದೇಶ ಹಾಗೂ ಛತ್ತೀಸ್‌ಗಡಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಡೆದ ವೋಟುಗಳ ಪ್ರಮಾಣವನ್ನು ಮಾತ್ರ ಲೆಕ್ಕ ಹಾಕಬೇಕು. ಆಗ ಮಾತ್ರ ಬಿಜೆಪಿಯ ವಿರುದ್ಧ ಕಾಂಗ್ರೆಸ್‌ನ ಪರಿಸ್ಥಿತಿ ಸ್ಪಷ್ಟವಾಗಿ ಅರ್ಥವಾಗುತ್ತದೆ.

ಆ ಲೆಕ್ಕದಲ್ಲಿ ರಾಜಸ್ಥಾನ, ಮ. ಪ್ರದೇಶ ಹಾಗೂ ಛತ್ತೀಸ್‌ಗಡಗಳಲ್ಲಿ ಒಟ್ಟು ಸೇರಿ ಕಾಂಗ್ರೆಸ್ 3,98,42,115 (3.98 ಕೋಟಿ) ವೋಟುಗಳನ್ನು ಪಡೆದಿದ್ದರೆ ಬಿಜೆಪಿ 4,48,75,952 (4.48 ಕೋಟಿ) ವೋಟುಗಳನ್ನು ಪಡೆದಿದೆ. ಅಂದರೆ ಈ ಬಾರಿ ಈ ಮೂರು ರಾಜ್ಯಗಳಲ್ಲಿ ಒಟ್ಟಾರೆಯಾಗಿ ಬಿಜೆಪಿ ಕಾಂಗ್ರೆಸ್‌ಗಿಂತ 50 ಲಕ್ಷ ವೋಟುಗಳನ್ನು ಹೆಚ್ಚಾಗಿ ಪಡೆದಿದೆ.

2018ರ ಚುನಾವಣೆಗಳಲ್ಲಿ ಈ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಹಾಗೂ 3.57 ಕೋಟಿ ವೋಟುಗಳನ್ನು ಪಡೆದಿತ್ತು. ಪ್ರತಿಯಾಗಿ ಬಿಜೆಪಿ 3.41 ಕೋಟಿ ವೋಟುಗಳನ್ನು ಪಡೆದಿತ್ತು. ಅಂದರೆ 2018ರಲ್ಲಿ ಕಾಂಗ್ರೆಸ್ ಬಿಜೆಪಿಗಿಂತ 16 ಲಕ್ಷ ಹೆಚ್ಚು ವೋಟುಗಳನ್ನು ಪಡೆದುಕೊಂಡಿದ್ದರೆ, ಈ ಬಾರಿ ಗೆದ್ದ ಬಿಜೆಪಿ ಕಾಂಗ್ರೆಸ್‌ಗಿಂತ 50 ಲಕ್ಷ ಹೆಚ್ಚು ವೋಟುಗಳನ್ನು ಪಡೆದುಕೊಂಡಿದೆ. ಅಂದರೆ ಈ ಬಾರಿ ಈ ಮೂರೂ ರಾಜ್ಯಗಳಲ್ಲಿ ಬಿಜೆಪಿಯ ಗೆಲುವಿನ ಅಂತರ ಕಾಂಗ್ರೆಸ್‌ಗಿಂತ ಹೆಚ್ಚು.

ಅಷ್ಟು ಮಾತ್ರವಲ್ಲ. 2018ಕ್ಕೆ ಹೋಲಿಸಿದರೆ ಬಿಜೆಪಿ ಈ ಮೂರೂ ರಾಜ್ಯಗಳಲ್ಲಿ ಈ ಬಾರಿ 1.07 ಕೋಟಿ ವೋಟುಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದೆ. ಅದಕ್ಕೆ ಹೋಲಿಸಿದಲ್ಲಿ ಕಾಂಗ್ರೆಸ್ 2018ಕ್ಕಿಂತ 41 ಲಕ್ಷ ವೋಟುಗಳನ್ನು ಮಾತ್ರ ಹೆಚ್ಚಾಗಿ ಪಡೆದಿದೆ. ಅಂದರೆ ಈ ಮೂರೂ ರಾಜ್ಯಗಳಲ್ಲಿ 66 ಲಕ್ಷ ಜನರು ಹೆಚ್ಚಾಗಿ ಬಿಜೆಪಿಯನ್ನು ಬಯಸಿದ್ದಾರೆ ಎಂದಾಯಿತು.

