ಜಾತಿಗಳ ಸ್ಥಿತಿ-ಗತಿ ಸಮೀಕ್ಷೆ: ಕಂಟಕಗಳು, ಸಂಕಟಗಳು ಮತ್ತು ಆತಂಕಗಳು
ಈ ದೇಶದ ಜಾತಿ ರೋಗದ ಸ್ವರೂಪ ಮತ್ತು ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ಆಧರಿಸಿದ ರೋಗನಿವಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ಜಾತಿಗಳ ಸಾಮಾಜಿಕ, ಆರ್ಥಿಕ ಸಮೀಕ್ಷೆ ಅತ್ಯಗತ್ಯ. ಈ ಜಾತಿಗ್ರಸ್ಥ ಭಾರತೀಯ ಸಮಾಜದಲ್ಲಿ ಕನಿಷ್ಠ ಸಾಮಾಜಿಕ ನ್ಯಾಯವನ್ನು ಪಡೆದುಕೊಳ್ಳಬೇಕೆಂದರೂ ಅದು ಅತ್ಯಗತ್ಯ. ಪ್ರಮಾಣದಲ್ಲಿ ಕಡಿಮೆ ಇರುವ ಪ್ರಬಲ ಜಾತಿಗಳು ಹೇಗೆ ಪ್ರಮಾಣಕ್ಕಿಂತ ಜಾಸ್ತಿ ಸರಕಾರದ ಮತ್ತು ದೇಶದ ಸಂಪನ್ಮೂಲಗಳನ್ನು ಅನುಭವಿಸುತ್ತಿವೆ ಎಂಬುದರ ಸರಿಯಾದ ಚಿತ್ರಣ ಸಿಗಲೂ ಕೂಡಾ ಇಂಥಾ ಸಮೀಕ್ಷೆ ಅತ್ಯಗತ್ಯ.
ರಾಜ್ಯದಲ್ಲಿ ಮತ್ತೊಮ್ಮೆ ಸಾಮಾಜಿಕ ನ್ಯಾಯಕ್ಕೆ ಅತ್ಯಗತ್ಯವಾದ ಜನಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಮತ್ತು ಆರ್ಥಿಕ ಸಮೀಕ್ಷೆ ಪ್ರಾರಂಭವಾಗಿದೆ. ಆದರೆ ಅದಕ್ಕೆ ಸರಕಾರ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಎದ್ದಿರುವ ಪ್ರಶ್ನೆಗಳು ಮತ್ತು ಅದನ್ನೇ ನೆಪಮಾಡಿಕೊಂಡು ಬಲಿಷ್ಠ ಜಾತಿಗಳ ಪಟ್ಟಭದ್ರ ಹಿತಾಸಕ್ತಿಗಳು ಜಾತಿಗಣತಿಯನ್ನು ಮತ್ತೊಮ್ಮೆ ಮುಂದೂಡಲು ಮಾಡುತ್ತಿರುವ ಪ್ರಯತ್ನಗಳು ಕೂಡ ಆತಂಕವನ್ನೇ ಹುಟ್ಟಿಸುತ್ತಿವೆ. ಹಾಗೆಯೇ ಸಂಘಪರಿವಾರಿಗರು ಈಗ ನಿಧಾನಕ್ಕೆ ಜಾತಿಗಣತಿಯೇ ಹಿಂದೂ ಧರ್ಮವನ್ನು ಒಡೆಯುವ ಹುನ್ನಾರ ಎಂದು ಹುಯಿಲೆಬ್ಬಿಸಲು ಪ್ರಾರಂಭಿಸಿದ್ದಾರೆೆ. ಸಮೀಕ್ಷೆಯ ಸಾಂವಿಧಾನಿಕತೆ ಮತ್ತು ರೀತಿಯ ಬಗ್ಗೆ ಹೈಕೋರ್ಟ್ ಕೂಡ ತೀರ್ಮಾನ ನೀಡಲಿದೆ.
ಇದರಿಂದಾಚೆಗೆ ಎಲ್ಲಾ ಜಾತಿಗಳ ಸುಶಿಕ್ಷಿತ ಮಧ್ಯಮ ಮತ್ತು ಮೇಲ್ವರ್ಗಗಳು ಜಾತಿಗಣತಿಯನ್ನು ಆಯಾ ಜಾತಿಗಳ ಜನಸಂಖ್ಯಾ ಪ್ರಮಾಣವನ್ನು ಪತ್ತೆ ಹಚ್ಚುವ ಮತ್ತು ಅದನ್ನು ಆಧರಿಸಿ ತಮ್ಮ ತಮ್ಮ ರಾಜಕಾರಣವನ್ನು ಮಾಡುವ ಸಾಧನವನ್ನಾಗಿ ಮಾತ್ರ ಪರಿಭಾವಿಸುತ್ತಿರುವಂತೆ ಕಾಣುತ್ತಿದೆ. ಹೀಗಾಗಿ ಪ್ರತಿಯೊಂದು ಜಾತಿ-ಉಪಜಾತಿಗಳ ಕುಲೀನರು ಜಾತಿ ಸಮೀಕ್ಷೆಯು ವಿಮೋಚನೆಯ ಏಕೈಕ ಸಾಧನವೆಂಬಂತೆ ಪ್ರಚಾರ ಮಾಡುತ್ತಾ ತಮ್ಮ ತಮ್ಮ ಕುಲಬಾಂಧವರ ಸುತ್ತ ಪ್ರಬಲವಾದ ಜಾತಿಗೋಡೆಗಳನ್ನು ಕಟ್ಟುತ್ತಿದ್ದಾರೆ.
ಈ ಬೆಳವಣಿಗೆಗಳು ಮೂರು ವಿಷಯಗಳನ್ನು ಸಾಬೀತು ಮಾಡುತ್ತಿವೆ:
1. ಈ ಭಾರತೀಯ ಫ್ಯಾಶಿಸ್ಟರು ಕೇವಲ ಮುಸ್ಲಿಮ್ ವಿರೋಧಿಗಳಲ್ಲ, ಬದಲಿಗೆ ಜಾತಿ ಶ್ರೇಷ್ಠತಾವಾದಿಗಳು. ಅವರ ಹಿಂದೂ ಶ್ರೇಷ್ಠತೆಯ ಬುನಾದಿಯೇ ಜಾತಿವಾದ.
