ಮಧು ದಂಡವತೆಯವರನ್ನು ಮೆಚ್ಚಿಕೊಳ್ಳುತ್ತ...

ಅವರ ಆರಂಭಿಕ ನಾಯಕ ಜೆಪಿಯಂತೆ, ಮಧು ದಂಡವತೆ ಕೂಡ ನೈತಿಕ ಮತ್ತು ದೈಹಿಕ ದಿಟ್ಟತನದ ವ್ಯಕ್ತಿಯಾಗಿದ್ದರು. ಲೋಹಿಯಾ ಅವರಂತೆ ದಂಡವತೆಯೂ ವಿದ್ವಾಂಸರಾಗಿದ್ದರು. ಎನ್.ಜಿ. ಗೊರೆ, ಎಸ್. ಎಂ. ಜೋಶಿ ಮತ್ತು ಸಾನೆ ಗುರೂಜಿ ಅವರಂತೆ, ದಂಡವತೆ ಮಹಾರಾಷ್ಟ್ರದ ಮೇಲಿನ ತಮ್ಮ ಪ್ರೇಮವನ್ನು ಭಾರತದ ಮೇಲಿನ ಪ್ರೇಮದೊಂದಿಗೆ ಸಲೀಸಾಗಿ ಬೆಸೆದರು. ಆದರೂ, ತಮ್ಮ ಸಹವರ್ತಿ ಸಮಾಜವಾದಿಗಳಲ್ಲಿ ದಂಡವತೆ ಒಂದು ಕಾರಣಕ್ಕಾಗಿ ಎದ್ದು ಕಾಣುತ್ತಾರೆ. ಅದೆಂದರೆ, ಅವರು ಕೋಟ್ಯಂತರ ಭಾರತೀಯರ ಜೀವನವನ್ನು ಸುಧಾರಿಸಲು ನೆರವಾಗುವ ಮೂಲಕ ನಿರಂತರ ಪ್ರಾಯೋಗಿಕ ಪರಂಪರೆಯನ್ನು ಬಿಟ್ಟುಕೊಟ್ಟರೆಂಬುದು.

Update: 2024-01-13 05:17 GMT

ಭಾರತೀಯ ಸಮಾಜವಾದಿ ಸಂಪ್ರದಾಯವು ಈಗ ಇಲ್ಲವಾಗುತ್ತಿದೆ. ಆದರೆ ಅದು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಆಳವಾದ ಮತ್ತು ಹೆಚ್ಚು ಆರೋಗ್ಯಕರ ಪ್ರಭಾವವನ್ನು ಹೊಂದಿದ್ದ ಕಾಲವೊಂದಿತ್ತು. ಈಗಲೂ ಕೆಲವರು ಅದರ ಹಿಂದಿನ ಚೈತನ್ಯ ಮತ್ತು ಕ್ರಿಯಾಶೀಲತೆಯ ಬಗ್ಗೆ ತಿಳಿದವರಿದ್ದಾರೆ. ಕಾಂಗ್ರೆಸಿಗರು, ಕಮ್ಯುನಿಸ್ಟರು, ಪ್ರಾದೇಶಿಕ ಪಕ್ಷಗಳು, ಅಂಬೇಡ್ಕರ್‌ವಾದಿಗಳು ಮತ್ತು (ವಿಶೇಷವಾಗಿ ಇತ್ತೀಚಿನ ವರ್ಷಗಳಲ್ಲಿ) ಜನಸಂಘ ಮತ್ತು ಬಿಜೆಪಿಯವರು ಎಲ್ಲರೂ ತಮ್ಮ ತಮ್ಮ ಸೈದ್ಧಾಂತಿಕ ವಂಶಾವಳಿಗಳನ್ನು ದಾಖಲಿಸಿದ ಇತಿಹಾಸಕಾರರು ಮತ್ತು ಹೊಗಳುಭಟ್ಟರನ್ನು, ಹಾಗೆಯೇ, ತಮ್ಮ ಪ್ರಮುಖ ನಾಯಕರ ಲಿಖಿತ ಜೀವನಚರಿತ್ರೆಗಳು ಮತ್ತು ಕೆಲವೊಮ್ಮೆ ಉದಾತ್ತ ಕಥೆಗಳನ್ನು ಹೊಂದಿದವರೇ ಆಗಿದ್ದಾರೆ. ಆದರೆ ಭಾರತೀಯ ಸಮಾಜವಾದಿಗಳು ಮಾತ್ರ ಹೀಗಲ್ಲ. ಅವರಲ್ಲಿ ಹೆಚ್ಚಿನವರು ಭಾರತೀಯ ಇತಿಹಾಸಕಾರರಿಂದ ಕೆಟ್ಟ ಗ್ರಹಿಕೆಗೆ ತುತ್ತಾದವರು.

