ವಿಶ್ವಕಪ್ ನ (ಕಪ್ಪು)ಚುಕ್ಕೆಗಳು

ಈ ಬಾರಿ ನಮ್ಮ ವಿದ್ಯಾವಂತರೂ ಪಾಕಿಸ್ತಾನವನ್ನು ಕ್ರಿಕೆಟ್ ವೈರಿಯಂತೆ ಕಂಡಿದ್ದಾರೆ. ಅವರನ್ನು ಸೋಲಿಸಿದರೆ ಕಪ್ ದಕ್ಕದಿದ್ದರೂ ಸರಿ ಎಂಬ ದೃಷ್ಟಿಕೋನದ ಮಂದಿ ಸಾಕಷ್ಟಿದ್ದರು. ಈ ನಿರೀಕ್ಷೆ, ಅಪೇಕ್ಷೆ ಯಶಸ್ವಿಯಾಗಿದೆ. ಆದರೆ ಗೆದ್ದ ಆಸ್ಟ್ರೇಲಿಯ ನಮ್ಮ ವೈರಿಯಲ್ಲ; ಎದುರಾಳಿ ಅಷ್ಟೇ. ಅವರಿಗೆ ಅಭಿನಂದನೆಗಳು. ಅಂತಿಮ ಪಂದ್ಯದ ವರೆಗೆ ತಲುಪಿದ ಭಾರತಕ್ಕೆ ಬೆನ್ನುತಟ್ಟೋಣ. ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಾತ್ರವಲ್ಲ, ಕ್ರಿಕೆಟ್ ಎಂಬ ಸಂಗತ ವಿಚಾರದಲ್ಲಿ ವಸುಧೈವ ಕುಟುಂಬಕಂ ಎಂಬ ಉಲ್ಲೇಖಕ್ಕೆ ನ್ಯಾಯ ಸಲ್ಲಿಸೋಣ.

Update: 2023-11-23 05:40 GMT

ರಾಜಕೀಯದಲ್ಲಿ ಕ್ರೀಡೆ ಮತ್ತು ಕ್ರೀಡೆಯಲ್ಲಿ ರಾಜಕೀಯ ಇವೆರಡೂ ಸಾಮಾಜಿಕ ಕಂಟಕಗಳು. ಶಸ್ತ್ರವಿದ್ಯಾಪರೀಕ್ಷೆಯೆಂಬ ಕ್ರೀಡೆಯಲ್ಲಿ ಜಾತಿಯ ಸಮಸ್ಯೆಯನ್ನು ಅರ್ಜುನನ ಅಭಿಮಾನಿ ಗುರು ದ್ರೋಣಾಚಾರ್ಯರು ತಂದದ್ದರಿಂದಲೇ ಅಲ್ಲಿ ರಾಜಕೀಯ ಪ್ರವೇಶಿಸಿತು. (ಏಕಲವ್ಯನ ಪ್ರಕರಣದಲ್ಲೂ ಇದೇ ಇನ್ನೊಂದು ವಿಧದಲ್ಲಿ ಮರುಕಳಿಸಿತು.) ದ್ಯೂತವೆಂಬ ಕ್ರೀಡೆಯಿಂದ ಪಾಂಡವರು ವನವಾಸ ತೆರಳಬೇಕಾಯಿತು. ಇವು ಪುರಾಣ; ಪ್ರತಿಮೆ; ಅದು ಸಂಕೇತಿಸುವುದೆಂದರೆ ರಾಜಕೀಯವನ್ನು ಕ್ರೀಡೆಯ ಮೂಲಕ ನಿರ್ಧರಿಸಬಾರದು; ಮತ್ತು ಕ್ರೀಡೆಯಲ್ಲಿ ರಾಜಕೀಯವನ್ನು ಬೆರೆಸಬಾರದು ಎಂಬ ದ್ವಿಮೌಲ್ಯಗಳನ್ನು.