2. ಎರಡನೆಯದಾಗಿ ಪ್ರಬಲ ಜಾತಿಗಳ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಮನುವಾದಿಗಳ ನಡುವೆ ಪಕ್ಷಾತೀತವಾಗಿ ಇರುವ ಸೈದ್ಧಾಂತಿಕ ಏಕತೆ ಮತ್ತು ಸಾಮ್ಯತೆ.
3. ಜಾತಿಗಳ ಸಾಮಾಜಿಕ ಸ್ಥಿತಿಗತಿಯ ಸಮೀಕ್ಷೆಯ ಬಗ್ಗೆ ಕಾಂಗ್ರೆಸ್ ಸರಕಾರದೊಳಗೆ ಏಕಮತವೂ ಇಲ್ಲ, ಅರ್ಥಪೂರ್ಣವಾಗಿ ಜಾರಿ ಮಾಡಬೇಕೆಂಬ ಬದ್ಧತೆಯೂ ಕಾಣುತ್ತಿಲ್ಲ.
4. ಸಾಮಾಜಿಕ ನ್ಯಾಯವನ್ನು ಕೇವಲ ಜಾತಿ ಗಣತಿ ಮತ್ತು ಜಾತಿ ಮೀಸಲಾತಿಯಾಗಿ ಮಾತ್ರ ಕುಬ್ಜೀಕರಿಸುತ್ತಿರುವ ಆಯಾ ಜಾತಿಗಳ ಮಧ್ಯಮವರ್ಗಗಳು ಬರಲಿರುವ ದಿನಗಳಲ್ಲಿ ಅತ್ಯಗತ್ಯವಾಗಿ ಆಗಬೇಕಿರುವ ಜಾತಿ ವಿನಾಶ ಮತ್ತು ಜಾತಿ ಮೀರಿದ ದಮನಿತ ಸಮುದಾಯಗಳ ಏಕತೆಯ ಅಗತ್ಯಗಳನ್ನು ನಿರಾಕರಿಸುವಂತಹ ಅಪಾಯಕಾರಿ ನೆರೆಟಿವ್‌ಗಳನ್ನು ಕಟ್ಟುತ್ತಿವೆ.
ಈ ದೇಶದ ಜಾತಿ ರೋಗದ ಸ್ವರೂಪ ಮತ್ತು ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ಆಧರಿಸಿದ ರೋಗನಿವಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ಜಾತಿಗಳ ಸಾಮಾಜಿಕ, ಆರ್ಥಿಕ ಸಮೀಕ್ಷೆ ಅತ್ಯಗತ್ಯ. ಈ ಜಾತಿಗ್ರಸ್ಥ ಭಾರತೀಯ ಸಮಾಜದಲ್ಲಿ ಕನಿಷ್ಠ ಸಾಮಾಜಿಕ ನ್ಯಾಯವನ್ನು ಪಡೆದುಕೊಳ್ಳಬೇಕೆಂದರೂ ಅದು ಅತ್ಯಗತ್ಯ. ಪ್ರಮಾಣದಲ್ಲಿ ಕಡಿಮೆ ಇರುವ ಪ್ರಬಲ ಜಾತಿಗಳು ಹೇಗೆ ಪ್ರಮಾಣಕ್ಕಿಂತ ಜಾಸ್ತಿ ಸರಕಾರದ ಮತ್ತು ದೇಶದ ಸಂಪನ್ಮೂಲಗಳನ್ನು ಅನುಭವಿಸುತ್ತಿವೆ ಎಂಬುದರ ಸರಿಯಾದ ಚಿತ್ರಣ ಸಿಗಲೂ ಕೂಡಾ ಇಂಥಾ ಸಮೀಕ್ಷೆ ಅತ್ಯಗತ್ಯ. ಸ್ವಾತಂತ್ರ್ಯಾನಂತರವೂ ಬದಲಾಗದ ತಮ್ಮ ಸಾಮಾಜಿಕ ಯಾಜಮಾನ್ಯದ ಚಿತ್ರಣ ಸಿಗಬಾರದು ಮತ್ತು ಬದಲಾಗಬಾರದು ಎಂಬ ಉದ್ದೇಶದಿಂದಲೇ ಬಲಿಷ್ಠ ಜಾತಿಗಳ ಪಟ್ಟಭದ್ರರು ಮತ್ತು ಮನುವಾದಿ ಸಂಘಪರಿವಾರಿಗರು ಜಂಟಿಯಾಗಿ ಅದನ್ನು ವಿರೋಧಿಸುತ್ತಿದ್ದಾರೆ.
ಹೀಗಾಗಿಯೇ ಸಾಮಾಜಿಕ-ಆರ್ಥಿಕ ಸಮೀಕ್ಷೆಯು ಪರೋಕ್ಷವಾಗಿ ಪ್ರಬಲ ಜಾತಿಗಳ ಯಾಜಮಾನ್ಯಕ್ಕೆ ಹಾಕುತ್ತಿರುವ ಸವಾಲಾಗಿರುತ್ತದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ, ಸಿದ್ದರಾಮಯ್ಯನವರ ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ಅದನ್ನು ಅರ್ಥಪೂರ್ಣವಾಗಿ ಮಾಡುವ ಮತ್ತು ಅದನ್ನು ಆಧರಿಸಿ ಜಾತಿ ಯಾಜಮಾನ್ಯವನ್ನು ಅಲುಗಾಡಿಸುವ ರಾಜಕೀಯ ಮತ್ತು ಸೈದ್ಧಾಂತಿಕ ಬದ್ಧತೆ ಇದೆಯೇ?