ಸಮಾಜವಾದಿಗಳನ್ನು ನೆನೆಯಲು ಇದು ಒಳ್ಳೆಯ ಸಮಯ. ಏಕೆಂದರೆ ಅವರ ಅತ್ಯುತ್ತಮ ಪ್ರತಿನಿಧಿಯ ಜನ್ಮ ಶತಮಾನೋತ್ಸವ ಈ ತಿಂಗಳ ಕೊನೆಯಲ್ಲಿ ಬರುತ್ತದೆ. ಅವರು ಮಧು ದಂಡವತೆ. ಜನಿಸಿದ್ದು 1923ರ ಜನವರಿ 21ರಂದು. ಮುಂಬೈಯಲ್ಲಿ ವಿದ್ಯಾರ್ಥಿಯಾಗಿದ್ದಾಗ, ದಂಡವತೆ ಅವರು ಕಾಂಗ್ರೆಸ್ ಸಮಾಜವಾದಿ ಪಕ್ಷದ (ಸಿಎಸ್‌ಪಿ) ಆದರ್ಶಗಳಿಂದ ಮತ್ತು ಅದರ ವರ್ಚಸ್ವಿ ನಾಯಕರಾದ ಜಯಪ್ರಕಾಶ್ ನಾರಾಯಣ್, ರಾಮಮನೋಹರ ಲೋಹಿಯಾ ಮತ್ತು ಯೂಸುಫ್ ಮೆಹರಲಿ ಅವರಿಂದ ಗಾಢವಾಗಿ ಪ್ರಭಾವಿತರಾಗಿದ್ದರು.

ಕಾಂಗ್ರೆಸ್ ಪಕ್ಷದ ಮುಖ್ಯಧಾರೆ ಆರ್ಥಿಕ ನ್ಯಾಯ ಮತ್ತು ಮಹಿಳಾ ಹಕ್ಕುಗಳ ಪ್ರಶ್ನೆಗಳ ಬಗ್ಗೆ ತುಂಬಾ ಸಂಪ್ರದಾಯವಾದಿ ಎಂಬುದು ಸಿಎಸ್‌ಪಿ ಭಾವನೆಯಾಗಿತ್ತು. ಅದೇ ವೇಳೆ ಅದು ಸೋವಿಯತ್ ಒಕ್ಕೂಟದ ತೀವ್ರ ಪ್ರಭಾವದಲ್ಲಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದಿಂದಲೂ ದೂರ ಕಾಯ್ದುಕೊಂಡಿತ್ತು. 1942ರ ಕ್ವಿಟ್ ಇಂಡಿಯಾ ಚಳವಳಿ ಸಮಯದಲ್ಲಿ ಸಮಾಜವಾದಿಗಳು ಮತ್ತು ಕಮ್ಯುನಿಸ್ಟರ ಭಿನ್ನಾಭಿಪ್ರಾಯ ಕಾಣಿಸಿಕೊಂಡಿತು. ಆ ಚಳವಳಿಯನ್ನು ಸಮಾಜವಾದಿಗಳು ಬೆಂಬಲಿಸಿದ್ದರೆ, ಕಮ್ಯುನಿಸ್ಟರು ವಿರೋಧಿಸಿದ್ದರು.

ಸೈದ್ಧಾಂತಿಕವಾಗಿ ಹೇಳುವುದಾದರೆ, ಸಮಾಜವಾದಿಗಳು ಮೂರು ಅಂಶಗಳಲ್ಲಿ ಕಮ್ಯುನಿಸ್ಟರಿಂದ ಸಂಪೂರ್ಣವಾಗಿ ಭಿನ್ನರಾಗಿದ್ದರು. ಮೊದಲನೆಯದಾಗಿ, ಕಮ್ಯುನಿಸ್ಟರು ಸ್ಟಾಲಿನ್ ಮತ್ತು ರಶ್ಯವನ್ನು ಆರಾಧಿಸುತ್ತಿದ್ದರು. ಆದರೆ, ಸಮಾಜವಾದಿಗಳು ಸ್ಟಾಲಿನ್‌ರನ್ನು ಸರ್ವಾಧಿಕಾರಿಯೆಂದು ಮತ್ತು ರಶ್ಯವನ್ನು ಸರ್ವಾಧಿಕಾರವೆಂದು ಸರಿಯಾಗಿಯೇ ಗ್ರಹಿಸಿದ್ದರು. ಎರಡನೆಯದಾಗಿ, ಕಮ್ಯುನಿಸ್ಟರು ಹಿಂಸಾಚಾರಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದರು. ಆದರೆ ಸಮಾಜವಾದಿಗಳು ರಾಜಕೀಯ ಜಗಳಗಳನ್ನು ಬಗೆಹರಿಸುವಲ್ಲಿ ಅಹಿಂಸೆಗೆ ಆದ್ಯತೆ ನೀಡಿದ್ದರು. ಮೂರನೆಯದಾಗಿ, ಕಮ್ಯುನಿಸ್ಟರು ಆರ್ಥಿಕ ಮತ್ತು ರಾಜಕೀಯ ಅಧಿಕಾರದ ಕೇಂದ್ರೀಕರಣವನ್ನು ನಂಬಿದ್ದರು. ಆದರೆ ಸಮಾಜವಾದಿಗಳು ಎರಡೂ ಕ್ಷೇತ್ರಗಳಲ್ಲಿ ವಿಕೇಂದ್ರೀಕರಣವನ್ನು ಪ್ರತಿಪಾದಿಸಿದ್ದರು.

