ಕಾಶ್ಮೀರ ವಿಲೀನ: ಮೋದಿಯ ಬುರುಡೆಗಳು ಮತ್ತು ಪಟೇಲ್, ಅಂಬೇಡ್ಕರ್ ನಿಲುವುಗಳು
ಕಾಶ್ಮೀರ ವಿಲೀನದ ಬಗ್ಗೆ ಪಟೇಲ್, ನೆಹರೂ, ಆರೆಸ್ಸೆಸ್ ಹಿತೈಷಿ ಹಾಗೂ ಸಂವಿಧಾನ ಸಭೆಯ ಸದಸ್ಯರಾಗಿದ್ದ ಹಿಂದೂ ಮಹಾಸಭಾದ ಶ್ಯಾಮ ಪ್ರಸಾದ್ ಮುಖರ್ಜಿ ಅವರ ನಿಲುವೇನಿತ್ತು ಎಂಬುದನ್ನು ಐತಿಹಾಸಿಕ ದಾಖಲೆಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಹಾಗೆಯೇ ಈ ವಿಷಯದಲ್ಲಿ ಸಂವಿಧಾನ ಕರ್ತೃ ಅಂಬೇಡ್ಕರ್ ಅವರ ನಿಲುವುಗಳನ್ನು ತಿರುಚಿ ಬಳಸಿಕೊಳ್ಳುತ್ತಿರುವುದರಿಂದ ಕಾಶ್ಮೀರದ ಬಗ್ಗೆ ಅಂಬೇಡ್ಕರ್ ಅವರ ನಿಲುವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ.
ಭಾಗ - 1
‘‘ಬ್ರಿಟಿಷರು ಭಾರತ ಬಿಟ್ಟು ಹೋದ ಮೇಲೆ ಸರ್ದಾರ್ ವಲ್ಲಭಭಾಯಿ ಪಟೇಲರು ಇಡೀ ಜಮ್ಮು ಮತ್ತು ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸಿಕೊಳ್ಳಲು ಬಯಸಿದ್ದರು. ಆದರೆ ಅದಕ್ಕೆ ನೆಹರೂ ಅವಕಾಶ ಕೊಡಲಿಲ್ಲ’’
ಎಂದು ಪ್ರಧಾನಿ ಮೋದಿಯವರು ಪಟೇಲರ 150ನೇ ಜನ್ಮದಿನದಂದು ಅಹ್ಮದಾಬಾದ್‌ನಲ್ಲಿ ಮಾಡಿದ ಭಾಷಣದಲ್ಲಿ ಬುರುಡೆ ಬಿಟ್ಟಿದ್ದಾರೆ. ಈ ಹೇಳಿಕೆಗೆ ಬಿಹಾರದ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸನ್ನು ಖಳನಾಯಕನ್ನಾಗಿ ಚಿತ್ರಿಸುವ ತತ್‌ಕ್ಷಣದ ಉದ್ದೇಶವಿದ್ದರೂ ಇದು ವಾಸ್ತವದ ಇತಿಹಾಸವನ್ನು ಅಳಿಸಿ ದ್ವೇಷದ ಹೊಸ ಇತಿಹಾಸವನ್ನು ಬರೆಯುವ ಸಂಘಿ ಫ್ಯಾಶಿಸ್ಟ್ ಯೋಜನೆಗಳ ಭಾಗವಾಗಿದೆ.
ಹೀಗಾಗಿ ಕಾಶ್ಮೀರ ವಿಲೀನದ ಬಗ್ಗೆ ಪಟೇಲ್, ನೆಹರೂ, ಆರೆಸ್ಸೆಸ್ ಹಿತೈಷಿ ಹಾಗೂ ಸಂವಿಧಾನ ಸಭೆಯ ಸದಸ್ಯರಾಗಿದ್ದ ಹಿಂದೂ ಮಹಾಸಭಾದ ಶ್ಯಾಮ ಪ್ರಸಾದ್ ಮುಖರ್ಜಿ ಅವರ ನಿಲುವೇನಿತ್ತು ಎಂಬುದನ್ನು ಐತಿಹಾಸಿಕ ದಾಖಲೆಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಹಾಗೆಯೇ ಈ ವಿಷಯದಲ್ಲಿ ಸಂವಿಧಾನ ಕರ್ತೃ ಅಂಬೇಡ್ಕರ್ ಅವರ ನಿಲುವುಗಳನ್ನು ತಿರುಚಿ ಬಳಸಿಕೊಳ್ಳುತ್ತಿರುವುದರಿಂದ ಕಾಶ್ಮೀರದ ಬಗ್ಗೆ ಅಂಬೇಡ್ಕರ್ ಅವರ ನಿಲುವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ.
ಭಾರತ ಒಕ್ಕೂಟ - ಬಲವಂತದ ಒಕ್ಕೂಟವೇ?
ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಅವರ ನೇರಾಳ್ವಿಕೆಯಲ್ಲಿದ್ದ ಪ್ರದೇಶಗಳು ಭಾರತ ಮತ್ತು ಪಾಕಿಸ್ತಾನ ಎಂದು ವಿಭಜನೆಗೊಂಡವು ಮತ್ತು ಉಳಿದ 500ಕ್ಕೂ ಹೆಚ್ಚು ಸಂಸ್ಥಾನಗಳಿಗೆ ಭಾರತ ಅಥವಾ ಪಾಕಿಸ್ತಾನ ಸೇರುವ ಅಥವಾ ತಟಸ್ಥವಾಗುಳಿಯುವ ಅವಕಾಶವನ್ನು ನೀಡಲಾಗಿತ್ತು.