ಕಾಂತರಾಜು ವರದಿಯನ್ನು ಸಮಾಧಿ ಮಾಡಿದ್ದು, ಪರಿಶಿಷ್ಟ ಜಾತಿಗಳ ಒಳಮೀಸಲಾತಿಯ ಬಗ್ಗೆ ನಾಗಮೋಹನ್ ದಾಸ್ ವರದಿಯನ್ನು ಸಾರದಲ್ಲಿ ತಿರಸ್ಕರಿಸಿ ಅಲೆಮಾರಿಗಳಿಗೆ ಅನ್ಯಾಯ ಮಾಡಿದ್ದು ಮತ್ತು ಈಗ ಹೊಸ ಸಮೀಕ್ಷೆಯ ಸಿದ್ಧತೆಯಲ್ಲಿ ಆಗಿರುವ ಸಾಲು ಸಾಲು ಲೋಪಗಳು ಮತ್ತು ತೋರುತ್ತಿರುವ ಅವಸರಗಳು ಅಂತಹ ಯಾವ ವಿಶ್ವಾಸವನ್ನೂ ನೀಡುತ್ತಿಲ್ಲ. ರಾಹುಲ್ ಗಾಂಧಿಯವರ ಅಖಿಲ ಭಾರತ ಕಾಂಗ್ರೆಸ್ ನೇತೃತ್ವದಲ್ಲೇ ಇವೆಲ್ಲಾ ಅವಘಡಗಳು ಸಂಭವಿಸಿರುವುದು ಕಾಂಗ್ರೆಸ್ ಪಕ್ಷದ ಜಾತಿ ಮತ್ತು ವರ್ಗ ಧೋರಣೆಯನ್ನಷ್ಟೇ ಮತ್ತೊಮ್ಮೆ ಸ್ಪಷ್ಟಪಡಿಸುತ್ತದೆ.
ದಮನಿತ ಜಾತಿಗಳೊಳಗಿನ ಮಧ್ಯಮ ವರ್ಗ ಸಾಮಾಜಿಕ ನ್ಯಾಯವನ್ನು ಕೇವಲ ಮೀಸಲಾತಿಯ ವಿಷಯವನ್ನಾಗಿ ಮಾಡಿರುವುದು ಸಹ ಒಂದು ಸ್ವಾರ್ಥವೇ ಆಗಿದೆ. ಇತ್ತೀೀಚಿನ ಒಳಮೀಸಲಾತಿಯ ವಿಷಯದ ಆಂಕಿಅಂಶಗಳನ್ನು ನೋಡಿದರೆ ಮೀಸಲಾತಿಯ ಶಕ್ತಿ ಮತ್ತು ಮಿತಿಗಳೆರಡೂ ಗೋಚರಿಸುತ್ತವೆ. ರಾಜ್ಯದಲ್ಲಿ ಒಟ್ಟಾರೆ 1.25 ಕೋಟಿ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಇದ್ದರೂ ಸರಕಾರದ ನೌಕರಿಯಲ್ಲಿರುವವರು ಕೇವಲ 1.41 ಲಕ್ಷ ಮಾತ್ರ. ಅಂದರೆ ಸರಕಾರಿ ನೌಕರಿ ಸಮುದಾಯದ ಶೇ. 1.5ರಷ್ಟು ಜನರಿಗೆ ಮಾತ್ರ ಸಿಕ್ಕಿದೆ. ಇದು ಕೂಡ ಖಾಸಗೀಕರಣ, ನವ ಉದಾರವಾದಿ ವಿತ್ತೀಯ ಶಿಸ್ತು ಇತ್ಯಾದಿ ಬಂಡವಾಳಶಾಹಿ ಪರ ನೀತಿಗಳಿಂದಾಗಿ ಬರಲಿರುವ ದಿನಗಳಲ್ಲಿ ಶೇ. 1ರಿಂದ ಕೆಳಗೆ ಇಳಿಯುತ್ತದೆ. ಒಟ್ಟಾರೆ ರಾಜ್ಯದ ಜನಸಂಖ್ಯೆ 7 ಕೋಟಿಯಾದರೆ ರಾಜ್ಯ ಸರಕಾರಿ ಉದ್ಯೋಗ ಹೆಚ್ಚೆಂದರೆ ಹತ್ತು ಲಕ್ಷ. ಸರಕಾರಿ ಶಿಕ್ಷಣ ಸಂಸ್ಥೆಗಳು ವೇಗವಾಗಿ ಮುಚ್ಚಿಕೊಂಡು ಶಿಕ್ಷಣವೂ ಹೆಚ್ಚು ಕಡಿಮೆ ಸಂಪೂರ್ಣವಾಗಿ ಖಾಸಗೀಕರಣಗೊಳ್ಳುತ್ತಿರುವ ಹೊತ್ತಿನಲ್ಲಿ ಶಿಕ್ಷಣದ ಮೀಸಲಾತಿಯೂ ವೇಗವಾಗಿ ಅರ್ಥಹೀನವಾಗುತ್ತಿದೆ. ಅದನ್ನು ಪಡೆಯಬಲ್ಲವರು ಸಹ ಸಮುದಾಯಗಳ ಶೇ.5-10 ಮಾತ್ರ ಆಗಿರುತ್ತಾರೆ.
ಹೀಗಿರುವಾಗ ಮೀಸಲಾತಿಯ ಸೌಲಭ್ಯವು ಎಂದೂ ದಕ್ಕದ ಶೇ.99 ಜನರ ಸಾಮಾಜಿಕ ನ್ಯಾಯದ ಪ್ರಶ್ನೆಯೇನು? ಉಚಿತ ಮತ್ತು ಕಡ್ಡಾಯ ಶಿಕ್ಷಣ, ಸಾರ್ವತ್ರಿಕ ಆರೋಗ್ಯ, ಖಾತರಿ ವಸತಿ, ಭೂಮಿ ಮತ್ತು ಇತರ ಸಂಪತ್ತಿನ ಸಮಾನ ಹಂಚಿಕೆ ಇಲ್ಲದೆ ಅರ್ಥಾತ್ ಆರ್ಥಿಕ ನ್ಯಾಯವಿಲ್ಲದೆ ಸಾಮಾಜಿಕ ನ್ಯಾಯ ಎಲ್ಲರಿಗೂ ದಕ್ಕುವುದೇ?
ದಮನಿತ ಸಮುದಾಯಗಳ ಮಧ್ಯಮ ವರ್ಗ ಮೀಸಲಾತಿಯಿಂದಾಚೆಗೆ ಈ ಪ್ರಶ್ನೆಗಳನ್ನು ಪರಿಗಣಿಸಲೂ ಸಿದ್ಧವಿಲ್ಲದಿರುವುದೇ ಆಳುವ ವರ್ಗಗಳು ಸಾಮಾಜಿಕ ಅನ್ಯಾಯವನ್ನು ಮುಂದುವರಿಸಲು ಕ್ಲೀನ್‌ಚಿಟ್ ಕೊಟ್ಟಂತಾಗಿರಬಹುದೇ?
