ತಿದ್ದುಪಾಡು
ಭಾವನೆಗಳ ತಾಕಲಾಟ, ಬೇಡದ ವಿಚಾರಗಳ ಮೇಲಾಟ, ಸಂಬಂಧಗಳಲ್ಲಿ ಹೊಯ್ದಾಟ, ಕ್ರಿಯೆ ಮತ್ತು ಪ್ರತಿಕ್ರಿಯೆಗಳಲ್ಲಿ ಆಗುವಂತಹ ಒದ್ದಾಟ; ಇಂತಹವೆಲ್ಲಾ ಸಾಮಾನ್ಯವಾಗಿ ಇದ್ದದ್ದೇ. ಆದರೆ, ಈ ಏರಿಳಿತಗಳ ತೊಯ್ದಾಟದಲ್ಲಿ ಯಾವುದೋ ಒಂದು ಹದದ ಸ್ಥಿತಿಯನ್ನು ಕಂಡುಕೊಳ್ಳುವುದೇ ಮನಸ್ಸಿಗೆ ಒಂದು ಸವಾಲಿನ ಸಂಗತಿ. ಮನಸ್ಸಿಗೆ ತಾನೇ ಹದಕ್ಕೆ ಬರಬೇಕೆನ್ನುವ ಆಶಯವೇನೂ ಇರುವುದಿಲ್ಲ. ಅದು ಸದಾ ಸುಲಭವಾದ ಮತ್ತು ತಪ್ಪಿಸಿಕೊಳ್ಳಲು ಯೋಗ್ಯವಾದ ದಾರಿಯನ್ನೇ ಹುಡುಕುವುದು. ತನಗೆ ಕಷ್ಟ ಎನಿಸುವ ಮೊದಲೇ ರೂಢಿಗೆ ಒಳಗಾಗುವ ಮನಸ್ಸು ತಿದ್ದುಪಡಿಗೆ ಒಪ್ಪುವುದು ಸುಲಭವೇನಲ್ಲ. ಆದರೆ ಪ್ರಜ್ಞಾಪೂರ್ವಕವಾದ ಸತತವಾದ ಪ್ರಯತ್ನದಿಂದ ತಿದ್ದುಪಾಡಿಗೆ ಒಳಗಾಗಿಸಬೇಕು. ಒಂದಷ್ಟು ಕಾಲ ಪಳಗಿದ ಮೇಲೆ ಹಳೆಯ ರೂಢಿಯ ಜಾಗದಲ್ಲಿ ಹೊಸ ರೂಢಿಯು ಸ್ಥಾಪಿತವಾಗುವುದು.
ಮನಸ್ಸಿನ ಹಳೆಯ ಮತ್ತು ಅನಗತ್ಯದ ರೂಢಿಯ ಬಲವನ್ನು ಉದ್ದೇಶಪೂರ್ವಕವಾಗಿ ಪ್ರಜ್ಞಾವಂತಿಕೆಯಿಂದ ಮತ್ತೊಂದು ಅಗತ್ಯದ ರೂಢಿಯ ಬಲಕ್ಕೆ ಹೊರಳಿಸುವ ತರಬೇತಿಗೆ ತಿದ್ದುಪಾಡು ಎನ್ನುವುದು.
ಎರಡೂ ಬಗೆಯ ರೂಢಿಗಳಲ್ಲಿ ಕೆಲಸ ಮಾಡುವುದು ಒಂದೇ ಮನೋಬಲವೇ. ಆದರೆ ಯಾವ ನಿರ್ದೇಶಿತ ದಿಕ್ಕಿನಲ್ಲಿ ಕೆಲಸ ಮಾಡಬೇಕು ಎನ್ನುವುದರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ತೆಗೆದುಕೊಳ್ಳುವುದು, ಯೋಜನೆ ಮಾಡುವುದು ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ಕೆಲಸವನ್ನು ಮಾಡುವುದೆಲ್ಲಾ ಜಾಗೃತ ಮನಸ್ಸಿನ ಕೆಲಸವೇ ಆಗಿರುತ್ತದೆ. ಜಾಗೃತ ಮನಸ್ಸಿನ ಸತತ ಪರಿಶ್ರಮದಿಂದ ಸುಪ್ತಮನಸ್ಸು ತಿದ್ದುಪಡಿಗೆ ಒಳಗಾಗುತ್ತದೆ.