ಆದರೆ ಭಾರತವು ಒಂದು ಭಾಷೆ ಅಥವಾ ಒಂದೇ ಜನಾಂಗವಾಗಿ ವಿಕಸಿತಗೊಂಡ ರಾಷ್ಟ್ರವಲ್ಲ. ಭಾರತವು ಒಂದು ಉಪಖಂಡವಾಗಿದ್ದು, ಭಾರತವೆಂಬ ಕಲ್ಪನೆ ಮೂಡುವ ಮುನ್ನವೇ ಇಲ್ಲಿ ವಿವಿಧ ಭಾಷೆ, ಜನಾಂಗಗಳ ಹಿನ್ನೆಲೆಯಲ್ಲಿ ಕನ್ನಡ, ತಮಿಳು, ತೆಲುಗು, ನಾಗಾ, ಅಸ್ಸಾಮಿ, ಕಾಶ್ಮೀರಿ ಇತ್ಯಾದಿ ರಾಷ್ಟ್ರೀಯತಾ ಭಾವಗಳು ಬೆಳೆದಿದ್ದವು. ಹೀಗಾಗಿ ಬ್ರಿಟಿಷರು ಭಾರತ ಬಿಟ್ಟುಹೋದ ಈ ಎಲ್ಲಾ ರಾಷ್ಟ್ರೀಯತೆಗಳು ಸಮ್ಮತಿಯಿಂದ ಒಂದಾಗಿ ನವ ಆಧುನಿಕ ಭಾರತ ಒಕ್ಕೂಟವಾಗಿ ರೂಪುಗೊಳ್ಳಬೇಕಾದ ಐತಿಹಾಸಿಕ ಒತ್ತಡವು ನಂತರ ಎದುರಾಯಿತು.
ಭಾರತ ಒಕ್ಕೂಟವನ್ನು ರೂಪಿಸುವಲ್ಲಿ ನಾಲ್ಕು ವಿಭಿನ್ನ ಸಂದರ್ಭಗಳನ್ನು ಹೊಸ ಭಾರತೀಯ ಸರಕಾರ ಎದುರಿಸಬೇಕಾಯಿತು:
- ಮೈಸೂರನ್ನು ಒಳಗೊಂಡಂತೆ ಹಲವಾರು ರಾಜಸಂಸ್ಥಾನಗಳು ಅಲ್ಲಿನ ಜನರ ಆಶೋತ್ತರ ಮತ್ತು ಹೋರಾಟಗಳಿಗೆ ಮಣಿದು ಭಾರತದೊಂದಿಗೆ ವಿಲೀನಗೊಂಡವು.
-ಆದರೆ ಸಾಂಸ್ಕೃತಿಕವಾಗಿ ಮತ್ತು ಚಾರಿತ್ರಿಕವಾಗಿ ಭಾರತವೆಂಬ ರಾಜಕೀಯದೊಂದಿಗೆ ಅಥವಾ ಸಾಂಸ್ಕೃತಿಕ ಇತಿಹಾಸದೊಂದಿಗೆ ಎಂದಿಗೂ ಭಾಗವಾಗಿರದಿದ್ದ ಮಣಿಪುರ, ಮೇಘಾಲಯ, ತ್ರಿಪುರಾ ಇನ್ನಿತರ ರಾಜ್ಯಗಳಲ್ಲಿ ಅಲ್ಲಿನ ಜನರು ರಾಜಸತ್ತೆಯ ವಿರುದ್ಧ ಕ್ರಾಂತಿಕಾರಿ ಪ್ರಜಾತಂತ್ರಕ್ಕಾಗಿ ಹೋರಾಟ ಮಾಡುತ್ತಿದ್ದರು. ಸರ್ದಾರ್ ಪಟೇಲರ ನೇತೃತದಲ್ಲಿ ಹೊಸ ಭಾರತ ಸರಕಾರ ಈ ರಾಜಸತ್ತೆಗಳ ಆಸ್ತಿ ಮತ್ತು ಸೌಲಭ್ಯಗಳನ್ನು ರಕ್ಷಿಸುವ ಭರವಸೆ ನೀಡಿದ್ದರಿಂದ ಈ ಕೆಲವು ಸಂಸ್ಥಾನಗಳ ರಾಜಸತ್ತೆಗಳು ತಮ್ಮ ಜನರ ಹೋರಾಟವನ್ನು ದಮನಿಸುವ ಅಧಿಕಾರವನ್ನು ಪಟೇಲರ ನೇತೃತ್ವದ ಸರಕಾರಕ್ಕೆ ಕೊಟ್ಟು, ತಮ್ಮ ಆಸ್ತಿ-ಸೌಲಭ್ಯಗಳ ಉಳಿವಿಗಾಗಿ ಭಾರತ ಒಕ್ಕೂಟ ಸೇರಿಕೊಂಡರು.
