×
Ad

ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ

Update: 2026-01-22 09:20 IST

ಬಹುತೇಕ ಸಂದರ್ಭಗಳಲ್ಲಿ ಮೊದಲಾಗಿ ಮೇಲ್ಜಾತಿಯವರೆಂದು ಪ್ರತ್ಯೇಕಿಸಿ ಆನಂತರ ಮೌಲ್ಯಗಳನ್ನು ಅಳೆಯಲಾಗುತ್ತದೆ. ಹಾಗೆ ಅಳೆಯುವಾಗ ಪ್ರಬಲ ಕೋಮುಗಳನ್ನು ಹೊರಗಿರಿಸುವುದಿಲ್ಲ. ಅವರು ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತರ ಜೊತೆಯಲ್ಲಿ ಆಯ್ಕೆಗೆ ನಿಲ್ಲುತ್ತಾರೆ. ಅವರನ್ನು ಹೊರಗಿಡಲು ಸರಕಾರದ ವ್ಯವಸ್ಥೆ ಸಿದ್ಧವಿಲ್ಲ. ಇದರಿಂದಾಗಿ ಅಹಿಂದರೆಂದುಕೊಂಡವರು ಪ್ರಬಲರೊಂದಿಗೆ ಸ್ಪರ್ಧಿಸಬೇಕಾಗಿದೆ.

ಭಾರತದಲ್ಲಿ ಸಾಮಾಜಿಕ ನ್ಯಾಯ ಎಂಬುದು ಒಂದು ದೊಡ್ಡ ಪ್ರಹಸನ. ರಾಜಕಾರಣವು ಪಕ್ಷಭೇದ ತ್ಯಜಿಸಿ ಸದಾ ಸಾಮಾಜಿಕ ನ್ಯಾಯವನ್ನು ಮಾತನಾಡುತ್ತದೆ. ತಮ್ಮನ್ನೇ ತಿಂದು ಕೊಬ್ಬುವ ಹುಲಿಗಳಿಗೆ ಹಸುಗಳು ಮತದಾನ ಮಾಡುತ್ತವೆ. ನಡುವೆ ಕೆಲವು ಗುಳ್ಳೆನರಿಗಳು ತಮ್ಮ ಸ್ವಹಿತವನ್ನು ನೋಡಿಕೊಳ್ಳುತ್ತವೆ.

