ಸೋರುತಿಹುದು ಮನೆಯ ಮಾಳಿಗಿ

ತತ್ವಪದಕಾರ ಶಿಶುನಾಳಷರೀಫರ ಕಾಲದಲ್ಲಿ ಪ್ರಜಾಪ್ರಭುತ್ವವೆಂಬುದು ತಲೆಯೆತ್ತಿರಲಿಲ್ಲ. ಒಂದು ವೇಳೆ ಈ ಮಹಾನುಭಾವ ಇಂದು ಇರುತ್ತಿದ್ದರೆ ಮತ್ತು ತನ್ನ ಕಾಲದ ಆಡಳಿತಕ್ಕೆ ಮನಸ್ಸು-ಬುದ್ಧಿ-ಪ್ರಜ್ಞೆಗಳನ್ನು ತೆರೆದು ಬರೆಯುತ್ತಿದ್ದರೆ ನಮ್ಮ ಸಂಸತ್ತಿನ ದುರಂತ ಕಥೆಯನ್ನೂ ‘ಸೋರುತಿಹುದು ಮನೆಯ ಮಾಳಿಗಿ...’ ಎಂದೇ ಬರೆಯುತ್ತಿದ್ದರೇನೋ? ಹಾಗಿದೆ ಭಾರತದ ಪ್ರಜಾಪ್ರಭುತ್ವದ ಮಹತ್ವದ ಮನೆ. ಕವಿ ಕಯ್ಯಾರರು ಬೇರೊಂದು ಸಂದರ್ಭಕ್ಕೆ ‘ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ!’ ಎಂದು ತಮ್ಮ ಕವನವೊಂದರಲ್ಲಿ ಬರೆದಿದ್ದರು. ಅದನ್ನು ನಮ್ಮ ಸಂಸತ್ತಿಗೂ ಅನ್ವಯಿಸಬಹುದು; ಕೆಲವು ಶಾಸನಸಭೆಗಳಿಗೂ ಅನ್ವಯಿಸಬಹುದು.

Update: 2023-11-16 04:56 GMT

Photo: PTI

ಯಾವುದೇ ಪ್ರಜಾಪ್ರಭುತ್ವದ ಲಕ್ಷಣವಿರುವುದು ಅದರ ಜನಪ್ರತಿನಿಧಿಗಳಲ್ಲಿ. ಇದಕ್ಕೆ ಭಾರತವೂ ಹೊರತಲ್ಲ. ಆದರೆ ಸಂಸದರು ತಾವು ತಮ್ಮ ದೇಶ-ಕಾಲದ ಪ್ರತಿನಿಧಿಗಳೆಂಬ ಅರಿವಿದ್ದು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ಅವರು ಜನಪ್ರತಿನಿಧಿಗಳೆಂದು ಹೇಳಿಕೊಳ್ಳಬಹುದು. ಇಲ್ಲವಾದರೆ ರಾಜಸತ್ತೆಯಲ್ಲಿ ಬಡಜನರನ್ನು ಶೋಷಿಸುವ ಕೊತ್ವಾಲನಿಗೂ ಅವರಿಗೂ ವ್ಯತ್ಯಾಸವಿರುವುದಿಲ್ಲ.

ಇತ್ತೀಚೆಗೆ ನಮ್ಮ ಸಂಸತ್ತು ನಡೆದುಕೊಳ್ಳುವ ರೀತಿ-ನೀತಿ ಪ್ರಜ್ಞಾವಂತರಿಗೆ ಇಷ್ಟವಾಗದೆಂದು ಅನ್ನಿಸುತ್ತದೆ. ಮಹುವಾ ಮೊಯಿತ್ರಾ ಎಂಬ ಸಂಸದೆಯ ಕುರಿತು ಸಂಸತ್ತು ನಡೆದುಕೊಂಡ ರೀತಿ ಯಾವ ಪ್ರಜಾಪ್ರಭುತ್ವಕ್ಕೂ ಗೌರವ ತರದು. ಈಕೆಯ ವಿರುದ್ಧ ಹೊರಿಸಿದ ಆಪಾದನೆಗಳ ಸತ್ಯಾಸತ್ಯತೆಯು ಈಗಷ್ಟೇ ಗೊತ್ತಾಗದು. ಅದಕ್ಕಿನ್ನೂ ಕಾಲಮಾಪಕವಿದೆ. ಆ ಬಗ್ಗೆ ಸಮಾನಾಂತರವಾಗಿ ವಿಚಾರಣೆ ನಡೆಸಿದರೆ ತಪ್ಪಾಗುವುದು. ಆದರೆ ಸಂಸತ್ತಿನ ಹಕ್ಕುಚ್ಯುತಿ ಸಮಿತಿಯೋ, ನೀತಿ ಸಮಿತಿಯೋ, ಸಿಬಿಐಯೋ, ಇನ್ನಿತರ ಸಂಸ್ಥೆಯೋ ತನ್ನೊಡೆಯನ ವಾಂಛೆಯನ್ನು ಈಡೇರಿಸುವ ತವಕದಲ್ಲಿ ನಡೆದುಕೊಳ್ಳುವ ರೀತಿ ಸಂಬಂಧಿಸಿದವರಿಗಿರಲಿ, ಭಾರತಕ್ಕೂ, ಭಾರತದ ಸಂಸತ್ತಿಗೂ, ಅಲ್ಲಿರುವ ಜನಪ್ರತಿನಿಧಿಗಳಿಗೂ ಗೌರವ ತಾರದು.

