×
Ad

ವಂದೇ ಮಾತರಂ -150 : ಜನಗಣದ ಭಾರತ ಮಾತೆಗಾಗಿಯೋ? ಗಣವೇಷದ ಹಿಂದೂ ಮಾತೆಗಾಗಿಯೋ?

Update: 2025-11-14 10:26 IST

ಚಿಕಿತ್ಸಕ: ಈಗ ಈ ದೇಶದಲ್ಲಿ ಬಹಿರ್ವಿಷಯಕವಾದ ಜ್ಞಾನವೇ ಇಲ್ಲ. ತಿಳಿಸಿ ಹೇಳಿಕೊಡುವ ಜನರಿಲ್ಲ; ನಾವು ಜನಗಳಿಗೆ ಶಿಕ್ಷಿಸುವುದರಲ್ಲಿ ಅಷ್ಟು ಸಮರ್ಥರಾಗಿಲ್ಲ; ಆದ ಕಾರಣ ಬೇರೆ ದೇಶದಿಂದ ಬಹಿರ್ವಿಷಯಕವಾದ ಜ್ಞಾನವು ಬರಬೇಕು. ಇಂಗ್ಲಿಷರು ಬಹಿರ್ವಿಷಯಕವಾದ ಜ್ಞಾನದಲ್ಲಿ ಪಂಡಿತರು, ಜನಗಳಿಗೆ ತಿಳಿಸುವುದರಲ್ಲಿ ಪಟುಗಳಾಗಿದ್ದಾರೆ. ಆದುದರಿಂದ ಇಂಗ್ಲಿಷರು ರಾಜರಾಗಬೇಕು. ಇಂಗ್ಲಿಷ್ ಕಲಿತರೆ ಬಹಿರ್ವಿಷಯಕವಾದ ಜ್ಞಾನದಲ್ಲಿ ಸುಶಿಕ್ಷತರಾಗಿ ಜನರು ಅಂತಃಸತ್ವವನ್ನು ತಿಳಿಯಲು ಸಮರ್ಥರಾಗುವರು. ಆಗ ಆರ್ಯಧರ್ಮದ ಪ್ರಚಾರಕ್ಕೆ ವಿಘ್ನವುಂಟಾಗುವುದಿಲ್ಲ. ಆಗ ನಿಜವಾದ ಧರ್ಮವು ತನಗೆ ತಾನಾಗಿಯೇ ಪುನರುದ್ದೀಪ್ತವಾಗುವುದು. ಎಷ್ಟುದಿನ ಹಾಗಾಗುವುದಿಲ್ಲವೋ ಎಷ್ಟು ದಿನ ಹಿಂದೂಗಳು ಜ್ಞಾನಿಗಳಾಗುವುದಿಲ್ಲವೋ, ಗುಣಾಢ್ಯರಾಗುವುದಿಲ್ಲವೋ, ಬಲಿಷ್ಠರಾಗುವುದಿಲ್ಲವೋ ಅಷ್ಟುದಿನ ಇಂಗ್ಲಿಷರ ರಾಜ್ಯವು ಅಕ್ಷಯವಾಗಿರುವುದು. ಇಂಗ್ಲಿಷರ ರಾಜ್ಯದಲ್ಲಿ ಪ್ರಜೆಗಳು ಸುಖಿಗಳಾಗುವರು. ನಿಷ್ಕಂಟಕವಾಗಿ ಧರ್ಮಾಚರಣೆಯನ್ನು ಮಾಡಬಲ್ಲರು. ಆದುದರಿಂದ ಎಲೈ ಬುದ್ಧಿವಂತನೆ! ಇಂಗ್ಲಿಷರ ಸಂಗಡ ಯುದ್ಧಮಾಡದೆ ನನ್ನನ್ನು ಅನುಸರಿಸಿ ಬಂದುಬಿಡು. (ಪು. 159)

ಸತ್ಯಾನಂದನ ಕಣ್ಣುಗಳಿಂದ ಕಿಡಿಕೆಂಡಗಳು ಸುರಿದವು. ಅವನು ಶತ್ರುಗಳ ರಕ್ತದಿಂದ ಸಿಂಚನೆಮಾಡಿ ಮಾತೆಯನ್ನು ಸಸ್ಯಶಾಲಿನಿಯಾಗಿ ಮಾಡುವೆನೆಂದನು.

ಮಹಾಪುರುಷ -ಶತ್ರು ಯಾರು ಶತ್ರುಗಳು ಇನ್ನು ಇಲ್ಲ. ಇಂಗ್ಲಿಷರು ಮಿತ್ರರಾಜರು. ಇಂಗ್ಲಿಷರ ಸಂಗಡ ಯುದ್ಧವಾಡಿ ಜಯಿಸುವುದಕ್ಕೆ ಯಾರಿಗೂ ಶಕ್ತಿ ಇಲ್ಲ.

