ದ್ವೇಷದ ಆರೆಸ್ಸೆಸ್ ಮತ್ತು ಹುಸಿವೀರ ಸಾವರ್ಕರ್: 12 ಮಿಥ್ಯೆಗಳು
ಸಾವರ್ಕರ್ ಮತ್ತು ಆರೆಸ್ಸೆಸ್ ಪ್ರಕಾರ ಜಾತಿ ವ್ಯವಸ್ಥೆಯಿಂದಾಗಿಯೇ ಭಾರತದ ಹಿಂದೂ ಸಮಾಜ ಗಟ್ಟಿಯಾಗಿದೆ. ಆದ್ದರಿಂದ ಮನುಸ್ಮತಿಯೇ ಈ ದೇಶದ ಸಂವಿಧಾನವಾಗಬೇಕೆಂಬುದು ಅವರ ಹಿಂದೂರಾಷ್ಟ್ರದ ಸಾರ. ಸಾವರ್ಕರ್ ಅವರು ತಮ್ಮ Six Glorious Epochs Of Indian History ಪುಸ್ತಕದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಜಾತಿ-ವರ್ಣ ವ್ಯವಸ್ಥೆಯನ್ನು ಅಲುಗಾಡಿಸಿದ ಬೌದ್ಧ ಧರ್ಮ ದೇಶದ್ರೋಹಿ ಧರ್ಮ ಎಂದು ಕರೆಯುತ್ತಾರೆ ಮತ್ತು ಪುಷ್ಯಮಿತ್ರ ಶೃಂಗ ಬೌದ್ಧರ ನರಮೇಧ ಮಾಡಿದ್ದು ಅಪಾರ ದೇಶಪ್ರೇಮಿ ಕರ್ತವ್ಯವಾಗಿತ್ತು ಎನ್ನುತ್ತಾರೆ.
ಭಾಗ - 2
ಗಾಂಧಿಯನ್ನು ಕೊಂದಾಗ ದೇಶದ ತುಂಬಾ ಆರೆಸ್ಸೆಸಿಗರು ಸಿಹಿ ಹಂಚಿ ಸಂಭ್ರಮಿಸಿದರೆಂದು ಸ್ವಯಂ ಸರ್ದಾರ್ ಪಟೇಲರೇ ಶ್ಯಾಂ ಪ್ರಸಾದ್ ಮುಖರ್ಜಿಗೆ ಬರೆದ ಪತ್ರದಲ್ಲಿ ದಾಖಲಿಸುತ್ತಾರೆ. ಗಾಂಧಿಗೆ ಆರೆಸ್ಸೆಸ್‌ನ ಕೋಮುವಾದಿ ಹಿಂಸಾತ್ಮಕ ರಹಸ್ಯ ಕಾರ್ಯಾಚರಣೆ ತೀವ್ರ ಅಸಮಾಧಾನ ತಂದಿತ್ತು ಎಂಬುದೇ ಅದಕ್ಕೆ ಕಾರಣ. ಸರ್ದಾರ್ ಪಟೇಲರೇ ಹೇಳುವಂತೆ ಗಾಂಧಿ ಕೊಲೆಗೆ ಬೇಕಿದ್ದ ಸಾಮಾಜಿಕ ಭೂಮಿಕೆಯನ್ನು ಆರೆಸ್ಸೆಸ್ ಸಿದ್ಧಪಡಿಸಿತ್ತು.
ಏಕೆಂದರೆ ಗಾಂಧಿಯವರಿಗೆ ಆರೆಸ್ಸೆಸ್ ರಾಜಕೀಯ ಮತ್ತು ಸಂಘಟನೆ ಒಪ್ಪಿಗೆ ಇರಲಿಲ್ಲ.
ಭಾರತದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರು ಗೃಹಮಂತ್ರಿ ಸರ್ದಾರ್ ಪಟೇಲ್ ಅವರಿಗೆ ಬರೆದ ಪತ್ರದಲ್ಲಿ:
‘‘....ಆರೆಸ್ಸೆಸಿಗರು ದೇಶಾದ್ಯಂತ ಗಲಭೆ ಸೃಷ್ಟಿಸುವ ಯೋಜನೆಗಳನ್ನು ಮಾಡುತ್ತಿದ್ದಾರೆಂಬ ಮಾಹಿತಿ ನನಗೆ ಬಂದಿದೆ.
....ಅವರಲ್ಲಿ ಹಲವರು ಮುಸ್ಲಿಮರಂತೆ ಕಾಣುವ ದಿರಿಸನ್ನು ಧರಿಸಿ ಹಿಂದೂಗಳ ಮೇಲೆ ದಾಳಿ ನಡೆಸಿ ಹಿಂದೂಗಳನ್ನು ಪ್ರಚೋದಿಸುತ್ತಿದ್ದಾರೆ.
....ಅದೇ ರೀತಿ ಅವರಲ್ಲಿ ಕೆಲವರು ಮುಸ್ಲಿಮರ ಮೇಲೆ ದಾಳಿ ಮಾಡಿ ಮುಸ್ಲಿಮರನ್ನು ಪ್ರಚೋದಿಸುತ್ತಿದ್ದಾರೆ.
......ಹಿಂದೂ-ಮುಸ್ಲಿಮರ ನಡುವೆ ಈ ರೀತಿ ಯೋಜಿತ ಅಶಾಂತಿ ಉಂಟುಮಾಡುತ್ತಿರುವುದು ಮುಂದೆ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಲಿದೆ’’
-ಬಾಬು ರಾಜೇಂದ್ರ ಪ್ರಸಾದ್ ಮಾರ್ಚ್ 14, 1948
(Nehru-Patel: Agreement Within Difference-Select Documents & Correspondences 1933-1950, NBT, Delhi, p. 43.)