ಕೆಲವು ಸಮಯಗಳಿಂದ ಈಕೆಯ ವಿರುದ್ಧ ಸರಕಾರ ಕತ್ತಿ ಮಸೆಯುತ್ತಿದ್ದದ್ದು ಈಗ ರಹಸ್ಯವೇನಲ್ಲ. ಸಂಸತ್ತಿನ ಕೆಲವೇ ಪ್ರಖರ ಪಟುಗಳಲ್ಲಿ ಆಕೆಯೂ ಒಬ್ಬಳು. ಯಾರ ನೆರವೂ ಇಲ್ಲದೆ ತನ್ನ ಅಸ್ಖಲಿತ ವಾಗ್ಝರಿಯೊಂದಿಗೆ ಕರಾರುವಾಕ್ಕಾಗಿ ವಿಷಯ-ವಿಚಾರಗಳನ್ನು, ಅಂಕೆ-ಸಂಖ್ಯೆಗಳೊಂದಿಗೆ ಮಂಡಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಕೆಲವೇ ಪ್ರತಿಪಕ್ಷ ಸಂಸದರಲ್ಲಿ ಈಕೆ ಒಬ್ಬಳು. ಇದರಿಂದಾಗಿ ಮಾರಿಕಣ್ಣು ಹೋರಿಯ ಮೇಲೆ ಬೀಳುವ ಬದಲು ಈಕೆಯ ಮೇಲೆ ಬಿತ್ತು. ಪರಿಣಾಮವಾಗಿ ಆಕೆಯ ಮೇಲೆ ಮಾಡಲಾದ ಆಪಾದನೆಗಳ ಸತ್ಯಾಸತ್ಯತೆಯ ಪರೀಕ್ಷೆಯಾಗುವ ಮೊದಲೇ ಆಕೆಯ ವಿರುದ್ಧ ಸಂಸದೀಯ ಸಮಿತಿಯಿಂದ ವಿಚಾರಣೆ ನಡೆಯಿತು. ಸಂಸದರ ವಿರುದ್ಧ ಹೊರಗಿನವರೊಬ್ಬರು ಸಂಸದೀಯ ಸಮಿತಿಯ ಮುಂದೆ ಸಾಕ್ಷ್ಯ ನೀಡಿ ಅದನ್ನು ಸಮಿತಿ ಅವಸರವಸರವಾಗಿ ಸ್ವೀಕರಿಸಿ 500 ಪುಟಗಳ ವರದಿಯನ್ನು ಸಿದ್ಧಪಡಿಸಿ ಆಕೆಯನ್ನು ಸಂಸತ್ತಿನಿಂದ ಉಚ್ಚಾಟಿಸುವ ಶಿಫಾರಸು ಮಾಡಿ ಸಭಾಪತಿಯವರಿಗೆ ನೀಡಿದೆ. ವಿಶೇಷವೆಂದರೆ ಈ ಸಮಿತಿಯಲ್ಲಿರುವ ಬಹುಮತೀಯರು ಸರಕಾರ ನಡೆಸುವ ಪಕ್ಷದವರೇ ಆದ್ದರಿಂದ ಇತರ ಧ್ವನಿಗಳಿಗೆ ಮನ್ನಣೆಯಿಲ್ಲವಾಗುತ್ತದೆ. ಈಗ ಸಭಾಪತಿಯವರು ಏನು ಮಾಡಬಹುದೆಂಬ ಕುತೂಹಲ ಉಳಿದಿಲ್ಲ. ಆಕೆಗಿರುವ ಅವಕಾಶವೆಂದರೆ ಈ ಉಚ್ಚಾಟನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದು. ಆದರೆ ಆಕೆ ಹೇಳುವ ಧಾಟಿಯಲ್ಲಿ ಈ ನಿರ್ಣಯವನ್ನು ಹೊತ್ತು ತನ್ನ ‘ಬಲಿಪಶು’ತನವನ್ನು ಅನುಕಂಪದ ಅಲೆಯಾಗಿಸಿ ಮುಂದಿನ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆದುಕೊಳ್ಳುವುದೇ ಆಗಿದೆಯೆಂದು ಕಾಣುತ್ತದೆ. ಇದು ತಾತ್ವಿಕವಾಗಿ, ಸೈದ್ಧಾಂತಿಕವಾಗಿ ಸರಿಯಲ್ಲ; ಆದರೆ ರಾಜಕೀಯವಾಗಿ ಸರಿ. ಇದೇ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಸಮಿತಿಯಲ್ಲಿದ್ದ ಕಾಂಗ್ರೆಸ್ ಪಕ್ಷದ ಸದಸ್ಯರೊಬ್ಬರು ಈ ಉಚ್ಚಾಟನೆಯನ್ನು ಬೆಂಬಲಿಸಿದ್ದಾರಂತೆ! ಹೌದಾದರೆ ‘ಇಂಡಿಯಾ’ ಎಂಬ ಪ್ರತಿಪಕ್ಷಗಳ ಒಕ್ಕೂಟ ‘ಇ-ಂ-ಡಿ-ಯಾ’ ಎಂಬ ಒಡೆದ ಕನ್ನಡಿಯಾಗಿ ಛಿದ್ರವಾಗುವ, ಮತ್ತು ಮೋದಿಯವರಿಗೆ ಬೆಳ್ಳಿತಟ್ಟೆಯಲ್ಲಿ ಅಧಿಕಾರವನ್ನು ನೀಡುವ ಬಗ್ಗೆ ಅನುಮಾನವಿಲ್ಲ. ಈಗಾಗಲೇ ಅಖಿಲೇಶ್ ಯಾದವ್ ಬಹಳ ದೊಡ್ಡ ಧ್ವನಿಯಲ್ಲಿ ಕಾಂಗ್ರೆಸಿನ ಕುರಿತು ಅಪಸ್ವರವನ್ನೆತ್ತಿದ್ದಾರೆ. ಕಾಂಗ್ರೆಸಿನಲ್ಲಿ ಒಬ್ಬೊಬ್ಬ ನಾಯಕರೂ ಒಂದೊಂದು ದಿಕ್ಕಿನಲ್ಲಿ ವ್ಯವಹರಿಸುತ್ತಿರುವುದರಿಂದ ಅದರ ಪರಿಸ್ಥಿತಿ ಕಳಚಿಕೊಳ್ಳುತ್ತಿರುವ ಚಕ್ರಗಳ ಗಾಡಿಯನ್ನು ಎತ್ತು ಏರಿಗೆ ಕೋಣ ನೀರಿಗೆ ಎಳೆದು ಪಯಣಿಸುವಂತಿದೆ.

