×
Ad

ಮೇಲ್ಬರಹ

Update: 2025-05-25 09:41 IST

ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳೂ ಒಂದೇ ವೇಗವನ್ನಾಗಲಿ, ಸಾಮರ್ಥ್ಯವನ್ನಾಗಲಿ ಹೊಂದಿರುವುದಿಲ್ಲ. ಹಾಗೆಯೇ ಅವು ಒಂದೇ ಬಗೆಯ ವಾಹನಗಳೂ ಆಗಿರುವುದಿಲ್ಲ. ವಿವಿಧ ವಾಹನಗಳು, ವಿವಿಧ ಸ್ಥಿತಿಗತಿಗಳು, ವಿವಿಧ ಸಾಮರ್ಥ್ಯಗಳು, ವಾಹನ ಚಲಾಯಿಸುವವರು ವಿವಿಧ ವ್ಯಕ್ತಿಗಳು, ಅವರದ್ದೂ ವಿವಿಧ ಮನೋಭಾವಗಳು, ಸಾಮರ್ಥ್ಯಗಳು, ವಿವಿಧ ಗುರಿಗಳು; ಹೀಗೇ ಎಷ್ಟೊಂದು ಬಗೆಯ ವಿಷಯಗಳಿಂದ ಕೂಡಿರುವ ವಾಹನಗಳು ರಸ್ತೆಯಲ್ಲಿ ಚಲಿಸುತ್ತಿದ್ದು ಅವುಗಳ ಸಂಚಾರದಲ್ಲಿ ಏರುಪೇರಾಗುತ್ತಿರುತ್ತವೆ. ಎಲ್ಲವೂ ಒಂದು ರಸ್ತೆಯಲ್ಲಿ ಹೋಗುವಾಗ ಸಂಚಾರ ಮಾರ್ಗ ಇಕ್ಕಟ್ಟಾಗುವುದು. ಆದರೆ ಎಲ್ಲವೂ ಚಲಿಸಲೇ ಬೇಕು. ಅವರವರ ವೇಗಕ್ಕೆ ಹೋಗುವಾಗ ಘರ್ಷಣೆಯಾಗಬಹುದು, ಅಪಘಾತವಾಗಬಹುದು, ಸಂಚಾರದಲ್ಲಿ ಇನ್ನೂ ತೊಡಕುಂಟಾಗಬಹುದು. ಇಡೀ ಸಂಚಾರವೇ ಗೋಜಲು ಮತ್ತು ಗೊಂದಲಮಯವಾಗಬಹುದು.

ನೋಡುವ, ಕೇಳುವ, ಮಾಡುವ, ಮಾಡಬೇಕಾಗಿರುವ; ಎಲ್ಲಾ ಚಟುವಟಿಕೆಗಳೂ ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತಲೇ ಇರುತ್ತವೆ. ಮನುಷ್ಯನ ಆಲೋಚನೆ, ಚಟುವಟಿಕೆ ಮತ್ತು ಭಾವನೆಗಳ ಪ್ರತಿಯೊಂದರ ತೂಬೂ ಈ ಮನಸ್ಸೇ. ಎಲ್ಲವೂ ಆಲೋಚನೆಗಳ ರೂಪವನ್ನು ತಾಳಿ ಮನೋಮಾರ್ಗದಲ್ಲಿ ಸಂಚಾರ ಮಾಡುತ್ತಿರುತ್ತವೆ. ರಸ್ತೆಯಲ್ಲಿ ವಿವಿಧ ವಾಹನಗಳು ಮತ್ತು ವಿವಿಧ ಚಾಲಕರು ಇರುವಂತೆ ಮನಸ್ಸಿನ ಮಾರ್ಗದಲ್ಲಿ ವಿವಿಧ ಆಲೋಚನೆಗಳು ಮತ್ತು ಅವುಗಳ ವಿವಿಧ ಮೂಲಗಳು ಕೂಡಾ ಇದ್ದು ಸಂಚಾರವು ಸರಾಗವಾಗಿರುವುದಿಲ್ಲ. ಟ್ರಾಫಿಕ್ ಜಾಮ್ ಆಗಬಹುದು, ಅಪಘಾತವಾಗಬಹುದು, ಒಂದಕ್ಕೆ ಮತ್ತೊಂದು ಅಡ್ಡ ನಿಂತು ಹೋಗಲಿಕ್ಕೆ ಬಿಡದಿರಬಹುದು. ರಸ್ತೆಯಲ್ಲಿ ಏನೇನೆಲ್ಲಾ ಹಡಾವಿಡಿಗಳು ಮತ್ತು ಅವ್ಯವಸ್ಥೆಗಳು ಆಗುವವೋ ಅವೆಲ್ಲವೂ ಮನೋಮಾರ್ಗದಲ್ಲಿಯೂ ಆಗುತ್ತದೆ.