ಅದೇನೇ ಇದ್ದರೂ ಭಾರತದಂತಹ ಜಾತಿಗ್ರಸ್ಥ ಸಮಾಜದಲ್ಲಿ ಜಾತಿ ವಿನಾಶವಾಗದೆ ಇಡೀ ದಮನಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಾಧ್ಯವೇ ಇಲ್ಲ. ಜಾತಿಯ ಸ್ಥಿತಿಗತಿಗಳನ್ನು ಅರಿಯದೇ ಜಾತಿ ವಿನಾಶವೂ ಸಾಧ್ಯವಿಲ್ಲ. ಜಾತಿಗಳ ಸಾಮಾಜಿಕ ಸ್ಥಿತಿಗತಿ ಸಮೀಕ್ಷೆಯಾಗದೆ ಅದರ ಮಾಹಿತಿ ದೊರೆಯುವುದೂ ಇಲ್ಲ.
ಹೀಗಾಗಿ ಜಾತಿ ವಿನಾಶಕ್ಕೂ ಜಾತಿ ಜನಗಣತಿ ಅತ್ಯಗತ್ಯ. ಹೀಗಾಗಿ ಏಕತೆಯ ಹೆಸರಲ್ಲಿ ಜಾತಿ ನಿರಾಕರಣೆ ಅಥವಾ ಜಾತಿಗಣತಿಯ ನಿರಾಕರಣೆ ಸರಿಯಾದುದಲ್ಲ. ಅದು ಯಥಾಸ್ಥಿತಿಯನ್ನು ಪೋಷಿಸುತ್ತದೆ.
ಆದರೆ ಜಾತಿಗಣತಿ ಮತ್ತು ಅದನ್ನು ಆಧರಿಸಿ ತೆಗೆದುಕೊಳ್ಳುವ ಕ್ರಮಗಳು ಜಾತಿಗಳ ಸದೃಢೀಕರಣಕ್ಕೆ ಕಾರಣವಾದರೆ ಪ್ರಬಲ ಜಾತಿಗಳ ಯಾಜಮಾನ್ಯವೇ ಮುಂದುವರಿಯುತ್ತದೆ. ಹೀಗಾಗಿ ಎಲ್ಲಾ ಸಮುದಾಯಗಳ ಪ್ರಗತಿಪರ ಶಕ್ತಿಗಳ ಮುಂದೆ ಈ ಸಾಮಾಜಿಕ ಸಮೀಕ್ಷೆಯನ್ನು ದೋಷ ಮುಕ್ತವೂ, ಜಾತಿ ವಿನಾಶಕ್ಕೆ ಪೂರಕವೂ ಆಗುವಂತೆ ಮಾಡುವ ಜವಾಬ್ದಾರಿಯೂ ಇದೆ.
ಸಾಮಾಜಿಕ ನ್ಯಾಯ ಪರಿಪೂರ್ಣವಾಗಿ ಸಿಗಬೇಕೆಂದರೆ ಆರ್ಥಿಕ ನ್ಯಾಯ ಮತ್ತು ಜಾತಿ ವಿನಾಶ ಎರಡನ್ನೂ ಒಟ್ಟಿಗೆ ಸಾಧಿಸಬೇಕಿದೆ.
ಅದೇನೇ ಇರಲಿ ರಾಜ್ಯದಲ್ಲೂ ಜಾತಿಗಳ ಸಾಮಾಜಿಕ ಪರಿಸ್ಥಿತಿ ಪ್ರಾರಂಭವಾಗಿರುವ ಹೊತ್ತಿನಲ್ಲಿ ಮತ್ತೊಮ್ಮೆ ಈ ಅಗತ್ಯ, ಅಪಾಯ ಮತ್ತು ಆತಂಕಗಳನ್ನು ಮುಖಾಮುಖಿಯಾಗುವ ಅಗತ್ಯವಿದೆ.
ಜಾತಿ ವಿವರಗಳಿಲ್ಲದ ಜನಗಣತಿಗಳು ಅರ್ಧ ಸತ್ಯಗಳು
ಈ ದೇಶದಲ್ಲಿ ಬ್ರಿಟಿಷರು 1871ರಲ್ಲಿ ಶುರು ಮಾಡಿದ ಮೊದಲ ಸೆನ್ಸಸ್ ನಿಂದಲೂ ಜನಗಣತಿಯ ಜೊತೆಗೆ ಜಾತಿ ಜನಗಣತಿಯೂ ಪ್ರಾರಭವಾದವು. 1931ರಲ್ಲಿ ಬ್ರಿಟಿಷರು ಮಾಡಿದ ಕೊನೆಯ ಜನಗಣತಿಯವರೆಗೂ ಜಾತಿಯನ್ನೂ ಕೂಡ ಸರ್ವೇ ಮತ್ತು ಎಣಿಕೆ ಮಾಡಲಾಗುತ್ತಿತ್ತು.
ಈ ಸೆನ್ಸಸ್‌ನ ಅಂಕಿಅಂಶಗಳು ಕೊಟ್ಟ ಗ್ರಹಿಕೆ ದೇಶದಲ್ಲಿ ದಮನಕ್ಕೊಳಗಾದ ಜಾತಿಗಳು ರಾಜಕೀಯವಾಗಿ ಚೈತನ್ಯವಂತರಾಗಲು ಮತ್ತು ರಾಜಕಾರಣದ ಗುತ್ತೇದಾರಿಕೆ ಹಿಡಿದಿದ್ದ ಹಿಂದೂ ಮೇಲ್ಜಾತಿ ಪಟ್ಟಭದ್ರರಿಗೆ ಸವಾಲು ಹಾಕಲು ಶಕ್ತಿ ನೀಡಿತು ಹಾಗೂ ಜಾತಿಗಳ ಐಡೆಂಟಿಟಿಯನ್ನು ಗಟ್ಟಿ ಮಾಡಿತು.
