×
Ad

ದೇಶಾದ್ಯಂತ SIR ಮುಸುಕಿನ NRC!

ದಲಿತ-ದಮನಿತರ ನಾಗರಿಕತ್ವ ಕಸಿಯುವ ಮಹಾ ಮೋದಿ ಕುತಂತ್ರ!

Update: 2025-10-29 11:25 IST

ಇದು ಬಡವರು, ದಮನಿತರು, ಆಸ್ತಿ, ಸಂಪತ್ತು ಮತ್ತು ಜ್ಞಾನವಿಲ್ಲದೆ ಇರುವವರು ನಾಗರಿಕ ಸಮಾಜಕ್ಕೆ ಅನರ್ಹರು ಎಂಬ ನವ ಉದಾರವಾದ ಸೋಷಿಯಲ್ ಡಾರ್ವಿನಿಸಂ ಭಾಗ. ಹಾಗೆಯೇ ಅಲ್ಪಸಂಖ್ಯಾತರು, ದಲಿತರು, ದಮನಿತರು ಬ್ರಾಹ್ಮಣೀಯ ಭಾರತದ ನಾಗರಿಕರಲ್ಲವೆಂಬ ಸಾವರ್ಕರ್‌ವಾದಿ ಹಿಂದುತ್ವದ ಭಾಗವೂ ಆಗಿದೆ.

ಆದ್ದರಿಂದ ಈ SIR/NRC ಸಂವಿಧಾನ ವಿರೋಧಿಯಾಗಿದೆ. ಸಾವರ್ಕರ್‌ವಾದಿ-ನವ ಉದಾರವಾದಿ ಬಾಹ್ಮಣೀಯ ಹಿಂದೂ ರಾಷ್ಟ್ರದ ಭಾಗವಾಗಿದೆ.

ಆದ್ದರಿಂದ ದೇಶ ಮತ್ತೊಮ್ಮೆ ಎಚ್ಚೆತ್ತುಕೊಳ್ಳಬೇಕಿದೆ. ಮತ್ತೊಮ್ಮೆ 2019-20ರಲ್ಲಿ ಕಟ್ಟಿದಂತೆ ಬೃಹತ್ ಜನಚಳವಳಿಯನ್ನು ಕಟ್ಟಿ SIR ಮುಸುಕಿನ NRCಯನ್ನು ಸೋಲಿಸಲೇ ಬೇಕಿದೆ.

ಭಾರತದ ಚುನಾವಣಾ ಆಯೋಗವು, ಸುಪ್ರೀಂನಲ್ಲಿ ಇನ್ನೂ ಪ್ರಕರಣ ನಡೆಯುತ್ತಿದ್ದರೂ, ವಿರೋಧ ಪಕ್ಷಗಳ ಮತ್ತು ಪ್ರಜ್ಞಾವಂತ ಜನರ ಪ್ರಬಲ ವಿರೋಧವಿದ್ದರೂ ದೇಶಾದ್ಯಂತ SIR-Special Intensive Revision- ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಶೀಲನೆಯನ್ನು ನಡೆಸಲು ವೇಳಾಪಟ್ಟಿಯನ್ನು ಘೋಷಿಸಿದೆ. ಈಗಾಗಲೇ ಬಿಹಾರದಲ್ಲಿ ಇದನ್ನು ಯಶಸ್ವಿಯಾಗಿ ಮಾಡಿ ಮುಗಿಸಲಾಗಿದೆ ಎಂದು ತನ್ನ ಹೇಳಿಕೆಯಲ್ಲಿ ಕೊಚ್ಚಿಕೊಂಡಿರುವ ಆಯೋಗ ಎರಡನೇ ಹಂತದಲ್ಲಿ ಇನ್ನೂ 12 ರಾಜ್ಯಗಳಲ್ಲಿ SIR ನಡೆಸಲು ವೇಳಾಪಟ್ಟಿ ಘೋಷಿಸಿದೆ. ಉಳಿದ ರಾಜ್ಯಗಳಲ್ಲಿ ಮುಂದಿನ ವರ್ಷ ಫೆಬ್ರವರಿಯ ನಂತರ ಯಾವಾಗ ಬೇಕಾದರೂ ನಡೆಸುವ ಸಾಧ್ಯತೆ ಇದೆ.

ಈಗಾಗಲೇ ಚುನಾವಣೆಗೆ ಸಜ್ಜಾಗುತ್ತಿದ್ದ ಬಿಹಾರದಲ್ಲಿ ಅಕ್ರಮ ವಲಸಿಗರನ್ನು ಮತಪಟ್ಟಿಯಿಂದ ಕಿತ್ತುಹಾಕುವ ನೆಪದಲ್ಲಿ ಈ ವರ್ಷದ ಜೂನ್‌ನಲ್ಲಿ ದಿಢೀರನೆ SIR ಘೋಷಿಸಿತ್ತು. ಇದರಿಂದಾಗಿ ಪ್ರತಿಯೊಬ್ಬ ಬಿಹಾರಿಯೂ ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗ ಕಡ್ಡಾಯ ಮಾಡಿದ 11 ದಾಖಲೆಗಳಲ್ಲಿ ಒಂದನ್ನು ಹೊಂದಿರದಿದ್ದರೆ ಅವರ ನಾಗರಿಕತ್ವವನ್ನೇ ನಿರಾಕರಿಸಿ ಮತಪಟ್ಟಿಯಿಂದ ಆಚೆಗಿಡುವ ಪ್ರಕ್ರಿಯೆ ಪ್ರಾರಂಭಿಸಿತು.

