ಇಂದಿರಾ ಸರ್ವಾಧಿಕಾರ ಮತ್ತು ಅಘೋಷಿತ ಸಂಘಿ ಸರ್ವಾಧಿಕಾರ | ಸಂಬಂಧಗಳು ಮತ್ತು ಕಲಿಯದ ಪಾಠಗಳು
ಇತಿಹಾಸವನ್ನು ನೋಡಿದರೆ, ಸಂಘಪರಿವಾರ ಮತ್ತು ಅಂದಿನ ಜನಸಂಘ ಇತರ ಜನತಾಂತ್ರಿಕ ಶಕ್ತಿಗಳಷ್ಟು ಕಟಿಬದ್ಧತೆಯಿಂದ ಮತ್ತು ತ್ಯಾಗಶೀಲತೆಯಿಂದ ತುರ್ತುಸ್ಥಿತಿಯ ವಿರುದ್ಧ ಹೋರಾಡದೆ, ಇಂದಿರಾಗಾಂಧಿಯವರೊಂದಿಗೆ ರಾಜಿ-ಕಾಬೂಲಿಯಲ್ಲಿ ತೊಡಗಿದ್ದರೆಂಬ ಸಂಗತಿಯನ್ನು ಮುಚ್ಚಿಟ್ಟಿರುವುದು ಸ್ಪಷ್ಟವಾಗುತ್ತದೆ. ಅಷ್ಟು ಮಾತ್ರವಲ್ಲ ಅವರ ಪಿತಾಮಹ ಸಾವರ್ಕರ್ ರೀತಿಯಲ್ಲಿ ಅವರ ನಾಯಕರು ಜೈಲಿನಿಂದಲೇ ತುರ್ತುಸ್ಥಿತಿಯನ್ನು ಬೆಂಬಲಿಸುತ್ತಾ ಶರಣಾಗತಿ ಪತ್ರಗಳನ್ನು ಬರೆದಿದ್ದರು. ಇತಿಹಾಸದ ಈ ಅತ್ಯಂತ ಅಪಮಾನಕಾರಿ ಪುಟಗಳನ್ನು ಹಾಗೂ ತಮ್ಮ ಈ ಅವಕಾಶವಾದಿ ಜನದ್ರೋಹಿ ಧೋರಣೆಗಳನ್ನು ಬಿಜೆಪಿ-ಸಂಘಪರಿವಾರ ಮುಚ್ಚಿಹಾಕಲು ಸತತವಾಗಿ ಪ್ರಯತ್ನಿಸುತ್ತಲೇ ಇದೆ. ಆದರೆ ಆ ಕಾಲದ ಅವರ ಬರಹಗಳು ಮತ್ತು ಅವರ ನಾಯಕರುಗಳೇ ದಾಖಲಿಸಿರುವ ಇತಿಹಾಸಗಳು ಹೇಗೆ ಸಂಘಪರಿವಾರದ ನಾಯಕರು ಎಮರ್ಜೆನ್ಸಿಯನ್ನು ಗುಪ್ತವಾಗಿ ಬೆಂಬಲಿಸಿದ್ದರು ಎಂಬ ಬಗ್ಗೆ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತವೆ.
ಭಾಗ- 1
ಇಂದು ಜೂನ್ 25.
ಇವತ್ತಿಗೆ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತುಸ್ಥಿತಿ ಘೋಷಿಸಿ 50 ವರ್ಶಗಳಾಗುತ್ತವೆ. ಕರ್ನಾಟಕವನ್ನೂ ಒಳಗೊಂಡಂತೆ ದಕ್ಷಿಣದ ಕೆಲವು ರಾಜ್ಯಗಳಲ್ಲಿ ತುರ್ತುಸ್ಥಿತಿಯ ಸರ್ವಾಧಿಕಾರದ ಕ್ರೌರ್ಯವು ಸಾಪೇಕ್ಷವಾಗಿ ನೋಡಿದರೆ ಉತ್ತರ ಭಾರತದಷ್ಟು ಘನಘೋರವಾಗಿರಲಿಲ್ಲ. ಕರ್ನಾಟಕದಲ್ಲಿ ಅದಕ್ಕೆ ದೇವರಾಜ ಅರಸು ಅವರ ಜನಪರ ಕಾರ್ಯಕ್ರಮಗಳ ಮುಲಾಮು ಒಂದು ಕಾರಣವಾಗಿರಬಹುದು. ತುರ್ತುಸ್ಥಿತಿಯನ್ನು ಹಿಂದೆಗೆದುಕೊಂಡ ನಂತರ ನಡೆದ ಚುನಾವಣೆಗಳಲ್ಲಿ ಇತರ ಕಡೆಗಳಲ್ಲಿ ಇಂದಿರಾ ಗಾಂಧಿ ಮತ್ತು ಅವರ ಪಕ್ಷ ಭೀಕರವಾದ ಸೋಲುಂಡರೂ ಕರ್ನಾಟಕ ಮತ್ತು ಆಂಧ್ರದಲ್ಲಿ ಪ್ರಚಂಡ ಬಹುಮತದಿಂದ ಗೆದ್ದು ಬಂದದ್ದೂ ಇದೇ ಕಾರಣಕ್ಕೆ.
ಅದೇನೇ ಇರಲಿ. ಈಗ ಭಾರತ ಅಂದಿನ ಘೋಷಿತ ಸರ್ವಾಧಿಕಾರಕ್ಕಿಂತ ಭೀಕರವಾದ ಮತ್ತು ಸುದೀರ್ಘವಾದ ಅಘೋಷಿತ ಸರ್ವಾಧಿಕಾರವನ್ನು ಮಾತ್ರವಲ್ಲದೆ ಫ್ಯಾಶಿಸ್ಟ್ ಸರ್ವಾಧಿಕಾರವನ್ನು ಅನುಭವಿಸುತ್ತಿದೆ. ಇಂದಿರಾ ಸರ್ವಾಧಿಕಾರದಿಂದ ಭಾರತ ಸರಿಯಾದ ಪಾಠ ಕಲಿಯದೇ ಇದ್ದುದೇ ಫ್ಯಾಶಿಸ್ಟ್ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಟ್ಟಿರಬಹುದೇ?