ಸತ್ಯಾನಂದ: ಶಕ್ತಿ ಇಲ್ಲದಿದ್ದರೆ ಇಲ್ಲಿಯೇ ಈ ಮಾತೆಯ ಪ್ರತಿಮೆಯ ಎದುರಿಗೆ ದೇಹತ್ಯಾಗವನ್ನು ಮಾಡಿಬಿಡುವೆನು.

ಮಹಾಪುರುಷ: ಅಜ್ಞಾನದಿಂದಲೆ? ನಡೆ. ಜ್ಞಾನಲಾಭವನ್ನು ಮಾಡು, ಹಿಮಾಲಯಶಿಖರದಲ್ಲಿ ಮಾತೃಮಂದಿರವಿರುವುದು. ಅಲ್ಲಿಯೇ ಮಾತೆಯ ಮೂರ್ತಿಯನ್ನು ತೋರಿಸುವೆನು (ಪು.160)

- ಮುಕ್ತಾಯ-

ಈ ಮೊದಲೇ ಹೇಳಿದಂತೆ ಬಂಗಾಳದ ಕಂಡುಕೇಳರಿಯದ ಬರಗಾಲಕ್ಕೆ ಬ್ರಿಟಿಷರು ಜಾರಿಗೆ ತಂದ ಕೃಷಿ ಮತ್ತು ಆಡಳಿತ ನೀತಿಗಳೇ ಕಾರಣ. ಅದನ್ನು ಜಾರಿಗೆ ತಂದವರು ಮುಸ್ಲಿಮ್ ನವಾಬರು. ಆದರೆ ಕಾದಂಬರಿಯಲ್ಲಿ ಬ್ರಿಟಿಷರ ವಿರುದ್ಧ ಸೊಲ್ಲೇ ಕೇಳಿ ಬರುವುದಿಲ್ಲ. ಉದಾಹರಣೆಗೆ ಮುಸ್ಲಿಮ್ ನವಾಬನ ಜೊತೆ ಬ್ರಿಟಿಷ್ ಸೈನ್ಯ ಸೇರಿಕೊಂಡಾಗ ಕಾದಂಬರಿಯ ನಾಯಕನಿಗೆ ಬಂಡಾಯಗಾರರು ‘‘ನಮಗೆ ಬ್ರಿಟಿಷರು ಶತ್ರುಗಳಲ್ಲ. ಅವರು ಗೆಲ್ಲಲಿ.’’ ಎಂದು ಆದೇಶಿಸುತ್ತಾರೆ. ಮೇಲೆ ನೋಡಿದಂತೆ ಕಾದಂಬರಿಯ ಅಂತ್ಯದಲ್ಲಿ ಒಂದು ಅಶರೀರ ವಾಣಿಯು ಮುಸ್ಲಿಮರನ್ನು ಕಿತ್ತೊಗೆದದ್ದರಿಂದ ಅವನ ಗುರಿ ಈಡೇರಿದೆಯೆಂದು ಘೋಷಿಸುತ್ತದೆ. ಇನ್ನೂ ಬಂಗಾಳದ ಆಡಳಿತವನ್ನು ದೈವಕೃಪೆಯಿಂದ ಬ್ರಿಟಿಷರೇ ವಹಿಸಿಕೊಳ್ಳುವುದರಿಂದ ಹಿಂದೂಗಳಿಗೆ ಯಾವುದೇ ತೊಂದರೆಯಾಗುವುದಿಲ್ಲವೆಂದೂ, ಈ ಬಂಡಾಯದ ಉದ್ದೇಶವಿದ್ದದ್ದೇ ಬ್ರಿಟಿಷರು ನೇರವಾಗಿ ಆಡಳಿತ ವಹಿಸುವಂತೆ ಮಾಡುವುದಾಗಿತ್ತೆಂದು ಆ ದೈವವಾಣಿ ತಿಳಿಹೇಳುತ್ತದೆ. ಆದರೆ ಇದರಿಂದ ಸಮಾಧಾನವಾಗದ ಕಥಾನಾಯಕ ‘‘ಮುಸ್ಲಿಮ್ ಆಡಳಿತ ಕಿತ್ತೊಗೆದರೂ ಹಿಂದೂಗಳ ಆಡಳಿತವನ್ನು ಸ್ಥಾಪಿಸಲಾಗದೆ ಇರುವುದರಿಂದ ನಮ್ಮ ಗುರಿ ಇನ್ನೂ ಮುಟ್ಟಿಲ್ಲ’’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾನೆ. ಆದರೆ ಆ ದೈವವಾಣಿಯು ಅದರ ಬಗ್ಗೆ ಯೋಚಿಸುವ ಅಗತ್ಯವಿಲ್ಲವೆಂದೂ ಬ್ರಿಟಿಷರು ಸನಾತನ ಧರ್ಮವನ್ನು ಗೌರವಿಸುತ್ತಾರೆಂದೂ, ಅವರ ಆಡಳಿತದಿಂದ ಹಿಂದೂಗಳಿಗೆ ಭೌತಿಕ ಲಾಭವಿದೆಯೆಂದೂ ಸಮಾಧಾನಪಡಿಸುತ್ತದೆ.