ಬಹುಪಾಲು ಜನರ ಬಳಿ ಲಭ್ಯವಿದ್ದ ರೇಶನ್ ಕಾರ್ಡ್, ಆಧಾರ್ ಕಾರ್ಡ್, ಚುನಾವಣಾ ಆಯೋಗವೇ ಕೊಟ್ಟ ವೋಟರ್ ಕಾರ್ಡ್‌ಗಳನ್ನು ಆಯೋಗ ಮಾನ್ಯ ಮಾಡುವುದಿಲ್ಲವೆಂದು ಘೋಷಿಸಿತು. ಆಯೋಗ ನಿಗದಿ ಪಡಿಸಿದ ಜನನ ಪತ್ರ, ಆಸ್ತಿ ಪತ್ರ, ಮೆಟ್ರಿಕ್ಯುಲೇಶನ್ ಪ್ರಮಾಣ ಪತ್ರ, ಇನ್ನಿತ್ಯಾದಿಗಳು ಮೂರು ಕೋಟಿಗೂ ಹೆಚ್ಚು ಭಾರತೀಯ ಬಿಹಾರಿಗಳ ಬಳಿ ಇರಲೇ ಇಲ್ಲ. ಹೀಗಾಗಿ ಬಿಹಾರದಲ್ಲಿ ಅರ್ಹರಾದ, ಭಾರತೀಯರೇ ಆದ-ಅಕ್ರಮ ವಲಸಿಗರಲ್ಲದ ಮೂರು ಕೋಟಿಗೂ ಹೆಚ್ಚು ಬಿಹಾರಿಗಳು ನಾಗರಿಕತ್ವ ಕಳೆದುಕೊಳ್ಳಲಿದ್ದರು.

ಜನಪರ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಕೂಡಲೇ ಅದರ ವಿರುದ್ಧ ಜನಾಂದೋಲನ ಪ್ರಾರಂಭಿಸಿ ಸುಪ್ರೀಂ ಕೋರ್ಟಿಗೆ ಮೊರೆಹೋದರು. ಸುಪ್ರೀಂನಲ್ಲಿ ಮೋದಿ ಸರಕಾರ ತನ್ನ ದುರುದ್ದೇಶವನ್ನು ಬಗೆಬಗೆಯಾಗಿ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿತು. ಆದರೆ ಜನಪರ ಹೋರಾಟಗಾರರು ಕೊಟ್ಟ ಮಾಹಿತಿ-ದಾಖಲೆಗಳು ಮತ್ತು ಜನಪರ ವಕೀಲರು ಈ ಪ್ರಕ್ರಿಯೆಯ ದುಷ್ಪರಿಣಾಮವನ್ನು ಸ್ಪಷ್ಟಪಡಿಸಿದ ಮೇಲೆ ಸುಪ್ರೀಂ ಮಧ್ಯಪ್ರವೇಶ ಮಾಡಿ ಆಧಾರ್ ಕಾರ್ಡನ್ನು ಕೂಡಾ ಮತದಾರರೆಂದು ರುಜುವಾತು ಮಾಡುವ ದಾಖಲೆಯಾಗಿ ಪರಿಗಣಿಸಬೇಕೆಂದು ಕಡ್ಡಾಯ ಮಾಡಿತು. ಸುಪ್ರೀಂ ಹೀಗೆ ಮಧ್ಯಪ್ರವೇಶ ಮಾಡಿರದಿದ್ದರೆ ಬಿಹಾರದ ಎರಡು-ಮೂರು ಕೋಟಿ ಬಡ, ಅಲ್ಪಸಂಖ್ಯಾತ, ಅನಕ್ಷರಸ್ಥ ಭಾರತೀಯ ಬಿಹಾರಿಗಳನ್ನು ಮೋದಿ ಸರಕಾರ ಭಾರತೀಯತ್ವದಿಂದಲೇ ಹೊರಹಾಕಿರುತ್ತಿತ್ತು.

ಆದರೆ SIಖ ಪ್ರಕ್ರಿಯೆಯ ಬಡಜನವಿರೋಧಿಯಾಗಿರುವುದರಿಂದ ಮತ್ತು ಅವೈಜ್ಞಾನಿಕವಾಗಿರುವುದರಿಂದ ಈಗಲೂ 65 ಲಕ್ಷಕ್ಕೂ ಹೆಚ್ಚು ಅರ್ಹ ಮತ್ತು ಭಾರತೀಯ ಬಿಹಾರಿಗಳು ಮತದಾರರ ಪಟ್ಟಿಯಿಂದ ಹೊರಗಟ್ಟಲ್ಪಟ್ಟಿದ್ದಾರೆ. ಇಷ್ಟೆಲ್ಲ ಹುಯಿಲೆಬ್ಬಿಸಿ ಈ ಪ್ರಕ್ರಿಯೆಯ ಪತ್ತೆ ಮಾಡಿದ ಅಕ್ರಮ ವಲಸಿಗರ ಸಂಖ್ಯೆ 500ಕ್ಕಿಂತ ಕಡಿಮೆ. ಬದಲಿಗೆ ಸೂಕ್ತ ದಾಖಲೆ ಇಲ್ಲವೆಂದು ಹೊರಗಿಟ್ಟ ಬಡ ಬಿಹಾರಿ ಭಾರತೀಯರ ಸಂಖ್ಯೆ 65 ಲಕ್ಷ.

