ತೆರಿಗೆ ತಾರತಮ್ಯ ಮತ್ತು 'ಬಂಡವಾಳಶಾಹಿ ಭಾರತ ಯೂನಿಯನ್'

ವಾಸ್ತವದಲ್ಲಿ ದಕ್ಷಿಣ ರಾಜ್ಯಗಳ ಹೆಚ್ಚಿನ ತಕರಾರು ಇರುವುದು ಸೆಸ್ ಹೆಚ್ಚಿಸಿ ರಾಜ್ಯಗಳ ಪಾಲು ಕಡಿಮೆ ಮಾಡಿರುವ, ಕೇಂದ್ರದಿಂದ ರಾಜ್ಯಗಳಿಗೆ ಕೇಂದ್ರಾನುದಾನಿತ ಯೋಜನೆಗಳ ಮೂಲಕ ಹರಿದು ಬರಬೇಕಾದ ಕೇಂದ್ರದ ಪಾಲನ್ನು ಕಡಿತಗೊಳಿಸಿರುವ, ಜಿಎಸ್ಟಿ ಯಲ್ಲಿ ರಾಜ್ಯಗಳ ಪಾಲನ್ನು ಕಾಲಕ್ಕೆ ಸರಿಯಾಗಿ ಪಾವತಿಸದಿರುವ, ಜಿಎಸ್ಟಿ ಪರಿಹಾರವನ್ನು ಹಂಚಲು ತಾರತಮ್ಯ ಮಾನದಂಡಗಳನ್ನು ಅನುಸರಿಸುವ ಮತ್ತು ರಾಜ್ಯಗಳು ಹೆಚ್ಚಿನ ಸಾಲವನ್ನು ಪಡೆಯಲು ಮತ್ತು ಕೇಂದ್ರಾನುದಾನಿತ ಯೋಜನೆಗಳನ್ನು ಜಾರಿಗೊಳಿಸಲು ಕೇಂದ್ರದ ಷರತ್ತನ್ನು ಪಾಲಿಸಬೇಕೇಂಬ ಶರತ್ತುಗಳನ್ನು ವಿಧಿಸುತ್ತಿರುವ ಮೋದಿ ಸರ್ಕಾರದ ಸರ್ವಾಧಿಕಾರಿ ನಿರ್ವಹಣೆಯ ಬಗ್ಗೆ ಆಗಿದೆ.

Update: 2024-02-15 04:36 GMT

Photo: twitter.com/karnatakacongress 

ದಕ್ಷಿಣ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಅವುಗಳ ತೆರಿಗೆ ಪಾಲನ್ನು ಕೊಡದೆ ತಾರತಮ್ಯ ಮಾಡುತ್ತಿದೆ ಎಂಬ ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳ ಅಸಮಾಧಾನವು ಈಗ ರಾಜಕೀಯ ಸ್ವರೂಪವನ್ನು ತೆಗೆದುಕೊಳ್ಳುತ್ತಿದೆ.

" ನನ್ನ ತೆರಿಗೆ - ನನ್ನ ಹಕ್ಕು" ಎಂಬ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಅಭಿಯಾನವನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ ಇದು ಎಂಥ ದೇಶವಿಭಜಕ ಭಾಷೆ ಎಂದು ಕಿಡಿಕಾರಿದ್ದಾರೆ.

