ಹಿಡಿದೆಳೆದ ಮುಡಿ

ಬಹುಮತಕಾರಣವಾಗಿ ಆಡಳಿತಸೂತ್ರ ಹಿಡಿದವರೇ ಹೆಣ್ಣೊಬ್ಬಳ ವಿರುದ್ಧ ಇಂತಹ ಅಸಂಬದ್ಧಕ್ಕೆ ಕಾನೂನನ್ನು ಬಳಸಿಕೊಂಡದ್ದು ಇದೇ ಪ್ರಥಮವಿರಬಹುದು ಅಥವಾ ಅಪರೂಪ. ಇಷ್ಟು ಮಾತ್ರ ಸತ್ಯ: ನೀತಿಯನ್ನು ಘೋಷಿಸುವವರು ಬಹುತೇಕ ಅನೀತಿವಂತರೇ. ಭೂತ ಗೀತೆಯನ್ನು ಓದಿದಂತೆ ಎಂಬ ಗಾದೆ ಸೃಷ್ಟಿಯಾದದ್ದು ಇಂತಹ ಹಿನ್ನೆಲೆಯಲ್ಲೇ.

Update: 2023-12-14 05:17 GMT

Photo: ANI

2024ರ ಲೋಕಸಭಾ ಚುನಾವಣೆಯು ಯುಗಪರಿವರ್ತನೆಯ ಚುನಾವಣೆಯೇನಲ್ಲ. ಆದರೂ ‘ಕುರುಕ್ಷೇತ್ರವೆಂಬ ಮಹಾರಣರಂಗದಲ್ಲಿ...’ ಎಂಬಂತೆ ರಾಜಕಾರಣವು ಸದ್ದುಮಾಡುತ್ತಲಿದೆ; ಮಾಧ್ಯಮಗಳು ಸುದ್ದಿ ಮಾಡುತ್ತಲಿವೆ. ಇತಿಹಾಸ ಮತ್ತು ಸಾಹಿತ್ಯಗಳನ್ನು ಅವಲೋಕಿಸಿದರೆ ‘ರಾಜಾಃ ಕಾಲಸ್ಯ ಕಾರಣಂ’ ಎಂಬ ಮಾತು ಆಗಾಗ ಸತ್ಯವೆನಿಸುತ್ತದೆ. ರಾಜ ಎಂದರೆ ಕಿರೀಟ ಹೊತ್ತವನೆಂದೇ ಅರ್ಥವಿಸಬೇಕಾಗಿಲ್ಲ. ಆಡಳಿತದ ಹೊಣೆ ಹೊತ್ತವನು ಎಂದಷ್ಟೇ ಅರ್ಥ. ಎಲ್ಲ ಬಗೆಯ ಸಾಮಾಜಿಕ ಒಳಿತು-ಕೆಡುಕುಗಳಿಗೆ ಆಡಳಿತವೇ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಕಾರಣವಾಗಿರುತ್ತದೆ.

