×
Ad

ಹೊಸ ವರುಷ

Update: 2026-01-01 11:00 IST

ಮನುಷ್ಯ ತಾನೇ ಹಾಕಿಕೊಂಡ ಕೃತಕ ಗಡಿಗುರುತುಗಳನ್ನು ಉಳಿಸಿಕೊಳ್ಳುವುದಕ್ಕೇ ತನ್ನ ಬದುಕನ್ನು ವ್ಯಯಿಸುತ್ತಾನೆ. ಕಾಲ ಕಳೆಯುವುದು ವಾಸ್ತವ. ಹೊಸ ಬರವು ಎಂಬುದು ಭ್ರಮೆ. ಅದಕ್ಕೆ ಬರಹವಿಲ್ಲ; ಬರುತ್ತಿದ್ದೇನೆಂಬ ನಾಮಫಲಕವಿಲ್ಲ. ಇವುಗಳ ನಡುವೆ ಹೊಸ ವರುಷವೆಂಬ ಭ್ರಮೆಯೂ ಒಂದು. ಇರಲಿ. ಇದೂ ಒಂದು ಆಚರಣೆ. ಅದಕ್ಕೆ ವಿಚಾರಣೆಯಿಲ್ಲ. ಅನುಭವ ಮಾತ್ರ. ನಮ್ಮೊಂದಿಗೇ ನಶಿಸುವ ಅನುಭವ. ಆದ್ದರಿಂದ ಹೊಸವರುಷದ ಶುಭಾಶಯಗಳನ್ನು ಹೆತ್ತೋ, ಹೊತ್ತೋ ಸಾಗೋಣ. ಮರಳಿನ ಚೀಲವಾದರೆ ಜೀವನದ ನೀರಿನಲ್ಲಿ ಭಾರವಾದೀತು; ಉಪ್ಪಿನ ಚೀಲವಾದರೆ ಕರಗಿ ಹಗುರಾದೀತು. ಅಷ್ಟನ್ನೂ ಕಾಯೋಣ.

ಹೊಸ ವರುಷ ಬರುತ್ತಿದೆ, ಬಂದಿದೆ ಎಂಬ ಇಂತಹ ಸಂದರ್ಭಗಳಲ್ಲಿ ವಾಸ್ತವಕ್ಕಿಂತ ಆದರ್ಶ, ವಿಚಾರಕ್ಕಿಂತ ಭಾವನೆಗಳು, ಅರ್ಥಕ್ಕಿಂತ ಉತ್ಸಾಹ, ಆತ್ಮಾವಲೋಕನಕ್ಕಿಂತ ಪ್ರದರ್ಶನ, ಚಿಂತನೆಗಿಂತ ಸಂಭ್ರಮ ಇವೇ ಮುಖ್ಯವಾಗುತ್ತವೆ. ಆದ್ದರಿಂದ ಇದು ಸ್ಮರಣೋತ್ಸವ. ಯುಗಾದಿಗೆ ಬೇಂದ್ರೆ ಹಾಡಿದಂತೆ ‘‘ವರುಷ ವರುಷ ಕಳೆದರೂ ವರುಷ ಮರಳಿ ಬರುತಿದೆ’’ ಎಂದು ಸಂತೋಷದ ಜೊತೆಗೆ ಕಳೆದ ವರುಷ ಮರಳಿಬಾರದು ಎಂದು ಸಮಾಧಾನಪಟ್ಟುಕೊಳ್ಳಬೇಕು. ಈ ಸಂತೋಷ ಮತ್ತು ಸಮಾಧಾನವು ಕಳೆದ ವರುಷದಲ್ಲಿ ಅನುಭವಿಸಿದ ಮತ್ತು ನೆನಪಿನಲ್ಲುಳಿವ ಸಿಹಿ-ಕಹಿಯನ್ನವಲಂಬಿಸಿದೆ.