ಹಾಗೆಂದು ಸೆನ್ಸಸೇ ಜಾತಿಯನ್ನು ಹುಟ್ಟುಹಾಕಿತು ಎಂಬ ಅತಿರೇಕವನ್ನು ಕೆಲವು ಸಮಾಜಶಾಸ್ತ್ರಜ್ಞರು ಮಾಡುತ್ತಾರಾದರೂ, ಭಾರತದ ಇತಿಹಾಸದಲ್ಲಿ ಅಲ್ಪಸ್ವಲ್ಪ ಜಾತಿ ಚಲನೆ ಇದ್ದದ್ದು ಮಧ್ಯಸ್ಥ ಜಾತಿಗಳಾದ ಶೂದ್ರ ವರ್ಣಗಳಿಗೆ ಸೇರಿದ ಜಾತಿಗಳ ನಡುವೆ ಮಾತ್ರ. ಉಳಿದಂತೆ ಮೇಲ್‌ತುದಿಯಲ್ಲಿ ಯಾಜಮಾನ್ಯ ಬ್ರಾಹ್ಮಣ ಜಾತಿ ಹಾಗೂ ಅದರ ಕೆಳ ತುದಿಯಲ್ಲಿ ದಲಿತ ಜಾತಿಗಳು ಬ್ರಿಟಿಷರ ಸೆನ್ಸಸ್‌ಗೆ ಮುಂಚೆಯೇ ಘನೀಕೃತಗೊಂಡಿದ್ದವು. ಅಂಬೇಡ್ಕರ್ ಅವರು ಸವರ್ಣ ಹಿಂದೂ ರಾಜಕಾರಣಕ್ಕೆ ಸಮರ್ಥವಾಗಿ ಸವಾಲೆಸೆಯಲು ದಲಿತ ಅಸ್ಮಿತೆಯ ರಾಜಕಾರಣ ಬಳಸಿಕೊಳ್ಳಲು ಸಾಧ್ಯವಾದದ್ದು ಈ ಜಾತಿಗಣತಿಯಿಂದಲೇ.
ಸ್ವಾತಂತ್ರ್ಯಾನಂತರದಲ್ಲಿ 1951ರಿಂದ ಪ್ರಾರಂಭವಾದ ಸೆನ್ಸಸ್‌ನಿಂದ ಈವರೆಗೆ ಜನಗಣತಿಯ ಭಾಗವಾಗಿ ಜಾತಿಗಣತಿಯನ್ನು ಮಾಡುತ್ತಿಲ್ಲ. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟದ ಉದ್ದಕ್ಕೂ ಅಸ್ಪಶ್ಯ ಜಾತಿಗಳ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವ ಸಂಘರ್ಷ ಜೀವಂತವಾಗಿದ್ದುದರಿಂದ ಸೆನ್ಸಸ್‌ನಲ್ಲಿ ದಲಿತ ಮತ್ತು ಆದಿವಾಸಿಗಳ ಜಾತಿ ಗಣತಿ ಮಾತ್ರ ಮುಂದುವರಿದಿದೆ. ಅದರ ಜೊತೆಗೆ ಲಿಂಗ ಹಾಗೂ ಧರ್ಮಾಧಾರಿತ ಜನಗಣತಿಯೂ ನಡೆಯುತ್ತಿದೆ.
ಜಾತಿಗಣತಿಗೆ ಸುಪ್ರೀಂ ಕೋರ್ಟ್‌ನ ಪರೋಕ್ಷ ಆದೇಶ
1992ರಲ್ಲಿ ಸುಪ್ರೀಂ ಕೋರ್ಟ್‌ನ ಒಂಭತ್ತು ನ್ಯಾಯಾಧೀಶರ ಪೀಠವು ಮಂಡಲ್ ವರದಿಯಾಧಾರಿತ ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯಿತು ಮತ್ತು ಪ್ರತೀ ರಾಜ್ಯಗಳಲ್ಲಿ ಒಂದು ಶಾಶ್ವತ ಹಿಂದುಳಿದ ವರ್ಗದ ಆಯೋಗದ ನೇಮಕಾತಿಗೆ ಆದೇಶಿಸಿತು ಹಾಗೂ ಕಾಲಕಾಲಕ್ಕೆ ಹಿಂದುಳಿದ ಮೀಸಲಾತಿಯ ಪಟ್ಟಿಯನ್ನು ತಳಮಟ್ಟದ ಮಾಹಿತಿಯನ್ನು ಆಧರಿಸಿ ಪರಿಷ್ಕರಣೆ ಮಾಡಲು ಆದೇಶಿಸಿತು.
ಆ ನಂತರದಲ್ಲಿ ರಾಜ್ಯಗಳು ನೀಡಿದ ಹಿಂದುಳಿದ ವರ್ಗದ ಮೀಸಲಾತಿಯ ಪಟ್ಟಿಯ ಬಗ್ಗೆ ವಿವಾದ ಉಂಟಾದಾಗಲೆಲ್ಲಾ ಕೋರ್ಟುಗಳು ಮೀಸಲಾತಿ ಫಲವನ್ನು ಪಡೆದುಕೊಳ್ಳಲಿರುವ ಜಾತಿಗಳು ಹಿಂದುಳಿದಿವೆಯೇ ಮತ್ತು ಅವುಗಳ ಪ್ರಮಾಣಕ್ಕೆ ಅನುಸಾರವಾಗಿ ಪ್ರಾತಿನಿಧ್ಯ ಪಡೆದಿವೆಯೇ ಇಲ್ಲವೇ ಎಂಬ ಬಗ್ಗೆ ತಳಮಟ್ಟದ ವೈಜ್ಞಾನಿಕ ಮಾಹಿತಿ ಇದ್ದರೆ ಮಾತ್ರ ಅನುಮೋದಿಸಲು ಇಲ್ಲದಿದ್ದರೆ ತಿರಸ್ಕರಿಸಲು ಪ್ರಾರಂಭಿಸಿದವು.