ಇದಲ್ಲದೆ ಇತ್ತೀಚಿನ ದಿನಗಳಲ್ಲಿ ದಲಿತರನ್ನು ಒಡೆದಾಳುವ ರಾಜಕಾರಣದ ಭಾಗವಾಗಿ ಜಗಜೀವನ್ ರಾಮ್ ಅವರೂ ಸಹ ಆರೆಸ್ಸೆಸ್ ಅಭಿಮಾನಿಗಳಾಗಿದ್ದರು ಎಂಬ ಅಪಪ್ರಚಾರವನ್ನು ಆರೆಸ್ಸೆಸ್ ಪ್ರಾರಂಭಿಸಿದೆ. ಆದರೆ ಜಗಜೀವನ್ ರಾಮ್ ಅವರಿಗೆ ಆರೆಸ್ಸೆಸ್ ಮತ್ತು ಜನಸಂಘದ ಬಗ್ಗೆ ಯಾವ ಆಭಿಪ್ರಾಯವಿತ್ತು? ಎಂಬುದರ ಬಗ್ಗೆ ಆರೆಸ್ಸೆಸ್ ಅಭಿಮಾನಿಯಾಗಿರುವ ಅಮೆರಿಕದ ವಿದ್ವಾಂಸ ವಾಲ್ಟರ್ ಆಂಡರ್ಸನ್ ಮತ್ತು ಅಮೆರಿಕದ ಆರೆಸ್ಸೆಸ್‌ನ ಅಂಗಸಂಸ್ಥೆಯಾದ ಹಿಂದೂ ಸೇವಾ ಸಂಘದ ಶ್ರೀಧರ್ ದಾಮ್ಲೆ ಯವರು ಜೊತೆಗೂಡಿ ಆರೆಸ್ಸೆಸ್‌ನ ಇತಿಹಾಸದ ಬಗ್ಗೆ ರಚಿಸರುವ ‘Brotharhood in Saffron’ ಪುಸ್ತಕದಲ್ಲಿ ಸೂಚ್ಯವಾಗಿ ದಾಖಲಿಸಿದ್ದಾರೆ.
ಇಂದಿರಾ ಸರ್ವಾಧಿಕಾರದ ವಿರುದ್ಧ ಏರ್ಪಟ್ಟ ಮೈತ್ರಿ ಸರಕಾರದಲ್ಲಿ ಅತಿದೊಡ್ಡ ಬಿಕ್ಕಟ್ಟು ಉಂಟಾಗಿದ್ದೇ ಭಾರತೀಯ ಜನಸಂಘಕ್ಕೆ ಕೋಮುವಾದಿ ಆರೆಸ್ಸೆಸ್ ಜೊತೆಗೆ ಇದ್ದ ನಂಟಿನ ಬಗ್ಗೆ.
ಆರೆಸ್ಸೆಸ್‌ನ ಜೊತೆಗೆ ನಂಟು ದೇಶಕ್ಕಿಂತ ಮುಖ್ಯ ಎಂದು ಜನಸಂಘ ಭಾವಿಸಿದ್ದರಿಂದಲೇ ಜನತಾ ಸರಕಾರ ಕುಸಿದು ಬಿತ್ತು ಮತ್ತು 1980ರ ಚುನಾವಣೆಯಲ್ಲಿ ಜನತಾ ಪಕ್ಷ ಇಂದಿರಾ ಕಾಂಗ್ರೆಸ್‌ನ ಎದುರು ಹೀನಾಯವಾಗಿ ಸೋತಿತು.
ಇದರ ಬಗ್ಗೆ ಜನತಾ ಪಕ್ಷದ ಆಗಿನ ಅಧ್ಯಕ್ಷ ಚಂದ್ರಶೇಖರ್ ಅವರಿಗೆ ಬರೆದ ಪತ್ರದಲ್ಲಿ ಬಾಬು ಜಗಜೀವನ್ ರಾಂ ಅವರಿಗೆ ಆರೆಸ್ಸೆಸ್ ಮತ್ತು ಜನಸಂಘದ ಬಗ್ಗೆ ಇದ್ದ ಅಭಿಪ್ರಾಯ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ.
ಇದು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ 1980ರ ಮಾರ್ಚ್ 8ರ ಆವೃತ್ತಿಯಲ್ಲಿ ಪ್ರಕಟವಾಗಿದೆ.
ಇದನ್ನು ಆರೆಸ್ಸೆಸ್ ಅಭಿಮಾನಿ ಬರಹಗಾರರು ಬರೆದಿರುವ Brotharhood in Saffron’ ಪುಸ್ತಕದಲ್ಲಿ ದಾಖಲಿಸಲಾಗಿದೆ:
‘ಪಕ್ಷದ ಸೋಲಿಗೆ hostile activities of the RSS - ಆರೆಸ್ಸೆಸ್‌ನ ಪಕ್ಪಕ್ಷ ವಿರೋಧಿ ಚಟುವಟಿಕೆಗಳು ಕಾರಣ’ವೆಂದೂ ಬಾಬು ಜಗಜೀವನ್ ರಾಂ ಬರೆದಿದ್ದರು.
ಅಷ್ಟು ಮಾತ್ರವಲ್ಲ. ‘‘secret agreement existed between the RSS and Mrs Gandhi’s Congress Party - ಆರೆಸ್ಸೆಸ್ ಮತ್ತು ಇಂದಿರಾ ಗಾಂಧಿಯವರ ಕಾಂಗ್ರೆಸ್‌ನ ನಡುವೆ ಗುಪ್ತ ಒಪ್ಪಂದವೂ ಏರ್ಪಟ್ಟಿತು’’ ಎಂದು ಬಹಿರಂಗವಾಗಿ ಆರೋಪಿಸಿದ್ದರು. ಇದನ್ನು ವಿರೋಧಿಸಿ ಆರೆಸ್ಸೆಸ್‌ನ ‘ಆರ್ಗನೈಸರ್’ ಪತ್ರಿಕೆಯಲ್ಲಿ ಅಡ್ವಾಣಿಯವರು ಜಗಜೀವನ್ ರಾಮ್ ಅವರನ್ನು ಖಂಡಿಸಿ ತೀವ್ರವಾದ ಟೀಕಾತ್ಮಕ ಲೇಖನವನ್ನು ಬರೆದಿದ್ದರು.