ಕೆಲವು ಸಮಯದ ಹಿಂದೆ ಎಎಪಿ ಪಕ್ಷದ ರಾಜೀವ್ ಛಡ್ಡಾ ಅವರನ್ನೂ ಇದೇ ರೀತಿ ಉಚ್ಚಾಟನೆಯಲ್ಲದಿದ್ದರೂ ಅಮಾನತು ಮಾಡಲಾಗಿತ್ತು. ಅವರು ಅದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ನ್ಯಾಯನಿರ್ಣಯ ಮಾಡುವ ಬದಲು ನ್ಯಾಯಮೂರ್ತಿಗಳು ಅವರನ್ನು ಕ್ಷಮೆಯಾಚಿಸಲು ಹೇಳಿ ಸಭಾಪತಿಗಳನ್ನು ಅನುಕಂಪದಿಂದ ಪರಿಗಣಿಸಲು ಹೇಳಿದ್ದಾರೆ. ಹಾವು ಸಾಯಲಿಲ್ಲ; ಕೋಲು ಮುರಿಯಲಿಲ್ಲ! ಆಪ್ ಸಂಸದ ಹಾಗೂ ಪಕ್ಷದ ರಾಷ್ಟ್ರೀಯ ವಕ್ತಾರ ಸಂಜಯ್ ಸಿಂಗ್ ಅವರನ್ನು ದಿಲ್ಲಿಯ ಅಬಕಾರಿ ಹಗರಣಗಳ ನೆಪದಲ್ಲಿ ಬಂಧಿಸಲಾಗಿದೆ. ರಾಹುಲ್‌ಗಾಂಧಿ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾದಾಗ ಸಂಸತ್ತಿನ ಸಭಾಪತಿಯವರು ‘ಸ್ಪೀಡ್ ಪೋಸ್ಟ್’ನಂತೆ ಕಾರ್ಯವಹಿಸಿ ಅವರನ್ನು ಅನರ್ಹಗೊಳಿಸಿದ್ದರು. ಅವಾಚ್ಯ ಪದಗಳನ್ನು ಆಡಿದ ಆರೋಪದಡಿಯಲ್ಲಿರುವ ಆಳುವ ಪಕ್ಷದ ಸಂಸದರ ಕುರಿತು ಇನ್ನೂ ಕ್ರಮ ಕೈಗೊಂಡಿಲ್ಲ. ಆಳುವ ಪಕ್ಷಕ್ಕೊಂದು ನೀತಿ, ಪ್ರತಿಪಕ್ಷಕ್ಕೊಂದು! ಈ ದೇಶದ ಸಂಸತ್ತು ವಿದೂಷಕರ ಮತ್ತು ಖಳನಾಯಕರ ಕೂಟವಾಗುತ್ತಿದೆಯೆಂಬುದೇ ಜನ ಸಾಮಾನ್ಯರಿಗೆ ಆತಂಕದ ವಿಚಾರ. ಇನ್ನೂ ಆತಂಕವೆಂದರೆ ಸಂಸದೀಯರಿಗಿರುವ ಅಪಾರ ಅಧಿಕಾರ, ಸೌಕರ್ಯ. ತಮ್ಮ ಹಣೆಬರಹವನ್ನು 5 ವರ್ಷಗಳ ಕಾಲ ತಾವೇ ನಿರ್ಧರಿಸುವ ಹಕ್ಕಿರುವುದು ಬಹುಮತದ ಆಡಳಿತ ಪಕ್ಷಕ್ಕೆ ಮಾತ್ರ. ಇತರರು ದ್ವಿತೀಯ ದರ್ಜೆಯ ನಾಗರಿಕರಂತೆ ಬಳಲಬೇಕಾಗುತ್ತದೆ. (ಇದು ಸಂಸತ್ ಸದಸ್ಯರಿಗೆ ಅಂತಲ್ಲ, ಈಗಾಗಲೇ ಸರ್ವೋಚ್ಚ ನ್ಯಾಯಾಲಯವು ಗುರುತಿಸಿದಂತೆ ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಮೂರ್ತಿಗಳ ಪೈಕಿ ತನಗೆ ಬೇಕಾದವರನ್ನಷ್ಟೇ ಆಯ್ಕೆ ಮಾಡುವ ನಾಚಿಕೆಗೆಟ್ಟ ಕ್ರಮವನ್ನು ಸರಕಾರ ಕೈಗೊಳ್ಳುತ್ತಿರುವ ಕುರಿತು ನ್ಯಾಯಮೂರ್ತಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಆದರೆ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಅವರು ಏನೂ ಮಾಡದಾದರು.