ಜಾಗೃತ ಮನಸ್ಸಿಂದ ಮಾಡುವ ಕೆಲಸವೇ ಪ್ರಜ್ಞಾಪೂರ್ವಕವಾಗಿ ಮಾಡುವ ಕೆಲಸ. ಆದರೆ ಜಾಗೃತ ಮನಸ್ಸನ್ನು ತನ್ನ ಸೆಳೆತಕ್ಕೆ ಎಳೆದುಕೊಳ್ಳುವ ಎಲ್ಲಾ ಸಾಮರ್ಥ್ಯವನ್ನೂ ಸುಪ್ತ ಮತ್ತು ಅದಕ್ಕಿಂತ ಪ್ರಭಾವಶಾಲಿಯಾಗಿರುವ ಅಪ್ರಜ್ಞಾ ಮನಸ್ಸು ಹೊಂದಿದೆ.
ಮರಳಿ ಯತ್ನವ ಮಾಡು, ಮರಳಿ ಯತ್ನವ ಮಾಡು ಅನ್ನುತ್ತಾರಲ್ಲಾ, ಅದು ಹೇಳುವುದು ಜಾಗೃತ ಮನಸ್ಸಿಗೆ. ಹಾಗೆ ಮರಳಿ ಮರಳಿ ಸತತ ಪ್ರಯತ್ನವ ಮಾಡುತ್ತಿದ್ದರೆ ಜಾಗೃತ ಮನಸ್ಸು ತಾನು ಮನಗಂಡಿರುವ ಉದ್ದೇಶ, ಅಗತ್ಯ ಮತ್ತು ಆಶಯವನ್ನು ಸುಪ್ತ ಮನಸ್ಸಿನಲ್ಲಿ ಬಿತ್ತುವುದು. ನಂತರ ತಾನೇ ಅದರ ಉದ್ದೇಶ ಸಫಲವಾಗಿರುವುದನ್ನು ಮನಗಂಡು ನಂತರ ಅದನ್ನು ವ್ಯವಸ್ಥಿತವಾಗಿ ಮತ್ತು ಶಿಸ್ತಿನಿಂದ ನಡೆಸಿಕೊಂಡು ಹೋಗುವುದಕ್ಕೆ ಬದ್ಧವಾಗಿರುವುದು. ಆ ಮೂಲಕ ಹಳೆಯ ರೂಢಿಗತ ಮನಸ್ಸು ಹೊಸ ರೂಢಿಗೆ ತಿದ್ದುಪಡಿಯಾಗಿರುವುದು.
ಸರಿ, ಇದನ್ನು ಹೇಗೆ ಪ್ರಾರಂಭಿಸುವುದು? ಇದೊಂದು ರೀತಿಯಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂದು ಇಲಿಗಳು ಸಭೆ ಸೇರಿದಂತೆ. ಮನಸ್ಸನ್ನು ಮಾನಸಿಕವಾಗಿ ನಿಭಾಯಿಸುವುದಕ್ಕಿಂತ ದೈಹಿಕ, ಯಾಂತ್ರಿಕವೇ ಮೊದಲಾದ ಹೊರಗಿನ ತಂತ್ರಗಳಿಂದ ನಿಭಾಯಿಸಲು ಯತ್ನಿಸುವುದು ಒಂದು ಹಂತಕ್ಕೆ ಯಶಸ್ಸು ಕಾಣಲು ಸಾಧ್ಯ.
ಉದಾಹರಣೆಗೆ ನಿಗದಿತವಾಗಿ, ನಿಯಮಿತವಾಗಿ ಬರೆಯುವುದು, ಓದುವುದು, ವ್ಯಾಯಾಮ ಮಾಡುವುದು, ಕೈ ಕೆಲಸ ಮಾಡುವುದು, ಕಲೆಯನ್ನು ರೂಢಿಸಿಕೊಳ್ಳುವುದು, ಹೊಸತನ್ನು ಕಲಿಯುವುದು, ಪ್ರವಾಸ ಹೋಗುವುದು, ಈಜುವುದು, ಫೋಟೊಗ್ರಫಿ; ಹೀಗೆ ಹಲವಾರು ತಂತ್ರಗಳು.
ಹೌದು, ಇವೆಲ್ಲವೂ ತಂತ್ರಗಳೇ. ಆದರೆ ಬರೆಯುವುದಾಗಲಿ, ಓದುವುದಾಗಲಿ, ಫೋಟೊಗ್ರಫಿ ಅಥವಾ ವೀಡಿಯೊಗ್ರಫಿ ಮಾಡುವುದಾಗಲಿ ಯಾವ ವಿಷಯದ ಕುರಿತಾಗಿ ಅನ್ನುವುದರ ಬಗ್ಗೆ ವಹಿಸುವ ಎಚ್ಚರ ನಿಮ್ಮ ಮನಸ್ಸಿನ ಆರೋಗ್ಯವನ್ನು ಹೆಚ್ಚಿಸುತ್ತದೆಯೋ ಅಥವಾ ಸಮಸ್ಯೆಯನ್ನು ಹೆಚ್ಚಿಸುತ್ತದೆಯೋ ಎಂಬುದನ್ನು ನಿರ್ಧರಿಸುತ್ತದೆ.