ಏಕೆಂದರೆ ಭಾರತವು ಅನುಭವಿಸಿದ ಆ ಮೊದಲನೇ ಸರ್ವಾಧಿಕಾರದ ವಿರೋಧದ ರಾಜಕೀಯವು ಆಗಿನ್ನೂ ಅಷ್ಟು ಸಾರ್ವಜನಿಕವಾಗಿ ಮಾನ್ಯರಾಗಿರದ ಫ್ಯಾಶಿಸ್ಟ್ ಸರ್ವಾಧಿಕಾರಿ ಶಕ್ತಿಗಳಾದ ಸಂಘ ಪರಿವಾರವನ್ನೂ ಒಳಗೊಂಡು ಅದಕ್ಕೆ ನಾಯಕತ್ವ ಸ್ಥಾನ ಕೊಟ್ಟಿತು. ಆ ಮೂಲಕ ಫ್ಯಾಶಿಸ್ಟರಿಗೆ ಪ್ರಜಾತಾಂತ್ರಿಕ ಮಾನ್ಯತೆಯನ್ನು ಗಳಿಸಿಕೊಟ್ಟಿತು. ಅದನ್ನೇ ಬಂಡವಾಳವಾಗಿಸಿಕೊಂಡ ಸಂಘಿ ಫ್ಯಾಶಿಸ್ಟರು ಪ್ರಜಾತಂತ್ರದಲ್ಲೂ ಈಗ ಹೆಮ್ಮರವಾಗಿ ಬೆಳೆದಿದ್ದಾರೆ.
ಈಗ ಹಿಂದಿರುಗಿ ನೋಡಿದರೆ ಇಂದಿರಾ ಸರ್ವಾಧಿಕಾರವನ್ನು ಕೇವಲ ಚುನಾವಣಾ ಪ್ರಜಾತಂತ್ರದ ನಿರಾಕರಣೆಯನ್ನಾಗಿ ಮಾತ್ರ ನೋಡಿದ್ದು ತಪ್ಪು ಎಂದು ಭಾವಿಸಬಹುದೇ? ಸ್ವಾತಂತ್ರ್ಯಾನಂತರದಲ್ಲೂ ದೇಶದಲ್ಲಿ ಚುನಾವಣಾ ಪ್ರಜಾತಂತ್ರದ ಶಾಸ್ತ್ರಗಳು ನಡೆಯುತ್ತಿದ್ದರೂ ವಾಸ್ತವದಲ್ಲಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸರ್ವಾಧಿಕಾರದ ಮುಂದುವರಿಕೆಯೇ ರಾಜಕೀಯ ಸರ್ವಾಧಿಕಾರಕ್ಕೂ ಕಾರಣವಾಯಿತು ಎಂಬ ಪಾಠ ಕಲಿಯಬಹುದೇ? ಹಾಗೂ ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಸರ್ವಾಧಿಕಾರಗಳನ್ನು ಪ್ರತಿಪಾದಿಸುವ ಶಕ್ತಿಗಳನ್ನು, ರಾಜಕೀಯ ಸರ್ವಾಧಿಕಾರಿ ವಿರೋಧಿ ಹೋರಾಟದಲ್ಲಿ ಒಳಗೊಂಡಿದ್ದು ಸರ್ವಾಧಿಕಾರ ವಿರೋಧಿ ಹೋರಾಟ ಎಸಗಿದ ಬಹುದೊಡ್ಡ ಪ್ರಮಾದವೆಂದು ಅರಿಯಬಹುದೇ? ಹಾಗಿದ್ದಲ್ಲಿ ಇಂದಿನ ಅಘೋಷಿತ ಫ್ಯಾಶಿಸ್ಟ್ ಸರ್ವಾಧಿಕಾರಿ ವಿರೋಧಿ ಹೋರಾಟವು ಅಂದಿನ ತಪ್ಪುಗಳಿಂದ ಪಾಠ ಕಲಿತು ಫ್ಯಾಶಿಸ್ಟ್ ಸರ್ವಾಧಿಕಾರಿ ವಿರೋಧಿ ಹೋರಾಟವನ್ನು ಕೇವಲ ರಾಜಕೀಯ ಅಥವಾ ಚುನಾವಣಾ ಸರ್ವಾಧಿಕಾರಕ್ಕೆ ಮಾತ್ರ ಸೀಮಿತಗೊಳಿಸದೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೂ ವಿಸ್ತರಿಸುವುದೇ?