ಸಾಮಾಜಿಕ ನ್ಯಾಯವನ್ನು ಈಗಂತೂ ಚರ್ಚೆಗೊಳಪಡಿಸುವುದು ದುರಂತಗಳ ಸರಮಾಲೆಯನ್ನು ಜನರೆದುರು ಬೆಚ್ಚಿಬೀಳುವಂತೆ ಬಿಚ್ಚಿಡುವುದೇ ಹೊರತು ಬೇರೇನಲ್ಲ. ಸ್ವತಂತ್ರ ಭಾರತದ ಎಂಟು ದಶಕಗಳ ಚರಿತ್ರೆಯನ್ನು ಪರಿಗಣಿಸಿ ಅಪವಾದಗಳನ್ನು ಹೊರತುಪಡಿಸಿದರೆ ಬಹುತೇಕ ನೀತಿಗಳು, ಧೋರಣೆಗಳು, ಅನುಷ್ಠಾನಗಳು ರಾಜಕಾರಣಿಗಳಿಗೆ ನ್ಯಾಯವನ್ನೊದಗಿಸಿವೆಯೇ ಹೊರತು ಜನರಿಗಲ್ಲ. ಆರಂಭದ ದಶಕಗಳಲ್ಲಿ ರಾಜಕಾರಣಿಗಳ ಗುಣಮಟ್ಟ ಸ್ವಲ್ಪ ಮಟ್ಟಿಗೆ ಗೌರವಯುತವಾಗಿದ್ದು ದೇಶದ ಬಗ್ಗೆ, ಅಂದರೆ ಬೆಳವಣಿಗೆಗಳ ಬಗ್ಗೆ ಸ್ವಲ್ಪ ಕಾಳಜಿಯಿದ್ದಂತೆ ತೋರುತ್ತದೆ. ಆದರೆ ಬರಬರುತ್ತಾ ರಾಯರ ಕುದುರೆ ಕತ್ತೆಯಾದದ್ದು ಕಣ್ಣಿಗೆ ರಾಚುವಂತಿದೆ. ಬಹುಪಾಲು ಜನರು ಹಾಗೆಯೇ ಇದ್ದಾರೆ; ಅವಕಾಶವಾದಿ ರಾಜಕಾರಣವು ಕೆಲವೇ ಶ್ರೀಮಂತರನ್ನು ಸೃಷ್ಟಿಸಿದೆ. ಉದ್ಯಮವು ತನಗೆ ಬೇಕಾದಂತೆ ರಾಜಕಾರಣದ ದಿಕ್ಕನ್ನು ದೃಷ್ಟಿಸಿದೆ. ಈ ಬಗ್ಗೆ ವಿವಾದಗಳು ಎದ್ದಾಗ ನ್ಯಾಯಾಂಗವೂ ಸೋತಿದೆ. ಕೆಲವೆಡೆ ಕಾನೂನು, ಕೆಲವೆಡೆ ನ್ಯಾಯ, ಕೆಲವೆಡೆ ನಂಬಿಕೆ, ಇನ್ನು ಕೆಲವೆಡೆ ಅಸಂಗತವಾದಗಳನ್ನು ನ್ಯಾಯಾಲಯಗಳು ನೀಡುವಂತಾಗಿದೆ. ನೇರ ಕಾಣುವ ಒಂದೇ ಒಂದು ಪ್ರಕರಣವನ್ನು ಮೆಲುಕು ಹಾಕುವುದಾದರೆ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ವಿವಾದದಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪು ಉದ್ಯಮಿಗಳಿಗಾಗಲೀ, ರಾಜಕೀಯ ಪಕ್ಷಗಳಿಗಾಗಲೀ ಯಾವ ಹಾನಿಯೂ ಆಗದಂತೆ ನೋಡಿಕೊಂಡಿತು. ಮೋಹದ ಮಕ್ಕಳನ್ನು ಸಲಹುವ ಹಾಗೆ ತಪ್ಪಾಗಿದೆ, ಹೌದು, ಆದರೆ ಶಿಕ್ಷೆಯಿಲ್ಲ ಎಂಬಂತಾಯಿತು. ಪಕ್ಷಾಂತರ ನಿಷೇಧ ತಡೆ ಕಾಯ್ದೆಯಂತೂ ತನ್ನ ಹಲ್ಲುಗಳನ್ನು ಕಳೆದುಕೊಂಡು ದಶಕಗಳೇ ಆದವು. ಚುನಾವಣಾ ಅಕ್ರಮಗಳನ್ನು ನಿರ್ಬಂಧಿಸಬೇಕಾದ ಚುನಾವಣಾ ಆಯೋಗವು ಈ ಅಕ್ರಮಗಳಲ್ಲಿ ನೇರ ಭಾಗಿಯಾದರೂ ನ್ಯಾಯಾಲಯದ ಚಕ್ಷುವಿನಿಂದ ಪಾರಾಗಿದೆ. ಜೈಲಿನಲ್ಲಿರಬೇಕಾದವರು ಆಡಳಿತದಲ್ಲೂ, ಆಳ್ವಿಕೆಯಲ್ಲಿ ಪಾಲುದಾರರಾಗಬೇಕಾದ ಜನರು ಸದಾ ಶೋಷಣೆಗೆ ಬಲಿಯಾಗುತ್ತಲೂ ಇದ್ದಾರೆ. ಒಕ್ಕೂಟ ವ್ಯವಸ್ಥೆಯೆಂದರೆ ಕೇಂದ್ರ ಸರಕಾರ ರಾಜ್ಯ ಸರಕಾರಗಳನ್ನು ಆಪೋಶನ ತೆಗೆದುಕೊಳ್ಳುವುದು ಎಂಬಂತಾಗಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಾನಕಳೆದುಕೊಂಡರೂ ನಮ್ಮ ರಾಷ್ಟ್ರನಾಯಕರು ಪಶ್ಚಿಮ ಬಂಗಾಳ, ಕೇರಳ ಎಂದು ದೇಶದೊಳಗಣ ಅಧಿಕಾರದ ಆಸೆಯಲ್ಲಿ ನಿರತರಾಗಿದ್ದಾರೆ. ಸದ್ಯ ದೇಶದಲ್ಲಿ ಮತಧರ್ಮಗಳ ದ್ವೇಷರಾಜಕೀಯದ ಉದ್ಧಾರವಷ್ಟೇ ನಡೆಯುತ್ತಿದೆ.

