ವಂದೇ ಮಾತರಂ -150: ಜನಗಣದ ಭಾರತ ಮಾತೆಗಾಗಿಯೋ? ಗಣವೇಷದ ಹಿಂದೂ ಮಾತೆಗಾಗಿಯೋ?
ಭಾಗ - 4
1883ರ ಮಾರ್ಚ್ 31ರಂದು ಬ್ರಿಟಿಷ್ ಆಡಳಿತದ ಅಧಿಕೃತ ಗೆಝೆಟ್ಟಿನಲ್ಲಿ ‘‘ಈ ಕಾದಂಬರಿಯು ಧಾರ್ಮಿಕ ಭಾವನೆಗಳಿಂದ ಪ್ರೇರಿತಗೊಂಡ, ಮುಸ್ಲಿಮ್ ಆಳ್ವಿಕೆಯ ಕೊನೆಯನ್ನು ಬಯಸುವ ಮತ್ತು ಬ್ರಿಟಿಷರು ಭಾರತದ ಮೇಲೆ ಸಂಪೂರ್ಣ ಸ್ವಾಮ್ಯ ಪಡೆಯಬೇಕೆಂಬ ಆಶಯವುಳ್ಳ ಕಾದಂಬರಿ’’ಯೆಂದು ಹೊಗಳಲಾಗಿತ್ತು.
1937ರಲ್ಲಿ ವೈಸ್‌ರಾಯ್ ಕೌನ್ಸಿಲ್‌ನ ಸದಸ್ಯನಾಗಿದ್ದ ಸರ್ ಹೆನ್ರಿ ಕ್ರೈಕ್ ‘‘ಈ ಕಾದಂಬರಿಯು ಮುಸ್ಲಿಮರ ವಿರುದ್ಧ ಘೋಷಗೀತೆ’’ಯೆಂದೇ ಬಣ್ಣಿಸಿದ್ದನು. ಹೀಗಾಗಿಯೇ ಈ ಹಾಡನ್ನಾಗಲೀ, ಕಾದಂಬರಿಯನ್ನಾಗಲೀ ಬ್ರಿಟಿಷ್ ಆಡಳಿತ ಯಾವತ್ತೂ ನಿಷೇಧಿಸಲಿಲ್ಲ!
ಇದು ‘ವಂದೇ ಮಾತರಂ’ ಮತ್ತು ‘ಆನಂದಮಠ’ಗಳ ನಿಜಸ್ವರೂಪ.
ಹೀಗಾಗಿಯೇ ಬಲಪಂಥೀಯರು ಆರಾಧಿಸುವ ಪ್ರಖ್ಯಾತ ಇತಿಹಾಸಕಾರ ಆರ್.ಸಿ. ಮಜುಂದಾರ್ ಸಹ ‘ಆನಂದಮಠ’ವನ್ನು ವಿಶ್ಲೇಷಿಸುತ್ತಾ ‘‘ಬಂಕಿಮಚಂದ್ರರು ದೇಶಭಕ್ತಿಯನ್ನು ಮತಧರ್ಮವಾಗಿಯೂ, ಮತಧರ್ಮವನ್ನು ದೇಶಭಕ್ತಿಯಾಗಿಯೂ ಮಾಡಿಬಿಟ್ಟರು ಮತ್ತು ರಾಷ್ಟ್ರವನ್ನು ಕಾಳಿ ಮಾತೆಯೆಂದೇ ಸಂಕೇತಿಸಲಾಗಿದೆ’’ ಎಂದು ಹೇಳುತ್ತಾರೆ.