ಹೀಗೆ ಯಾವುದನ್ನು ದೇಶಭಕ್ತಿಯ ಪ್ರತೀಕ ಎಂದು ಪ್ರಚಾರ ಮಾಡಲಾಗುತ್ತಿದೆಯೋ ಆ ಗೀತೆ ಮತ್ತು ಕಾದಂಬರಿಯ ಉದ್ದೇಶವೇ ನೇರ ಬ್ರಿಟಿಷ್ ವಸಾಹತು ಆಡಳಿತವನ್ನು ಜಾರಿಗೆ ತರುವುದಾಗಿತ್ತು!!

ಬ್ರಿಟಿಷರ ದಮನಕ್ಕೆ ‘ನೀಲ ದರ್ಪಣ್’ - ಬ್ರಿಟಿಷ್ ಮೆಚ್ಚುಗೆಗೆ

‘ಆನಂದ ಮಠ’

ಕಾದಂಬರಿಯ ಈ ನಿಜವಾದ ಸಂದೇಶವನ್ನು ಅರ್ಥಮಾಡಿಕೊಂಡೇ ಬ್ರಿಟಿಷ್ ಸರಕಾರವು 1881ರಲ್ಲಿ ಹಣಕಾಸು ಇಲಾಖೆಯಲ್ಲಿ ಹುಟ್ಟುಹಾಕಿದ ಹೊಸ ಅಸಿಸ್ಟೆಂಟ್ ಸೆಕ್ರೆಟರಿ ಹುದ್ದೆಗೆ ಬಂಕಿಮಚಂದ್ರರನ್ನು ಆಯ್ಕೆ ಮಾಡಿ ಪುರಸ್ಕರಿಸಿತು. ಆಮೇಲೆ ಕೆಲವರ ವಿರೋಧದಿಂದಾಗಿ ಅವರನ್ನು ಅಧೀನ ಕಾರ್ಯದರ್ಶಿ ಹುದ್ದೆಗೆ ಇಳಿಸಲಾಯಿತಾದರೂ ಕೆಲಸದಿಂದೇನೂ ತೆಗೆಯಲಿಲ್ಲ.

ವಾಸ್ತವವಾಗಿ ಆ ಸಂದರ್ಭದಲ್ಲಿ ಬ್ರಿಟಿಷ್ ಆಡಳಿತ ತನ್ನ ವಿರುದ್ಧ ವ್ಯಕ್ತವಾಗುತ್ತಿದ್ದ ಎಲ್ಲಾ ಬಗೆಯ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನೂ ಹತ್ತಿಕ್ಕುತ್ತಿದ್ದ ಕಾಲ. ಉದಾಹರಣೆಗೆ ದೀನಬಂಧು ಮಿತ್ರರವರ ‘ನೀಲ ದರ್ಪಣ್’ ಎಂಬ ಕೃತಿ 1861ರಲ್ಲಿ ಪ್ರಕಟವಾಯಿತು. ಅದು ಪ್ಲಾಂಟೇಷನ್ಗಳಲ್ಲಿ ಬ್ರಿಟಿಷರು ಹೇಗೆ ಸ್ವದೇಶೀಯರನ್ನು ಶೋಷಿಸುತ್ತಿದ್ದಾರೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿತ್ತು. ಅದರ ಇಂಗ್ಲಿಷ್ ಅನುವಾದ ಆಳರಸರ ಕೆಂಗಣ್ಣಿಗೆ ಗುರಿಯಾಗಿದ್ದು ಮಾತ್ರವಲ್ಲದೆ ಅದರ ಅನುವಾದಕ ರೆವೆರೆಂಡ್ ಜೇಮ್ಸ್ ಲಾಂಗ್ನನ್ನು ಸೆರೆಮನೆಗೂ ದೂಡಲಾಯಿತು.