ಭಾರತದಿಂದ ಗುಜರಾತಿಗೆ ಹಣಕಾಸು ಪ್ರತ್ಯೇಕತೆ ಬಯಸಿದ್ದ ಮೋದಿ

ಆದರೆ ಇದೇ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ "ಬೇಕಿದ್ದರೆ ಕೇಂದ್ರವು ಒಂದು ವರ್ಷಗಳ ಕಾಲ ಗುಜರಾತಿಗೆ ಒಂದು ನಯಾ ಪೈಸಾ ಕೊಡುವುದು ಬೇಡ. ಹಾಗೆಯೇ ಗುಜರಾತಿನಿಂದಲೂ ಒಂದು ಪೈಸೆ ಸಂಗ್ರಹಿಸುವುದು ಬೇಡ" ಎಂದು ಭಾರತದ ಒಕ್ಕೂಟದಿಂದ ಫ಼ಿಸ್ಕಲ್ ವ್ಯವಹಾರಗಳಲ್ಲಿ ಹೊರಗುಳಿಯುವ ಮಾತನಾಡಿದ್ದರು. ಕೇಂದ್ರವು ಹಣಕಾಸು ತಾರತಮ್ಯ ಮುಂದುವರೆಸಿದರೆ ದಕ್ಷಿಣ ರಾಜ್ಯಗಳು ಪ್ರತ್ಯೇಕ ದೇಶದ ಬಗ್ಗೆ ಯೋಚಿಸುವಂತೆ ಮಾಡುತ್ತದೆ ಎಂದ ಸಂಸದ ಡಿ.ಕೆ. ಸುರೇಶರ ಮಾತಿಗಿಂತ ಮುಖ್ಯಮಂತ್ರಿಯಾಗಿ ಮೋದಿಯಾಡಿದ್ದ ಈ ಮಾತು ಇನ್ನು ಹೆಚ್ಚಿನ ವಿಭಜಕಾರಿಯಾಗಿಲ್ಲವೇ?

ಆದರೆ ಮೋದಿಯ ತುತ್ತೂರಿ ಮಾಧ್ಯಮಗಗಳಿಗೆ ಜಾಣ ಮರೆವು. ಅಷ್ಟೇ ಅಲ್ಲ. ಮೋದಿಯವರು 2013 ರಲ್ಲಿ 14 ನೇ ಹಣಕಾಸು ಅಯೋಗದ ಜೊತೆಗೆ ಅಧಿಕೃತವಾದ ಸಭೆಯಲ್ಲಿ ಭಾಗವಹಿಸಿ ಕೇಂದ್ರವು ರಾಜ್ಯಗಳಿಗೆ ಶೇ. 50 ರಷ್ಟು ಹಣಕಾಸು ವರ್ಗಾವಣೆ ಮಾಡಬೇಕು ಮತ್ತು ಅಭಿವೃದ್ಧಿ ಹೊಂದಿರುವ ರಾಜ್ಯಗಳ ಮೇಲೆ ಬಡರಾಜ್ಯಗಳ ಅಬಿವೃದ್ಧಿಯ ಹೊರೆ ಹೇರಬಾರದೆಂದು ಆಗ್ರಹಿಸಿದ್ದರು!

ಅಲ್ಲದೆ ಹಣಕಾಸು ಹಂಚಿಕೆಯ ಮಾನದಂಡಗಳಲ್ಲಿ ಬಡರಾಜ್ಯಗಳ ಪಾಲನ್ನು ಹೆಚ್ಚಿಸುವ ಜನಸಂಖ್ಯಾ ಆಧಾರಿತ ತೂಕಪ್ರಮಾಣವನ್ನು ಈಗಿರುವ ಶೇ. 50 ರಿಂದ ಶೇ. 25 ಕ್ಕೆ ಇಳಿಸಬೇಕೆಂದು ಆಗ್ರಹಿಸಿದ್ದರು. ಅರ್ಥಾತ್ ಬಡರಾಜ್ಯಗಳಿಗೆ ಕೊಡುತ್ತಿರುವ ಕೇಂದ್ರದ ತೆರಿಗೆ ಪಾಲನ್ನು ಅರ್ಧಕ್ಕರ್ಧ ಇಳಿಸುವ ಪ್ರಸ್ತಾಪವನ್ನು ಮಾಡಿದ್ದರು.

(https://www.narendramodi.in/central-finance-commission-should-revise-the-norms-for-allocation-of-funds-to-states-shri-modi-5665)

ಈಗ ತೆರಿಗೆ ನ್ಯಾಯಕ್ಕಾಗಿ ಹೋರಾಡುತ್ತಿರುವ ಯಾವುದೇ ಬಿಜೆಪಿಯೇತರ ಮುಖ್ಯಮಂತ್ರಿಯೂ ಭಾರತದ ಬಡರಾಜ್ಯಗಳ ಬಗ್ಗೆ ಇಂಥಾ ಅವಹೇಳನಾಕಾರಿ ಮಾತುಗಳನ್ನಾಡಿಲ್ಲ.

