×
Ad

ಹೊಸಬಾಳೆ, ಹಳೆಬಾಳೆ, ಮರಿಬಾಳೆಗಳೇ.... ಮೂಲ ಸಂವಿಧಾನದಲ್ಲಿ ಸೆಕ್ಯುಲರಿಸಂ-ಸೋಷಿಯಲಿಸಂ ಇರಲಿಲ್ಲವೇ?

ತುರ್ತುಸ್ಥಿತಿಗೆ ಮುಂಚಿನಿಂದಲೂ -1973ರಿಂದಲೂ- ಈವರೆಗೂ ಸುಪ್ರೀಂ ಕೋರ್ಟ್ ಹತ್ತಾರು ಪ್ರಕರಣಗಳಲ್ಲಿ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಭಾರತದ ಸಂವಿಧಾನದ ಮೂಲ ರಚನೆ ಎಂದು ಸ್ಪಷ್ಟಪಡಿಸಿದೆ ಮತ್ತು ಅದಕ್ಕೆ ಬದಲಾವಣೆ ತರುವುದು ಸಂವಿಧಾನ ಬಾಹಿರ ಎಂದು ಘೋಷಿಸಿದೆ. ವಾಸ್ತವವಾಗಿ ಸಂವಿಧಾನವನ್ನು ಗಮನವಿಟ್ಟು ಓದಿದರೆ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಆಶಯಗಳು ಮತ್ತು ಅದಕ್ಕೆ ಸಂಬಂಧಪಟ್ಟ ಕಲಂಗಳು ಮೂಲ ಸಂವಿಧಾನದ ಮುನ್ನುಡಿಯಲ್ಲೂ ಮತ್ತು ನಂತರದ ಭಾಗಗಳಲ್ಲೂ ಸ್ಪಷ್ಟವಾಗಿ ಉಲ್ಲೇಖಗೊಂಡಿರುವುದು ಕುರುಡರಿಗೂ ಕಂಡೀತು.

Update: 2025-07-02 09:45 IST

ಭಾಗ- 1

ಇಂದಿರಾ ಗಾಂಧಿಯವರು ತುರ್ತುಸ್ಥಿತಿ ಘೋಷಣೆ ಮಾಡಿದ ಜೂನ್ 25 ಅನ್ನು ಸಂಘಪರಿವಾರ ಕಾಂಗ್ರೆಸನ್ನು ಹಣಿಯಲು ಹಾಗೂ ತನ್ನನ್ನು ಪ್ರಜಾತಂತ್ರದ ರಕ್ಷಕ ಎಂದು ಬಣ್ಣಿಸಿಕೊಳ್ಳಲು ಬಳಸಿಕೊಳ್ಳುತ್ತಾ ಬಂದಿದೆ. ಇಂದಿರಾ ತುರ್ತುಸ್ಥಿತಿ ಘನಘೋರವಾಗಿತ್ತು ಮತ್ತು ಅಂದಿಗಿಂತ ಘನಘೋರವಾಗಿರುವ, ಕೊನೆಯರಿಯದ ಇಂದಿನ ಮೋದಿ ಕಾಲದ ಅಘೋಷಿತ ತುರ್ತುಸ್ಥಿತಿಯ ಹಲವಾರು ಬೀಜಗಳನ್ನು ಇಂದಿರಾ ತುರ್ತುಸ್ಥಿತಿಯೇ ಹಾಕಿಕೊಟ್ಟಿತು ಎಂಬುದನ್ನು ಯಾವ ಕಾರಣಕ್ಕೂ ದೇಶ ಮರೆಯುವಂತಿಲ್ಲ.

ಹಾಗೆಂದು ಸಂಘಪರಿವಾರ ಮತ್ತದರ ಬಿಜೆಪಿ ಪ್ರಜಾತಂತ್ರದ ರಕ್ಷಕನೇ ಅಥವಾ ತುರ್ತುಸ್ಥಿತಿಯನ್ನು ಪ್ರಜಾತಂತ್ರದ ಮೇಲೆ ಮತ್ತು ಸಂವಿಧಾನದ ಮೇಲೆ ಸಮಗ್ರ ದಾಳಿ ಮಾಡಲು ಮತ್ತು ಅದರ ಜಾಗದಲ್ಲಿ ತನ್ನ ಹಿಂದೂ ರಾಷ್ಟ್ರವನ್ನು ಜಾರಿ ಮಾಡಲು ಬಳಸಿಕೊಳ್ಳುತ್ತಿದೆಯೇ? ಇಂದಿರಾ ತುರ್ತುಸ್ಥಿತಿಯ ಕಾಲದಲ್ಲಿ ಆರೆಸ್ಸೆಸ್ ಅದನ್ನು ಸಂಪೂರ್ಣವಾಗಿ ಬೆಂಬಲಿಸಿತ್ತು ಎಂಬುದನ್ನು ಈಗಾಗಲೇ ಇದೇ ಕಾಲಂನಲ್ಲಿ ವಿವರವಾಗಿ ಬರೆಯಲಾಗಿದೆ.