ಆದರೆ ವಿಪರ್ಯಾಸವೆಂದರೆ ಇಂದಿರಾ ಸರ್ವಾಧಿಕಾರದ ವಿದ್ಯಮಾನದಿಂದ ಪಾಠ ಕಲಿಯುವ ಬದಲಿಗೆ ಸಂಘಿಗಳ ಹಾಲಿ ಅಘೋಷಿತ ಫ್ಯಾಶಿಸ್ಟ್ ಸರ್ವಾಧಿಕಾರಕ್ಕಿಂತ ಇಂದಿರಾ ಸರ್ವಾಧಿಕಾರ ಪ್ರಗತಿಪರವಾಗಿತ್ತು ಅಥವಾ ಅನಿವಾರ್ಯವಾಗಿತ್ತು ಎಂಬ ವಾದಗಳು ಕೂಡ ಪ್ರಗತಿಪರ ವಲಯದಿಂದಲೇ ಹುಟ್ಟಿಕೊಳ್ಳುತ್ತಿದೆ. ಈ ಎಲ್ಲಾ ವಾದಗಳನ್ನು ಇಂದಿರಾ ಗಾಂಧಿಯವರೇ ತುರ್ತುಸ್ಥಿತಿ ಘೋಷಣೆ ಮಾಡುವಾಗ ಉಲ್ಲೇಖಿಸಿದ್ದರು ಮತ್ತು ಅದನ್ನು ಕೆಲವು ಕಮ್ಯುನಿಸ್ಟರನ್ನೂ ಒಳಗೊಂಡಂತೆ ಹಲವು ಪ್ರಗತಿಪರರು ನಂಬಿದ್ದರು. ಆದರೆ ತುರ್ತುಸ್ಥಿತಿಯ ಕ್ರೌರ್ಯ ಮತ್ತು ಆ ಅವಧಿಯಲ್ಲಿ ಮತ್ತು ಆ ನಂತರದಲ್ಲಿ ಇಂದಿರಾಗಾಂಧಿಯವರ ರಾಜಕೀಯವನ್ನು ಗಮನಿಸಿ ಅನುಭವಿಸಿ ತಮ್ಮ ಅಭಿಪ್ರಾಯಗಳನ್ನು ತಿದ್ದಿಕೊಂಡು ತುರ್ತುಸ್ಥಿತಿಯನ್ನು ಖಂಡಿಸಿದ್ದರು. ಆದರೆ ಈಗ ಮತ್ತೆ ಇಂದಿರಾ ಸಮರ್ಥನೆಗಳಿಗೆ ಹೊಸ ಜೀವ ಬಂದಿರುವುದು ಸಂದರ್ಭದ ಅಸಹಾಯಕತೆಯನ್ನಷ್ಟೇ ಹೇಳುತ್ತಿದೆ.
ಇಂದಿರಾ ಸರ್ವಾಧಿಕಾರ ಸಮರ್ಥನೀಯವೇ?
ಇಂದಿರಾ ಗಾಂಧಿ 1969ರಿಂದ 20 ಅಂಶಗಳ ಕಾರ್ಯಕ್ರಮ, ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ, ರಾಜಧನ ರದ್ದತಿಯಂತಹ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಜಾರಿ ಮಾಡಿದರು. ಕಮ್ಯುನಿಸ್ಟ್ ರಶ್ಯ ಜೊತೆ ಸ್ನೇಹದಿಂದಿದ್ದರು. ಜಗತ್ತಿನ ಬಂಡವಾಳಶಾಹಿ ರಾಷ್ಟ್ರಗಳ ನಾಯಕ ಅಮೆರಿಕಕ್ಕೆ ಇದು ಸರಿ ಬರಲಿಲ್ಲ. ಅಮೆರಿಕ ಇಂದಿರಾ ಸರಕಾರವನ್ನು ಕಿತ್ತೊಗೆಯಲು ವಿರೋಧ ಪಕ್ಷಗಳೊಂದಿಗೆ ಕೈಗೂಡಿಸಿತ್ತು. ಹೀಗಾಗಿ ಇಂದಿರಾ ಗಾಂಧಿಯವರು ಸರ್ವಾಧಿಕಾರವನ್ನು ಘೋಷಿಸಿದ್ದು ತನ್ನ ಅಧಿಕಾರವನ್ನು ಕಾಪಾಡಿಕೊಳ್ಳಲು ಅಲ್ಲ. ಬದಲಿಗೆ ಅಮೆರಿಕದ ಷಡ್ಯಂತ್ರದಿಂದ ಭಾರತವನ್ನು ಬಚಾವು ಮಾಡಲು ಎಂಬುದು ಎಮರ್ಜೆನ್ಸಿಯ ನವ ಪ್ರತಿಪಾದಕರ ವಾದಗಳಲ್ಲಿ ಒಂದು.
ಆ ಕಾಲಘಟ್ಟದಲ್ಲಿ ಅಮೆರಿಕದ ಸಿಐಎ ಚಿಲಿ, ಕ್ಯೂಬಾ ಇನ್ನಿತರ ಅಮೆರಿಕ ವಿರೋಧಿ ಸಮಾಜವಾದಿ-ಕಮ್ಯುನಿಸ್ಟ್ ಮತ್ತು ನೈಜ ರಾಷ್ಟ್ರವಾದಿ ದೇಶಗಳಲ್ಲಿ ಅಸ್ಥಿರತೆಯನ್ನು ಉಂಟು ಮಾಡುತ್ತಿತ್ತು ಹಾಗೂ ಅಲ್ಲಿಯ ಪ್ರಧಾನಿ-ಅಧ್ಯಕ್ಷರುಗಳನ್ನು ಕೊಂದು ಹಾಕಿ, ತಮ್ಮ ಕೈಗೊಂಬೆ ಸರಕಾರವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದದ್ದು ನಿಜ. ಇಂದಿರಾಗಾಂಧಿ ಸರಕಾರದ ವಿರೋಧಿಗಳಿಗೂ, ಅದರಲ್ಲೂ ಸಂಘಪರಿವಾರಕ್ಕೆ, ಅಮೆರಿಕದ ಸಂಪರ್ಕವಿದ್ದದ್ದು ನಿಜ ಮತ್ತು ಇಂದಿರಾ ವಿರೋಧಿ ಬಣದ ನಾಯಕತ್ವ ವಹಿಸಿದ್ದ ಜಯಪ್ರಕಾಶ್ ನಾರಾಯಣರು ಪೊಲೀಸ್ ಮತ್ತು ಸೈನ್ಯಕ್ಕೆ ಸರಕಾರದೊಂದಿಗೆ ಸಹಕರಿಸದೆ ಇರಲು ಕರೆಕೊಟ್ಟು ರಾಜಕೀಯ ಅಸ್ಥಿರತೆಗೆ ಕಾರಣರಾಗಿದ್ದು ನಿಜ.