ರಸ್ತೆ ಸಂಚಾರದಲ್ಲಿ ವಿವಿಧ ವಾಹನಗಳಿಂದ ಮತ್ತು ಚಾಲಕರಿಂದ ಆಗುವ ಏರುಪೇರು ಮತ್ತು ಸಿಕ್ಕುಗಳನ್ನು ತಡೆಯಲು ಮತ್ತು ನಿಭಾಯಿಸಲು ಸಿಗ್ನಲ್ ಲೈಟುಗಳನ್ನು ಅಳವಡಿಸಿರುವಂತೆ, ಸಂಚಾರವನ್ನು ನಿಯಂತ್ರಿಸುವಂತೆ, ಸರಾಗವಾಗಿ ಚಾಲನೆಗಳಾಗಲು, ಆ್ಯಂಬುಲೆನ್ಸ್ ಅಥವಾ ಫೈರ್ ಇಂಜಿನ್ ಅವರಿಗೆ ಆದ್ಯತೆಯನ್ನು ಕೊಡುವಂತೆ ಟ್ರಾಫಿಕ್ ಪೊಲೀಸರು ಗಮನದಿಂದ ನೋಡುತ್ತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನೋಮಾರ್ಗದಲ್ಲಿ ಉಂಟಾಗುವ ಆಲೋಚನೆಗಳ ಏರಿಳಿತ, ಗೊಂದಲ ಮತ್ತು ಸಿಕ್ಕುಗಳನ್ನು ಪರಿಹರಿಸಲು ಒಂದು ವಿಧಾನವಿದೆ. ಅದೇ ಮೇಲ್ಬರಹ.

ಮನಸ್ಸಿನಲ್ಲಿ ಬರುವ ಆಲೋಚನೆಗಳನ್ನು, ಭಾವನೆಗಳನ್ನು, ಮಾಡಬೇಕಾಗಿರುವ ಕೆಲಸಗಳನ್ನು, ಗೊತ್ತುಗುರಿಗಳನ್ನು ಬರೆದಿಡುವ ಮೂಲಕ ಟ್ರಾಫಿಕ್ ಕಂಟ್ರೋಲ್ ಆಗುತ್ತದೆ. ಮನೋಮಾರ್ಗದಲ್ಲಿನ ಸಂಚಾರದ ಮೇಲೆ ನಿಯಂತ್ರಣ ಸಾಧಿಸಲಾಗುವುದು. ಆದ್ಯತೆಯ ಮೇಲೆ ಒಂದೊಂದನ್ನೇ ಮುಂದಕ್ಕೆ ಅಥವಾ ಹಿಂದಕ್ಕೆ ಕಳುಹಿಸಲು ಸಾಧ್ಯವಾಗುವುದು.

ಇದು ದಿನಚರಿ ಅಲ್ಲ. ನಮ್ಮೊಳಗಿನ ಒತ್ತಡಗಳನ್ನು, ಆತಂಕಗಳನ್ನು, ಬೇಸರ, ದುಃಖ ಸಂಕಟಗಳನ್ನು, ಮಾಡಬೇಕಾಗಿರುವ ಕೆಲಸಗಳನ್ನು, ತಲುಪಲೇಬೇಕಾಗಿರುವ ಗುರಿಗಳನ್ನು, ಆಯ್ದುಕೊಂಡಿರುವ ದಾರಿಗಳನ್ನು ಸ್ಪಷ್ಟವಾಗಿ ಬರೆಯುವುದು. ಇದು ನಾವೇ ನೋಡಿಕೊಳ್ಳಲು. ಈ ಬರಹಗಳಿಂದ ಗೋಜಲು, ಗೊಂದಲ, ಸಿಕ್ಕುಗಳಿಂದ ಮನಸ್ಸು ಸಮಸ್ಯೆಗಳನ್ನು ಸೃಷ್ಟಿಸಿಕೊಂಡು ಕಾಯಿಲೆಯಾಗಿಸಿಕೊಳ್ಳುವ ಬದಲು ಮೇಲು ಮಾಡಿಕೊಳ್ಳುವುದು. ಅದಕ್ಕಾಗಿಯೇ ಇದನ್ನು ಮೇಲ್ಬರಹ, ಮೇಲಾಗುವ ಬರಹ ಎಂದು ಕರೆಯುವುದು.

