×
Ad

ದೇವನಹಳ್ಳಿ ಭೂ ಹೋರಾಟ ತೊಡಕಿರುವುದು KIADB ಕಾನೂನಿನಲ್ಲಲ್ಲ ಕಾಂಗ್ರೆಸ್‌ನ ಕಾರ್ಪೊರೇಟ್ ಹಿತಾಸಕ್ತಿಯಲ್ಲಿ!

Update: 2025-07-10 10:47 IST

ಭಾಗ - 2

KIADB ಫೈನಲ್ ನೋಟಿಫಿಕೇಶನ್ ಆದಮೇಲೆ ರದ್ದಾದ ಪ್ರಕರಣಗಳು

ಇನ್ನು ಕಳೆದ ಹತ್ತು ವರ್ಷಗಳಲ್ಲಿ ಫೈನಲ್ ನೋಟಿಫಿಕೇಶನ್ ಆದಮೇಲೂ ಹಲವಾರು ಪ್ರಕರಣಗಳಲ್ಲಿ ಭೂ ಸ್ವಾಧೀನ ರದ್ದು ಪಡಿಸಲಾಗಿದೆ.

-ಅವುಗಳಲ್ಲಿ ಬಹುಪಾಲು KIADB ಸೂಕ್ತ ಪ್ರಕ್ರಿಯೆ ಮತ್ತು ಕಾಲಮಿತಿ ಅನುಸರಿಸಿಲ್ಲ ಎಂಬ ಹಿಡುವಳಿದಾರರ ದಾವೆಯ ಮೇಲೆ ಕೋರ್ಟ್‌ಗಳೇ ಫೈನಲ್ ನೋಟಿಫಿಕೇಶನ್ ಅನ್ನು ರದ್ದು ಮಾಡಿದೆ.

-ಇನ್ನು ಕೆಲವು ಪ್ರಕರಣಗಳಲ್ಲಿ ರೈತ ಪ್ರತಿರೋಧ ಮತ್ತು ಸರಕಾರದ ನೀತಿಗಳಿಂದಾಗಿ ಉದ್ದಿಮೆಗಳೇ ಯೋಜನೆಯನ್ನು ಕೈಬಿಟ್ಟು ಭೂಮಿಯನ್ನು ಸರಕಾರಕ್ಕೆ ಮರಳಿಸಿರುವ ಪ್ರಸಂಗಗಳಿವೆ.

-ಎಲ್ಲಕ್ಕಿಂತ ಮುಖ್ಯವಾಗಿ ತೀರಾ ಇತ್ತೀಚೆಗೆ ಸಿದ್ದರಾಮಯ್ಯನವರ ಸರಕಾರವೇ ಬೆಂಗಳೂರು -ಮೈಸೂರು ಇನಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಗಾಗಿ KIADBಯಿಂದ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದ 13,418 ಎಕರೆ ಜಮೀನುಗಳನ್ನು ರೈತರಿಗೆ ವಾಪಸ್ ಮಾಡಲು ನಿರ್ಧರಿಸಿದೆ...

ಅಷ್ಟು ಮಾತ್ರವಲ್ಲ. ಇದೇ ಯೋಜನೆಯ ಭಾಗವಾಗಿ KIADB ಫೈನಲ್ ನೋಟಿಫಿಕೇಶನ್ ಮಾಡಿದ್ದ 2,531 ಎಕರೆ ಜಮೀನನ್ನು ಕೂಡ ಡಿ-ನೋಟಿಫೈ ಮಾಡುವ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಗಂಭೀರವಾಗಿ ಪರಿಶೀಲಿಸುತ್ತಿದೆ.

ದೇವನಹಳ್ಳಿಯಲ್ಲಿ ರೈತರು ಕೇಳುತ್ತಿರುವುದು ಕೇವಲ 1,777 ಎಕರೆಯ ಡಿ ನೋಟಿಫಿಕೇಶನ್.

ಇವೆಲ್ಲ ಸರಕಾರಕ್ಕೆ ಗೊತ್ತಿರದ ಹೊಸ ವಿಚಾರಗಳಲ್ಲ. ಹೀಗಾಗಿಯೇ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಹತ್ತು ದಿನಗಳ ಕಾಲಾವಕಾಶವಿರಲಿ, ಒಂದು ದಿನದ ಕಾಲಾವಕಾಶವನ್ನೂ ಕೇಳದೆ ಅಧಿಕಾರಕ್ಕೆ ಬಂದ ಕೂಡಲೇ ಭೂ ಸ್ವಾಧೀನ ರದ್ದು ಮಾಡುವುದಾಗಿ ಘೋಷಿಸಿದ್ದಲ್ಲವೇ?

ಆದ್ದರಿಂದ ಕಾನೂನು ತೊಡಕಿಲ್ಲ ಎಂಬುದು ಸ್ಪಷ್ಟ.

ಕೊಟ್ಟ ಉದ್ಯೋಗವೆಷ್ಟು?