ಪುರಾಣಗಳು ಇತಿಹಾಸಗಳಲ್ಲ. ಆದರೂ ಅವು ಯಾವುದೋ ಕಾಲದ ಸಾಮಾಜಿಕ ಅಳತೆಗೋಲುಗಳನ್ನು, ಮೌಲ್ಯಗಳನ್ನು ಕಂಡು ಕೇಳಿ ಸಾಹಿತ್ಯೀಕರಣಕ್ಕೊಳಗಾಗಿ ಪರಿಷ್ಕರಣೆಗೊಂಡ ಸತ್ಯಗಳು. ವಿಶೇಷವೆಂದರೆ ರಾಮಾಯಣ-ಮಹಾಭಾರತವನ್ನು ರಚಿಸಿದ ವಾಲ್ಮೀಕಿ-ವ್ಯಾಸರು ಮೌಲ್ಯಗಳ ದೃಷ್ಟಿಯಿಂದ ನಮ್ಮ ನಾಯಕರಾಗಬೇಕಿತ್ತು. ಆದರೆ ಅವರು ರಚಿಸಿದ ಕೃತಿಗಳು ಎಷ್ಟು ಶಕ್ತವಾಗಿದ್ದವೆಂದರೆ ಅವು ಇಲ್ಲದ ಇರವನ್ನು ಸೃಷ್ಟಿಸಿದವು. ರಾಮ-ಕೃಷ್ಣರು ದೇವರುಗಳಾದರು. ರಾಮಾಯಣವು ಅಯೋಧ್ಯೆಯ ಕಥೆಯಾದರೂ ಅದೇ ಕಾಲದಲ್ಲಿ ಎಲ್ಲ ಬಗೆಯ ಜನರೂ ಇದ್ದರು ಮತ್ತು ಅವರವರ ಕ್ಷೇತ್ರದಲ್ಲಿ ಸಾರ್ವಭೌಮರಾಗಿದ್ದರು. ರಾಮನೊಂದಿಗೆ ವೈರವಿಲ್ಲದ ಮತ್ತು ಸಂಬಂಧಿಯೇ ಆದ ಜನಕರಾಜನಾದರೂ, ಕೇಕಯ, ಕೋಸಲ ರಾಜರಾದರೂ, ವಾಲಿಯಾದರೂ, ರಾವಣನಾದರೂ ಸರಿಯೆ. ಕಾಲದೊಂದಿಗೆ ಮೇಲಾಟದ ಸ್ಪರ್ಧೆಯಲ್ಲಿ ಗೆದ್ದವರು ಕಥಾನಾಯಕರಾದರು. ಒಂದು ವೇಳೆ ರಾಮಾಯಣದಲ್ಲಿ ರಾವಣನೋ ವಾಲಿಯೋ ಅಥವಾ ಇನ್ಯಾರೋ ರಾಮನನ್ನು ಸೋಲಿಸಿದ್ದರೆ ಇಂದು ರಾಮನ ಸುತ್ತ ಅವತಾರದ ಆರೋಪವನ್ನು ನಿರೂಪಿಸಿ ನಮ್ಮ ಧರ್ಮ, ಮತ ಗಿರಕಿಹೊಡೆಯುತ್ತಿರಲಿಲ್ಲ ಅನ್ನಿಸುತ್ತದೆ. ಸಾವು ಇತರರಿಗೆ ‘ಮೃತ್ಯು’ವಾದರೆ, ಕಥಾನಾಯಕರ ಮಟ್ಟಿಗೆ ‘ನಿರ್ಯಾಣ’ವಾಗುತ್ತದೆ. ಹಾಗೆಯೇ ಮಹಾಭಾರತದಲ್ಲಿ ಶಂತನುವಿನಿಂದ ಜನಮೇಜಯನವರೆಗೆ ಯಾರು ಗೆದ್ದರೋ ಅವರ ಇತಿಹಾಸವೇ ಪುರಾಣವಾಯಿತು. ಕೃಷ್ಣ ತನ್ನ ಕಾಲದುದ್ದಕ್ಕೂ ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಉಳಿದು ಕೌರವ-ಪಾಂಡವರ ನಡುವಣ ಸಂಬಂಧ ಹಳಸಿದಾಗ ಧರ್ಮದ ಹೆಸರಲ್ಲಿ ಪಾಂಡವಪಡೆ ಸೇರಿ ಕುರುಕ್ಷೇತ್ರದ ಶ್ಮಶಾನ ನಿರ್ಮಾಣವಾದೊಡನೆ ಅಲ್ಲಿಂದ ಕಾಲುಕಿತ್ತು ಆನಂತರ ಗತಿಸಿದ. ಅವನಿಗೂ ಒಂದು ಅವತಾರ ಪ್ರಾಪ್ತಿಯಾಯಿತು. ಈ ಮಂದಿಯ ಚರಿತ್ರೆ, ಪುರಾಣದ ಕೆಲವು ಮೌಲ್ಯಗಳು ಉಳಿದುಕೊಂಡವು. ಸತ್ಯ, ಧರ್ಮ, ರಾಜನೀತಿ ಇವೆಲ್ಲ ಬಳಕೆಯಾಗಬೇಕಾದ ಮೌಲ್ಯಗಳಾದರೂ ಅವು ವ್ಯಕ್ತಿಗತ ಅಥವಾ ಒಂದು ಗೊತ್ತಾದ ಪಂಗಡಗಳ ಹಿತವನ್ನು ಬೇಕಾದ ರೀತಿಯಲ್ಲಿ, ಅನುಕೂಲವಾದ ರೀತಿಯಲ್ಲಿ ಅರ್ಥವಿಸುವ ಮೌಲ್ಯಗಳಾಗಿ ಉಳಿದುಕೊಂಡವು. ಸಮಾಜದ ಸತ್ಯ ಮತ್ತು ಧರ್ಮವು ‘ಬಹುಜನ ಹಿತಾಯ, ಬಹುಜನ ಸುಖಾಯ’ವಾಯಿತೇ ವಿನಾ ಈ ಮೌಲ್ಯಗಳ ಹಾದಿಯಲ್ಲಿ ಸಾಗಲೇ ಇಲ್ಲ. ಹೀಗಾಗಿ ಹೆಚ್ಚು ಜನರು ಯಾವುದನ್ನು ಹೇಳಿದರೋ ಅದೇ ಗೆದ್ದಿತು ಮತ್ತು ಅದೇ ಸತ್ಯವೆಂಬಂತೆ ಪ್ರತಿಪಾದಿಸಲ್ಪಟ್ಟಿತು ಹಾಗೂ ಅಂಗೀಕರಿಸಲ್ಪಟ್ಟಿತು.