ವಿಪರ್ಯಾಸವೆಂದರೆ ಅವರೆಲ್ಲಾ ಬಿಜೆಪಿಯ ನೀತಿಗಳಿಂದ ಸಂಕಷ್ಟಗಳಿಗೆ ಈಡಾದವರೇ. ಆದರೂ ಅವರಿಗೇಕೆ ಕಾಂಗ್ರೆಸ್ ಪರ್ಯಾಯ ಎನಿಸಲಿಲ್ಲ? ಅಥವಾ ಬದುಕಿನ ಕಷ್ಟಗಳು ಇದ್ದರೂ ಬಿಜೆಪಿಯೇ ಬೇಕು ಎಂದು ಎನಿಸಿದ್ದೇಕೆ?

ಇನ್ನು ತೆಲಂಗಾಣವನ್ನು ನೋಡೋಣ. ಅಲ್ಲಿ ಕಾಂಗ್ರೆಸ್ 2018ರಲ್ಲಿ 58 ಲಕ್ಷ ವೋಟುಗಳನ್ನು ಪಡೆದಿದ್ದರೆ ಬಿಜೆಪಿ 14 ಲಕ್ಷ ವೋಟುಗಳನ್ನು ಪಡೆದಿತ್ತು. 2023 ರಲ್ಲಿ ಕಾಂಗ್ರೆಸ್‌ಗೆ 92 ಲಕ್ಷ ವೋಟುಗಳು ದಕ್ಕಿದರೆ, ಬಿಜೆಪಿ 32 ಲಕ್ಷ ವೋಟುಗಳನ್ನು ಪಡೆದುಕೊಂಡಿದೆ. ಅಂದರೆ ಕೇವಲ ವೋಟಿನ ಗಣಿತವನ್ನು ಮಾತ್ರ ಲೆಕ್ಕ ಹಿಡಿದರೂ ತೆಲಂಗಾಣದಲ್ಲಿ ಬಿಜೆಪಿಯ ಹೆಚ್ಚುವರಿ ವೋಟುಗಳ ವೇಗ ಕಾಂಗ್ರೆಸ್‌ಗಿಂತ ಜಾಸ್ತಿಯೇ ಇದೆ.

ಅಷ್ಟು ಮಾತ್ರವಲ್ಲ. 2018ರಲ್ಲಿ ಕೇವಲ ಒಂದು ಸೀಟನ್ನು ಮಾತ್ರ ಪಡೆದಿದ್ದ ಬಿಜೆಪಿ ಈ ಬಾರಿ 8 ಸೀಟುಗಳನ್ನು ಗೆದ್ದಿದೆ. ಮತ್ತು ಅಂದಾಜು 19 ಕ್ಷೇತ್ರಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಕರ್ನಾಟಕದಲ್ಲಿ ಬಿಜೆಪಿಯ ಬೆಳವಣಿಗೆಯ ಹಂತಗಳನ್ನು ಅಧ್ಯಯನ ಮಾಡಿದವರಿಗೆ ಬಿಜೆಪಿ ತೆಲಂಗಾಣದಲ್ಲೂ ಬಲವಾದ ಹೆಜ್ಜೆಗಳನ್ನು ಊರಲು ಹೆಚ್ಚು ಕಾಲ ಬೇಕಿಲ್ಲ ಎಂಬುದು ಅರ್ಥವಾಗುತ್ತದೆ.