‘ವಂದೇ ಮಾತರಂ’ ಘೋಷಣೆ ಮತ್ತು ಸ್ವಾತಂತ್ರ್ಯ ಹೋರಾಟ
ಬ್ರಿಟಿಷ್ ವಾಸಾಹತುಶಾಹಿ ವಿರುದ್ಧ ಭಾರತದಲ್ಲಿ ಎರಡು ಶತಮಾನಗಳ ಕಾಲ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಗುಲಾಮಿ ಮಾಡಿದ ಕೆಲವು ರಾಜರುಗಳು, ಬ್ರಿಟಿಷ್ ಕೃಪಾಪೋಷಿತ ಭೂಮಾಲಕ, ವರ್ತಕ ಮತ್ತು ಬಂಡವಾಳಶಾಹಿ ವರ್ಗಗಳನ್ನು ಬಿಟ್ಟರೆ ಹಾಗೂ ಆರೆಸ್ಸೆಸ್, ಹಿಂದೂ ಮಹಾಸಭಾ, ಮುಸ್ಲಿಮ್ ಲೀಗ್‌ನಂತಹ ಕೋಮುವಾದಿ ಸಂಘಟನೆಗಳನ್ನು ಬಿಟ್ಟರೆ ಇಡೀ ಭಾರತ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಕ್ಷಿಕವಾಗಿ ಅಥವಾ ಪೂರ್ತಿಯಾಗಿ ತೊಡಗಿಕೊಂಡಿತ್ತು. 1930ರ ನಂತರದಲ್ಲಿ ಕಾಂಗ್ರೆಸ್ ಕೂಡ ಸಂಪೂರ್ಣ ಸ್ವಾತಂತ್ರ್ಯದ ಆಗ್ರಹಗಳನ್ನು ಮುಂದಿಡತೊಡಗಿತ್ತು. ಇದರಲ್ಲಿ ಹಿಂದೂ ಮತ್ತು ಮುಸ್ಲಿಮರು ಧಾರ್ಮಿಕ ಭೇದಗಳಿಲ್ಲದೆ ಒಟ್ಟಾಗಿ ಬೆರೆತು ಬೆಸೆದು ಹೋರಾಟ ಕಟ್ಟಿದರು. ಹೀಗಾಗಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ‘‘ವಂದೇ ಮಾತರಂ - ಅಲ್ಲಾಹು ಅಕ್ಬರ್’’ ಘೋಷಣೆಗಳನ್ನು ಹಿಂದೂ ಮುಸ್ಲಿಮರಿಬ್ಬರೂ ಹಾಕುತ್ತಿದ್ದರು. ಒಂದು ಹಂತದ ತನಕ ಇದರಲ್ಲಿ ಸ್ವಾತಂತ್ರ್ಯದ ಆಶಯಗಳಿತ್ತೇ ವಿನಾ ಮತಧರ್ಮಗಳ ರಾಜಕಾರಣ ಕಂಡು ಬರುತ್ತಿರಲಿಲ್ಲ. ಹಾಗೆಯೇ ಅಲ್ಲಮ ಇಕ್ಬಾಲರ ‘ಸಾರೇ ಜಹಾಂಸೆ ಅಚ್ಛಾ ಹಿಂದೂಸಿತಾ ಹಮಾರ’ ಹಾಡು, ರಾಂಪ್ರಸಾದ್ ಬಿಸ್ಮಿಲ್ಲಾರ ‘ಸರ್ಫ್‌ರೋಷಿ ಕಿ ತಮನ್ನಾ’ ಎಂಬ ಹಾಡು, ಭಗತ್ ಸಿಂಗ್‌ರ ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಗಳೂ ಕೂಡ.