2010ರಲ್ಲಿ ಯುಪಿಎ ಸರಕಾರ ಜಾತಿ ಜನಗಣತಿ ಮತ್ತು ಜಾತಿವಾರು ಹಿಂದುಳಿರುವಿಕೆಯ ಸರ್ವೇಗಳನ್ನು ನಡೆಸಿತ್ತಾದರೂ ಅದರ ಫಲಿತಾಂಶಗಳನ್ನು ಬಿಡುಗಡೆ ಮಾಡಲಿಲ್ಲ. ಅದಕ್ಕೆ ಜಾತಿಯನ್ನು ನಮೂದಿಸುವಾಗ ಉಪಜಾತಿಗಳ ಮತ್ತು ಬಳಿಗಳ ಹೆಸರನ್ನು ಹೇಳಿರುವುದರಿಂದ ಲಕ್ಷಾಂತರ ಹೆಸರುಗಳು ಜಾತಿಗಳ ಹೆಸರಲ್ಲಿ ನಮೂದಾಗಿವೆ ಎಂಬ ಸಬೂಬನ್ನು ನೀಡಲಾಗುತ್ತಿದೆ. ಆದರೂ ಅದನ್ನೇ ಬಹಿರಂಗ ಪಡಿಸಲು ಏನು ಅಡ್ಡಿ?
2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲಂತೂ ಜಾತಿ ಜನಗಣತಿಯನ್ನು ಮೂಲೆಗೆ ಸರಿಸಿತು. ಮಾತ್ರವಲ್ಲ, 2021ರ ಜುಲೈನಲ್ಲಿ ಸಂಸತ್ತಿಗೆ ನೀಡಿದ ಉತ್ತರವೊಂದರಲ್ಲಿ ತಮ್ಮ ಸರಕಾರ ಯಾವ ಕಾರಣಕ್ಕೂ ಜಾತಿ ಜನಗಣತಿ ಮಾಡುವುದಿಲ್ಲ ಎಂದು ಘೋಷಿಸಿತು. ಈ ಮಧ್ಯೆ ಬಿಹಾರದ ಜಾತಿ ಜನಗಣತಿಯ ಬಗ್ಗೆ ಬಿಹಾರದ ಬಿಜೆಪಿ ಬೆಂಬಲ ವ್ಯಕ್ತಪಡಿಸಿದರೂ, ಅದರ ಹೈಕಮಾಂಡ್ ವಿರೋಧಿಸುತ್ತಿದೆ. ಜಾತಿ ಜನಗಣತಿಯು ವ್ಯಕ್ತಿಯ ಖಾಸಗಿತನದ ಉಲ್ಲಂಘನೆ ಎಂಬ ನೆಪವೊಡ್ಡಿ ಬಿಹಾರದ ಜನಗಣತಿಯನ್ನು ವಿರೋಧಿಸಿ ಬಿಜೆಪಿ ಬೆಂಬಲಿಗರೇ ಕೋರ್ಟ್ ಮೆಟ್ಟಿಲು ಹತ್ತಿದ್ದರು.
ಅಂದರೆ ಸಾರಾಂಶದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಪಟ್ಟಂತೆ ಈವರೆಗೆ ಕೋರ್ಟುಗಳು ಜಾತಿ ಜನಗಣತಿ ಮತ್ತು ಜಾತಿವಾರು ಹಿಂದುಳಿದಿರುವಿಕೆಯ ಸಮೀಕ್ಷೆಯನ್ನು ಮಾಡಬೇಕೆಂದು, ಆ empirical data ಆಧರಿಸಿಯೇ ಮೀಸಲಾತಿ ಪ್ರಮಾಣ ನಿಗದಿ ಮಾಡಬೇಕೆಂದು ಆದೇಶಿಸುತ್ತಿತ್ತು ಎಂದಾಗಲಿಲ್ಲವೇ?
ಹಾಗಿದ್ದಲ್ಲಿ ಕೇಂದ್ರ ಸರಕಾರವೂ ಕಾಲಕಾಲಕ್ಕೆ ತನ್ನ ಮೀಸಲಾತಿಯನ್ನು ಪರಿಷ್ಕರಿಸುವ ಮುನ್ನ ದೇಶಾದ್ಯಂತ ಜಾತಿ ಜನಗಣತಿ ಮಾಡಬೇಕೆಂದು ಸುಪ್ರೀಂ ಕೋರ್ಟ್ ಏಕೆ ಕೇಂದ್ರ ಸರಕಾರಕ್ಕೆ ಆದೇಶಿಸಲಿಲ್ಲ?
ಬಿಹಾರ-ತೆಲಂಗಾಣ ಬಯಲು ಮಾಡಿದ ಮಿಥ್ಯೆಗಳು
1. ಹಿಂದುಳಿದವರು ಶೇ.27 ಅಲ್ಲ, ಶೇ.50ಕ್ಕಿಂತ ಜಾಸ್ತಿ
ಈ ಮಧ್ಯೆ ಬಿಹಾರ ಮತ್ತು ತೆಲಂಗಾಣ ಸರಕಾರಗಳು ಆಯಾ ರಾಜ್ಯಗಳ ಸಮುದಾಯಗಳ ಮತ್ತು ವ್ಯಕ್ತಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡಿವೆ. ಅದರ ಫಲಿತಾಂಶಗಳು ಈವರೆಗಿನ ಹಲವಾರು ಮಿಥ್ಯೆಗಳನ್ನು ಒಡೆದುಹಾಕಿವೆ.
ಬಿಹಾರದ 13 ಕೋಟಿ ಜನಸಂಖ್ಯೆಯಲ್ಲಿ ಶೇ. 63ರಷ್ಟು ಜನತೆ ಹಿಂದುಳಿದ ಜಾತಿಗಳಿಗೆ ಸೇರಿದವರು. ಅದೇ ರೀತಿ ತೆಲಂಗಾಣದ ಹಿಂದುಳಿದ ಜಾತಿಗಳ ಜನಸಂಖ್ಯೆಯೂ ಶೇ. 60ರ ಸಮೀಪವಿದೆ. ಅದರ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಸೇರಿಸಿದರೆ ಒಟ್ಟಾರೆ ಹಿಂದುಳಿದವರು ಶೇ. 85. ಆದರೆ ಸುಪ್ರೀಂ ವಿಧಿಸಿದ ಶೇ. 50 ಒಟ್ಟಾರೆ ಮೇಲ್ಮಿತಿಗಿಂತ ಶೇ. 10-15ರಷ್ಟು ಜಾಸ್ತಿ. ಆದರೂ ಶೇ. 50ರ ಮೇಲ್ಮಿತಿ ಕಾರಣದಿಂದ ಅವರಿಗೆ ದಕ್ಕುತ್ತಿರುವ ಮೀಸಲಾತಿ ಕೇವಲ ಶೇ. 27.