ಆದರೆ ಈಗ ತುರ್ತುಸ್ಥಿತಿಗೆ 50 ವರ್ಷ ತುಂಬಿರುವ ಹೊತ್ತಿನಲ್ಲಿ ಸಂಘಪರಿವಾರದ ಸಹಕಾರ್ಯವಾಹ-ಜನರಲ್ ಸೆಕ್ರೆಟರಿ-ಆದ ದತ್ತಾತ್ರೇಯ ಹೊಸಬಾಳೆಯವರು ತುರ್ತುಸ್ಥಿತಿಯನ್ನು ವಿರೋಧಿಸುವ ಹೆಸರಿನಲ್ಲಿ ಭಾರತದ ಸಂವಿಧಾನದ ಮತ್ತು ಪ್ರಜಾತಂತ್ರದ ಆತ್ಮವಾದ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಆಶಯಗಳ ಮೇಲೆ ದಾಳಿ ಮಾಡಿದ್ದಾರೆ ಹಾಗೂ ಸಂವಿಧಾನದ ಮುನ್ನುಡಿಯಲ್ಲಿ ಆ ಎರಡು ಪದಗಳನ್ನು ತುರ್ತುಸ್ಥಿತಿಯ ಕಾಲದಲ್ಲಿ ಸೇರಿಸಿದ್ದರಿಂದ ಅದನ್ನು ಬದಲಿಸಬೇಕೆಂಬ ಚರ್ಚೆಯನ್ನು ಹರಿಬಿಟ್ಟಿದ್ದಾರೆ.

ಅದಕ್ಕೆ ಅವರು ಮುಂದಿಡುತ್ತಿರುವ ಕಾರಣಗಳು ಮೂರು:

1.ಮೂಲ ಸಂವಿಧಾನದ ಪೀಠಿಕೆಯಲ್ಲಿ ಸೆಕ್ಯುಲರ್, ಸೋಷಿಯಲಿಸ್ಟ್ ಪದಗಳು ಇರಲಿಲ್ಲ. ಪೀಠಿಕೆಯನ್ನು ಸಂಸತ್ತು ತಿದ್ದುಪಡಿ ಮಾಡಲಾಗದು ಮತ್ತು ಆ ತಿದ್ದುಪಡಿಗಳನ್ನು ತುರ್ತುಸ್ಥಿತಿಯ ಕಾಲದಲ್ಲಿ ಇಂದಿರಾಗಾಂಧಿಯವರು ಅಪ್ರಜಾತಾಂತ್ರಿಕ ಪ್ರಕ್ರಿಯೆಯ ಮೂಲಕ ಸೇರಿಸಿದ್ದಾರೆ.

2. ಸೆಕ್ಯುಲರ್ ಮತ್ತು ಸೋಷಿಯಲಿಸ್ಟ್ ಪದಗಳ ಸೇರ್ಪಡೆಯನ್ನು ಅಂಬೇಡ್ಕರ್ ಅವರೂ ಒಪ್ಪಿರಲಿಲ್ಲ. ಆದ್ದರಿಂದ ಈ ಸೇರ್ಪಡೆ ಅಂಬೇಡ್ಕರ್ ವಿರೋಧಿ.

3. ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಭಾರತದ ಸಂಸ್ಕೃತಿ ಮತ್ತು ನಾಗರಿಕತೆಗೆ ವಿರುದ್ಧವಾದದ್ದು.

ಮೇಲ್ನೋಟಕ್ಕೆ ಕಾಣುವಂತೆ ಮೊದಲ ಆಕ್ಷೇಪ ಅರ್ಧ ಸತ್ಯವಾಗಿದ್ದರೆ ಉಳಿದೆರಡು ಆಕ್ಷೇಪಗಳು ಹಸಿಸುಳ್ಳುಗಳಾಗಿವೆ. ಆ ಸುಳ್ಳುಗಳ ಆಳ-ಅಗಲಗಳನ್ನು ಅರಿಯುವ ಮುನ್ನ ಈ ವಾದದ ಬಗ್ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಏನು ಹೇಳಿದೆ ಗಮನಿಸೋಣ...