ಆದರೆ ಭಾರತದ ರಾಜಕಾರಣದಲ್ಲಿ ಬ್ರಿಟಿಷರ ಒಡೆದಾಳುವ ರಾಜಕಾರಣದ ಪರಿಣಾಮವಾಗಿ ಭಾರತದ ರಾಷ್ಟ್ರೀಯ ಹೋರಾಟದಲ್ಲೂ ಹಿಂದೂ ಮತ್ತು ಮುಸ್ಲಿಮ್ ಕೋಮುವಾದಿ ರಾಜಕಾರಣವೂ 1909ರ ನಂತರ ಹರಳುಗಟ್ಟತೊಡಗಿತು. ಅದರ ಭಾಗವಾಗಿಯೇ 1905-1930ರ ನಡುವೆ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾತಂತ್ರ್ಯದ ಆಶಯವಾಗಿ ‘ವಂದೇ ಮಾತರಂ’ ಘೋಷಣೆಯನ್ನು ಮುಸ್ಲಿಮರು ಕೂಡ ಅಪ್ರಜ್ಞಾಪೂರ್ವಕವಾಗಿಯೇ ಘೋಷಿಸುತ್ತಿದ್ದರೂ ಎಚ್ಚೆತ್ತ ಮುಸ್ಲಿಮ್ ಪ್ರಜ್ಞೆ ‘ವಂದೇ ಮಾತರಂ’ ಹಾಡಿನ ಪೂರ್ಣಪಠ್ಯ ಹಾಗೂ ‘ಆನಂದ ಮಠ’ ಕಾದಂಬರಿಯ ಆಶಯಗಳ ಹಿನ್ನೆಲೆಯಲ್ಲಿ ಅದರ ಪ್ರಸ್ತುತತೆಯನ್ನು ಸಣ್ಣ ಧ್ವನಿಯಲ್ಲಿ ಪ್ರಶ್ನಿಸಲಾರಂಭಿಸಿತು. ಕಾಂಗ್ರೆಸ್ ಅಧಿವೇಶನದಲ್ಲಿ ‘ವಂದೇ ಮಾತರಂ’ ಘೋಷಣೆ ಸ್ವಾತಂತ್ರ್ಯದ ಆಶಯದ ಸಂಕೇತವಾಗಿ ಹಾಕಲ್ಪಡುತ್ತಿದ್ದರೂ 1909-47ರ ನಡುವೆ ನಡೆದ ಹಲವಾರು ಕೋಮು ಗಲಭೆಗಳಲ್ಲಿ ‘ಅಲ್ಲಾಹು ಅಕ್ಬರ್’ ಮುಸ್ಲಿಮ್ ಕೋಮುವಾದಿಗಳ ಘೋಷಣೆಯಾಗಿದ್ದರೆ ‘ವಂದೇ ಮಾತರಂ’ ಹಿಂದೂ ಕೊಮುವಾದಿಗಳ ಘೋಷಣೆಯಾಗತೊಡಗಿತು.
ರಾಷ್ಟ್ರವನ್ನು ಮನುಷ್ಯರೂಪಿ ದೇವರಾಗಿ, ಸ್ವಾತಂತ್ರ್ಯ ವಿಗ್ರಹವಾಗಿ-ಪ್ರತಿಮೆಯಾಗಿ ಕಲ್ಪಿಸಿಕೊಳ್ಳುವುದು ಹಿಂದೂಗಳಲ್ಲಿ ಜಾಗೃತಿಗೆ ಪೂರಕವೇ ಆಗಿದ್ದರೂ, ರಾಷ್ಟ್ರವಾದಿ ಮುಸ್ಲಿಮರಿಗೆ ಅದು ಧಾರ್ಮಿಕ ಇಬ್ಬಂದಿಯನ್ನು ಹುಟ್ಟಿಸುವ ಸಂಗತಿಯೂ ಆಗಿತ್ತು. ಏಕೆಂದರೆ ಇಸ್ಲಾಮಿನಲ್ಲಿ ರಾಷ್ಟ್ರನಿಷ್ಠೆ ಎಷ್ಟೇ ಇದ್ದರೂ ದೇವರನ್ನು ಬಿಟ್ಟು ಬೇರೆ ಯಾರಿಗೂ ನಮಿಸುವುದಿಲ್ಲ.
