×
Ad

ಜಾತಿ ಸ್ಥಿತಿಗತಿ ಸಮೀಕ್ಷೆ ಹೈಕೋರ್ಟ್ ಹೇಳಿದ್ದೇನು? ಬಿಜೆಪಿಯ ಅಪಪ್ರಚಾರವೇನು?

Update: 2025-10-08 11:12 IST

ಒಂದು ಪಕ್ಷವಾಗಿ ಬಿಜೆಪಿ ಹಾಗೂ ಜೆಡಿಎಸ್ ಮತ್ತು ಅವರೊಂದಿಗೆ ಕಾಂಗ್ರೆಸ್‌ನೊಳಗಿನ ಬಲಾಢ್ಯ ಜಾತಿಗಳ ಬಲಾಢ್ಯ ಶಕ್ತಿಗಳು ಸಮೀಕ್ಷೆಯ ಬಗ್ಗೆ ಮಾಡಿರುವ ಅಪಪ್ರಚಾರಗಳು ಹಾಗೂ ಸರಕಾರದ ಹಲವು ಅವೈಜ್ಞಾನಿಕ ಮತ್ತು ಅವಸರದ ತಯಾರಿಗಳು ಮತ್ತು ಸಮೀಕ್ಷೆ ನಡೆದಿರುವ ರೀತಿ...ಇವೆಲ್ಲವೂ ಈ ಸಮೀಕ್ಷೆಯೂ ಕಾಂತರಾಜು ವರದಿಯ ಹಾದಿಯನ್ನೇ ಹಿಡಿಯುವುದೇ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಎಲ್ಲಿಯತನಕ ಅಹಿಂದ ಸಮುದಾಯದ ದಮನಿತ-ಶೋಷಿತ ವರ್ಗಗಳು ಗಟ್ಟಿಯಾಗಿ, ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಒಂದಾಗಿ ಸಂಘಟಿತ ಶಕ್ತಿಯಾಗುವುದಿಲ್ಲವೋ ಅಲ್ಲಿಯತನಕ ಹಿಂದುಳಿದ ವರ್ಗಗಳ ವಿರುದ್ಧ ಬಲಾಢ್ಯರ ಒಗ್ಗಟ್ಟಿನ ಹಾಗೂ ಪಕ್ಷಾತೀತ ಕುತಂತ್ರಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎಂಬುದನ್ನೇ ಕಾಂತರಾಜು ವರದಿಗಾದ ಗತಿ ಮತ್ತು ಹುಟ್ಟಿನಲ್ಲಿ ಅಲ್ಪಾಯಸ್ಸನ್ನು ಇಟ್ಟುಕೊಂಡೇ ಹುಟ್ಟಿದಂತಿರುವ ಹಾಲಿ ಸಮೀಕ್ಷೆಯ ಪರಿಸ್ಥಿತಿಗಳು ಸಾಬೀತು ಪಡಿಸುತ್ತಿವೆ.

ಪ್ರಬಲ ಜಾತಿಗಳ ಮತ್ತು ಬಿಜೆಪಿಯ ಬಹಿರಂಗ ವಿರೋಧ ಮತ್ತು ಕಾಂಗ್ರೆಸ್ ಸರಕಾರದೊಳಗಿನ ಬಲಾಢ್ಯ ಜಾತಿಗಳ ‘ಸಕ್ರಿಯ ಅಸಹಕಾರ’ ಮತ್ತು ಸರಕಾರದ ಅವಸರದ ತಯಾರಿಯ ನಡುವೆಯೂ ನನೆಗುದಿಗೆ ಬಿದ್ದಿದ್ದ ಕರ್ನಾಟಕದ ಹಿಂದುಳಿದ ವರ್ಗಗಳ ಸಾಮಾಜಿಕ ಸ್ಥಿತಿಗತಿ ಸಮೀಕ್ಷೆ ಒಂದು ಹಂತವನ್ನು ತಲುಪಿದೆ.

ಮೊನ್ನೆ ಕೇಂದ್ರ ಮಂತ್ರಿ ಸೋಮಣ್ಣನವರು ಸಾಮಾಜಿಕ ಸಮೀಕ್ಷೆ ನಡೆಯುತ್ತಿರುವುದೇ ಮೇಲ್ಜಾತಿಗಳನ್ನು ತುಳಿಯುವುದಕ್ಕೆ ಎಂದು ಘೋಷಿಸುವುದರೊಂದಿಗೆ ಸಾಮಾಜಿಕ ಸಮೀಕ್ಷೆಯ ಅವೈಜ್ಞಾನಿಕ ಪ್ರಕ್ರಿಯೆಗೆ ಮಾತ್ರ ನಮ್ಮ ವಿರೋಧ ಎನ್ನುತ್ತಿದ್ದ ಬಿಜೆಪಿಯ ನಾಯಕರ ಅಸಲಿ ಉದ್ದೇಶಗಳನ್ನು ಬಹಿರಂಗಗೊಳಿಸಿದೆ. ಇದೇ ಮಾತುಗಳನ್ನು ಮತ್ತೊಂದು ರೀತಿಯಲ್ಲಿ ಜೆಡಿಎಸ್ ಮುಖಂಡ, ಕೇಂದ್ರ ಮಂತ್ರಿ ಕುಮಾರಸ್ವಾಮಿಯವರೂ ಪಲುಕಿದ್ದಾರೆ.