-ಅಂತಿಮವಾಗಿ ಕಾಶ್ಮೀರ, ಹೈದರಾಬಾದ್ ಮತ್ತು ಜುನಾಘಡ ಸಂಸ್ಥಾನಗಳ ದೊರೆಗಳು ಮಾತ್ರ ಭಾರತದೊಂದಿಗೆ ವಿಲೀನವಾಗದೆ ಉಳಿದಿದ್ದರು. ಇದರಲ್ಲಿ ಜುನಾಘಡ ಮತ್ತು ಹೈದರಾಬಾದ್‌ನ ರಾಜಸತ್ತೆಗಳು ಬಯಸಿದರೂ ಭೌಗೋಳಿಕವಾಗಿಯೂ ಪಾಕಿಸ್ತಾನದ ಜೊತೆ ಸೇರುವ ಸಾಧ್ಯತೆ ಇರಲಿಲ್ಲ. ಜುನಾಘಡ ಒತ್ತಡಕ್ಕೆ ಮಣಿದು ಭಾರತದೊಂದಿಗೆ ವಿಲೀನವಾಯಿತು. ಹೈದರಾಬಾದ್‌ನಲ್ಲಿ ಸೇನಾ ಕಾರ್ಯಾಚರಣೆ ನಡೆಸಿ ರಜಾಕಾರರ ಉಪಟಳ ನಿವಾರಿಸಿ ಭಾರತದೊಂದಿಗೆ ವಿಲೀನಗೊಳಿಸಲಾಯಿತು.
ಆದರೆ ಹೈದರಬಾದ್ ವಿಮೋಚನೆಯ ಕಥನದಲ್ಲಿ ಭಾರತದ ಮುಖ್ಯ ಧಾರೆ ಇತಿಹಾಸ ಮರೆಸಬಯಸುವ ಇತಿಹಾಸ ಒಂದಿದೆ. ಹೈದರಬಾದ್‌ನ ನಿಜಾಮನ ಆಡಳಿತದ ವಿರುದ್ಧ ಹಾಗೂ ರಜಾಕಾರರ ವಿರುದ್ಧ ತೆಲಂಗಾಣದ ರೈತ ಕೂಲಿಗಳು ಕೂಡ ಕಮ್ಯುನಿಸ್ಟರ ನೇತೃತ್ವದಲ್ಲಿ ಸಶಸ್ತ್ರ ಸಂಗ್ರಾಮ ನಡೆಸುತ್ತಿದ್ದರು. ಹೈದರಾಬಾದ್‌ನ ನಿಜಾಮನ ಆಡಳಿತವು ಎಷ್ಟೇ ಕೋಮುವಾದಿಯಾಗಿದ್ದರೂ ಅದು ಹಿಂದೂ ರೈತಾಪಿಯ ವಿರುದ್ಧ ಹಿಂದೂ ಭೂ ಮಾಲಕರ ಹಿತಾಸಕ್ತಿಯನ್ನು ರಕ್ಷಿಸುತ್ತಿತ್ತು.
ಸ್ವಾತಂತ್ರ್ಯಾನಂತರದಲ್ಲಿ ಪಟೇಲ್-ನೆಹರೂ ಸೇನೆ ನಿಜಾಮನ ಸೈನ್ಯ ಮತ್ತು ರಜಾಕಾರರನ್ನು ಮಟ್ಟಹಾಕಿದರೂ ರೈತ ಕೂಲಿಗಳನ್ನು ಸುಲಿಯುತ್ತಿದ್ದ ಹಿಂದೂ ಭೂ ಮಾಲಕರನ್ನೇನೂ ಹದ್ದುಬಸ್ತಿನಲ್ಲಿಡಲಿಲ್ಲ. ಬದಲಿಗೆ ನೆಹರೂ-ಪಟೇಲ್ ಸೇನೆ ತೆಲಂಗಾಣದಲ್ಲಿ ಸಮರ ನಿರತರಾಗಿದ್ದ ರೈತ ಕೂಲಿಗಳ ಮಾರಣಹೋಮ ಮುಂದುವರಿಸಿ ಭೂ ಮಾಲಕರ ಭಾರತವನ್ನು ರಕ್ಷಿಸಿತು.
-ಇನ್ನು ಅಂತಿಮವಾಗಿ ಉಳಿದದ್ದು ಜಮ್ಮು-ಕಾಶ್ಮೀರದ ಪ್ರಶ್ನೆ. ಅದು ಜುನಾಘಡ ಅಥವಾ ಹೈದರಾಬಾದ್‌ನಂತಲ್ಲದೆ ಭಾರತದಿಂದ ವಿಭಜಿತವಾಗಿ ಹೊಸದಾಗಿ ರಚಿತವಾಗಿದ್ದ ಪಾಕಿಸ್ತಾನದ ಜೊತೆಗೆ ಗಡಿಯನ್ನು ಹಂಚಿಕೊಂಡಿದ್ದಂತಹ ಭೂ ಭಾಗವೂ ಆಗಿತ್ತು. ಹೀಗಾಗಿ ಆ ಸಂಸ್ಥಾನ ಮತ್ತು ಅಲ್ಲಿನ ಜನ ಸ್ವ ಇಚ್ಛೆಯಿಂದ ಭಾರತದೊಂದಿಗೆ ವಿಲೀನಗೊಳ್ಳುವಂತಹ ಸಂದರ್ಭವನ್ನು ನಿರ್ಮಿಸುವುದು ಹೊಸದಾಗಿ ರಾಷ್ಟ್ರ ನಿರ್ಮಾಣದಲ್ಲಿ ತೊಡಗಬೇಕಿದ ಭಾರತಕ್ಕೆ ಅತ್ಯಗತ್ಯವಾಗಿತ್ತು. ಈ ಸೂಕ್ಷ್ಮ ಮತೋನ್ಮಾದಿ ಮೋದಿ ಪಟಾಲಂಗೆ ಅರ್ಥವಾಗದಿದ್ದರೂ, ಅಂದಿನ ಎಲ್ಲಾ ಬಗೆಯ ರಾಜಕಾರಣಿಗಳಿಗೂ ಸ್ವಲ್ಪ ಮಟ್ಟಿಗೆ ಅರ್ಥವಾಗುತ್ತಿತ್ತು.