ಪಶ್ಚಿಮ ಬಂಗಾಳ ತನ್ನನ್ನು ನೆಲೆಗೊಳಿಸಲು ಸಾಮಾಜಿಕ ನ್ಯಾಯದ ಮಾತುಗಳನ್ನಾಡಿದರೂ ರಾಜಕೀಯ ಹಾದಿಯನ್ನೇ ಆಯ್ದುಕೊಂಡಿದೆ. ಅಲ್ಲಿನ ಜನರ ಅಸ್ಮಿತೆ ಅಲ್ಲಿನ ಟಿಎಂಸಿ ಸರಕಾರದ ಪರವಿದೆಯೋ ಅಥವಾ ಮತೀಯ ಭ್ರಮೆಯಲ್ಲಿದೆಯೋ ಎಂಬುದನ್ನು ಮುಂದಿನ ಚುನಾವಣೆ ಹೇಳಬಹುದು. ಪಂಜಾಬ್ ತನ್ನ ಪಾಡಿಗೆ ಬರಿಯ ‘ರಾಜ್ಯ ಸರಕಾರ’ವಾಗಿ ಉಳಿದು ‘ಆಪ್’ ಎಂಬ ಜನಪರ ಇತಿಹಾಸದಿಂದ ಬಹುತೇಕ ಕಳಚಿಕೊಂಡಂತಿದೆ. ಅಲ್ಲಿನ ರೈತರು ಶಕ್ತರಾಗಿರುವುದರಿಂದ ಮತ್ತು ಕಷ್ಟದ ದುಡಿಮೆಗೆ ಮೊದಲಿನಿಂದಲೂ ಹೊಂದಿಕೊಂಡಿರುವುದರಿಂದ ತಮಗೆ ತಾವೇ ಸಾಮಾಜಿಕ ನ್ಯಾಯದ ಸ್ಪಷ್ಟತೆಯಿಲ್ಲದಿದ್ದರೂ ಆರ್ಥಿಕ ನ್ಯಾಯವನ್ನು ಶೋಧಿಸಿಕೊಳ್ಳುತ್ತಿದ್ದಾರೆ. ಪಂಜಾಬಿನಲ್ಲಿ ಅಧಿಕಾರ ಹೊಂದಿದರೂ ರಾಷ್ಟ್ರೀಯ ನೆಲೆಯ ಹುಡುಕಾಟದಲ್ಲಿರುವ ಕೇಜ್ರಿವಾಲರು ದಿಲ್ಲಿಯ ವ್ಯವಕಲನದ ಬಳಿಕ ಸ್ವಲ್ಪ ಸುಮ್ಮನಾಗಿ ಈಗ ಮಾಧ್ಯಮದಲ್ಲಿ ಸದ್ದುಗದ್ದಲ ಮಾಡದಿರುವುದರಿಂದ ಮಾಧ್ಯಮವೂ ಅವರನ್ನು ನಿರ್ಲಕ್ಷಿಸಿದೆ ಮತ್ತು ಅವರ ಅಭಿಮಾನಿ ಜನರು ನಿರಾಸೆಯಿಂದ ಹುಡುಕಬೇಕಾದ ಪರಿಸ್ಥಿತಿ ಬಂದಿದೆ.

ದಕ್ಷಿಣದ (ಬಿಜೆಪಿಯ ಜೊತೆಯ ತೆಲುಗುದೇಶಂ ಸೇರಿದಂತೆ) ರಾಜ್ಯಗಳು ಒಂದಿಷ್ಟು ಸುಧಾರಣೆಯನ್ನು ಕಾಣುತ್ತಿವೆ. ತಮಿಳು ನಾಡು ಮತ್ತು ಕೇರಳ ರಾಜ್ಯಗಳು ರಾಷ್ಟ್ರದ ಜನತೆಯ ಅಭಿವೃದ್ಧಿಯ ಕುರಿತ ಚಿಂತನೆಯ ಹಾದಿಯಲ್ಲಿ ಒಕ್ಕೂಟ ಸರಕಾರಕ್ಕೆ ನೇರ ಸಡ್ಡು ಹೊಡೆದಿವೆಯಾದ್ದರಿಂದ ಅವಕ್ಕೆ ಸಿಗಬೇಕಾದ ಪಾಲು, ಬರಬೇಕಾದ ಅನುಕೂಲ ಪ್ರಾಪ್ತವಾಗುತ್ತಿಲ್ಲ.

ಕರ್ನಾಟಕ ರಾಜ್ಯವು ರಾಜಕೀಯ ನ್ಯಾಯವನ್ನು ಮಾತ್ರ ಯೋಚಿಸುವ ಸರಕಾರವನ್ನು ಹೊಂದಿರುವುದರಿಂದ ಬಹುತೇಕ ಭಾಜಪದ ಅವ್ಯವಸ್ಥಿತ ಅವಳಿ ಶಿಶುವಿನಂತಿದೆ. ಈ ಕಸರತ್ತುಗಳು ಅದಕ್ಕೆ ವರ್ತಮಾನದ ಭದ್ರತೆಯನ್ನು ತಾತ್ಕಾಲಿಕವಾಗಿ ತಂದುಕೊಟ್ಟಿದೆಯಾದರೂ ಭವಿಷ್ಯದ ಸುಭದ್ರತೆಯನ್ನು ತಂದುಕೊಡುವ ಗ್ಯಾರಂಟಿಯಿಲ್ಲದ್ದರಿಂದ ರಾಜಕೀಯ ನ್ಯಾಯಗಳೇ ಹೆಚ್ಚಾಗುತ್ತಿವೆ. ಜೊತೆಗೆ ಭಾರತೀಯ ಪ್ರಜಾಪ್ರಭುತ್ವಕ್ಕೆ ಅತ್ಯಂತ ಸಹಜ ಅನಿವಾರ್ಯವಾದ ಯಾವುದೇ ರಾಷ್ಟ್ರೀಯ ಪಕ್ಷದ ಹೈಕಮಾಂಡ್ ತಾನು ಅಧಿಕಾರದಲ್ಲಿರುವ ರಾಜ್ಯ ಸರಕಾರಗಳನ್ನೇ ಅವಲಂಬಿಸಿರುವುದರಿಂದ ‘ಹೈಕಮಾಂಡ್’ಗಾಗಿ ಧನಸಂಗ್ರಹ ಮಾಡಬೇಕಾದ ತುರ್ತು ಎಲ್ಲ ರಾಜ್ಯ ಸರಕಾರಗಳಿಗಿದೆ. ಭಾಜಪ ಈಗ ವಿಶಾಲ ಸಮುದ್ರ. ನದಿಗಳ ನೀರು ಅದರತ್ತ ಹರಿಯುತ್ತಲೇ ಇರುತ್ತದೆ. ಆದ್ದರಿಂದ ಅದು ‘ತುಂಬಿದ ಕೊಡ’. ಒಕ್ಕೂಟ ಸರಕಾರದ ಅಧಿಕಾರ ಹೊಂದಿರದ ಪಕ್ಷವು ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವುದರಿಂದ ಭ್ರಷ್ಟಾಚಾರ ಇಲ್ಲಿಂದ ದೂರವಾಗಬಹುದೆಂದು ಊಹಿಸುವುದು ಹುಚ್ಚುತನ. ನಿಜಕ್ಕೂ ಭ್ರಷ್ಟಾಚಾರದ ನಿರ್ಮೂಲನವೇ (ಆದೊಂದೇ ಅಲ್ಲ) ಸಾಮಾಜಿಕ ನ್ಯಾಯದ ದೊಡ್ಡ ಮೆಟ್ಟಲು. ಸಮಾಜದ ಕಟ್ಟಕಡೆಯವನಿಗೂ ಸರಕಾರದ ಎಲ್ಲ ಹಂತಗಳಲ್ಲಿ ತನ್ನ ಕಾರ್ಯಪೂರೈಕೆಯು ಸುಲಭವಾಗುವುದೇ ಸಾರ್ವಜನಿಕ ಮತ್ತು ಸಾಮಾಜಿಕ ನ್ಯಾಯ.