ಆದರೆ ಅಷ್ಟು ಮಾತ್ರಕ್ಕೆ ಅಮೆರಿಕ ಇಂದಿರಾ ಗಾಂಧಿ ಸರಕಾರದ ವಿರೋಧಿಯಾಗಿತ್ತೆಂಬುದು ನಿಜವೇ?
ಆ ಕಾಲಘಟ್ಟದಲ್ಲಿ ಅಮೆರಿಕ ಸಾಮ್ರಾಜ್ಯಶಾಹಿಗಳು ಸಮಾಜವಾದಿ-ಕಮ್ಯುನಿಸ್ಟ್ ಹಾಗೂ ನೈಜ ರಾಷ್ಟ್ರವಾದಿ ದೇಶಗಳ ನಾಯಕರ ಕೊಲೆಗಳನ್ನು ಮಾಡುತ್ತಿದ್ದರು ಮತ್ತು ಅಧಿಕಾರ ಅಸ್ಥಿರತೆಗೆ ಪ್ರಯತ್ನಿಸುತ್ತಿದ್ದರು. ಏಕೆಂದರೆ ಈ ದೇಶಗಳು ತಾವು ಸ್ವಾತಂತ್ರ್ಯ ಪಡೆದ ನಂತರ ತಮ್ಮ ದೇಶದಲ್ಲಿದ್ದ ಅಮೆರಿಕ-ಇಂಗ್ಲೆಂಡ್-ಫ್ರಾನ್ಸ್ ಇನ್ನಿತ್ಯಾದಿ ವಸಾಹತುಶಾಹಿ-ಸಾಮ್ರಾಜ್ಯಶಾಹಿ ದೇಶಗಳ ಹೂಡಿಕೆಯನ್ನು ರಾಷ್ಟ್ರೀಕರಣ ಮಾಡಿ ಆ ದೇಶಗಳ ಆರ್ಥಿಕ ಹಿತಾಸಕ್ತಿಗೆ ಪೆಟ್ಟುಕೊಟ್ಟಿದ್ದವು. ತಮ್ಮ ದೇಶದ ಬಂಡವಾಳಿಗರ ಹಿತಾಸಕ್ತಿಗಿಂತ ರೈತ-ಕಾರ್ಮಿಕರ ಹಿತಾಸಕ್ತಿಗೆ ಪ್ರಧಾನ ಒತ್ತು ಕೊಟ್ಟು ತಮ್ಮ ದೇಶದ ದೊಡ್ಡ ಬಂಡವಾಳಿಗರ ದ್ವೇಷವನ್ನೂ ಕಟ್ಟಿಕೊಂಡಿದ್ದರು. ಆ ಕಾರಣಕ್ಕಾಗಿಯೇ ಆ ದೇಶದ ಬಂಡವಾಳಶಾಹಿ ಶಕ್ತಿಗಳು ಅಮೆರಿಕದ ಜೊತೆ ಸಂಚಿನಲ್ಲಿ ಪಾಲ್ಗೊಂಡರು. ಹಾಗೂ ತಮ್ಮ ದೇಶಗಳಲ್ಲಿ ನೈಜ ಸಮಾಜವಾದಿ ಮತ್ತು ಕಮ್ಯುನಿಸ್ಟ್ ಶಕ್ತಿಗಳನ್ನು ರಾಜಕೀಯವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟರು. ಈ ಕಾರಣಗಳಿಂದಾಗಿ -ಅವು ಅಮೆರಿಕ ಸಾಮ್ರಾಜ್ಯಶಾಹಿ ಆರ್ಥಿಕತೆಗೆ ಪೆಟ್ಟು ಕೊಟ್ಟಿದ್ದು ಮತ್ತು ಬಂಡವಾಳಶಾಹಿ ವಿರೋಧಿ ನೈಜ ಸಮಾಜವಾದಿ ಮಾರ್ಗ ಅನುಸರಿಸಿದ್ದರಿಂದಾಗಿ-ಅಮೆರಿಕ ಆ ಸರಕಾರಗಳನ್ನು ಅಸ್ಥಿರಗೊಳಿಸಿತು.
ಆದರೆ ಇಂದಿರಾ ಗಾಂಧಿ ಸರಕಾರವಾಗಲೀ ಅಥವಾ ಅದಕ್ಕೆ ಹಿಂದಿನ ನೆಹರೂ ಸರಕಾರವಾಗಲೀ ಬಾಯಲ್ಲಿ ಎಷ್ಟೇ ಸಮಾಜವಾದದ ಮಾತುಗಳನ್ನು ಆಡಿದರೂ ಅಮೆರಿಕ ವಿರೋಧಿಯೇನೂ ಆಗಿರಲಿಲ್ಲ.
ಹಾಗೆ ನೋಡಿದರೆ ಚಿಲಿ, ಕ್ಯೂಬಾಗಳು, 1955ರ ತನಕ ಅಧಿಕಾರದಲ್ಲಿದ್ದ ಇರಾನ್‌ನ ಸಮಾಜವಾದಿ ರಾಷ್ಟ್ರವಾದಿ ಮುಸಾದಿಕ್ ಸರಕಾರಗಳು ತಮ್ಮ ದೇಶಗಳಲ್ಲಿದ್ದ ವಿದೇಶಿ ಬಂಡವಾಳ ಹೂಡಿಕೆ, ಆಸ್ತಿಪಾಸ್ತಿಗಳನ್ನು ರಾಷ್ಟ್ರೀಕರಣ ಮಾಡಿದವು. ಆದರೆ ಭಾರತದಲ್ಲಿ ನೆಹರೂ ಸರಕಾರವಾಗಲೀ, ಇಂದಿರಾ ಸರಕಾರವಾಗಲೀ, ವಿದೇಶಿ ಬಂಡವಾಳವನ್ನು ರಾಷ್ಟ್ರೀಕರಣ ಮಾಡುವುದಿರಲಿ ಹೆಚ್ಚಿನ ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟವು.