ಕಿತ್ತುಕೊಂಡ ಬದುಕೆಷ್ಟು-ಉದ್ಯೋಗವೆಷ್ಟು?

ಇನ್ನು ಎಂ.ಬಿ. ಪಾಟೀಲರು ಹೇಳುವ ಉದ್ಯೋಗ ಮತ್ತು ಅಭಿವೃದ್ಧಿಯ ವಿಷಯಗಳು:

ಮೊದಲಿಗೆ KIADB ನಿಜಕ್ಕೂ ಒಂದು ಯೋಜಿತ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಸಾಧನವಾಗಿದೆಯೇ ಎಂದು ಪರಿಶೀಲಿಸೋಣ.

ಭಾರತದ ಮಹಾಲೇಖಪಾಲ-ಸಿಎಜಿ-ಯು ತನ್ನ 2017ರ ಆಡಿಟ್ ವರದಿಯಲ್ಲಿ ಉದ್ಯಮಿಗಳ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಕರ್ನಾಟಕದ KIADB ಕಾರ್ಯ ವೈಖರಿಯ ಬಗ್ಗೆ ಮಾಡಿರುವ ಆಕ್ಷೇಪಗಳ ಸಾರ ಕೆಳಗಿದೆ:

‘‘...KIADBಯು ಯಾವುದೇ ಪೂರ್ವ ಯೋಚನೆ ಹಾಗೂ ಕ್ರಿಯಾ ಯೋಜನೆಯಿಲ್ಲದೆ ಪ್ರಾಥಮಿಕ ಭೂ ಸ್ವಾಧೀನ ನೋಟಿಸ್ ಕೊಡುತ್ತದೆ.’’

.. 2013-17ರ ನಡುವೆ ಹೀಗೆ ನೋಟಿಸ್ ಕೊಟ್ಟ ಶೇ. 40ರಷ್ಟು ಭೂಮಿಯನ್ನು ಹಿಂದಿರುಗಿಸಬೇಕಾಯಿತು. ಅದರಲ್ಲಿ 9,000 ಎಕರೆ ಜಮೀನಿಗೆ ಕೈಗಾರಿಕೆಗಳಿಗೆ ಬೇಡಿಕೆಯೇ ಇರಲಿಲ್ಲ. ಇನ್ನು 4,500 ಎಕರೆ ಜಮೀನು ಫಲವತ್ತಾದ ಭೂಮಿಯಾಗಿದ್ದರಿಂದ ಮತ್ತು 6,500 ಎಕರೆ ಜಮೀನನ್ನು ರೈತರ ತೀವ್ರ ಪ್ರತಿರೋಧದಿಂದಾಗಿ ಭೂ ಸ್ವಾಧೀನ ನೋಟಿಸ್ ವಾಪಸ್ ಪಡೆಯಬೇಕಾಯಿತು.

....ಇದಲ್ಲದೆ KIADBಯ ಈ ಯೋಜನಾರಹಿತ ಭೂ ಸ್ವಾಧೀನದಿಂದಾಗಿ, 9,000 ಕೋಟಿ ರೂ. ಬೆಲೆ ಬಾಳುವ 36,000 ಎಕರೆ ಜಮೀನು ಯಾವ ಕೈಗಾರಿಕಾ ಉದ್ದೇಶಕ್ಕೂ ಬಳಕೆಯಾಗದೆ ಖಾಲಿಬಿದ್ದಿದೆ.

ಹೀಗಾಗಿ KIADB ಅಭಿವೃದ್ಧಿ ಸಾಧನಕ್ಕಿಂತ ರಿಯಲ್ ಎಸ್ಟೇಟ್ ಸಾಧನವಾಗಿರುವುದೇ ಹೆಚ್ಚು. ದೇವನಹಳ್ಳಿಯಲ್ಲಿ ಆಗುತ್ತಿರುವುದೂ ಇದೇ.

ವಾಸ್ತವದಲ್ಲಿ ಹೂಡಿಕೆಯಾಗಲು ಜಮೀನುಗಳು ಬೇಕಿದ್ದರೆ ದೇವನಹಳ್ಳಿ ಜನರಿಂದ ವಸೂಲಿ ಮಾಡುತ್ತಿರುವ 1,770 ಎಕರೆಗಳಿಗಿಂತ ಹತ್ತುಪಟ್ಟು ಜಮೀನು ಈಗಾಗಲೇ fKIADB ಬಳಿ ಇದೆ. ಹಾಗಿದ್ದರೂ ರೈತರು ಭೂ ಸ್ವಾಧೀನಕ್ಕೆ ಸಮ್ಮತಿಸದಿದ್ದರೂ ಬೆಂಗಳೂರು ಸಮೀಪವೇ ಭೂಮಿ ಬೇಕಿರುವುದು ಕೈಗಾರಿಕಾ ಉದ್ದೇಶಗಳಿಗಲ್ಲ.