ದೇಶಗಳ ಗಡಿರೇಖೆಗಳಿಗೆ ಕೊನೇ ಪಕ್ಷ ಬೇಲಿಗಳು, ಗೋಡೆಗಳು, ಸುಂಕದ ಕಟ್ಟೆಗಳು ಗುರುತಿನ ಚಿಹ್ನೆಗಳಾಗುತ್ತವೆ. ಆದರೆ ಅಕ್ಷಾಂಶ-ರೇಖಾಂಶಗಳ ಗಡಿರೇಖೆಗಳನ್ನು ನಾವ್ಯಾರೂ ನೋಡಿಲ್ಲ. ಇಲ್ಲದ್ದನ್ನು ಇರುವಂತೆ ಮಾಡುವ ಯೋಜನೆ, ಯೋಚನೆಗಳಲ್ಲಿ ಒಂದು ವರುಷ ಕಳೆದು, ಮುಗಿದು ಇನ್ನೊಂದು ವರುಷ ಬರುವುದಕ್ಕೆ ಕ್ಯಾಲೆಂಡರ್, ಗಡಿಯಾರ ಹೊರತುಪಡಿಸಿದರೆ ಬೇರೆ ಸೂಚಕಗಳಿಲ್ಲ. ಹೊಸವರುಷದ ಸೂರ್ಯೋದಯವು ಹೊಸವರುಷಕ್ಕೆ ಗುರುತಾಗದಂತೆ ನಾವು ಮಧ್ಯರಾತ್ರಿಯಿಂದಲೇ ದಿನಾಂಕ ಬದಲಾಗುವ ಸೌಕರ್ಯಗಳನ್ನು ನಿರ್ಮಿಸಿದ್ದೇವೆ. ಮಧ್ಯರಾತ್ರಿ 12 ಗಂಟೆ ಹಳೆವರುಷದ್ದೋ ಹೊಸವರುಷದ್ದೋ? ಗೊತ್ತಾಗಬೇಕು. ಬ್ರಿಟಿಷರು ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಬೀಗಿದ್ದಾಗ ಅನೇಕ ದೇಶಗಳು, ಭೂಭಾಗಗಳು ಕತ್ತಲೆಯ ಕೂಪಗಳಾಗಿದ್ದವು. ಹೀಗಾಗಿ ಹಗಲು ಮತ್ತು ರಾತ್ರಿ ಕೂಡಾ ಸಾಪೇಕ್ಷವೇ ಹೊರತು ಸಾರ್ವಜನಿಕವಲ್ಲ; ಸಾರ್ವತ್ರಿಕವಲ್ಲ.

ಇಂಗ್ಲಿಷಿನಲ್ಲಿ ‘ring out the old, ring in the new’ ಎಂಬ ವಾಡಿಕೆಯ ಮಾತಿದೆ. ಹಳತನ್ನೆಲ್ಲ ಮರೆತೋ ಮರೆಯದೆಯೋ ನೂಕಾಚೆ ದೂರ, ಹೊಸತನ್ನಪ್ಪಿಕೊ ಎಂಬ ಹಾಗೆ. ಹಾಗಂತ ಹಳತನ್ನು ಮರೆಯಬಹುದೇ? ಕಳೆದ ವರುಷಗಳಲ್ಲಿ ಸಂಪಾದಿಸಿದ್ದು ಆ ವರುಷಕ್ಕೇ ಮುಗಿಯಬೇಕೇ? ಉಳಿದರೆ ಮುಂದಿನ ವರುಷಕ್ಕೆ ಆಗುವುದಿಲ್ಲವೇ? ಕಾಲ ಯಥಾಪ್ರಕಾರ ಸಾಗುವುದಿಲ್ಲವೇ? ಅದೇನೂ ಚುನಾವಣೆಯಲ್ಲವಲ್ಲ- ಯಾವನಾದರೂ ಒಬ್ಬನ ಅಥವಾ ಒಂದು ಗುಂಪಿನ ನಿರ್ಧಾರದಂತೆ ನಡೆಯುವುದಕ್ಕೆ! ಹಳೆಯ ವರುಷದಲ್ಲಿ ಕಲಿತದ್ದನ್ನು ಮರೆತರೆ ಹೊಸತು ಆಲಂಗಿಸೀತು ಹೇಗೆ?