ಆದರೆ ಕರ್ನಾಟಕವು ಸದಾ ಸಾಮಾಜಿಕ ನ್ಯಾಯದ ಬಗ್ಗೆ ಚಿಂತನೆ ನಡೆಸುತ್ತಿದೆಯೋ ಎಂಬಂತೆ ಅದರ ಜಾಹೀರಾತುಗಳು ಮತ್ತು ಅದರ, ಹಾಗೂ ಅದನ್ನು ಬೆಂಬಲಿಸುವವರ ಲೇಖನಗಳು, ಭಾಷಣಗಳು ಇವೆ. ಆದ್ದರಿಂದ ದೂರದೂರುಗಳನ್ನು ಮರೆತು ದೇಶದ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಬಗ್ಗೆ ಒಂದಿಷ್ಟು ಯೋಚಿಸೋಣ. ಹೇಗಿದ್ದರೂ ನಾವು ಕರ್ನಾಟಕವನ್ನು ಭಾರತ ಜನನಿಯ ತನುಜಾತೆಯೆಂದು ಒಪ್ಪಿಕೊಂಡವರು. ಕರ್ನಾಟಕದಲ್ಲಿ ಭಾರತವನ್ನು ಕಾಣುವವರು ಅಥವಾ ಕಾಣಬೇಕಾದವರು.

ಸಾಮಾಜಿಕ ನ್ಯಾಯವು ಶಾಸನಬದ್ಧ ಅವಕಾಶಗಳನ್ನು, ವಿನಾಯಿತಿಗಳನ್ನು, ರಿಯಾಯಿತಿಗಳನ್ನು ನೀಡುವುದರಿಂದಷ್ಟೇ ಸಲ್ಲುವುದಿಲ್ಲ. ಅದು ಸರ್ವರಿಗೆ ಸಮಪಾಲು ನೀಡುವುದಕ್ಕೂ ಒಂದು ಮಿತಿಯನ್ನು ಹೇರುತ್ತದೆ. ನೂರಾರು ವರ್ಷಗಳಿಂದ ಅವಕಾಶ ವಂಚಿತರಾದವರಿಗೆ ಅವಕಾಶಗಳನ್ನು ಆದ್ಯತೆಯ ಮೇಲೆ ನೀಡಬೇಕಾಗಿದೆ. ಇದರಿಂದ ಕೆಲವು ಮಂದಿಗೆ, ಸಮುದಾಯಗಳಿಗೆ ಅನ್ಯಾಯವಾಗುತ್ತದೆಯಾದರೂ ಅವುಗಳು ತಮ್ಮದಲ್ಲದ ತಪ್ಪುಗಳಿಗಾಗಿ ಸಹಿಸಿಕೊಳ್ಳಬೇಕಾಗಿದೆ. ಕಾನೂನಿನಡಿ ಸೋತವರಿಗೆ ಈ ದೇಶದಲ್ಲಿ, ರಾಜ್ಯದಲ್ಲಿ ಪ್ರತ್ಯೇಕ ನ್ಯಾಯವೆಂಬುದಿಲ್ಲ. ಏಕೆಂದರೆ ಚರಿತ್ರೆಯಲ್ಲಿ ನಡೆದ ಘನಘೋರ ಲೋಪಗಳನ್ನು ಸರಿಪಡಿಸಿಕೊಂಡೇ ಮುಂದುವರಿಯಬೇಕು. ಸಾಮಾಜಿಕ ಸುಧಾರಣೆ ಈ ಹಾದಿಯಲ್ಲೇ ನಡೆಯಬೇಕು. ಹಾಗೆಂದು ಹಿಂದಾದ ಅನ್ಯಾಯಗಳನ್ನು, ಅದರ ಬಲಿಪಶುಗಳನ್ನು ಈಗ ಸುಧಾರಿಸಲಾಗದು. ಯಾವುದೇ ಸುಧಾರಣೆಯು ಗತಕ್ಕೆ ಹೊರಳುವುದಿಲ್ಲ. ವರ್ತಮಾನದಲ್ಲಿ ನಡೆಯುವ ಸುಧಾರಣೆಯು ಭವಿಷ್ಯಕ್ಕೆ ಹೊಸದಿಕ್ಕುಗಳನ್ನು, ನಿರೀಕ್ಷೆಗಳನ್ನು ನೀಡಬಹುದು. ಇಂತಹ ಸುಧಾರಣೆಯು ಮುಂದೆ ಹೇಗಿರಬಹುದೆಂಬುದನ್ನು ಈಗಲೇ ಊಹಿಸಲಾಗದು.