ಕಾಶ್ಮೀರ: ಭಾರತ ಬೇಡವೆಂದ ಹಿಂದೂ ದೊರೆ,
ಪಾಕಿಸ್ತಾನ ಬೇಡವೆಂದ ಮುಸ್ಲಿಮ್ ಜನತೆ!
ಕಾಶ್ಮೀರದ ದೊರೆಗಳು ಹಿಂದೂಗಳು, ಬಹುಸಂಖ್ಯಾತ ಜನರು ಮುಸ್ಲಿಮರು. ಕಾಶ್ಮೀರ ಸಂಸ್ಥಾನದ ಹಿಂದೂ ದೊರೆ ರಾಜ ಹರಿಸಿಂಗ್ ಭಾರತದೊಡನೆ ವಿಲೀನವಾಗದೆ ಪ್ರತ್ಯೇಕವಾಗುಳಿಯುವ ತೀರ್ಮಾನ ಮಾಡಿದ್ದರು.
ಅದಕ್ಕೆ ತದ್ವಿರುದ್ಧವಾಗಿ ಅಲ್ಲಿನ ಬಹುಸಂಖ್ಯಾತ ಮುಸ್ಲಿಮ್ ರೈತಾಪಿ ಜನರು ಶೇಕ್ ಅಬ್ದುಲ್ಲಾ ಅವರ ನೇತೃತ್ವದಲ್ಲಿ ಭಾರತವನ್ನು ಸೇರಬೇಕೆಂದು ರಾಜನ ಮೇಲೆ ಒತ್ತಾಯ ಹಾಕುತ್ತಿದ್ದರು. ಹಾಗೆ ನೋಡಿದರೆ ಅವರ ನೇತೃತ್ವದ ಕಾಶ್ಮೀರ ಜನರ ಸಂಘಟನೆ ಅತ್ಯಂತ ಪ್ರಗತಿಪರ ಆಶಯಗಳನ್ನುಳ್ಳ ಸನ್ನದಿನ ಆಧಾರದ ಮೇಲೆ ರಾಜ ಹರಿಸಿಂಗ್ ವಿರುದ್ಧ ಹೋರಾಡುತ್ತಿತ್ತು. ಆ ಕಾರಣಕ್ಕಾಗಿಯೇ ಮುಸ್ಲಿಮ್ ಕಾನ್ಫರೆನ್ಸ್ ಎಂದಿದ್ದ ತಮ್ಮ ಸಂಘಟನೆಯ ಹೆಸರನ್ನು ‘ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್’ ಎಂದು ಬದಲಿಸಿಕೊಂಡಿದ್ದರು. ಆ ಹೋರಾಟಗಳು ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ಇಂದು ಇಡೀ ಭಾರತದಲ್ಲಿ ಅತ್ಯಂತ ಪರಿಣಾಮಕಾರಿ ಭೂ ಸುಧಾರಣೆ ಮತ್ತು ಹಂಚಿಕೆ ನಡೆದಿರುವ ರಾಜ್ಯ ಒಂದಿದ್ದರೆ ಅದು ಕಾಶ್ಮೀರ. ಪ.ಬಂಗಾಳ ಮತ್ತು ಕೇರಳಕ್ಕೆ ನಂತರದ ಸ್ಥಾನ!
ಅದೇ ಸಮಯದಲ್ಲಿ ಪಾಕಿಸ್ತಾನದ ಸರಕಾರದ ಬೆಂಬಲದೊಂದಿಗೆ ಗುಡ್ಡಗಾಡು ದಾಳಿಕೋರರು ಕಾಶ್ಮೀರದ ಮೇಲೆ ದಾಳಿ ಮಾಡಿದಾಗ ರಾಜ ಅನಿವಾರ್ಯವಾಗಿ ಭಾರತ ಸೈನ್ಯದ ಸಹಾಯ ಬೇಡಬೇಕಾಯಿತು. ಆ ಕಾರಣದಿಂದಲೇ 1947ರ ಅಕ್ಟೋಬರ್ 27ರಂದು ಭಾರತ ಸರಕಾರ ಮತ್ತು ರಾಜಾ ಹರಿಸಿಂಗ್ ನಡುವೆ ಸೇರ್ಪಡೆ ಒಪ್ಪಂದವಾಯಿತು.
ಅದರ ಪ್ರಕಾರ ಕಾಶ್ಮೀರವು ಭಾರತಕ್ಕೆ ಸೇರಿಕೊಳ್ಳುತ್ತದೆ. ಆದರೆ ಕಾಶ್ಮೀರದ ಮೇಲೆ ಭಾರತ ಸರಕಾರದ ಅಧಿಕಾರ ಕೇವಲ ರಕ್ಷಣೆ, ವಿದೇಶಾಂಗ ಮತ್ತು ಸಂಪರ್ಕಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಇನ್ನುಳಿದ ಎಲ್ಲಾ ಅಧಿಕಾರಗಳು ಕಾಶ್ಮೀರದ ಜನ ರಚಿಸಿಕೊಳ್ಳುವ ಶಾಸನ ಸಭೆಗೆ ಸೇರಿರುತ್ತದೆ. ಕಾಶ್ಮೀರದ ಸಂವಿಧಾನ ಸಭೆ/ಶಾಸನ ಸಭೆಯ ಒಪ್ಪಿಗೆ ಇಲ್ಲದೆ ಭಾರತವು ಇನ್ಯಾವುದೇ ಅಧಿಕಾರವನ್ನು ಕಾಶ್ಮೀರದ ಮೇಲೆ ಚಲಾಯಿಸುವಂತಿಲ್ಲ. ಹಾಗೂ ಕಾಶ್ಮೀರದಲ್ಲಿ ಶಾಂತಿ ನೆಲೆಸಿದ ಮೇಲೆ ಕಾಶ್ಮೀರದ ಜನಾಭಿಪ್ರಾಯದ ಮೇರೆಗೆ ಈ ಒಪ್ಪಂದವನ್ನು ಶಾಶ್ವತಗೊಳಿಸಲಾಗುವುದು ಎಂಬುದು ಭಾರತ ಕೊಟ್ಟ ಆಶ್ವಾಸನೆಯಾಗಿತ್ತು ಹಾಗೂ ಆ ಸೇರ್ಪಡೆ ಒಪ್ಪಂದದ ತಾತ್ಪರ್ಯವೂ ಆಗಿತ್ತು.