ಕರಾವಳಿಯ (ಮತ್ತು ಮಲೆನಾಡಿನ) ಅಡಿಕೆ ಬೆಳೆಗಾರರು ಒಂದು ಬೆಳೆಯಷ್ಟು ಹಳೆಯ ಅಡಿಕೆಗೆ ‘ಚೋಲ್’ ಎನ್ನುತ್ತಾರೆ. ಎರಡು ವರುಷವಾದರೆ ‘ಡಬ್ಬಲ್ ಚೋಲ್’ ಎನ್ನುತ್ತಾರೆ. ಅದಕ್ಕೂ ಹಿಂದಿನದ್ದಕ್ಕೆ? ಗೊತ್ತಿಲ್ಲ. ಇವಕ್ಕೆ ಮಾರುಕಟ್ಟೆಯಲ್ಲಿ ಹೊಸ ವರುಷದ ಅಡಿಕೆಗಿಂತ ಹೆಚ್ಚಿನ ಬೆಲೆಯಂತೆ. ಕರಿಮೆಣಸಿಗೂ ಹೀಗೇ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಇದೆ. ಉಳಿದದ್ದಕ್ಕೆ ಅಳಿದದ್ದಕ್ಕಿಂತ ಮೌಲ್ಯ ಜಾಸ್ತಿಯೆಂಬ ಸಂಕೇತ ಇದಾಗಿರಬಹುದು. ಕಾಯವಳಿದರೂ ಉಳಿವ ಕೀರ್ತಿಯಂತೆ.

ಹೊಸವರುಷ ಬಂದಾಗಲೆಲ್ಲ ಹಳೆಯ ವರುಷದ ಮೆಲುಕಾಟ ನಡೆಯುತ್ತದೆ: ನೆನಪಿನಲ್ಲಿ ಮಾತ್ರವಲ್ಲ, ಮಾಧ್ಯಮಗಳಲ್ಲಿ, ಚರ್ಚೆಯಲ್ಲಿ ಕೂಡಾ. ಇದು ಹಳೆಯ ವರುಷದ ಕೊನೆಯ ದಿನ, ವಾರ, ತಿಂಗಳಿನಲ್ಲಿ ನಡೆಯುತ್ತಿರುತ್ತದೆ. ಯಾವುದು ಚೆನ್ನಾಗಿತ್ತು, ಯಾವುದು ನೆನಪಿಸಬೇಕಾದದ್ದು ಮತ್ತು ಯಾವುದು ಮರೆಯಬೇಕಾದದ್ದು ಮುಂತಾದ ಅಭಿಪ್ರಾಯಗಳು ಮತ್ತು ಕೆಲವೊಮ್ಮೆ ತೀರ್ಪುಗಳು ಪ್ರಕಟವಾಗುತ್ತವೆ. ಇದು ಕಲೆಯ ಪ್ರಕಾರಗಳಿಗೆ ಮಾತ್ರವಲ್ಲ, ವ್ಯಕ್ತಿಗಳಿಗೂ ವಸ್ತು-ವಿಚಾರಕ್ಕೂ ಅನ್ವಯ. ಲೋಕೋ ಭಿನ್ನ ರುಚಿಃ! ಒಬ್ಬೊಬ್ಬರದ್ದೂ ಒಂದೊಂದು ಅಭಿಪ್ರಾಯ. ಕಳೆದ ವರುಷ ನನ್ನ ಪಾಲಿಗೆ ಸಮೃದ್ಧ ಸಮಯ ಎಂದು ಲಾಭ ಗಳಿಸಿದ ವ್ಯಾಪಾರಿಯೋ, ಅನೇಕ ಪುಸ್ತಕಗಳನ್ನು ಬರೆದ ಲೇಖಕನೋ, ಪ್ರಶಸ್ತಿಯನ್ನು ಪಡೆದವನೋ, ಮಂತ್ರಿಗಿರಿ ಗಿಟ್ಟಿಸಿದವನೋ ಹೇಳಬಹುದು. ಏನೂ ಬರಲಿಲ್ಲ ಎಂದು ಹತಾಶ ನುಡಿಗಳನ್ನು ಹೇಳುವ, ಇಲ್ಲವೇ ಹೇಳದೇ ನಿಡಿದುಸಿರು ಬಿಡುವವರೂ ಇರಬಹುದು.