ಸಗಟು ಉದ್ಯೋಗ ನಷ್ಟ

ಒಂದು ಅಂದಾಜಿನ ಪ್ರಕಾರ ಈ ಹದಿಮೂರು ಹಳ್ಳಿಗಳು ತಮ್ಮ ಕೃಷಿ ಹಾಗೂ ಹೈನುಗಾರಿಕಾ ಆರ್ಥಿಕತೆಯಿಂದ ಆರು ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನೂ ಮತ್ತು ಸಾವಿರಾರು ಕುಟುಂಬಗಳನ್ನೂ ಸಲಹುತ್ತಿದೆ. ಈ ಉದ್ಯೋಗ ನೀಡುವ ಸುಮಾರು 400 ಎಕರೆ ಜಮೀನು ದಲಿತರಿಗೆ ಸೇರಿರುವ ಜಮೀನಾಗಿದೆ. ಈ ಹೈನು, ಹೂವು, ತರಕಾರಿ ಉತ್ಪನ್ನದ ಕೃಷಿಯಲ್ಲಿ ತೊಡಗಿರುವವರಲ್ಲಿ ಮಹಿಳೆಯರು, ಪುರುಷರು, ಅವಿದ್ಯಾವಂತರು ಎಲ್ಲರೂ ಇದ್ದಾರೆ. ಇಲ್ಲಿ ಬರಲಿರುವ ಏರೋ ಸ್ಪೇಸ್ ಕೈಗಾರಿಕಾ ವಸಾಹತು ಅತ್ಯಂತ ಬಂಡವಾಳ ಸಾಂದ್ರಿತ ಹಾಗೂ ತಂತ್ರಜ್ಞಾನ ಸಾಂದ್ರಿತ ಉದ್ದಿಮೆಗಳಾಗಿವೆ. ಇದರಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುವುದಿಲ್ಲ. ಅತ್ಯಂತ ಪರಿಣತಿ ಕೇಳುವ ಈ ಉದ್ಯೋಗಗಳು ಸ್ಥಳೀಯರಿಗೆ ಸಿಗುವುದೂ ಇಲ್ಲ. ಹೀಗಾಗಿ ಈ ಯೋಜನೆ ನಾಶ ಮಾಡುವ ಮತ್ತು ಸೃಷ್ಟಿಸುವ ಉದ್ಯೋಗಗಳ ಲೆಕ್ಕಾಚಾರ ಮಾಡಿದರೆ ಉದ್ಯೋಗ ನಷ್ಟ ಹೆಚ್ಚೇ ಹೊರತು ಸೃಷ್ಟಿಯಲ್ಲ. ಇನ್ನೂ ಅಭಿವೃದ್ಧಿಗೊಳಿಸಿದ ಪ್ಲಾಟನ್ನು ಕೊಡುವ ಭರವಸೆಯನ್ನು ಸರಕಾರ ನೀಡುತ್ತಿದೆಯಾದರೂ ಸುತ್ತಮುತ್ತಲ ತಿಮಿಂಗಿಲಗಳು ಸಣ್ಣ ಮೀನನ್ನು ಉಳಿಯಗೊಡರು ಎಂಬುದು ದೇಶದೆಲ್ಲೆಡೆ ಸಾಬೀತಾಗಿದೆ.

ಹೀಗಾಗಿ ಇವು ಅಭಿವೃದ್ಧಿ ಯೋಜನೆಗಳಲ್ಲ. ಬದಲಿಗೆ ಕಂಪೆನಿಗಳ ಮತ್ತು ರಾಜಕಾರಣಿಗಳ ರಿಯಲ್ ಎಸ್ಟೇಟ್ ಮತ್ತು ನವ ವಸಾಹತು ದಂಧೆಗಳು. ಇಲ್ಲದಿದ್ದರೆ 10 ಎಕರೆ ಸಾಕಿರುವ ಏರೋ ಡಿಫೆನ್ಯೂಸ್ ಸಾಫ್ಟ್‌ವೇರ್ ಉದ್ಯಮಿಗಳು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಈ ಪ್ರದೇಶದಲ್ಲಿ ನೂರು-ಸಾವಿರ ಎಕರೆ ಜಮೀನು ಏಕೆ ಬೇಕೆನ್ನುತ್ತಾರೆ ಮತ್ತು ಅದನ್ನು ಕೊಡಿಸಲು ಸರಕಾರಗಳೇ ಏಕೆ ತುದಿಗಾಲಲ್ಲಿ ನಿಂತಿರುತ್ತವೆ?

ಈ ಜನವಿರೋಧಿ ಕಾರ್ಪೊರೇಟ್ ಪರ ಭೂ ಸ್ವಾಧೀನ ನೀತಿಗಳಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಭಿನ್ನವಿಲ್ಲವೆಂಬುದು ಹಾಗೂ ಕಾಂಗ್ರೆಸ್ ಎದುರಿಸುತ್ತಿರುವ ಅಸಲಿ ತೊಡಕೇನೆಂಬುದು, ಭೂ ಸ್ವಾಧೀನ ನೀತಿಯಲ್ಲಿ ಬಿಜೆಪಿಯೇ ಆಗುತ್ತಾ ಹೋದ ಅದರ ನೀತಿಗಳನ್ನು ನೋಡಿದರೆ ಅರ್ಥವಾಗುತ್ತದೆ.