ಆದರೆ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಕೂಡಲೇ ಮೋದಿ ಆಗಿನ ಹಣಕಾಸುಅ ಅಯೋಗದ ಅಧ್ಯಕ್ಷ ವೈ.ವಿ ರೆಡ್ಡಿಯವರನ್ನು ಕರೆದು ರಾಜ್ಯಗಳಿಗೆ ಹಂಚುತ್ತಿರುವ ತೆರಿಗೆ ಪ್ರಮಾಣವನ್ನು ಶೇ. 42 ರಿಂದ 32 ಕ್ಕಿಳಿಸಲು ಸೂಚಿಸಿದ್ದರೆಂಬ ವಿಷಯವನ್ನು ನೀತಿ ಅಯೋಗದ ಮಾಜಿ ಸಿಇಒ ಹೇಳಿರುವುದನ್ನು ರಿಪೊರ್ಟರ್ಸ್ ಕಲೆಕ್ಟಿವ್ ಪತ್ರಿಕೆ ತನ್ನ ತನಿಖಾ ವರದಿಯಲ್ಲಿ ಬಯಲು ಮಾಡಿದೆ.

(https://www.reporters-collective.in/newsletters/modi-secretly-tried-to-massively-cut-tax-funding-to-states)

ಆದರೆ ಆಗ ಹಣಕಾಸು ಅಯೋಗದ ಅಧ್ಯಕ್ಷರಾಗಿದ್ದ ವೈವಿ ರೆಡ್ಡಿಯವರು ಅದನ್ನು ಒಪ್ಪದಿದ್ದರೂ ನಂತರದ ಅಧ್ಯಕ್ಷ ಎನ್‌ಕೆ ಸಿಂಗ್ ಅದನ್ನು ಪಾಲಿಸಿದರು.

ಹಣಕಾಸು ಅಯೋಗವೋ? ಫ಼ಿಸ್ಕಲ್ ಸರ್ವಾಧಿಕಾರದ ಸಾಧನವೋ?

ರಾಜ್ಯಗಳು ಜಿಎಸ್‌ಟಿ ಮತ್ತಿತರ ಸೀಮಿತ ತೆರಿಗೆ ಮೂಲವನ್ನು ಹೊಂದಿವೆ. ಆದರೆ ಕೇಂದ್ರಕ್ಕೆ ಜಿಎಸ್‌ಟಿಯಲ್ಲಿ ಒಂದು ಪಾಲಿನ ಜೊತೆಗೆ ಪ್ರತ್ಯಕ್ಷ ತೆರಿಗೆಳನ್ನು ಸಂಪೂರ್ಣವಾಗಿ ಕಬಳಿಸುತ್ತದೆ. ಹೀಗಾಗಿ ಒಟ್ಟಾರೆ ತೆರಿಗೆ ಅದಾಯದಲ್ಲಿ ಶೇ. 70 ರಷ್ಟು ಪಾಲು ಕೇಂದ್ರಕ್ಕೆ ಲಭಿಸುತ್ತಿದ್ದರೆ, ಕೇವಲ ಶೇ. 30 ರಷ್ಟು ತೆರಿಗೆ ಮಾತ್ರ ರಾಜ್ಯಗಳಿಗೆ ದಕ್ಕುತ್ತದೆ.

ಆದರೆ ಇದಕ್ಕೆ ತದ್ವಿರುದ್ಧವಾಗಿ ಒಟ್ಟಾರೆ ಜನಕಲ್ಯಾಣದ ಮತ್ತು ಅಭಿವೃದ್ಧಿಯ ವೆಚ್ಚಗಳಲ್ಲಿ ಶೇ. 70 ರಷ್ಟು ಪಾಲು ರಾಜ್ಯಗಳದ್ದು. ಶೇ. 30 ಮಾತ್ರ ಕೇಂದ್ರದ್ದು. ಈ ಆದಾಯ-ವೆಚ್ಚಗಳ ನಡುವಿನ ಅಸಮತೆ ನಮ್ಮ ಸಂವಿಧಾನದ ರೂಪಣೆಯಲ್ಲೇ ಅಂತರ್ಗತವಾಗಿ ಬಂದುಬಿಟ್ಟಿದೆ.