ಕಮ್ಯುನಿಸ್ಟರಿಂದ ತಮ್ಮನ್ನು ಬೇರೆಯಾಗಿ ಕಂಡುಕೊಳ್ಳುವಲ್ಲಿ ಸಮಾಜವಾದಿಗಳು ಮಹಾತ್ಮಾ ಗಾಂಧಿಯವರಿಂದ ಪ್ರೇರಿತರಾಗಿದ್ದರು. ಮಧು ದಂಡವತೆ ತಮ್ಮ ‘ಮಾರ್ಕ್ಸ್ ಆ್ಯಂಡ್ ಗಾಂಧಿ’ ಪುಸ್ತಕದಲ್ಲಿ ಬರೆದಂತೆ, ಗಾಂಧೀಜಿಯವರು ಹಿಂಸಾತ್ಮಕ ವಿಧಾನಗಳನ್ನು ವಿರೋಧಿಸುತ್ತಿದ್ದುದಕ್ಕೆ ಮನುಷ್ಯ ಜೀವನದ ಬಗೆಗಿನ ಗೌರವವು ಹಿನ್ನೆಲೆಯಾಗಿತ್ತು. ವ್ಯವಸ್ಥೆಯ ಮೂರ್ಖತನಕ್ಕಾಗಿ, ವ್ಯವಸ್ಥೆಯ ಅಂಗಗಳಂತೆ ವರ್ತಿಸುವ ವ್ಯಕ್ತಿಗಳು ಶಿಕ್ಷೆ ಅನುಭವಿಸುವಂತಾಗಬಾರದು ಅಥವಾ ನಾಶವಾಗಬಾರದು ಎಂಬುದು ಅವರ ಕಳಕಳಿಯಾಗಿತ್ತು. ಹಿಂಸಾತ್ಮಕ ಕ್ರಾಂತಿಗಳಲ್ಲಿ ಜನರ ವ್ಯಾಪಕ ವರ್ಗಗಳ ನಿಜವಾದ ಒಳಗೊಳ್ಳುವಿಕೆ ಇರುವುದಿಲ್ಲ ಎಂಬುದನ್ನು, ಕ್ರಾಂತಿಯಲ್ಲಿ ಭಾಗವಹಿಸುವ ಕೆಲವರು ಮತ್ತು ಅಧಿಕಾರವನ್ನು ಹೊಂದಿರುವ ಕೆಲವೇ ಕೆಲವರು, ಜನರ ಹೆಸರಿನಲ್ಲಿ ಸರ್ವಾಧಿಕಾರ ಸ್ಥಾಪಿಸುವುದನ್ನು ಗಾಂಧಿ ಅನುಭವದಿಂದ ಬಲ್ಲವರಾಗಿದ್ದರು.

ಅದೇ ಪುಸ್ತಕದಲ್ಲಿ ದಂಡವತೆ ಹೀಗೆ ಹೇಳುತ್ತಾರೆ: ‘ಗಾಂಧಿಯವರ ರಾಜಕೀಯ ಮತ್ತು ಆರ್ಥಿಕ ದೃಷ್ಟಿಕೋನವು ನಿಜವಾದ ಅಹಿಂಸಾತ್ಮಕ ಪ್ರಜಾಸತ್ತಾತ್ಮಕ ಸಮಾಜವನ್ನು ಹುಟ್ಟುಹಾಕುವ ಅವರ ಹಂಬಲದಿಂದ ಬೆಳೆದಿತ್ತು. ಅದರಲ್ಲಿ ಬಲವಂತಕ್ಕೆ ಮತ್ತು ಮನುಷ್ಯನು ವ್ಯವಸ್ಥೆ ಇಲ್ಲವೇ ತಂತ್ರಜ್ಞಾನದ ಒಂದು ಭಾಗ ಮಾತ್ರವಾಗುವುದಕ್ಕೆ ಅವಕಾಶವಿರಲಿಲ್ಲ. ಈ ಕಾರಣಕ್ಕಾಗಿಯೇ ಅವರು ಬಂಡವಾಳಶಾಹಿ ತಂತ್ರಜ್ಞಾನವನ್ನು ಉತ್ಪಾದನೆಗಾಗಿ ಎರವಲು ಪಡೆದ ಕಮ್ಯುನಿಸಂ ಬಗ್ಗೆ ಹೆಚ್ಚು ಆಕರ್ಷಿತರಾಗಲಿಲ್ಲ. ಬದಲಾಗಿ ಉತ್ಪಾದನಾ ಸಂಬಂಧಗಳನ್ನು ಮಾತ್ರ ಬದಲಾಯಿಸಲು ಶ್ರಮಿಸಿದರು.’