ವಿಲೀನ ಒಪ್ಪಂದವನ್ನು ಪಟೇಲರು ಅನುಮೋದಿಸಿರಲಿಲ್ಲವೇ?
ಆಗ ಭಾರತವು ಸಂವಿಧಾನ ರೂಪಿಸಿಕೊಳ್ಳುವ ಪ್ರಕ್ರಿಯೆಯಲ್ಲಿತ್ತು. ಸಂವಿಧಾನ ಸಭೆಯಲ್ಲಿ ನೆಹರೂ, ಪಟೇಲರ ಜೊತೆಗೆ ಇಂದಿನ ಬಿಜೆಪಿಯ ಪಿತಾಮಹ ಶ್ಯಾಮ ಪ್ರಸಾದ್ ಮುಖರ್ಜಿ ಕೂಡಾ ಸದಸ್ಯರಾಗಿದ್ದರು.
ಕಾಶ್ಮೀರದ ಜೊತೆಗೆ ಮೇಲಿನ ಒಪ್ಪಂದವನ್ನು ಮಾಡಿಕೊಂಡ ನಂತರ ಅದಕ್ಕೆ ಪೂರಕವಾದ ಸಾಂವಿಧಾನಿಕ ಸೂತ್ರಗಳನ್ನು ರೂಪಿಸಲು ಕಾಶ್ಮೀರದ ಕಡೆಯಿಂದ ಶೇಕ್ ಅಬ್ದುಲ್ಲಾ ನೇತೃತ್ವದ ಒಂದು ಸಮಿತಿ ರೂಪುಗೊಂಡಿತ್ತು.
ಭಾರತದ ಕಡೆಯಿಂದ ನೆಹರೂ, ಪಟೇಲ್, ಗೋಪಾಲಸ್ವಾಮಿ ಅಯ್ಯಂಗಾರ್ ನೇತೃತ್ವದ ಸಮಿತಿ ರಚಿಸಲಾಗಿತ್ತು.
ಈ ಪ್ರಕ್ರಿಯೆಯಲ್ಲಿ ಸರ್ದಾರ್ ಪಟೇಲರು ಜುನಾಘಡ ಮತ್ತು ಹೈದರಾಬಾದ್ ವಿಲೀನ ಪ್ರಕ್ರಿಯೆಯಲ್ಲಿ ಹೆಚ್ಚು ಗಮನ ಕೊಟ್ಟಿದ್ದರು. ನೆಹರೂ ಮತ್ತು ಗೋಪಾಲಸ್ವಾಮಿ ಕಾಶ್ಮೀರದ ವಿಷಯದ ಬಗ್ಗೆ. ಆದರೆ ಎರಡೂ ವಿಷಯಗಳ ಬಗ್ಗೆ ದೈನಂದಿನ ಮಟ್ಟದಲ್ಲಿ ಪರಸ್ಪರರ ನಡುವೆ ಬೆಳವಣಿಗೆಗಳ ಬಗ್ಗೆ, ಭಿನ್ನಾಭಿಪ್ರಾಯಗಳ ಬಗ್ಗೆ ಅಭಿಪ್ರಾಯಗಳ ವಿನಿಮಯ ನಡೆಯುತ್ತಿತ್ತು.
ಸರ್ದಾರ್ ಪಟೇಲರು ಕಾಂಗ್ರೆಸ್‌ನೊಳಗಿದ್ದ ಬಲಪಂಥೀಯ ಪರಂಪರೆಯವರು ಎನ್ನುವ ವಿಷಯದಲ್ಲಿ ಯಾರಿಗೂ ಭಿನ್ನಾಭಿಪ್ರಾಯ ಇರುವ ಅಗತ್ಯವಿಲ್ಲ. ಬಾಲಗಂಗಾಧರ ತಿಲಕರು, ಸರ್ದಾರ್ ಪಟೇಲರು ಮತ್ತು ಆ ನಂತರದಲ್ಲಿ ಮೊರಾರ್ಜಿ ದೇಸಾಯಿ, ಗುಲ್ಜಾರಿ ಲಾಲ್ ನಂದಾ ರಂತಹ ಕಾಂಗ್ರೆಸ್ ನಾಯಕರು ಕಾಂಗ್ರೆಸ್‌ನೊಳಗೆ ಇದ್ದ ಸ್ಪಷ್ಟ ಬಲಪಂಥೀಯ ಮೌಲ್ಯಗಳ ನಾಯಕರು. ಅಂತಹವರ ಪರಂಪರೆ ಈಗಲೂ ಕಾಂಗ್ರೆಸ್‌ನೊಳಗೆ ಮತ್ತು ಇತರ ಪಕ್ಷಗಳ ಒಳಗೆ ದೊಡ್ಡದಾಗಿಯೇ ಇದೆ.