ಕೇಂದ್ರದ ಆದಾಯಗಳಲ್ಲಿ ಒಟ್ಟಾರೆ ರಾಜ್ಯಗಳ ಪಾಲು ಎಷ್ಟು ಮತ್ತು ಯಾವ ಯಾವ ರಾಜ್ಯಗಳಿಗೆ ಎಷ್ಟು ಎಂಬುದನ್ನು ಸಾಂವಿಧಾನಿಕ ಸಂಸ್ಥೆಯಾಗಿರುವ ಹಣಕಾಸು ಅಯೋಗ ಪ್ರತಿ ಐದು ವರ್ಷಗಳಿಗೊಮ್ಮೆ ತೀರ್ಮಾನಿಸಬೇಕೆಂದು ಸಂವಿಧಾನ ಹೇಳುತ್ತದೆ.

ಆದರೆ ಆ ಅಯೋಗವನ್ನು ನೇಮಿಸುವುದು ಮತ್ತು ಹಣಕಾಸು ಹಂಚಿಕೆಯ ಮಾನದಂಡಗಳನ್ನು ಒದಗಿಸುವುದು ಮಾತ್ರ ಆಡಳಿತರೂಢ ಕೇಂದ್ರ ಸರ್ಕಾರವೇ. ಹೀಗಾಗಿ ಕೇಂದ್ರದ ತೆರಿಗೆಗಳಲ್ಲಿ ರಾಜ್ಯದ ಪಾಲು ಯಾವತೂ ಶೇ. 50 ನ್ನು ತಲುಪಲೇ ಇಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಶೇ. 35-38ರ ಆಸುಪಾಸಿನಲ್ಲಿದ್ದ ರಾಜ್ಯಗಳ ಪಾಲನ್ನು ತಮ್ಮ ಸರ್ಕಾರ ಶೇ. 42 ರಷ್ಟಕ್ಕೇ ಏರಿಕೆ ಮಾಡುತ್ತದೆ ಎಂದು ಮೋದಿ ಪ್ರಧಾನಿಯಾದ ಪ್ರಾರಂಭದಲ್ಲಿ ರಾಜ್ಯಗಳಿಗೆ ಭರವಸೆ ನೀಡಿದ್ದರು. ಆದರೆ ಅದು ಅಧಿಕೃತವಾಗಿ 15 ನೇ ಹಣಕಾಸು ಅಯೋಗದಲ್ಲಿ ಶೇ.41ಕ್ಕೆ ಸೀಮಿತವಾಯಿತು. ಮತ್ತೊಂದು ಕಡೆ ಮೋದಿ ಸರ್ಕಾರ ತೆರಿಗೆಗಳಿಗಿಂತ ಜಾಸ್ತಿ ರಾಜ್ಯಗಳ ಜೊತೆ ಹಂಚಿಕೊಳ್ಳದ ಸೆಸ್ ಪ್ರಮಾಣವನ್ನು ಜಾಸ್ತಿ ಮಾಡುತ್ತಾ ರಾಜ್ಯಗಳ ಪಾಲನ್ನು ಕಬಳಿಸುತ್ತಾ ಹೋಯಿತು. ಹೀಗಾಗಿ ಮೋದಿ ಅವಧಿಯಲ್ಲಿ ರಾಜ್ಯಗಳಿಗೆ ಕೇಂದ್ರದಿಂದ ಶೇ. 32 ರಷ್ಟು ಕೂಡ ವರ್ಗಾವಣೆಯಾಗಿಲ್ಲ.