ಸ್ವಾತಂತ್ರ್ಯದ ತರುವಾಯ, ಕಾಂಗ್ರೆಸ್ ಸಮಾಜವಾದಿಗಳು ಕಾಂಗ್ರೆಸನ್ನು ತೊರೆದು ತಮ್ಮದೇ ಆದ ಪಕ್ಷವನ್ನು ಪ್ರಾರಂಭಿಸಿದರು. ಅದು ನಂತರದ ವರ್ಷಗಳಲ್ಲಿ ಹಲವಾರು ವಿಭಜನೆಗಳು ಮತ್ತು ಪುನರ್‌ಏಕೀಕರಣಗಳಿಗೆ ಒಳಗಾಯಿತು. ವಿಭಜನೆಯಾಗಲಿ ಅಥವಾ ಒಗ್ಗಟ್ಟಾಗಿರಲಿ, ಅಧಿಕಾರದಲ್ಲಿರಲಿ ಅಥವಾ ಅಧಿಕಾರದಿಂದ ಹೊರಗಿರಲಿ, ಕೇಂದ್ರದಲ್ಲಾಗಲಿ ಅಥವಾ ರಾಜ್ಯಗಳಲ್ಲಾಗಲಿ, ಸಮಾಜವಾದಿಗಳು 1950, 1960 ಮತ್ತು 1970ರ ದಶಕಗಳಲ್ಲಿ ರಾಜಕೀಯ ಚರ್ಚೆಗಳನ್ನು ಶ್ರೀಮಂತಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಲೋಹಿಯಾ ಮತ್ತು ಜೆಪಿಯಂತಹ ಅವರ ನಾಯಕರು ಭಾರತದಾದ್ಯಂತ ಚಿರಪರಿಚಿತರಾಗಿದ್ದರು ಮತ್ತು ಗೌರವಕ್ಕೆ ಪಾತ್ರರಾಗಿದ್ದರು. ಪಕ್ಷದ ಗಮನಾರ್ಹ ಗುಣಗಳಲ್ಲಿ ಲಿಂಗ ಸಮಾನತೆಗೆ ಅದರ ಪ್ರಬಲ ಬದ್ಧತೆಯೂ ಒಂದಾಗಿತ್ತು. ನಿಜ ಹೇಳಬೇಕೆಂದರೆ, ಕಾಂಗ್ರೆಸ್, ಜನಸಂಘ ಮತ್ತು ಕಮ್ಯುನಿಸ್ಟ್ ಪಕ್ಷಗಳಿಗೆ ಹೋಲಿಸಿದರೆ, ಸಮಾಜವಾದಿಗಳಲ್ಲಿನ ಮಹಿಳಾ ನಾಯಕರ ಸಂಖ್ಯೆ ಎದ್ದು ಕಾಣುವಂತಿತ್ತು. ಅವರಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ, ಮೃಣಾಲ್ ಗೋರ್ ಮತ್ತು ಸ್ವತಃ ಮಧು ದಂಡವತೆ ಅವರ ಪತ್ನಿ ಪ್ರಮೀಳಾ ಪ್ರಮುಖರು. ಸಮಾಜವಾದಿಗಳು ಸಾಂಸ್ಕೃತಿಕ ಕ್ಷೇತ್ರದಲ್ಲಿ, ವಿಶೇಷವಾಗಿ ರಂಗಭೂಮಿ ಮತ್ತು ಸಂಗೀತದಲ್ಲಿ ಹಾಗೂ ನಾಗರಿಕ ಹಕ್ಕುಗಳು ಮತ್ತು ಪರಿಸರ ಚಳವಳಿಗಳಲ್ಲಿ ಬಹಳ ಸಕ್ರಿಯರಾಗಿದ್ದರು.