ಆದ್ದರಿಂದ ಒಟ್ಟಾರೆ ವೋಟುಗಳನ್ನು ಲೆಕ್ಕ ಹಾಕಿ, ರಾಜಕೀಯ ತಾತ್ಪರ್ಯವನ್ನು ಹುಡುಕುವಾಗ ತೆಲಂಗಾಣದ ವೋಟುಗಳನ್ನು ಉಳಿದ ಮೂರು ರಾಜ್ಯಗಳ ಜೊತೆಗೆ ಲೆಕ್ಕ ಹಾಕುವುದು ತಪ್ಪಾಗುತ್ತದೆ ಮತ್ತು ನಾಲ್ಕು ರಾಜ್ಯಗಳ ಒಟ್ಟಾರೆ ವೋಟು ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಬಂದಿದೆ ಎಂದು ಸಮಾಧಾನ ಪಟ್ಟುಕೊಳ್ಳುವುದು ತಪ್ಪು ರಾಜಕೀಯ ಗಣಿತವಾಗುತ್ತದೆ.

2. ಮ. ಪ್ರದೇಶವನ್ನು ಹೊರತು ಪಡಿಸಿದರೆ ರಾಜಸ್ಥಾನ ಮತ್ತು ಛತ್ತೀಸ್‌ಗಡಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ವೋಟು ಶೇರಿನ ಅಂತರ ತುಂಬಾ ಕಡಿಮೆಯೇ?

ಇದೂ ಸಹ ತಪ್ಪು ರಾಜಕೀಯ ಗಣಿತ. ಛತ್ತೀಸ್‌ಗಡದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ವೋಟು ಶೇರು ಶೇ. 42.25 ಮತ್ತು ಬಿಜೆಪಿಯದ್ದು ಶೇ. 46.27. ಅಂದರೆ ಅಂತರ ಶೇ. 4ಕ್ಕಿಂತ ಜಾಸ್ತಿ. ಸ್ಪರ್ಧಾತ್ಮಕ ರಾಜಕಾರಣದಲ್ಲಿ ಇದು ಕಡಿಮೆಯಲ್ಲ. 2018ರಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ವೋಟು ಶೇರು ಶೇ. 43.04 ಮತ್ತು ಬಿಜೆಪಿಯದ್ದು ಶೇ. 33.12. ಅಂದರೆ ಆಗ ಇದ್ದ ಅಂತರ ಶೇ. 10 ರಷ್ಟು. ಇದಿಷ್ಟು ಗಣಿತ ಹೇಳುವುದು.

ಆದರೆ ಈ ಸಂಖ್ಯೆಗಳು ಹೇಳುವ ರಾಜಕೀಯವೇನು? 2018ರಲ್ಲಿ ಕಾಂಗ್ರೆಸ್ ಬಿಜೆಪಿ ನಡುವಿನ ಅಂತರ ಶೇ. 10ರಷ್ಟಿತ್ತು. ಆದರೆ 2023ರಲ್ಲಿ ಬಿಜೆಪಿ ತನ್ನ ವೋಟು ಶೇರನ್ನು 2018ರ ಶೇ. 33ರಿಂದ 2023ರ ಶೇ. 46ಕ್ಕೇ ಹೆಚ್ಚಿಸಿಕೊಂಡಿದೆ. ಅಂದರೆ ಶೇ. 13ರಷ್ಟು ವೋಟು ಶೇರನ್ನು ಅದು ಕಳೆದ ಐದು ವರ್ಷಗಳಲ್ಲಿ ಹೆಚ್ಚಿಸಿಕೊಂಡಿದೆ. ಯಾರ ನಡುವೆ? ಆದಿವಾಸಿಗಳು, ಒಬಿಸಿಗಳು ಮತ್ತು ನಗರವಾಸಿಗಳ ನಡುವೆ. ಕೋಮು ರಾಜಕಾರಣದ ಮೂಲಕ.

ಬದಲಿಗೆ ಈ ವಿದ್ಯಮಾನವನ್ನು ತಡೆಯಲು ಪ್ರಯತ್ನವನ್ನೇ ಮಾಡದ ಕಾಂಗ್ರೆಸ್‌ನ ವೋಟು ಶೇರ್ ಹೆಚ್ಚಾಗುವ ಬದಲು 2018ಕ್ಕೆ ಹೋಲಿಸಿದಲ್ಲಿ ಶೇ. 1ರಷ್ಟು ಕಡಿಮೆಯಾಗಿದೆ. 2018ರಷ್ಟೇ ವೋಟು ಶೇರು ಇದೆ ಎಂದು ಗಣಿತ ಹೇಳುತ್ತದೆ. ಆದರೆ 2018ಕ್ಕೆ ಹೋಲಿಸಿದಲ್ಲಿ ಛತ್ತೀಸ್‌ಗಡದಲ್ಲಿ ಬಿಜೆಪಿ ಕಾಂಗ್ರೆಸನ್ನು ಹಿಂದೆ ಹಾಕಿ ವೇಗವಾಗಿ ಇತರ ಸಮುದಾಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ ಎಂದು ರಾಜಕೀಯ ಹೇಳುತ್ತದೆ.