ರಾಮಾಯಣ ಮತ್ತು ಮಹಾಭಾರತಗಳು ಏಕಮತಾವಲಂಬಿಗಳ ಕಥೆ. ಅಲ್ಲಿನ ದೇವರುಗಳು ಎರಡೂ ಪಕ್ಷಗಳ ಸೂತ್ರಹಸ್ತರು. ಒಳ್ಳೆಯದನ್ನೂ, ಕೇಡನ್ನೂ ಸೃಷ್ಟಿಸಿ ವಾಸ್ತವದ ರಂಗಮಂದಿರದಲ್ಲಿ ಪ್ರದರ್ಶನಕ್ಕೆ ಅವಕಾಶವನ್ನು ಕಲ್ಪಿಸಿದರು. ಹೀಗೇಕೆ ಆಯಿತೆಂಬ ಪ್ರಶ್ನೆಗೆ ವಿದ್ವಾಂಸರಲ್ಲೂ ಉತ್ತರವಿಲ್ಲ. ಉತ್ತರ ಸಿಕ್ಕದಾಗ ‘ಕರ್ಮ’ ಇಲ್ಲವೇ ‘ದೈವನಿಯಮ’ ಮುಂತಾದ ಅಸಂಗತ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಮನುಷ್ಯನ ವೈಪರೀತ್ಯಗಳಿಗೆ ಧರ್ಮವಾಗಲೀ, ಸತ್ಯವಾಗಲೀ, ಸಂಬಂಧಗಳಾಗಲೀ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ರಾಮಾಯಣವೂ, ಮಹಾಭಾರತವೂ ನೇರ ನಿರೂಪಕಗಳು. ಕೊನೆಗೂ ಶಕ್ತಿಯೇ ಸಾರ್ವಭೌಮ ಎನ್ನಿಸುತ್ತದೆಯಾದರೂ ಅದನ್ನು ಲೋಕದ ಬಹುಜನ ಸ್ವೀಕರಿಸಿದ್ದರಿಂದಲ್ಲವೇ ಅವು ಮೌಲ್ಯಗಳಾಗಿ ಉಳಿದದ್ದು? ಒಟ್ಟಾರೆ ಸತ್ಯವೆಂದರೆ ಸಮಾಜದ ಬಹುಜನರು ಕಡಿಮೆ ಜನರನ್ನು ನಿಯಂತ್ರಿಸುತ್ತಾರೆ ಮತ್ತು ಸಾಮಾಜಿಕ ನಿಯಮಗಳು ಹೀಗೆಯೇ ಇರಬೇಕೆಂದು ವಿಧಿಸುತ್ತಾರೆ. ಅದನ್ನು ಪಾಲಿಸಿದರೆ ಸರಿ, ಇಲ್ಲವಾದರೆ ಅದರ ಪಾಲನೆಗೆ ತಮ್ಮ ಶಕ್ತಿಯನ್ನು ಹೇರುತ್ತಾರೆ. ಈ ದಮನ ನೀತಿಯಲ್ಲಿ ಉಳಿದವರು ಮುಂದಣ ಜಗತ್ತಿಗೆ ಒಂದೋ ತಮ್ಮ ಬಾಳ್ವೆಯ ನಿರರ್ಥಕತೆಯನ್ನು ಅಥವಾ ಬೌದ್ಧಿಕವಾಗಿ ಅಳಿದರೂ ಸರಿಯೆ, ಭೌತಿಕವಾಗಿ ಉಳಿಯಬೇಕಾದರೆ ಹೇಗೆ ಬದುಕಬೇಕೆಂಬ ಪಾಠಹೇಳುತ್ತಾರೆ.

ಯಾವುದೂ ಶಾಶ್ವತವಲ್ಲವೆಂದು ಮತ್ತು ಸತ್ಯವಲ್ಲವೆಂದು ತಿಳಿಯಬೇಕಾಗಿದ್ದ ಸಮಾಜ ಕೆಲವೇ ನಿರರ್ಥಕಮತಿಗಳ ಮಾತಿಗೆ ತುತ್ತಾಗುವುದು ದುರಂತ. ಇದರಿಂದಾಗಿ ಆದದ್ದೇನೆಂದರೆ ಯಾರು ಬಹುಮತವನ್ನು ಪಡೆಯುತ್ತಾರೋ ಅವರ ಮಾತೇ ಫಲಿಸಲಾರಂಭಿಸಿದ್ದು; ಅವರ ಅಭಿಪ್ರಾಯಗಳೇ ಸತ್ಯವೆಂದು ಬಿಂಬಿಸಲ್ಪಟ್ಟದ್ದು. ಇದನ್ನು ಪ್ರಜಾಪ್ರಭುತ್ವವೆಂದು ಕರೆಯಲಾಯಿತು. ಪ್ರಜಾಪ್ರಭುತ್ವ ಸರಕಾರಗಳು ಅಧ್ಯಕ್ಷೀಯವೆಂಬ ಒಂದು ಕೇಂದ್ರಾಧಿಕಾರ ಆಡಳಿತ ವ್ಯವಸ್ಥೆಯನ್ನು ಅಥವಾ ಸಂಸದೀಯವೆಂಬ ಪ್ರತಿನಿಧಿ ಸ್ವರೂಪದ ಆಡಳಿತ ವ್ಯವಸ್ಥೆಯನ್ನೂ ಹೊಂದಿವೆ. ಇವುಗಳಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ವ್ಯತ್ಯಾಸಗಳನ್ನು ಗುರುತಿಸಲು ಕಷ್ಟ. ಏಕೆಂದರೆ ಎರಡರಲ್ಲೂ ಅತೀ ಒಳ್ಳೆಯ ಮತ್ತು ಅತೀ ಕೇಡಿನ ವ್ಯವಸ್ಥೆಗಳನ್ನು ಕಾಣಬಹುದು.