ಅವರ ಆರಂಭಿಕ ನಾಯಕ ಜೆಪಿಯಂತೆ, ಮಧು ದಂಡವತೆ ಕೂಡ ನೈತಿಕ ಮತ್ತು ದೈಹಿಕ ದಿಟ್ಟತನದ ವ್ಯಕ್ತಿಯಾಗಿದ್ದರು. ಲೋಹಿಯಾ ಅವರಂತೆ ದಂಡವತೆಯೂ ವಿದ್ವಾಂಸರಾಗಿದ್ದರು. ಎನ್.ಜಿ. ಗೊರೆ, ಎಸ್. ಎಂ. ಜೋಶಿ ಮತ್ತು ಸಾನೆ ಗುರೂಜಿ ಅವರಂತೆ, ದಂಡವತೆ ಮಹಾರಾಷ್ಟ್ರದ ಮೇಲಿನ ತಮ್ಮ ಪ್ರೇಮವನ್ನು ಭಾರತದ ಮೇಲಿನ ಪ್ರೇಮದೊಂದಿಗೆ ಸಲೀಸಾಗಿ ಬೆಸೆದರು. ಆದರೂ, ತಮ್ಮ ಸಹವರ್ತಿ ಸಮಾಜವಾದಿಗಳಲ್ಲಿ ದಂಡವತೆ ಒಂದು ಕಾರಣಕ್ಕಾಗಿ ಎದ್ದು ಕಾಣುತ್ತಾರೆ. ಅದೆಂದರೆ, ಅವರು ಕೋಟ್ಯಂತರ ಭಾರತೀಯರ ಜೀವನವನ್ನು ಸುಧಾರಿಸಲು ನೆರವಾಗುವ ಮೂಲಕ ನಿರಂತರ ಪ್ರಾಯೋಗಿಕ ಪರಂಪರೆಯನ್ನು ಬಿಟ್ಟುಕೊಟ್ಟರೆಂಬುದು.

ಮೊದಲ ಜನತಾ ಸರಕಾರದಲ್ಲಿ ಕೇಂದ್ರ ರೈಲ್ವೆ ಸಚಿವರಾಗಿ ಮಾಡಿದ ಕೆಲಸದ ಮೂಲಕ ಇದನ್ನು ಅವರು ಸಾಧಿಸಿದರು. ಎರಡು ವರ್ಷಗಳ ಸಂಕ್ಷಿಪ್ತ ಅಧಿಕಾರಾವಧಿಯಲ್ಲಿ ದಂಡವತೆ ಬೀರಿದ ಪ್ರಭಾವ ದೊಡ್ಡದು. ಅವರು ರಾಜ್ಯ ಮತ್ತು ರೈಲ್ವೆ ಯೂನಿಯನ್‌ಗಳ ನಡುವಿನ ನಂಬಿಕೆಯನ್ನು (1974ರ ಮುಷ್ಕರದಿಂದ ಮತ್ತು ಇಂದಿರಾ ಗಾಂಧಿಯವರ ಸರಕಾರ ಅದನ್ನು ನಿಗ್ರಹಿಸಿದ್ದರಿಂದ ನಾಶವಾಗಿತ್ತು) ಮರು ಸ್ಥಾಪಿಸಿದರು. ಗಣಕೀಕರಣ ಪ್ರಕ್ರಿಯೆ ಪ್ರಾರಂಭಿಸಿದರು ಮತ್ತು ಅತ್ಯಂತ ಗಮನಾರ್ಹವಾಗಿ, ಪ್ರಯಾಣಿಕರ ರೈಲಿನ ಎರಡನೇ ದರ್ಜೆಯ ವಿಭಾಗವನ್ನು, ಅದರ ಗಟ್ಟಿಯಾದ ಮರದ ಹಲಗೆಗಳ ಮೇಲೆ ಮೃದುವಾದ ಸೀಟುಗಳನ್ನು ಅಳವಡಿಸುವ ಮೂಲಕ ಉನ್ನತೀಕರಿಸಿದರು. ಅದಂತೂ ಈಗ ನೂರಾರು ಕೋಟಿ ಜನರ ರೈಲ್ವೆ ಪ್ರಯಾಣಗಳನ್ನು ಹೆಚ್ಚು ಆರಾಮದಾಯಕವಾಗಿಸಿದೆ.

ಈ ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕ ಆಸನಗಳನ್ನು ಹೊಂದಿದ ಮೊದಲ ರೈಲನ್ನು 1977ರ ಡಿಸೆಂಬರ್ 26ರಂದು ಆರಂಭಿಸಲಾಯಿತು. ಅದು ಮುಂಬೈ ಮತ್ತು ಕೋಲ್ಕತಾ ನಡುವೆ ಓಡಿತು. ರೈಲ್ವೆ ಮಂಡಳಿ ಅದನ್ನು ಈಸ್ಟರ್ನ್ ಎಕ್ಸ್‌ಪ್ರೆಸ್ ಎಂದು ಕರೆಯಲು ಬಯಸಿತ್ತು. ಆದರೆ ಸಚಿವರು ‘ಗೀತಾಂಜಲಿ ಎಕ್ಸ್‌ಪ್ರೆಸ್’ ಎಂಬ ಪ್ರೇರಣಾತ್ಮಕ ಹೆಸರನ್ನು ಆಯ್ಕೆ ಮಾಡಿದ್ದರು ಮತ್ತು ರೈಲಿನೊಳಗೆ ರವೀಂದ್ರನಾಥ ಟಾಗೋರ್ ಅವರ ಭಾವಚಿತ್ರಗಳನ್ನು ತೂಗುಹಾಕುವ ವ್ಯವಸ್ಥೆ ಮಾಡಿದ್ದರು.