ಈ ವಿತಂಡವಾದಗಳ ಅಸಾಂವಿಧಾನಿಕತೆಯನ್ನು ಕರ್ನಾಟಕದ ಹೈಕೋರ್ಟ್ ತನ್ನ ಸೆಪ್ಟಂಬರ್ 25ರ ಮಧ್ಯಂತರ ಆದೇಶದಲ್ಲಿ ನಿರಾಕರಿಸಿ ಮಧ್ಯಂತರ ತಡೆಯಾಜ್ಞೆ ಕೊಡಲು ನಿರಾಕರಿಸಿದ್ದರೂ, ವಿಚಿತ್ರ ತರ್ಕವನ್ನು ಮುಂದೊಡ್ಡಿ ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಎಂದು ಘೋಷಿಸಿದೆ. ಈ ಆದೇಶವೂ ಸಹ ಪರೋಕ್ಷವಾಗಿ ಸಮೀಕ್ಷೆಯ ಉದ್ದೇಶ ಮತ್ತು ಅಗತ್ಯಗಳನ್ನು ವಿಫಲಗೊಳಿಸುತ್ತಿದೆ.

ಮೊದಲಿಗೆ ಈ ಹಿಂದುಳಿದವರ ವಿರುದ್ಧ ಮುಂದುವರಿದವರ ಸಂಚಿಗೆ ಬಹಿರಂಗವಾಗಿ ನಾಯಕತ್ವ ನೀಡಿರುವ ಬಿಜೆಪಿ ಸಮೀಕ್ಷೆಯನ್ನು ವಿರೋಧಿಸಲು ಹಲವು ಸೋಗಲಾಡಿ ತರ್ಕಗಳ ಅಸಾಂವಿಧಾನಿಕತೆಯನ್ನು ವಿಶ್ಲೇಷಿಸೋಣ:

ಅವುಗಳಲ್ಲಿ ಹಿಂದುಳಿದವರ ಸಾಮಾಜಿಕ ಸಮೀಕ್ಷೆ ಮಾಡುವ ಅಧಿಕಾರ ರಾಜ್ಯಗಳಿಗೆ ಇಲ್ಲ ಎನ್ನುವುದು ಪ್ರಧಾನವಾದುದು.

ಇದು ರಾಜಕೀಯವಾಗಿ ರಾಜ್ಯಗಳ ಎಲ್ಲಾ ಅಳಿದುಳಿದ ಅಧಿಕಾರವನ್ನು ಕೇಂದ್ರವೇ ವಶಪಡಿಸಿಕೊಂಡು, ಸಾಮಾಜಿಕವಾಗಿ ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆಯನ್ನು ಅಬಾಧಿತವಾಗಿ ಮುಂದುವರಿಸುತ್ತಾ ಭಾರತವನ್ನು ಏಕಚಕ್ರಾಧಿಪತ್ಯವಾಗಿ ರೂಪಿಸಬೇಕೆಂಬ ಸಂಘಪರಿವಾರದ ದೂರಗಾಮಿ ಆಶಯದ ಮತ್ತೊಂದು ಕಾರ್ಯ ಸೂಚಿಯಷ್ಟೇ.

ಮೋದಿ ಸರಕಾರ ಮತ್ತು ಸಂವಿಧಾನದ 105ನೇ ತಿದ್ದುಪಡಿಯ ಹುನ್ನಾರ

ಇದೇ ಉದ್ದೇಶದಿಂದ ಮೋದಿ ಸರಕಾರ 2018ರಲ್ಲಿ ಸಂವಿಧಾನಕ್ಕೆ 102ನೇ ತಿದ್ದುಪಡಿ ಮಾಡಿ ತಮ್ಮತಮ್ಮ ರಾಜ್ಯಗಳ ಹಿಂದುಳಿದ ವರ್ಗಗಳನ್ನು ಗುರುತಿಸಿ, ಅಭಿವೃದ್ಧಿ ಯೋಜನೆ ರೂಪಿಸುವ ರಾಜ್ಯಗಳ ಅಧಿಕಾರವನ್ನು ಕಸಿದು ಆ ಅಧಿಕಾರವನ್ನು ಕೇಂದ್ರದ ನಿಯಂತ್ರಣದಲ್ಲಿರುವ NCBC (National Commission For Backward Castesಗೆ ವರ್ಗಾಯಿಸಿತು.