ಭೂ ಸ್ವಾಧೀನ ನೀತಿ: ಬಿಜೆಪಿಯಾಗುತ್ತಾ ಹೋದ ಕಾಂಗ್ರೆಸ್

-2013ರಲ್ಲಿ ಸಾರ್ವತ್ರಿಕ ಚುನಾವಣೆಗೆ ಸ್ವಲ್ಪ ಮುನ್ನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ Right to Fair Compensation and Transparency in Land Acquisition, Rehabilitation and Resettlement Act, 2013 ಸಂಕ್ಷಿಪ್ತವಾಗಿ ಎಲ್‌ಎಆರ್‌ಆರ್ ಕಾಯ್ದೆಯನ್ನು ಜಾರಿಗೆ ತಂದಿತು. ಅದರ ಪ್ರಕಾರ ಇನ್ನು ಮುಂದೆ ರೈತರ ಭೂ ಸ್ವಾಧೀನ ಮಾಡಿಕೊಳ್ಳುವ ಮುನ್ನ:

1. Social Impact Study ಸಾಮಾಜಿಕ ಪರಿಣಾಮ ಅಧ್ಯಯನ ಮಾಡಿ, ಯೋಜನೆಯಿಂದಾಗುವ ವ್ಯತಿರಿಕ್ತ ಪರಿಣಾಮಗಳನ್ನು ಹೇಗೆ ತಡೆಗಟ್ಟುತ್ತೇವೆ ಎಂದು ಜನರ ಮುಂದೆ ಇಡಬೇಕಿತ್ತು.

2. ಯಾವುದೇ ಯೋಜನೆಗೆ ಶೇ. 70-80ರಷ್ಟು ಸಂತ್ರಸ್ತರ ಒಪ್ಪಿಗೆ ಕಡ್ದಾಯ

3. ಪರಿಹಾರ ರೂಪದಲ್ಲಿ ಮಾರುಕಟ್ಟೆ ಬೆಲೆಯ ನಾಲ್ಕುಪಟ್ಟು ಪರಿಹಾರ ಧನ...

ಇವು ಪ್ರಮುಖ. ಇವಲ್ಲದೆ ಇನ್ನೂ ಹಲವು ಜನಪರ ಅಂಶಗಳಿದ್ದವು.

(https://bhoomirashi.gov.in/auth/revamp/la_act.pdf)

-2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ತನ್ನ ಕಾರ್ಪೊರೇಟ್ ಹಿತಾಸಕ್ತಿಗೆ ತಕ್ಕಂತೆ ಮೇಲಿನ ಮೂರು ಪ್ರಮುಖ ಜನಪರ ಅಂಶಗಳಿಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ತಂದಿತು. ಎರಡು ಮೂರು ಬಾರಿ ಸುಗ್ರೀವಾಜ್ಞೆಗಳನ್ನೂ ತಂದು ಕೊನೆಗೆ ಆ ತಿದ್ದುಪಡಿಗಳನ್ನು ಲೋಕಸಭೆಯಲ್ಲಿ ಪಾಸು ಮಾಡಿಸಿಕೊಂಡಿತು. ಆದರೆ ರಾಜ್ಯಸಭೆಯಲ್ಲಿ ಅದಕ್ಕೆ ಅಗತ್ಯ ಬಹುಮತವಿರಲಿಲ್ಲವಾದ್ದರಿಂದ ಅದನ್ನು ಜೆಪಿಸಿಗೆ ಒಪ್ಪಿಸಲಾಯಿತು.

(https://prsindia.org/.../the-larr-(amendment)-ordinance...)

-ಭೂ ಸ್ವಾಧೀನವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿರುವುದರಿಂದ ಎಲ್ಲಾ ಬಿಜೆಪಿ ರಾಜ್ಯಗಳು ಎಲ್‌ಎಆರ್‌ಆರ್ ಕಾಯ್ದೆಯ ಮೇಲೆ ಹೇಳಿದ ಮೂರು ರೈತ ಪರ ಅಂಶಗಳು ಅನ್ವಯವಾಗದಂತಹ ತಿದ್ದುಪಡಿಗಳನ್ನು ಮಾಡಿ ತಮ್ಮ ಜನವಿರೋಧಿ-ಕಾರ್ಪೊರೇಟ್ ಲಾಭಕೋರತನವನ್ನು ಮುಂದುವರಿಸಿದವು.