ಹಿಂದುಳಿದ ರಾಜ್ಯಗಳಲ್ಲ-ಬಂಡವಾಳಶಾಹಿ ವ್ಯವಸ್ಥೆಯ ವಸಾಹತುಗಳು

ಇದು ಒಟ್ಟಾರೆ ಎಲ್ಲಾ ರಾಜ್ಯಗಳಿಗೂ ಆಗಿರುವ ಅನ್ಯಾಯವಾದರೆ, ಇದರಲ್ಲಿ ಯಾವ್ಯಾವ ರಾಜ್ಯಗಳಿಗೆ ಎಷ್ಟು ಪಾಲು ಎಂಬ ಹಂಚಿಕೆಯನ್ನು ಕೂಡ ಹಣಕಾಸು ಅಯೋಗವೇ ನಿರ್ಣಯಿಸುತ್ತದೆ. ಇದರಲ್ಲಿ ಆದಾಯದ ಅಂತರ, ಜನಸಂಖ್ಯೆ, ಭೂ ಭಾಗ, ಗಳೆಂಬ ಅಗತ್ಯವನ್ನು ಸೂಚಿಸುವ ಅಂಶಗಳು ಒಂದಷ್ಟಿದ್ದರೆ, ಜನಸಂಖ್ಯಾ ನಿಯಂತ್ರಣ, ಹಣಕಾಸು ನಿರ್ವಹಣೆ , ಅರಣ್ಯ ಅಭಿವೃದ್ಧಿ ಎಂಬ ಆಯಾ ರಾಜ್ಯಗಳ ನಿರ್ವಹಣಾ ಅಂಶಗಳು ಒಂದಷ್ಟಿವೆ. ಸಾಪೇಕ್ಷವಾಗಿ ಹೆಚ್ಚು ಅಭಿವೃದ್ಧಿಯಾದ ಪ್ರದೇಶಗಳಿಂದ ಹೆಚ್ಚು ಅಭಿವೃದ್ಧಿ ಹೊಂದದ ಪ್ರದೇಶಗಳಿಗೆ ಸಂಪನ್ಮೂಲದ ಹರಿವು ಆಗಬೇಕಿರುವುದು ಸಾಮಾಜಿಕ ನ್ಯಾಯದ ಭಾಗವೇ ಆಗಿದ್ದರೂ, ಈವರೆಗೆ ಅಧಿಕಾರಕ್ಕೆ ಬಂದ ಯಾವ ಸರ್ಕಾರಗಳು ಹೆಚ್ಚಿನ ತೆರಿಗೆ ಸಂಪನ್ಮೂಲಗಳನ್ನು ಬಳಸಿಕೊಂಡು ಬಡರಾಜ್ಯಗಳ ಅಭಿವೃದ್ಧಿ ಮಾಡಲೇ ಇಲ್ಲ. ಈ ಅನ್ಯಾಯ ಮೋದಿ ಅವಧಿಯಲ್ಲಿ ಇನ್ನೂ ಹೆಚ್ಚಾಗಿದೆ.

ಏಕೆಂದರೆ ಭಾರತವು ಅನುಸರಿಸುತ್ತಿರುವ ಕಚ್ಚಾವಸ್ತು ರಫ಼್ತು ಆಧರಿತ ಪರವಾಲಂಬಿ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯಲ್ಲಿ ಕೆಲವು ಪ್ರದೇಶಗಳು ಹೆಚ್ಚು ಹಿಂದುಳಿಯದೇ ಅಥವಾ ಅವುಗಳನ್ನು ಲೂಟಿ ಮಾಡದೆ ಕಾರ್ಪೊರೇಟ್ ಉದ್ಯಮಗಳಿಗೆ ಲಾಭವಾಗುವುದಿಲ್ಲ. ಹೀಗಾಗಿ ತೆರಿಗೆ ಹಂಚಿಕೆಯ ತಾರತಮ್ಯದ ಫ಼ಲಾನುಭವಿಗಳು ಉತ್ತರದ ಬಡವರು ಅಲ್ಲವೇ ಅಲ್ಲ. ಎನ್ನುವುದನ್ನು ಕಳೆದ ಅಂಕಣದಲ್ಲಿ ವಿವರಿಸಲಾಗಿದೆ. ವಾಸ್ತವದಲಿ ಹಣಕಾಸು ಕೇಂದ್ರೀಕರಣದ ಪ್ರೇರಕರು ಮತ್ತು ಫ಼ಲಾನುಭವಿಗಳು ಕಾರ್ಪೊರೇಟ್ ಉದ್ದಿಮೆಪತಿಗಳೇ ಆಗಿದ್ದಾರೆ.