ಹಾಗೆಯೇ ವಿಗ್ರಹಾರಾಧನೆಯೂ ಇಲ್ಲ. ಇವೆರಡೂ ಕಾರಣಗಳಿಂದಲೂ ‘ವಂದೇ ಮಾತರಂ’ ಒಪ್ಪಿಕೊಳ್ಳುವುದು ಮುಸ್ಲಿಮ್ ರಾಷ್ಟ್ರವಾದಿಗಳಿಗೆ ಇರಿಸುಮುರಿಸಾಗತೊಡಗಿತು. ‘ವಂದೇ ಮಾತರಂ’ ಅನ್ನು ಹಾಡುವುದು ಧಾರ್ಮಿಕ ಕಾರಣಗಳಿಂದ ನಿರಾಕರಿಸುವುದನ್ನು ಹಿಂದೂ ಕೊಮುವಾದಿಗಳು ಇಂದು ಮಾಡುತ್ತಿರುವಂತೆ ಭಾರತ ರಾಷ್ಟ್ರ ನಿರಾಕರಣೆಗೆ ಸಮೀಕರಿಸಿ ಮುಸ್ಲಿಮರನ್ನು ದೇಶದ್ರೋಹಿಗಳೆಂದು ಚಿತ್ರಿಸತೊಡಗಿದರು.
1937ರಲ್ಲಿ ಹಿಂದೂ ಮಹಾ ಸಭಾದ ಸಾವರ್ಕರ್ ಅಕ್ಟೋಬರ್ ತಿಂಗಳಲ್ಲಿ ‘ವಂದೇ ಮಾತರಂ’ ದಿನವನ್ನು ದೇಶಾದ್ಯಂತ ಎಲ್ಲಾ ನೈಜ ಭಾರತೀಯರು ಆಚರಿಸಬೇಕೆಂದು ಕರೆಕೊಟ್ಟಿದ್ದರು. ಈಗ ಮೋದಿ ಕರೆ ಕೊಟ್ಟಿರುವಂತೆ !
‘ವಂದೇ ಮಾತರಂ’- ಕೋಮುವಾದದ ಸಾಧನ ಮಾಡಿಕೊಂಡ ಹಿಂದುತ್ವವಾದಿಗಳು
ಇವೆಲ್ಲವೂ 1937ರ ಚುನಾವಣೆಯಾದ ನಂತರ ಇನ್ನಷ್ಟು ಸ್ಪಷ್ಟವಾಗಿ ಹರಳುಗಟ್ಟ ತೊಡಗಿತು. 1935ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್ ನ ಭಾಗವಾಗಿ 1937ರ ಚುನಾವಣೆ ನಡೆದು ಆರು ಬ್ರಿಟಿಷ್ ಆಡಳಿತ ಪ್ರಾಂತದಲ್ಲಿ ಕಾಂಗ್ರೆಸ್ ನೇತೃತ್ವ ಸೀಮಿತ ಸರಕಾರಗಳು ಅಸ್ತಿತ್ವಕ್ಕೆ ಬಂದವು. ಮುಸ್ಲಿಮರು ಸಹ ದೊಡ್ದ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೇ ವೋಟು ಹಾಕಿದ್ದು ಮುಸ್ಲಿಮ್ ಲೀಗ್‌ಗೆ ಮತ್ತು ಅದರ ನಾಯಕ ಜಿನ್ನಾರಿಗೆ ರಾಜಕೀಯ ಅಭದ್ರತೆಯನ್ನೇ ಸೃಷ್ಟಿಸಿದ್ದವು.
ಆ ಕಾಲಘಟ್ಟದಲ್ಲಿ ಖಟ್ಟರ್ ಹಿಂದುತ್ವ ಕೋಮುವಾದಿ ಗಳಾದ ಹಿಂದೂ ಮಹಾಸಭಾದ ಹಲವಾರು ಪ್ರಮುಖ ನಾಯಕರೂ ಕೂಡ ಕಾಂಗ್ರೆಸ್‌ನ ನಾಯಕರೂ ಆಗಿರುತ್ತಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿದ್ದ ಜಾಗದಲ್ಲಿ ಈ ಕೋಮುವಾದಿಗಳು ಶಾಲಾ-ಕಾಲೇಜಿನಲ್ಲಿ ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸಿದವು. ಇಂದು ಬಿಜೆಪಿ ಸರಕಾರಗಳು ಮಾಡುತ್ತಿರುವಂತೆ!