ದೇಶದ ದೊಡ್ಡ ಸಾರ್ವಜನಿಕ ಕೈಗಾರಿಕೆ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸೋವಿಯತ್ ರಶ್ಯದ ಸಹಕಾರ ಮತ್ತು ಹೂಡಿಕೆಗಳಿದ್ದರೂ, 1947ರಿಂದಲೂ ಭಾರತದ ಕೃಷಿ ಕ್ಷೇತ್ರವನ್ನು ಅಮೆರಿಕದ ನವ ವಸಾಹತುವಾಗಲು ನೆಹರೂ ಸರಕಾರವೇ ಅವಕಾಶ ಮಾಡಿಕೊಟ್ಟಿತ್ತು. ಆ ನಂತರ 1965ರ ನಂತರ ಭಾರತದಲ್ಲಿ ಅಮೆರಿಕ ನಿರ್ದೇಶಿತ ‘ಹಸಿರು ಕ್ರಾಂತಿ’ಯನ್ನು ‘ಕೆಂಪುಕ್ರಾಂತಿ’ ತಡೆಯಲೆಂದೇ ಇಂದಿರಾ ಸರಕಾರ ಜಾರಿ ಮಾಡಿತು. ಇನ್ನು 1969 ರ ಬ್ಯಾಂಕ್ ರಾಷ್ಟ್ರೀಕರಣ ಜನಸಾಮಾನ್ಯರಿಗೆ ಬ್ಯಾಂಕ್ ಸೌಲಭ್ಯವನ್ನು ಕೊಡುವುದಕ್ಕಿಂತಲೂ ಹೆಚ್ಚಾಗಿ ಭಾರತದ ದೊಡ್ಡ ಬಂಡವಾಳಿಗರಿಗೆ ರಿಯಾಯಿತಿ ದರದಲ್ಲಿ ಹಣಕಾಸು ಬಂಡವಾಳ ಒದಗಿಸುತ್ತಾ ದೇಶವನ್ನು ಬಂಡವಾಳಶಾಹಿ ಮಾರ್ಗದಲ್ಲಿ ಬೆಳೆಸುವ ಉದ್ದೇಶವನ್ನು ಹೊಂದಿತ್ತು. ಅರೆಮನಸ್ಸಿನಿಂದ ಘೋಷಿಸಲಾದ ಭೂ ಸುಧಾರಣೆಗಳು ಜನಚಳವಳಿ ಗಟ್ಟಿಯಾಗಿದ್ದ ಕಡೆ ಜಾರಿಯಾದದ್ದಲ್ಲದೆ ಬೇರೆಲ್ಲೂ ಗಟ್ಟಿಯಾಗಿ ಜಾರಿ ಮಾಡಿ ಊಳಿಗಮಾನ್ಯ ಶಕ್ತಿಗಳನ್ನು ಎದುರು ಹಾಕಿಕೊಳ್ಳುವ ಇರಾದೆಯನ್ನೇ ಇಂದಿರಾ ಸರಕಾರ ತೋರಲಿಲ್ಲ.
ರಾಜಕೀಯವಾಗಿಯೂ ಇಂದಿರಾ ಗಾಂಧಿಯವರು ಪ್ರಬಲ ಕಮ್ಯುನಿಸ್ಟ್ ವಿರೋಧಿ ಆಗಿದ್ದರು. ವಾಸ್ತವದಲ್ಲಿ 1958ರಲ್ಲಿ ಕೇರಳದಲ್ಲಿ ಅಧಿಕಾರದಲ್ಲಿದ್ದ ಜಗತ್ತಿನ ಪ್ರಪ್ರಥಮ ಚುನಾಯಿತ ಕಮ್ಯುನಿಸ್ಟ್ ಸರಕಾರವನ್ನು ಕಿತ್ತುಹಾಕಿದ ಕೀರ್ತಿಯೂ ಇಂದಿರಾ ಗಾಂಧಿಯವರಿಗೆ ಸೇರಿದ್ದು. 1971ರಲ್ಲಿ ಅಧಿಕಾರಕ್ಕೆ ಬಂದಾಗ ಕೆಲವು ಕಮ್ಯುನಿಸ್ಟರು ಇಂದಿರಾ ಅವರ ಎಡ ಪದಪುಂಜಗಳಿಗೆ ಮನಸೋತು ಅವರಲ್ಲಿ ಸಮಾಜವಾದಿಯನ್ನು ಕಂಡರಾದರೂ, ಇಂದಿರಾ ಅಧಿಕಾರದ ಒಟ್ಟಾರೆ ಅವಧಿಯಲ್ಲಿ ಅವರು ಭಾರತದ ದೊಡ್ಡ ಬಂಡವಾಳಶಾಹಿ ಟಾಟಾ ಅವರ ನೇತೃತ್ವದಲ್ಲಿ ಆಗ್ರಹಿಸಲಾಗಿದ್ದ ಟಾಟಾ ಪ್ಲಾನ್ ಅನ್ನು ಅನುಸರಿಸಿದರು. ತುರ್ತುಸ್ಥಿತಿಯನ್ನು ಕೂಡ ಕಾರ್ಮಿಕರಲ್ಲಿ ಶಿಸ್ತು ತರುವ ಕ್ರಮ ಎಂದು ಸ್ವಾಗತಿಸಿದ್ದು, ಹಾಡಿ ಹೊಗಳಿದ್ದು, ಭಾರತದ ದೊಡ್ಡ ಬಂಡವಾಳಶಾಹಿಗಳೇ. ಆ ಅವಧಿಯಲ್ಲಿ ನಡೆದ ಅತಿ ಭೀಕರ ಕೋಮುವಾದಿ ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ಟಾಟಾ ಅವರು ದೊಡ್ಡ ದೇಶಪ್ರೇಮಿ ಕ್ರಮವೆಂದು ಕೊಂಡಾಡಿದ್ದರು.