ಭಾರತವು ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರವಲ್ಲದಿದ್ದರೂ ಕ್ರಿಕೆಟಿನ ಹೆಸರಿನಲ್ಲಿ ಜನರಿಂದ ಅತೀ ಹೆಚ್ಚು ಹಣವನ್ನು ದೋಚುವುದರಲ್ಲಿ ಭಾರತವು ತನ್ನ ಪ್ರಜೆಗಳಿಗೆ ಋಣಿಯಾಗಲೇಬೇಕು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಒಂದು ಪೈಸೆ ತೆರಿಗೆಯನ್ನೂ ಪಾವತಿಸದೆ ಬಿಲಿಯಗಟ್ಟಲೆ (ಕೋಟಿ ಸಣ್ಣದಾಗಿದೆ!) ಹಣವನ್ನು ಸಂಗ್ರಹಿಸುವುದು ಮತ್ತು ಈ ಸಂಸ್ಥೆಯಲ್ಲಿ ಸರಕಾರದ ಪಾಲು ಅಥವಾ ಅಧಿಕೃತ ನಿಯಂತ್ರಣ ಏನೂ ಇಲ್ಲದಿದ್ದರೂ ಅದನ್ನು ಭಾರತ ಸರಕಾರದ ಸಂಸ್ಥೆಯೆಂಬಂತೆ ಮತ್ತು ಭಾರತವನ್ನು ಪ್ರತಿನಿಧಿಸುತ್ತದೆಂಬಂತೆ ಬಿಂಬಿಸುವುದು ಈ ದೇಶ ಕಂಡ, ಕಾಣುತ್ತಿರುವ ಅಪಾರ ದುರಂತಗಳಲ್ಲೊಂದು. ಸದ್ಯ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಭಾರತದ ಈ ಕುಬೇರ ಮಂಡಳಿಯೇ ಊರುಗೋಲು. ಆದ್ದರಿಂದ ಸಾಂಪ್ರದಾಯಿಕವಾಗಿ ಐಸಿಸಿಯೇ ಹಿರಿಯಣ್ಣನಾದರೂ ವ್ಯವಹಾರದಲ್ಲಿ ಬಿಸಿಸಿಐ ಎಂಬ ಕಿರಿಯಣ್ಣನೇ ನರಿಯಣ್ಣ. ಕ್ರಿಕೆಟಿನ ಸಂಪಾದನೆಯಲ್ಲಿ ಭಾರತ ಅವಿವಾದಿತವಾಗಿ ವಿಶ್ವಗುರು.

ಆದರೂ ಬಿಸಿಸಿಐಯ ಹೊರತಾಗಿ ನಮ್ಮ ಕ್ರಿಕೆಟಿಗೆ ಬೇರೆ ಮುಖವಿಲ್ಲದಾಗಿದೆ. ದುಲೀಪ್/ರಂಜಿತ್ಸಿಂಗ್ ಅವರ ತಲೆಮಾರಿನಿಂದ ಶುಭಂ ಗಿಲ್ ತಲೆಮಾರಿನವರೆಗೆ ಶ್ರೇಷ್ಠ ಕ್ರಿಕೆಟಿಗರು ಬಂದಿದ್ದರೆ ಅದಕ್ಕೆ ಈ ಸಂಸ್ಥೆ ಮತ್ತು ಇದರ ಪಾಳೇಗಾರಿಕೆಯಡಿ ಬರುವ ವಿವಿಧ ಇತರ ಪ್ರಾದೇಶಿಕ ಕ್ರಿಕೆಟ್ ಮಂಡಳಿಗಳೇ ಕಾರಣ. ಪ್ರಾಯಃ ಕ್ರಿಕೆಟ್ ಬಗ್ಗೆ ನಮ್ಮ ಭಕ್ತರಿಗೆ ಎಷ್ಟೊಂದು ಶ್ರದ್ಧಾಭಿಮಾನವಿದೆಯೆಂದರೆ ಅದು ಕೊಡುವ ಸುಖಕ್ಕಾಗಿ ಎಂತಹ ತ್ಯಾಗಕ್ಕೂ ತಯಾರಿದ್ದಾರೆ. ಕ್ರಿಕೆಟ್ ಮೈದಾನ/ಸ್ಟೇಡಿಯಂಗಳಿಗೆ ಕ್ರಿಕೆಟ್ ದೇವಾಲಯಗಳೆಂದೂ ಕ್ರಿಕೆಟಿಗರಿಗೆ ದೇವದೇವತೆಗಳೆಂದೂ ನಾಮಕರಣ ಮಾಡಬಹುದು. (ಇದು ಅಸಾಧ್ಯವಲ್ಲ, ಅಸಾಧುವೂ ಅಲ್ಲ; ಏಕೆಂದರೆ ಈಗಾಗಲೇ ತಮ್ಮ ನೆಚ್ಚಿನ ನಟ-ನಟಿಯರಿಗೆ ದೇವಾಲಯಗಳನ್ನು ನಿರ್ಮಿಸಿರುವ ಇತಿಹಾಸ ಈ ಪುಣ್ಯಭೂಮಿಗಿದೆ. ದೇವತೆಗಳ ಸಂಖ್ಯೆ ಈ ಹಿಂದಿನ ದೇವಗಣತಿಯಂತೆ ೩೩ ಕೋಟಿಯಿರುವಾಗ ಇನ್ನು ಕೆಲವು ಸಾವಿರ ಹೆಚ್ಚಾದರೆ ಏನೂ ಆಗುವುದಿಲ್ಲ. ದೇಶದ ಜನಸಂಖ್ಯೆ ಫಣಿರಾಯ ತಿಣುಕಬಹುದಾದ ೧೪೦ ಕೋಟಿಯಾದರೂ ನಾವು ಚಿಂತಿಸುತ್ತಿಲ್ಲವಲ್ಲ!) ನಮ್ಮ ಧಾರ್ಮಿಕ ಉತ್ಸವಗಳಂತೆ ಮಾಧ್ಯಮಗಳು ಕ್ರಿಕೆಟ್ ಪಂದ್ಯಗಳನ್ನು ‘ಸಾವಿರಾರು ಭಕ್ತಗಡಣದೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು’ ಎಂದು ಪ್ರಸಾರ/ಪ್ರಚಾರ ಮಾಡುವ ದಿನಗಳು ದೂರವಿಲ್ಲ; ಹಾಗೊಂದು ವೇಳೆ ಮಾಡಿದರೆ ಅಚ್ಚರಿಯಿಲ್ಲ.