ವಾಸ್ತವದಲ್ಲಿ ದಕ್ಷಿಣ ರಾಜ್ಯಗಳ ಹೆಚ್ಚಿನ ತಕರಾರು ಇರುವುದು ಸೆಸ್ ಹೆಚ್ಚಿಸಿ ರಾಜ್ಯಗಳ ಪಾಲು ಕಡಿಮೆ ಮಾಡಿರುವ, ಕೇಂದ್ರದಿಂದ ರಾಜ್ಯಗಳಿಗೆ ಕೇಂದ್ರಾನುದಾನಿತ ಯೋಜನೆಗಳ ಮೂಲಕ ಹರಿದು ಬರಬೇಕಾದ ಕೇಂದ್ರದ ಪಾಲನ್ನು ಕಡಿತಗೊಳಿಸಿರುವ, ಜಿಎಸ್ಟಿ ಯಲ್ಲಿ ರಾಜ್ಯಗಳ ಪಾಲನ್ನು ಕಾಲಕ್ಕೆ ಸರಿಯಾಗಿ ಪಾವತಿಸದಿರುವ, ಜಿಎಸ್ಟಿ ಪರಿಹಾರವನ್ನು ಹಂಚಲು ತಾರತಮ್ಯ ಮಾನದಂಡಗಳನ್ನು ಅನುಸರಿಸುವ ಮತ್ತು ರಾಜ್ಯಗಳು ಹೆಚ್ಚಿನ ಸಾಲವನ್ನು ಪಡೆಯಲು ಮತ್ತು ಕೇಂದ್ರಾನುದಾನಿತ ಯೋಜನೆಗಳನ್ನು ಜಾರಿಗೊಳಿಸಲು ಕೇಂದ್ರದ ಷರತ್ತನ್ನು ಪಾಲಿಸಬೇಕೇಂಬ ಶರತ್ತುಗಳನ್ನು ವಿಧಿಸುತ್ತಿರುವ ಮೋದಿ ಸರ್ಕಾರದ ಸರ್ವಾಧಿಕಾರಿ ನಿರ್ವಹಣೆಯ ಬಗ್ಗೆ ಆಗಿದೆ. ಹೀಗಾಗಿ ಈ ಸಂಘರ್ಷ ಮೋದಿ ಸರ್ವಾಧಿಕಾರ, ಕಾರ್ಪೊರೇಟ್ ಅಧಿಪತ್ಯ ಮತ್ತು ರಾಜ್ಯಗಳ ಸ್ವಾಯತ್ತತೆಯ ನಡುವಿನ ವೈರುಧ್ಯದಿಂದ ಹುಟ್ಟಿದೆ.

ಆದರೆ ವಾಸ್ತವವೇನೆಂದರೆ ರಾಜ್ಯಗಳ ಸ್ವಾಯತ್ತತೆಯ ಹರಣದ ಮೂಲ ನಮ್ಮ ಸಂವಿಧಾನದಲ್ಲೇ ಇದೆ. ಅದರ ಫ಼ೆಡರಲ್ ತತ್ವಕ್ಕೆ ತದ್ವಿರುದ್ಧವಾದ ಯೂನಿಯನಿಸ್ಟ್ ಸ್ವಭಾವದಲ್ಲಿದೆ. ಮೋದಿ ಸರ್ಕಾರ ತನ್ನ ಹಿಂದೂತ್ವ ಸರ್ವಾಧಿಕಾರಿ ಸಿದ್ಧಂತದ ಮೂಲಕ ಅದನ್ನು ಇನ್ನಷ್ಟು ಅತಿರೇಕಕ್ಕೆ ಒಯ್ದಿದ್ದಾರೆ.

ಹೀಗಾಗಿ ಈ ಸಮಸ್ಯೆಗೆ ಮೋದಿ ಸರ್ಕಾರ ಕೆಲವು ಬದಲಾವಣೆ ತರುವುದರಿಂದ ಪರಿಹಾರ ಒದಗುವುದಿಲ್ಲ. ಬದಲಿಗೆ ಭಾರತದ ಸಂವಿಧಾನವೇ ನೈಜ ಫ಼ೆಡರಲ್ ಸ್ವರೂಪವನ್ನು ಪಡೆದುಕೊಳ್ಳುವುದರಲ್ಲಿ ನಿಜವಾದ ಪರಿಹಾರವಿದೆ.

ಇದು ನಮ್ಮ ಸಂವಿಧಾನದಲ್ಲಿ ಫ಼ೆಡರಲ್ ಸ್ವರೂಪದ ಬಗ್ಗೆ ಚರ್ಚೆ ನಡೆದದ್ದೇನು ಎಂದು ಗಮನಿಸಿದರೆ ಇನ್ನಷ್ಟು ಸ್ಪಷ್ಟವಾಗಿ ಅರ್ಥವಾದೀತು .