ಹಳೆಯ ವರುಷ ನಿನಗೇನು ಕೊಟ್ಟಿತು ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಕೊಟ್ಟದ್ದರಲ್ಲಿ ಈಗೇನು ಉಳಿಯಿತು ಎಂಬಾಗ ಮೂರ್ತ ವಸ್ತು/ವಿಚಾರಗಳನ್ನಾದರೂ ಮೇಲೆ ಹೇಳಿದ ಲಾಭ ನಷ್ಟಗಳ ಅಳತೆಗೋಲಿನಲ್ಲಿ ಹೇಳಬಹುದು; ಆದರೆ ಅಮೂರ್ತ ಮನಸ್ಥಿತಿಯನ್ನು ಹೀಗೇ ಎಂದು ಹೇಳುವುದು ಕಷ್ಟ. ಕಳೆದ ವರುಷ ನನಗೆ ಬದುಕಬಲ್ಲ ಧೈರ್ಯ ಕೊಟ್ಟಿದೆಯೆಂದು ಶ್ರೀಮಂತನೂ ಬಡವನೂ ಹೇಳಬಲ್ಲ- ಅವರವರ ದೃಷ್ಟಿಕೋನದ ಆಧಾರದ ಮೇಲೆ. ಮರಳಿಬಾರದ್ದನ್ನು ನೆನಪಿನ ಕಡಲಿನಿಂದ ಹೆಕ್ಕಿತರಬೇಕು. ಅದು ಹಳತಾದಂತೆಲ್ಲ ಆಳದಲ್ಲಿ ಘನೀಭವಿಸುತ್ತದೆ. ಹೊರಗೂ, ಒಳಗೂ. ಹೆತ್ತವರು, ಕರುಳಕುಡಿ, ಒಡಹುಟ್ಟು, ರಕ್ತಸಂಬಂಧಿ, ಅನುಗಾಲದ ಬಂಧು, ಹೀಗೆ ಎಲ್ಲ ಬಗೆಯ ಅಗಲಿಕೆಗೂ ಆರ್ಷೇಯರು ಕಾಲಮಿತಿಹಾಕಿದ್ದಾರೆ. ತಂದೆ ಸತ್ತರೆ ಮೂರು ತಿಂಗಳು, ತಾಯಿ ಸತ್ತರೆ ಒಂದು ವರ್ಷ, ಮಕ್ಕಳು ಅಗಲಿದರೆ ಚಿರಕಾಲ... ಇತರರು ಸತ್ತರೆ..? ನೆನಪಿರುವಷ್ಟು, ನೆನಪಿಡುವಷ್ಟು. ಒಳ್ಳೆಯವರು ಸತ್ತರೆ ಇನ್ನೂ ಕೆಲಕಾಲ ಅವರು ಬದುಕಿರಬಹುದಿತ್ತು ಎಂಬ ಆಶಯ. ಕೆಟ್ಟವರು ಸತ್ತರೆ ‘ಹೋದರಾ, ಸಂತೋಷ..’ ಎಂಬ ಕಹಿ ಭಾವನೆ.

ಕೆಟ್ಟ ವರುಷವೆಂದರೆ ಕೇಡುಗಾಲ. ಅದು ಕಳೆದಾಗ ಕಳೆಯಿತಲ್ಲ ಎಂಬ ಹತಾಶ ನುಡಿಗಳು ಸಾಕಾಗುವುದಿಲ್ಲ. ಏಕೆಂದರೆ ವರುಷದೊಂದಿಗೆ ಅದು ಕಳೆದುಹೋಗುವುದಿಲ್ಲ. ಒಂದೋ ಮುಂದುವರಿಯುತ್ತದೆ; ಇಲ್ಲವೇ ತನ್ನ ಛಾಪನ್ನೊತ್ತುತ್ತದೆ. ಮುಂದುವರಿಯುವುದಿಲ್ಲವೆಂಬ ಖಾತ್ರಿಯೇನು? ಮುಂದುವರಿದರೆ ಹೊಸವರುಷ ದಾಖಲೆಯಲ್ಲಿ ಮಾತ್ರವಿರುತ್ತದೆ. ಹಳೆಯ ವರುಷ ಅದೃಶದಲ್ಲಿ ಹಿಗ್ಗಿಯೋ ಕುಗ್ಗಿಯೋ ಮುಂದುವರಿಯುತ್ತದೆ.