ಆರೆಸ್ಸೆಸ್ ವಾದಗಳನ್ನ್ನು ಆರು ತಿಂಗಳ ಕೆಳಗೆ ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್

ಸಂಘಪರಿವಾರದ ವಿವಿಧ ಅಂಗಸಂಸ್ಥೆಗಳು ಮತ್ತು ಬಾಡಿಗೆ ಭಂಟರು ಬೇರೆಬೇರೆ ರೂಪಗಳಲ್ಲಿ ಸಾರ್ವಜನಿಕವಾಗಿ ಮತ್ತು ನ್ಯಾಯಾಲಯಗಳಲ್ಲಿ ಈ ವಿಷಯಗಳ ಬಗ್ಗೆ ತಗಾದೆ ಹುಟ್ಟುಹಾಕುತ್ತಲೇ ಇದ್ದಾರೆ. ಅದರಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹಾಗೂ ಸಂಘಿ ಭಂಟ ವಕೀಲ ಅಶ್ವಿನ್ ಉಪಾಧ್ಯ ಅವರುಗಳು ‘ಸೋಷಿಯಲಿಸಂ ಮತ್ತು ಸೆಕ್ಯುಲರಿಸಂ ಪದಗಳನ್ನು ಸಂವಿಧಾನದ ಮುನ್ನುಡಿಯಿಂದ ಕಿತ್ತು ಹಾಕಬೇಕು’ ಎಂದು ಆಗ್ರಹಿಸಿದ್ದ ದಾವೆ ಇತ್ತೀಚಿನದ್ದು.

ಈ ದಾವೆಯ ಅಹವಾಲನ್ನು ಕೂಲಂಕಷವಾಗಿ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರ ನೇತೃತ್ವದ ದ್ವಿಸದಸ್ಯ ಪೀಠ 2024ರ ನವೆಂಬರ್ 25ರಂದು ಇಂತಹ ದಾವೆಗಳಲ್ಲಿ ಕಿಂಚಿತ್ತೂ ಹುರುಳಿಲ್ಲವೆಂದು, ಅನಗತ್ಯ ದಾವೆಗಳೆಂದು ತಿರಸ್ಕರಿಸಿತ್ತು.

ಸೆಕ್ಯುಲರ್-ಸೋಷಿಯಲಿಸಂ ಪದಗಳ ಸೇರ್ಪಡೆಯನ್ನು ಪ್ರಶ್ನಿಸಿದ ದಾವೆಗಳನ್ನು ತಿರಸ್ಕರಿಸಲು ಸುಪ್ರೀಂ ಕೋರ್ಟ್ ಕೊಟ್ಟ ಪ್ರಮುಖ ಕಾರಣಗಳಿವು:

-ಮುನ್ನುಡಿಯು ಸಂವಿಧಾನದ ಅಂತರ್ಭಾಗವಾಗಿದೆ ಮತ್ತು ಸಂಸತ್ತಿನ ತಿದ್ದುಪಡಿ ಮಾಡುವ ಅಧಿಕಾರವು ಮುನ್ನುಡಿಗೂ ಅನ್ವಯವಾಗಿದೆ.

-ಸೋಷಿಯಲಿಸಂ ಮತ್ತು ಸೆಕ್ಯುಲರಿಸಂ ಭಾರತದ ಸಂವಿಧಾನದ ಮೂಲ ರಚನೆಯಾಗಿದೆ ಎಂಬುದನ್ನು 1973ರಿಂದಲೂ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸುತ್ತಲೇ ಇದೆ.

-ಹೀಗಾಗಿ ಅವೆರಡು ಪದಗಳನ್ನು ಮುನ್ನುಡಿಯಲ್ಲಿ ಸೇರ್ಪಡೆ ಮಾಡಿರುವುದು ಸಂವಿಧಾನಬದ್ಧವಾಗಿಯೇ ಇದೆ.