ಇದು ಬಾಬು ಜಗಜೀವನ್ ರಾಂ ಅವರ ಬಗ್ಗೆ ಆರೆಸ್ಸೆಸ್‌ಗಿರುವ ನೈಜ ಧೋರಣೆ.
ಮಿಥ್ಯೆ 5: ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಸೋದರಿ ನಿವೇದಿತಾ ಇನ್ನಿತರರು ಕಾಂಗ್ರೆಸ್ ಸೇರದಿದ್ದರೂ ಸ್ವಾತಂತ್ರ್ಯ ಹೋರಾಟ ಮಾಡಿದರು. ಕಾಂಗ್ರೆಸ್ ಸೇರದ ಮಾತ್ರಕ್ಕೆ ಅವರು ಸ್ವಾತಂತ್ರ್ಯ ಹೋರಾಟಗಾರರಲ್ಲವೇ? ಅದೇ ರೀತಿ ಆರೆಸ್ಸೆಸ್ ಕೂಡಾ ಕಾಂಗ್ರೆಸ್ ಸೇರದೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದೆಯಲ್ಲವೇ?
ಮೇಲಿನ ಉದಾಹರಣೆಗಳಲ್ಲಿ ಆರೆಸ್ಸೆಸ್ ಅನ್ನು ಹೊರತುಪಡಿಸಿ ಮಿಕ್ಕವರೆಲ್ಲರೂ ಕಾಂಗ್ರೆಸ್ ಸೇರದಿದ್ದರೂ ಪರ್ಯಾಯವಾಗಿ ಬಲವಾದ ಸ್ವಾತಂತ್ರ್ಯ ಹೋರಾಟವನ್ನು ಕಟ್ಟಿದವರೇ. ಅವರೆಲ್ಲರಿಗೂ ಕಾಂಗ್ರೆಸ್ ಬಗ್ಗೆ ಕಟುವಾದ ವಿಮರ್ಶೆ ಇತ್ತು. ಆದರೂ ಬ್ರಿಟಿಷ್ ವಿರೋಧಿ ಹೋರಾಟದ ಅಗತ್ಯ ಬಿದ್ದಾಗ ಕಾಂಗ್ರೆಸ್ ಜೊತೆಗೂಡಿ ಹೋರಾಟಗಳನ್ನೂ ಮಾಡಿದ್ದರು.
ಆದರೆ ಆರೆಸ್ಸೆಸ್ ತನ್ನನ್ನು ಕಾಂಗ್ರೆಸೇತರ ಸ್ವಾತಂತ್ರ್ಯ ಹೋರಾಟಗಾರ ಗುಂಪಿನೊಂದಿಗೆ ಸೇರಿಸಿಕೊಳ್ಳುವುದು ಆರೆಸ್ಸೆಸ್‌ನ ಸಂಸ್ಥಾಪಕರ ಆದರ್ಶಗಳಿಗೆ ಮಾಡುವ ದ್ರೋಹವಾಗುತ್ತದೆ.
ಏಕೆಂದರೆ ಈ ಹಿಂದಿನ ಪ್ರಶ್ನೆಯಲ್ಲಿ ವಿವರಿಸಿದಂತೆ ಆರೆಸ್ಸೆಸ್ ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ತೊಡಗಿಕೊಳ್ಳಬಾರದೆಂಬುದೇ ಆರೆಸ್ಸೆಸ್‌ನ ನಿಲುವಾಗಿತ್ತು. ಅದನ್ನು ಅವರು ಕಟಿಬದ್ಧವಾಗಿ ಪಾಲಿಸಿ ದೇಶದ್ರೋಹಿಗಳಾಗಿಯೇ ಉಳಿದರು. ಈಗ ತಮ್ಮನ್ನು ಪ್ರತ್ಯೇಕವಾದ ಕಾಂಗ್ರೆಸೇತರ ಸ್ವಾತಂತ್ರ್ಯ ಹೋರಾಟ ಧಾರೆ ಎಂದು ಬಿಂಬಿಸಿಕೊಳ್ಳುವುದನ್ನು ಸಾಕ್ಷಾತ್ ಹೆಡ್ಗೆವಾರ್, ಗೋಳ್ವಾಲ್ಕರ್ ಹಾಗೂ ಸಾವರ್ಕರ್ ಕೂಡ ಒಪ್ಪುವುದಿಲ್ಲ.
ಮಿಥ್ಯೆ 6: ಅಂಬೇಡ್ಕರ್ ಅವರು ಸಾವರ್ಕರ್ ಅಭಿಮಾನಿಯಾಗಿರಲಿಲ್ಲವೇ? ಸಾವರ್ಕರ್ ಅವರ ಅಸ್ಪೃಶ್ಯತಾ ನಿವಾರಣಾ ಕಾರ್ಯಗಳನ್ನು ಮೆಚ್ಚಿಕೊಂಡಿರಲಿಲ್ಲವೇ?
ಡಾ. ಅಂಬೇಡ್ಕರ್ ಅವರು ಅಸ್ಪಶ್ಯತೆಯ ಮೂಲ ಜಾತಿ ವ್ಯವಸ್ಥೆಯಲ್ಲಿದೆ. ಜಾತಿಯ ಮೂಲ ಮನುಸ್ಮತಿಯನ್ನು ಆಧರಿಸಿದ ಹಿಂದೂ ಧರ್ಮದಲ್ಲಿದೆ ಎಂದು ತಿಳಿಹೇಳಿ 1927ರಲ್ಲೇ ಮನುಸ್ಮತಿಯನ್ನು ಸುಟ್ಟುಹಾಕಿದ್ದರು. ಆದರೆ ಸಾವರ್ಕರ್ ಮತ್ತು ಆರೆಸ್ಸೆಸ್ ಅವರುಗಳದ್ದು ಅದಕ್ಕೆ ತದ್ವಿರುದ್ಧವಾದ ತಿಳಿವಳಿಕೆ.