-ಕರ್ನಾಟಕದಲ್ಲಿ 2013-2018ರವರೆಗೆ ಸಿದ್ದರಾಮಯ್ಯನವರ ನೇತೃತ್ವದ ಪೂರ್ಣ ಬಹುಮತದ ಕಾಂಗ್ರೆಸ್ ಸರಕಾರವಿತ್ತು. 2013ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವೇ ಜಾರಿಗೆ ತಂದಂತಹ ಜನಪರ ಭೂ ಸ್ವಾಧೀನ ಕಾಯ್ದೆಯಿತ್ತು. ಅಂದರೆ ಸಿದ್ದು ಸರಕಾರಕ್ಕೆ ಮನಸ್ಸಿದ್ದರೆ ಜನಪರ ಭೂ ಸ್ವಾಧೀನ ಕಾಯ್ದೆಯನ್ನು ಜಾರಿ ಮಾಡಿ ಮಾದರಿ ರಾಜ್ಯವಾಗಬಹುದಾಗಿತ್ತು. ಆದರೆ ಸಿದ್ದು ಸರಕಾರ 2013-18ರ ನಡುವೆ 5,000 ಎಕರೆಗೂ ಹೆಚ್ಚು ರೈತರ ಜಮೀನನ್ನು ವಿಶೇಷ ಕಾಯ್ದೆಯಾಗಿರುವ KIADBಯಡಿ ವಶಪಡಿಸಿಕೊಂಡಿತು.

(https://cag.gov.in/.../Report_No_8_of_2017_-_Economic...)

-2013ರ ಕಾಯ್ದೆಯು 1894ರ ಭೂ ಸ್ವಾಧೀನವನ್ನು ರದ್ದು ಮಾಡುತ್ತದೆ. ಭಾರತದ ಎಲ್ಲಾ ಭೂ ಸ್ವಾಧೀನ ಕಾಯ್ದೆಗಳಿಗೂ ಈಗ 2013ರ ಕಾಯ್ದೆಯೇ ತಾಯಿ. ವಿಶೇಷ ಕಾಯ್ದೆಯಾಗಿರುವ KIADB ಕಾಯ್ದೆಯೂ ಸಹ ಮೂಲ ಕಾಯ್ದೆಯ ಅಂಶಗಳಿಗೆ ವ್ಯತಿರಿಕ್ತವಾಗಿರುವ ಹಾಗಿಲ್ಲ. ಹೀಗಾಗಿ 2013ರ ಕಾಯ್ದೆಯನ್ನು ಅನ್ವಯಿಸದೆ, KIADBಯಂತಹ ವಿಶೇಷ ಕಾಯ್ದೆ ಬಳಸಿ ರೈತರಿಗೆ ಅನ್ಯಾಯ ಮಾಡುತ್ತಿರುವ ಬಗ್ಗೆ ಪ್ರಕರಣಗಳು ಕೋರ್ಟಿನ ಮೆಟ್ಟಿಲೇರಿದವು. ಎರಡೆರಡು ಕಾಯ್ದೆಗಳಿರುವಾಗ ಮೂಲ ಕಾಯ್ದೆಯನ್ನು ಬಿಟ್ಟು KIADBಯಂತಹ ವಿಶೇಷ ಕಾಯ್ದೆಯನ್ನೇ ಅನುಸರಿಸಲು ಸರಕಾರಗಳು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಎದುರಾಯಿತು. 2016-17ರಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡು ಸರಕಾರಗಳು, ಎಲ್‌ಎಆರ್‌ಆರ್ ಕಾಯ್ದೆಗೆ ತಿದ್ದುಪಡಿ ತಂದುಬಿಟ್ಟವು. ಕೆಲವು ರಾಜ್ಯಗಳು ಹಳೆಯ ಭೂ ಸ್ವಾಧೀನ ಕಾಯ್ದೆಯಡಿಯೇ ಸ್ವಾಧೀನ ಮುಂದುವರಿಸಿದವು. ಇದಕ್ಕೆ ಹೈಕೋರ್ಟು ತಡೆ ಒಡ್ಡಿದರೂ ಪ್ರಕರಣ ಸುಪ್ರೀಂ ಕೋರ್ಟು ತಲುಪಿತು.

-2019ರ ಫೆಬ್ರವರಿಯಲ್ಲಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವೂ ಕೂಡ 2013ರ ಕಾಯ್ದೆಗೆ ರಾಜ್ಯ ಮಟ್ಟದ ತಿದ್ದುಪಡಿಗಳನ್ನು ತಂದಿತು. ಪ್ರಮುಖವಾದ ವಿಷಯವೆಂದರೆ ಆ ತಿದ್ದುಪಡಿಗಳು, 2013ರಲ್ಲಿ ಯುಪಿಎ ಸರಕಾರದ ಎಲ್‌ಎಆರ್‌ಆರ್ ಕಾಯ್ದೆಯಲ್ಲಿದ್ದ ಮೂರು ಜನಪರ ಅಂಶಗಳನ್ನೂ ಕಿತ್ತು ಹಾಕಲು 2014ರಲ್ಲಿ ಮೋದಿ ಸರಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದ ತಿದ್ದುಪಡಿಗಳ ಯಥಾವತ್ ನಕಲಾಗಿದ್ದವು.