-ಅಲ್ಲದೆ ಆ ಸೇರ್ಪಡೆಯಾಗಿ, ಅದನ್ನು ದೇಶ ಮಾನ್ಯ ಮಾಡಿ 44 ವರ್ಷಗಳ ನಂತರ ಅದನ್ನು ಆಕ್ಷೇಪಿಸಿ ದಾವೆಯನ್ನು ಹೂಡಿರುವುದರ ಹಿಂದೆ ಯಾವುದೇ ಗಣನಾರ್ಹ ಕಾರಣಗಳೂ ಕಾಣುತ್ತಿಲ್ಲ.

ಆಸಕ್ತರು ಹೆಚ್ಚಿನ ವಿವರಗಳಿಗೆ ಈ ವೆಬ್ ವಿಳಾಸದಲ್ಲಿ ಸುಪ್ರೀಂ ಆದೇಶದ ಪೂರ್ಣ ಪಠ್ಯ ಓದಬಹುದು:

https://api.sci.gov.in/supremecourt/ 2020/13773/13773_2020_1_39_57487_Judgement_25-Nov-2024.pdf

ಅಲ್ಲಿಗೆ ಆರೆಸ್ಸೆಸ್ ತನ್ನ ವಾದಗಳನ್ನು ಕೈಬಿಡಬೇಕಿತ್ತು. ಆದರೆ ಈ ಚರ್ಚೆಯನ್ನು ಜೀವಂತವಾಗಿಡುವುದರ ಹಿಂದೆ ಅದರ ದೀರ್ಘಕಾಲೀನ ಉದ್ದೇಶವೇ ಬೇರೆ ಇರುವುದರಿಂದ ಸಂವಿಧಾನದ ಮೇಲೆ ತನ್ನ ಸುಳ್ಳಿನ ದಾಳಿಯನ್ನು ಮುಂದುವರಿಸಿದೆ. ಅದರ ನೈಜ ಉದ್ದೇಶವೇನೆಂದು ಚರ್ಚಿಸುವ ಮೊದಲು ಸಂಘಿಗಳ ಉಳಿದ ಆಕ್ಷೇಪಗಳ ಹಿಂದಿರುವ ಅಸತ್ಯ ಮತ್ತು ಕುತರ್ಕಗಳನ್ನು ಅರ್ಥಮಾಡಿಕೊಳ್ಳೋಣ.

42ನೇ ತಿದ್ದುಪಡಿ- ಸಾರದಲ್ಲಿದ್ದದ್ದು ಪದಗಳಾಗಿ ಸೇರ್ಪಡೆಯಾಗಿದ್ದಲ್ಲವೇ?

ಸಂಘಿಗಳು ಹೇಳುವಂತೆ 1950ರ ಜನವರಿ 26ರಂದು ಭಾರತದ ಜನರು ತಮಗೇ ತಾವೇ ಅರ್ಪಿಸಿಕೊಂಡ ಸಂವಿಧಾನದ ಮುನ್ನುಡಿಯಲ್ಲಿ: ಸೆಕ್ಯುಲರ್ ಮತ್ತು ಸೋಷಿಯಲಿಸ್ಟ್ ಪದಗಳಿರಲಿಲ್ಲ. ಅಷ್ಟರ ಮಟ್ಟಿಗೆ ಮಾತ್ರ ಅದು ನಿಜ. ಅದನ್ನು ದೇಶದ ಮೇಲೆ ತುರ್ತುಸ್ಥಿತಿ ಹೇರಿದ ಸಂದರ್ಭದಲ್ಲಿ ಇಂದಿರಾಗಾಂಧಿ ಸರಕಾರ ಜಾರಿ ಮಾಡಿದ 42ನೇ ಸಂವಿಧಾನ ತಿದ್ದುಪಡಿಯ ಮೂಲಕ ಸೇರಿಸಲಾಗಿತ್ತು. ಆ ತಿದ್ದುಪಡಿಯು ಮಾಡಿದ ಹಲವಾರು ಮಾರ್ಪಾಡುಗಳಲ್ಲಿ ಸಂವಿಧಾನದ ಮುನ್ನುಡಿಗೆ ಸೆಕ್ಯುಲರ್ ಮತ್ತು ಸೋಷಿಯಲಿಸ್ಟ್ ಪದಗಳ ಸೇರ್ಪಡೆಯೂ ಒಂದಾಗಿತ್ತು.