ಅವರ ಪ್ರಕಾರ ಜಾತಿ ವ್ಯವಸ್ಥೆಯಿಂದಾಗಿಯೇ ಭಾರತದ ಹಿಂದೂ ಸಮಾಜ ಗಟ್ಟಿಯಾಗಿದೆ. ಆದ್ದರಿಂದ ಮನುಸ್ಮತಿಯೇ ಈ ದೇಶದ ಸಂವಿಧಾನವಾಗಬೇಕೆಂಬುದು ಅವರ ಹಿಂದೂರಾಷ್ಟ್ರದ ಸಾರ. ಸಾವರ್ಕರ್ ಅವರು ತಮ್ಮ Six Glorious Epochs Of Indian History ಪುಸ್ತಕದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಜಾತಿ-ವರ್ಣ ವ್ಯವಸ್ಥೆಯನ್ನು ಅಲುಗಾಡಿಸಿದ ಬೌದ್ಧ ಧರ್ಮ ದೇಶದ್ರೋಹಿ ಧರ್ಮ ಎಂದು ಕರೆಯುತ್ತಾರೆ ಮತ್ತು ಪುಷ್ಯಮಿತ್ರ ಶೃಂಗ ಬೌದ್ಧರ ನರಮೇಧ ಮಾಡಿದ್ದು ಅಪಾರ ದೇಶಪ್ರೇಮಿ ಕರ್ತವ್ಯವಾಗಿತ್ತು ಎನ್ನುತ್ತಾರೆ.
ಹಾಗೆಯೇ ಆರೆಸ್ಸೆಸ್ ಸರಸಂಘ ಚಾಲಕ ಗೋಳ್ವಾಲ್ಕರ್ ಅವರು ಜಾತಿ ಪದ್ಧತಿ ಸಡಿಲವಾಗಿದ್ದರಿಂದಲೇ ಈಶಾನ್ಯ ಭಾರತ ಮತ್ತು ವಾಯುವ್ಯ ಭಾರತದಲ್ಲಿ ಪರಧರ್ಮಕ್ಕೆ ತಾವು ಸಿಕ್ಕಿತು ಎಂದು ದೂರುತ್ತಾರೆ ಹಾಗೂ ಅವೈದಿಕವಾದ ಮತ್ತು ಜಾತಿ ನಿರಾಕರಣೆ ಮಾಡುವ ಜೈನ, ಬೌದ್ಧ, ಸಿಖ್, ಲಿಂಗಾಯತಗಳನ್ನು ಒಂದು ಧರ್ಮವೆಂದೇ ಮಾನ್ಯತೆ ಮಾಡಬಾರದೆಂದು ಹೇಳುತ್ತಾರೆ.
ಸಾವರ್ಕರ್ ಆಗಲೀ ಆರೆಸ್ಸೆಸ್ ಆಗಲೀ ಅದೇ ಕಾಲಘಟ್ಟದಲ್ಲಿ ಅಂಬೇಡ್ಕರ್ ಅವರು ನಡೆಸಿದ ಮಹಾಡ್ ಸತ್ಯಾಗ್ರಹ ಅಥವಾ ಕಾಳಾರಾಮ್ ದೇವಸ್ಥಾನ ಪ್ರವೇಶ ಹೋರಾಟದಲ್ಲಿ ಭಾಗವಹಿಸುವುದಿರಲಿ ಅದರ ವಿರುದ್ಧ ಕೆಂಡಕಾರಿದ್ದರು. ಅದರಲ್ಲೂ ಆ ವಲಯದಲ್ಲಿದ್ದ ಭೂಮಾಲಕ ಖೋತ್ ವ್ಯವಸ್ಥೆ ವಿರುದ್ಧ ಅಂಬೇಡ್ಕರ್ ಶೂದ್ರ ರೈತಾಪಿ ಮತ್ತು ದಲಿತ ಕೂಲಿಗಳನ್ನು ಸಂಘಟಿಸುತ್ತಿದ್ದರೆ ಆಗ ರತ್ನಗಿರಿಯಲ್ಲಿದ್ದ ಸಾವರ್ಕರ್ ಈ ಹೋರಾಟದಲ್ಲಿ ಹಿಂದೂಗಳು ಭಾಗವಹಿಸಬಾರದೆಂದು ಹೇಳಿಕೆ ನೀಡುತ್ತಾರೆ.
1956ರಲ್ಲಿ ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಅಪ್ಪಿಕೊಂಡಾಗ ಸಾವರ್ಕರ್ ಅಂಬೇಡ್ಕರ್ ಅವರನ್ನು ಅತ್ಯಂತ ಹೀನಾಯವಾಗಿ ಖಂಡಿಸುತ್ತಾರೆ. ಆಗ ಅಂಬೇಡ್ಕರ್ ಅವರ ‘ಪ್ರಬುದ್ಧ ಭಾರತ’ ಪತ್ರಿಕೆಯಲ್ಲಿ ವೀರ ಸಾವರ್ಕರ್ ಅವರ ಹೇಡಿ ಹಾಗೂ ಸೋಗಲಾಡಿ ದಲಿತಪರತೆಯ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸುತ್ತಾರೆ.
ಆದರೂ 1930ರ ನಂತರ ಹಿಂದೂ ಮಹಾಸಭಾ ಹಾಗೂ ಸಾವರ್ಕರ್ ಅಸ್ಪಶ್ಯರ ಪರವಾಗಿ ಮಾತನಾಡಲು ಪ್ರಾರಂಭಿಸಿದರು. 1931ರಲ್ಲಿ ಆ ಪ್ರದೇಶದ ಸಾಮಂತರೊಬ್ಬರಿಗೆ ಸಾವರ್ಕರ್ ಅವರು ಅಸ್ಪಶ್ಯರಿಗಾಗಿ ಪತಿತಪಾವನ ದೇವಸ್ಥಾನವೊಂದನ್ನು ಸ್ಥಾಪಿಸಲು ಸಹಾಯ ಮಾಡಿದರು. ಇದು ನಿಜ. ಆದರೆ ಅರ್ಧ ಸತ್ಯ.