ಈಕೆಗಿಂತ ಮೊದಲೇ ಆರೋಪಕ್ಕೀಡಾದ ಹಲವಾರು ಸಂಸದೀಯರ ವಿರುದ್ಧ ಸಂಸತ್ತು ಇನ್ನೂ ಏನೂ ಮಾಡಿಲ್ಲ. ಸರದಿಯ ಸಾಲನ್ನು ತಮಗನುಕೂಲವಾದೆಡೆಯಲ್ಲಿ ತಪ್ಪಿಸಿ ಕ್ರಮಕೈಗೊಳ್ಳುವುದು ಸರಕಾರದ ಯೋಜನೆಯೆಂಬುದು ಮತ್ತು ಸಭಾಪತಿಗಳು ‘ನಿಷ್ಪಕ್ಷಪಾತ’ವೆಂಬ ಪದವನ್ನು ಮರೆತಿದ್ದಾರೆಂಬುದು ಈಗ ಕೆಲವು ವರ್ಷಗಳಲ್ಲಿ ಸಾಬೀತಾಗಿದೆ. ಈ ಹಿಂದೆಯೂ ಪ್ರತಿಪಕ್ಷಗಳನ್ನು ಅಪಮಾನಿಸುವ ಕ್ರಮ ಜರುಗಿದೆ. ಆದರೂ ಅಲ್ಲೊಂದು ಕನಿಷ್ಠ ಮಾನವಾದರೂ ಇತ್ತು. ತುರ್ತುಪರಿಸ್ಥಿತಿಯನ್ನು ಘೋಷಿಸಿದ ಇಂದಿರಾ ಗಾಂಧಿಯೇ ಚುನಾವಣೆಯನ್ನು ಘೋಷಿಸಿದರೆಂಬುದನ್ನು ಮತ್ತು ಆ ಮೂಲಕ ಚುನಾವಣೆ ನಡೆಯಿತೆಂಬುದನ್ನು ನಾವು ಮರೆಯಬಾರದು. ಈಗ ತುರ್ತುಪರಿಸ್ಥಿತಿಯನ್ನು ಘೋಷಿಸದೆಯೇ ಅದಕ್ಕೆ ನೂರುಪಟ್ಟು ಅಕ್ರಮಗಳನ್ನು ನಡೆಸುವ ಸರಕಾರವನ್ನು ಗಮನಿಸಿದರೆ ಇಂದಿರಾ ಗಾಂಧಿ ಸಂತರಂತೆ ಗೋಚರಿಸುತ್ತಾರೆ.