(https://faolex.fao.org/docs/pdf/ind201965.pdf)

ಆದರೂ ಬಿಜೆಪಿ-ಕಾಂಗ್ರೆಸ್ ಸಂಪೂರ್ಣ ಭಿನ್ನ ಎಂದು ನಂಬಲು ತುದಿಗಾಲಲ್ಲಿ ನಿಂತಿರುತ್ತೇವೆ..

-2023ರಲ್ಲಿ ಮತ್ತೆ ಸಿದ್ದು ನೇತೃತ್ವದ ಕಾಂಗ್ರೆಸ್ ಸರಕಾರ ರೈತರ ಋಣದೊಂದಿಗೆ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ 2019ರ ರೈತ ವಿರೋಧಿ ತಿದ್ದುಪಡಿಗಳನ್ನು ಹಿಂದೆಗೆದುಕೊಳ್ಳಲಿಲ್ಲ.

-ರೈತರ ಋಣಕ್ಕಿಂತ ಕಾರ್ಪೊರೇಟ್ ಹಣ ಎಲ್ಲಾ ಸರಕಾರಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡಿರುತ್ತದಲ್ಲವೇ?

-ಇನ್ನು ದುರಂತದ ವಿಷಯವೆಂದರೆ 2021ರ ಜೂನ್ 29ರಂದು ಸುಪ್ರೀಂ ಕೋರ್ಟ್ ಎಲ್‌ಎಆರ್‌ಆರ್‌ಗೆ ರಾಜ್ಯಗಳು ತಿದ್ದುಪಡಿ ತಂದಿರುವುದನ್ನು ಹಾಗೂ ಕೇಂದ್ರದ ಎಲ್‌ಎಆರ್‌ಆರ್ ನೀತಿಗೆ ಪರ್ಯಾಯವಾಗಿ ತನ್ನದೇ ಭೂ ಸ್ವಾಧೀನ ಕಾನೂನುಗಳನ್ನು ಅನುಸರಿಸುವ ಹಕ್ಕನ್ನು ಎತ್ತಿ ಹಿಡಿದು ರೈತರ ಹಕ್ಕುಗಳ ಮೇಲೆ ಕಾರ್ಪೊರೇಟ್ ಬಂಡೆಯನ್ನು ಉರುಳಿಸಿದೆ.

(https://indiankanoon.org/doc/7835951/)

-ಸಿದ್ದು ಸರಕಾರ ನಿಜಕ್ಕೂ ರೈತಪರವಾಗಿದ್ದರೆ ಇಷ್ಟೆಲ್ಲಾ ಅವಾಂತರಗಳಿಗೆ ಅವಕಾಶವಿಲ್ಲದಂತೆ 2013ರ ಮೂಲ ಕಾಯ್ದೆಯಂತೆ ಮಾತ್ರ ರೈತರ ಜಮೀನು ಭೂ ಸ್ವಾಧೀನ ಮಾಡಿಕೊಳ್ಳುವುದಾಗಿ ಘೋಷಿಸಬಹುದಿತ್ತು.

ಕಾರ್ಪೊರೇಟ್ ಪರ ತಿದ್ದುಪಡಿ ಓಕೆ ರೈತಪರ ತಿದ್ದುಪಡಿ ಜೋಕೆ!

ಆದರೆ ಸಿದ್ದರಾಮಯ್ಯನವರು ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಜುಲೈ 4ರ ಸಭೆಯಲ್ಲಿ ಘೋಷಿಸಿದ್ದಾರೆ. ನಾನು ರೈತರ ಪರವಾಗಿದ್ದರೂ, ರೈತರು ಕೇಳಿದ್ದನ್ನೆಲ್ಲಾ ಕೊಡಲಾಗದು. ಕಾನೂನಿನ ಮಿತಿಯಲ್ಲಿ ಮಾತ್ರ ಕೆಲಸ ಮಾಡಬೇಕಾಗುತ್ತದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಇದು ಅತ್ಯಂತ ದುರದೃಷ್ಟಕರವಾದರೂ ಒಬ್ಬ ಕಾಂಗ್ರೆಸ್ ಮುಖ್ಯಮಂತ್ರಿಯಿಂದ ನಿರೀಕ್ಷಿಸಬಹುದಾದ ಹೇಳಿಕೆಯೇ.