ಆದ್ದರಿಂದಲೇ ಇದರ ಬಗ್ಗೆ ಮತ್ತು ಈ SIR ಪ್ರಕ್ರಿಯೆಯ ಸಾಂವಿಧಾನಿಕತೆ ಮತ್ತು ಅದನ್ನು ನಡೆಸಲು ಚುನಾವಣಾ ಆಯೋಗಕ್ಕಿರುವ ಕ್ಷಮತೆಯ ಬಗ್ಗೆ ಸುಪ್ರೀಂನಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. ಮುಗಿದಿಲ್ಲ. ಆದರೂ ಅಷ್ಟರೊಳಗೆ ಚುನಾವಣಾ ಆಯೋಗ ಸಂವಿಧಾನ ಕೊಟ್ಟಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ದೇಶಾದ್ಯಂತ SIR ಘೋಷಿಸಿದೆ.

ಸುಪ್ರೀಂ ಕೋರ್ಟು SIRನ ಸಾಂವಿಧಾನಿಕ ಸಿಂಧುತ್ವವನ್ನು ತೀರ್ಮಾನ ಮಾಡುವ ಮೊದಲು ಹಾಗೂ 2026ರಲ್ಲಿ ದೇಶಾದ್ಯಂತ ಜನಗಣತಿ ನಡೆಯುವ ಮೊದಲೇ ಬಡ ಹಾಗೂ ಅಲ್ಪಸಂಖ್ಯಾತ ಭಾರತೀಯರಿಗೆ ನಾಗರಿಕತ್ವ ನಿರಾಕರಣೆ ಮಾಡುವ SIR ಮುಸುಕಿನ NRC ಮಾಡಿ ಮುಗಿಸುವ ತರಾತುರಿಯಲ್ಲಿದೆ. ಪ್ರಾಯಶಃ ೨೦೨೬ರ ಫೆಬ್ರವರಿಯ ನಂತರ ಕರ್ನಾಟಕದಲ್ಲೂ SIR ನಡೆಯಲಿದೆ.

ಆದ್ದರಿಂದಲೇ ನಾಡಿನ ಪ್ರಜ್ಞಾವಂತರು SIRನ ಹುನ್ನಾರಗಳನ್ನೆಲ್ಲ ಅರ್ಥಮಾಡಿಕೊಂಡು SIR ರದ್ದುಮಾಡಲು ಬೃಹತ್ ಜನಾಂದೋಲನ ಕಟ್ಟುವ ಅಗತ್ಯವಿದೆ.

SIR ನಡೆಸುವ ಅಧಿಕಾರವೇ ಆಯೋಗಕ್ಕಿಲ್ಲ!

ಭಾರತದಲ್ಲಿ ಸಂವಿಧಾನದ ಆರ್ಟಿಕಲ್ 324, 325, 326ರ ಪ್ರಕಾರ ಚುನಾವಣೆಗಳನ್ನು ನಡೆಸುವುದು ಚುನಾವಣಾ ಆಯೋಗದ ಜವಾಬ್ದಾರಿ. ಅದರಂತೆ ಚುನಾವಣಾ ಆಯೋಗವು ದೇಶದಲ್ಲಿ 18 ವಯಸ್ಸು ತುಂಬಿರುವ ಪ್ರತಿಯೊಬ್ಬ ಭಾರತೀಯರಿಗೂ ಮತದಾನದ ಹಕ್ಕು ಒದಗಿಸಿಕೊಡಬೇಕು.

ಅದಕ್ಕೆ ಪೂರಕವಾಗಿ 1950ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 21 (3), 1960ರ ಮತಪಟ್ಟಿ ತಯಾರಿ ನಿಯಮಗಳ ಪ್ರಕಾರ ಚುನಾವಣಾ ಆಯೋಗ ರಾಜ್ಯದಲ್ಲಿ ಅರ್ಹ ಮತದಾರರ ಪಟ್ಟಿಯನ್ನು ತಯಾರಿಸಬೇಕು. ಅನರ್ಹರ, ಮೃತರ, ಬೇರೆ ಜಾಗಗಳಿಗೆ ಸ್ಠಳಾಂತರಗೊಂಡಿರುವವರ ಹೆಸರನ್ನು ತೆಗೆದುಹಾಕಬೇಕು.

ಇದಕ್ಕಾಗಿ ಚುನಾವಣಾ ಆಯೋಗಗಳು ಸಾಮಾನ್ಯವಾಗಿ ಪ್ರತೀ ಚುನಾವಣೆಗೆ ಮುನ್ನ Summary Revision ಎಂಬ ಪರಿಷ್ಕರಣೆಯನ್ನೂ ಹಾಗೂ ಕಾಲಕಾಲಕ್ಕೆ ಇಡೀ ಮತಪಟ್ಟಿಯನ್ನು ಸಮಯಕ್ಕೆ ತಕ್ಕಹಾಗೆ ಸಿದ್ಧಪಡಿಸಲು Intensive Revision ಎಂಬ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತದೆ.

ಈಗ ಬಿಹಾರದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ Special Intensive Revision (SIR) ಎಂಬ ಪ್ರಕ್ರಿಯೆಯ 1960ರ ಮತಪಟ್ಟಿ ಪರಿಷ್ಕರಣೆ ನಿಯಮಗಳಲ್ಲಿ ಇಲ್ಲವೇ ಇಲ್ಲ.