ಏಕೆಂದರೆ ಈ ಪತಿತ ಪಾವನ ದೇವಸ್ಥಾನ ದಲಿತರು ಮತ್ತು ಸವರ್ಣೀಯರು ಎಲ್ಲರೂ ಒಟ್ಟಿಗೆ ದೇವದರ್ಶನ ಮಾಡುವಂಥ ದೇವಸ್ಥಾನವಾಗಿರಲಿಲ್ಲ. ಬದಲಿಗೆ ಅದು ಕೇವಲ ದಲಿತರಿಗೆ ಮಾತ್ರ ಸೀಮಿತವಾಗಿದ್ದ ದೇವಸ್ಥಾನವಾಗಿತ್ತು. ಏಕೆಂದರೆ ಹಿಂದೂ ಮಹಾ ಸಭಾ ಆ ವೇಳೆಗಾಗಲೇ ತಾವು ಎಂದಿಗೂ ದೇವಸ್ಥಾನ ಪ್ರವೇಶದಂಥ ಕಾರ್ಯಕ್ರಮಗಳ ಮೂಲಕ ಮೇಲ್ಜಾತಿ ಭಾವನೆಗಳಿಗೆ ಧಕ್ಕೆಯಾಗುವ ಕೆಲಸದಲ್ಲಿ ತೊಡಗುವುದಿಲ್ಲ ಎಂದು ಪ್ರಚಾರ ಮಾಡುತ್ತಿದ್ದರು. ಅದು ಅವರ 1937ರ ಚುನಾವಣಾ ಪ್ರಣಾಳಿಕೆಯ ಭರವಸೆಯೂ ಆಗಿತ್ತು. ಈಗಾಗಲೇ ಹೇಳಿದಂತೆ ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಡೆದ ಕಾಳಾರಾಂ ದೇವಸ್ಥಾನ ಪ್ರವೇಶ ಹೋರಾಟವನ್ನು ಸಾವರ್ಕರ್ ಬೆಂಬಲಿಸಿರಲಿಲ್ಲ. ಹೀಗೆ ಪತಿತಪಾವನ ದೇವಸ್ಥಾನ ಒಂದು ಅಸ್ಪಶ್ಯ ದೇವಸ್ಥಾನ ಆಗಿತ್ತೇ ವಿನಾ ಅಸ್ಪಶ್ಯತಾ ನಿವಾರಣಾ ದೇವಸ್ಥಾನವಾಗಿರಲಿಲ್ಲ.
ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಸಾವರ್ಕರ್ ಅವರಿಗೆ ಮರುಪತ್ರವನ್ನೂ ಬರೆಯುತ್ತಾರೆ.
‘‘ಇಂಥಾ ಪ್ರಯತ್ನಗಳು ಸ್ವಾಗತಾರ್ಹವಾದರೂ ಎಲ್ಲಿಯತನಕ ಮನುಸ್ಮತಿ ಹಾಗೂ ವರ್ಣಾಶ್ರಮದ ವಿರುದ್ಧ ಮಹಾ ಸಭಾ ನಿಲುವನ್ನು ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯತನಕ ಇಂಥಾ ಕಾರ್ಯಕ್ರಮಗಳು ಯಾವ ಪ್ರಯೋಜವನ್ನೂ ಉಂಟುಮಾಡುವುದಿಲ್ಲ’’ ಎಂದು ಎಚ್ಚರಿಸುತ್ತಾರೆ.
ಹಿಂದುತ್ವವಾದಿಗಳು ಆ ಪತ್ರದ ಮೊದಲ ಭಾಗವನ್ನು ಮಾತ್ರ ಪ್ರಚಾರ ಮಾಡುತ್ತಾ ಸಾವರ್ಕರ್ ಅವರನ್ನು ಅಂಬೇಡ್ಕರ್ ಮೆಚ್ಚಿಕೊಂಡಿದ್ದರು ಎಂದು ಪ್ರಚಾರ ಮಾಡುತ್ತಿದ್ದಾರೆ.
ಅಷ್ಟು ಮಾತ್ರವಲ್ಲ. ಸಿ.ಪಿ. ಭಿಶ್ಕರ್ ಅವರು ಹೆಡ್ಗೆವಾರ್‌ರ ಜೀವನ ಚರಿತ್ರೆಯಲ್ಲಿ ದಾಖಲಿಸಿರುವಂತೆ: ಮೇಲ್ಜಾತಿಯವರ ಮನೆಗೆ ಹೋದಾಗ ಕೆಳಜಾತಿಯವರ ಜೊತೆ ಊಟ ಮಾಡಿ ಆ ಮನೆಯವರ ಮನಸ್ಸಿಗೆ ನೋವುಂಟುಮಾಡಬಾರದು ಎಂಬುದು ಹೆಡ್ಗೆವಾರ್ ಅವರ ನಿಲುವಾಗಿತ್ತು.
