ಉಪಶಮನ ಮತ್ತು ಗುಣಮುಖ
ಸಾಮಾನ್ಯವಾಗಿ ಭಾವನಾತ್ಮಕವಾದ ಒತ್ತಡ ಮತ್ತು ಮಾನಸಿಕ ಹಿಂಸೆ ಇದೆ ಎಂದಾಗ ಬಹಳಷ್ಟು ಜನ ಥಟ್ ಅಂತ ಏನೋ ಒಂದು ಸಲಹೆ ನೀಡುವರು. ಅದು ಸಾರ್ವತ್ರಿಕ ಸಲಹೆಯಾಗಿರುತ್ತದೆ. ಧ್ಯಾನ ಮಾಡು, ಪ್ರಾರ್ಥನೆ ಮಾಡು, ಪ್ರವಾಸ ಹೋಗು, ಸಂಗೀತ ಕೇಳು; ಇತ್ಯಾದಿ. ಹೌದು, ಇವೆಲ್ಲವೂ ಒಂದು ಹಂತಕ್ಕೆ ಉಪಶಮನಕಾರಿಯೇ. ಉಪಶಮನವೇ ಹೊರತು, ಗುಣಮುಖವಾಗುವುದಲ್ಲ.
ಉಪಶಮನವೆಂದರೆ ಆಗಿನ ತತ್ಕಾಲಕ್ಕೆ ನೋವನ್ನು ಮರೆಸಲು ಸಾಧ್ಯವಾಗುವುದು. ಗುಣಮುಖವಾಗುವುದು ಎಂದರೆ ಆ ರೋಗದಿಂದಲೇ ಮುಕ್ತರಾಗಿ ನಿರೋಗಿಯಾಗುವುದು.
ಮಾನಸಿಕ ಸಮಸ್ಯೆಗಳಲ್ಲಿಯೂ ಕೂಡಾ ಬಹಳಷ್ಟು ಜನ ಉಪಶಮನಗಳನ್ನು ನೀಡುತ್ತಿರುತ್ತಾರೆ. ಅದೊಂದು ರೀತಿಯಲ್ಲಿ ಪೈನ್ ಕಿಲ್ಲರ್ ಆಗಿರುತ್ತದೆಯೇ ಹೊರತು ಅದು ಪರಿಹಾರವಲ್ಲ. ಮೇಲ್ಮಟ್ಟದ ಸಲಹೆಗಳು, ಸಾಮಾನ್ಯ ನಡಾವಳಿಯ ಬೋಧನೆಗಳೆಲ್ಲಾ ಆಪ್ತ ಸಮಾಲೋಚನೆ ಎನಿಸುವುದಿಲ್ಲ. ಆಪ್ತ ಎಂಬ ಪದವೇ ಹೇಳುವಂತೆ ಒಬ್ಬರಿಗೊಬ್ಬರು ಪರಸ್ಪರ ವಿಷಯಗಳನ್ನು ಯಾವ ಮುಚ್ಚುಮರೆಯೂ ಇಲ್ಲದೇ ಹಂಚಿಕೊಂಡು ಆಪ್ತವಾಗಿ ತೆರೆದುಕೊಳ್ಳಲು ಪ್ರಯತ್ನಿಸಿದಾಗ ಒಂದು ಹಂತಕ್ಕೆ ಸಮಸ್ಯೆಯ ಕಾರಣ, ಬೆಳವಣಿಗೆ ಮತ್ತು ಪರಿಣಾಮವನ್ನು ಗುರುತಿಸಲು ಸಾಧ್ಯವಾಗಬಹುದು. ನಂತರ ಅದರ ಪರಿಹಾರಕ್ಕೆ ಬೇಕಾದಂತಹ ರೂಪುರೇಶೆಗಳನ್ನು ಸಮಾಲೋಚಕರು ಮತ್ತು ವ್ಯಕ್ತಿ ಇಬ್ಬರೂ ವಿನ್ಯಾಸಗೊಳಿಸಬಹುದು. ವ್ಯಕ್ತಿಗಳ ಭಾವನಾತ್ಮಕ ತುಮುಲಗಳು ಮತ್ತು ಮಾನಸಿಕ ಒತ್ತಡಗಳು ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿರುತ್ತವೆ. ಅವರವರ ವಂಶವಾಹಿಗುಣಗಳು, ಕುಟುಂಬ ಮತ್ತು ಪೋಷಕರ ಪ್ರಭಾವಗಳು, ಮನೆಯ ಆರ್ಥಿಕ ಸ್ಥಿತಿಗತಿಗಳು, ಕೌಟುಂಬಿಕ, ಪ್ರಾದೇಶಿಕ ಮತ್ತು ಸಾಮಾಜಿಕ ಪರಿಸರಗಳು, ಜೊತೆಗೆ ಧಾರ್ಮಿಕತೆ ಮತ್ತು ಸಾಂಸ್ಕೃತಿಕ ವಿಷಯಗಳೆಲ್ಲವೂ ಪ್ರಭಾವ ಬೀರಿರುತ್ತವೆ. ಇವುಗಳೆಲ್ಲವೂ ಮಾನಸಿಕ ಸಮಸ್ಯೆಗೆ ಕಾರಣವಾಗುವಂತಹ ಅಂಶಗಳನ್ನು ಒಳಗೊಂಡಿರುತ್ತದೆ.
ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಇದೆ. ಆದರೆ ಅದು ಒಂದು ಯೋಜನೆಯಂತೆ. ಪ್ರಾಯೋಗಿಕವಾಗಿ ಹಂತ ಹಂತವಾಗಿ ಮಾಡುತ್ತಾ ಹೋಗಬೇಕು. ಸಮಸ್ಯೆ ಒಬ್ಬ ವ್ಯಕ್ತಿಯದೇ ಆಗಿದ್ದರೂ ಅದು ಆತ ಅಥವಾ ಆಕೆಗೆ ಸಂಬಂಧಿಸಿರುವವರೆಲ್ಲಾ ಸಂಕಲಿತವಾದಂತಹ ಜವಾಬ್ದಾರಿಯನ್ನು ತೆಗೆದುಕೊಂಡು ಕಾರ್ಯರೂಪಕ್ಕೆ ತರುವಂತಹ ಅಗತ್ಯ ಮತ್ತು ಅನಿವಾರ್ಯತೆ ಇರುತ್ತದೆ.
ಮಾನಸಿಕ ಆರೋಗ್ಯಕ್ಕೆ ಎಲ್ಲರೂ ಒಬ್ಬರಿಗೊಬ್ಬರು ಸಹಕರಿಸಲೇ ಬೇಕು. ತಮಗೆ ಸಮಸ್ಯೆಯಾಗಿದೆ ಅಥವಾ ಮನಸ್ಥಿತಿ ಸರಿ ಇಲ್ಲ ಎಂದು ಇನ್ನೊಬ್ಬರಿಗೆ ಸಮಸ್ಯೆಯನ್ನು ತಂದೊಡ್ಡುವುದು ಅಥವಾ ತಾವೇ ಸಮಸ್ಯೆಯಾಗುವುದು ಅಥವಾ ತಮ್ಮ ಜೊತೆಗಾರರೆಲ್ಲರ ಮನಸ್ಥಿತಿಯ ಬಗ್ಗೆ ಕಿಂಚಿತ್ತೂ ಆಲೋಚಿಸದೆ ತಮ್ಮದ್ದನ್ನೇ ಮುನ್ನೆಲೆಗೆ ತಂದುಕೊಂಡು ವ್ಯಕ್ತಿಗಳ, ಕುಟುಂಬಗಳ ಮತ್ತು ಸಮಾಜದ ಮನೋಹಿತಾವರಣವನ್ನು (ಸೈಕಾಲಜಿಕಲ್ ಆ್ಯಟ್ಮಾಸ್ಪಿಯರ್) ಕದಡದಂತೆ, ರಾಡಿಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಹೊರಬೇಕು.
ಮನೋಭಾವಿಕ ಜಾಗೃತಿ (ಸೈಕಾಲಜಿಕಲ್ ಅವೇರ್ನೆಸ್) ಮತ್ತು ಮಕ್ಕಳ ಪಾಲನೆಯ ಕಲೆ ಹಾಗೂ ವಿಜ್ಞಾನವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಸದ್ಯದ ಮನೋಹಿತಾವರಣವನ್ನು ಕಾಪಾಡುವ ಮತ್ತು ಈಗಿನ ಹಾಗೂ ಮುಂದಿನ ಪೀಳಿಗೆಗಳು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ದಿಕ್ಕಿನಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಬಹುದು, ಮಾಡಲೇಬೇಕಾಗಿರುವುದು.
ಇದರಲ್ಲಿ ವ್ಯಕ್ತಿಯೊಬ್ಬರ ಹೊಣೆಗಾರಿಕೆಯೆಂದರೆ ವ್ಯಕ್ತಿಗತವಾಗಿ ತಮ್ಮ ಮಾನಸಿಕ ಆರೋಗ್ಯದ ಹೊಣೆಗಾರಿಕೆಯನ್ನು ತಾವೇ ಹೊರುವುದು ಮತ್ತು ಮನೋಹಿತಾವರಣವನ್ನು ತಮ್ಮಿಂದ ಹಾಳಾಗದಂತೆ ನೋಡಿಕೊಳ್ಳುವುದು. ಈ ಮೂಲಕ ವ್ಯಕ್ತಿಗಳ ನಡುವಿನ ಸಂಬಂಧಗಳನ್ನು, ಕುಟುಂಬದ ನೆಲೆಗಟ್ಟನ್ನು ಮತ್ತು ಸಮಾಜದ ಸೌಹಾರ್ದವನ್ನು ಕಾಪಾಡಲು ಮುಂದಾಗಿದ್ದಾರೆ ಎನ್ನಬಹುದು.