ಯಾವುದೇ ಸಾಮಾಜಿಕ ನ್ಯಾಯವು ಅಂತರವನ್ನು ಸೃಷ್ಟಿಸುತ್ತದೆ. ಅದಕ್ಕೆ ಒಂದಷ್ಟು ಮಂದಿ ಮೌಲ್ಯಾತೀತವಾಗಿ ಬಲಿಯಾಗುತ್ತಾರೆ. ಇದಕ್ಕೆ ಯಾರು ಹೊಣೆಯೆಂದು ಹೇಳಲಾಗದು. ಉದಾಹರಣೆಗೆ ಮೀಸಲಾತಿಯಡಿ ಒಬ್ಬ ಕಿರಿಯನು ತನ್ನ ಮೇಲಧಿಕಾರಿಯನ್ನು ಮೀರಿಸಿ ಅದರ ಮೇಲಂತಸ್ತನ್ನು ತಲುಪಬಹುದು. ಈ ಬಗ್ಗೆ ಭಿನ್ನ ಅಳತೆಗೋಲುಗಳಿವೆಯಾದರೂ ಕೆಲವರಾದರೂ ತಲುಪುವುದು ಹೌದಲ್ಲ!

ಮುಖ್ಯ ಗಮನಿಸಬೇಕಾದ ಅಂಶವೆಂದರೆ ಸಾಮಾಜಿಕ ನ್ಯಾಯವು ಹೊಸ ಬಗೆಯ ಅಸ್ಪಶ್ಯರನ್ನು ಸೃಷ್ಟಿಸಬಹುದೇ ಎಂಬುದು. ಆರ್ಥಿಕತೆಯೇ ಸಾಮಾಜಿಕ ನ್ಯಾಯದ ಅಳತೆಗೋಲಲ್ಲ. ನಮ್ಮ ಶಾಸನದಡಿ ಎಲ್ಲ ಸಂದರ್ಭಗಳಲ್ಲಿ ಅಲ್ಲದಿದ್ದರೂ ಜಾತಿ-ಮತ-ಧರ್ಮಗಳೂ ಸಾಮಾಜಿಕ ನ್ಯಾಯದ ಅಳತೆಗೋಲುಗಳಾಗಿವೆ. ಆದರೆ ಸಾಮಾಜಿಕ ನ್ಯಾಯವನ್ನು ನಿರ್ಧರಿಸುವ ಸಂದರ್ಭಗಳಲ್ಲಿ ಜಾತಿಯೇ ಆಧಾರವಾಗಬಾರದು. ಇದು ಮಾನವೀಯಶಾಸ್ತ್ರದಲ್ಲಿ ಮತ್ತೊಂದು ಅವಕಾಶವಿಲ್ಲದ ಸಂದರ್ಭದಲ್ಲಿ ಅಸಮತೋಲನವನ್ನು ಸೃಷ್ಟಿಸಬಹುದು.

ಬ್ರಾಹ್ಮಣರು ತೀರಾ ಕಡಿಮೆ ಪ್ರಮಾಣದಲ್ಲಿದ್ದಾರೆ. ಈ ಪೈಕಿ ಹಲವರು ಆಡಳಿತದ ಆಯಕಟ್ಟಿನ ಕೆಲವು ಸ್ಥಾನಗಳಲ್ಲಿದ್ದಾರೆ. (ಇವರ ಆಯ್ಕೆಗೆ ಸರಕಾರದ ಸಾಮಾಜಿಕ ನ್ಯಾಯ ಅಡ್ಡಿಯಾಗುವುದಿಲ್ಲ. ಏಕೆಂದರೆ ಅಲ್ಲಿ ಭ್ರಷ್ಟ ರಾಜಕೀಯ ನ್ಯಾಯ ಕೆಲಸಮಾಡುತ್ತದೆ!) ಯೋಗ್ಯತೆಯಲ್ಲಿ ಶಕ್ತರಾದ ಅನೇಕರಿದ್ದರೂ ಸಾಮಾಜಿಕ ನ್ಯಾಯವನ್ನು ಸದಾ ಉಸಿರುವ ಸರಕಾರವು ಇಂತಹ ಕೆಲವರನ್ನಾದರೂ ಸಾಮಾಜಿಕವಲ್ಲದ (ಮತ್ತು ಮೇಲೆ ಹೇಳಿದ ರಾಜಕೀಯವಾದ) ಕಾರಣಗಳಿಂದ ಬಳಸಿಕೊಂಡಿದೆ. ಸರಕಾರವು ಯಾವತ್ತೂ ಉದ್ಯಮಶೀಲ!