ದಂಡವತೆ ಅವರು ದೇಶ ಕಂಡ ಅತ್ಯುತ್ತಮ ರೈಲ್ವೆ ಸಚಿವರಾಗಿದ್ದರೆಂಬುದು ಪ್ರಶ್ನಾತೀತ. ವಾಸ್ತವವಾಗಿ, ಭಾರತ ಮತ್ತು ಭಾರತೀಯರ ಒಳಿತಿಗಾಗಿ ದುಡಿದವರು ಕೆಲವೇ ಕೆಲವು ಕ್ಯಾಬಿನೆಟ್ ಮಂತ್ರಿಗಳು. 1947ರಿಂದ 1950ರ ನಡುವೆ ಗೃಹ ಸಚಿವರಾಗಿದ್ದ ವಲ್ಲಭಭಾಯಿ ಪಟೇಲ್, 1964ರಿಂದ 1967ರ ಅವಧಿಯಲ್ಲಿ ಕೃಷಿ ಸಚಿವರಾಗಿದ್ದ ಸಿ. ಸುಬ್ರಮಣ್ಯಂ ಮತ್ತು 1991ರಿಂದ 1996ರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಈ ಸಾಲಿನಲ್ಲಿ ಬರುತ್ತಾರೆ.

ಆನಂತರದ ಜನತಾ ಸರಕಾರದಲ್ಲಿ ದಂಡವತೆ ಅವರು ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದರು. 1990ರ ತಮ್ಮ ಬಜೆಟ್ ಭಾಷಣದಲ್ಲಿ ಅವರು ಪರಿಸರ ಸಮಸ್ಯೆಗಳ ಬಗ್ಗೆ ನಿರ್ದಿಷ್ಟ ಗಮನ ನೀಡಿದರು. ‘‘ನಮ್ಮ ಪರಿಸರಕ್ಕೆ ಇರುವ ಅಪಾಯವನ್ನು ಇನ್ನು ನಿರ್ಲಕ್ಷಿಸುವ ಮಾತೇ ಇಲ್ಲ’’ ಎಂದು ಸ್ಪಷ್ಟಪಡಿಸಿದ್ದರು. ‘‘ಮಣ್ಣಿನ ಸವೆತ, ಲವಣಾಂಶ, ಮರಗಳ ಸಂಪೂರ್ಣ ನಾಶ ಇತ್ಯಾದಿ ಕಾರಣಗಳಿಂದ ಸುಮಾರು 139 ಮಿಲಿಯನ್ ಹೆಕ್ಟೇರ್ ಭೂಮಿ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ನಮ್ಮ ಕಾಡುಗಳು ಬೇರೆ ಬೇರೆ ಕಾರಣಗಳಿಂದಾಗಿ ಅಪಾಯದಲ್ಲಿವೆ. ನಗರ ಪ್ರದೇಶಗಳಲ್ಲಿ, ಕೈಗಾರಿಕಾ ತ್ಯಾಜ್ಯ ಮತ್ತು ಇತರ ಮೂಲಗಳಿಂದ ವಾಯು ಮತ್ತು ಜಲ ಮಾಲಿನ್ಯ ವ್ಯಾಪಕವಾಗಿದೆ. ಆರೋಗ್ಯಕರ ಪರಿಸರವು ಜೀವನದ ಗುಣಮಟ್ಟದ ಭಾಗ ಮತ್ತು ಉತ್ಪಾದಕ ಪರಿಸರವು ಅಭಿವೃದ್ಧಿಗೆ ಆಧಾರ. ಗ್ರಾಮೀಣಾಭಿವೃದ್ಧಿ ಮತ್ತು ವಿಕೇಂದ್ರೀಕರಣಕ್ಕೆ ಒತ್ತು ನೀಡುವುದು ಅಭಿವೃದ್ಧಿಯನ್ನು ರೂಪಿಸುವಲ್ಲಿ ಪರಿಸರದ ಪರಿಗಣನೆಗಳನ್ನು ಸಂಯೋಜಿಸಲು ನೆರವಾಗಲಿದೆ’’ ಎಂದು ಹೇಳಿದ್ದರು.

ದುಃಖಕರ ಸಂಗತಿಯೆಂದರೆ, ಈ ಎಚ್ಚರಿಕೆಗಳನ್ನು ನಂತರದ ಸರಕಾರಗಳು ನಿರ್ಲಕ್ಷಿಸಿವೆ. ಅವುಗಳ ಕಡಿವಾಣವಿಲ್ಲದ ಬಂಡವಾಳಶಾಹಿ ಮತ್ತು ಮೆಗಾ ಯೋಜನೆಗಳ ಗೀಳು ನಮ್ಮ ಪರಿಸರದ ಮೇಲೆ ವಿನಾಶಕಾರಿ ಪರಿಣಾಮವನ್ನುಂಟುಮಾಡಿದೆ. ಹೆಚ್ಚಿದ ವಾಯು ಮತ್ತು ಜಲ ಮಾಲಿನ್ಯ, ಕ್ಷೀಣಿಸುತ್ತಿರುವ ಜಲಚರಗಳು, ನಾಶವಾದ ಕಾಡುಗಳು, ವಿಷಕಾರಿ ಮಣ್ಣು ಮತ್ತು ಇನ್ನೂ ಅನೇಕ ದುಷ್ಪರಿಣಾಮಗಳು ಈಗಿನ ಮತ್ತು ಭವಿಷ್ಯದ ಪೀಳಿಗೆಗೆ ಹೊರೆಯಾಗುತ್ತಿದೆ.