ಇವೆಲ್ಲ ಕಾರಣಗಳಿಂದ ಜಿನ್ನಾ ನೇತೃತ್ವದ ಮುಸ್ಲಿಮ್ ಲೀಗ್ ಕಾಂಗ್ರೆಸ್ ಸರಕಾರಗಳ ಈ ಧೋರಣೆಯ ವಿರುದ್ಧ ಪ್ರತಿಭಟನೆ ದಾಖಲಿಸಿದವು. ಈ ಕಾರಣಗಳಿಂದ ಕಾಂಗ್ರೆಸ್ ಪಕ್ಷವು ಈ ಸಮಸ್ಯೆಯನ್ನು ನಿವಾರಿಸಲು ನೆಹರೂ, ಪಟೇಲ್, ಸುಭಾಷ್, ಆಝಾದ್, ನರೇಂದ್ರ ದೇವ ಇನ್ನಿತರರ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಿಸುತ್ತದೆ. ಅದು ಟಾಗೋರರ ಅಭಿಪ್ರಾಯವನ್ನು ಕೇಳುತ್ತದೆ.
ಟಾಗೋರರು ಅತ್ಯಂತ ಸ್ಪಷ್ಟವಾಗಿ ‘ವಂದೇ ಮಾತರಂ’ನ ಮೊದಲೆರಡು ಚರಣಗಳನ್ನು ಬಿಟ್ಟರೆ ಉಳಿದವು ಅತ್ಯಂತ ಸಮಸ್ಯಾತ್ಮಕ ಹಾಗೂ ಮುಸ್ಲಿಮರ ಧಾರ್ಮಿಕ ಮನಸ್ಸಿಗೆ ಅಂಗೀಕಾರವಾಗದ್ದು ಎಂದು ಅಭಿಪ್ರಾಯ ಪಡುತ್ತಾರೆ. ಹೀಗಾಗಿ 1938ರ ಕಾಂಗ್ರೆಸ್ ಅಧಿವೇಶನದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ‘ವಂದೇ ಮಾತರಂ’ ಘೋಷಣೆ ಕೊಟ್ಟಿರುವ ಸ್ಫೂರ್ತಿಯನ್ನು ಗಮನಿಸುತ್ತಲೇ, ಅದರ ಉಳಿದ ಭಾಗಗಳಲ್ಲಿರುವ ಸ್ಪಷ್ಟ ಹಿಂದೂ ಧಾರ್ಮಿಕ ಸಂಕೇತಗಳು ಮತ್ತು ಪ್ರತಿಮೆಗಳು ಮುಸ್ಲಿಮರಿಗೆ ಕಸಿವಿಸಿಯುಂಟು ಮಾಡುತ್ತದೆ ಎಂಬುದನ್ನು ಗ್ರಹಿಸುತ್ತದೆ. ಹೀಗಾಗಿ ಕಾಂಗ್ರೆಸ್‌ನ ಅಧಿವೇಶನಗಳಲ್ಲಿ ಮತ್ತು ಬಹಿರಂಗ ಸಭೆಗಳಲ್ಲಿ ‘ವಂದೇ ಮಾತರಂ’ನ ಮೊದಲೆರಡು ಚರಣಗಳನ್ನು ಮಾತ್ರ ಹಾಡತಕ್ಕದ್ದು. ಅಥವಾ ಅದರ ಜೊತೆಗೆ ಅಥವಾ ಅದರ ಬದಲಿಗೆ ಇನ್ಯಾವುದೇ ಧಾರ್ಮಿಕತೆಗೆ ಧಕ್ಕೆ ತರದ ಗೀತೆಗಳನ್ನು ಹಾಡಬಹುದು ಎಂದು ತೀರ್ಮಾನಿಸುತ್ತದೆ.
