ಕಾಶ್ಮೀರ ವಿಲೀನ: ಮೋದಿಯ ಬುರುಡೆಗಳು ಮತ್ತು ಪಟೇಲ್, ಅಂಬೇಡ್ಕರ್ ನಿಲುವುಗಳು
ಭಾಗ - 2
ಅಂಬೇಡ್ಕರ್ ಅವರು ಅತ್ಯಂತ ಸ್ಪಷ್ಟವಾಗಿ ಭಾರತ ಮತ್ತು ಪಾಕಿಸ್ತಾನದ ಸ್ನೇಹಯುತ ಸಂಬಂಧದ ಪರವಾಗಿದ್ದರು ಮತ್ತು ಕಾಶ್ಮೀರದಲ್ಲಿ ಕಡ್ಡಾಯವಾಗಿ ಜನಮತಗಣನೆ ನಡೆದು ಅಲ್ಲಿನ ಜನರ ಅಭಿಪ್ರಾಯಕ್ಕೆ ತಕ್ಕಂತೆ ನಡೆದುಕೊಳ್ಳಲು ಅವಕಾಶ ಮಾಡಿಕೊಡುವುದರ ಪರವಾಗಿದ್ದರು.
ಅದರಿಂದ ಮಾತ್ರ ಭಾರತಕ್ಕೂ, ಪಾಕಿಸ್ತಾನಕ್ಕೂ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಕಾಶ್ಮೀರದ ಜನತೆಗೂ ಒಳಿತಾಗುತ್ತದೆ ಎಂಬ ಸ್ಪಷ್ಟ ಅಭಿಪ್ರಾಯವನ್ನು ಹೊಂದಿದ್ದರು.
ಕಾಶ್ಮೀರ ಸಮಸ್ಯೆಗೆ ಅಂಬೇಡ್ಕರ್ ಸೂಚಿಸುವ ಪರಿಹಾರ
ಅಂಬೇಡ್ಕರ್ ಅವರು ಹೇಗೆ ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರದ ಹಿನ್ನೆಲೆಯಲ್ಲಿ ದೇಶವಿಭಜನೆಯ ಬಗ್ಗೆ ತೀರ್ಮಾನಕ್ಕೆ ಬರುತ್ತಾರೋ ಅದೇ ಹಿನ್ನೆಲೆಯಲ್ಲಿ ಕಾಶ್ಮೀರದ ಬಗ್ಗೆಯೂ ಖಚಿತವಾದ ನಿಲುವನ್ನೇ ತೆಗೆದುಕೊಳ್ಳುತ್ತಾರೆ. ಸ್ವನಿರ್ಣಯಾಧಿಕಾರ ನೆಲೆಯ ಜೊತೆಜೊತೆಗೆ ಭಾರತ ಮತ್ತು ಪಾಕಿಸ್ತಾನ ಎಂಬ ಈ ಎರಡು ಯುವ ದೇಶಗಳ ನಡುವೆ ಇರಬೇಕಾದ ಶಾಂತಿಯುತ ಸಂಬಂಧ, ಅನಗತ್ಯವಾಗಿ ಹೆಚ್ಚುತ್ತಿರುವ ರಕ್ಷಣಾ ವೆಚ್ಚದಂತಹ ದೃಷ್ಟಿಕೋನಗಳು ಸಹ ಕಾಶ್ಮೀರ ಸಮಸ್ಯೆಗೆ ಅವರು ಸೂಚಿಸುವ ಪರಿಹಾರಗಳ ರಾಜತಾಂತ್ರಿಕ ನೆಲೆಗಳಾಗಿವೆ.
ಇದರ ಬಗ್ಗೆ ಅವರು ಸಂಸತ್ತಿನಲ್ಲಿ ರಕ್ಷಣೆ ಮತ್ತು ವಿದೇಶಾಂಗ ನೀತಿಗಳ ಬಗ್ಗೆ ನಡೆದ ಚರ್ಚೆಯ ಸಂದರ್ಭದಲ್ಲಿ, ತಾವು ಸಂಪುಟಕ್ಕೆ ಕೊಟ್ಟ ರಾಜೀನಾಮೆ ಪತ್ರದಲ್ಲಿ, 1952ರ ಎಸ್.ಸಿ.ಎಫ್.ನ ಚುನಾವಣಾ ಪ್ರಣಾಳಿಕೆಯಲ್ಲಿ ಮತ್ತು ಜಲಂಧರ್‌ನಲ್ಲಿ ಪತ್ರಿಕಾ ಸಂಪಾದಕರಿಗೆ ಕೊಟ್ಟ ಸಂದರ್ಶನದಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸುತ್ತಾರೆ.