ಆದರೆ ಈ ತಿದ್ದುಪಡಿಯ ವಿರುದ್ಧ ಬಿಜೆಪಿಯ ರಾಜ್ಯ ಘಟಕಗಳಲ್ಲೂ, ಎನ್‌ಡಿಎ ಮೈತ್ರಿಕೂಟದಲ್ಲೂ ಹಾಗೂ ವಿರೋಧ ಪಕ್ಷಗಳಿಂದಲೂ ತೀವ್ರ ಪ್ರತಿರೋಧ ವ್ಯಕ್ತವಾಯಿತು. ಜೊತೆಗೆ ಈ ತಿದ್ದುಪಡಿಯು ಭಾರತದ ಸಂವಿಧಾನದ ಫೆಡರಲ್ ಸ್ವರೂಪಕ್ಕೆ ವ್ಯತಿರಿಕ್ತವಾಗಿದೆ ಎಂದು ಸುಪ್ರೀಂ ಕೂಡ (CA3123/2020)ಅಭಿಪ್ರಾಯ ಪಟ್ಟಿತು.

ಹೀಗಾಗಿ ಅನಿವಾರ್ಯವಾಗಿ ಮೋದಿ ಸರಕಾರವು ತನ್ನ ತಪ್ಪನ್ನು ತಿದ್ದುಕೊಳ್ಳಲೇ ಬೇಕಾಯಿತು. ಅದರ ಭಾಗವಾಗಿಯೇ 2021ರಲ್ಲಿ ಸಂವಿಧಾನಕ್ಕೆ ಮತ್ತೆ 105ನೇ ತಿದ್ದುಪಡಿ ತಂದಿತು.

ಆ ಮೂಲಕ ಕೇಂದ್ರ ಸರಕಾರವು ಕೇಂದ್ರ ಸರಕಾರಕ್ಕೆ ಸೀಮಿತವಾದ ಹಿಂದುಳಿದ ವರ್ಗಗಳ ಪಟ್ಟಿಯನ್ನು ಮಾಡಿಕೊಳ್ಳಬಹುದೆಂದೂ, ಉಳಿದಂತೆ ಆಯಾ ರಾಜ್ಯಗಳ ಹಿಂದುಳಿದ ವರ್ಗಗಳ ಪಟ್ಟಿಯನ್ನು ಆಯಾ ರಾಜ್ಯ ಸರಕಾರಗಳೇ ಮಾಡಿಕೊಳ್ಳಬಹುದೆಂದು ಶಾಸನ ಮಾಡಿತು.

ಇದು 2018ರಲ್ಲಿ ತಾನು ತಂದ 102ನೇ ತಿದ್ದುಪಡಿ ಮಾಡಿದ ಅನಾಹುತಗಳನ್ನು ಸರಿಪಡಿಸಿಕೊಳ್ಳಲು ತಂದ ತಿದ್ದುಪಡಿಯೇ ಆಗಿದ್ದರೂ 105ನೇ ತಿದ್ದುಪಡಿಯ ಮೂಲಕ ಬಿಜೆಪಿ ಫೆಡರಲ್ ತತ್ವ ಪರ ಎಂದು ಲಜ್ಜೆಗೆಟ್ಟು ಪ್ರಚಾರ ಮಾಡಿಕೊಂಡಿತು.

ಈಗ ಕರ್ನಾಟಕದ ಕಾಂಗ್ರೆಸ್ ಸರಕಾರವು ಜಾತಿ ಸ್ಥಿತಿ ಸಮೀಕ್ಷೆ ಪ್ರಾರಂಭಿಸಿರುವ ಹೊತ್ತಿನಲ್ಲಿ ಮತ್ತೊಮ್ಮೆ ಜಾತಿಸ್ಥಿತಿ ಸಮೀಕ್ಷೆ ಮಾಡುವ ಅಧಿಕಾರ ರಾಜ್ಯಗಳಿಗೆ ಇಲ್ಲವೆಂದು ಬಿಜೆಪಿ ಹುಯಿಲೆಬ್ಬಿಸಿದೆ. ಮತ್ತೊಮ್ಮೆ ತನ್ನ ಪ್ರಾಕ್ಸಿಗಳ ಮೂಲಕ ಜಾತಿ ಸ್ಥಿತಿ ಸಮೀಕ್ಷೆಗೆ ಅವಕಾಶ ಕೊಡುವ ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ 1995ಕ್ಕೆ ಮತ್ತು ರಾಜ್ಯದ ಹಿಂದುಳಿದ ವರ್ಗಗಳನ್ನು ಗುರುತಿಸಲು ಮತ್ತು ವರ್ಗೀಕರಿಸಲು ರಾಜ್ಯದ ಸಮಸ್ತ ನಾಗರಿಕರ ಸಾಮಾಜಿಕ ಸ್ಥಿತಿಗತಿ ಸಮೀಕ್ಷೆ ನಡೆಸಲು ಅನುವು ಮಾಡಿಕೊಡಲು ಹಿಂದಿನ ಸಿದ್ದರಾಮಯ್ಯ ಸರಕಾರ ಜಾರಿಗೆ ತಂದಿರುವ 2014ರ ತಿದ್ದುಪಡಿಯನ್ನೂ ಕೂಡ ರದ್ದು ಮಾಡಬೇಕೆಂದು ಹೈಕೋರ್ಟ್‌ನಲ್ಲಿ (WP 28671/2025) ಅಹವಾಲು ಸಲ್ಲಿಸಿದೆ. ಸದ್ಯಕ್ಕೆ ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಆ ವಾದವನ್ನು ಪುರಸ್ಕರಿಸಿಲ್ಲ ಮತ್ತು ಸಮೀಕ್ಷೆಗೆ ತಡೆಯಾಜ್ಞೆ ಕೊಟ್ಟಿಲ್ಲ.