ಹಿಂದೂ ಮಹಾಸಭಾದ ಪ್ರಮುಖ ನಾಯಕರಲ್ಲಿ ಒಬ್ಬರು ಮತ್ತು ಆರೆಸ್ಸೆಸ್‌ನ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಡಾ. ಬಿ.ಎಸ್. ಮೂಂಜೆಯವರಂತೂ ತಮ್ಮ ಡೈರಿಯಲ್ಲಿ:
‘‘ಇವತ್ತಿನ ಸಂದರ್ಭದಲ್ಲಿ ನಾವು ನಮ್ಮ ಎಲ್ಲಾ ಶಕ್ತಿಯನ್ನು, ಹಣ ಮತ್ತು ಇನ್ನಿತರ ಸಂಪನ್ಮೂಲಗಳನ್ನು ಒಗ್ಗೂಡಿಸಿ ಮಾಡಬೇಕಾದ ತುರ್ತು ಕೆಲಸವೆಂದರೆ ಸವರ್ಣೀಯ ಹಿಂದೂಗಳ ಸೈನಿಕ ತರಬೇತಿ. ಆ ತರಬೇತಿಯನ್ನು ಪಡೆದವರು ನಂತರದಲ್ಲಿ ಹಿಂದೂ ಧರ್ಮವನ್ನು ತೊರೆಯುವವರನ್ನು ಮತ್ತು ಆ ರೀತಿ ಹಿಂದೂ ಶ್ರದ್ಧೆಯನ್ನು ತೊರೆಯುವಂತೆ ಮಾಡುವವರನ್ನು ಶಿಕ್ಷಿಸಲು ಸಮರ್ಥರಾಗುತ್ತಾರೆ’’ ಎಂದು ಬರೆದುಕೊಂಡಿದ್ದಾರೆ.
ಹಾಗೆ ನೋಡಿದರೆ 1932ರ ಪೂನಾ ಒಪ್ಪಂದದಲ್ಲಿ ಗಾಂಧಿ ನೀಡಿದ ದಲಿತೋದ್ಧಾರದ ಒಪ್ಪಂದಕ್ಕೆ ಹಿಂದೂ ಸಮಾಜದ ಪರವಾಗಿ ಸಹಿ ಹಾಕಿದವರಲ್ಲಿ ಮೂಂಜೆಯವರೂ ಒಬ್ಬರು. ಆದರೂ ಅವರು ಅಸ್ಪಶ್ಯರು ಮತ್ತು ಅಂಬೇಡ್ಕರ್ ಬಗ್ಗೆ ತಮಗಿದ್ದ ದ್ವೇಷವನ್ನು 1935ರಲ್ಲಿ ಅತ್ಯಂತ ಸ್ಪಷ್ಟವಾಗಿ ಹೀಗೆ ಕಕ್ಕಿಕೊಂಡಿದ್ದರು:
‘....ಅಂಬೇಡ್ಕರ್ ಅವರ ಮೇಲೆ ಮತ್ತು ಅಸ್ಪಶ್ಯರ ಮೇಲೆ ಹಣವನ್ನು ಖರ್ಚು ಮಾಡುವುದೆಂದರೆ ಹಾವಿಗೆ ಹಾಲೆರದಂತೆ. ನಾವು ಅಸ್ಪಶ್ಯರಿಗೆ ಯಾವುದೇ ಸಹಾಯವನ್ನು ಮಾಡದೆ ಅವರ ಕಷ್ಟಗಳನ್ನು ಅವರೇ ಅನುಭವಿಸಲು ಬಿಟ್ಟುಬಿಡಬೇಕು’
(Moonje Diary, Nehru Memorial Museum and Library, ಕೀತ್ ಮೇದೋಕ್ರಾಫ್ಟ್ ಅವರ the Moonje-Ambedkar Pact ಎಂಬಲ್ಲಿ ಉಲ್ಲೇಖ)
ಆದರೂ 1930ರ ನಂತರ ಹಿಂದೂ ಮಹಾಸಭಾ ದಲಿತರ ಬಗ್ಗೆ ತೋರಿಕೆಯ ಮಾತನಾಡಲು ಕಾರಣವಿತ್ತು.
ಭಾರತದ ಸ್ವಾತಂತ್ರ್ಯ ಹೋರಾಟವು ಪ್ರಧಾನವಾಗಿ ಹಿಂದೂ ಸವರ್ಣೀಯ ಮೇಲ್ಜಾತಿಗಳ ನೇತೃತ್ವದಲ್ಲೇ ಇತ್ತು. ಹೀಗಾಗಿ ಅಂಬೇಡ್ಕರ್ ಬರುವ ತನಕ ಭಾರತದ ಸ್ವಾತಂತ್ರ್ಯ ಹೋರಾಟದ ನೇತಾರರು ದಲಿತರನ್ನು ತಮ್ಮಷ್ಟೇ ಸಮಾನರಾದ ನಾಗರಿಕರೆಂದೂ ಪರಿಗಣಿಸಿರಲಿಲ್ಲ. ಸವರ್ಣೀಯ ಹಿಂದೂಗಳು, ಹಿಂದೂ ಸಂಘಟನೆಗಳು ದಲಿತರನ್ನು ಹಿಂದೂ ಸಮಾಜದ ಭಾಗವೆಂದೂ ಪರಿಗಣಿಸಿರಲಿಲ್ಲ. ಅವರಿಗೆ ಜಾತಿ ವಿನಾಶವು ಸ್ವಾತಂತ್ರ್ಯದ ಪ್ರಶ್ನೆಯಾಗಿಯೂ ತೋರಿರಲಿಲ್ಲ.
ಆದರೆ ಸೈಮನ್ ಕಮಿಷನ್, ದುಂಡು ಮೇಜಿನ ಪರಿಷತ್ತಿನ ಚರ್ಚೆಗಳ ನಂತರ 1935ರ ಭಾರತೀಯ ಸರಕಾರ ಕಾಯ್ದೆ ರೂಪುಗೊಂಡು ಪ್ರತಿಯೊಂದು ಕೋಮಿಗೂ ಅದರ ಜನಸಂಖ್ಯೆ ಆಧಾರಿತ ಪ್ರಾತಿನಿಧ್ಯ ಎಂದಾಯಿತು. ಅದಾದ ನಂತರವೇ ದಲಿತರು ಹಿಂದೂ ಧರ್ಮ ತೊರೆದರೆ ಹಿಂದೂ ಕೋಮಿನ ಜನಸಂಖ್ಯೆ ಪ್ರಮಾಣ ಕಡಿಮೆಯಾಗಿ, ಆ ಮೂಲಕ ಹಿಂದೂ ಪ್ರಾತಿನಿಧ್ಯ ಕಡಿಮೆಯಾಗುತ್ತದೆ ಎಂಬ ಭಯ ಕಾಂಗ್ರೆಸ್ ಮತ್ತು ಹಿಂದೂ ಮಹಾ ಸಭಾ ಎರಡನ್ನೂ ಸಮಾನವಾಗಿ ಆವರಿಸಿಕೊಂಡಿತ್ತು.