ಕಾಂಗ್ರೆಸ್‌ಗೆ ವೋಟು ಹಾಕುತ್ತಿದ್ದವರ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ 61 ಲಕ್ಷದಿಂದ 66 ಲಕ್ಷಕ್ಕೆ, ಅಂದರೆ 5 ಲಕ್ಷ ಮಾತ್ರ ಏರಿಕೆ ಕಂಡಿದ್ದರೆ. ಬಿಜೆಪಿಗೆ ವೋಟು ಹಾಕುತ್ತಿದ್ದವರ ಸಂಖ್ಯೆ 47 ಲಕ್ಷದಿಂದ 72 ಲಕ್ಷಕ್ಕೆ ಅಂದರೆ 25 ಲಕ್ಷ ಏರಿದೆ. ಕಾಂಗ್ರೆಸ್‌ಗಿಂತ ಐದು ಪಟ್ಟು ಹೆಚ್ಚು ಏರಿಕೆ!

ಅದೇ ರೀತಿ ರಾಜಸ್ಥಾನದಲ್ಲಿ 2018ರಲ್ಲಿ ಬಿಜೆಪಿಗೆ 1.36 ಕೋಟಿ ಜನರು ವೋಟು ಹಾಕಿದ್ದರೆ, 2023ರಲ್ಲಿ 1.65 ಕೋಟಿ ಜನ ಅಂದರೆ 30 ಲಕ್ಷ ಜನ ಮೊದಲಿಗಿಂತ ಹೆಚ್ಚಾಗಿ ವೋಟು ಹಾಕಿದ್ದಾರೆ. ಕಾಂಗ್ರೆಸ್‌ಗೆ 2018ರಲ್ಲಿ 1.40 ಕೋಟಿ ಜನ ವೋಟು ಹಾಕಿದ್ದರೆ, 2023ರಲ್ಲಿ 1.56 ಕೋಟಿ ಜನ ವೋಟು ಹಾಕಿದ್ದಾರೆ. ಅಂದರೆ 16 ಲಕ್ಷ ಜನ ಹೆಚ್ಚು. ಬಿಜೆಪಿಗಿಂತ 15 ಲಕ್ಷ ಕಡಿಮೆ. ಮಧ್ಯಪ್ರದೇಶದಲ್ಲಿ 2018ರಲ್ಲಿ ಬಿಜೆಪಿಗೆ 1.56 ಕೋಟಿ ಜನ ವೋಟು ಹಾಕಿದ್ದರೆ, 2023ರಲ್ಲಿ 2.11 ಕೋಟಿ ಜನ ವೋಟು ಹಾಕಿದ್ದಾರೆ. ಅಂದರೆ 55 ಲಕ್ಷ ಜನ ಹೆಚ್ಚು. ಕಾಂಗ್ರೆಸ್‌ಗೆ 2018ರಲ್ಲಿ 1.55 ಕೋಟಿ ಜನ ವೋಟು ಹಾಕಿದ್ದರೆ 2023ರಲ್ಲಿ 1.75 ಕೋಟಿ ಜನ ವೋಟು ಹಾಕಿದ್ದಾರೆ. ಅಂದರೆ ಕೇವಲ 20 ಲಕ್ಷ ಹೆಚ್ಚು. ಬಿಜೆಪಿಗಿಂತ 35 ಲಕ್ಷ ಕಡಿಮೆ!.

3. ಈ ಅಸೆಂಬ್ಲಿ ಚುನಾವಣೆಗಳ ಫಲಿತಾಂಶ ಲೋಕಸಭೆಯ ಮೇಲೆ ಪರಿಣಾಮ ಬೀರುವುದಿಲ್ಲವೇ?