ಮೇಲ್ಬರಹದ ಮೊತ್ತ ಮೊದಲ ಲಾಭವೇ ಸಿಕ್ಕುಸಿಕ್ಕಾಗಿ ಗೊಂದಲಕ್ಕೆ ಬಿದ್ದು ಘರ್ಷಣೆಯಾಗುವ ಆಲೋಚನೆಗಳನ್ನು, ರಾಶಿ ರಾಶಿಯಾಗಿ ಒಟ್ಟಾಗಿ ಕೊಳೆಯುವ ಭಾವನೆಗಳನ್ನು ತಿಳಿಗೊಳಿಸಿಕೊಳ್ಳುವ, ಹದಗೊಳಿಸಿಕೊಳ್ಳಲು ಸಾಧ್ಯವಾಗುವುದು.

ಪ್ರತಿದಿನ, ಇಂತಿಷ್ಟು, ಈ ಹೊತ್ತು ಅಂತ ಹೋಂವರ್ಕ್ ತರ ಇದನ್ನು ಬರೆಯುವುದಲ್ಲ. ಇದು ಸಂಪೂರ್ಣ ಖಾಸಗಿಯಾದದ್ದು ಮತ್ತು ಮುಕ್ತವಾಗಿ ಒಳಗಿನ ಉಸಿರಾಟವನ್ನು ಗಮನಿಸಿಕೊಳ್ಳುವಂತೆ ಬರೆಯುವಂತಹದ್ದು. ಅದರಲ್ಲಿ ನಮ್ಮನ್ನು ಬಾಧಿಸುವ ಚಿಂತೆಗಳನ್ನು ಕಕ್ಕಿಕೊಳ್ಳಬೇಕು. ನಮ್ಮ ಕನಸುಗಳಿಗೆ ಮಾರ್ಗನಕ್ಷೆ ಅಥವಾ ನೀಲನಕ್ಷೆ ಬರೆಯಬೇಕು. ಸಿಕ್ಕುಗಳನ್ನೆಲ್ಲಾ ಒಂದೊಂದೇ ಎಳೆಗಳನ್ನು ಗುರುತಿಸಿ ಪಕ್ಕಕ್ಕೆ ಸರಿಸುತ್ತಾ ಬಿಡುವಾಗಿಸಿಕೊಳ್ಳಬೇಕು.

ಮನೋವೈದ್ಯಕೀಯವಾಗಿ ಇದನ್ನು ‘ಅರಿವಾಳಿಕೆಯ ಅನುಸರಣೆ’ (ಛಿogಟಿiಣive oಜಿಜಿಟoಚಿಜiಟಿg) ಎನ್ನುವರು. ರಾಶಿ ರಾಶಿ ಆಲೋಚನೆಗಳ, ಚಿಂತೆಗಳ, ಭಾವನೆಗಳ ಜೊತೆ ಕಣ್ಕಟ್ಟು ಆಟವಾಡಿಕೊಂಡು ಇರಲಾಗದು. ಯಾವ ಗಳಿಗೆಯಲ್ಲಿ ನಾವು ಬರೆಯಲು ಪ್ರಾರಂಭಿಸುವೆವೋ ನಮ್ಮ ಮೆದುಳಿಗೆ ಒಂದು ಸ್ಪಷ್ಟವಾದ ಸಂದೇಶ ರವಾನೆಯಾಗುತ್ತದೆ. ಅದೇನೆಂದರೆ, ‘ಈ ಗೊಂದಲ ಗೋಜಲುಗಳನ್ನು ನಿವಾರಿಸಿಕೊಳ್ಳಲು ನೀನು ಒಬ್ಬನೇ ಹೆಣಗಾಡಿಕೊಂಡಿರುವ ಅಗತ್ಯವಿಲ್ಲ’ ಎಂಬುದು. ಅದೇ ಮೇಲ್ಬರಹದ ಶಕ್ತಿ.