ಗಮನಾರ್ಹವಾದ ಸಮಕಾಲೀನ ಪ್ರಸ್ತುತತೆಯುಳ್ಳ ದಂಡವತೆಯವರ ಒಂದು ಮಾತನ್ನು ಉಲ್ಲೇಖಿಸುತ್ತೇನೆ. ಇದು ಅವರ ಆತ್ಮಚರಿತ್ರೆಗಿರುವ ಪ್ರಸ್ತಾವನೆಯಲ್ಲಿ ಬರುತ್ತದೆ ಮತ್ತು ಅವರು ತಮ್ಮ ಎಂಭತ್ತರ ಹರೆಯದಲ್ಲಿದ್ದಾಗ 2005ರ ಜುಲೈ 1ರಂದು ಹೇಳಿದ್ದಾಗಿದೆ. ಅವರು ಹೇಳುತ್ತಾರೆ: ‘‘1984ರ ಸಿಖ್ ವಿರೋಧಿ ದಂಗೆಗಳು, ಬಾಬರಿ ಮಸೀದಿ ಧ್ವಂಸ ಮತ್ತು ಇತ್ತೀಚಿನ ಕೋಮು ಹತ್ಯಾಕಾಂಡದ ಸಮಯದಲ್ಲಿ ಗುಜರಾತ್‌ನಲ್ಲಿ ನಡೆದ ಬೆಂಕಿ ಹಚ್ಚುವಿಕೆ, ಹತ್ಯೆಗಳು ಮತ್ತು ಲೂಟಿಗಳು ಜಾತ್ಯತೀತತೆಗೆ ಭಾರೀ ಹೊಡೆತವನ್ನು ನೀಡಿವೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬಹಳ ಕಾಳಜಿಯಿಂದ ಪೋಷಿಸಲ್ಪಟ್ಟ ಧಾರ್ಮಿಕ ಸಹಿಷ್ಣುತೆಯ ಮನೋಭಾವವು ಶಿಥಿಲಗೊಂಡಿದೆ. ಆದರೂ ಈ ಕುರುಹುಗಳ ಬೂದಿಯಿಂದ ಮುಂದೊಂದು ದಿನ ಸಾಮರಸ್ಯದ ಭಾರತದ ಸೌಧ ಉದ್ಭವಿಸುತ್ತದೆ. ಉನ್ಮಾದವು ಕ್ಷಣಿಕ. ಆದರೆ ಸಹಾನುಭೂತಿ ಹೆಚ್ಚು ದೃಢವಾಗಿರುತ್ತದೆ.’’

ಈಗ, ನಮ್ಮ ರಾಜಕೀಯದಲ್ಲಿ ಹಿಂದುತ್ವವು ಪ್ರಾಬಲ್ಯ ಹೊಂದಿರುವುದರಿಂದ, ಸಹಾನುಭೂತಿ ಮತ್ತು ಭ್ರಾತೃತ್ವಕ್ಕಾಗಿ ಹೋರಾಡುವವರು ದಂಡವತೆಯವರ ಹಂಬಲದ ಆಶಾವಾದವು ಸಾರ್ಥಕವಾಗಲು ಹೆಚ್ಚು ಶ್ರಮಿಸಬೇಕಿದೆ.