ಅದರಲ್ಲಿರುವುದು Summary Revision (SR) ಮತ್ತು Intensive Revision (IR) ಮಾತ್ರ. Special Intensive Revision (SIR) ಇಲ್ಲವೇ ಇಲ್ಲ. ಆದರೂ ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗ 2003ರಲ್ಲಿ ಬಿಹಾರದಲ್ಲಿ Special Intensive Revision (SIR) ಮಾಡಲಾಗಿತ್ತು ಎಂದು ಸುಪ್ರೀಂನಲ್ಲೂ ಪ್ರತಿಪಾದಿಸಿದೆ. ಆದರೆ ಅದರ ದಾಖಲೆಗಳನ್ನು ಕೊಡಿ ಎಂದು ಕೇಳಿದರೆ ಚುನಾವಣಾ ಆಯೋಗ ಅದರ ದಾಖಲೆಗಳು ಕಳೆದುಹೋಗಿದೆ ಎಂದು ಹಾರಿಕೆಯ ಉತ್ತರ ಕೊಡುವಷ್ಟು ಕುತಂತ್ರ ನಡೆಸಿದೆ.

ಅಷ್ಟು ಮಾತ್ರವಲ್ಲ. ನಿನ್ನೆ 12 ರಾಜ್ಯಗಳಲ್ಲಿ SIR ಘೋಷಣೆ ಮಾಡುವಾಗಲೂ ೧೯೫೧ರಿಂದ ೨೦೦೩-೦೪ರ ವರೆಗೆ ಆಯೋಗವೂ ಎಂಟು ಬಾರಿ SIR ಮಾಡಿದೆ ಎಂದು ಸುಳ್ಳು ಘೋಷಣೆ ಮಾಡಿದೆ.

SIRಗೂ ಉಳಿದ ಮತಪಟ್ಟಿ ಪರಿಷ್ಕರಣೆಗೂ(SR-IR) ವ್ಯತ್ಯಾಸವೇನು?

ಸಾಮಾನ್ಯವಾಗಿ ಚುನಾವಣೆಗಳಿಗೆ ಮುಂಚೆ ನಡೆಯುವ ಸಮ್ಮರಿ ರಿವಿಶನ್ (Sಖ)- ಮತಪಟ್ಟಿ ಪರಿಷ್ಕರಣೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಸಿದ್ಧಪಡಿಸಲಾದ ಚುನಾವಣಾ ಪಟ್ಟಿಯನ್ನು ಆಕರವಾಗಿಟ್ಟುಕೊಂಡು (ರೆಫರೆನ್ಸ್) ಮತಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ. ಅಂದರೆ ಈಗಾಗಲೇ ಹಿಂದಿನ ಚುನಾವಣೆಯಲ್ಲಿ ಮತದಾರರಾಗಿ ನೋಂದಾಯಿತರಾದವರು ಮತ್ತೊಮ್ಮೆ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಹಿಂದಿನ ಚುನಾವಣೆಯ ನಂತರ 18 ವರ್ಷ ತುಂಬಿದವರ ವಯಸ್ಸು ಮತ್ತು ಹುಟ್ಟಿದ ಸ್ಥಳದ ದಾಖಲೆಗಳನ್ನು ಪರಿಶೀಲಿಸಿ ಮತಪಟ್ಟಿಗೆ ಸೇರಿಸಿಕೊಳ್ಳಲಾಗುತ್ತದೆ. ಹಿಂದಿನ ಚುನಾವಣೆಯ ನಂತರ ಮೃತರಾದವರನ್ನು ಕೈಬಿಡಲಾಗುತ್ತದೆ.

ಯಾವುದಾದರೂ ಮತದಾರರ ಅರ್ಹತೆ ಬಗ್ಗೆ ದೂರುಗಳು ಬಂದಿದ್ದಲ್ಲಿ ಮಾತ್ರ ಅವರಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

ಈ ಎಲ್ಲಾ ಪ್ರಕ್ರಿಯೆಯಲ್ಲಿ ಒಬ್ಬ ವ್ಯಕ್ತಿ ಮತದಾರರೋ ಅಲ್ಲವೋ ಎಂದು ಸಾಬೀತು ಮಾಡುವ ಹೊಣೆ ಅಧಿಕಾರಿಗಳದ್ದೇ ಹೊರತು ಮತದಾರದ್ದಲ್ಲ. ಮತದಾರರು ನೀಡಿದ ಮಾಹಿತಿಗಳಿಗೆ ಪುರಾವೆಯನ್ನು ಚುನಾವಣಾ ಅಧಿಕಾರಿಗಳು ಕೇಳುವಂತಿಲ್ಲ. ಮೂರನೆಯವರು ಮತದಾರರೊಬ್ಬರ ಬಗ್ಗೆ ದೂರು ನೀಡಿದಾಗ ಮಾತ್ರ ಅವರು ಕೊಟ್ಟ ಮಾಹಿತಿಗಳಿಗೆ ಪುರಾವೆಯನ್ನು ಕೇಳುತ್ತಾರೆ. ಆಗಲೂ ಅದರ ಪರಿಶೀಲನೆಗೆ ಮತ್ತು ಪುನರ್ ಪರಿಶೀಲನೆಗೆ ಸಾಕಷ್ಟು ಅವಕಾಶ ನೀಡಲಾಗಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅವು ಯಾವುವೂ ನಾಗರಿತ್ವಕ್ಕೆ ಕೇಳುವ ಪುರಾವೆಯಾಗಿರುವುದಿಲ್ಲ.