ಉಳಿದಂತೆ ಹೆಚ್ಚಿನ ಬ್ರಾಹ್ಮಣರು ವೃತ್ತಿಗಳಲ್ಲಿ ಅಥವಾ ಖಾಸಗೀ ಉದ್ಯೋಗಗಳಲ್ಲೇ ಇದ್ದಾರೆ. ಕೃಷಿಯಲ್ಲಿ ಹಲವರಿದ್ದರೂ ಹೊಸ ತಲೆಮಾರು ಈ ಉದ್ಯೋಗಗಳ ಪ್ರಯಕ್ತ ಮಹಾನಗರಗಳಲ್ಲಿ ಅಥವಾ ವಿದೇಶಗಳಲ್ಲಿದ್ದಾರೆ. ಇದು ಅವರ ಸಾಮರ್ಥ್ಯವೆಂದರೂ ಸರಿಯೇ; ಇತರ ಪ್ರಬಲ ಕೋಮುಗಳಿಗೆ ಅವರ ಅಗತ್ಯವಿರಬಹುದು ಎಂದರೂ ಸರಿಯೇ. ಟಿಪ್ಪುಸುಲ್ತಾನನ ದಿವಾನನಾದ ಪೂರ್ಣಯ್ಯನು ಆನಂತರ ಒಡೆಯರ್‌ಗಳಿಗೂ ದಿವಾನನಾಗಿದ್ದನೆಂಬುದನ್ನು ನೆನಪಿಸಬಹುದು. ಕಮ್ಯುನಿಸ್ಟ್ ಸಂಘಟನೆಯಲ್ಲಿ ಸಾಕಷ್ಟು ಬ್ರಾಹ್ಮಣರಿದ್ದರು. ಆದರೆ ಸಂಘಟನೆಯು ಅವರನ್ನು ಜಾತ್ಯಾಧಾರಿತವಾಗಿ ಕಾಣಲಿಲ್ಲ. ಬ್ರಾಹ್ಮಣ್ಯ ಅವರಲ್ಲಿತ್ತೋ ಇಲ್ಲವೋ ಸಾರ್ವಜನಿಕವಾಗಿ ಅವರು ಕಮ್ಯುನಿಸ್ಟರಾಗಿ ಉಳಿದರೇ ವಿನಾ ಬ್ರಾಹ್ಮಣರಾಗಿ ಅಲ್ಲ. ನಂಬೂದರಿಪಾಡ್, ಜ್ಯೋತಿ ಬಸು ಮುಂತಾದವರು ಆರ್ಥಿಕ ನೆಲೆಗಟ್ಟಿನ ಸಿದ್ಧಾಂತದಡಿ ಅಸ್ಪಶ್ಯರಾಗಲಿಲ್ಲ, ಮಸುಕಾಗಲಿಲ್ಲ.