ಮತ್ತೊಂದು ಕಡೆ ತುರ್ತುಸ್ಥಿತಿಯಲ್ಲಿ ತೀವ್ರವಾದ ದಬ್ಬಾಳಿಕೆಗೆ ಮತ್ತು ದೌರ್ಜನ್ಯಗಳಿಗೆ ಒಳಗಾದದ್ದು ಕೂಡ ಕೂಲಿ ಕಾರ್ಮಿಕರು, ಸಮಾಜವಾದಿಗಳು, ಕಮ್ಯುನಿಸ್ಟರು ಮತ್ತು ನಕ್ಸಲೈಟರೇ. ಬಂಡವಾಳಶಾಹಿ, ಅಮೆರಿಕ ಪರ ಆರೆಸ್ಸೆಸ್‌ವಾದಿಗಳು ಪ್ರಾರಂಭದಲ್ಲಿ ತುರ್ತುಸ್ಥಿತಿಯ ವಿರುದ್ಧವಿದ್ದರೂ ನಂತರದಲ್ಲಿ ಪೂರ್ಣವಾಗಿ ಇಂದಿರಾ ಪರವಾದರು. ಅವರ ಇಂದಿರಾ ಪರತೆ 1980ರಲ್ಲಿ ಎರಡನೇ ಬಾರಿ ಇಂದಿರಾ ಅಧಿಕಾರಕ್ಕೆ ಬಂದ ನಂತರವೂ ಅತ್ಯಂತ ಅಬಾಧಿತವಾಗಿ ಮುಂದುವರಿಯಿತು.
ಹೀಗಾಗಿ ಇಂದಿರಾ ಸರಕಾರ ಮತ್ತು ಆನಂತರದ ಸರ್ವಾಧಿಕಾರ ಚಿಲಿ ಅಥವಾ ಕ್ಯೂಬಾಗಳಂತೆ ಅಮೆರಿಕ ಸಾಮ್ರಾಜ್ಯಶಾಹಿ ವಿರೋಧಿಯೂ ಆಗಿರಲಿಲ್ಲ, ಬಂಡವಾಳಶಾಹಿ ವಿರೋಧಿಯೂ ಆಗಿರಲಿಲ್ಲ, ಸಮಾಜವಾದಿ-ಕಮ್ಯುನಿಸ್ಟ್ ಪರವೂ ಆಗಿರಲಿಲ್ಲ. ಹೀಗಾಗಿ ಅಮೆರಿಕಕ್ಕೆ ಮತ್ತು ಆರೆಸ್ಸೆಸ್‌ಗೆ ಈ ಕಾರಣಗಳಿಗಾಗಿ ಇಂದಿರಾ ಅವರನ್ನು ಪದಚ್ಯುತ ಗೊಳಿಸಬೇಕೆಂಬ ಅಗತ್ಯವೇ ಇರಲಿಲ್ಲ.
ಆದ್ದರಿಂದ ದೇಶದ ನೈಜ ಪ್ರಜಾತಂತ್ರವಾದಿಗಳು ಎಮರ್ಜೆನ್ಸಿಯ ಪ್ರಮಾದಗಳನ್ನು ಹಾಗೂ ಅದನ್ನು ಸಾಧ್ಯಗೊಳಿಸಿದ ರಾಜಕೀಯ-ಆರ್ಥಿಕ ಸಂದರ್ಭವನ್ನೂ ಹಾಗೂ ಅದಕ್ಕೆ ಅವಕಾಶ ಮಾಡಿಕೊಟ್ಟ ಸಾಂವಿಧಾನಿಕ ಸಾಧ್ಯತೆಗಳನ್ನೂ ಇನ್ನಷ್ಟು ಆಳವಾಗಿ ಅರ್ಥಮಾಡಿಕೊಂಡು ಅಂದಿನ ಮತ್ತು ಇಂದಿನ ಸರ್ವಾಧಿಕಾರಗಳಲ್ಲಿ ಇರುವ ವರ್ಗ ಹಿತಾಸಕ್ತಿಯ ಸಾರವನ್ನು ಗ್ರಹಿಸುವ ಅಗತ್ಯವಿದೆ.
ಆದ್ದರಿಂದ ಮತ್ತೆ ಈ ದೇಶದಲ್ಲಿ ಅಂತಹ ಪ್ರಮಾದ ಉಂಟಾಗದಂತೆ ಎಚ್ಚರದಿಂದಿರಲು ಈ ದಿನವನ್ನು ಈ ದೇಶದ ಜನತೆ ಎಚ್ಚರಿಕೆಯ ದಿನವನ್ನಾಗಿ ನೆನಪಿನಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ.
ಘೋಷಿತಕ್ಕಿಂತಲೂ ಭೀಕರವಾಗಿರುವ ಅಘೋಷಿತ ಎಮರ್ಜೆನ್ಸಿ ಆದರೆ ಪ್ರತಿವರ್ಷದಂತೆ ಈ ವರ್ಷವೂ ಸಹ ಸಂಘಪರಿವಾರ ತಾವು ಸಾವಿರ ಗಾಯಗಳ ಮೂಲಕ ಕಳೆದ ಹನ್ನೊಂದು ವರ್ಷಗಳಿಂದ ಸಂವಿಧಾನಕ್ಕೆ ಮಾಡಿರುವ ಗಾಯಗಳನ್ನು ಮರೆಸಿ 50 ವರ್ಷಗಳ ಕೆಳಗೆ ಇಂದಿರಾ ಗಾಂಧಿ ಸಂವಿಧಾನದ ಮೇಲೆ ಮಾಡಿದ ಪ್ರಹಾರವನ್ನು ನೆನಪಿಸುತ್ತಿದ್ದಾರೆ...