ಈಚೆಗೆ ಭಾರತದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಒಂದು ಉಪನ್ಯಾಸದ ‘‘ಬಹುಮತವು ತನ್ನ ಇಚ್ಛೆಗಳನ್ನು ಈಡೇರಿಸಿಕೊಳ್ಳಬಹುದಾದರೂ ಅಲ್ಪಮತವು ಸದಾ ತನ್ನ ಅಭಿಪ್ರಾಯಗಳನ್ನು ಹೇಳುತ್ತಲೇ ಇರಬೇಕು’’ ಎಂದಿದ್ದಾರೆ. ಇದರ ಸೂಚನೆ ಮಹತ್ವದ್ದು. ಏಕೆಂದರೆ ಬಹುಮತದ ನಿರ್ಧಾರವು ವರ್ತಮಾನಕ್ಕೆ ಮಾತ್ರವಲ್ಲ, ಭವಿಷ್ಯಕ್ಕೂ ಮಾರಕವಾಗಿ ಪರಿಣಮಿಸಬಹುದು. ತಾವು ಹೇಳಿದ್ದೇ ಸತ್ಯವೆಂದೂ ತಾವು ಮಾಡಿದ್ದೇ ಸರಿಯೆಂದೂ ಬಹುಮತ ಅಥವಾ ಅದರ ಪ್ರತಿನಿಧಿಗಳು ಹೇಳುವುದು ಅತ್ಯಂತ ಸಹಜ.

ಆದರೆ ಸಮಸ್ಯೆ ಬರುವುದು ಈ ಬಹುಮತೀಯರು ತಮ್ಮ ಬಹುಮತದ ಸಾಮರ್ಥ್ಯವನ್ನು ಶೋಷಣೆಯ ಆಯುಧವಾಗಿ ಬಳಸಿ ಅಶಕ್ತನನ್ನು ಬಹುಮತದ ಮರಕ್ಕೆ ಕಟ್ಟಿಹಾಕಿ ಥಳಿಸಿದಂತೆ. ಆತ ಅಸಹಾಯಕ. ಭೂಗತ ಜಗತ್ತಿನಲ್ಲಿ ಮಾತ್ರ ನಡೆಯುತ್ತಿದ್ದ ಇಂತಹ ಕ್ರೌರ್ಯಗಳು ಈಗ ನೆಲದಿಂದ ಮೇಲೆದ್ದು ಬಂದು ಎಲ್ಲೆಡೆ ನಾಗರಿಕತೆಯ ನಡುವೆ ವಿಜೃಂಭಿಸುತ್ತಿವೆ. ಇದಕ್ಕೆ ಬಹುಮತವೇ ಅರ್ಥವಿಸುವ ಕಾನೂನಿನ ಬೆಂಬಲ ಸೃಷ್ಟಿಯಾಗುತ್ತದೆ. ಬಲಿಪಶುಗಳಿಗೆ ಶೋಷಕರ ವಿರುದ್ಧ ಶಾಪ ಹಾಕುವುದರ, ಒಳ್ಳೆಯ ಕಾಲದ ಆಗಮನಕ್ಕಾಗಿ ಹತಾಶೆಯಿಂದ ಕಾಯವುದಲ್ಲದೆ ಬೇರೆ ಗತಿಯಿಲ್ಲ.