ಕರ್ನಾಟಕದಲ್ಲಿ ಈಗ ಪ್ರಬಲ ಕೋಮುಗಳೆಂದರೆ ಲಿಂಗಾಯತರು/ವೀರಶೈವರು ಮತ್ತು ಒಕ್ಕಲಿಗರು. ಯಾವುದೇ ಸರಕಾರವನ್ನು ಚುನಾಯಿಸುವುದು ಜನತೆಯಾದರೂ ಆಡಳಿತದ ಸೂತ್ರವನ್ನು ನಿರ್ಧರಿಸುವವರು ಈ ಎರಡು ಕೋಮುಗಳೇ. ಇದರಲ್ಲಿ ತಪ್ಪೇನಿಲ್ಲ. ಆದರೆ ಸರಕಾರವು ಸಾಮಾಜಿಕ ನ್ಯಾಯವನ್ನು ಮಾತನಾಡುತ್ತಲೇ ಈ ಕೋಮುಗಳ ನಿಯಂತ್ರಣದಲ್ಲಿ ಆಡಳಿತವು ನಡೆಯುವುದನ್ನು ಅಥವಾ ನಡೆಯಬೇಕಾದ ಪ್ರಮೇಯವನ್ನು ನಿರ್ಬಂಧಿಸುವುದು ಅವಶ್ಯ. ದೇವರಾಜ ಅರಸು ಅವರ ಭೂಸುಧಾರಣೆ ಜಾತ್ಯಾಧಾರಿತವಾಗಿರಲಿಲ್ಲವೆಂಬುದು ಅದರ ಮಹತ್ವವನ್ನು ತೋರಿಸುತ್ತದೆ. ಗೇಣಿಗೆ ಆಸ್ತಿಯನ್ನು ಪಡೆದವರಲ್ಲಿ ಬ್ರಾಹ್ಮಣರಿಂದ ದಲಿತರ ವರೆಗೆ ಎಲ್ಲ ಜಾತಿಯವರಿದ್ದರು; ಮುಸಲ್ಮಾನರೂ, ಕ್ರೈಸ್ತರೂ ಇದ್ದರು. ಅಹಿಂದ ಘೋಷಣೆ ಮಾಡಿದ ಸಿದ್ದರಾಮಯ್ಯನವರು ಅದನ್ನೊಂದು ವರ್ಗೀಕೃತ ಸಮುದಾಯವಾಗಿ ಪರಿವರ್ತಿಸಲು ಸಫಲರಾಗಲಿಲ್ಲ ಮತ್ತು ಪ್ರಬಲ ಕೋಮುಗಳನ್ನು ಮೂಲೆಗೆ ಬಿಡಿ, ಬದಿಗೆ ತಳ್ಳಲೂ ಶಕ್ತರಾಗಲಿಲ್ಲ ಎಂಬುದು ಸರಕಾರದ ನಡೆನುಡಿಗಳಲ್ಲಿ ಅರ್ಥವಾಗುತ್ತದೆ. ಅರಸು ಅವರಿಗೂ ಸಿದ್ದರಾಮಯ್ಯನವರಿಗೂ ಇದೇ ವ್ಯತ್ಯಾಸವಾಗಿರಬಹುದು. ಅಲ್ಪಸಂಖ್ಯಾತರಾಗಲೀ, ಹಿಂದುಳಿದವರಾಗಲೀ, ದಲಿತರಾಗಲೀ ಆಡಳಿತದ ಮುಖ್ಯವಾಹಿನಿಗಿನ್ನೂ ಪ್ರವೇಶಿಸಲಾಗಲಿಲ್ಲ. ಅವರು ಅಧಿಕಾರದ ಪಲ್ಲಕ್ಕಿಯನ್ನು ಹೊತ್ತು ಸುತ್ತುವುದೇ ಆಗಿದೆ. ಮೇಲೆ ಕುಳಿತವರು ಯಾರೆಂದರೆ ಮತ್ತೆ ಬ್ರಾಹ್ಮಣ್ಯದ ವಿರುದ್ಧ ಸದಾ ದನಿಯೆತ್ತುವ ಆರ್ಥಿಕವಾಗಿ ಪ್ರಬಲವಾಗಿರುವ ಈ ಎರಡು ಕೋಮುಗಳೇ.