ಯಾದವ್ ಅವರ ಪ್ರಕಾರ 2003ರಲ್ಲಿ ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿತ್ತು. ಆದರೆ 2004ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂತು. ಹಾಗೆಯೇ 2018ರಲ್ಲಿ ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಆದ್ದರಿಂದ ಈ ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಲೋಕಸಭೆಯಲ್ಲಿ ಗೆಲ್ಲುತ್ತಾರೆ ಎಂಬುದಕ್ಕೆ ತರ್ಕವಿಲ್ಲ ಎಂಬುದು ಅವರ ಪ್ರತಿಪಾದನೆ.

ಆದರೆ ಮಧ್ಯಪ್ರದೇಶದಲ್ಲಿ 2003ರಿಂದ ಬಿಜೆಪಿ ಸರಕಾರವೇ ಇದೆ. 2014ರಿಂದ ಕೇಂದ್ರದಲ್ಲೂ ಬಿಜೆಪಿ ಸರಕಾರವೇ ಇದೆ. ಹಾಗೆಯೇ 2013ರಲ್ಲಿ ಈ ಮೂರೂ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. 2014ರ ಚುನಾವಣೆಯಲ್ಲಿ ಕೇಂದ್ರದಲ್ಲೂ ಬಿಜೆಪಿ ಬಂದಿತ್ತು. ಹೀಗಾಗಿ ಯೋಗೇಂದ್ರ ಯಾದವ್ ಅವರ ವ್ಯಾಖ್ಯಾನ ವಾಸ್ತವವಲ್ಲ.

ಮತ್ತೊಬ್ಬ ಚುನಾವಣಾ ಪರಿಣಿತ ಮತ್ತು ಎನ್‌ಡಿಟಿವಿಯ ಮಾಜಿ ಮುಖ್ಯಸ್ಥ ಪ್ರನೋಯ್ ರಾಯ್ ಮತ್ತು ದೋರಬ್ ಸೋಪಾರಿವಾಲ ಅವರ ಅಧ್ಯಯನ ಪೂರ್ಣ ಗ್ರಂಥ ‘The Verdict- Decoding India’s Elections’ದಲ್ಲಿ ಸ್ಪಷ್ಟಪಡಿಸುವಂತೆ 2002ರ ನಂತರದ ಚುನಾವಣೆಗಳಲ್ಲಿ ಅಧಿಕಾರ ರೂಢ ಪಕ್ಷಗಳೇ ಮತ್ತೆ ಮತ್ತೆ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪ್ರವೃತ್ತಿ ಹೆಚ್ಚಾಗಿದೆ.

ಅದಕ್ಕೆ ಹಿಂದುತ್ವ ರಾಜಕಾರಣದ ಯಾಜಮಾನ್ಯವೂ ಕಳೆದ ಇಪ್ಪತ್ತು ವರ್ಷಗಳಲ್ಲಿ ಹೆಚ್ಚಾಗುತ್ತಿರುವುದು ಮತ್ತು ಅದಕ್ಕೆ ಪ್ರತಿಸ್ಪರ್ಧೆ ಒಡ್ಡಬಲ್ಲ ವಿರೋಧ ರಾಜಕಾರಣ ಬಲಹೀನವಾಗಿರುವುದು ಕಾರಣ.

ಎಲ್ಲಕ್ಕಿಂತ ಮುಖ್ಯವಾಗಿ 2014ರ ನಂತರದ ಹಿಂದುತ್ವ ರಾಜಕಾರಣ ಮತದಾರರ ಮನಸ್ಸನ್ನು ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ಒಲಿಸಿಕೊಂಡಿರುವುದರಿಂದ ಈ ಹಿಂದಿನ ರಾಜಕಾರಣದಂತೆ ಪಕ್ಷಗಳ ಜೊತೆ ಮತದಾರರ ಸಂಬಂಧ ವ್ಯಾವಹಾರಿಕ-transactional ಮಾತ್ರ ಆಗಿಲ್ಲ.