ಇದನ್ನು ಎರಡು ಮಹಾಯುದ್ಧಗಳಲ್ಲಿ ನೋಡಲಾಗಿದೆ. ಮಿತ್ರರಾಷ್ಟ್ರಗಳೂ ನಿರ್ದಯವಾಗಿ ವರ್ತಿಸಿರಬಹುದು; ಆದರೆ ಇತಿಹಾಸ ಯಾವತ್ತೂ ಗೆದ್ದವರದ್ದೇ. ಆದ್ದರಿಂದ ವೈರಿರಾಷ್ಟ್ರಗಳ ನಡೆ ಯಾವತ್ತೂ ತಪ್ಪೆಂದು ನಿರೂಪಿಸಬಹುದು. ಈಗ ನಡೆಯುತ್ತಿರುವ ರಶ್ಯ-ಉಕ್ರೇನ್, ಇಸ್ರೇಲ್-ಫೆಲೆಸ್ತೀನ್ ನಡೆಗಳು ಇದಕ್ಕೆ ಜೀವಂತ (ಅಥವಾ ಸಾಯುತ್ತಿರುವವರ!) ಸಾಕ್ಷಿ. ಜಗತ್ತಿನ ಶಕ್ತರಾಷ್ಟ್ರಗಳು ಇಸ್ರೇಲಿನ ಕ್ರಮಗಳು ಸರಿಯೆಂದು ಹೇಳಿದರೆ ಇತರ ಶಕ್ತಿಹೀನ ರಾಷ್ಟ್ರಗಳು ಒಪ್ಪದೇ ಗತ್ಯಂತರವಿಲ್ಲ. ಭಾರತ ವಿಶ್ವಸಂಸ್ಥೆಯ ಅಂಗಣದಲ್ಲಿ ಇಂತಹ ಸಂದರ್ಭಗಳಲ್ಲಿ ನಡೆದುಕೊಂಡ ರೀತಿಯು ಘೋಷಿತ ಆತ್ಮನಿರ್ಭರ ನೀತಿಗೆ ವಿರುದ್ಧವಾಗಿದೆ.

ಬಹುಮತದ ವಿಕೃತ ಪ್ರದರ್ಶನವು ನಮ್ಮ ಆಡಳಿತದಲ್ಲಿ ನಡೆಯುತ್ತಿರುವುದು ನಿತ್ಯ ಕಾಣುವ ವಾಸ್ತವ. ಬಹುಮತವೇ ಮೌಲ್ಯವಾದಾಗ ಇವೆಲ್ಲ ಸಹಜ. ಇದರ ವಿರುದ್ಧ ನಡೆಯುವ ಹೋರಾಟವು ಆಕ್ರಂದನಕ್ಕಿಂತ ಹೆಚ್ಚೇನೂ ಆಗದು. ಹೇಳುತ್ತಲೇ ಇರಬೇಕೆಂಬ ಮನದಾಳದ ಛಲದಿಂದಾಗಿ ಅನೇಕರು ಅಭಿವ್ಯಕ್ತಿಸುತ್ತಾರೆ. ಆದರೆ ಬಹುಮತವನ್ನು ಬೆಂಬಲಿಸದಿದ್ದರೂ ತಮಗೆ ಅಪಾಯ ಬರಬಹುದೆಂಬ ಕಾರಣಕ್ಕಾಗಿ ಮೌನತಾಳುವ, ಅಥವಾ ಗುಂಪಿನೊಂದಿಗೆ ಗೋವಿಂದ ಹೇಳುವ ಮಂದಿಯೇ ನೈಜ ಖಳನಾಯಕರು.

ಮೊನ್ನೆ ಮೊನ್ನೆ ಪ್ರತಿಪಕ್ಷವೊಂದರ ಮಹಿಳಾ ಸಂಸದರೊಬ್ಬರನ್ನು (ತೃಣಮೂಲ ಕಾಂಗ್ರೆಸಿನ ಮಹುವಾ ಮೊಯಿತ್ರಾ) ಲೋಕಸಭೆಯಿಂದ ಉಚ್ಚಾಟಿಸಲಾಯಿತು. ಈ ನಿರ್ಧಾರವನ್ನು ಸಂಸತ್ತಿನ ‘ನೀತಿಸಮಿತಿ’ ಕೈಗೊಂಡು ಅದನ್ನು ಸಭಾಪತಿಯವರಿಗೆ ಸಲ್ಲಿಸಿ ಧ್ವನಿಮತದಲ್ಲಿ ಸ್ವೀಕರಿಸಲಾಯಿತು. ನಮ್ಮ ಟಿ-20 ಕ್ರಿಕೆಟ್ ಪಂದ್ಯವೂ ಇಷ್ಟು ಬೇಗ ನಡೆಯುವುದಿಲ್ಲ. ‘ತೋಳ-ಕುರಿಮರಿ’ ಕಥೆಯಂತೆ ಎಲ್ಲವೂ ಕೆಲವೇ ದಿನಗಳಲ್ಲಿ ಮುಗಿಯಿತು. ಇದಕ್ಕೂ ಮೊದಲು ನೀಡಿದ ದೂರುಗಳನ್ನು ಶೈತ್ಯಾಗಾರದಲ್ಲಿ ಭದ್ರವಾಗಿಡಲಾಗಿದೆ. ಏಕೆಂದರೆ ಅವೆಲ್ಲವೂ ಆಡಳಿತಪಕ್ಷದ ಸಂಸದರ ವಿರುದ್ಧ. ಪ್ರತಿಪಕ್ಷದವರೇ ಆದರೂ ಅವರು ಮಹಿಳೆಯೆಂಬುದನ್ನು ಆಡಳಿತಪಕ್ಷದ ಮಹಿಳೆಯರೂ ಮರೆತದ್ದು ಶೋಚನೀಯ. ರಾಜಕೀಯ ಸೇರಿದ ಮೇಲೆ ಲಿಂಗಪರಿವರ್ತನೆಯಾದವರಂತೆ ಅಥವಾ ಲಿಂಗರಹಿತವಾದವರಂತೆ ಆಡಳಿತಪಕ್ಷದ ಮಹಿಳೆಯರೂ ಈ ವಿಚಾರದಲ್ಲಿ ಭಾಗಿಯಾದರು. ಮಹಿಳೆಯರನ್ನು ತಾಯಿಯಂತೆ, ದೇವಿಯಂತೆ ಕಾಣುವ, ಭಾಷಣ ಬಿಗಿಯುವ, ಆಡಳಿತಪರಿವಾರ ಈ ಸಂದರ್ಭದಲ್ಲಿ ಎಲ್ಲವನ್ನೂ ಮರೆಯಿತು.