ಅದರ ಮೂಲಕ ಎಮರ್ಜೆನ್ಸಿಗಿಂತ ಭೀಕರವಾದ ತಮ್ಮ ಫ್ಯಾಶಿಸ್ಟ್ ಆಳ್ವಿಕೆಯನ್ನು ಮುಚ್ಚಿಟ್ಟುಕೊಳ್ಳಲು ಯತ್ನಿಸುತ್ತಾ ಬಂದಿದ್ದಾರೆ.
ಇಂದಿರಾ ಎಮರ್ಜೆನ್ಸಿ ರಾಜಕೀಯ ವಲಯಕ್ಕೆ ಸೀಮಿತವಾಗಿದ್ದರೆ ಮೋದಿ ಎಮರ್ಜೆನ್ಸಿ ದೇಶದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಮಾತ್ರವಲ್ಲದೆ ಜನರ ದೈನಂದಿನ ಬದುಕಿನ ಎಲ್ಲಾ ಆಯಾಮಗಳನ್ನು ಅತಂತ್ರಗೊಳಿಸಿದೆ.
ಇಂದಿರಾ ಎಮರ್ಜೆನ್ಸಿ ಕೇವಲ 20 ತಿಂಗಳುಗಳು ಇದ್ದರೆ ಮೋದಿ ಸರ್ವಾಧಿಕಾರ ಹನ್ನೊಂದು ವರ್ಷ ದಾಟಿದೆ. ಸಮಾಜದಲ್ಲಿ, ಸಾಂವಿಧಾನಿಕ ಸಂಸ್ಥೆಗಳಲ್ಲಿ ಬೇರುಬಿಟ್ಟುಕೊಂಡಿದೆ.
ಇಪ್ಪತ್ತು ತಿಂಗಳ ಇಂದಿರಾ ಎಮರ್ಜೆನ್ಸಿಯ ವಿರುದ್ಧ ದೇಶದ ರಾಜಕೀಯದಲ್ಲಿ ಹಾಗೂ ಸಮಾಜದಲ್ಲೂ ಬಹುಮತದ ಆಕ್ರೋಶ ಹುಟ್ಟಿದ್ದರೆ ಮೋದಿಯ ಫ್ಯಾಶಿಸಂಗೆ ಆ ರೀತಿಯ ಪ್ರತಿರೋಧ ಇನ್ನೂ ಕಾಣುತ್ತಿಲ್ಲ ಎಂಬುದು ಹನ್ನೊಂದು ವರ್ಷಗಳ ಚುನಾವಣೆಯ ಫಲಿತಾಂಶಗಳೂ ಹೇಳುತ್ತಿವೆ.
ಪ್ರತಿವರ್ಷದಂತೆ ಈ ವರ್ಷವೂ ಈ ಸಂದರ್ಭವನ್ನು ಹೇಗೆ ಕಾಂಗ್ರೆಸ್ ಪ್ರಜಾಪ್ರಭುತ್ವ ವಿರೋಧಿಯೆಂದು ಮಾತ್ರವಲ್ಲದೆ ತಾವು ಮಾತ್ರ ಎಮರ್ಜೆನ್ಸಿಯಲ್ಲಿ ಸರ್ವಾಧಿಕಾರಿ ವಿರೋಧಿಯಾಗಿದ್ದವೆಂಬ ಸುಳ್ಳನ್ನು ವ್ಯವಸ್ಥಿತವಾಗಿ ಹಂಚಲು ಸಂಘಪರಿವಾರ ಮತ್ತು ಬಿಜೆಪಿ ಬಳಸಿಕೊಳ್ಳುತ್ತದೆ.
ಘನಘೋರ ತುರ್ತುಸ್ಥಿತಿಯನ್ನು ಬೆಂಬಲಿಸಿತ್ತೇಕೆ ಸಂಘಪರಿವಾರ?
ಇತಿಹಾಸವನ್ನು ನೋಡಿದರೆ, ಸಂಘಪರಿವಾರ ಮತ್ತು ಅಂದಿನ ಜನಸಂಘ ಇತರ ಜನತಾಂತ್ರಿಕ ಶಕ್ತಿಗಳಷ್ಟು ಕಟಿಬದ್ಧತೆಯಿಂದ ಮತ್ತು ತ್ಯಾಗಶೀಲತೆಯಿಂದ ತುರ್ತುಸ್ಥಿತಿಯ ವಿರುದ್ಧ ಹೋರಾಡದೆ, ಇಂದಿರಾಗಾಂಧಿಯವರೊಂದಿಗೆ ರಾಜಿ-ಕಾಬೂಲಿಯಲ್ಲಿ ತೊಡಗಿದ್ದರೆಂಬ ಸಂಗತಿಯನ್ನು ಮುಚ್ಚಿಟ್ಟಿರುವುದು ಸ್ಪಷ್ಟವಾಗುತ್ತದೆ.
ಅಷ್ಟು ಮಾತ್ರವಲ್ಲ ಅವರ ಪಿತಾಮಹ ಸಾವರ್ಕರ್ ರೀತಿಯಲ್ಲಿ ಅವರ ನಾಯಕರು ಜೈಲಿನಿಂದಲೇ ತುರ್ತುಸ್ಥಿತಿಯನ್ನು ಬೆಂಬಲಿಸುತ್ತಾ ಶರಣಾಗತಿ ಪತ್ರಗಳನ್ನು ಬರೆದಿದ್ದರು.