ಹಲವು ವರ್ಷಗಳಿಗೊಮ್ಮೆ ನಡೆಯುವ ಇಂಟೆನ್ಸಿವ್ ರಿವಿಶನ್ (IR) ಪ್ರಕ್ರಿಯೆಗಳು ಸಾಮಾನ್ಯವಾಗಿ ಚುನಾವಣೆಗೆ ಮುಂಚೆ ನಡೆಯುವುದಿಲ್ಲ. ಅದು ಸಾಮಾನ್ಯವಾಗಿ ಚುನಾವಣೆ ಒತ್ತಡಗಳಿಲ್ಲದ ಸಮಯದಲ್ಲಿ ಚುನಾವಣಾಧಿಕಾರಿಗಳು ಮತಪಟ್ಟಿಯಲ್ಲಿ ಇರುವ ಎಲ್ಲರ ಅಸ್ತಿತ್ವವನ್ನು ಸ್ಥಳಕ್ಕೆ ಭೇಟಿ ಕೊಟ್ಟು ಖಾತರಿ ಪಡಿಸಿಕೊಳ್ಳುತ್ತಾರೆ. ಈಗಾಗಲೇ ಕೊಟ್ಟಿರುವ ದಾಖಲೆಗಳ ಋಜುತ್ವವನ್ನು ಅಗತ್ಯ ಬಿದ್ದಲ್ಲಿ ಪರಿಶೀಲಿಸುತ್ತಾರೆ. ಉದಾಹರಣೆಗೆ ಬಿಹಾರದಲ್ಲಿ 2003ರಲ್ಲಿ Intensive Revision ಎಂಬ ಪ್ರಕ್ರಿಯೆ ನಡೆದಿತ್ತು. ಅಲ್ಲಿ ಚುನಾವಣೆ ಬಾಕಿ ಇದ್ದದ್ದು 2005ರಲ್ಲಿ.

ಬಿಹಾರದಲ್ಲಿ ನಡೆಸಲಾಗಿದ್ದ ಇಂಟೆನ್ಸಿವ್ ರಿವಿಶನ್ (IR) ಅನ್ನೇ ಚುನಾವಣಾ ಆಯೋಗ SIR ಎಂದು ಸುಳ್ಳು ಹೇಳುತ್ತಿದೆ. ಅದರ ಬಗೆಗಿನ ಎಲ್ಲಾ ದಾಖಲೆಗಳನ್ನು ಸಾರ್ವಜನಿಕರಿಗೆ ಕೊಡದೆ ಸತಾಯಿಸುತ್ತಿದೆ. ಆದರೂ ಸುಪ್ರೀಂನಲ್ಲಿ ಕಳೆದ ತಿಂಗಳು ಇದರ ಬಗ್ಗೆ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲಿ ಜನಪರ ಹೋರಾಟಗಾರರು ಬಿಹಾರದ ಇಂಟೆನ್ಸಿವ್ ರಿವಿಶನ್ ಬಗ್ಗೆ ದಾಖಲೆಗಳನ್ನು ಪಡೆದುಕೊಂಡು ಸುಪ್ರೀಂನಲ್ಲಿ ಸಲ್ಲಿಸಿದ್ದಾರೆ. ಅದರ ಪ್ರಕಾರ ಬಿಹಾರದಲ್ಲಿ 2003ರಲ್ಲಿ ನಡೆದ ಪ್ರಕ್ರಿಯೆ IR ಹೊರತು ಯಾವುದೇ ರೀತಿಯ SIಖ ಅಲ್ಲ! ಹಾಗೂ ಈ 2003ರ IR ನಡೆಸುವಾಗ ಯಾವ ಕಾರಣಕ್ಕೂ ಮತದಾರರ ನಾಗರಿಕತ್ವದ ಪುರಾವೆಯ ಉಸಾಬರಿಗೆ ಹೋಗಬಾರದೆಂದು ಆಯೋಗ ಸ್ಪಷ್ಟವಾಗಿ ನಿರ್ದೇಶನವಿತ್ತಿದೆ. 2003ರಲ್ಲಿ ಕೇಂದ್ರದಲ್ಲಿ ಇದ್ದದ್ದು ವಾಜಪೇಯಿಯವರ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ!

SIR ಎಂದರೆ ನಾಗರಿಕತ್ವ ನಿರಾಕರಣೆ- ಹಿಂಬಾಗಿಲ NRC

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೂ (SIR)ಗೂ ಮತದಾರರ ಪಟ್ಟಿಯ ಸಮ್ಮರಿ ರಿವಿಶನ್ ಮತ್ತು ಇಂಟೆನ್ಸಿವ್ ರಿವಿಶನ್ ಗೂ(SR ಮತ್ತು IR) ಹಲವು ಮೂಲಭೂತ ವ್ಯತ್ಯಾಸಗಳಿವೆ.