ಹೀಗಾಗಿ ಇದು ಕೇವಲ ನೆಹರೂ ಚಿತಾವಣೆಯೋ, ತೀರ್ಮಾನವೋ ಅಲ್ಲ. ಸಂಘಿಗಳು ಮೆಚ್ಚಿಕೊಳ್ಳುವ ಕಾಂಗ್ರೆಸಿಗರಾದ ಸರ್ದಾರ್ ಪಟೇಲರು ಮತ್ತು ಸುಭಾಷ್ ಚಂದ್ರ ಬೋಸರೂ ಕೂಡ ಒಪ್ಪಿ ಮಾಡಿದ ತೀರ್ಮಾನ. ಸುಭಾಷರಂತೂ ಸಿಂಗಾಪುರದಲ್ಲಿ ‘ಆಝಾದ್ ಹಿಂದ್ ಫೌಜ್’ ಮಾಡಿದಾಗಲೂ ‘ವಂದೇ ಮಾತರಂ’ ಹಾಡನ್ನು ಸಿಪಾಯಿ ಗೀತೆ ಮಾಡಲು ನಿರಾಕರಿಸುತ್ತಾರೆ, ‘ಜನಗಣಮನ’ವನ್ನು ಒಪ್ಪಿಕೊಳ್ಳುತ್ತಾರೆ. ಐಎನ್‌ಎಯ ಕರ್ನಲ್ ಅಬಿದ್ ಹಸನ್ ಸಫ್ರಾನಿ ರಚಿಸಿದ ತಮ್ಮದೇ ಪ್ರತ್ಯೇಕ ಸೈನ್ಯ ಗೀತೆ:
‘‘ಶುಭ್ ಸುಖ್ ಚೈನ್ ಕಿ ಬರ್ಖಾ ಬರಸೆ ’’
ಎಂಬ ಯಾವುದೇ ಧರ್ಮ ಸೂಚಕವಲ್ಲದ ಭವಿಷ್ಯದ ಸಮೃದ್ಧ, ಸೌಹಾರ್ದ ಬದುಕನ್ನು ಬಯಸುವ ಗೀತೆಯನ್ನು ಅಳವಡಿಸಿಕೊಳ್ಳುತ್ತಾರೆ.
ಅದೇ ರೀತಿ ಸಂವಿಧಾನ ಸಭೆಯಲ್ಲಿ 1950ರ ಜನವರಿ 24ರಂದು ಕೂಡ ‘ಜನಗಣಮನ’ವನ್ನು ರಾಷ್ಟ್ರಗೀತೆ ಯನ್ನಾಗಿಯೂ, ‘ವಂದೇ ಮಾತರಂ’ನ ಮೊದಲೆರಡು ಚರಣಗಳನ್ನು ಮಾತ್ರ ರಾಷ್ಟ್ರಗಾನವನ್ನಾಗಿಯೂ ಅನುಮೋದಿಸಬೇಕೆಂಬ ಅದ್ಯಕ್ಷೀಯ ಸಲಹೆಯನ್ನು ಇಡೀ ಸಂವಿಧಾನ ಸಭೆ ಅಂಗೀಕರಿಸುತ್ತದೆ. ಅದರಲ್ಲಿ ಸಂಘಿಗಳ ಮೆಚ್ಚಿನ ಪಟೇಲ್, ಪಂತ್ , ಶಾಂ ಪ್ರಸಾದ್ ಮುಖರ್ಜಿಯವರೂ ಕೂಡ ಮುಂಚೂಣಿಯಲ್ಲಿದ್ದರು ಎಂಬುದನ್ನು ಸಂಘಿಗಳು ಮರೆಸುತ್ತಿದ್ದಾರೆ.