ಆದರೆ ಬಿಹಾರ ಮತ್ತು ತೆಲಂಗಾಣದ ಜನಗಣತಿಗಳು ತೋರಿಸಿಕೊಟ್ಟಿರುವಂತೆ ಮೇಲ್ಜಾತಿಗಳ ಜನಸಂಖ್ಯೆ ಕೇವಲ ಶೇ. 15. ಆದರೆ ಇತ್ತೀಚೆಗೆ ಜಾರಿಯಾದ ಇಡಬ್ಲ್ಯುಎಸ್ ಮೀಸಲಾತಿಯ ಕಾರಣದಿಂದ ಈ ಶೇ. 15ರಷ್ಟಿರುವ ಸಮುದಾಯಕ್ಕೆ ಶೇ. 10ರಷ್ಟು ಮೀಸಲಾತಿ ಸಿಗುತ್ತದೆ. ಇದಕ್ಕಿಂತ ಸಾಮಾಜಿಕ ಅನ್ಯಾಯ ಮತ್ತೊಂದು ಇರಬಹುದೇ?
2. ಹಿಂದುಳಿದ ವರ್ಗಗಳಲ್ಲಿನ ಬಲಾಢ್ಯರೇ ಫಲಾನುಭವಿಗಳು
ಬಿಹಾರ ಜಾತಿಗಣತಿ ಹೊರತಂದಿರುವ ಮತ್ತೊಂದು ಮುಖ್ಯ ಅಂಶ ಒಟ್ಟಾರೆಯಾಗಿ ಹಿಂದುಳಿದ ವರ್ಗಗಳ ಪ್ರಮಾಣ ಜನಸಂಖ್ಯೆಯ ಶೇ. 63ರಷ್ಟಿದ್ದರೂ, ಅದರಲ್ಲಿ ಅತ್ಯಂತ ಹಿಂದುಳಿದವರ ಪ್ರಮಾಣ ಶೇ. 36. ಸಾಪೇಕ್ಷವಾಗಿ ಈ ಸಮುದಾಯಗಳಿಗಿಂತ ಮುಂದುವರಿದ ಹಿಂದುಳಿದ ಜಾತಿಗಳ ಪ್ರಮಾಣ ಶೇ. 27. ಅಂದರೆ ಸಾಪೇಕ್ಷವಾಗಿ ಬಲಿಷ್ಠ ಹಿಂದುಳಿದ ಜಾತಿಗಳಿಗಿಂತ ಅತ್ಯಂತ ಹಿಂದುಳಿದ ಜಾತಿಗಳ ಪ್ರಮಾಣ ಶೇ. 9ರಷ್ಟು ಜಾಸ್ತಿ. ಆದರೂ ಬಿಹಾರ ಮತ್ತು ತೆಲಂಗಾಣ ಎರಡೂ ಅರುಹುವಂತೆ ಹಿಂದುಳಿದ ಮೀಸಲಾತಿಯ ಪ್ರಧಾನ ಫಲಾನುಭವಿಗಳು ಬಲಾಢ್ಯ ಹಿಂದುಳಿದವರೇ. ಅವರೇ ಜಾತಿಗಣತಿಯಿಂದ ದೇಶ ಒಡೆಯುತ್ತದೆ ಎಂದು ಹುಯಿಲೆಬ್ಬಿಸುತ್ತಿರುವವರು ಕೂಡ.
ಆ ಅರ್ಥದಲ್ಲಿ ಈ ಪ್ರಬಲ ಜಾತಿಗಳ ಜಾತಿ ದುರಭಿಮಾನಿಗಳು ಬ್ರಾಹ್ಮಣ್ಯದ ಗೇಟ್ ಕೀಪರ್‌ಗಳಲ್ಲ. ಬದಲಿಗೆ ಸ್ಟೇಕ್ ಹೋಲ್ಡರ್‌ಗಳೇ ಆಗಿದ್ದಾರೆ ಮತ್ತು ಅದೇ ಕಾರಣಕ್ಕೆ ಹಿಂದುತ್ವ ರಾಜಕಾರಣದ ಬೆಂಬಲಿಗರೂ ಆಗಿದ್ದಾರೆ.
ಈ ಸನ್ನಿವೇಶದಲ್ಲಿ ಜಾತಿ ಗಣತಿಯಿಂದ ಹೊರಬರುವ ಸತ್ಯಾಂಶಗಳಿಂದ ಹಿಂದುಳಿದ ವರ್ಗದ ರಾಜಕಾರಣ ಮತ್ತಷ್ಟು ಸಾಮಾಜಿಕ ನ್ಯಾಯದ ಕಡೆ ಚಲಿಸಬೇಕೆಂದರೆ ಅತ್ಯಂತ ಹಿಂದುಳಿದ ವರ್ಗಗಳಿಗೆ ಆಗಿರುವ ವಂಚನೆಯನ್ನು ಅಂಗೀಕರಿಸುವ ನ್ಯಾಯಪ್ರಜ್ಞೆಯನ್ನು ಪ್ರದರ್ಶಿಸಬೇಕಾಗುತ್ತದೆ.
3. ಮುಸ್ಲಿಮರ ಜನಸಂಖ್ಯಾ ಇಳಿಕೆಯ ವೇಗ ಹೆಚ್ಚಿದೆ
2011ರ ಜನಗಣತಿಯ ಪ್ರಕಾರ ಬಿಹಾರದ ಜನಸಂಖ್ಯೆಯಲ್ಲಿ ಹಿಂದೂಗಳ ಪ್ರಮಾಣ ಶೇ. 82.7 ಇದ್ದದ್ದು 2023ರ ಜಾತಿ ಜನಗಣತಿಯ ಪ್ರಕಾರ 81.99ಕ್ಕೆ ಇಳಿದಿದೆ. ಅಂದರೆ 2011ಕ್ಕೆ ಹೋಲಿಸಿದರೆ ಶೇ. 0.71ರಷ್ಟು ಇಳಿದಿದೆ.