ನಿಗದಿತವಾಗಿ ಮತ್ತು ನಿಯಮಿತವಾಗಿ ಮೇಲ್ಬರಹವನ್ನು ಅಭ್ಯಾಸ ಮಾಡಿದರೆ ಚದುರಿ ಹೋಗುತ್ತಾ ಚಲ್ಲಾಪಿಲ್ಲಿಯಾಗಿ ಗೊಂದಲ ಸೃಷ್ಟಿಸುವ ಆಲೋಚನೆಗಳನ್ನು ಒಂದು ಕ್ರಮದಲ್ಲಿಡಲಾಗುವುದು. ಹಾಗೆಯೇ ಅದು ನಮಗೊಂದು ನಮ್ಮದೇ ಮನಸ್ಸಿನ ನಿರೂಪಣಾ ರೀತಿಯನ್ನು (ಟಿಚಿಡಿಡಿಚಿಣive iಜeಟಿಣiಣಥಿ) ಹೊಂದಲು ಸಾಧ್ಯವಾಗುವುದು. ಇದರಿಂದ ನಮ್ಮ ಮನಸ್ಸಿನಲ್ಲಿ ಹುದುಗಿರುವ ನಮ್ಮದೇ ಭಯಗಳ ಮಾದರಿಗಳು, ಬೇಸರಗಳ ಮಾದರಿಗಳು, ನಿರಾಶೆ, ಪ್ರತಿಕ್ರಿಯೆಗಳ ಮಾದರಿಗಳನ್ನು ಗುರುತಿಸಿಕೊಳ್ಳಲಾಗುವುದಲ್ಲದೆ ಅವು ಹೇಗೆ ಪುನರಾವರ್ತಿತವಾಗುತ್ತಿವೆ ಎಂಬುದೂ ತಿಳಿಯುತ್ತದೆ. ಪುನರಾವರ್ತನೆ ಆಗುವ ಆ ಮಾದರಿಗಳನ್ನು ನಮಗೆ ಗಮನಿಸಿಕೊಳ್ಳಲು ಸಾಧ್ಯವಾಗುತ್ತದೆ.

ಹೇಗೆ ಹೊರಗಿನವರಾಗಿ ಇತರರ ಗೊಂದಲ ಗೋಜಲು ಮತ್ತು ಸಮಸ್ಯೆಗಳಿಗೆ ಪರಿಹಾರ ಹೇಳಲು ಮುಂದಾಗುವೆವೋ ಅದೇ ರೀತಿಯಲ್ಲಿ ನಮ್ಮದೇ ಚಿಂತೆಗಳಿಗೆ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಇಲ್ಲಿ ನಾವು ಯಾರೋ ಮೂರನೆಯ ವ್ಯಕ್ತಿಯಾಗಿ ನಿಂತಿರುವುವಿಲ್ಲ ಬದಲಾಗಿ ನಾವೇ ಆ ವ್ಯಕ್ತಿಯಾಗಿರುತ್ತೇವೆ.

ಯಾವ ಮುಚ್ಚುಮರೆಯೂ ಇಲ್ಲದ ನಮ್ಮದೇ ಆದಂತಹ ನಮ್ಮ ಮೇಲ್ಬರಹದಲ್ಲಿ ನಿರಂತರತೆಯನ್ನೂ ಮತ್ತು ಪ್ರಾಮಾಣಿಕತೆಯನ್ನೂ ಕಾಪಾಡಿಕೊಳ್ಳಲೇಬೇಕು. ದೊಡ್ಡ ದೊಡ್ದ ಕಾವ್ಯಮಯ, ಆಕರ್ಷಕ ಪದಗಳದ್ದೇನೂ ಅಗತ್ಯವಿಲ್ಲ. ನಾನು ತನ್ನತನದ ನಡುವೆ ಅಂತರ ಅಥವಾ ಸೌಜನ್ಯವಿಟ್ಟುಕೊಳ್ಳುವ ಅಗತ್ಯವೇನೂ ಇಲ್ಲ. ಇದು ತನ್ನೊಳಗೇ ಅಡಗಿರುವ ಕಸ ರಸಗಳ ರಾಶಿಯನ್ನೆಲ್ಲಾ ತೆಗೆದು ಸುರುವಿಕೊಂಡು ಅಚ್ಚುಕಟ್ಟು ಮಾಡಿಕೊಳ್ಳುವುದು.

ಬೇಕಾದ, ಬೇಡದ್ದನ್ನೆಲ್ಲಾ ಅಟ್ಟದ ಮೇಲೆ ಎಸೆದುಕೊಂಡು ಒಂದು ದಿನ ಎಲ್ಲವನ್ನೂ ಹೊರಗೆಳೆದುಕೊಂಡು, ರಾಶಿ ಹಾಕಿಕೊಂಡು ನಿಧಾನವಾಗಿ ವಸ್ತುಗಳನ್ನು ವಿಂಗಡಿಸಿ, ಬೇಕಾದ್ದನ್ನು ಕ್ರಮವಾಗಿಟ್ಟುಕೊಂಡು ಬೇಡದ್ದನ್ನು ಬಿಸಾಡುವಂತಹ ಕೆಲಸವಿದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಯೋಗೇಶ್ ಮಾಸ್ಟರ್,

contributor

Similar News

ಬೇರುಗಳು

ಬಯಕೆಗಳು

ಒಂಟಿ

ತಿರುಗುಪಾಳಿ