ಸಂಸತ್ತೆಂದರೆ ನಾವು ನೋಡದ, ಆದರ್ಶವೇ ಮೈಗೂಡಿದ ಸುಧರ್ಮಸಭೆಯೆಂಬ ಕಲ್ಪನೆಯಿತ್ತು. ಭಾರತವು ರಾಜ್ಯಗಳ ಒಂದು ‘ಸಂಘ’. ಸಾಮಾನ್ಯಾರ್ಥದಲ್ಲಿ ಮತ್ತು ತಪ್ಪಾಗಿ ‘ಕೇಂದ್ರ’ವೆಂದು ಬಳಸುವುದಿದೆ. ‘ಸಂಘ ಸರಕಾರ’ವನ್ನು ‘ಕೇಂದ್ರ ಸರಕಾರ’ವೆಂದು ಬಳಸಲಾಗುತ್ತದೆ. (ಸಂವಿಧಾನದ ಅಧಿಕೃತ ಕನ್ನಡ ತರ್ಜುಮೆಯನ್ನು ಓದಿನೋಡಿ.) ಇದು ಸಂವಿಧಾನದ ಮಿತಿಗಳಿಗೊಳಪಟ್ಟು ಇಡೀ ದೇಶಕ್ಕೆ ಅನ್ವಯಿಸುವ ಸರಕಾರ. ಇದರ ಮುಖ್ಯ ವೇದಿಕೆ ಸಂಸತ್ತು. ಜನರ ಬಹುಮತಗಳಿಂದ ಆಯ್ಕೆಯಾಗಿ ಹೋಗುವವರು ಜನರ ವಿವೇಕವನ್ನು ಗೌರವಿಸುವ ಕಾಲವೊಂದಿತ್ತು. ಜನರು ತಮ್ಮ ಅರ್ಹತೆಗೆ ತಕ್ಕ ಸರಕಾರವನ್ನು ಪಡೆಯುತ್ತಾರೆಂಬ ಮಾತಿದೆಯಲ್ಲವೇ, ಹಾಗೆ ಜನರು ಬುದ್ಧಿವಂತರೂ ಪ್ರಜ್ಞಾವಂತರೂ ವಿವೇಕಿಗಳೂ ಆಗಿದ್ದರೆ ಮತ್ತು ಆಗಿರುವುದರಿಂದ ಅವರ ಪ್ರತಿನಿಧಿಗಳು ಬದುಕುವ ಸಂಸತ್ತು ಕೂಡಾ ಅಷ್ಟೇ ಬುದ್ಧಿವಂತರನ್ನು, ಪ್ರಜ್ಞಾವಂತರನ್ನು, ವಿವೇಕಿಗಳನ್ನು ಹೊಂದಿರುತ್ತದೆ ಮತ್ತು ಅವರ ಮೂಲಕವಾಗಿ ಜಾರಿಗೆ ಬರುವ ಕಾನೂನು-ಕಟ್ಟಳೆಗಳಿಂದ ಜನರ ಬದುಕು ಮತ್ತು ಭವಿಷ್ಯ ಹಸನಾಗುತ್ತದೆಯೆಂಬ ಆಸೆಯಿತ್ತು. ಬಹುಮುಖ್ಯ ಅಂಶವೆಂದರೆ ಸಂವಿಧಾನದಲ್ಲಿ ಈ ಮೌಲ್ಯಗಳು ಔಪಚಾರಿಕ ಶಿಕ್ಷಣವನ್ನು ಆಧರಿಸಿರಲಿಲ್ಲ. ಆದ್ದರಿಂದಲೇ ವಯಸ್ಕ ಮತದಾನ ಜಾರಿಗೆ ಬಂತೇ ಹೊರತು ಶೈಕ್ಷಣಿಕ ಮತದಾನವು ವಿಧಾನ ಪರಿಷತ್ತುಗಳ ಹೊರತು ಪ್ರಯೋಗಕ್ಕೂ ಬರಲಿಲ್ಲ. ಜನಪ್ರತಿನಿಧಿ ಕಾಯ್ದೆಯಲ್ಲೂ ವಯೋಮಿತಿಯಿತ್ತೇ ಹೊರತು ಶೈಕ್ಷಣಿಕ ಅರ್ಹತೆಯಿರಲಿಲ್ಲ. ಕಲಿತವರು ಒಳ್ಳೆಯವರಾದರೆ ಇನ್ನಷ್ಟು ಒಳ್ಳೆಯವರು, ಕೆಟ್ಟವರಾದರೆ ಇನ್ನಷ್ಟು ಕೆಟ್ಟವರು ಎಂಬ ಲಯಬಾಧೆ ಆಗಲೇ ಇತ್ತು. ಈ ಅತಿಯನ್ನು ನಮ್ಮ ಸಂವಿಧಾನ ತಜ್ಞರು ಊಹಿಸಿದ್ದರು. ಕಲಿಯದಿದ್ದವನೂ ಬುದ್ಧಿ-ಪ್ರಜ್ಞೆ, ವಿವೇಕ ಇವನ್ನು ಹೊಂದಿರಲು ಸಾಧ್ಯ ಎಂಬ ಪ್ರಮೇಯವೇ ನಮ್ಮ ಪ್ರಜಾಪ್ರಭುತ್ವವನ್ನು ಆಧರಿಸಿತ್ತು. ಉಳಿದಂತೆ ಭಾರತೀಯ ನಾಗರಿಕನಾಗಿರಬೇಕು, ಬುದ್ಧಿ ನೆಟ್ಟಗಿರಬೇಕು, ದಿವಾಳಿಯಾಗಿರಬಾರದು, ಕ್ರಿಮಿನಲ್ ಪ್ರಕರಣಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಶಿಕ್ಷೆಯನ್ನು ಅನುಭವಿಸಿರಬಾರದು ಎಂಬ ಇತರ ಹಲವು ಶರ್ತಗಳಿದ್ದವು.