1947ರ ನಂತರ- ಕೋಮುವಾದಿ ಸ್ವರವಾಗುತ್ತಲೇ ಹೋದ ‘ವಂದೇ ಮಾತರಂ’
ಸ್ವಾತಂತ್ರ್ಯಾನಂತರದಲ್ಲಿ ಸಂಘಿಗಳು ಮತ್ತು ಇತರ ಪಕ್ಷಗೊಳಗಿನ ಸಂಘಿಗಳು ‘ವಂದೇ ಮಾತರಂ’ ಮತ್ತು ‘ಆನಂದ ಮಠ’ಗಳನ್ನು ಬಳಸಿಕೊಂಡು ಕೋಮು ರಾಜಕಾರಣ ಮಾಡಲು ಪ್ರಯತ್ನಿಸುತ್ತಲೇ ಬಂದಿವೆ. 1983ರಲ್ಲಿ ಪ. ಬಂಗಾಳದ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ‘ಆನಂದ ಮಠ’ ಕಾದಂಬರಿಯನ್ನು ಸರಕಾರ ವಿಸ್ತೃತವಾಗಿ ಜನಪ್ರಿಯಗೊಳಿಸಬೇಕೆಂಬ ಮಸೂದೆಯನ್ನು ಮಂಡಿಸಿದ್ದರು. ಅಧಿಕಾರದಲ್ಲಿದ್ದ ಎಡ ಸರಕಾರದ ಕೆಲವು ಎಡಪಕ್ಷಗಳು ಅದನ್ನು ವಿರೋಧಿಸಿದರೆ ಕೆಲವು ಎಡಪಕ್ಷಗಳು ಚರ್ಚೆಯಲ್ಲಿ ಗೈರು ಹಾಜರಾದವು. ಎಡಸರಕಾರವು ಸಹ ಅದರಿಂದ ಕೋಮು ಸಮಸ್ಯೆ ಉಂಟಾಗಬಹು ಎಂಬ ರಕ್ಷಣಾತ್ಮಕ ನಿಲುವನ್ನು ತೆಗೆದುಕೊಂಡಿತೇ ವಿನಾ ಪ್ರಸ್ತಾವದ ಹಿಂದಿನ ಕೋಮುವಾದವನ್ನಾಗಲೀ, ‘ಆನಂದಮಠ’ದ ಕೋಮುವಾದವನ್ನಾಗಲೀ ತಾತ್ವಿಕವಾಗಿ ನಿರಾಕರಿಸಲೇ ಇಲ್ಲ.
1998ರಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಿದ್ದಾಗ ಉ.ಪ್ರದೇಶದಲ್ಲಿದ್ದ ಬಿಜೆಪಿ ಸರಕಾರ ಶಾಲಾ, ಕಾಲೇಜುಗಳಲ್ಲಿ ‘ವಂದೇ ಮಾತರಂ’ ಮತ್ತು ಸರಸ್ವತಿ ವಂದನೆಯನ್ನು ಕ್ಯಾಬಿನೆಟ್‌ನ ಗಮನಕ್ಕೂ ತರದೆ ಜಾರಿ ಮಾಡಿತ್ತು. ವಾಜಪೇಯಿಯವರು ಉ.ಪ್ರದೇಶ ಪ್ರವಾಸಕ್ಕೆ ಹೋಗಿದ್ದಾಗ ಇದು ಬಹು ದೊಡ್ಡ ಹಗರಣವಾದಾಗ ಒಬ್ಬ ಜೂನಿಯರ್ ಮಂತ್ರಿ ಶುಕ್ಲಾರನ್ನು ಅಮಾನತು ಮಾಡಿ ಆ ಕಾರ್ಯಕ್ರಮವನ್ನು ನಿಲ್ಲಿಸಲಾಯಿತು.