ಇತಿಹಾಸದ ಈ ಅತ್ಯಂತ ಅಪಮಾನಕಾರಿ ಪುಟಗಳನ್ನು ಹಾಗೂ ತಮ್ಮ ಈ ಅವಕಾಶವಾದಿ ಜನದ್ರೋಹಿ ಧೋರಣೆಗಳನ್ನು ಬಿಜೆಪಿ-ಸಂಘಪರಿವಾರ ಮುಚ್ಚಿಹಾಕಲು ಸತತವಾಗಿ ಪ್ರಯತ್ನಿಸುತ್ತಲೇ ಇದೆ. ಆದರೆ ಆ ಕಾಲದ ಅವರ ಬರಹಗಳು ಮತ್ತು ಅವರ ನಾಯಕರುಗಳೇ ದಾಖಲಿಸಿರುವ ಇತಿಹಾಸಗಳು ಹೇಗೆ ಸಂಘಪರಿವಾರದ ನಾಯಕರು ಎಮರ್ಜೆನ್ಸಿಯನ್ನು ಗುಪ್ತವಾಗಿ ಬೆಂಬಲಿಸಿದ್ದರು ಎಂಬ ಬಗ್ಗೆ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತವೆ.
ಅಟಲ್ ಬಿಹಾರಿಯವರು ಹೆಚ್ಚು ಹೊತ್ತು ಜೈಲಿನಲ್ಲಿರಲಿಲ್ಲ!
ಪ್ರತಿವರ್ಷ ಜೂನ್ 25ರಂದು ಬಿಜೆಪಿ ಮತ್ತು ಆರೆಸ್ಸೆಸ್ ನವರು ಯಥಾಪ್ರಕಾರ ತಾವು ಹೇಗೆ ಭಾರತವನ್ನು ತುರ್ತುಸ್ಥಿತಿಯಿಂದ ಕಾಪಾಡಿದೆವು ಎಂದು ಕೊಚ್ಚಿಕೊಳ್ಳುತ್ತಾ ವಾಜಪೇಯಿ, ಮೊರಾರ್ಜಿ ಹಾಗೂ ಇನ್ನಿತರ ನಾಯಕರ ಬಂಧನದ ಬಗ್ಗೆ ವರದಿ ಮಾಡಿದ್ದ 1977ರ ಜೂನ್ 26ರ ಪತ್ರಿಕೆಗಳ ಮುಖಪುಟವನ್ನು ಪೇಸ್‌ಬುಕ್‌ನಲ್ಲಿ ಹಾಕಿಕೊಳ್ಳುತ್ತಾರೆ.
ಆದರೆ ಬಿಜೆಪಿ ನಾಯಕರುಗಳಿಗಿಂತ ಹೆಚ್ಚಿನ ಸಾವು ನೋವುಗಳನ್ನು ಎಮರ್ಜೆನ್ಸಿಯಲ್ಲಿ ಅನುಭವಿಸಿದವರು ಸಮಾಜವಾದಿಗಳು, ಲೋಹಿಯಾವಾದಿಗಳು, ಸಿಪಿಎಂ ಮತ್ತು ನಕ್ಸಲೈಟ್ ಪಕ್ಷಗಳ ಸಾವಿರಾರು ನಾಯಕರು ಮತ್ತು ಕಾರ್ಯಕರ್ತರು. ಅದು ಅಂದಿನ ಗೃಹ ಇಲಾಖೆಯ ಕಡತಗಳನ್ನು ಹಾಗೂ ಗುಪ್ತ ವರದಿಗಳನ್ನೂ ಗಮನಿಸಿದರೆ ಗೊತ್ತಾಗುತ್ತದೆ.
ಅದಿರಲಿ. ಮುಖಪುಟದಲ್ಲಿ ಹೆಸರು ಹಾಕಿಸಿಕೊಂಡ ಅಟಲ್ ಬಿಹಾರಿ ವಾಜಪೇಯಿಯವರು ನಿಜಕ್ಕೂ ತುರ್ತುಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ್ದರೇ?
ಖಂಡಿತಾ ಇಲ್ಲ.
ತುರ್ತುಸ್ಥಿತಿಯ 20 ತಿಂಗಳುಗಳಲ್ಲಿ ಅತಿ ಹೆಚ್ಚು ಭಾಗ ಅಟಲ್ ಬಿಹಾರಿ ವಾಜಪೇಯಿಯವರು ಪೆರೋಲ್ ಮೇಲೆ ಮನೆಯಲ್ಲಿ ಕಳೆದಿದ್ದರು ಹಾಗೂ ಪೆರೋಲ್ ಪಡೆದುಕೊಳ್ಳಲು ತುರ್ತುಸ್ಥಿತಿಯನ್ನು ತಾವು ವಿರೋಧಿಸುವುದಿಲ್ಲ ಎಂದು ಮುಚ್ಚಳಿಕೆಯನ್ನೂ ಬರೆದುಕೊಟ್ಟಿದ್ದರು!
ಇದನ್ನು ದಾಖಲೆ ಸಮೇತ ಜನರ ಗಮನಕ್ಕೆ ತಂದಿದ್ದು ಕಮ್ಯುನಿಸ್ಟರೂ ಅಲ್ಲ, ಸಮಾಜವಾದಿಗಳೂ ಅಲ್ಲ. ಬದಲಿಗೆ ಬಿಜೆಪಿಯ ಪ್ರಮುಖ ನಾಯಕರಲ್ಲೊಬ್ಬರಾದ ಸುಬ್ರಮಣಿಯನ್ ಸ್ವಾಮಿಯವರು.