ಭಾರತದಂತಹ ದೇಶದಲ್ಲಿ (ಜಗತ್ತಿನಲ್ಲೂ!) ಹತ್ತಾರು ಹೊಸವರುಷಗಳಿವೆ. ಧರ್ಮ-ಮತ-ಜಾತಿಯನ್ನವಲಂಬಿಸಿ ಹೊಸ ವರುಷ. ಆಧುನಿಕತೆಯು ಈ ನಿಟ್ಟಿನಲ್ಲಿ ನಮ್ಮ ಆಚರಣೆಗಳನ್ನು ನಿಯಂತ್ರಿಸಿದೆ. ಇವೆಲ್ಲ ಒಂದಾಗಿರುವುದು ದಶಂಬರ ಮೂವತ್ತೊಂದು-ಜನವರಿ ಒಂದು ಎಂಬ ಈ ಎರಡು ದಿನ -ದಿನಾಂಕಗಳ ನಡುವೆ. ಇವು ಮತಧರ್ಮ ಪರಂಪರೆಯನ್ನು ಕೊನೆಗೆ ಬಳಲಿಕೆಯನ್ನೂ ಮೀರಿ ನಿಂತ ಉತ್ಸಾಹೀ ಉತ್ಸವಗಳು. ಇವನ್ನು ಪ್ರಜ್ಞಾಪೂರ್ವಕವಾಗಿ ದೂರವಿರಿಸಲು, ಮರೆಯಲು, ಮರೆಸಲು ಇಚ್ಛಿಸಿದವರೂ ಬದಲಿ ಆಯುಧಗಳಿಲ್ಲದೆ ಸುಮ್ಮನಿದ್ದಾರೆ. ಬೇಕೋ ಬೇಡವೋ ವರುಷ ಮುಗಿದಿದೆಯೆಂಬುದನ್ನು ಪ್ರಕಟಿಸುತ್ತಾರೆ. ಇಷ್ಟರ ಮಟ್ಟಿಗೆ ಅದು ಪಾಶ್ಚಾತ್ಯವೋ, ಐರೋಪ್ಯವೋ, ಕ್ರೈಸ್ತರದ್ದೋ, ಎಲ್ಲರೂ ತಮ್ಮ ಅಸ್ಮಿತೆಯನ್ನೂ ಆತ್ಮನಿರ್ಭರತೆಯನ್ನೂ ಮೂಲೆಯಲ್ಲಿಟ್ಟು ಒಪ್ಪಿಕೊಂಡಿದ್ದಾರೆ- ಡಾಲರ್ ಕರೆನ್ಸಿಯಂತೆ. ಕಾಲಮಾನವೂ ಒಂದು ಹಸಿವು. ಹಸಿದವನಿಗೆ ಅನ್ನದ ಬಟ್ಟಲು ಯಾವುದಾದರೇನು? ಯಾರದ್ದಾದರೇನು?

ವಿದ್ಯಾರ್ಥಿಗಳಿಗೆ ಮುಂದೇನು? ಎಂದು ಕೇಳಿದರೆ ಅವರು ಪರೀಕ್ಷೆಯ ಅಂಕಗಳನ್ನು ಮಾತ್ರವಲ್ಲ, ತಮಗಿರುವ ಅವಕಾಶವನ್ನು, ಭವಿಷ್ಯದ ನಿರೀಕ್ಷೆಗಳನ್ನು, ಕಾಲಾನುಕ್ರಮಣಿಕೆಯ ನಿರೀಕ್ಷೆಗಳನ್ನು ಅಳತೆಮಾಡಿ ನೋಡಿ ಹೇಳುತ್ತಾರೆ. ವರುಷ ಬದಲಾದಾಗ ಮನುಷ್ಯ ವಿಚಿತ್ರವಾದ ಚರ್ಯೆಗಳನ್ನೇನೂ ವ್ಯಕ್ತಪಡಿಸುವುದಿಲ್ಲ. ನೋಡೋಣ ಎಂದಷ್ಟೇ ಸಾಮಾನ್ಯ ಪ್ರತಿಕ್ರಿಯೆ.