ಮೂಲ ಸಂವಿಧಾನದ ಪೀಠಿಕೆಯ ಭಾಗದಲ್ಲಿ ಸೆಕ್ಯುಲರ್-ಸೋಷಿಯಲಿಸಂ ಪದಗಳು ಈ ತಿದ್ದುಪಡಿಗೆ ಮುಂಚೆ ಇರಲಿಲ್ಲ ಎಂದ ಮಾತ್ರಕ್ಕೆ ಆ ಆಶಯಗಳು ನಮ್ಮ ಮೂಲ ಸಂವಿಧಾನದಲ್ಲಿರಲಿಲ್ಲವೇ?

ಸಂಘಿಗಳು ಸಂವಿಧಾನದ ಪೀಠಿಕೆಯಲ್ಲಿ ಈ ಪದಗಳು ಇರಲಿಲ್ಲ ಎಂಬ ಅರ್ಧ ಸತ್ಯವನ್ನು ಹೇಳುತ್ತಾ ಮೂಲ ಸಂವಿಧಾನದ ಆಶಯಗಳೂ ಕೂಡ ಸೆಕ್ಯುಲರ್ ಮತ್ತು ಸೋಷಿಯಲಿಸಂ ಆಗಿರಲಿಲ್ಲ ಎಂಬ ದುಷ್ಟ ಸುಳ್ಳುಗಳನ್ನು ಬಿತ್ತುತ್ತಿದ್ದಾರೆ.

ಸಂವಿಧಾನದ ಮೂಲ ಆಶಯಗಳನ್ನು ತೆಗೆಯುವುದು ಸಂವಿಧಾನ ಬಾಹಿರ- ಸುಪ್ರೀಂ ಕೋರ್ಟ್

ಆದರೆ 1976ರಲ್ಲಿ ಇಂದಿರಾ ಸರಕಾರ ಅದನ್ನು ಪೀಠಿಕೆಯಲ್ಲಿ ಸೇರಿಸುವ ಮೂರು ವರ್ಷಗಳ ಮುಂಚೆ 1973ರ ಕೇಶವಾನಂದ ಭಾರತಿ ಪ್ರಕರಣದಲ್ಲಿ ಭಾರತದ ಸುಪ್ರೀಂ ಕೋರ್ಟಿನ 13 ಸದಸ್ಯರ ಪೂರ್ಣ ಪೀಠವು:

-ಸೆಕ್ಯುಲರಿಸಂ ಎಂಬುದು ಭಾರತದ ಸಂವಿಧಾನದ ಮೂಲ ರಚನೆಯ ಭಾಗವೆಂದು ಘೋಷಿಸಿತ್ತು. ಮುಂದುವರಿದು ಸಂಸತ್ತಿಗೆ ಸಂವಿಧಾನದ ಮೂಲ ರಚನೆಯನ್ನು (basic structure of the constitution) ಬದಲಿಸುವ ಅಧಿಕಾರವಿಲ್ಲ ಎಂದು ಅತ್ಯಂತ ಸ್ಪಷ್ಟವಾಗಿ ನಿರ್ದೇಶಿಸಿತ್ತು ಹಾಗೂ ಸಂವಿಧಾನದ ಮುನ್ನುಡಿಯು ಸಂವಿಧಾನದ ಅಂತರ್ಗತವಾದ ಭಾಗವಾಗಿದ್ದು ಅದು ಸಂವಿಧಾನದ ಮೂಲ ರಚನೆಗೆ ಸಂಬಂಧಿಸಿದ ವಿಷಯಗಳನ್ನೊಳಗೊಂಡಿದೆ ಎಂದು ಸ್ಪಷ್ಟವಾಗಿ ಅಭಿಪ್ರಾಯಿಸಿತ್ತು.

ಹೀಗಾಗಿ ಇಂದಿರಾ ಗಾಂಧಿಯವರು ಪೀಠಿಕೆಯಲ್ಲಿ ಸೆಕ್ಯುಲರಿಸಂ ಸೇರಿಸುವ ಮೂರು ವರ್ಷಗಳಿಗೆ ಮುನ್ನವೇ ಸೆಕ್ಯುಲರಿಸಂ ಎಂಬುದು ಭಾರತದ ಸಂವಿಧಾನದ ಆತ್ಮವೆಂದು ಸುಪ್ರೀಂ ಕೋರ್ಟ್ ಘೋಷಿಸಿತ್ತು ಮತ್ತು ಅದನ್ನು ಬದಲಾಯಿಸುವುದು ಅರ್ಥಾತ್ ಸೆಕ್ಯುಲರ್ ಪದಗಳನ್ನು ತೆಗೆಯಬಹುದು ಸಂವಿಧಾನ ವಿರೋಧಿ ಕೃತ್ಯವೆಂದು ಸ್ಪಷ್ಟ ಪಡಿಸಿತು.