‘ವಂದೇ ಮಾತರಂ-150’- ಹಿಂದೂ ರಾಷ್ಟ್ರದ ಮತ್ತೊಂದು ಮೋದಿ ಹುನ್ನಾರ
ಈಗ ಮೋದಿ ಕಾಲಘಟ್ಟದಲ್ಲಿ ದೇಶವೂ ಮೊದಲಿಗಿಂತಲೂ ಹೆಚ್ಚು ಬ್ರಾಹ್ಮಣೀಯ ಹಿಂದುತ್ವವಾದಿ ರಾಜಕಾರಣಕ್ಕೆ ಬಲಿಯಾಗಿದೆ. ಆದ್ದರಿಂದಲೇ ಮೋದಿ ಮತ್ತವರ ಪಟಾಲಂ ಬಹಿರಂಗವಾಗಿಯೇ ‘ವಂದೇ ಮಾತರಂ’ ಇತಿಹಾಸದ ಬಗ್ಗೆ ಹಸಿಹಸಿ ಸುಳ್ಳುಗಳನ್ನು ಹೇಳುತ್ತಿದೆ. ಹಾಗೂ ಸರಕಾರಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದು ಧರ್ಮದ ಬೋಧನೆ ಮಾಡಬಾರದು ಎಂದು ಕಾಯ್ದೆ ಇದ್ದರೂ ಸರಕಾರಿ ಸಂಸ್ಥೆಗಳಲ್ಲಿ ‘ವಂದೇ ಮಾತರಂ’ ಕಡ್ಡಾಯ ಮಾಡುತ್ತಿದೆ.
ಎಲ್ಲಕ್ಕಿಂತ ಹೆಚ್ಚಾಗಿ ‘ವಂದೇ ಮಾತರಂ’-150’ ಆಚರಣೆಯ ಹೆಸರಿನಲ್ಲಿ ‘ಜನಗಣಮನ’ದ ಕೂಡು ಬಾಳ್ವೆ ಮತ್ತು ಧಾರ್ಮಿಕ ಸೌಹಾರ್ದದ ಆಶಯದ ಮೇಲೆ ದಾಳಿ ಮಾಡುತ್ತಿದೆ. ಭಾರತವೆಂದರೆ ‘ವಂದೇ ಮಾತರಂ’ ಮತ್ತು ‘ಆನಂದ ಮಠ’ದ ಬ್ರಾಹ್ಮಣೀಯ ಹಿಂದೂ ರಾಷ್ಟ್ರವೆಂದು ಬಿಂಬಿಸಲು ಹೊರಟಿದೆ. ರಾಷ್ಟ್ರದ ಶತ್ರುಗಳೆಂದರೆ ಬಡತನ, ನಿರುದ್ಯೋಗ ಅಥವಾ ಸಾಮ್ರಾಜ್ಯಶಾಹಿಗಳಲ್ಲ, ಬದಲಿಗೆ ಹಿಂದೂಗಳಷ್ಟೆ ಭಾರತೀಯರಾಗಿರುವ ಮುಸ್ಲಿಮರು ಎಂಬ ಫ್ಯಾಶಿಸ್ಟ್ ರಾಜಕಾರಣಕ್ಕೆ ‘ವಂದೇ ಮಾತರಂ-150’ರ ಸಂದರ್ಭವನ್ನು ಬಳಸಿಕೊಳ್ಳುತ್ತದೆ.
ನೈಜ ಇತಿಹಾಸವನ್ನು ಮತ್ತು ನೈಜ ಸಮಸ್ಯೆಯನ್ನು ಅರ್ಥಮಾಡಿಕೊಂಡು ಮೋದಿ ಹುನ್ನಾರಗಳನ್ನು ಸೋಲಿಸುವ ಜವಾಬ್ದಾರಿ ಎಲ್ಲಾ ನೈಜ ದೇಶಭಕ್ತರ ಮೇಲಿದೆ.
ಅದು ಈ ದೇಶವನ್ನು ಮತ್ತೊಮ್ಮೆ ನವವಸಾಹತು ಶೋಷಣೆಗೆ ತೆರೆದಿಟ್ಟು ದೇಶವಾಸಿಗಳ ನಡುವೆ ದ್ವೇಷ ಬಿತ್ತಬಯಸುವ ಹಿಂದುತ್ವವಾದಿಗಳ ಗೀತೆಯೇ ಹೊರತು ನಮ್ಮೆಲ್ಲರ ನಿಜವಾದ ಸ್ವಾತಂತ್ರ್ಯದ ಆಶಯವನ್ನು ಉದ್ದೀಪಿಸುವ ಗೀತೆಯಲ್ಲ