ಇಷ್ಟಕ್ಕೂ ಕಾಲ ಬದಲಾಗುತ್ತದೆಯೇ? ಕ್ರಿಯೆಯ ಮೌಲ್ಯವನ್ನು ಪ್ರತಿಕ್ರಿಯೆಗಳು ನಿರ್ಧರಿಸುತ್ತವೆ. ಆಧುನಿಕತೆಯ ಬಿಸಿಗೆ ನಾವು ಅನೇಕ ತೊಂದರೆಗಳನ್ನನುಭವಿಸುತ್ತೇವೆಂಬ ಕೊರಗಿದೆ. ಬರ ಬಂದರೆ ನಮ್ಮ ಕಾಲದಲ್ಲಿ ಚೆನ್ನಾಗಿತ್ತು ಎಂದು ಹೇಳುವ ಹಿರಿಯರಿದ್ದಾರೆ. ಆಗಲೂ ಬರಗಾಲ ಬಂದಿದೆಯಲ್ಲ ಎಂದು ಪ್ರಶ್ನಿಸಿದರೆ ಸುಮ್ಮನಾಗುತ್ತಾರೆ. ಕಾಯಿಲೆಗಳು ಹಿಂದೆಯೂ ಇದ್ದವು; ಈಗಲೂ ಇವೆ. ಗುಣಪಡಿಸುವುದು ಅಂದೂ ಇಂದೂ ಸ್ವಭಾವವೇ. ವಿಜ್ಞಾನ ಒಂದು ವೇಗವರ್ಧಕ ಮಾತ್ರ. ಅಂದರೆ ಎಲ್ಲ ಕಾಲದಲ್ಲೂ ಒಳಿತು-ಕೆಡುಕುಗಳಿದ್ದವು. ಅವು ಇಂದಿನಂತೆಯೇ ಕಾಡುತ್ತಿದ್ದವು. ಅವು ಪ್ರಕೃತಿಯೆಂದೂ ದೇವರೆಂದೂ ಕಾಲಮಾನದ ಸಹಜ ಸ್ವಭಾವವೆಂದೂ ತಿಳಿದು ಜನರು ಸುಮ್ಮನಿರುತ್ತಿದ್ದರು. ಕಾಲ ಬದಲಾಗುವುದಿಲ್ಲ. ಬದಲಾಗುವುದು ಜನರು, ಅಂದರೆ ಜನರ ಸ್ವಭಾವ. ಅದು ಪ್ರತಿಕ್ರಿಯೆಯನ್ನು ತಲೆಬಾಗಿ ಸ್ವೀಕರಿಸುತ್ತದೆಯೋ ಅಥವಾ ಸವಾಲೆಂದು ಸ್ವೀಕರಿಸುತ್ತದೆಯೋ ಎಂಬುದನ್ನು ಗಮನಿಸಿದರೆ ಬಹುಪಾಲು ಉತ್ತರ ಸಿಕ್ಕೀತು.

ವರ್ತಮಾನವು ಭೂತದ ಹೆಗಲೇರಿ ನಿಲ್ಲುತ್ತದೆ. ಮುಂದಿನ ವರುಷಕ್ಕೆ ಇಂದಿನ ವರ್ತಮಾನವು ಭೂತವಾಗುತ್ತದೆ. ಯಾವುದನ್ನು ಭವಿಷ್ಯವೆಂದು ಹೇಳಲಾಗುತ್ತದೆಯೋ ಅದು ವರ್ತಮಾನವಾಗಿ ಬಳಿಕ ಭೂತಕ್ಕಿಳಿಯುತ್ತದೆ. ‘ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ’ ಎಂಬ ತ್ರಿಕಾಲಾಪ್ರಜ್ಞೆಯನ್ನು ಪ್ರಜ್ಞಾವಂತರು ಮಾತ್ರ ರೂಢಿಸಿಕೊಳ್ಳುತ್ತಾರೆ.