ಕಾಂಗ್ರೆಸ್, ಕಮ್ಯುನಿಸ್ಟರು ಮತ್ತು ಹಿಂದುತ್ವವಾದಿಗಳ ಬಗ್ಗೆ ಕೊಡಲಾದ ಗಮನಕ್ಕೆ ಹೋಲಿಸಿದರೆ, ಸಮಾಜವಾದಿಗಳನ್ನು ವಿದ್ವಾಂಸರು ನಿರ್ಲಕ್ಷಿಸಿದ್ದಾರೆ ಎಂದು ಹೇಳುವುದರೊಂದಿಗೆ ನಾನು ನನ್ನ ಅಂಕಣವನ್ನು ಪ್ರಾರಂಭಿಸಿದೆ. ಏಕೆಂದರೆ, ಸ್ವಯಂ ನಿರೂಪಿತ ಸಮಾಜವಾದಿಗಳ ಒಂದು ಗುಂಪು ಹಿಂದುತ್ವವನ್ನು ಸಮರ್ಥಿಸುವುದರೊಂದಿಗೆ ಮತ್ತು ಇನ್ನೊಂದು ಗುಂಪು ರಾಜವಂಶದ ಪಕ್ಷಗಳನ್ನು ತಂದೆಯಿಂದ ಮಗನಿಗೆ ಹಸ್ತಾಂತರವಾದ ವಂಶಸ್ಥ ಪಕ್ಷಗಳ ಸ್ಥಾಪಿಸುವಿಕೆಯೊಂದಿಗೆ ಅವರ ಇತ್ತೀಚಿನ ಚರಿತ್ರೆ ಕಡಿಮೆ ಉದಾತ್ತವಾಗಿರಬಹುದು. ಅದೇನೇ ಇದ್ದರೂ, ಸ್ವಾತಂತ್ರ್ಯದ ಮೊದಲು ಒಂದು ದಶಕದವರೆಗೆ ಮತ್ತು ಆನಂತರವೂ ಕನಿಷ್ಠ ಮೂರು ದಶಕಗಳವರೆಗೆ ಸಮಾಜವಾದಿಗಳು ಬೌದ್ಧಿಕ ನಾವೀನ್ಯತೆ ಮತ್ತು ವೈಯಕ್ತಿಕ ದಿಟ್ಟತನದಿಂದ ನಿರೂಪಿಸಲ್ಪಟ್ಟ ರಾಜಕೀಯ ಪ್ರವೃತ್ತಿಯನ್ನು ಪ್ರತಿನಿಧಿಸಿದ್ದರು.

ಭಾರತೀಯ ಸಮಾಜವಾದದ ಉದಯ ಮತ್ತು ಪ್ರಬುದ್ಧತೆ, ಬೌದ್ಧಿಕ ಮತ್ತು ಸಾರ್ವಜನಿಕ ಜೀವನಕ್ಕೆ ಅದರ ಬಹುವಿಧದ ಕೊಡುಗೆಗಳು ಮತ್ತು ಅದರ ಮೂಲ ಮತ್ತು ಅವನತಿ ಹೀಗೆ ಅದರ ಸರಿಯಾದ ಇತಿಹಾಸಕ್ಕಾಗಿ ನಾವು ಇನ್ನೂ ಕಾಯುತ್ತಿದ್ದೇವೆ. ಆದಾಗ್ಯೂ, ಕಡೇಪಕ್ಷ ಜೀವನಚರಿತ್ರೆಯ ಅಧ್ಯಯನಗಳ ವಿಷಯದಲ್ಲಿ ಈಗ ಭರವಸೆಯ ಸೂಚನೆಗಳು ಕಾಣಿಸುತ್ತಿವೆ. 2022ರಲ್ಲಿ, ರಾಹುಲ್ ರಾಮಗುಂಡಂ ಅವರು ಹಲವು ಘಟನೆಗಳ ವಿವರಗಳಿರುವ, ಜಾರ್ಜ್ ಫೆರ್ನಾಂಡಿಸ್ ಅವರ ಜೀವನ ಕುರಿತ ಉತ್ತಮ ಸಂಶೋಧನಾ ಕೃತಿಯನ್ನು ಪ್ರಕಟಿಸಿದರು. ಈ ವರ್ಷದ ಕೊನೆಯಲ್ಲಿ ಪ್ರಕಟವಾಗಲಿರುವ, ನಿಕೋ ಸ್ಲೇಟ್ ಬರೆದಿರುವ ಕಮಲಾದೇವಿ ಚಟ್ಟೋಪಾಧ್ಯಾಯರ ಜೀವನಚರಿತ್ರೆಯನ್ನು ಹಸ್ತಪ್ರತಿಯಲ್ಲಿ ಓದುತ್ತಿದ್ದೇನೆ. ಅಕ್ಷಯ ಮುಕುಲ್ ಅವರು ಖಂಡಿತವಾಗಿಯೂ ಜಯಪ್ರಕಾಶ್ ನಾರಾಯಣ್ ಅವರ ಗಮನಾರ್ಹ ಜೀವನಚರಿತ್ರೆಯನ್ನು ಕೊಡಲಿದ್ದಾರೆ. ಈ ಹಸಿರು ಚಿಗುರುಗಳು ಕೆಲ ಪ್ರತಿಭಾವಂತ ಮತ್ತು ಶ್ರಮಶೀಲ ವಿದ್ವಾಂಸರು ದಂಡವತೆ ಜೀವನಚರಿತ್ರೆಯನ್ನು ಬರೆಯಲು, ಬಹುಶಃ ಮಧು ಮತ್ತು ಪ್ರಮೀಳಾ ಇಬ್ಬರದೂ ಜೀವನಚರಿತ್ರೆಯ ಬರವಣಿಗೆಗೆ ಕೂಡ ಪ್ರೇರೇಪಿಸಬಹುದೆಂದು ಭಾವಿಸುತ್ತೇನೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಮಚಂದ್ರ ಗುಹಾ

contributor

Similar News