ಸಂವಿಧಾನದ ಎರಡನೆಯ ಅಧ್ಯಾಯದಲ್ಲಿ ಅಂದರೆ 79ನೇ ವಿಧಿಯಿಂದ 122ನೇ ವಿಧಿಯ ವರೆಗೆ ಸಂಸತ್ತಿನ ಕುರಿತ ಚರ್ಚೆಯಿದೆ. ಇದರಂತೆ ದೇಶಕ್ಕೆ ಸಂಸತ್ತನ್ನು ವಿಧಿಸಲಾಗಿದೆ. ಅವಕ್ಕೆ ರಾಜ್ಯಸಭೆ ಮತ್ತು ಲೋಕಸಭೆ ಎಂಬ ಹೆಸರುಗಳನ್ನಿಟ್ಟಿದೆ. ಹೆಸರಿಸುವಾಗಲೂ ರಾಜ್ಯಸಭೆಯನ್ನು ಮೊದಲು ಹೆಸರಿಸಿ ರಾಜ್ಯಸಭೆಗೆ ಹೆಚ್ಚಿನ ಗೌರವವನ್ನು ಸೂಚಿಸಿದಂತೆ ಕಾಣುತ್ತದೆ. ಮೊದಲನೆಯದಾದ ರಾಜ್ಯಸಭೆಯು ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಮಾಜಸೇವೆ ಇವುಗಳಲ್ಲಿ ವಿಶೇಷ ಜ್ಞಾನ ಅಥವಾ ವ್ಯಾವಹಾರಿಕ ಅನುಭವವನ್ನು ಪಡೆದು ರಾಷ್ಟ್ರಪತಿಗಳಿಂದ ನಾಮನಿರ್ದೇಶನ ಮಾಡಲ್ಪಟ್ಟ 12 ಸದಸ್ಯರಿಂದ ಮತ್ತು 238ಕ್ಕೆ ಮೀರದಷ್ಟು ರಾಜ್ಯಗಳ ಹಾಗೂ ಸಂಘರಾಜ್ಯ ಕ್ಷೇತ್ರಗಳ ಪ್ರತಿನಿಧಿಗಳಿಂದ ಒಳಗೊಂಡಿದೆ. ಚುನಾಯಿತ ಪ್ರತಿನಿಧಿಗಳನ್ನು ರಾಜ್ಯದ ಚುನಾಯಿತ ಪ್ರತಿನಿಧಿಗಳು ಅದಕ್ಕೊಪ್ಪಿದ ಕಾನೂನಿನಂತೆ ಆಯ್ಕೆಮಾಡುತ್ತಾರೆ. ರಾಜ್ಯಸಭೆಯು ಎಂದೂ ವಿಸರ್ಜನೆಯಾಗುವುದಿಲ್ಲ. ಅದೊಂದು ನಿರಂತರ ಮುಂದುವರಿಯುವ ಸಭೆ. ಸದಸ್ಯರ ಅವಧಿ 6 ವರ್ಷಗಳಾಗಿದ್ದು ಪ್ರತೀ 2 ವರ್ಷಗಳಲ್ಲಿ 1/3ರಷ್ಟು ಸದಸ್ಯರು ನಿವೃತ್ತಿಯಾಗುವಂತೆ ವ್ಯವಸ್ಥೆಯಾಗಿದೆ.