-1994ರಲ್ಲಿಯೂ ಬೊಮ್ಮಾಯಿ ಪ್ರಕರಣದಲ್ಲಿ ಒಂಭತ್ತು ನ್ಯಾಯಾಧೀಶರ ಸುಪ್ರೀಂನ ಸಾಂವಿಧಾನಿಕ ಪೀಠವು ಸೆಕ್ಯುಲರಿಸಂ ಅನ್ನು ಭಾರತದ ಸಂವಿಧಾನದ ಮೂಲ ರಚನೆಯ ಭಾಗವೆಂದಿತು.

-1995ರಲ್ಲಿ ಜೀವವಿಮಾ ನಿಗಮ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಭಾರತದ ಸಂವಿಧಾನದ ಮುನ್ನುಡಿಯು ಸಂವಿಧಾನದ ಅಂತರ್ಗತ ಭಾಗವಾಗಿದ್ದು, ಅದು ಸಂವಿಧಾನದ ಮೂಲ ರಚನೆಯಾಗಿದೆ ಎಂದು ಸ್ಪಷ್ಟಪಡಿಸಿತು.

-2019ರ ಅಯೋಧ್ಯಾ-ಬಾಬರಿ ಮಸೀದಿ ಆದೇಶದಲ್ಲೂ ಭಾರತದ ಐವರು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಸೆಕ್ಯುಲರಿಸಂ ಸಂವಿಧಾನದ ಮೂಲ ರಚನೆಯ ಭಾಗವೆಂದು ಸ್ಪಷ್ಟ ಪಡಿಸಿದೆ.

-2024ರ ನವೆಂಬರ್‌ನಲ್ಲಿಯೂ ಸೆಕ್ಯುಲರಿಸಂ, ಸೋಷಿಯಲಿಸಂ ಪದಗಳನ್ನು ತೆಗೆದುಹಾಕಬೇಕೆಂಬ ಅಹವಾಲನ್ನು ತಿರಸ್ಕರಿಸಿ ಅವುಗಳು ಭಾರತದ ಸಂವಿಧಾನದ ಮೂಲ ರಚನೆಯೆಂದೂ, ಆ ಪದಗಳನ್ನು ಪೀಠಿಕೆಯಲ್ಲಿ ಸೇರ್ಪಡೆ ಮಾಡಿರುವುದು ಸಂವಿಧಾನ ಬದ್ಧ ಎಂದೂ ಸ್ಪಷ್ಟಪಡಿಸಿದೆ.

ಹೀಗೆ ತುರ್ತುಸ್ಥಿತಿಗೆ ಮುಂಚಿನಿಂದಲೂ -1973ರಿಂದಲೂ- ಈವರೆಗೂ ಸುಪ್ರೀಂ ಕೋರ್ಟ್ ಹತ್ತಾರು ಪ್ರಕರಣಗಳಲ್ಲಿ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಭಾರತದ ಸಂವಿಧಾನದ ಮೂಲ ರಚನೆ ಎಂದು ಸ್ಪಷ್ಟಪಡಿಸಿದೆ ಮತ್ತು ಅದಕ್ಕೆ ಬದಲಾವಣೆ ತರುವುದು ಸಂವಿಧಾನ ಬಾಹಿರ ಎಂದು ಘೋಷಿಸಿದೆ.

ವಾಸ್ತವವಾಗಿ ಸಂವಿಧಾನವನ್ನು ಗಮನವಿಟ್ಟು ಓದಿದರೆ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಆಶಯಗಳು ಮತ್ತು ಅದಕ್ಕೆ ಸಂಬಂಧಪಟ್ಟ ಕಲಂಗಳು ಮೂಲ ಸಂವಿಧಾನದ ಮುನ್ನುಡಿಯಲ್ಲೂ ಮತ್ತು ನಂತರದ ಭಾಗಗಳಲ್ಲೂ ಸ್ಪಷ್ಟವಾಗಿ ಉಲ್ಲೇಖಗೊಂಡಿರುವುದು ಕುರುಡರಿಗೂ ಕಂಡೀತು.