ಕರ್ನಾಟಕ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹಿಂದುಳಿದ ವರ್ಗಗಳನ್ನು ಪತ್ತೆ ಮಾಡಲು ರಾಜ್ಯದ ಸಮಸ್ತ ನಾಗರಿಕರ ಸಾಮಾಜಿಕ ಸ್ಥಿತಿಗತಿ ಸಮೀಕ್ಷೆ ಮಾಡುವುದು ಅಗತ್ಯವೆಂದು ಹೇಳಿದ್ದ (ಮಂಡಲ್ ಜಡ್ಜ್‌ಮೆಂಟ್ ಎಂದು ಪ್ರಖ್ಯಾತವಾಗಿರುವ ಇಂದ್ರಾ ಸಹಾನಿ ಮತ್ತು ಭಾರತ ಒಕ್ಕೂಟದ ಪ್ರಕರಣದಲ್ಲಿ (WP (C)930/1990) ಒಂಭತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠದ ಆದೇಶವನ್ನು ಕೂಡ ಅಹವಾಲುದಾರರಿಗೆ ನೆನಪಿಸಿದೆ.

ಆ ಆದೇಶದಲ್ಲಿ ಸುಪ್ರೀಂ ಕೋರ್ಟ್:

859. .... A caste can be and quite often is a social class in India. If it is backward socially, it would be a backward class for the purposes of Article 16(4). Among non-Hindus, there are several occupational groups, sects and denominations, which for historical reasons are socially backward. They too represent backward social collectivities for the purposes of Article 16(4)

(b) Neither the Constitution nor the law prescribes the procedure or method of

identification of backward classes. Nor is it possible or advisable for the court to lay down any such procedure or method. It must be left to the authority appointed to identify. It can adopt such method/procedure as it thinks convenient and so long as its survey covers the entire populace, no objection can be taken to it." ಎಂದೂ ಸ್ಪಷ್ಟಪಡಿಸಿದೆ.

ಇದರಲ್ಲಿ ಸಾಂವಿಧಾನಿಕ ಪೀಠ ಹಲವು ಅಂಶಗಳನ್ನು ಸಂದೇಹಕ್ಕೆ ಕಾರಣವೇ ಇಲ್ಲದಂತೆ ಸ್ಪಷ್ಟಪಡಿಸಿದೆ:

ಹಿಂದುಳಿದ ಜಾತಿಗಳೇ ಹಿಂದುಳಿದ ವರ್ಗಗಳು

‘‘ಭಾರತದ ಸಂದರ್ಭದಲ್ಲಿ ಬಹಳ ಸಾರಿ ಜಾತಿಗಳು ಸಾಮಾಜಿಕ ವರ್ಗಗಳೂ ಆಗಿವೆ. ಅವು ಹಿಂದುಳಿದಿದ್ದರೆ ಸಂವಿಧಾನದ 16(4) ಅನ್ವಯವಾಗಬೇಕಾದ ಹಿಂದುಳಿದ ವರ್ಗಗಳೂ ಆಗಿರುತ್ತವೆ.’’

ಹೀಗೆ ಸ್ಪಷ್ಟಪಡಿಸುವ ಮೂಲಕ ಸುಪ್ರೀಂ ಕೋರ್ಟ್ ಹಿಂದುಳಿದ ವರ್ಗಗಳ ಸ್ಥಾನಮಾನ ಗುರುತಿಸಲು ಬೇಕಾದ ಪ್ರಮುಖ ಮಾನದಂಡ ಜಾತಿ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಈ ಸಮೀಕ್ಷೆಯನ್ನು ಜಾತಿಗಳ ಸಾಮಾಜಿಕ ಸ್ಥಿತಿಗತಿಗಳ ಸಮೀಕ್ಷೆ ಎಂದು ಕರೆಯುವುದರಲ್ಲಿ ಯಾವ ಹಿಂಜರಿಕೆಯೂ ಇರಬೇಕಿಲ್ಲ.

ಹಿಂದುಳಿದ ಮೀಸಲಾತಿ ಕೇವಲ ಹಿಂದೂಗಳಿಗೆ ಸೀಮಿತವಲ್ಲ

‘‘ಹಿಂದೂಯೇತರ ಸಮುದಾಯಗಳಲ್ಲಿ ಹಲವಾರು ವೃತ್ತಿಪರ ಗುಂಪುಗಳು, ಪಂಥಗಳು ಮತ್ತು ಪಂಗಡಗಳು ಐತಿಹಾಸಿಕ ಕಾರಣಗಳಿಗಾಗಿ ಹಿಂದುಳಿದಿವೆ. ಇವು ಕೂಡ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ಕಲ್ಪಿಸಬೇಕೆಂಬ 16(4) ಅನ್ನು ಅನ್ವಯಿಸಲು ಅರ್ಹವಾದ ಸಾಮಾಜಿಕ ಗುಂಪುಗಳಾಗಿವೆ’’ ಎಂದು ಸ್ಪಷ್ಟ ಪಡಿಸಿದೆ.

ಇದು ಹಿಂದುಳಿದ ವರ್ಗಗಳ ಮೀಸಲಾತಿ ಕೇವಲ ಹಿಂದೂ ಜಾತಿಗಳಿಗೆ ಮಾತ್ರ ಸೀಮಿತವಾಗಿರಬೇಕೆಂಬ ಬಿಜೆಪಿ ಮತ್ತು ಸಂಘಿಗಳ ಪ್ರತಿಪಾದನೆಯನ್ನು ಪ್ರಬಲವಾಗಿ ತಿರಸ್ಕರಿಸುತ್ತದೆ.

ಸಮಸ್ತ ಜನಸಂಖ್ಯೆಯ ಸಮೀಕ್ಷೆಯ ಮೂಲಕ ಹಿಂದುಳಿದ ವರ್ಗಗಳ ಪತ್ತೆಯಾಗಬೇಕು

ಸಾಂವಿಧಾನಿಕ ಪೀಠ ಮುಂದುವರಿದು:

‘‘ಹಿಂದುಳಿದ ವರ್ಗಗಳನ್ನು ಹೇಗೆ ಪತ್ತೆ ಮಾಡಬೇಕೆಂಬುದನ್ನು ಸಂವಿಧಾನದಲ್ಲಾಗಲೀ, ಕಾನೂನಿನಲ್ಲಾಗಲೀ ಸ್ಪಷ್ಟಪಡಿಸಿಲ್ಲ. ಕೋರ್ಟುಗಳು ಕೂಡ ಅದರ ಬಗ್ಗೆ ನಿರ್ದಿಷ್ಟ ಮಾರ್ಗದರ್ಶನ ಕೊಡಲಾಗುವುದಿಲ್ಲ. ಆದರೆ ಅದನ್ನು ಪತ್ತೆ ಹಚ್ಚಲು ರೂಪಿಸಲಾದ ಪ್ರಾಧಿಕಾರವು ತನ್ನ ಸಮೀಕ್ಷೆಯಲ್ಲಿ ಇಡೀ ಜನಸಂಖ್ಯೆಯನ್ನು ಒಳಗೊಳ್ಳಬೇಕು’’ ಎಂದು ಸ್ಪಷ್ಟಪಡಿಸಿದೆ.

ಅದರಂತೆ ಈ ಹಿಂದಿನ ಸಿದ್ದರಾಮಯ್ಯನವರ ಸರಕಾರ 1995ರ ಹಿಂದುಳಿದ ವರ್ಗಗಳ ಕಾಯ್ದೆಯ 9(2) ಕಾಲಮ್‌ಗೆ ತಿದ್ದುಪಡಿ ತಂದು ‘ಹಿಂದುಳಿದ ವರ್ಗಗಳ ಸಮೀಕ್ಷೆ’ ಎಂದು ಇದ್ದುದನ್ನು ‘ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಸಮೀಕ್ಷೆ’ ಎಂದು ತಿದ್ದುಪಡಿ ಮಾಡಿದ್ದಿತ್ತು.

ಅದು ಅತ್ಯಂತ ಸಾಂವಿಧಾನಿಕವಾಗಿತ್ತು. ಏಕೆಂದರೆ ಎಲ್ಲಾ ಅರ್ಹರನ್ನು ಪತ್ತೆ ಹಚ್ಚುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಅನರ್ಹರ ಪತ್ತೆಯೂ ಸಹ. ಹಿಂದುಳಿದ ಕೋಟಾದಲ್ಲಿ ಸೌಲಭ್ಯ ಅನುಭವಿಸುತ್ತಿರುವ ಪ್ರಬಲ ಜಾತಿಗಳು ಸಮೀಕ್ಷೆಯನ್ನು ವಿರೋಧಿಸುತ್ತಿರುವುದು ಕೂಡ ಇದೇ ಕಾರಣಕ್ಕೆ.

ಆದ್ದರಿಂದಲೇ 2015ರಲ್ಲೇ ಸರಕಾರದ 2014ರ ತಿದ್ದುಪಡಿಯ ವಿರುದ್ಧವೂ ದಾವೆಯೊಂದು(WP 9258/2015) ದಾಖಲಾಯಿತು. ಈವರೆಗೆ ಆ ಅರ್ಜಿಯು ಹೈಕೋರ್ಟ್‌ನಲ್ಲಿ ಪೆಂಡಿಂಗ್ ಇದೆ. ಅದನ್ನು ಪುರಸ್ಕರಿಸಿ ಯಾವ ಮಧ್ಯಂತರ ಆದೇಶವನ್ನೂ ಕೊಟ್ಟಿಲ್ಲ. ಹೀಗಾಗಿ ಸಮಸ್ತ ಜನಸಂಖ್ಯೆಯ ಸಾಮಾಜಿಕ ಸಮೀಕ್ಷೆಗೆ ಯಾವ ಅಡಚಣೆಯೂ ಇಲ್ಲ. ಈ ದಾವೆಯ ವಿಚಾರಣೆ ಅಕ್ಟೋಬರ್‌ನಲ್ಲಿ ಎಂದಿನಂತೆ ದಿನಾಂಕ ನಿಗದಿಯಾಗಿದೆಯಷ್ಟೆ.