ಅದೇ ರೀತಿ 2011ರ ಜನಗಣತಿಯ ಪ್ರಕಾರ ಬಿಹಾರದ ಜನಸಂಖ್ಯೆಯಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 16.9ರಷ್ಟಿತ್ತು. 2023ರ ಜನಗಣತಿಯ ಪ್ರಕಾರ ಅದು ಶೇ. 17.7ಕ್ಕೆ ಏರಿದೆ. ಅಂದರೆ ಶೇ. 0.8ರಷ್ಟು ಮಾತ್ರ ಏರಿಕೆ ಕಂಡಿದೆ.
ಹೀಗಾಗಿ ಒಟ್ಟಾರೆ ಇಂದಿನ ಜನಸಂಖ್ಯಾ ಪ್ರಮಾಣವನ್ನು ನೋಡಿದರೆ ಹಿಂದೂಗಳ ಜನಸಂಖ್ಯೆ ಕುಸಿದು, ಮುಸ್ಲಿಮರ ಜನಸಂಖ್ಯೆ ಏರಿದಂತೆ ಕಂಡು ಬಂದರೂ ಐತಿಹಾಸಿಕವಾಗಿ ನೋಡಿದರೆ ಮುಸ್ಲಿಮರ ಜನಸಂಖ್ಯಾ ಏರಿಕೆಯ ಪ್ರಮಾಣ ಹಿಂದೂಗಳಿಗಿಂತ ವೇಗವಾಗಿ ಕುಸಿಯುತ್ತಿದೆ.
4. ಮುಸ್ಲಿಮರ ಒಳಗೂ ಜಾತಿ ಆಧಾರಿತ ಹಿಂದುಳಿಯುವಿಕೆಗಳಿವೆ
ಇದರ ಜೊತೆಜೊತೆಗೆ ಮುಸ್ಲಿಮರು ಒಂದು ಅವಿಭಜಿತ ಘಟಕವಲ್ಲ ಹಾಗೂ ಮುಸ್ಲಿಮ್ ಸಮುದಾಯದಲ್ಲೂ ಅನ್ಸಾರಿ, ಸುರ್ಜಾಪುರಿ, ಮನ್ಸುರಿಗಳಂಥ ಮುಸ್ಲಿಮ್ ಜಾತಿಗಳು ಅಶ್ರಫ್ ಕುಲಗಳಿಗೆ ಸೇರಿರುವ ಶೇಕ್ ಮುಸ್ಲಿಮರಿಗಿಂತ ಅತ್ಯಂತ ಹಿಂದುಳಿದಿದ್ದರೆಂಬ ಸತ್ಯವನ್ನು ಹೊರಗೆಡವಿದೆ. ಈ ಬಗೆಯ ಹಿಂದುಳಿದ ಪಾಸ್ಮಾಂದ ಮುಸ್ಲಿಮರ ಸಂಖ್ಯೆ ಬಿಹಾರದ ಮುಸ್ಲಿಮರಲ್ಲಿ ಶೇ. 75ಕ್ಕಿಂತ ಹೆಚ್ಚು. ಹೀಗಾಗಿ ಸಾಮಾಜಿಕ ನ್ಯಾಯದ ರಾಜಕಾರಣ ಪಾಸ್ಮಾಂದ ಮುಸ್ಲಿಮರಿಗೆ ಆದ್ಯತೆಯ ಮೇಲೆ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕಿದೆ.
ಕರ್ನಾಟಕದಲ್ಲೂ ವೈಜಾನಿಕ ಜಾತಿಸ್ಥಿತಿಗತಿ ಸಮೀಕ್ಷೆ ನಡೆದರೆ ರಾಜ್ಯದ ಸಾಮಾಜಿಕ ಸತ್ಯಗಳು ಇದಕ್ಕಿಂತ ಭಿನ್ನವಾಗಿಯೇನೂ ಇರುವುದಿಲ್ಲ.
ಸಾಮಾಜಿಕ ಮತ್ತು ಆರ್ಥಿಕ ನ್ಯಾಯವೆಂಬ ಅವಳಿ-ಜವಳಿ
ಒಟ್ಟಾರೆಯಾಗಿ ಸಂವಿಧಾನದ ಆಶಯಗಳಾದ ಸಾಮಾಜಿಕ ನ್ಯಾಯ ಸಾಕಾರವಾಗಬೇಕೆಂದರೆ:
1. ಸಾಮಾಜಿಕ ಅನ್ಯಾಯದ ವೈಜ್ಞಾನಿಕ ಅಳತೆಯಾಗಬೇಕು. ಅರ್ಥಾತ್ ಜಾತಿಗಳ ಸಾಮಾಜಿಕ ಸ್ಥಿತಿಗತಿಗಳ ವೈಜ್ಞಾನಿಕ ಸಮೀಕ್ಷೆಯಾಗಲೇಬೇಕು.
2. ಶೇ.50ರ ಮೀಸಲಾತಿ ಮೇಲ್ಮಿತಿ ತೆಗೆಯಬೇಕು.
4. ಜನಸಂಖ್ಯಾ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿಯಾಗಬೇಕು. ಮೀಸಲಾತಿಯಲ್ಲಿ ಒಳಮೀಸಲಾತಿಯಾಗಬೇಕು.
4. ಖಾಸಗಿಯಲ್ಲೂ ಮೀಸಲಾತಿಯಾಗಬೇಕು.
5. ಕ್ರಮೇಣವಾಗಿ ಖಾಸಗಿಯೆಲ್ಲ ಸಾರ್ವಜನಿಕವಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ,
6.ದೇಶದ ಸಂಪತ್ತಿನಲ್ಲಿ ಕಟ್ಟ ಕಡೆಯವರಿಗೂ ಸಮಪಾಲಿರುವ ಆರ್ಥಿಕ ನ್ಯಾಯ ಸಂಹಿತೆಗೆ ಹೋರಾಡಬೇಕು.
ಈ ವರ್ಗ ಸಂಘರ್ಷ ನಡೆಯದೆ ಸಾಮಾಜಿಕ ನ್ಯಾಯವು ತಳಸಮುದಾಯದ ಮಧ್ಯಮವರ್ಗದಾಚೆಗೆ ದಾಟಿ ಕಟ್ಟಕಡೆಯವರಿಗೆ ಮುಟ್ಟುವುದೇ ಇಲ್ಲ.