1. SR ಮತ್ತು IR ಚುನಾವಣಾ ಆಯೋಗದ ಸಾಂವಿಧಾನಿಕ ಬಾಧ್ಯತೆ. SIR ಮಾಡಲು ಆಯೋಗಕ್ಕೆ ಅಧಿಕಾರವೇ ಇಲ್ಲ. ಅದು ಅದರ ಕರ್ತವ್ಯಗಳಲ್ಲೂ ಇಲ್ಲ.

2. SSR ಮತ್ತು IRಗಳಲ್ಲಿ ಚುನಾವಣಾ ಸಿಬ್ಬಂದಿ ಮತದಾರರ ನಾಗರಿಕತ್ವವನ್ನು ಪುರಾವೆ ಮಾಡುವ ಯಾವುದೇ ಪ್ರಶ್ನೆಗಳನ್ನು ಕೇಳುವುದಿಲ್ಲ ಮತ್ತು ಮತದಾರರು ಕೊಟ್ಟ ಮಾಹಿತಿಯನ್ನು ಮಾತ್ರ ಸಂಗ್ರಹಿಸಿಕೊಂಡು ಅದನ್ನು ಆಧರಿಸಿ ಮತಪಟ್ಟಿಗೆ ಸೇರಿಸುವ ಅಥವಾ ತೆಗೆದುಹಾಕುವ ಪ್ರಕ್ರಿಯೆ ಮಾಡುತ್ತಾರೆ. ಮೂರನೆಯವರು ದೂರು ಕೊಟ್ಟಾಗ ಮಾತ್ರ ಮತದಾರರು ತಮ್ಮ ಗುರುತನ್ನು ಸಾಬೀತು ಮಾಡಲು ಕೋರುತ್ತಾರೆ ಮತ್ತು ಅದಕ್ಕೆ ಸಾಕಷ್ಟು ಕಾಲಾವಕಾಶ ಮತ್ತು ಮೇಲುಸ್ತುವಾರಿಯುಳ್ಳ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ.

3. SIRನಲ್ಲಿ ಈ ಹಿಂದಿನ SIR ಎಂದು ಆಯೋಗ ಹೇಳುತ್ತಿರುವ 2003-4ರ SR ಪಟ್ಟಿಯಲ್ಲಿ ಹೆಸರಿರುವ ಮತದಾರರನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಜನರು ಚುನಾವಣಾ ಆಯೋಗ ಹೇಳುವ ದಾಖಲೆಗಳನ್ನು ಹಾಜರುಪಡಿಸಿ ತಮ್ಮ ನಾಗರಿಕತ್ವವನ್ನು ಸಾಬೀತು ಪಡಿಸಿಕೊಳ್ಳಬೇಕು.

4. ಈಗ SIRನಲ್ಲಿ ನಾಗರಿಕತ್ವ ಸಾಬೀತು ಪಡಿಸಿಕೊಳ್ಳಲು ಚುನಾವಣಾ ಆಯೋಗ ಈ ಕೆಳಗಿನ ಷರತ್ತುಗಳನ್ನು ಹಾಕಿದೆ:

-2003ರ ಪಟ್ಟಿಯಲ್ಲಿ ಹೆಸರಿಲ್ಲದವರು :

ಅ) 1987ಕ್ಕೆ ಮುಂಚೆ ಜನಿಸಿದವರಾದರೆ ತಮ್ಮ ಹುಟ್ಟಿದ ದಿನ ಹಾಗೂ ಸ್ಥಳವನ್ನು ಸಾಬೀತು ಮಾಡುವ ದಾಖಲೆಗಳನ್ನು ಒದಗಿಸಬೇಕು.

ಆ) 1987-2004ರ ನಡುವೆ ಹುಟ್ಟಿದವರಾದರೆ ತಮ್ಮ ಹುಟ್ಟಿದ ದಿನ ಹಾಗೂ ಸ್ಥಳದ ಪುರಾವೆಯ ಜೊತೆಗೆ ತಂದೆ ತಾಯಿಗಳಲ್ಲಿ ಒಬ್ಬರು ಭಾರತೀಯರೇ ಎಂಬುದಕ್ಕೆ ಪುರಾವೆ ಕೊಡಬೇಕು.

ಇ) 2004ರ ನಂತರ ಹುಟ್ಟಿದವರಾದರೆ ತಮ್ಮ ಹುಟ್ಟಿದ ದಿನ ಮತ್ತು ಸ್ಥಳಗಳ ಪುರಾವೆಯ ಜೊತೆಗೆ ತಂದೆ-ತಾಯಿಗಳಿಬ್ಬರೂ ಭಾರತೀಯರು ಎಂದು ಸಾಬೀತು ಮಾಡುವ ಪುರಾವೆಗಳನ್ನು ಒದಗಿಸಬೇಕು.

ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಇವು ಮತಪರಿಷ್ಕರಣೆಯ ಶರತ್ತುಗಳಲ್ಲ. ನಾಗರಿಕತ್ವ ಪುರಾವೆಯ ಶರತ್ತುಗಳು. ಆರ್ಥತ್ SIR ಶರತ್ತುಗಳು.

5. ಹುಟ್ಟಿದ ದಿನ ಮತ್ತು ಸ್ಥಳಗಳ ಪುರಾವೆಗಳನ್ನು ಒಪ್ಪಿಕೊಳ್ಳಲು ಆಯೋಗವು 11 ದಾಖಲೆಗಳನ್ನು ಪಟ್ಟಿ ಮಾಡಿದೆ.