ಹೀಗಾಗಿ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದ ಬಗ್ಗೆ ಅಂತಹ ಒಲವು ನಿಲುವುಗಳು ಇತರ ಕಾಂಗ್ರೆಸ್ ನಾಯಕರಿಗಿಂತ ಹೆಚ್ಚು ಸುಮುಖವಾಗಿತ್ತು. ಆದ್ದರಿಂದಲೇ ಗಾಂಧಿ ಹತ್ಯೆಯ ನಂತರ ಗೃಹಮಂತ್ರಿಯಾಗಿ ಪಟೇಲರೇ ಆರೆಸ್ಸೆಸನ್ನು ನಿಷೇಧಿಸಿದರೂ, ಸಾಧ್ಯವಾದಷ್ಟು ಬೇಗ ನಿಷೇಧ ಹಿಂದೆಗೆದುಕೊಳ್ಳಲು ಕಾರಣರಾದರು ಹಾಗೂ ಆರೆಸ್ಸೆಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಸದಸ್ಯತ್ವ ಕೊಡಿಸಲು ಪರಿಶ್ರಮ ಪಟ್ಟರು.
ಹೀಗಾಗಿ ಸರ್ದಾರ್ ಅವರ ಭಾರತದ ಕಲ್ಪನೆ ನೆಹರೂ ಹಾಗೂ ಇನ್ನಿತರರಿಗಿಂತ ಭಿನ್ನವಾಗಿದ್ದರಲ್ಲಿ ಆಶ್ಚರ್ಯವಿರಲಿಲ್ಲ.
ಕಾಶ್ಮೀರದ ವಿಷಯದಲ್ಲಿ ಕೂಡ ಪಟೇಲರು ತಮ್ಮ ಹಲವಾರು ಭಿನ್ನಾಭಿಪ್ರಾಯಗಳನ್ನು ಸಮಿತಿಯೊಂದಿಗೆ ಹಂಚಿಕೊಂಡಿದ್ದಾರೆ. ಅದರೆ ಅಂದಿನ ಐತಿಹಾಸಿಕ ಘಟ್ಟದಲ್ಲಿ ಕಾಶ್ಮೀರದ ವಿಷಯವು ಇತರ ಸಂಸ್ಥಾನಗಳ ವಿಷಯಕ್ಕಿಂತ ಸೂಕ್ಷ್ಮವಾದವು ಎಂಬುದರ ಬಗ್ಗೆ ಪಟೇಲರಿಗೂ ಸ್ಪಷ್ಟ ಅರಿವಿತ್ತು ಹಾಗೂ ಇತರ ಸಂಸ್ಥಾನಗಳಿಗೆ ಕೊಡದಿರುವ ವಿಶೇಷ ರಿಯಾಯಿತಿಗಳ ಪ್ರಮಾಣದ ಬಗ್ಗೆ ಪಟೇಲರು ಸ್ವಲ್ಪ ಭಿನ್ನಾಭಿಪ್ರಾಯ ವ್ಯಕ್ತ ಪಡಿಸಿರುವುದು ನಿಜವಾದರೂ, ಈ ಘಟ್ಟದಲ್ಲಿ ತಾತ್ಕಾಲಿಕವಾಗಿಯಾದರೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಡುವ ಅಗತ್ಯವಿದೆ ಎಂಬುದರ ಬಗ್ಗೆ ಪಟೇಲರಿಗೂ ಕೂಡ ತಾತ್ವಿಕ ಭಿನ್ನಾಭಿಪ್ರಾಯವಿರಲಿಲ್ಲ.
ಹೀಗಾಗಿ ಪಟೇಲರಿಗೆ ಕಾಶ್ಮೀರವನ್ನು ಇಡಿಯಾಗಿ ವಿಲೀನಗೊಳಿಸಿಕೊಳ್ಳುವ ಉದ್ದೇಶವಿತ್ತು. ನೆಹರೂ ಅದಕ್ಕೆ ಅಡ್ಡಿ ಮಾಡಿದರು ಎಂಬ ಮೋದಿ ಹೇಳಿಕೆ ದುರುದ್ದೇಶಪೂರಿತ ಬುರುಡೆಯೇ ಹೊರತು ಬೇರೇನಲ್ಲ.
ಈ ಎಲ್ಲಾ ಅಭಿಪ್ರಾಯ ಮತ್ತು ಭಿನಾಭಿಪ್ರಾಯಗಳು, ಸಮಾಲೋಚನೆಗಳು ಗುಟ್ಟಾಗಿ ನಡೆದದ್ದೇನಲ್ಲ. ಎಲ್ಲವೂ ದಾಖಲಾಗಿವೆ. ಅವೆಲ್ಲವನ್ನೂ ಇತಿಹಾಸಕಾರ ಎ.ಜಿ. ನೂರಾನಿಯವರು ತಮ್ಮ ‘Article 370- A Constitutional History of Jammu And Kashmir’ ಎಂಬ 400 ಪುಟಗಳ ಬೃಹತ್ ಗ್ರಂಥದಲ್ಲಿ ದಾಖಲಿಸಿದ್ದಾರೆ. ಆಸಕ್ತರು ಗಮನಿಸಬಹುದು ಹಾಗೂ ಅದರಲ್ಲಿ ಉಲ್ಲೇಖಿತವಾಗಿರುವ ಮೂಲಪಠ್ಯಗಳನ್ನು ಪರಾಮರ್ಶಿಸಬಹುದು.