ಸಾಮಾಜಿಕವಾಗಿ ಗುರುತಿಸಬೇಕಾದ ಸಂದರ್ಭಗಳಲ್ಲಿ ಒಳಗೊಳ್ಳಿಸದ ತಂತ್ರಗಳೇ ಜಾಸ್ತಿ. ಇವುಗಳು ಪ್ರಬಲ ಕೋಮುಗಳಿಗೆ ಯಾವುದೇ ತೊಂದರೆಯನ್ನಾಗಲೀ, ಅಡ್ಡಿಯನ್ನಾಗಲೀ ಮಾಡದಂತೆ ವ್ಯವಸ್ಥೆಯು ನೋಡಿಕೊಳ್ಳುತ್ತಿದೆ. ಸಾಮಾಜಿಕ ಪ್ರಾಶಸ್ತ್ಯವನ್ನು ಜಾರಿಮಾಡುವುದು ಹೇಗೆ? ಅವಕಾಶ ವಂಚಿತರಿಗೆ ಅವಕಾಶನೀಡುವ ಮೂಲಕ; ಪ್ರಶಸ್ತಿಯೆಂದು, ಪ್ರತಿಷ್ಠಿತ ಸ್ಥಾನಗಳೆಂದು ನಾವು ತಿಳಿಯುವ ಗುರುತಿಸುವಿಕೆಯ ಮೂಲಕ. ಖಾಸಗಿಯಲ್ಲಿ ಹೇಗಾದರೂ ನಡೆಯಲಿ; ಸರಕಾರದ, ಸಾರ್ವಜನಿಕವಾದ ವ್ಯವಸ್ಥೆಯಲ್ಲಿ ಅದು ಘೋಷಿತ ಸಿದ್ಧಾಂತಗಳನ್ನು, ತತ್ವಗಳನ್ನು ಅನುಸರಿಸಬೇಕು. ಹಾಗೆಂದು ಮೌಲ್ಯಗಳನ್ನು, ಯೋಗ್ಯತೆಗಳನ್ನು ನಿರ್ಲಕ್ಷಿಸಿದಂತಾಗಬಾರದು. ಆದರೆ ಬಹುತೇಕ ಸಂದರ್ಭಗಳಲ್ಲಿ ಮೊದಲಾಗಿ ಮೇಲ್ಜಾತಿಯವರೆಂದು ಪ್ರತ್ಯೇಕಿಸಿ ಆನಂತರ ಮೌಲ್ಯಗಳನ್ನು ಅಳೆಯಲಾಗುತ್ತದೆ. ಹಾಗೆ ಅಳೆಯುವಾಗ ಪ್ರಬಲ ಕೋಮುಗಳನ್ನು ಹೊರಗಿರಿಸುವುದಿಲ್ಲ. ಅವರು ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತರ ಜೊತೆಯಲ್ಲಿ ಆಯ್ಕೆಗೆ ನಿಲ್ಲುತ್ತಾರೆ. ಅವರನ್ನು ಹೊರಗಿಡಲು ಸರಕಾರದ ವ್ಯವಸ್ಥೆ ಸಿದ್ಧವಿಲ್ಲ. ಇದರಿಂದಾಗಿ ಅಹಿಂದರೆಂದುಕೊಂಡವರು ಪ್ರಬಲರೊಂದಿಗೆ ಸ್ಪರ್ಧಿಸಬೇಕಾಗಿದೆ. ಕರ್ನಾಟಕದಲ್ಲಿ ಯಾವುದೇ ಸರಕಾರೀ ಅಥವಾ ಸರಕಾರೀ ಪೋಷಣೆಯ ಸ್ವಾಯತ್ತ ಸಂಸ್ಥೆಗಳಲ್ಲಿರುವವರನ್ನು ಗಮನಿಸಿದರೆ ಇವರಲ್ಲಿ ಅಹಿಂದರು ಯಾರೆಂದು ಹುಡುಕಬೇಕಾಗಿದೆ. ಹೀಗಾಗಿ ಮೇಲ್ಜಾತಿಯೆಂದರೆ ಬ್ರಾಹ್ಮಣರು ಎಂದಾಗಿದೆ. ಈ ಮೌಲ್ಯಮಾಪನವು ಬದಲಾಗಬೇಕು; ‘ಮೇಲ್ಜಾತಿ’ ಎಂಬುದನ್ನು ‘ಮೇಲ್ವರ್ಗ’ ಎಂದು ಬದಲಾಯಿಸಿದರೆ ಅಬ್ರಾಹ್ಮಣ ಬ್ರಾಹ್ಮಣ್ಯದವರು ಬೇಕಷ್ಟು ಸಿಗಬಹುದು. ಸಾಮಾಜಿಕ ನ್ಯಾಯವು ವರ್ಗಸಿದ್ಧಾಂತದ ಮೇಲೆಯೂ ನಿಲ್ಲಬೇಕೇ ಹೊರತು ಜಾತಿಸಿದ್ಧಾಂತದ ಮೇಲೆ ಮಾತ್ರವಲ್ಲ. ರಾಜಕಾರಣಿಗಳ ಹಿಂದೆಮುಂದೆ ಅಲೆಯುವ ಬ್ರಾಹ್ಮಣೇತರರು ಯಾರೇ ಇರಲಿ ಅವರು ಅಹಿಂದಗಳಿಂದ ಮುಂದಿರುತ್ತಾರೆ. ವೈಯಕ್ತಿಕ ಯೋಗ್ಯತೆ ಬೇರೆ; ಸಾಮಾಜಿಕ ಮೌಲ್ಯಾಧಾರಿತ ಆಯ್ಕೆಗಳು ಬೇರೆ.

ಸಾಮಾಜಿಕ ನ್ಯಾಯ ಸಿಗಬೇಕಾದರೆ ಅಹಿಂದರಲ್ಲೂ ಕೆಳವರ್ಗದಲ್ಲಿರುವವರನ್ನು ಗುರುತಿಸಬೇಕು. ಬೆಂಗಳೂರಿನಲ್ಲಿರುವ, ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದವರೊಬ್ಬರು ಸಾಮಾಜಿಕ ನ್ಯಾಯದಡಿ ಗುರುತಿಸಬೇಕಾದ ವ್ಯಕ್ತಿಯಲ್ಲ. ಅವರಿಗೆ ಸಾಮಾಜಿಕ ನ್ಯಾಯವು ಆರ್ಥಿಕ ಸಬಲತೆಯಿಂದ ಸಾಮಾಜಿಕ ಸ್ಥಾನಮಾನದಿಂದ ದಕ್ಕಿದೆ. ಅದೇ ಸಮುದಾಯದ ಮತ್ತು ಯೋಗ್ಯತೆಯಿದ್ದೂ ಅವಕಾಶ ದಕ್ಕದ ಸಾಮಾನ್ಯರಲ್ಲಿ ಸಾಮಾನ್ಯರಾಗಿರುವವರು ಮಾನ್ಯತೆ ಪಡೆಯಬೇಕು. ಅದಾಗದಿದ್ದರೆ ಅಹಿಂದ ಮಾತ್ರವಲ್ಲ ಎಲ್ಲ ಕೆಳವರ್ಗದವರು ಶ್ರೀಮಂತರು ಬಳಸುವ ಸುಗಂಧ ದ್ರವ್ಯದಂತೆ ಬಳಸಿ ಒಗೆಯುವ ಮತ್ತು ಸಾಮಾಜಿಕ ನ್ಯಾಯವೆಂಬ ಗಾಣದಲ್ಲಿ ತಿರಸ್ಕರಿಸಲ್ಪಡುವ ತ್ಯಾಜ್ಯವಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News

ಹೊಸ ವರುಷ