ಚಳಿಗಾಲದ ಅಧಿವೇಶನದಲ್ಲಿ ಬಹುಮತೀಯರು ನಡೆಸಿದ ‘ಅರ್ಥಪೂರ್ಣ’ ಕ್ರಮವೆಂದರೆ ಇದೊಂದೇ. ಈಗ ಈ ಸಂಸದೆ ತಾನು ಇನ್ನಷ್ಟು ಬಹುಮತದಿಂದ ಗೆದ್ದುಬಂದು ಮತ್ತೆ ಸಂಸತ್ತನ್ನು ಪ್ರವೇಶಿಸುವುದಾಗಿ ಘೋಷಿಸಿದ್ದಾರೆ; ತಾಂತ್ರಿಕವಾಗಿ ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಿದ್ದಾರೆ. ರಾಹುಲ್‌ಗಾಂಧಿ ಅನರ್ಹತೆಯ ಪ್ರಕರಣದಲ್ಲಿ ಒಂದು ಕ್ಷೇತ್ರದ ಮತದಾರರ ಪ್ರತಿನಿಧಿಯನ್ನು ಸಂಸತ್ತಿನಿಂದ ಹೊರಗಿರಿಸುವುದು ಪ್ರಜಾತಂತ್ರವನ್ನೂ ಅದರ ಜೀವನಾಡಿಯಾದ ಚುನಾವಣೆಯನ್ನೂ ಉಲ್ಲಂಘಿಸಿದಂತೆ ಎಂಬ ತತ್ವವನ್ನು ಇಲ್ಲೂ ಅನುಸರಿಸಿದರೆ ಈ ಸಂಸದೆಗೆ ತಕ್ಷಣದ ಪರಿಹಾರ ಸಿಗಬಹುದು. ಆದರೆ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಇದೇನೂ ಪರಿಣಾಮ ಬೀರದು ಎಂದು ಹೇಳಿದರೆ ಉಚ್ಚಾಟಿತ ಸಂಸದೆಗೆ ಹೊಸ ಚುನಾವಣೆಯೇ ಗತಿ.