ಇವೆಲ್ಲದರ ನಡುವೆ ಕಳೆದ ವರುಷ ಹೇಗಿತ್ತು ಎಂಬ ಅವಲೋಕನ ಮಾಡಬಹುದು. ಅದು ಕಿಸೆಗೆ ಕತ್ತರಿ ಹಾಕಿದರೆ ಹರಿತವಾಗಿ ನೆನಪಿನಲ್ಲಿ ಉಳಿಯುತ್ತದೆ. ಸಾಮಾಜಿಕವಾಗಿ ವಿಪರೀತ ತಲ್ಲಣಗಳನ್ನು ಸೃಷ್ಟಿಸಿದರೆ ಕಸಿವಿಸಿಯ ನೆನಪಾಗಿ ಉಳಿಯುತ್ತದೆ. ರಾಜಕೀಯವಾಗಿ ಬಾಧಿಸಿದರೆ ಯಾವಾಗ ಇದರಿಂದ ಮುಕ್ತಿ ಎಂಬ ಚಿಂತೆ ಕಾಡುತ್ತದೆ. ಯಾರೊಬ್ಬರ ಸಾವು-ನೋವು ನಮ್ಮನ್ನು ಬಾಧಿಸಿದರೆ ಅದು ಸುಲಭವಾಗಿ ಆರದಿದ್ದಾಗ ಮನಸ್ಸಿಗೆ ಮಂಕು ಕವಿಯುತ್ತದೆ. ಅದನ್ನು ಮರೆಮಾಚಲು ಜನರು ಅನೇಕ ರೀತಿಯ ಮುಖವಾಡಗಳನ್ನು ಧರಿಸುತ್ತಾರೆ. ತಮ್ಮ ಚಿಂತೆಗೆ ಚಿಂತನೆಯ ಗಿಲಿಟು ಹಚ್ಚಿ ಇಲ್ಲವೇ ಇದೆಲ್ಲ ಸಾರ್ವಕಾಲಿಕ, ಸಾರ್ವತ್ರಿಕ ಎಂಬ ಸಾಮಾನ್ಯೀಕರಣವನ್ನು ಹೊತ್ತು ಸಾಗುತ್ತಾರೆ. ಮರುಕಳಿಸದ ನೆನಪು ಯಾವುದೂ ಅಲ್ಲ; ಯಾವುದೂ ಇಲ್ಲ. ಅದಕ್ಕೆ ಜೀವನ ಮತ್ತು ಜೀವಮಾನವೇ ಮಿತಿ.

ಕಳೆದ ವರುಷ ನೆನಪಿಸಿದ ಅದಕ್ಕೂ ಹಳೆಯ ವರುಷಗಳನ್ನು ನೆನಪಿಸೋಣವೇ? ಅವೆಲ್ಲ ಇಸಿಜಿ ಸೂಚಕದಂತೆ ಏರುತಗ್ಗಿನ ಹಾದಿಯಂತೆ ಕಾಣಿಸುವುದಿಲ್ಲವೇ? ಹತ್ತಾರು ವರುಷಗಳ ಸೂಚ್ಯಂಕವನ್ನು ಗಮನಿಸಿದರೆ ಎಲ್ಲಿ ಎಡವಿದೆವು, ಎಲ್ಲಿ ಗೆದ್ದೆವು, ಎಲ್ಲಿ ಸೋತೆವು ಎಂಬುದನ್ನು ಗಮನಿಸಬಹುದು. ಆ ಹೊತ್ತಿಗೆ ನಮ್ಮ ಬದುಕು ನಮ್ಮದಾಗಿತ್ತೇ, ನಾವು ಅದಕ್ಕೆ ಹೊಣೆಯಾಗಿದ್ದೆವೇ, ಅದನ್ನು ಅಡೆತಡೆಯಿಲ್ಲದೆ ದಾಟುವ ವಿಧಾನ-ನಿಧಾನಗಳನ್ನು ನಾವು ಅರಿತಿದ್ದೆವೇ ಹೀಗೆ ಯೋಚನಾ ಲಹರಿಯನ್ನವಲಂಬಿಸಿ ಬದುಕಿನ ಹಾದಿಯನ್ನು ಚಿತ್ರಿಸಬಹುದು. ಅಲ್ಲಿ ನಮ್ಮನ್ನು ನಾವು ಗುರುತಿಸಿಕೊಂಡರೆ ತೃಪ್ತಿ. ನಮ್ಮ ಹಾಗೆಯೇ ನಡೆವ ಇತರರನ್ನು ನೋಡಬಹುದು; ಅವರಲ್ಲಿ ನಮ್ಮ ಪರಿಚಿತರನ್ನು ಕಾಣಬಹುದು; ಚಿರಪರಿಚಿತರನ್ನು ಗುರುತಿಸಬಹುದು. ತೀರ ಹತ್ತಿರದವರನ್ನು, ಆತ್ಮೀಯರನ್ನು ಕಂಡು ಮನಸಾರೆ ತಣಿಯಬಹುದು; ದಣಿಯಬಹುದು.