ಹಣಕಾಸು ಸರ್ವಾಧಿಕಾರದ ಸಾಂವಿಧಾನಿಕ ಬೇರು

ಭಾರತ ಸಂವಿಧಾನದ ಆರ್ಟಿಕಲ್ 1- ಭಾರತವನ್ನು ಇಂಡಿಯಾ, ಅಂದರೆ ಭಾರತವು ರಾಜ್ಯಗಳ ಯೂನಿಯನ್ ಆಗಿರುತ್ತದೆ ( India- That is Bharath, shall be Union Of States India- That is Bharath, shall be Union Of States) ಎಂದು ಹೇಳುತ್ತದೆ. ಅನಂತರದಲ್ಲೂ ಸಂವಿಧಾನದಲ್ಲಿ ಎಲ್ಲಿಯೂ ಭಾರತ ಸರ್ಕಾರವನ್ನು ಸೂಚಿಸುವಾಗ ಕೇಂದ್ರ ಸರ್ಕಾರ ಎಂದೂ ಗುರುತಿಸಿಲ್ಲ ಎಂಬುದು ಎಷ್ಟು ನಿಜವೋ ಒಕ್ಕೂಟ ಸರ್ಕಾರ- ಫ಼ೆಡರಲ್ ಸರ್ಕಾರ ಎಂತಲೂ ಸೂಚಿಸಿಲ್ಲ ಎಂಬುದೂ ಅಷ್ಟೇ ನಿಜ.

ಭಾರತದ ಸಂವಿಧಾನ ಭಾರತವನ್ನು ಯೂನಿಯನ್ ಎಂದು ಮಾತ್ರ ನಮೂದಿಸಿದೆ. ಹಾಗೂ ಯೂನಿಯನ್ ಎಂದರೆ ಫೆಡರಲ್ ಎಂದರ್ಥವಲ್ಲ! ಇದೇ ಸಮಸ್ಯೆಯ ಮೂಲವೂ ಆಗಿದೆ.

ಹಾಗಿದ್ದಲ್ಲಿ ಭಾರತ ಸಂವಿಧಾನದಲ್ಲಿ ಪ್ರಸ್ತಾಪಿತವಾಗಿರುವ ಯೂನಿಯನ್ನಿನ ಅರ್ಥವೇನು? ಭಾರತದ ಸಂವಿಧಾನದ ಸ್ವರೂಪವೇನು? ಮೋದಿ ಸರ್ಕಾರದಲ್ಲಿ ಹೆಚ್ಚುತ್ತಿರುವ ಸರ್ವಾಧಿಕಾರೀ ಧೋರಣೆಗಳಿಗೆ ಸಂವಿಧಾನಿಕ ಮಾನ್ಯತೆಯಿದೆಯೇ? ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಅವರು ಸಂವಿಧಾನದ ಮೂಲಕವೇ ಸರ್ವಾಧಿಕಾರೀ ಹಿಂದೂರಾಷ್ಟ್ರ ತರುವ ಮಾತುಗಳನ್ನಾಡುತ್ತಿದ್ದಾರೆಯೇ?

ಹಾಗಿದ್ದಲ್ಲಿ ಯೂನಿಯನ್ ಅನ್ನು ಒಕ್ಕೂಟ ಎಂದು ಭಾಷಾಂತರ ಮಾತ್ರ ಮಾಡಿಕೊಂಡು ಸಮಾಧಾನಿಸಿಕೊಳುವುದು ಐತಿಹಾಸಿಕವಾಗಿ ಹಾಗೂ ಆಗಬೇಕಿರುವ ಬದಲಾವಣೆಯ ದೃಷ್ಟಿಯಿಂದ ಸರಿಯಾದ ರಾಜಕೀಯ ನಡೆಯಾಗುತ್ತದೆಯೇ?

ಇವೆಲ್ಲಕ್ಕೂ ಸರಿಯಾದ ಉತ್ತರವನ್ನು ಕಂಡುಕೊಳ್ಳಬೇಕೆಂದರೆ ಆಧುನಿಕ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಪ್ರಜಾತಾಂತ್ರಿಕ ಸಂವಿಧಾನದ ಮಾದರಿಗಳನ್ನೂ, ಭಾರತದ ಸಂವಿಧಾನ ರಚನೆಯಾಗುತ್ತಿದಾಗ ಇದ್ದ ಸಂದರ್ಭವನ್ನೂ ಹಾಗೂ ಈ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳ ಸಾರವನ್ನು ಗಮನಿಸಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಶಿವಸುಂದರ್

contributor

Similar News