ಅದರಲ್ಲೂ ಪ್ರಾರಂಭದಲ್ಲಿ ಅಂಬೇಡ್ಕರ್ ಇಸ್ಲಾಮ್ ಧರ್ಮವನ್ನು ಸೇರುವ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದದ್ದು ಸಹ ಹಿಂದೂ ಮಹಾ ಸಭಾದ ಆತಂಕವನ್ನು ಹೆಚ್ಚಿಸಿತು. ಹೀಗಾಗಿ ಒಲ್ಲದ ಮನಸ್ಸಿನಿಂದ ಸಾವರ್ಕರ್ ಮತ್ತು ಮೂಂಜೆಯಂಥ ಹಿಂದೂ ಮಹಾ ಸಭಾದ ನಾಯಕರು ಯಾವ ಕಾರಣಕ್ಕೂ ಅಂಬೇಡ್ಕರ್ ಅವರು ಇಸ್ಲಾಮನ್ನು ಸೇರಬಾರದೆಂದು ಮನ ಒಲಿಸಲು ಮುಂದಾಗುತ್ತಾರೆ. ರಾಜಿ ಮಾತುಕತೆಗೆ ಮುಂದಾಗುತ್ತಾರೆ. ಆದರೆ ಅವೆಲ್ಲವೂ ದಲಿತರನ್ನು ಹೇಗಾದರೂ ಮಾಡಿ ಹಿಂದೂ ಚೌಕಟ್ಟಿನ ಒಳಗೆ ಉಳಿಸಿಕೊಳ್ಳುವ ರಾಜಕೀಯ ಲೆಕ್ಕಾಚಾರದಿಂದಲೇ ವಿನಾ ದಲಿತರ ಮೇಲಿನ ಕಾಳಜಿಯಿಂದಲ್ಲ.
ಇಂದು ಕೂಡ ಬಿಜೆಪಿ ಮತ್ತು ಆರೆಸ್ಸೆಸ್ ದಲಿತರ ಬಗ್ಗೆ ಇದೇ ಧೋರಣೆಯನ್ನೇ ಅನುಸರಿಸುತ್ತಿದೆ. ಅವರ ಹಿಂದೂ ರಾಷ್ಟ್ರದಲ್ಲಿ ದಲಿತರ ಸ್ಥಾನ ವರ್ಣಾಶ್ರಮದಲ್ಲಿ ಎಲ್ಲಿದೆಯೋ ಅಲ್ಲೇ ಇರುತ್ತದೆಂಬುದನ್ನು ಅವರು ಪದೇಪದೇ ಸಾಬೀತುಪಡಿಸುತ್ತಲೇ ಇದ್ದಾರೆ.
ಹೀಗಾಗಿ ಸಾವರ್ಕರ್ ಹಿಂದೂ ಧರ್ಮದೊಳಗಿನ ಕ್ರಿಟಿಕಲ್ ಇನ್ ಸೈಡರೂ ಅಲ್ಲ.. ಮಣ್ಣಾಂಗಟ್ಟಿಯೂ ಅಲ್ಲ. ಪಕ್ಕಾ ಬ್ರಾಹ್ಮಣಶಾಹಿ ಮರುಸ್ಥಾಪಕ ಅಷ್ಟೆ.
ಮಿಥ್ಯೆ 7 : ಸಾವರ್ಕರ್ ದೇಶದ್ರೋಹಿಯಾಗಿದ್ದರೆ, ಕ್ಷಮಾಪಣೆ ಕೇಳಿದ್ದರೆ ಬ್ರಿಟಿಷರು ಅವರಿಗೆ 50 ವರ್ಷ ಕರಿನೀರಿನ ಶಿಕ್ಷೆ ನೀಡಿದ್ದೇಕೆ?
ಸಾವರ್ಕರ್ ಪ್ರತಿಪಾದಕರು ಮತ್ತು ಅವರ ವಿರೋಧಿಗಳು ಇಬ್ಬರೂ ಕೂಡ ಸಾವರ್ಕರ್ ಅವರ ರಾಜಕೀಯ ಬದುಕನ್ನು ಎರಡು ಭಾಗಗಳನ್ನಾಗಿ ಅರ್ಥ ಮಾಡಿಕೊಂಡರೆ ವಿಷಯಕ್ಕೆ ಸ್ಪಷ್ಟತೆ ಬರುತ್ತದೆ.
ಸಾವರ್ಕರ್ ಅವರು 1911ರಲ್ಲಿ ಲಂಡನ್‌ನಲ್ಲಿ ಬಂಧನಕ್ಕೊಳಗಾಗುವ ತನಕ ಕ್ರಾಂತಿಕಾರಿ ‘ಅಭಿನವ್ ಭಾರತ್’ ಸಂಘಟನೆಯ ಬ್ರಿಟಿಷ್ ವಿರೋಧಿ ಕ್ರಾಂತಿಕಾರಿ ಚಟುವಟಿಕೆಗಳಿಗೆ ತೆರೆಮರೆಯಲ್ಲಿ ರಾಜಕೀಯ ಮಾರ್ಗದರ್ಶನ ಮಾಡುತ್ತಿದ್ದರು. 1906ರಲ್ಲಿ ಅವರು ಲಂಡನ್‌ಗೆ ಹೋದಾಗ ಅಲ್ಲಿಯ ಇಂಡಿಯಾ ಹೌಸ್‌ನಲ್ಲಿ ಸಭೆ ಸೇರುತ್ತಿದ್ದ ಭಾರತದ ಕ್ರಾಂತಿಕಾರಿ ತರುಣರಿಗೆ ಬ್ರಿಟಿಷ್ ವಿರೋಧಿ ಬಂಡಾಯದ ದೀಕ್ಷೆ ಕೊಡುತ್ತಿದ್ದರು ಮತ್ತು ಅಲ್ಲಿಂದಲೇ ತಮ್ಮ ಮಹಾರಾಷ್ಟ್ರದ ಸ್ನೇಹಿತರಿಗೆ ಪಿಸ್ತೂಲು ಇತ್ಯಾದಿ ಸರಬರಾಜು ಮಾಡುತ್ತಿದ್ದರು.