ಮತ್ತು ಮುಂದಿನ ವರುಷ ಹೇಗಿದ್ದೀತು ಎಂಬ ಚಿಂತೆ ಯಾಕೆ? ಏರುಹಾದಿ ಯಾದರೆ ವಾಹನದ ಗೇರ್‌ನ್ನು ಬದಲಾಯಿಸಬೇಕಾದೀತು ಅಷ್ಟೇ. ನಮ್ಮ ಕಿಟಿಕಿಗೆ ಎಷ್ಟು ದೂರದ ವರೆಗೆ, ಎಷ್ಟು ವಿಶಾಲವಾಗಿ ಜಗತ್ತು ಕಾಣಿಸುತ್ತದೆಯೋ ಅಷ್ಟನ್ನು ಅನುಭವಿಸಬಹುದು; ಇಷ್ಟೇ ಅಲ್ಲವೇ ಬದುಕು, ಇಷ್ಟೇ ಅಲ್ಲವೇ ಜಗತ್ತು?

ಹೊಸ ವರುಷ ನಮಗಷ್ಟೇ ಹೊಸದು. ಅದು ಹಳೆಯ ವರುಷದ ಹಿಂದೆಯೇ ಇತ್ತು. ತನ್ನ ಪಾಳಿಗೆ ಕಾಯುತ್ತಿತ್ತು. ಆಧುನಿಕತೆಯ ನಡುವೆ ಕಾಲ ಮತ್ತು ನಾಡಿನ ನಡುವೆ ವನ್ಯಜೀವಿಗಳು ಹೊಸವರುಷವೆಂದು ತಮ್ಮ ಬದುಕನ್ನು ಬದಲಾಯಿಸಲಾರವು. ಪ್ರಕೃತಿ ಮುನಿದಾಗ ವಲಸೆಹೋಗಬಹುದು, ಅಷ್ಟೇ. ಅಂತಹ ಬದುಕು ಕಾಲಾತೀತ; ದೇಶಾತೀತ.

ಮನುಷ್ಯ ತಾನೇ ಹಾಕಿಕೊಂಡ ಕೃತಕ ಗಡಿಗುರುತುಗಳನ್ನು ಉಳಿಸಿಕೊಳ್ಳುವುದಕ್ಕೇ ತನ್ನ ಬದುಕನ್ನು ವ್ಯಯಿಸುತ್ತಾನೆ. ಕಾಲ ಕಳೆಯುವುದು ವಾಸ್ತವ. ಹೊಸ ಬರವು ಎಂಬುದು ಭ್ರಮೆ. ಅದಕ್ಕೆ ಬರಹವಿಲ್ಲ; ಬರುತ್ತಿದ್ದೇನೆಂಬ ನಾಮಫಲಕವಿಲ್ಲ. ಇವುಗಳ ನಡುವೆ ಹೊಸ ವರುಷವೆಂಬ ಭ್ರಮೆಯೂ ಒಂದು. ಇರಲಿ. ಇದೂ ಒಂದು ಆಚರಣೆ. ಅದಕ್ಕೆ ವಿಚಾರಣೆಯಿಲ್ಲ. ಅನುಭವ ಮಾತ್ರ. ನಮ್ಮೊಂದಿಗೇ ನಶಿಸುವ ಅನುಭವ. ಆದ್ದರಿಂದ ಹೊಸವರುಷದ ಶುಭಾಶಯಗಳನ್ನು ಹೆತ್ತೋ, ಹೊತ್ತೋ ಸಾಗೋಣ. ಮರಳಿನ ಚೀಲವಾದರೆ ಜೀವನದ ನೀರಿನಲ್ಲಿ ಭಾರವಾದೀತು; ಉಪ್ಪಿನ ಚೀಲವಾದರೆ ಕರಗಿ ಹಗುರಾದೀತು. ಅಷ್ಟನ್ನೂ ಕಾಯೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News