ಅವುಗಳಲ್ಲಿ ಮುಖ್ಯವಾದವು ಸರಕಾರಿ ಕಚೇರಿಯಲ್ಲಿ ಕೊಡುವ ಜನನ ಪ್ರಮಾಣ ಪತ್ರ, ಮೆಟ್ರಿಕ್ಯುಲೇಶನ್ ಅಂದರೆ ಹತ್ತನೇ ತರಗತಿಯ ನಂತರ ಕೊಡುವ ಶಾಲಾ ದಾಖಲೆಗಳು, ಸಾರ್ವಜನಿಕ ಇಲಾಖೆಗಳಲ್ಲಿ ಅಥವಾ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದರೆ ಅಲ್ಲಿ ಕೊಡಲಾಗಿರುವ ಪರಿಚಯ ಪತ್ರ, ಪಾಸ್‌ಪೋರ್ಟ್, ಆಸ್ತಿ ಪತ್ರಗಳು. ಬಹುಜನರ ಬಳಿ ಇರುವ ರೇಶನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ವೋಟರ್ ಐಡಿಗಳು ಆಯೋಗ ಪಟ್ಟಿ ಮಾಡಿದ್ದ ದಾಖಲೆಗಳಲ್ಲಿ ಇರಲಿಲ್ಲ. ಸುಪ್ರೀಂನಲ್ಲಿ ಗುದ್ದಾಡಿದ ಮೇಲೆ ನಂತರ ಅರೆಮನಸ್ಸಿನಿಂದ ಆಧಾರನ್ನು ಸೇರಿಸಿತು. ಆದರೂ ಬಿಹಾರದಲ್ಲಿ ಈ SIR ಹೇಗೆ ಅಂದಾಜು 65 ಲಕ್ಷ ಬಡವರನ್ನು, ಮುಖ್ಯವಾಗಿ ಮಹಿಳೆಯರನ್ನು, ಆದಿವಾಸಿ-ದಲಿತರನ್ನು ಮತ್ತು ಅಲ್ಪಸಂಖ್ಯಾತರನ್ನು ಆಯೋಗ ಕಡ್ಡಾಯ ಮಾಡಿದ ದಾಖಲೆ ಕೊಟ್ಟಿಲ್ಲವೆಂದು ಮತದ ಹಕ್ಕನ್ನು ನಿರಾಕರಿಸಿದೆ ಮತ್ತು ಆ ಮೂಲಕ ಅವರ ನಾಗರಿಕತ್ವ ನಿರಾಕರಣೆಗೆ ದಾರಿ ಮಾಡಿಕೊಟ್ಟಿದೆಯೆಂದೊ ಈಗಾಗಲೇ ನೋಡಿದ್ದೇವೆ.

SIR ಮುಸುಕಿನ NRC

ಸಾವರ್ಕರ್‌ವಾದಿ ಮತ್ತು ನವಉದಾರವಾದಿ

ಸುಪ್ರೀಂನಲ್ಲಿ SIRನ ಸಾಂವಿಧಾನಿಕ ಸಿಂಧುತ್ವದ ವಿಚಾರಣೆ ನಡೆಯುತ್ತಿದ್ದರೂ ಮೋದಿ ಸರಕಾರ ಮತ್ತು ಅದರ ಕೈಗೊಂಬೆ ಚುನಾವಣಾ ಆಯೋಗ ಅಕ್ಟೊಬರ್ 27ರಂದು ದೇಶಾದ್ಯಂತ SIR ಅನ್ನು ಘೋಷಿಸಿದೆ. ಬಿಹಾರದ ಸಂದರ್ಭದಲ್ಲಿ ಬಂದ ವಿರೋಧ ಹಾಗೂ ಸುಪ್ರೀಂ ಕೊಟ್ಟ ತಪರಾಕಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು SIಖ ಪ್ರಕ್ರಿಯೆಯಲ್ಲಿ ಕೆಲವು ಅರೆಮನಸ್ಸಿನ ಬದಲಾವಣೆಗಳನ್ನು ತಂದಿದೆ.

(https://x.com/ECISVEEP/status/1982813937016946867)

ಅದರಲ್ಲಿ ಮುಖ್ಯವಾದವು:

-ನಾಗರಿಕತ್ವ ಸಾಬೀತು ಮಾಡಲು ತೋರಬೇಕಾದ 11 ದಾಖಲೆಗಳ ಜೊತೆ ಆಧಾರ್ ಅನ್ನು 12ನೇ ದಾಖಲೆಯಾಗಿ ಸೇರಿಸಲಾಗಿದೆ. ಆದರೆ ಅದು ಕೇವಲ ಗುರುತಿನ ದಾಖಲೆಯೇ ಹೊರತು ನಾಗರಿಕತ್ವದ ಪುರಾವೆಯಲ್ಲ ಎಂಬ ಟಿಪ್ಪಣಿಯನ್ನು ಸೇರಿಸಲಾಗಿದೆ. ಆಧಾರ್ ಅನ್ನು ಪರಿಗಣಿಸುವ ಬಗ್ಗೆ ತನ್ನ ಸೆಪ್ಟಂಬರ್ 9ರ ಆದೇಶದಂತೆ ನಡೆದುಕೊಳ್ಳಬೇಕು ಎಂದು ಆದೇಶಿಸಿದೆ. ಇದನ್ನು ಅಧಿಕಾರಿಗಳು ಯಾವ ರೀತಿ ಅನುಷ್ಠಾನ ಮಾಡುವರು ಎಂದು ನೋಡಬೇಕು!

- ಮೊದಲ ಹಂತದಲ್ಲಿ ಮತದಾರರು ಭರ್ತಿ ಮಾಡುವ ಅರ್ಜಿಯ ಜೊತೆ ದಾಖಲೆಗಳನ್ನು ನೀಡಬೇಕಿಲ್ಲ ಮತ್ತು ದಾಖಲೆಗಳ ಅಂತಿಮ ಪರಿಶೀಲನೆಗೆ 54 ದಿನಗಳ ಅವಕಾಶ ನೀಡಲಾಗಿದೆ.