ಅದೇ ರೀತಿ ಬಿಹಾರದ ಹೈಕೋರ್ಟ್ ಸಹ ಬಿಹಾರದ ಜಾತಿ ಸಮೀಕ್ಷೆಯ ವಿರುದ್ಧ ಮುಂದಿಡಲಾಗಿದ್ದ ಇದೇ ಬಗೆಯ ವಾದಗಳನ್ನು ತಿರಸ್ಕರಿಸಿ ಜಾತಿ ಸಮೀಕ್ಷೆಗೆ ಅನುವು ಮಾಡಿಕೊಟ್ಟಿತ್ತು. ಅರ್ಜಿದಾರರು ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ಮೊರೆ ಹೋದರು. (SLP (C) 16970/2023) ಸುಪ್ರೀಂ ತಡೆಯಾಜ್ಞೆಯನ್ನೇನೂ ಕೊಟ್ಟಿಲ್ಲ.

ಖಾಸಗಿತನದ ಉಲ್ಲಂಘನೆ- ಬೇಟೆಗಾರನ ಕಾರುಣ್ಯ?

ಬಿಜೆಪಿ ಮುಂದಿಟ್ಟಿರುವ ಮತ್ತೊಂದು ವಾದ, ಸಮೀಕ್ಷೆಯಲ್ಲಿ ಸಂಗ್ರಹಿಸುತ್ತಿರುವ ವಿವರಗಳು ನಾಗರಿಕರ ಖಾಸಗಿತನದ ಉಲ್ಲಂಘನೆಯಾಗಿದೆ ಎಂದು. ಎಲುಬಿಲ್ಲದ ನಾಲಗೆಯ ಮತ್ತೊಂದು ಉದಾಹರಣೆಯಿದು.

ಹಾಗೆ ನೋಡಿದರೆ ಆಧಾರ್ ವಿಷಯದಲ್ಲಿ ನಾಗರಿಕರ ಖಾಸಗಿತನದ ಉಲ್ಲಂಘನೆಯ ಬಗ್ಗೆ ನಡೆದ ಪ್ರಖ್ಯಾತ ಪುಟ್ಟಸ್ವಾಮಿ ವರ್ಸಸ್ ಭಾರತ ಒಕ್ಕೂಟದ ಪ್ರಕರಣದಲ್ಲಿ (WP (C) 494/2012) ಮೋದಿ ನೇತೃತ್ವದ ಬಿಜೆಪಿ ಸರಕಾರ ಭಾರತದ ನಾಗರಿಕರಿಗೆ ಭಾರತದ ಸಂವಿಧಾನವು ಖಾಸಗಿತನದ ಹಕ್ಕನ್ನು ಕೊಟ್ಟೇ ಇಲ್ಲ ಎಂದು ವಾದಿಸಿತ್ತು.

ಬಿಜೆಪಿಯ ಮತ್ತೊಂದು ವಾದ ಏನೆಂದರೆ ಹೇಗಿದ್ದರೂ ಕೇಂದ್ರವು 2027ರಲ್ಲಿ ಕಡ್ಡಾಯ ಜನಗಣತಿಯೊಂದಿಗೆ ಜಾತಿಸ್ಥಿತಿ ಗಣತಿಯನ್ನೂ ಮಾಡಲಿದೆ. ಅದು ಅಧಿಕೃತ. ಹೀಗಾಗಿ ಈ ಸಮೀಕ್ಷೆ ರಾಜಕೀಯ ಪ್ರೇರಿತ ಹಾಗೂ ಅನಗತ್ಯ ಎನ್ನುವುದಾಗಿದೆ. ಮತ್ತೊಂದು ಕಡೆ ತಮಿಳುನಾಡಿನ ಡಿಎಂಕೆ ಸರಕಾರವೂ ಜಾತಿ ಸ್ಥಿತಿಗತಿ ಸಮೀಕ್ಷೆಯನ್ನು ರಾಜ್ಯಗಳಿಗಿಂತ ಕೇಂದ್ರವು ಅಧಿಕೃತವಾಗಿ ಮಾಡುವುದೇ ತರವಾದದ್ದು ಎಂದು ಅಭಿಪ್ರಾಯ ಪಟ್ಟಿದೆ. ಈವರೆಗೆ ಕಾಂಗ್ರೆಸ್ ಸರಕಾರ ಈ ವಾದಕ್ಕೆ ಪರಿಣಾಮಕಾರಿ ಪ್ರತ್ಯುತ್ತರ ಕೊಟ್ಟಿಲ್ಲ. ಆದರೆ ಈಗಾಗಲೇ ಹೇಳಿದಂತೆ ರಾಜ್ಯದ ಸಮೀಕ್ಷೆಯೂ ಕಡ್ಡಾಯ ಸ್ವರೂಪವಾಗದಿದ್ದರೆ ರಾಜ್ಯಗಳು ಸಮೀಕ್ಷೆ ಮಾಡುವ ಸಾಂವಿಧಾನಿಕ ಅಧಿಕಾರ ಮತ್ತು ಅಗತ್ಯಗಳಿದ್ದರೂ ವಿಫಲವಾಗುವ ಸಾಧ್ಯತೆ ಹೆಚ್ಚು.