-1951ರಲ್ಲಿ ತಮ್ಮ ಸಂಪುಟ ಸಚಿವರ ಸ್ಥಾನಕ್ಕೆ ಅಂಬೇಡ್ಕರ್ ರಾಜೀನಾಮೆ ನೀಡುತ್ತಾರೆ. ತಾವು ರಾಜೀನಾಮೆ ನೀಡಲು ಸರಕಾರವು ಹಿಂದೂ ಕೋಡ್ ಬಿಲ್, ಒಬಿಸಿ ಮತ್ತು ದಲಿತರ ಹಕ್ಕುಗಳ ರಕ್ಷಣೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯಗಳ ಜೊತೆಗೆ ಭಾರತದ ತಪ್ಪು ವಿದೇಶಾಂಗ ನೀತಿಯಿಂದ ಭಾರತದ ರಕ್ಷಣಾ ವೆಚ್ಚ ಹೆಚ್ಚುತ್ತಿರುವುದನ್ನು ಪ್ರಸ್ತಾಪಿಸುತ್ತಾ ಹೇಗೆ ಭಾರತ ಸರಕಾರದ ತಪ್ಪು ಕಾಶ್ಮೀರ ನೀತಿಯೂ ಕಳವಳಕಾರಿಯಾಗಿದೆ ಎಂದು ವಿವರಿಸುತ್ತಾರೆ. ಅದರ ಭಾಗವಾಗಿಯೇ ಕಾಶ್ಮೀರ ವಿವಾದವನ್ನು ಹೇಗೆ ಪರಿಹರಿಸಬೇಕು ಎಂಬ ಬಗ್ಗೆ ತಮ್ಮ ನಿಲುವನ್ನೂ ಪ್ರತಿಪಾದಿಸುತ್ತಾರೆ:
‘‘ಪಾಕಿಸ್ತಾನದ ಜೊತೆಗೆ ನಮ್ಮ ಜಗಳವು ನಮ್ಮ ತಪ್ಪು ವಿದೇಶಾಂಗ ನೀತಿಯ ಭಾಗವಾಗಿದ್ದು ನನಗೆ ಅದರ ಬಗ್ಗೆ ತೀವ್ರ ಅಸಮಾಧಾನವಿದೆ. ಎರಡು ಕಾರಣಗಳಿಂದ ಪಾಕಿಸ್ತಾನದ ಜೊತೆ ನಮ್ಮ ಸಂಬಂಧ ಹದಗೆಟ್ಟಿದೆ- ಒಂದು ಕಾಶ್ಮೀರ ಮತ್ತೊಂದು ಪೂರ್ವ ಬಂಗಾಳದಲ್ಲಿ ನಮ್ಮ ಜನರ ಪರಿಸ್ಥಿತಿ. ಪತ್ರಿಕಾ ವರದಿಗಳನ್ನು ಗಮನಿಸಿದಾಗ ಕಾಶ್ಮೀರಕ್ಕಿಂತ ಪೂರ್ವ ಬಂಗಾಳದಲ್ಲಿ ನಮ್ಮ ಜನರ ಪರಿಸ್ಥಿತಿ ಅಸಹನೀಯವಾಗಿದೆ ಎಂದು ತಿಳಿಯುತ್ತದೆ. ಆದ್ದರಿಂದ ನಾವು ಪೂರ್ವ ಬಂಗಾಳದ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು. ಆದರೂ ನಾವು ನಮ್ಮೆಲ್ಲಾ ಗಮನವನ್ನು ಕಾಶ್ಮೀರದ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ಹಾಗಿದ್ದರೂ ನಾವು ಒಂದು ವಿಷಯವಲ್ಲದ ವಿಷಯದ ಮೇಲೆ ಹೊಡೆದಾಡುತ್ತಿದ್ದೇವೆ ಎಂದು ನನಗೆ ಭಾಸವಾಗುತ್ತದೆ. ಬಹಳಷ್ಟು ಸಮಯ ನಾವು ಯಾರು ಸರಿ ಮತ್ತು ಯಾರು ತಪ್ಪು ಎಂದು ಕಾದಾಡುತ್ತಿದ್ದೇವೆ. ಆದರೆ ನಿಜವಾದ ವಿಷಯ ಯಾರು ಸರಿ ಅಥವಾ ತಪ್ಪು ಎಂಬುದಲ್ಲ, ಬದಲಿಗೆ ಯಾವುದು ಸರಿ ಎಂಬುದೇ ಆಗಿದೆ. ನಮ್ಮ ಮುಂದಿರುವ ಪ್ರಧಾನ ಪ್ರಶ್ನೆ ಅದಾಗಿದ್ದಲ್ಲಿ ಕಾಶ್ಮೀರವನ್ನು ವಿಭಜೀಕರಿಸುವುದೇ ಅದಕ್ಕೆ ಸರಿಯಾದ ಪರಿಹಾರ ಎಂದು ನಾನು ಪ್ರತಿಪಾದಿಸಿಕೊಂಡು ಬಂದಿದ್ದೇನೆ. ನಾವು ಭಾರತ ವಿಭಜನೆಯ ಸಂದರ್ಭದಲ್ಲಿ ಮಾಡಿದಂತೆ ಕಾಶ್ಮೀರದ ಮುಸ್ಲಿಮ್ ಭಾಗಗಳನ್ನು ಪಾಕಿಸ್ತಾನಕ್ಕೆ ಕೊಟ್ಟು ಹಿಂದೂ ಮತ್ತು ಬೌದ್ಧ ಭಾಗಗಳನ್ನು ಭಾರತಕ್ಕೆ ಪಡೆದುಕೊಳ್ಳಬೇಕು. ಕಾಶ್ಮೀರದ ಮುಸ್ಲಿಮ್ ಪ್ರಾಂತದ ಬಗ್ಗೆ ನಮಗೆ ನಿಜಕ್ಕೂ ಕಾಳಜಿಯಿಲ್ಲ. ಅದು ಕಾಶ್ಮೀರದ ಮುಸ್ಲಿಮರು ಮತ್ತು ಪಾಕಿಸ್ತಾನದ ನಡುವಿನ ವಿಷಯ. ಅವರಿಗೆ ತೋರಿದಂತೆ ಅವರು ಅದನ್ನು ಬಗೆಹರಿಸಿಕೊಳ್ಳಬಹುದು ಅಥವಾ ನೀವು ಬಯಸುವುದಾದಲ್ಲಿ, ಕಾಶ್ಮೀರವನ್ನು ಯುದ್ಧ ವಿರಾಮ ವಲಯ, ಕಾಶ್ಮೀರ ಕಣಿವೆ ಹಾಗೂ ಜಮ್ಮು ಮತ್ತು ಲಡಾಖ್ ಪ್ರಾಂತಗಳಾಗಿ ತ್ರಿಭಜೀಕರಿಸಿ ಕಾಶ್ಮೀರ ಕಣಿವೆಯಲ್ಲಿ ಮಾತ್ರ ಜನಮತಗಣನೆ ನಡೆಸಿ. ಅದರ ಬದಲಿಗೆ ಇಡೀ ಪ್ರಾಂತದಲ್ಲಿ ಜನಮತಗಣನೆಯನ್ನು ನಡೆಸಿದರೆ ಕಾಶ್ಮೀರದ ಹಿಂದೂ ಮತ್ತು ಬೌದ್ಧರನ್ನೂ ಸಹ ಅವರ ಬಯಕೆಗೆ ವಿರುದ್ಧವಾಗಿ ಪಾಕಿಸ್ತಾನದೆಡೆಗೆ ದೂಡಿದಂತಾಗುತ್ತದೆ ಮತ್ತು ಆಗ ಪೂರ್ವ ಬಂಗಾಳದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಯನ್ನೇ ಇಲ್ಲಿಯೂ ಎದುರಿಸಬೇಕಾಗಿ ಬರಬಹುದು’’
(DR. BABASAHEB AMBEDKAR : WRITINGS AND SPEECHES VOL. 14-2, p. 1322)
-1951ರ ಅಕ್ಟೋಬರ್‌ನಲ್ಲಿ ಜಲಂಧರ್ ನಲ್ಲಿ ಪತ್ರಿಕಾ ಸಂಪಾದಕರು ಈ ವಿಷಯದ ಬಗ್ಗೆ ಕೇಳಿದ ಪ್ರಶ್ನೆಗೂ ಅಂಬೇಡ್ಕರ್ ಅವರು ನೇರವಾದ ಉತ್ತರವನ್ನೇ ಕೊಡುತ್ತಾರೆ:
ಸಂಪಾದಕರು: ಕಾಶ್ಮೀರ ಸಮಸ್ಯೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಅಂಬೇಡ್ಕರ್: ಪ್ರಾಯಶಃ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಬಹುದಾದ ಜನಮತಗಣನೆ ಭಾರತಕ್ಕೆ ವ್ಯತಿರಿಕ್ತವಾಗಿ ಬರಬಹುದು ಎನಿಸುತ್ತದೆ. ಜಮ್ಮು ಮತ್ತು ಲಡಾಖ್ ಪ್ರಾಂತದ ಹಿಂದೂ ಮತ್ತು ಬೌದ್ಧರು ಪಾಕಿಸ್ತಾನಕ್ಕೆ ಹೋಗದಂತಾಗಬೇಕೆಂದರೆ ಜಮ್ಮು, ಲಡಾಖ್ ಮತ್ತು ಕಾಶ್ಮೀರಗಳಲ್ಲಿ ವಲಯವಾರು ಜನಮತಗಣನೆಯಾಗಬೇಕು
(DR. BABASAHEB AMBEDKAR : WRITINGS AND SPEECHES VOL. 17-2, p.381)
-ನಂತರ 1952ರಲ್ಲಿ ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ (ಎಸ್. ಸಿ.ಎಫ್.)ನ ಚುನಾವಣಾ ಪ್ರಣಾಳಿಕೆಯಲ್ಲಿ ಕಾಶ್ಮೀರ ಸಮಸ್ಯೆಗೆ ಏಕೆ ಮತ್ತು ಹೇಗೆ ಜನಮತಗಣನೆಯೇ ಪರಿಹಾರವೆಂದು ವಿವರಿಸುತ್ತಾರೆ:
‘‘ಕಾಶ್ಮೀರದ ವಿಷಯದಲ್ಲಿ ಕಾಂಗ್ರೆಸ್ ಸರಕಾರವು ಅಳವಡಿಸಿಕೊಂಡಿರುವ ನೀತಿಯು ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್‌ಗೆ ಸಮ್ಮತವಿಲ್ಲ. ಈ ನೀತಿಯು ಹೀಗೆ ಮುಂದುವರಿದಲ್ಲಿ ಅದು ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಶ್ವತ ವೈರತ್ವವನ್ನು ಹುಟ್ಟುಹಾಕುತ್ತದೆ ಮತ್ತು ಎರಡೂ ದೇಶಗಳ ನಡುವೆ ಯುದ್ಧ ನಡೆಯುವ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ. ಎರಡೂ ದೇಶಗಳು ಒಳ್ಳೆಯ ಮತ್ತು ಸ್ನೇಹಪೂರ್ವಕ ನೆರೆಹೊರೆಯವರಾಗಿ ಮುಂದುವರಿಯುವುದು ಎರಡೂ ದೇಶಗಳಿಗೂ ಒಳ್ಳೆಯದು ಮತ್ತು ಅತ್ಯಗತ್ಯವಾದದ್ದು. ಈ ಉದ್ದೇಶವನ್ನು ಸಾಧ್ಯಗೊಳಿಸಲು ಪಾಕಿಸ್ತಾನದ ಬಗ್ಗೆ ನಾವು ಅನುಸರಿಸುವ ನೀತಿಯು ಎರಡು ಮುಖ್ಯ ವಿಷಯಗಳನ್ನು ಪರಿಗಣಿಸಬೇಕು:
1. ಈಗಾಗಲೇ ಆಗಿರುವ ದೇಶ ವಿಭಜನೆಯನ್ನು ರದ್ದುಗೊಳಿಸುವ ಮಾತುಗಳನ್ನು ಯಾರೂ ಆಡಬಾರದು. ದೇಶ ವಿಭಜನೆ ಆಗಿರುವುದನ್ನು ಎರಡೂ ದೇಶಗಳು ವಾಸ್ತವವೆಂದು ಒಪ್ಪಿಕೊಳ್ಳಬೇಕು ಮತ್ತು ಎರಡೂ ದೇಶಗಳು ಎರಡು ಭಿನ್ನ ಸಾರ್ವಭೌಮಿ ದೇಶಗಳಾಗಿ ಮುಂದುವರಿಯಬೇಕು.