ಇಷ್ಟನ್ನು ಬಿಟ್ಟರೆ ಅರ್ಹ ಮತದಾರರನ್ನು ಮತಪಟ್ಟಿಯಲ್ಲಿ ಸೇರಿಸುವುದಕ್ಕಿಂತ ನಾಗರಿಕತ್ವ ಪರಿಶೀಲಿಸಿ ರದ್ದು ಮಾಡುವ SIR ಪ್ರಕ್ರಿಯೆಯನ್ನು ಆಯೋಗ ನಿರಾತಂಕವಾಗಿ ದೇಶಾದ್ಯಂತ ಮುಂದುವರಿಸಿದೆ.

ಮುಂದಿನ ವರ್ಷ ಫೆಬ್ರವರಿಯ ನಂತರ ಅದು ಕರ್ನಾಟಕದಲ್ಲೂ ಪ್ರಾರಂಭವಾಗಲಿದೆ.

SIR ಪ್ರಕ್ರಿಯೆಯು ಸಂವಿಧಾನ ಬಾಹಿರವಾದ ಮುಸುಕಿನ NRC ಪ್ರಕ್ರಿಯೆಯೇ ಆಗಿದೆ. ಈ ಹಿಂದೆ 2020ರಲ್ಲಿ ಪ್ರಾರಂಭವಾಗಬೇಕಿದ್ದ ಸೆನ್ಸಸ್ ಮೂಲಕ NRCಯನ್ನು ಜಾರಿ ಮಾಡುವ ಉದ್ದೇಶವನ್ನು ಮೋದಿ ಸರಕಾರ ಹೊಂದಿತ್ತು. ಆದರೆ ಅದರ ವಿರುದ್ಧ ದೇಶಾದ್ಯಂತ ಜನಾಂದೋಲನ ಭುಗಿಲೆದ್ದದ್ದರಿಂದ ಅದನ್ನು ಮಾಡಲಾಗಲಿಲ್ಲ.

2026ರಲ್ಲಿ ಸೆನ್ಸಸ್ ಪ್ರಕ್ರಿಯೆ ಪ್ರಾರಂಭವಾಗುವುದೆಂದು ಮೋದಿ ಸರಕಾರ ಘೋಷಿಸಿದೆ. ಆದರೆ ಹಿಂದಿನ ಅನುಭವದಿಂದ ಸೆನ್ಸಸ್ ಜೊತೆಗೆ NRC ನಡೆಸುವುದು ಕಷ್ಟವೆಂದು ಅರ್ಥವಾಗಿರುವುದರಿಂದ ಅದಕ್ಕೆ ಮುಂಚೆಯೇ ಚುನಾವಣಾ ಆಯೋಗದ ಮೂಲಕ ಓಖಅಯೇ ಆಗಿರುವ SIR ನಡೆಸುತ್ತಿದೆ. ಮುಂದಿನ ವರ್ಷ ಜನಗಣತಿ ಆದ ನಂತರ ಸೆನ್ಸಸ್ ಮತ್ತು SIR ಅನ್ನು ಇಟ್ಟುಕೊಂಡು ಬಡವರ, ಆದಿವಾಸಿ-ದಲಿತರ ಮತ್ತು ಅಲ್ಪಸಂಖ್ಯಾತರ ನಾಗರಿಕತ್ವವನ್ನೇ ತಿರಸ್ಕರಿಸುವ ದುರುದ್ದೇಶವನ್ನು ಮೋದಿ ಸರಕಾರ ಹೊಂದಿರುವಂತಿದೆ.

ಇದು ಬಡವರು, ದಮನಿತರು, ಆಸ್ತಿ, ಸಂಪತ್ತು ಮತ್ತು ಜ್ಞಾನವಿಲ್ಲದೆ ಇರುವವರು ನಾಗರಿಕ ಸಮಾಜಕ್ಕೆ ಅನರ್ಹರು ಎಂಬ ನವ ಉದಾರವಾದ ಸೋಷಿಯಲ್ ಡಾರ್ವಿನಿಸಂ ಭಾಗ. ಹಾಗೆಯೇ ಅಲ್ಪಸಂಖ್ಯಾತರು, ದಲಿತರು, ದಮನಿತರು ಬ್ರಾಹ್ಮಣೀಯ ಭಾರತದ ನಾಗರಿಕರಲ್ಲವೆಂಬ ಸಾವರ್ಕರ್‌ವಾದಿ ಹಿಂದುತ್ವದ ಭಾಗವೂ ಆಗಿದೆ.

ಆದ್ದರಿಂದ ಈ SIR/NRC ಸಂವಿಧಾನ ವಿರೋಧಿಯಾಗಿದೆ. ಸಾವರ್ಕರ್ ವಾದಿ-ನವ ಉದಾರವಾದಿ ಬಾಹ್ಮಣೀಯ ಹಿಂದೂ ರಾಷ್ಟ್ರದ ಭಾಗವಾಗಿದೆ.

ಆದ್ದರಿಂದ ದೇಶ ಮತ್ತೊಮ್ಮೆ ಎಚ್ಚೆತ್ತುಕೊಳ್ಳಬೇಕಿದೆ. ಮತ್ತೊಮ್ಮೆ 2019-20ರಲ್ಲಿ ಕಟ್ಟಿದಂತೆ ಬೃಹತ್ ಜನಚಳವಳಿಯನ್ನು ಕಟ್ಟಿ SIR ಮುಸುಕಿನ NRCಯನ್ನು ಸೋಲಿಸಲೇ ಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಿವಸುಂದರ್

contributor

Similar News