ಇದು ಬಿಜೆಪಿಗರ ವಂಚನೆ ಮತ್ತು ಆತ್ಮವಂಚನೆಯ ನಮೂನೆಗಳು.

ಸಮೀಕ್ಷೆಯನ್ನು ಎತ್ತಿ ಹಿಡಿದ ಹೈಕೋರ್ಟೇ ಕೆಳಗೆ ಬೀಳಿಸಿತು!

ಇವೆಲ್ಲವನ್ನೂ ಆಧರಿಸಿ ಕರ್ನಾಟಕ ಹೈಕೋರ್ಟ್ ಸಮೀಕ್ಷೆಗೆ ತಡೆಯಾಜ್ಞೆಯನ್ನೇನೂ ಕೊಡಲಿಲ್ಲ. ಆದರೆ ಸಾಂವಿಧಾನಿಕ ಪೀಠವೇ ಇಷ್ಟು ಸ್ಪಷ್ಟವಾದ ಆದೇಶಗಳನ್ನು ಮತ್ತು ಮಾರ್ಗ ಸೂಚಿಗಳನ್ನು ಒದಗಿಸಿದ್ದರೂ ಸಮೀಕ್ಷೆಯಲ್ಲಿ ಜನರು ಭಾಗವಹಿಸುವುದು ಕಡ್ಡಾಯವಲ್ಲ ಮತ್ತು ಉತ್ತರ ಕೊಡದ ನಾಗರಿಕರನ್ನು ಉತ್ತರಿಸಲು ಒತ್ತಾಯಿಸಬಾರದೆಂದು ಆದೇಶಿಸಿ ಪರೋಕ್ಷವಾಗಿ ಸಮೀಕ್ಷೆಯ ಉದ್ದೇಶವನ್ನೇ ವಿಫಲಗೊಳಿಸಿಬಿಟ್ಟಿದೆ.

ಇದರ ಹಿಂದೆ ಸಮೀಕ್ಷೆಯು ಸೆನ್ಸಸ್ ಅಲ್ಲವೆಂಬ ಮೇಲ್‌ಸ್ಥರದ ತಾಂತ್ರಿಕ ಗ್ರಹಿಕೆ ಇದೆ. ಏಕೆಂದರೆ ಸೆನ್ಸಸ್ ಕಾಯ್ದೆಯ ಪ್ರಕಾರ ಜನಗಣತಿಯಲ್ಲಿ ನಾಗರಿಕರು ಸೆನ್ಸಸ್ ಪ್ರಶ್ನೆಗಳಿಗೆ ಉತ್ತರ ಕೊಡಲೇಬೇಕು. ನಿರಾಕರಿಸುವುದು ಅಪರಾಧ. ಸೆನ್ಸಸ್ ಕಾಯ್ದೆಯೇ ಆ ಅಧಿಕಾರವನ್ನು ಸೆನ್ಸಸ್ ಪ್ರಕ್ರಿಯೆಗೆ ಕೊಡುತ್ತದೆ. ಏಕೆಂದರೆ ಸರಿಯಾದ ಮಾಹಿತಿ ಇಲ್ಲದೆ ಸರಕಾರಗಳು ನೈಜ ನಾಗರಿಕರನ್ನು ಗುರುತಿಸಿ ಯೋಜನೆ ರೂಪಿಸಲು ಆಗುವುದಿಲ್ಲ.

ಆದರೆ ಸಾಮಾಜಿಕ ಸಮೀಕ್ಷೆಯೂ ಕೂಡ ಹಾಗೆ ಅಲ್ಲವೇ? ಸರಿಯಾದ ಮಾಹಿತಿಯನ್ನು ಕೊಡದೆ ಇದ್ದರೆ ಸಾಮಾಜಿಕ ನ್ಯಾಯದ ಯೋಜನೆಗಳಿಗೆ ಅರ್ಹರನ್ನು ಮತ್ತು ಅನರ್ಹರನ್ನು ಬೇರ್ಪಡಿಸಲು ಹೇಗೆ ಸಾಧ್ಯವಾಗುತ್ತದೆ?

ಈಗಂತೂ ಹೈಕೋರ್ಟ್‌ನ ಈ ಆದೇಶವನ್ನೇ ಮುಂದಿಟ್ಟುಕೊಂಡು ತೇಜಸ್ವಿ, ಜೋಶಿಯಂತಹ ಬಿಜೆಪಿಯ ಬ್ರಾಹ್ಮಣ ನಾಯಕಮಣಿಗಳು ಸಮೀಕ್ಷೆಯನ್ನೇ ಬಹಿಷ್ಕರಿಸಲು ಕರೆ ಕೊಡುತ್ತಿದ್ದಾರೆ. ಹಾಗೆಯೇ ಕಾಂಗ್ರೆಸ್ ಒಳಗಿರುವ ಬಲಾಢ್ಯ ಜಾತಿಗಳ ನಾಯಕರು ಕೂಡ ಪರೋಕ್ಷವಾಗಿ ಅದೇ ಕೆಲಸ ಮಾಡುತ್ತಿದ್ದಾರೆ.