ಆರ್ಟಿಕಲ್ 370- ಸಂವಿಧಾನ ಸಭೆಯ ಸರ್ವಸಮ್ಮತಿ
ಕಾಶ್ಮೀರದ ಪ್ರತಿನಿಧಿಗಳೊಂದಿಗೆ ಪಟೇಲ್- ನೆಹರೂ ನೇತೃತ್ವದ ಭಾರತದ ಸಂವಿಧಾನ ಸಭೆ ಒಂದು ಸರ್ವ ಸಮ್ಮತ ಸಾಂವಿಧಾನಿಕ ಸೂತ್ರವನ್ನು ರೂಪಿಸುತ್ತದೆ ಹಾಗೂ ಅದನ್ನು ಆರ್ಟಿಕಲ್ 370ರ (ಆಗ ಆರ್ಟಿಕಲ್ 306-ಎ) ರೂಪದಲ್ಲಿ ಭಾರತ ಸಂವಿಧಾನದಲ್ಲಿ ಸೇರಿಸುವ ಪ್ರಕ್ರಿಯೆ ಸರ್ದಾರ್ ಪಟೇಲರ ಸಮ್ಮತಿ ಮತ್ತು ಸಕ್ರಿಯ ಭಾಗವಹಿಸುವಿಕೆಯೊಂದಿಗೇ ಪ್ರಾರಂಭವಾಗುತ್ತದೆ. ಇದರ ಬಹುಪಾಲು ಚರ್ಚೆಗಳು ವಲ್ಲಭಭಾಯಿ ಪಟೇಲರ ಗೃಹ ಕಚೇರಿಯಲ್ಲೇ ನಡೆಯುತ್ತಿದ್ದವು.
ಆರ್ಟಿಕಲ್‌ನ ರಚನೆಯನ್ನು ಸಾಂವಿಧಾನಿಕವಾಗಿ ಮಾನ್ಯವಾಗಿಸುವ ಪ್ರಕ್ರಿಯೆಯ ಭಾಗವಾಗಿ 1949ರ ಮೇ ತಿಂಗಳಲ್ಲಿ ಭಾರತದ ಸಂವಿಧಾನ ಸಭೆಗೆ ಕಾಶ್ಮೀರದ ಪ್ರತಿನಿಧಿಗಳಾಗಿ ಶೇಕ್ ಅಬ್ದುಲ್ಲಾ, ಮಿರ್ಝಾ ಮುಹಮ್ಮದ್ ಅಫ್ಝಲ್ ಬೇಗ್, ಮೌಲಾನ ಮುಹಮ್ಮದ್ ಸೈಯದ್ ಮಸೂದಿ ಮತ್ತು ಶ್ರೀ ಮೋತಿ ರಾಂ ಬಾಗ್ಡಾ ಅವರನ್ನು ಸೇರಿಸಿಕೊಳ್ಳಲಾಯಿತು.
ಒಪ್ಪಿತ ಕರಡನ್ನು ಶ್ರಿ ಗೋಪಾಲ್‌ಸ್ವಾಮಿ ಅಯ್ಯಂಗಾರ್ ಅವರು 1949 ರ ಅಕ್ಟೋಬರ್ 17ರಂದು ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಿದರು. ಅಂದು ಸಭೆಯಲ್ಲಿದ್ದ ಶ್ಯಾಮ ಪ್ರಸಾದ್ ಮುಖರ್ಜಿ, ವಲ್ಲಭಬಾಯಿ ಪಟೇಲರಾದಿಯಾಗಿ ಯಾರೂ ಅರ್ಧ ಸಾಲಿನ ತಿದ್ದುಪಡಿಯನ್ನೂ ಹೇಳಲಿಲ್ಲ. ಅಂದು ಭಾರತದ ಸಂವಿಧಾನದ ಪೀಠಿಕೆಯ ಬಗ್ಗೆ ಚರ್ಚೆ ಮಾಡಬೇಕಿದ್ದರಿಂದ ಈ ಆರ್ಟಿಕಲ್ ಸೇರ್ಪಡೆ ಮಾಡಲು ನಮ್ಮ ಸಂವಿಧಾನ ಸಭೆಯು ತೆಗೆದುಕೊಂಡ ಸಮಯ ಅರ್ಧ ದಿನಕ್ಕಿಂತಲೂ ಕಡಿಮೆ!
(ಇವೆಲ್ಲವೂ ಸಂವಿಧಾನ ಸಭೆಯ ನಡಾವಳಿಯಲ್ಲಿ ದಾಖಲುಗೊಂಡಿದ್ದು ಆಸಕ್ತರು ಈ ವೆಬ್ ವಿಳಾಸದಲ್ಲಿ ಇದನ್ನು ಪರಿಶೀಲಿಸಬಹುದು: http://164.100.47.194/.../cadebatefiles/C17101949.html)
ಅಂಬೇಡ್ಕರ್ ಮತ್ತು ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರ
ಇನ್ನು ಅಂಬೇಡ್ಕರ್ ಅವರಿಗೆ ಕಾಶ್ಮೀರದ ಬಗ್ಗೆ ಯಾವ ಅಭಿಪ್ರಾಯವಿತ್ತು ಎಂದು ಅರ್ಥ ಮಾಡಿಕೊಳ್ಳಲು ನೇರವಾಗಿ ಅವರ ಬರಹಗಳಿಗೆ ಮೊರೆ ಹೋಗಬೇಕು.
ಅಂಬೇಡ್ಕರ್ ಅವರು ಬಹುದೊಡ್ಡ ಪ್ರಜಾತಂತ್ರವಾದಿಯಾಗಿದ್ದು ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರದ ಹಕ್ಕಿನ ಪರವಾಗಿದ್ದವರು. ದೇಶದೊಳಗೆ ಊಳಿಗಮಾನ್ಯ ಶಕ್ತಿಗಳಿಗೆ ಹೆಚ್ಚಿಗೆ ಅಧಿಕಾರ ಕೊಡುವ ಒಕ್ಕೂಟ ವ್ಯವಸ್ಥೆಯ ಬಗ್ಗೆ ಹಾಗೂ ಭಾಷಾವಾರು ಪ್ರಾಂತಗಳ ಬಗ್ಗೆ ಅವರಿಗೆ ತಕರಾರಿತ್ತು. ಆದರೆ ದೇಶಗಳ ನಡುವಿನ ರಾಷ್ಟ್ರೀಯತಾ ವಿಮೋಚನಾ ಪ್ರಶ್ನೆಯು ಎದುರಾದಾಗ ಅವರು ಸದಾ ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರದ ಪರವಾಗಿದ್ದರು. ಇದನ್ನು ಅರ್ಥಮಾಡಿಕೊಳ್ಳಬೇಕೆಂದರೆ ಅವರ ‘Pakistan Or The Partition Of India’ ಪುಸ್ತಕವನ್ನು ಕಡ್ಡಾಯವಾಗಿ ಓದಬೇಕು!
ಆ ಪುಸ್ತಕದಲ್ಲಿ ಅವರು ರಾಷ್ಟ್ರ, ರಾಷ್ಟ್ರೀಯತೆ, ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸುತ್ತಾರೆ.
ಅಂಬೇಡ್ಕರ್ ಪ್ರಕಾರ ಒಟ್ಟಾಗಿ ಬದುಕಬೇಕೆಂಬ ರಾಜಕೀಯ ಬಯಕೆ ಇದ್ದಾಗ ಮಾತ್ರ ಒಂದು ರಾಷ್ಟ್ರೀಯತೆ ಜನ್ಮ ತಾಳುತ್ತದೆ ಮತ್ತು ಅಂತಹ ಭಾವನೆ ಮೂಡಲು ಹಲವು ಬಗೆಯ ಏಕರೂಪತೆಗಳು ಅಗತ್ಯವಿದ್ದರೂ ರಾಜಕೀಯ ಬಯಕೆ ಅತ್ಯಗತ್ಯ.
ಎರಡು ಭಿನ್ನ ರಾಷ್ಟ್ರೀಯತೆಗಳು ಒಟ್ಟಾಗಿ ಬದುಕಬೇಕೆಂದರೆ ರಾಜಕೀಯ ಸಮಾನಾಧಿಕಾರ ಹಂಚಿಕೊಳ್ಳುವ ವ್ಯವಸ್ಥೆ ಇರಬೇಕು. ಹಾಗಾಗಲಿಲ್ಲವೆಂದರೆ ಬೇರ್ಪಟ್ಟು ಬೇರೆಬೇರೆ ರಾಷ್ಟ್ರಪ್ರಭುತ್ವಗಳನ್ನು ರಚಿಸಿಕೊಳ್ಳಬೇಕು. ಆಧುನಿಕ ಜಗತ್ತಿನಲ್ಲಿ ಒಂದು ರಾಷ್ಟ್ರೀಯತೆಗೆ ಮತ್ತೊಂದು ರಾಷ್ಟ್ರೀಯತೆ ಅಧೀನವಾಗಿ ಬದುಕುವುದು ಸಾಧ್ಯವೇ ಇಲ್ಲ ಎಂಬುದು ಅವರ ನಿಶ್ಚಿತ ಅಭಿಪ್ರಾಯ.
ಈ ಹಿನ್ನೆಲೆಯಲ್ಲಿ ಅವರು ದೇಶ ವಿಭಜನೆ ಅನಿವಾರ್ಯ ಎಂದು ಹೇಳುತ್ತಾರೆ ಮತ್ತು ಅದೇ ಪುಸ್ತಕದಲ್ಲಿ ‘‘ಹಿಂದೂ ರಾಷ್ಟ್ರ ಜಾರಿಗೆ ಬಂದರೆ ಪ್ರಜಾತಂತ್ರವು ನಾಶಗೊಳ್ಳುತ್ತದೆ’’ ಎಂದು ಬಹಳ ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸುತ್ತಾರೆ.
ಹಾಗೂ ಅದೇ ಸಮಯದಲ್ಲಿ ಮುಸ್ಲಿಮರಲ್ಲಿನ ಕೋಮುವಾದಿಗಳು ತಮಗೆ ಅನುಕೂಲವಿದ್ದಾಗ ಮಾತ್ರ ಪ್ರಜಾತಂತ್ರವನ್ನು ಮತ್ತು ಸ್ವನಿರ್ಣಯಾ ಧಿಕಾರವನ್ನು ಬಳಸಿಕೊಳ್ಳುವ ಅವಕಾಶವಾದವನ್ನು ಬಲವಾದ ಮಾತಿನಿಂದ ಖಂಡಿಸುತ್ತಾರೆ. ಅದರ ಜೊತೆಗೆ ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರವು ಯಾವಾಗಲೂ ಒಂದೇ ರೀತಿಯಲ್ಲಿ ಚಲಾವಣೆಯಾಗಬೇಕಿಲ್ಲವೆಂಬ ಎಚ್ಚರಿಕೆಯನ್ನೂ ನೀಡುತ್ತಾರೆ.