ಎಲ್ಲಿಯ ತನಕ ಬಿಜೆಪಿಯ ದ್ವೇಷ ರಾಜಕಾರಣವನ್ನು ವಿರೋಧಿಸುವ ರಾಜಕೀಯವು ಕೂಡ ಪರ್ಯಾಯ ಸಿದ್ಧಾಂತ ಮತ್ತು ರಾಜಕೀಯದೊಂದಿಗೆ ಜನರ ಮನಗೆಲ್ಲುವುದಿಲ್ಲವೋ, ವ್ಯವಹಾರಿಕದಾಚೆಗಿನ ರಾಜಕೀಯ ಸಂಬಂಧ ಕಟ್ಟಿಕೊಳ್ಳುವುದಿಲ್ಲವೋ ಅಲ್ಲಿಯ ತನಕ ಹಿಂದುತ್ವ ರಾಜಕಾರಣಕ್ಕೆ ಚುನಾವಣಾ ಗೆಲುವು ಸುಲಭವೇ ಆಗಿರುತ್ತದೆ. ಇದನ್ನೇ ಯೋಗೇಂದ್ರ ಯಾದವ್ ಅವರು 2019ರಲ್ಲೂ ಹೇಳುತ್ತಿದ್ದರಲ್ಲವೇ?

4. ಬಿಜೆಪಿ ಹೇಗಿದ್ದರೂ ಈ ರಾಜ್ಯಗಳನ್ನು ಗೆಲ್ಲುತ್ತಿತ್ತು. ಆದ್ದರಿಂದ ಈ ಗೆಲುವು ದೊಡ್ಡದೇನಲ್ಲ ಎನ್ನುವುದು ನಿಜವೇ?

ವಾಸ್ತವವಾಗಿ 2018ರಲ್ಲಿ ಈ ಮೂರು ರಾಜ್ಯಗಳನ್ನು ಕಳೆದುಕೊಂಡಿದ್ದರಿಂದಲೇ 2019ರ ಚುನಾವಣೆಯ ಬಗ್ಗೆ ಬಿಜೆಪಿ ಕಂಗಾಲಾಗಿತ್ತು. ಪುಲ್ವಾಮಾ ನಡೆದು ಬಿಜೆಪಿ ಮೊದಲಿಗಿಂತ ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಈಗ ಈ ಮೂರೂ ರಾಜ್ಯಗಳ ಗೆಲುವು-ಅದರಲ್ಲೂ ಹೆಚ್ಚು ಅಂತರದ ಗೆಲುವು, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸಾಮಾಜಿಕ ನೆಲೆಗಳ ಬೆಂಬಲದಿಂದ ಪಡೆದುಕೊಂಡ ಗೆಲುವು -2024ರ ಚುನಾವಣೆಯಲ್ಲಿ ಇನ್ನಷ್ಟು ಕೋಮು ಧ್ರುವೀಕರಣದ ಅಜೆಂಡಾಗಳ ಮೂಲಕ ಗೆಲ್ಲಲು ಬಿಜೆಪಿಯ ಹಾದಿಯನ್ನು ಸುಲಭಗೊಳಿಸಿದೆ.

ಅದರಲ್ಲೂ ಮ. ಪ್ರದೇಶಗಳಂತಹ ರಾಜ್ಯಗಳಲ್ಲಿ ಸತತವಾಗಿ 20 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಜನರು ಭ್ರಷ್ಟಾಚಾರವನ್ನು ಮರೆತು ಹಿಂದುತ್ವಕ್ಕೆ ವೋಟು ಹಾಕಿರುವುದು, ಬಿಜೆಪಿ ರಾಜಕಾರಣದ ಮಟ್ಟಿಗೆ ಹೊಸ ಹುರುಪು ಕೊಟ್ಟಿರುವುದಂತೂ ಸತ್ಯ. ಒಟ್ಟಾರೆ ಹಿಂದಿ ಪ್ರದೇಶವು 240 ಕ್ಕೂ ಹೆಚ್ಚು ಸೀಟುಗಳನ್ನು ಹೊಂದಿದೆ. ಹೀಗಾಗಿ ಈ ಗೆಲುವು 2024ನ್ನು ಸುಲಭಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಶಿವಸುಂದರ್

contributor

Similar News