ಸಂಸತ್ತಿನ ನೀತಿಸಮಿತಿ ಕ್ರಮಬದ್ಧವಾಗಿ ಕಲಾಪಗಳನ್ನು ನಡೆಸಿದರೆ ಪ್ರಾಯಃ ಬೆರಳೆಣಿಕೆಯ ಸಂಸದರನ್ನೂ ಒಳಗೊಳ್ಳಲು ಮತ್ತು ಅಲ್ಲಿಗೆ ಆಯ್ಕೆಯಾಗಲು ಸಾಧ್ಯವಾಗದು. ಚುನಾವಣಾ ಆಯೋಗವೇ ಕಣ್ಮುಚ್ಚಿ ಕುಳಿತಿರುವಾಗ, ನ್ಯಾಯಾಲಯಗಳು ತಾಂತ್ರಿಕತೆಯಿಂದ ಬಳಲುತ್ತಿರುವಾಗ, ಅರ್ಹತೆಯೆಂಬುದು ಒಂದು ಪ್ರಹಸನ. ಕೋಟ್ಯಧಿಪತಿಗಳಷ್ಟೇ ಸಂಸತ್ತಿಗೆ ಪ್ರವೇಶಪಡೆಯವುದನ್ನು ನೋಡಿದರೆ ತಿರುಪತಿಯ ವಿಶೇಷ ದೇವದರ್ಶನ ಏನೂ ಅಲ್ಲ. ಸಂಸತ್ತಿನ ಸದಸ್ಯತನವನ್ನು (ಶಾಸನ ಸಭೆಗಳ ಸದಸ್ಯತನವನ್ನೂ) ಹರಾಜಿಗೊಡ್ಡಿದಂತಿರುವ ನಮ್ಮ ಚುನಾವಣೆಗಳು ಏನನ್ನು ಸಾಧಿಸಹೊರಟಿವೆಯೆಂಬುದು ಅರ್ಥವಾಗದು. ಆಡಳಿತ ಅಂದರೆ ಅದರ ಪ್ರಮುಖರು ತಾವು ಯಾವುದನ್ನು ಇಷ್ಟಪಡುತ್ತಾರೋ ಅದನ್ನು ಸತ್ಯವೆಂದು ಹೇಳುತ್ತಾರೆ ಮತ್ತು ಜನರು ಅದನ್ನು ನಂಬಬೇಕೆಂದು ಬಯಸುತ್ತಾರೆ. ಜನರೂ ಅಷ್ಟೇ: ಯಾವುದು ಆರಾಮವೋ ಅದನ್ನು ಸುಖವೆಂದು ಭಾವಿಸುತ್ತಾರೆ. ಆಡಳಿತವನ್ನು ಬೆಂಬಲಿಸುವುದು ಸುಖವಾಗಿರುವಾಗ ಅದನ್ನು ಟೀಕಿಸಹೊರಡುವುದು ಮೂರ್ಖತನವೆಂದು ಸಾಮಾನ್ಯ ಧೂರ್ತರಿಗೂ ಗೊತ್ತಿದೆ. ಹಾಗೆ ನೋಡಿದರೆ ಕಠಿನ ಪರಿಸ್ಥಿತಿಗಳಲ್ಲಿ ದೇಶವನ್ನು, ಸಮಾಜವನ್ನು ಇಕ್ಕಟ್ಟಿನ, ದುರ್ಭರ ಅಪಾಯಗಳಿಂದ ಪಾರುಮಾಡುವವರಲ್ಲಿ ಬಹುಪಾಲು ಅವಿದ್ಯಾವಂತರೇ. ವಿದ್ಯಾವಂತರಲ್ಲಿ ಕೆಲವರು ಸಾಧಕರು; ಉಳಿದವರು ಸಮಯ ಸಾಧಕರು.