...ರೈತರು ಕೇಳಿದ್ದನ್ನೆಲ್ಲಾ ಕೊಡಲಾಗದು ಎನ್ನುವ ಕಾಂಗ್ರೆಸ್ ಸರಕಾರ ಕಾರ್ಪೊರೇಟ್‌ಗಳು ಕೇಳಿದ್ದನ್ನೆಲ್ಲಾ ಕೊಡಲು ಮೂಲ ಸೌಕರ್ಯ ನಿರ್ಮಾಣಗಳನ್ನು ಕೈಗಾರಿಕೆಗಳಡಿ ಸೇರಿಸುವ, ಪರಿಹಾರ ಮತ್ತು ಬಳಸದ ಭೂಮಿಯ ಬಗ್ಗೆ ಉದಾರವಾದಿ ಧೋರಣೆಯನ್ನು ಪ್ರದರ್ಶಿಸುವ ಅವಕಾಶಗಳನ್ನೂ ಕಲ್ಪಿಸಲು KIADBಗೆ 1997, 2003, 2019ರಲ್ಲಿ ಕಾನೂನು ತಿದ್ದುಪಡಿಗಳನ್ನು ಮಾಡಿತು ಮತ್ತು 2023ರಲ್ಲಿ ಪೂರ್ಣ ಬಹುಮತದ ಸರಕಾರ ಬಂದರೂ ಬಿಜೆಪಿ ಮಾಡಿದ ಯಾವುದೇ ತಿದ್ದುಪಡಿಗಳನ್ನು ರದ್ದು ಮಾಡದೆ ಮುಂದುವರಿಸುತ್ತಿದೆ.

..ರೈತರು ಕೇಳಿದಾಗ ಕಾನೂನು ಪ್ರಕಾರ ಮಾತ್ರ ಕೆಲಸ ಮಾಡಬೇಕು ಎನ್ನುವ ಸರಕಾರ ಕಾರ್ಪೊರೇಟ್‌ಗಳಿಗೆ ಮಾತ್ರ ಇರುವ ಕಾನೂನು ಪೂರಕವಾಗಿಲ್ಲದಿದ್ದರೆ ಕಾನೂನನ್ನೇ ಬದಲಿಸಿ, ಕಾನೂನು ಸೃಷ್ಟಿಸಿ ಕಾರ್ಪೊರೇಟ್ ಸೇವೆ ಮಾಡುತ್ತಿಲ್ಲವೇ?

ಹಾಗಿದ್ದಲ್ಲಿ ರೈತರ ಪರವಾಗಿಯೂ ಏಕೆ ಕಾನೂನು ಬದಲಾವಣೆ ಮಾಡಲಾಗದು?

ಭೂಮಿ ಮತ್ತು ವಸತಿಯ ವಿಷಯದಲ್ಲೂ ಮಂತ್ರಿ ಕೃಷ್ಣ ಬೈರೇಗೌಡರದು ಕಾನೂನು ಮಿತಿಯ ಪಾಠ. ಕೊಪ್ಪಳದ ಬಲ್ಡೋಟಾ ಗಣಿಗಾರಿಕಾ ವಿಸ್ತರಣೆ, ಅಣುಸ್ಥಾವರ ಸ್ಥಾಪನೆಯಲ್ಲೂ ಇದೇ ಧೋರಣೆ..

ಜನಪರ ಸರಕಾರವೆಂದರೆ ಇರುವ ಕಾನೂನು ಬಳಸುವುದು ಎಂದು ಮಾತ್ರವಲ್ಲ. ಅದು ಕಾನೂನು ಪಾಲಿಸಬೇಕಾದ ಅಧಿಕಾರಿಗಳು ಹೇಳುವ ಮಾತು.

ಒಂದು ಪ್ರಜಾತಂತ್ರದಲ್ಲಿ ಜನರಿಂದ ಆಯ್ಕೆಯಾದ ಸರಕಾರ ಕಾರ್ಪೊರೇಟ್ ಪರ ಕಾನೂನಿದ್ದರೆ ರದ್ದು ಮಾಡ ಬೇಕು ಮತ್ತು ರೈತರ ಪರವಾಗಿ, ದಲಿತ-ದಮನಿತರ ಪರವಾಗಿ ಕಾನೂನನ್ನು ಮಾಡಬೇಕು.

ಅದು ಪ್ರಜಾತಂತ್ರ. ಆದರೆ ನಮ್ಮದು ಪ್ರಜಾತಂತ್ರವೇ?

ವಾಸ್ತವದಲ್ಲಿ ಈ ನೆಲಗಳ್ಳ ದಂಧೆಯಿಂದ ರೈತ ಆರ್ಥಿಕತೆ ನಾಶವಾಗಿ ಕಾರ್ಪೊರೇಟ್ ಆರ್ಥಿಕತೆ ಅಬ್ಬರಿಸುತ್ತದೆ. ಅದರಲ್ಲಿ ಪಡೆಯುವ ಕಮಿಷನ್ ಹಣದಲ್ಲಿ ಆಡಳಿತಾರೂಢ ಪಕ್ಷಗಳು ಮತ್ತದರ ಹೈಕಮಾಂಡ್‌ಗಳು ಎರಡು ಮೂರು ಚುನಾವಣಾ ವೆಚ್ಚ ಹುಟ್ಟಿಸಿಕೊಳ್ಳಬಹುದು. ದಲ್ಲಾಳಿ ರಾಜಕಾರಣಿಗಳು ತಮ್ಮ ಖಜಾನೆಗೆ ಇನ್ನು ಸಾವಿರ ಕೋಟಿ ರೂ.ಗಳನ್ನು ಸೇರಿಸಿಕೊಳ್ಳಬಹುದು. ಸರಕಾರ ಎದುರಿಸುತ್ತಿರುವ ಅಸಲಿ ತೊಡಕು ಇದೇ ಆಗಿದೆ.