ಎಚ್ಚರದಿಂದ ಮಾಡುವ ಆಯ್ಕೆ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ಬಗೆ ತಿದ್ದುಪಾಡಿನ ಫಲವನ್ನು ನಿರ್ಧರಿಸುತ್ತದೆ.
ತಿದ್ದುಪಾಡಿನ ವಿಷಯದಲ್ಲಿ ನೇರವಾಗಿ ಮತ್ತು ಪರಿಣಾಮಕಾರಿ ಎಂದರೆ ಮೇಲ್ಬರಹ. ಅದರಲ್ಲಿ ಹಲವು ಬಗೆಗಳಿವೆ. ಬೆಳಗಿನ ಬರಹದಿಂದ ಪ್ರಾರಂಭಿಸೋಣ. ಯಾವ ಮುಚ್ಚುಮರೆ ಇಲ್ಲದೇ, ನೇರವಾಗಿ, ಪ್ರಾಮಾಣಿಕವಾಗಿ, ಒಳಿತು ಕೆಡುಕುಗಳ ದೃಷ್ಟಿಯಿಂದ ಅವುಗಳನ್ನು ನೋಡದೇ ಮನಸ್ಸಿನಲ್ಲಿರುವುದನ್ನೆಲ್ಲಾ ಸುಮಾರು ಮೂರು ಪುಟಗಳು ಬರೆಯುವುದು. ಅದನ್ನು ಯಾರಿಗೂ ತೋರಿಸುವ ಅಗತ್ಯ ಇಲ್ಲದೇ ಇರುವುದರಿಂದ ಅದರಲ್ಲಿ ಯಾವ ಮುಲಾಜೂ ಇರುವುದು ಬೇಡ. ಎಷ್ಟು ಕೆಟ್ಟದಾಗಿರುತ್ತದೆಯೋ, ಪೋಲಿಯಾಗಿರುತ್ತದೆಯೋ, ಕ್ರೂರವಾಗಿರುತ್ತದೆಯೋ; ಹೇಗಾದರೂ ಇರಲಿ, ಬರೆಯುವುದು. ಒಂದಷ್ಟು ದಿನಗಳ ಕಾಲ ಇದನ್ನು ಮಾಡುವುದು. ಮನಸ್ಸಿಗೆ ಏನೇನು ಬರುವುದೋ ಅದೆಲ್ಲವನ್ನೂ ಕಕ್ಕುತ್ತಾ ಹೋಗುವುದು. ಇದು ವಾಂತಿ ಪ್ರಕ್ರಿಯೆಗೇ ಹೋಲಿಸಿಕೊಳ್ಳಿ. ನಾಯಿಗಳು ಹೊಟ್ಟೆ ಕೆಟ್ಟಾಗ ಹುಲ್ಲು ಗರಿಕೆ ತಿಂದು ಕಕ್ಕುತ್ತವೆ. ತಮ್ಮ ಹೊಟ್ಟೆಯಲ್ಲಿ ಇರುವುದು ಹೊರಗೆ ಬಂದರೆ ಅವುಗಳಿಗೆ ನಿರಾಳ. ಹಾಗೆಯೇ ನಮ್ಮೊಳಗೆ ಅವಿತುಕೊಂಡು ಏನೇನೆಲ್ಲಾ ನಮ್ಮಿಂದ ಮಾಡಿಸುತ್ತಿರುತ್ತವೆಯೋ, ಆ ವಿಚಾರಗಳನ್ನು, ಭಾವನೆಗಳನ್ನು ನಾವು ಕಾಗದದ ಮೇಲೆ ಕಕ್ಕಿ ನೋಡಬೇಕು. ಇವೆಲ್ಲಾ ಇವೆಯಲ್ಲಾ ಎಂದು ನಮಗೆ ತಿಳಿಯಬೇಕು. ಮೇಲ್ಬರಹದಲ್ಲಿ ಇದು ಒಂದು ಮುಖ್ಯವಾದ ಅಂಶ.