ಅದರಲ್ಲೂ ವಿಶೇಷವಾಗಿ ಮಕ್ಕಳ ಪಾಲಕರು ಮತ್ತು ಶಿಕ್ಷಕರು ತಮ್ಮ ಮಾನಸಿಕ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಮತ್ತು ತಾವು ಮಕ್ಕಳ ಮಾನಸಿಕ ಆರೋಗ್ಯವನ್ನು ಕಾಪಾಡುವ ಬಗ್ಗೆ ಅತೀವ ಎಚ್ಚರಿಕೆಯನ್ನು ಹೊಂದಿರಬೇಕು. ಮಕ್ಕಳ ಪಾಲನೆ ಮತ್ತು ಬೋಧನೆಯಲ್ಲಿ ಮಕ್ಕಳ ಭಾವನೆಗಳ ಬಗ್ಗೆ ಅಂತಃಪ್ರಜ್ಞೆ ಅಥವಾ ನೇರರಿವು ಹೊಂದಿರುವುದನ್ನೇ ಕಲೆ ಎನ್ನುವುದಾದರೆ, ಪ್ರಾಯೋಗಿಕವಾಗಿ ಯಾವ ರೀತಿಯ ಅರಿವು, ವರ್ತನೆ ಮತ್ತು ತಂತ್ರಗಳನ್ನು ಬಳಸುವುದರ ಮೂಲಕ ಮಾನಸಿಕ ಆರೋಗ್ಯವನ್ನು ಹಾಗೂ ಮನೋಹಿತಾವರಣವನ್ನು ಕಾಪಾಡುವುದನ್ನು ವಿಜ್ಞಾನ ಎನ್ನಬಹುದು. ಹೀಗೆ ಮಕ್ಕಳ ಪಾಲನೆ ಮತ್ತು ಬೋಧನೆಗಳಲ್ಲಿ ಕಲೆ ಮತ್ತು ವಿಜ್ಞಾನದ ಬಗ್ಗೆ ಮೂಲ ಪಾಠಗಳನ್ನು ಹಿರಿಯರಾದವರು ಹೊಂದಿರಲೇಬೇಕು. ಮಕ್ಕಳ ನಡೆ ನುಡಿ ಮತ್ತು ಇರುವಿಕೆ ನಮ್ಮ ಮಾನಸಿಕ ವಿಷಯಗಳಿಗೆ ಕನ್ನಡಿ ಹಿಡಿಯುವುದರಲ್ಲಿ ಯಾವ ಸಂದೇಹವೂ ಇಲ್ಲ.
ಮನೋಭಾವಿಕ ಜಾಗೃತಿ (ಸೈಕಾಲಜಿಕಲ್ ಅವೇರ್ನೆಸ್) ಬೇಕಾಗಿರುವುದೇ ವ್ಯಕ್ತಿಯಾಗಿ ತನ್ನರಿವು ಅಥವಾ ಆತ್ಮಾವಲೋಕನವನ್ನು ಮಾಡಿಕೊಳ್ಳಲು, ಕುಟುಂಬದ ಸದಸ್ಯನಾಗಿ ಮತ್ತು ಸಮಾಜದ ಪ್ರಜೆಯಾಗಿ ಮನೋಹಿತಾವರಣವನ್ನು ಕಾಪಾಡುವುದರಲ್ಲಿ ತನ್ನ ಹೊಣೆಗಾರಿಕೆ ಏನು ಮತ್ತು ಕಾಣ್ಕೆಗಳನ್ನು ಯಾವ ಪ್ರಮಾಣದಲ್ಲಿ ಪ್ರಾಮಾಣಿಕವಾಗಿ ನೀಡಬಹುದು ಎಂದು ನೋಡಿಕೊಳ್ಳುವುದು.
ನನ್ನಲ್ಲಿ ಎಂತಹ ಭಾವನೆಗಳು ಮತ್ತು ವಿಚಾರಗಳು ಉಂಟಾಗುತ್ತಿವೆ? ಅವುಗಳಿಂದ ನನ್ನ ಮೇಲಾಗಲಿ ಮತ್ತು ನನ್ನ ಜೊತೆಯಲ್ಲಿ ಇರುವವರ ಮೇಲಾಗಲಿ ಎಂತಹ ಪರಿಣಾಮ ಉಂಟುಮಾಡುತ್ತದೆ ಎಂದು ಗಮನಿಸಿಕೊಳ್ಳುವುದು. ಇದಕ್ಕೆ ಬೇಕಾಗಿರುವುದು ಅವಧಾನ ಮತ್ತು ವ್ಯವಧಾನ ಅಂದರೆ ಎಚ್ಚರಿಕೆ ಮತ್ತು ಸಹನೆ. ಇದರಿಂದಾಗಿ, ಅಧ್ಯಯನಗಳು ದೃಢೀಕರಿಸುವಂತೆ, ನಮ್ಮ ಭಾವನೆಗಳ ಏರಿಳಿತವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಸಾಧ್ಯವಾಗುತ್ತದೆ ಮತ್ತು ಅದರಿಂದ ಮಾನಸಿಕವಾಗಿ ನಿಶ್ಶಕ್ತರಾಗುವುದನ್ನು ತಡೆಯಬಹುದು.