ಡೆಮಾಕ್ರಸಿಯೋ? ಕಾರ್ಪೊರೇಟೋಕ್ರಸಿಯೋ?

ಅದು ಸರಕಾರ ಎದುರಿಸುತ್ತಿರುವ ತೊಡಕು ಮಾತ್ರವಲ್ಲ. ಈ ದೇಶವು ಜನರ ಡೆಮಾಕ್ರಸಿಯೋ, ಕಾರ್ಪೊರೇಟ್‌ಗಳು ಖರೀದಿಸಿರುವ ಕಾರ್ಪೊರೇಟೋಕ್ರಸಿಯೋ ಎಂಬ ರಾಷ್ಟ್ರೀಯ ತೊಡಕು! ಅದನ್ನು ಈ ದೇಶದ ಜನರಾದ ನಾವೇ ಬಗೆಹರಿಸಬೇಕು,

ಹೀಗಾಗಿ...ಪಾಠವಿಷ್ಟೇ

ಮುಖ್ಯಮಂತ್ರಿಯಾದಿಯಾಗಿ ರಾಜ್ಯಶಕ್ತಿಯು ಸದಾ ಬಂಡವಾಳಶಾಹಿಗಳ ಹಿತಾಸಕ್ತಿಯ ಮತ್ತು ದಮನದ ಸಾಧನ.

ಚುನಾವಣಾ ಪ್ರಜಾತಂತ್ರವೆಂಬುದು ಬಂಡವಾಳಶಾಹಿ ವ್ಯವಸ್ಥೆಯು ಪ್ರಜೆಗಳಿಗೆ ಹಾಕಿರುವ ಮಖಮಲ್ ಟೋಪಿ.

ಮುಖ್ಯಮಂತ್ರಿಗಳ ವೈಯಕ್ತಿಕ ಸಜ್ಜನಿಕೆ-ನಿಲುವುಗಳು ಸರಕಾರದ, ಪಕ್ಷದ ವರ್ಗ ಹಿತಾಸಕ್ತಿಯ ಮಿತಿಯನ್ನು ಮೀರುವುದಿಲ್ಲ.

ದುಡಿಯುವ-ಶೋಷಿತ ಜನರು ಬಲವಾದ ಸಂಘಟಿತ ಜನಶಕ್ತಿಯಾಗಿ, ಆಳುವ ವರ್ಗಗಳ ಬಣಗಳ ಬಗ್ಗೆ ಭ್ರಮೆ ಇಟ್ಟುಕೊಳ್ಳದೆ, ರಾಜಿ ರಹಿತ ಬೀದಿ ಸಮರಕ್ಕಿಳಿಯದೆ ಬೇರೆ ದಾರಿಯಿಲ್ಲ. ಆದ್ದರಿಂದ

-ನೆಪಗಳನ್ನು ಕೈಬಿಟ್ಟು ಈ ಕೂಡಲೇ ದೇವನಹಳ್ಳಿ, ಚನ್ನರಾಯಪಟ್ಟಣ ಹೋಬಳಿಯ ಹದಿಮೂರು ಹಳ್ಳಿಗಳ 1,777 ಎಕರೆ ಜಮೀನನ್ನೂ ಡಿ ನೋಟಿಫೈ ಮಾಡಿ ಮತ್ತು ಆ ಭೂಮಿಯ ಮೇಲೆ ರೈತರ ಒಡೆತನವನ್ನು ಮರಳಿಸಬೇಕು.

-ಕಾರ್ಪೊರೇಟ್ ಪರ, ರಿಯಲ್ ಎಸ್ಟೇಟ್ ಭ್ರಷ್ಟತೆಯ KIADBಯನ್ನು ರದ್ದು ಮಾಡಿ,

-2013ರ ಭೂ ಸ್ವಾಧೀನ ಕಾಯ್ದೆಗೆ ತಮ್ಮ ಸರಕಾರವೇ 2018-19ರಲ್ಲಿ ತಂದ ಮೋದಿ ಮಾದರಿ ತಿದ್ದುಪಡಿಗಳನ್ನು ಹಿಂದೆಗೆದುಕೊಳ್ಳಿ ಹಾಗೂ ಮೂಲ 2013ರ ಭೂ ಸ್ವಾಧೀನ ಕಾಯ್ದೆಯನ್ನು ಯಥಾವತ್ ಜಾರಿಗೊಳಿಸಬೇಕೆಂದು ಆಗ್ರಹಿಸುತ್ತಾ ಬೀದಿ ಸಮರ ನಡೆಸುತ್ತಿರುವ ರೈತರ ಜೊತೆಗೂಡೋಣ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಿವಸುಂದರ್

contributor

Similar News