ಎರಡನೆಯದಾದ ಲೋಕಸಭೆಯಲ್ಲಿ ರಾಜ್ಯಗಳಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ ನೇರ ಚುನಾವಣೆಗಳ ಮೂಲಕ ಆಯ್ಕೆಯಾಗುವ 525 ಸದಸ್ಯರು ಮತ್ತು ಸಂಘರಾಜ್ಯ (ಅಥವಾ ಕೇಂದ್ರಾಡಳಿತ ಪ್ರದೇಶವೆಂದು ಸಾಮಾನ್ಯವಾಗಿ/ತಪ್ಪಾಗಿ ಬಳಸುವ) ಕ್ಷೇತ್ರಗಳಿಂದ ಆಯ್ಕೆಯಾಗುವ 20 ಸದಸ್ಯರನ್ನು ಒಳಗೊಂಡಿದೆ. ಆಯ್ಕೆಯಾಗುವ ಈ ಎಲ್ಲ ಸ್ಥಾನಗಳು ರಾಜ್ಯಗಳ ಸಂಬಂಧಿಸಿದ ಚುನಾವಣೆಯ ಹಿಂದಿನ ಜನಗಣತಿಯಲ್ಲಿ ವರದಿಯಾದ ಜನಸಂಖ್ಯೆಯನ್ನಾಧರಿಸಿವೆ. ಈ ಯಾವುದೇ ಅನುಪಾತಗಳು ಸಾಧುವಾಗಿರಬೇಕು ಮತ್ತು ಕಾರ್ಯಸಾಧ್ಯವಾಗಿರಬೇಕು. ಲೋಕಸಭೆಯ ಅವಧಿ 5 ವರ್ಷ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮಾತ್ರ ಅದನ್ನು 1 ವರ್ಷ ಹೆಚ್ಚು ವಿಸ್ತರಿಸಬಹುದು. ತುರ್ತುಪರಿಸ್ಥಿತಿಯು ರದ್ದಾದ ಬಳಿಕ ಅದರ ವಿಸ್ತರಣೆಯು 6 ತಿಂಗಳನ್ನು ಮೀರುವಂತಿಲ್ಲ.

ಈ ಎರಡೂ ಸಭೆಗಳ ಸದಸ್ಯತನಕ್ಕೆ ವಯೋಮಾನವಿದೆ. ರಾಜ್ಯಸಭಾ ಸದಸ್ಯತ್ವಕ್ಕೆ 30 ವರ್ಷ, ಲೋಕಸಭೆಗೆ 25 ವರ್ಷ ಕನಿಷ್ಠ ವಯೋಮಿತಿಯಿದೆ. ಇವು ನಿಗದಿತ ಅವಧಿಗೆ ತಮ್ಮ ಕಾರ್ಯಕಲಾಪಗಳನ್ನು ನಡೆಸುತ್ತವೆ. ರಾಜ್ಯಸಭೆಗೆ ಭಾರತದ ಉಪರಾಷ್ಟ್ರಪತಿಯು ಪದನಿಮಿತ್ತ ಸಭಾಪತಿಯಾಗಿದ್ದಾರೆ. ಪ್ರಾಯಃ ಅವರಿಗೆ ಇತರ ಕಾರ್ಯಗಳಿಲ್ಲದ್ದರಿಂದ ಇದೊಂದು ರೀತಿಯ ನಿರುದ್ಯೋಗ ನಿವಾರಣಾ ಯೋಜನೆ. ಹಾಗೆಂದು ಉಪಸಭಾಪತಿಯು ರಾಜ್ಯಸಭಾ ಸದಸ್ಯರಲ್ಲೊಬ್ಬರಾಗಿರಬೇಕು. ಇವೆಲ್ಲ ಹೊಂದಾಣಿಕೆಯ, ಅನುಕೂಲದ ನಿಯಮ, ನಿಬಂಧನೆಗಳೇ ಹೊರತು ತರ್ಕಶುದ್ಧವಲ್ಲ.

ಇಂತಹ ಸಂಸತ್ತಿಗೆ ಆಯ್ಕೆಯಾಗುತ್ತಿರುವ ಮಂದಿಗಳನ್ನು ನೋಡಿದರೆ ಅವರಲ್ಲನೇಕರು ಜೈಲಿನಲ್ಲಿರಬೇಕಾದವರು; ಅನೇಕರ ವಿರುದ್ಧ ಕೊಲೆ, ಸುಲಿಗೆ, ವಂಚನೆಯೇ ಮುಂತಾದ ಗಂಭೀರ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಅನೇಕರು ಸಾಮಾಜಿಕವಾಗಿ ಬಹಿಷ್ಕಾರ ಮಾತ್ರವಲ್ಲ, ಗಡಿಪಾರಿಗೂ ಒಳಗಾಗಬೇಕಾದವರು. ಶಿಕ್ಷಣದ ಅರ್ಹತೆ ಸಂಸದರಿಗೆ ಇಲ್ಲವಾದರೂ ಅವರು ಶಿಕ್ಷಣದ ಕುರಿತು ಸುಳ್ಳು ಹೇಳುವುದನ್ನು ಗಮನಿಸಿದರೆ ನಾವು ಯಾಕಾದರೂ ಶಿಕ್ಷಣ ಪಡೆದೆವು ಅನ್ನಿಸಬೇಕು. ಅನೇಕ ಸಂಸದರಿಗೆ ಗೌರವ ಡಾಕ್ಟರೇಟ್ ಪದವಿ ಸಿಕ್ಕಾಗ ಪರಿಶ್ರಮ ಪಟ್ಟು ಪದವಿ ಗಳಿಸಿದ ಕೆಲವು ಮಂದಿಗಾದರೂ ಅಪಮಾನವಾದೀತು. ಅಧಿಕಾರ/ಪಕ್ಷ ನಿಷ್ಠೆಗೆ ಪದ್ಮಪ್ರಶಸ್ತಿ ಪಡೆದವರನ್ನು ಗಮನಿಸಿದರೆ ಅದು ಸಜ್ಜನರಿಗೆ ಅಸ್ಪಶ್ಯವಾದೀತು. ಯಾವುದು ದೇಶಕ್ಕೆ ಶೋಭೆ ತರುವ ಧ್ವಜವಾಗಬೇಕಿತ್ತೋ ಅದೀಗ ಲೂಟಿಕೋರರ ಅಡ್ಡೆಯಾಗುತ್ತಿದೆ.