ಅದೇ ರೀತಿ ಬ್ರಿಟಿಷರನ್ನು ವಿಮರ್ಶಿಸಿ ಬರೆದ ಕೃತಿಗಳಾದ ಉಪೇಂದ್ರನಾಥ ದಾಸರ ‘ಶರತ್ ಸರೋಜಿನಿ ನಾಟಕ್’ ಮತ್ತು ‘ಸುರೇಂದ್ರ ಬಿನೋದಿನಿ ನಾಟಕ್’ಗಳನ್ನು ಬ್ರಿಟಿಷ್ ಸರಕಾರ ಬಹಿಷ್ಕರಿಸಿ ಲೇಖಕರನ್ನು ಬಂಧಿಸಿತು. 1876ರಲ್ಲಿ ಪ್ರಕಟವಾದ ದಕ್ಷಿಣರಂಜನ್ ಚಟ್ಟೋಪಾಧ್ಯಾಯರವರ ‘ಚಾ ಕಾರ್ ದರ್ಪಣ್’ ಕೃತಿಯಂತೂ ಬ್ರಿಟಿಷ್ ಸರಕಾರವು ಇಂತಹ ಕೃತಿಗಳನ್ನು ಬಹಿಷ್ಕರಿಸಲು ‘ಡ್ರಾಮಾಟಿಕ್ ಪರ್ಫಾಮೆನ್ಸ್ ’ ಆಕ್ಟ್ ಅನ್ನು ಜಾರಿಗೆ ತರಲು ಕಾರಣವಾಯಿತು.

ಇದು ನಿಜಕ್ಕೂ ಬ್ರಿಟಿಷ್ ವಿರೋಧಿ ದೇಶಭಕ್ತಿ ಸಂಪನ್ನ ಕೃತಿಗಳ ಬಗ್ಗೆ ಬ್ರಿಟಿಷ್ ಸರಕಾರ ನಡೆದುಕೊಳ್ಳುತ್ತಿದ ರೀತಿ. ಆದರೆ ‘ದೇಶಭಕ್ತ’ ಕೃತಿಯೆಂದು ಪರಿಗಣಿಸಲ್ಪಡುತ್ತಿರುವ ‘ಆನಂದಮಠ’ವನ್ನು ಬ್ರಿಟಿಷ್ ಸರಕಾರ ಹೇಗೆ ಭಾವಿಸಿತು?. ‘ಆನಂದಮಠ’ದ ಮೊದಲ ಆವೃತ್ತಿಗೆ ಬರೆದ ಮುನ್ನುಡಿಯಲ್ಲೇ ಬಂಕಿಮಚಂದ್ರರು ತನ್ನ ಕಾದಂಬರಿಯ ಬಂಡಾಯ ‘ಸಾಮಾಜಿಕ ಬಂಡಾಯ’ವೇ ಹೊರತು ರಾಜಕೀಯ ಬಂಡಾಯವಲ್ಲವೆಂದು-ಅರ್ಥಾತ್ ಬ್ರಿಟಿಷ್ ವಿರೋಧಿ ಕೃತಿಯಲ್ಲವೆಂದು ಸ್ಪಷ್ಟಪಡಿಸಿಬಿಟ್ಟಿದ್ದರು.

ಇತಿಹಾಸಕಾರ್ತಿ ತನಿಕಾ ಸರಕಾರ್ ಅವರ ಅಧ್ಯಯನ ಸ್ಪಷ್ಟ ಪಡಿಸುವಂತೆ 1882-1885ರ ನಡುವೆ ‘ಆನಂದಮಠ’ ಕಾದಂಬರಿಯ ಐದು ಭಿನ್ನ ಆವೃತ್ತಿಗಳು ಪ್ರಕಟವಾದವು. ಮೊದಲ ಆವೃತ್ತಿಗೂ ಹಾಗೂ ಕೊನೆಯ ಆವೃತ್ತಿಗೂ ಅಂದಾಜು 259 ವ್ಯತ್ಯಾಸಗಳಿದ್ದವು. ಆದರೂ ಐದೂ ಆವೃತ್ತಿಗಳು ಅತ್ಯಂತ ಸ್ಪಷ್ಟವಾಗಿ ಮುಸ್ಲಿಮ್ ದ್ವೇಷಿ ಮತ್ತು ಬ್ರಿಟಿಷ್ ಪರವಾಗಿಯೇ ಇದ್ದಿದ್ದರಲ್ಲಿ ಯಾವುದೇ ಮಹತ್ತರ ಬದಲಾವಣೆಗಳಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಿವಸುಂದರ್

contributor

Similar News