ಆದರೆ ಈ ಪ್ರಕ್ರಿಯೆಯಲ್ಲಿ ಸೆರೆಯಾಗುತ್ತಿದ್ದ ಯಾರೂ ಸಾವರ್ಕರ್ ಹೆಸರು ಹೇಳುತ್ತಿರಲಿಲ್ಲ. ಉದಾಹರಣೆಗೆ ಲಂಡನ್‌ನಲ್ಲಿ ಬ್ರಿಟಿಷ್ ಅಧಿಕಾರಿ ಕರ್ಜನ್ ವೈಲಿಯನ್ನು ಕೊಲ್ಲಲು ಮದನ್‌ಲಾಲ್ ಧಿಂಗಾನನ್ನು ಅಥವಾ 1948ರಲ್ಲಿ ಗಾಂಧಿಯನ್ನು ಕೊಲ್ಲಲು ನಾಥೂರಾಮ್ ಗೋಡ್ಸೆಯನ್ನು ಪ್ರೇರೇಪಿಸಿದ್ದು ಸಾವರ್ಕರ್ ಅವರೇ ಆದರೂ ಕೊಲೆಯಲ್ಲಿ ಅವರ ಪಾತ್ರದ ಬಗ್ಗೆ ಅವರಿಬ್ಬರೂ ಸಾಕ್ಷಿ ಹೇಳಲಿಲ್ಲ. ಆದರೆ 1909ರಲ್ಲಿ ‘ಅಭಿನವ್ ಭಾರತ್’ನ ಒಂದು ಗುಂಪು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಎ.ಟಿ.ಎಂ. ಜಾಕ್ಸನ್ ಅವರನ್ನು ಕೊಂದುಹಾಕಿತು. ಅದಕ್ಕೆ ಬಳಸಲಾದ ಪಿಸ್ತೂಲು ಸಾವರ್ಕರ್ ಲಂಡನ್‌ನಿಂದ ಕಳಿಸಿದ್ದು ಎಂದು ಸಾಕ್ಷಿ ಸಿಕ್ಕಿತು. ಇದೊಂದು ಪ್ರಕರಣದಲ್ಲಿ ಮಾತ್ರ ಮೊದಲ ಬಾರಿಗೆ ಹಾಗೂ ಕೊನೆಯ ಬಾರಿಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದ ಸಾವರ್ಕರ್ ಶಿಕ್ಷೆಗೆ ಗುರಿಯಾದರು.
ಅವರ ವಿಚಾರಣೆಯಲ್ಲಿ ಸಾವರ್ಕರ್ ಅವರು ಬ್ರಿಟಿಷ್ ಸಾಮ್ರಾಜ್ಯವನ್ನು ಹಿಂಸಾತ್ಮಕವಾಗಿ ಬುಡಮೇಲು ಮಾಡಬೇಕೆಂಬ ಆಶಯವನ್ನು ಹೊಂದಿದ್ದ ಅಭಿನವ್ ಭಾರತ್ ಗುಂಪಿನ ನಾಯಕ ಎಂದು ಸಾಬೀತಾಯಿತು. ಸಾಮಾನ್ಯವಾಗಿ ಬ್ರಿಟಿಷರು ಇಂಥ ಕ್ರಾಂತಿಕಾರಿ ನಾಯಕರನ್ನು ಸೆರೆ ಹಿಡಿಯುವ ಮುನ್ನವೇ ಕೊಂದು ಹಾಕುತ್ತಿದ್ದರು ಅಥವಾ ಗಲ್ಲುಶಿಕ್ಷೆ ವಿಧಿಸುತ್ತಿದ್ದರು. ಆದರೆ ಸಾವರ್ಕರ್ ಅವರಿಗೆ 50 ವರ್ಷಗಳ ಶಿಕ್ಷೆ ವಿಧಿಸಿ ಆ ಕಾಲಕ್ಕೆ ಹಿಂಸಾತ್ಮಕ ದಾರಿ ಹಿಡಿದಿದ್ದ ಎಲ್ಲಾ ಕ್ರಾಂತಿಕಾರಿಗಳಿಗೆ ಕೊಡುತ್ತಿದ್ದ ಕರಿನೀರಿನ ಶಿಕ್ಷೆಯನ್ನು ಕೊಟ್ಟರು. ಅವರಿಗೆ ಮುಂಚೆಯೂ ಅಲ್ಲಿ ಸಾವಿರಾರು ಕ್ರಾಂತಿಕಾರಿ ಹೋರಾಟಗಾರರು ಹತ್ತಾರು ವರ್ಷ ಶಿಕ್ಷೆಗೆ ಗುರಿಯಾಗಿ ಒಂದೂ ಕ್ಷಮಾಪಣಾ ಪತ್ರ ಬರೆಯದೆ ಶಿಕ್ಷೆ ಮುಗಿಸಿ ಹೊರಬಿದ್ದಿದ್ದಾರೆ.
ಆದರೆ ಸಾವರ್ಕರ್ ಅವರಿಗೆ 50 ವರ್ಷ ಜೀವಾವಧಿ ಶಿಕ್ಷೆಯಾಗಿದ್ದರೂ ಅವರು ಅಲ್ಲಿ ಶಿಕ್ಷೆ ಅನುಭವಿಸಿದ್ದು ಕೇವಲ 10 ವರ್ಷಗಳು ಮಾತ್ರ.