ರಾಜ್ಯಗಳ ಶಾಸನಸಭೆಗಳೂ ಇದಕ್ಕಿಂತ ತೀರ ಹಿಂದೆ ಬಿದ್ದಿಲ್ಲ. ಮಹಾಭಾರತದ ಪಗಡೆಯಾಡಿವೆ; ಆಡುತ್ತಿವೆ. ಹಿಂದೆ ಜಯಲಲಿತಾ ಅವರನ್ನು ತಮಿಳುನಾಡಿನ ಡಿಎಂಕೆ ಸರಕಾರವು ಶಾಸನ ಸಭೆಯಲ್ಲಿ ಅಸಭ್ಯವಾಗಿ ಅವಮಾನಿಸಿದಾಗ ಆಕೆ ಅಲ್ಲಿನ ಸರಕಾರವನ್ನು ಬೀಳಿಸುವ ಪಣತೊಟ್ಟು ಹೊರನಡೆದು ಯಶಸ್ವಿಯಾದರು. ಈಗ ಮಹುವಾ ಮೊಯಿತ್ರಾ ಅವರ ವಿರುದ್ಧ ನೈತಿಕ ವಸ್ತ್ರಾಪಹರಣ ನಡೆಯುತ್ತಿದೆ. ತನ್ನನ್ನು ಉಚ್ಚಾಟಿಸಿದರೆ ಇನ್ನಷ್ಟು ಹೆಚ್ಚು ಅಂತರದಿಂದ ಗೆಲುವು ಸಾಧಿಸುವುದಾಗಿ ಆಕೆ ಹೇಳಿದ್ದ್ದಾರೆ. ಭಾರತ ಎಲ್ಲ ಒಳಿತು ಕೆಡುಕುಗಳ ಇತಿಹಾಸವನ್ನು ದಾಟಿ ಬಂದಿರುವುದರಿಂದ ಇದೂ ಮಂಗಳಕರವಾಗಿ ಮುಗಿಯಬಹುದೆಂದು ಹಾರೈಸುವುದರ ಹೊರತು ಬೇರೇನೂ ಉಳಿದಿಲ್ಲ.

ತತ್ವಪದಕಾರ ಶಿಶುನಾಳ ಷರೀಫರ ಕಾಲದಲ್ಲಿ ಪ್ರಜಾಪ್ರಭುತ್ವವೆಂಬುದು ತಲೆಯೆತ್ತಿರಲಿಲ್ಲ. ಒಂದು ವೇಳೆ ಈ ಮಹಾನುಭಾವ ಇಂದು ಇರುತ್ತಿದ್ದರೆ ಮತ್ತು ತನ್ನ ಕಾಲದ ಆಡಳಿತಕ್ಕೆ ಮನಸ್ಸು-ಬುದ್ಧಿ-ಪ್ರಜ್ಞೆಗಳನ್ನು ತೆರೆದು ಬರೆಯುತ್ತಿದ್ದರೆ ನಮ್ಮ ಸಂಸತ್ತಿನ ದುರಂತ ಕಥೆಯನ್ನೂ ‘ಸೋರುತಿಹುದು ಮನೆಯ ಮಾಳಿಗಿ...’ ಎಂದೇ ಬರೆಯುತ್ತಿದ್ದರೇನೋ? ಹಾಗಿದೆ ಭಾರತದ ಪ್ರಜಾಪ್ರಭುತ್ವದ ಮಹತ್ವದ ಮನೆ.

ಕವಿ ಕಯ್ಯಾರರು ಬೇರೊಂದು ಸಂದರ್ಭಕ್ಕೆ ‘ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ!’ ಎಂದು ತಮ್ಮ ಕವನವೊಂದರಲ್ಲಿ ಬರೆದಿದ್ದರು. ಅದನ್ನು ನಮ್ಮ ಸಂಸತ್ತಿಗೂ ಅನ್ವಯಿಸಬಹುದು; ಕೆಲವು ಶಾಸನಸಭೆಗಳಿಗೂ ಅನ್ವಯಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News