ಮೂಲ ಸಂವಿಧಾನ ಮತ್ತು ಸೆಕ್ಯುಲರಿಸಂ

ಸೆಕ್ಯುಲರಿಸಂ ಎಂಬುದಕ್ಕೆ ಜಗತ್ತಿನಲ್ಲಿ ಹಲವಾರು ರೀತಿಯ ಕ್ರಾಂತಿಕಾರಿ ಮತ್ತು ಮಧ್ಯಮಮಾರ್ಗಿ ವ್ಯಾಖ್ಯಾನಗಳಿವೆ. ಅವೆಲ್ಲವೂ ಸಂವಿಧಾನ ರಚನಾ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆಯಾಗಿವೆ. ಅಷ್ಟೆಲ್ಲಾ ಚರ್ಚೆ, ವಾದ ಮತ್ತು ಪ್ರತಿವಾದಗಳ ನಂತರ ಭಾರತದ ಸಂವಿಧಾನ ಸಭೆ ಒಪ್ಪಿಕೊಂಡ ಸೆಕ್ಯುಲರಿಸಂನ ವ್ಯಾಖ್ಯಾನದ ಅಂಶಗಳೆಂದರೆ:

-ಭಾರತದ ಪ್ರಭುತ್ವ ಯಾವ ಒಂದು ಮತಧರ್ಮವನ್ನೂ ಪಾಲಿಸುವುದಿಲ್ಲ.

-ಭಾರತದ ಪ್ರಭುತ್ವ ದೇಶದಲ್ಲಿ ಎಲ್ಲಾ ಮತಧರ್ಮಗಳಿಂದಲೂ ಸಮಾನ ಸಾಮೀಪ್ಯವನ್ನು ಕಾಪಾಡಿಕೊಳ್ಳುತ್ತದೆ.

-ಭಾರತದ ಪ್ರಭುತ್ವ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ತಾನೂ ಒಪ್ಪುವ ಮತಧರ್ಮವನ್ನು ಅನುಸರಿಸುವ ಅಥವಾ ಅನುಸರಿಸದಿರುವ ಸ್ವಾತಂತ್ರ್ಯವನ್ನು ನೀಡುತ್ತದೆ.

- ಭಾರತದ ಪ್ರಭುತ್ವ ವ್ಯಕ್ತಿಯ ಮತಧರ್ಮವನ್ನು ಆಧರಿಸಿ ಯಾವುದೇ ತಾರತಮ್ಯವನ್ನು ಮಾಡುವುದಿಲ್ಲ.

ಇದನ್ನೇ ಭಾರತದ ಸಂವಿಧಾನದ ಆರ್ಟಿಕಲ್ 14, 15, 25, 26, ಮತ್ತು 29 ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಸ್ಪಷ್ಟ ಪಡಿಸುತ್ತದೆ. ಉದಾಹರಣೆಗೆ ಆರ್ಟಿಕಲ್ 25 ಹೀಗೆ ಹೇಳುತ್ತದೆ:

25. Freedom of conscience and free profession, practice and propagation of religion

(1) Subject to public order, morality and health and to the other provisions of this Part, all persons are equally entitled to freedom of conscience and the right freely to profess, practise and propagate religion.

(ಅಂದರೆ, ಭಾರತದ ಪ್ರಭುತ್ವವು ಪ್ರತಿಯೊಬ್ಬ ವ್ಯಕ್ತಿಯ ಆತ್ಮ ಸಾಕ್ಷಿಯ ಸ್ವಾತಂತ್ರ್ಯ ಹಾಗೂ ತಾನು ಒಪ್ಪುವ ಮತಧರ್ಮದ ಪ್ರತಿಪಾದನೆ, ಆಚರಣೆ ಮತ್ತು ಪ್ರಚಾರದ ಸ್ವಾತಂತ್ರ್ಯವನ್ನು ಖಾತರಿ ಮಾಡುತ್ತದೆ.)

ಇದನ್ನೇ ಅತ್ಯಂತ ಸ್ಪಷ್ಟವಾಗಿ ಮೂಲ ಸಂವಿಧಾನದ ಮುನ್ನುಡಿ ಯಲ್ಲಿ ಹೀಗೆ ಹೇಳಲಾಗಿದೆ:

‘‘...ಭಾರತದ ಎಲ್ಲಾ ಪ್ರಜೆಗಳಿಗೆ ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ದೊರಕಿಸುವುದಕ್ಕಾಗಿ ಸಂವಿಧಾನವನ್ನು ರೂಪಿಸಲಾಗಿದೆ’’ ಹೀಗೆ ಸಂವಿಧಾನದ ಮುನ್ನುಡಿ ಯಾವುದೇ ಅನುಮಾನಕ್ಕೆ ಅವಕಾಶವಿಲ್ಲದಂತೆ ಘೋಷಿಸುತ್ತದೆ.