ಮತ್ತೆ ಪುರಾಣಗಳೇ ನಮ್ಮನ್ನು ಕಾಯಬೇಕು; ಕನಿಷ್ಠ ನೆನಪಾಗಬೇಕು. ದಕ್ಷಾಧ್ವರದಲ್ಲಿ ಅಳಿಯ ಶಿವನಿಗೆ ಆಹ್ವಾನ ನೀಡದೆ ಮಗಳು ದಾಕ್ಷಾಯಿಣಿಯನ್ನು ಅವಮಾನಿಸಲಾಯಿತು. ಆಕೆ ಅಗ್ನಿಪ್ರವೇಶಮಾಡಿದಳು. ರಾಮಾಯಣದ ಕೈಕೆಯಿಯ ಪ್ರಭಾವ ಮತ್ತು ಹಠವು ದೊರೆ ದಶರಥನನ್ನೇ ಬಲಿತೆಗೆದುಕೊಂಡಿತು. ಮಹಾಭಾರತದ ಅಂಬೆ ಅವಮಾನಸರಪಳಿಗೆ ಬಲಿಯಾಗಿ ಬೆಂಕಿಗೆ ಬಲಿಯಾದಳು. ದುರ್ಯೋಧನನ ಸಂಸತ್ತಿನಲ್ಲಿ ದ್ರೌಪದಿಯ ವಸ್ತ್ರಾಪಹಾರಯತ್ನ ನಡೆದು ದುಃಶಾಸನನಿಂದ ಆಕೆಯ ಮಾನಹರಣ ಸಂಭವಿಸಿದಾಗ ಧರ್ಮ ಮತ್ತು ಸತ್ಯದ ಹಂಗಿಗೆ ಕಟ್ಟುಬಿದ್ದ ಧರ್ಮರಾಯನ ಕೋಟೆಯೊಳಗೆ ಆತನ ತಮ್ಮಂದಿರು ಸಿಕ್ಕಿಬಿದ್ದು ಮೌನವಾದಾಗ ಕೌರವನೂ ಆತನ ಸಚಿವಸಂಪುಟದವರೂ, ಮಾರ್ಗದರ್ಶನ ಮಂಡಳಿಯಂತಿದ್ದ ಭೀಷ್ಮ, ದ್ರೋಣ, ವಿದುರ, ಕೃಪರೇ ಮುಂತಾದ ಹಿರಿಯರೂ ಈ ಅನ್ಯಾಯವನ್ನು ನಿಯಂತ್ರಿಸದಾದರು. ಇವೆಲ್ಲವನ್ನೂ ನಾಚಿಸುವಂತೆ ಅಂಧನೃಪಾಲ ಧೃತರಾಷ್ಟ್ರ ಭೂಪತಿ ಕುಳಿತಿದ್ದರೆ ಕಣ್ಣಿಗೆ ಬಟ್ಟೆಕಟ್ಟಿಕೊಂಡು ನ್ಯಾಯದೇವತೆಯಂತೆ ಕುಳಿತ ಗಾಂಧಾರಿ ಕಣ್ಣಪಟ್ಟಿಯನ್ನು ತೆಗೆಯದೆ ಮುಂದಿನ ಭೀಕರ ಪರಿಣಾಮಗಳಿಗೆ ಕಾರಣಳಾದಳು. ಅವಮಾನಿತೆ ದ್ರೌಪದಿಯು ಕೊನೆಗೆ (ತನ್ನ) ‘‘ಬಿಚ್ಚಿದ ಮುಡಿಯನ್ನು ಹಿಡಿದೆಳೆದ ದುಃಶಾಸನನನ್ನು ಸಾಯಿಸಿ ಅವನ ಕರುಳಜಡೆಯಿಂದ ತನ್ನ ಮುಡಿಯನ್ನು ಅಲಂಕರಿಸುವವರೆಗೂ (ತಾನು) ಈ ಬಿಚ್ಚಿದ ಮುಡಿಯನ್ನು ಕಟ್ಟುವುದಿಲ್ಲ’’ (ಆಕರ: ಪಂಪಭಾರತ) ಎಂಬ ಶಪಥ ಮಾಡಬೇಕಾಯಿತು. ಇದಕ್ಕೆ ಪೂರಕವಾಗಿ ಭೀಮನೂ ಪ್ರತಿಜ್ಞೆಮಾಡಿದ ಎಂದು ಕಥೆ ಮುಂದುವರಿಯುತ್ತದೆ. ಆದರೆ ಆ ಆಸ್ಥಾನದಲ್ಲಿ ಬಹುಮತ ಕೌರವರದ್ದು. ತಮ್ಮ ಕುಟುಂಬದವಳು ಎಂದು ಅಲ್ಲಿನ ಮಹಿಳೆಯರ್ಯಾರೂ ತಿಳಿಯದಾದರು. ಇದರ ಪರಿಣಾಮವನ್ನು ಕುರುಕ್ಷೇತ್ರದಲ್ಲಿ ಅನುಭವಿಸಿದರು. ತಮಿಳು ಕಾವ್ಯವೊಂದರಲ್ಲಿ ಕನ್ನಗಿಯೆಂಬ ಹೆಣ್ಣು ತನ್ನ ಪತಿ ಅನ್ಯಾಯವಾಗಿ ವಧಿಸಲ್ಪಟ್ಟುದರ ಕ್ಷೋಭೆಯಲ್ಲಿ ಮಧುರೆಯೇ ಸುಟ್ಟುಹೋಗಲಿ ಎಂದು ಶಾಪವಿತ್ತಾಗ ಆ ನಗರ ಸುಟ್ಟುಹೋಯಿತೆಂಬ ಐತಿಹ್ಯವಿದೆ. ಇದು ಸತ್ಯವಿರಲಿ, ಇಲ್ಲದಿರಲಿ, ಅಪರಾಧಿಗಳಲ್ಲಿ ಪಾಪಪ್ರಜ್ಞೆಯನ್ನು ಮೂಡಿಸಲು ಸಾಧ್ಯವಾಗಬಹುದು.

ಎಲ್ಲ ಐತಿಹಾಸಿಕ, ಪೌರಾಣಿಕ ಯುಗಗಳಲ್ಲೂ ಮತ್ತು ಈ ಆಧುನಿಕ ಯುಗದಲ್ಲೂ ಇಂತಹ ಪ್ರಯತ್ನಗಳು ಅನೇಕ ನಡೆದಿವೆ. ಭಾರತದ ವಿಧಾನಸಭೆಗಳೂ, ಸಂಸತ್ತೂ ಇಂತಹ ಸಂಗತಿಗಳಿಗೆ ಮೂಕಸಾಕ್ಷಿಗಳಾಗಿವೆ. ಆದರೆ ಬಹುಮತಕಾರಣವಾಗಿ ಆಡಳಿತಸೂತ್ರ ಹಿಡಿದವರೇ ಹೆಣ್ಣೊಬ್ಬಳ ವಿರುದ್ಧ ಇಂತಹ ಅಸಂಬದ್ಧಕ್ಕೆ ಕಾನೂನನ್ನು ಬಳಸಿಕೊಂಡದ್ದು ಇದೇ ಪ್ರಥಮವಿರಬಹುದು ಅಥವಾ ಅಪರೂಪ. ಇಷ್ಟು ಮಾತ್ರ ಸತ್ಯ: ನೀತಿಯನ್ನು ಘೋಷಿಸುವವರು ಬಹುತೇಕ ಅನೀತಿವಂತರೇ. ಭೂತ ಗೀತೆಯನ್ನು ಓದಿದಂತೆ ಎಂಬ ಗಾದೆ ಸೃಷ್ಟಿಯಾದದ್ದು ಇಂತಹ ಹಿನ್ನೆಲೆಯಲ್ಲೇ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News