ಹಾಗೆಯೇ ಮೇಲ್ಬರಹದಲ್ಲಿ ಇನ್ನೊಂದು ಮುಖ್ಯವಾದ ಬರವಣಿಗೆ ಎಂದರೆ ವಂದನಾರ್ಪಣೆಯ ಪುಟಗಳು. ಅಂದರೆ ಕೃತಜ್ಞತೆಗಳನ್ನು ಅರ್ಪಿಸುವ ಬರವಣಿಗೆ. ಕೃತಜ್ಞತಾಪೂರ್ವಕವಾಗಿ ವಿಷಯಗಳನ್ನು, ವ್ಯಕ್ತಿಗಳನ್ನು, ಪ್ರಸಂಗಗಳನ್ನು, ಸನ್ನಿವೇಶಗಳನ್ನು ಮತ್ತು ಮಾಹಿತಿಗಳು ಹಾಗೂ ಅವುಗಳ ಮೂಲಗಳನ್ನು ನೆನೆಯುವುದು ಮನಸ್ಸಿನ ತಿದ್ದುಪಡಿಗೆ ಬಹಳಷ್ಟು ಸಹಕಾರಿಯಾಗಿರುತ್ತದೆ. ಇದು ಪ್ರತಿದಿನವೂ ನಡೆಯಬೇಕು. ಯಾರ್ಯಾರು ತನಗೆ ಸಹಕರಿಸಿದರು ಮತ್ತು ಉಪಕರಿಸಿದರು ಎಂಬುದನ್ನು ನೆನೆಯುವುದರಿಂದ ಮನಸ್ಸು ಸಂಬಂಧಗಳ ವಿಷಯದಲ್ಲಿ ಹದಗೊಳ್ಳುತ್ತದೆ ಮತ್ತು ಭಾವನೆಗಳ ವಿಷಯದಲ್ಲಿ ಮುದಗೊಳ್ಳುತ್ತದೆ. ತಾವೂ ಅಂತಹ ಉಪಕಾರ ಮತ್ತು ಸಹಕಾರ ಮಾಡುವ ಪ್ರೇರಣೆಯನ್ನು ಹೊಂದಲು ಸಾಧ್ಯವಾಗುತ್ತದೆ.
ಮೂರನೆಯದು ಆಂಶಿಕ ಬರಹ ಅಥವಾ ಬುಲೆಟ್ ಜರ್ನಲಿಂಗ್ ಎಂದರೆ ಮಾಡತಕ್ಕಂತಹ ಕೆಲಸಗಳನ್ನು ದಾಖಲು ಮಾಡುತ್ತಾ ಹೋಗುವುದು. ಇದರೊಟ್ಟಿಗೆ ನಮ್ಮ ಭಾವುಕ ನಿಲುವು, ಹವ್ಯಾಸ, ಅಭ್ಯಾಸ ಮತ್ತು ಮನಸ್ಥಿತಿಗಳನ್ನು ನಾವೇ ನೋಡಿಕೊಳ್ಳಲು ಸಾಧ್ಯವಾಗುತ್ತದೆ.
ನೆನಪಿರಲಿ, ಇದ್ಯಾವುದೂ ಸಾರ್ವಜನಿಕ ಓದಿಗೆ ಇರಬೇಕಾಗಿರುವಂತೆ ಸಭ್ಯ, ಸೌಜನ್ಯ ಮತ್ತು ಶಿಷ್ಟವಾಗಿ ಇರಬೇಕಿಲ್ಲ. ಸೃಜನಾತ್ಮಕವಾಗಿ ಬರೆಯಬೇಕಿಲ್ಲ. ಜಗತ್ತು ಹೊಲಸು, ಗಬ್ಬು, ಅಸಹ್ಯ, ಚೆಂದ, ಅದ್ಭುತ ಏನೇ ಅನ್ನುವ ವಿಷಯಗಳಾಗಿದ್ದರೂ ನಿಮ್ಮ ಮನಸ್ಸಿನಲ್ಲಿ ಇರುವ ಭಾರವೇ ಅವಾಗಿರುತ್ತವೆ. ಸುಂದರ ಪದಗಳ ಸಂಯೋಜನೆಗಳೇನೂ ನಮ್ಮ ಸಮಸ್ಯೆಯನ್ನು ನಿವಾರಿಸುವ ದಿಕ್ಕಿನಲ್ಲಿ ಕೆಲಸ ಮಾಡುವುದಿಲ್ಲ. ಮೇಲ್ಬರಹ ಒಂದು ಅತ್ಯಂತ ಪ್ರಾಮಾಣಿಕ ಮತ್ತು ನೇರ ದಾಖಲಾತಿ, ನಮ್ಮ ಮುಖಕ್ಕೆ ಕನ್ನಡಿ ಇದ್ದಂತೆ ಇದು ನಮ್ಮ ಮನಸ್ಸಿಗೆ.
ಕಾಲಕ್ರಮೇಣ ಈ ಮೇಲ್ಬರಹದ ಅಭ್ಯಾಸ ನಿಮ್ಮಲ್ಲಿ ಒಂದು ಪ್ರಭಾವಶಾಲಿ ಮತ್ತು ಬಲಶಾಲಿಯಾಗಿರುವಂತಹ ನೋಟ ಮತ್ತು ತಾಳಿಕೆಯ ಶಕ್ತಿಯನ್ನು ನೀಡುವುದನ್ನು ನೀವೇ ಗಮನಿಸುವಿರಿ.