ಈ ಮೇಲಿನ ವಿವರಗಳನ್ನೇ ಸೆಕ್ಯುಲರಿಸಂ ಎಂದು ಒಂದೇ ಪದದಲ್ಲಿ ಹೇಳಲಾಗುತ್ತದೆ. ಹಾಗಿದ್ದಲ್ಲಿ ಮೂಲ ಸಂವಿಧಾನದಲ್ಲಾಗಲೀ, ಮುನ್ನುಡಿಯಲ್ಲಾಗಲೀ ಸೆಕ್ಯುಲರಿಸಂ ಇರಲಿಲ್ಲ ಎಂದು ಹೇಗೆ ಹೇಳಲು ಸಾಧ್ಯ?

ಮೂಲ ಸಂವಿಧಾನ ಮತ್ತು ಸೋಷಿಯಲಿಸಂ

ಮೂಲ ಸಂವಿಧಾನದ ಮುನ್ನುಡಿಯಲ್ಲಿ ಸೋಷಿಯಲಿಸಂ ಎನ್ನುವ ಪದವಿರಲಿಲ್ಲ ಎನ್ನುವುದು ಮತ್ತು ಅದನ್ನು ಮುನ್ನುಡಿಯಲ್ಲಿ 42ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು ಎನ್ನುವುದೂ ಕೂಡ ಅರ್ಧ ಸತ್ಯವೇ.

ಅಸಲು ಸಮಾಜವಾದ ಎಂದರೇನು?

ಜಗತ್ತಿನಲ್ಲಿ ಸಮಾಜವಾದದ ಬಗ್ಗೆ ಹಲವು ಬಗೆಯ ವ್ಯಾಖ್ಯಾನಗಳು ಇವೆ.

ಅವುಗಳೆಲ್ಲದರ ಸಾರ ಸರ್ವರಿಗೂ ಸಮ ಪಾಲು- ಸಮಬಾಳು ಎಂಬುದಷ್ಟೇ ಆಗಿದೆ.

-ಸಮಾಜದ ಆರ್ಥಿಕ ಸಂಪನ್ಮೂಲಗಳ ವಿತರಣೆಯನ್ನು ಸರ್ವಜನರ ಒಳಿತಿಗೆ ಆಯೋಜಿಸುವುದು.

-ಸಂಪತ್ತು ಒಂದು ಕಡೆ ಕೇಂದ್ರೀಕರಣವಾಗದಂತೆ ನೋಡಿಕೊಳ್ಳುವುದು, ಅದರ ಮೇಲೆ ಸರ್ವಜನರ ಒಡೆತನವನ್ನು ಸಾಧಿಸುವುದು.

-ಬಡವ-ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡುತ್ತಾ ಆರ್ಥಿಕ ನ್ಯಾಯವನ್ನು ಖಾತರಿಗೊಳಿಸುವುದು.

-ಎಲ್ಲರಿಗೂ ಘನತೆಯಿಂದ ಬದುಕುವಷ್ಟು ಅವಕಾಶಗಳನ್ನು ಕಲ್ಪಿಸಿಕೊಡುವುದು..

ಮೇಲಿನ ಎಲ್ಲಾ ಆಶಯಗಳನ್ನು ಸಾರದಲ್ಲಿ ಒಂದೇ ಪದದಲ್ಲಿ ಸಮಾಜವಾದ ಎಂದು ಕರೆಯುತ್ತಾರೆ. ಈಗ ಈ ಆಶಯಗಳು ನಮ್ಮ ಸಂವಿಧಾನದಲ್ಲಿ ಇರಲಿಲ್ಲವೇ?

ಸಂವಿಧಾನದ ಮುನ್ನುಡಿಯನ್ನು ನೋಡೊಣ. ಅದು ಹೀಗೆ ಹೇಳುತ್ತದೆ:

‘‘ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯವನ್ನು ಒದಗಿಸಲು...ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರಕಿಸಲು... ಈ ಸಂವಿಧಾನವನ್ನು ರೂಪಿಸಿರುವುದಾಗಿದೆ.’’

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಿವಸುಂದರ್

contributor

Similar News