ಹಾಗೆಯೇ ಜನರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ಅರಿಯಲು ರೂಪಿಸಲಾಗಿರುವ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ ಬಿಪಿಎಲ್ ಕಾರ್ಡ್ ಇತ್ಯಾದಿ ಯೋಜನೆಗಳ ಸೌಲಭ್ಯ ಕಳೆದುಹೋಗುತ್ತದೆ ಎಂಬ ಭೀತಿ ಹುಟ್ಟಿಸುವ ಪ್ರಚಾರವನ್ನು ಕೂಡ ಬಿಜೆಪಿ ಮಾಡುತ್ತದೆ. ಇದರಿಂದಾಗಿ ಸಹಜವಾಗಿ ಸಮೀಕ್ಷೆಯಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗುತ್ತಾ ಸಮೀಕ್ಷೆಯ ವೈಜ್ಞಾನಿಕತೆ ಮತ್ತು ಅದನ್ನು ಆಧರಿಸಿ ತೆಗೆದುಕೊಳ್ಳುವ ನಿರ್ಧಾರಗಳು ಮತ್ತೊಮ್ಮೆ ಅಸಿಂಧುವಾಗಿಸುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ.

ಇವೆಲ್ಲಕ್ಕೂ ಸರಕಾರದ ರಾಜಕೀಯ ಅವಸರದ ಹಾಗೂ ಅರೆ ಮನಸ್ಸಿನ ತಯಾರಿಗಳೂ ಕೂಡ ಕಾರಣವಾಗಿದೆ.

ಅದೇನೇ ಇರಲಿ ...ವಿಷದ ಹಾವಿಗೆ ಎರಡು ನಾಲಗೆ ಎನ್ನುತ್ತಾರೆ. ಆದರೆ ಮೈತುಂಬಾ ಮನುವಾದಿ ನಂಜನ್ನೇ ತುಂಬಿಕೊಂಡಿರುವ ಬಿಜೆಪಿಗೆ ಹಲವು ನಾಲಗೆಗಳು ಎನ್ನುವುದು ಜಾತಿಸ್ಥಿತಿ ಸಮೀಕ್ಷೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ

ಒಂದು ಪಕ್ಷವಾಗಿ ಬಿಜೆಪಿ ಹಾಗೂ ಜೆಡಿಎಸ್ ಮತ್ತು ಅವರೊಂದಿಗೆ ಕಾಂಗ್ರೆಸ್‌ನೊಳಗಿನ ಬಲಾಢ್ಯ ಜಾತಿಗಳ ಬಲಾಢ್ಯ ಶಕ್ತಿಗಳು ಸಮೀಕ್ಷೆಯ ಬಗ್ಗೆ ಮಾಡಿರುವ ಅಪಪ್ರಚಾರಗಳು ಹಾಗೂ ಸರಕಾರದ ಹಲವು ಅವೈಜ್ಞಾನಿಕ ಮತ್ತು ಅವಸರದ ತಯಾರಿಗಳು ಮತ್ತು ಸಮೀಕ್ಷೆ ನಡೆದಿರುವ ರೀತಿ...ಇವೆಲ್ಲವೂ ಈ ಸಮೀಕ್ಷೆಯೂ ಕಾಂತರಾಜು ವರದಿಯ ಹಾದಿಯನ್ನೇ ಹಿಡಿಯುವುದೇ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಎಲ್ಲಿಯತನಕ ಅಹಿಂದ ಸಮುದಾಯದ ದಮನಿತ-ಶೋಷಿತ ವರ್ಗಗಳು ಗಟ್ಟಿಯಾಗಿ, ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಒಂದಾಗಿ ಸಂಘಟಿತ ಶಕ್ತಿಯಾಗುವುದಿಲ್ಲವೋ ಅಲ್ಲಿಯತನಕ ಹಿಂದುಳಿದ ವರ್ಗಗಳ ವಿರುದ್ಧ ಬಲಾಢ್ಯರ ಒಗ್ಗಟ್ಟಿನ ಹಾಗೂ ಪಕ್ಷಾತೀತ ಕುತಂತ್ರಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎಂಬುದನ್ನೇ ಕಾಂತರಾಜು ವರದಿಗಾದ ಗತಿ ಮತ್ತು ಹುಟ್ಟಿನಲ್ಲಿ ಅಲ್ಪಾಯಸ್ಸನ್ನು ಇಟ್ಟುಕೊಂಡೇ ಹುಟ್ಟಿದಂತಿರುವ ಹಾಲಿ ಸಮೀಕ್ಷೆಯ ಪರಿಸ್ಥಿತಿಗಳು ಸಾಬೀತು ಪಡಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಿವಸುಂದರ್

contributor

Similar News