2. ಕಾಶ್ಮೀರವನ್ನು ವಿಭಜಿಸಬೇಕು. ಕಾಶ್ಮೀರದ ಮುಸ್ಲಿಮ್ ಬಾಹುಳ್ಯದ ಪ್ರಾಂತವು, ಕಾಶ್ಮೀರ ಕಣಿವೆಯಲ್ಲಿರುವ ಮುಸ್ಲಿಮರು ಇಚ್ಛೆ ಪಟ್ಟಲ್ಲಿ, ಪಾಕಿಸ್ತಾನಕ್ಕೆ ಹೋಗಬೇಕು ಮತ್ತು ಮುಸ್ಲಿಮೇತರರು ವಾಸಿಸುವ ಜಮ್ಮು ಮತ್ತು ಲಡಾಖ್ ಪ್ರಾಂತವು ಭಾರತಕ್ಕೆ ಸೇರಬೇಕು’’
(DR. BABASAHEB AMBEDKAR : WRITINGS AND SPEECHES VOL. 17-1, p. 396)
- 1952ರಲ್ಲಿ ಸಂಸತ್ತಿನಲ್ಲಿ ನಡೆದ ಭಾರತದ ವಿದೇಶಾಂಗ ನೀತಿ ಹಾಗೂ ರಕ್ಷಣಾ ವೆಚ್ಚಗಳ ಬಗೆಗಿನ ಚರ್ಚೆಯಲ್ಲಿ ಭಾಗವಹಿಸುತ್ತಾ ಅಂಬೇಡ್ಕರ್ ಅವರು ಮತ್ತೊಮ್ಮೆ ಕಾಶ್ಮೀರ ವಿವಾದದ ಬಗ್ಗೆ ತಮ್ಮ ನಿಲುವನ್ನು ಒತ್ತಿಹೇಳುತ್ತಾರೆ:
‘‘ಕಾಶ್ಮೀರದಂತಹ ವಿವಾದಾಸ್ಪದ ವಿಷಯಗಳನ್ನು ಬಗೆಹರಿಸಲು ಜನಮತಗಣನೆಯೆಂಬ ಸಾಧನವನ್ನು ಬಳಸಬೇಕೇ ಎಂಬುದನ್ನು ಅರಿಯಲು ತೀರಾ ಹಳೆಯ ಪುರಾವೆಗಳನ್ನು ಹುಡುಕುವ ಅಗತ್ಯವೇನೂ ಇಲ್ಲ. ಎರಡನೇ ಮಹಾಯುದ್ಧದ ನಂತರ, ನನಗೆ ನೆನಪಿರುವ ಹಾಗೆ, ಎರಡು ಪ್ರಕರಣಗಳನ್ನು ಜನಮತಗಣನೆಯ ಮೂಲಕ ಬಗೆಹರಿಸಬೇಕಾಯಿತು. ಒಂದು (ಆಗ ಪೋಲೆಂಡಿನ ಭಾಗವಾಗಿದ್ದು ಜರ್ಮನಿ ಮತ್ತು ಪೋಲೆಂಡಿನ ನಡುವೆ ತಗಾದೆಗೊಳಗಾಗಿದ್ದ-ಲೇ) ಉತ್ತರ ಸಿಲೇಸಿಯಾ ಮತ್ತೊಂದು (ಈ ಹಿಂದೆ ಜರ್ಮನರು ಫ್ರೆಂಚರಿಂದ ವಶಪಡಿಸಿಕೊಂಡಿದ್ದ-ಲೇ) ಅಲ್ಸೇಸ್-ಲೋರೈನ್ ಪ್ರಾಂತ. ಈ ಎರಡೂ ವಿವಾದಗಳನ್ನು ಜನಮತಗಣನೆಯ ಮೂಲಕ ಅಲ್ಲಿನ ನಿವಾಸಿಗಳ ಮತಾಭಿಪ್ರಾಯಗಳ ಆಧಾರದ ಮೇಲೆ ತೀರ್ಮಾನಿಸಲಾಯಿತು. ಪ್ರಬುದ್ಧರು ಮತ್ತು ಮೇಧಾವಿಗಳು ಮತ್ತು ನನ್ನ ಗೌರವಾನ್ವಿತ ಸ್ನೇಹಿತರೂ ಆಗಿರುವ ಗೋಪಾಲಸ್ವಾಮಿ ಅಯ್ಯಂಗಾರ್ ಅವರಿಗೆ ಈ ವಿಷಯವು ತಿಳಿದಿರುತ್ತದೆ ಎಂದೇ ನಾನು ಭಾವಿಸುತ್ತೇನೆ. ಉತ್ತರ ಸಿಲೇಸಿಯಾ ಮತ್ತು ಅಲ್ಸೇವ್-ಲೋರೈನ್ ಪ್ರಾಂತದ ವಿವಾದಗಳನ್ನು ಬಗೆಹರಿಸಲು ಅಂದಿನ ಲೀಗ್ ಆಫ್ ನೇಷನ್ಸ್ ಅನುಸರಿಸಿದ ಮಾದರಿಯನ್ನೇ ಕಾಶ್ಮೀರದಲ್ಲಿ ಅಳವಡಿಸುವ ಮೂಲಕ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿ, ಈ ವಿವಾದವು ರಕ್ಷಣಾ ಬಜೆಟ್‌ನಲ್ಲಿ ನುಂಗಿಹಾಕುತ್ತಿರುವ 50 ಕೋಟಿ ರೂ. ಹಣವನ್ನು ನಮ್ಮ ಜನರ ಅಗತ್ಯಗಳಿಗೆ ಬಳಸಿಕೊಳ್ಳಲಾಗದೇ?
(DR. BABASAHEB AMBEDKAR : WRITINGS AND SPEECHES VOL. 15, p. 849)
ಹೀಗೆ ಅಂಬೇಡ್ಕರ್ ಅವರು ಅತ್ಯಂತ ಸ್ಪಷ್ಟವಾಗಿ ಭಾರತ ಮತ್ತು ಪಾಕಿಸ್ತಾನದ ಸ್ನೇಹಯುತ ಸಂಬಂಧದ ಪರವಾಗಿದ್ದರು ಮತ್ತು ಕಾಶ್ಮೀರದಲ್ಲಿ ಕಡ್ಡಾಯವಾಗಿ ಜನಮತಗಣನೆ ನಡೆದು ಅಲ್ಲಿನ ಜನರ ಅಭಿಪ್ರಾಯಕ್ಕೆ ತಕ್ಕಂತೆ ನಡೆದುಕೊಳ್ಳಲು ಅವಕಾಶ ಮಾಡಿಕೊಡುವುದರ ಪರವಾಗಿದ್ದರು.
ಅದರಿಂದ ಮಾತ್ರ ಭಾರತಕ್ಕೂ, ಪಾಕಿಸ್ತಾನಕ್ಕೂ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಕಾಶ್ಮೀರದ ಜನತೆಗೂ ಒಳಿತಾಗುತ್ತದೆ ಎಂಬ ಸ್ಪಷ್ಟ ಅಭಿಪ್ರಾಯವನ್ನು ಹೊಂದಿದ್ದರು.
ಇವತ್ತಿಗೂ ಆಗಬೇಕಿರುವುದು ಅದೇ.