ಕ್ರಿಕೆಟ್ ಆಟಗಾರನಲ್ಲದ ದೇಶದ ಅಧಿಕಾರಸ್ಥ ಪ್ರಬಲ ರಾಜಕಾರಣಿಯೊಬ್ಬನ ಮಗನೇ ಬಿಸಿಸಿಐಯ ಕಾರ್ಯದರ್ಶಿಯೆಂದರೆ ಪೀಠದ ಘನತೆ ಅಥವಾ ಆಕರ್ಷಣೆ ಅರಿವಾದೀತು. ಅದೀಗ ಅಧ್ಯಕ್ಷರ ಸ್ಥಾನಕ್ಕಿಂತಲೂ ಹಿರಿದು. ಇತ್ತೀಚೆಗಿನ ದಶಕಗಳಲ್ಲಿ ಬಿಸಿಸಿಐಯಲ್ಲಿ ಭಾರೀ ಹಣವಿದೆಯೆಂದು ಗೊತ್ತಾದ ಮೇಲೆ ರಾಜಕಾರಣಿಗಳೂ ಕ್ರಿಕೆಟ್ ಪಟುಗಳಾಗಲು ತೊಡಗಿದರು. ಹಿಂದೆ ಟೆನಿಸ್ ತಂಡಗಳಲ್ಲಿ ಆಟವಾಡದ ನಾಯಕ (ನಾನ್-ಪ್ಲೇಯಿಂಗ್ ಕ್ಯಾಪ್ಟನ್) ಎಂಬ ಒಂದು ಸಂಪ್ರದಾಯವಿತ್ತು. ಅವರ ಅನುಭವ ತಂಡಕ್ಕೆ ದೊರಕುವ ದೃಷ್ಟಿಯಿಂದ ಹಿರಿಯ ಆಟಗಾರರಲ್ಲೊಬ್ಬರನ್ನು ತಂಡದ ನಾಯಕನಾಗಿ ಆರಿಸಿ ಉಳಿದ ಸದಸ್ಯರು ಆಡುವಂತಹ ಕ್ರಮವನ್ನು ಅನುಸರಿಸಲಾಗುತ್ತಿತ್ತು. ಕ್ರಿಕೆಟ್ನಲ್ಲಿ ಈ ಸಂಪ್ರದಾಯ ಆರಂಭವಾದರೆ ಹಿರಿಯ ಆಟಗಾರರ ಬದಲು ನಮ್ಮ ಸಚಿವರ ಕುಮಾರಕಂಠೀರವರೆಲ್ಲ ಇಂತಹ ನಾಯಕರಾಗಬಹುದು!

ವಿಶೇಷವೆಂದರೆ ಯಾವೊಂದು ರಾಷ್ಟ್ರೀಯ ಪಕ್ಷವನ್ನೂ ದೂರುವಂತಿಲ್ಲ; ಹೊಗಳುವಂತಿಲ್ಲ; ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಅದರ ನಾಯಕರೂ ಬಿಸಿಸಿಐಯ ನಾಯಕರಾಗುತ್ತಿದ್ದರು. ಈಗ ಬಿಜೆಪಿಯ ಸರದಿ. ವ್ಯತ್ಯಾಸವಿಷ್ಟೇ: ಆಗ ಇದ್ದದ್ದರ ನೂರ್ಮಡಿ ಅಧಿಕ ಹಣ ಬಿಸಿಸಿಐಯಲ್ಲಿ ಶೇಖರಣೆಯಾಗಿದೆ. (ರಾಜ್ಯ ಕ್ರಿಕೆಟ್ ಮಂಡಳಿಗಳಲ್ಲಿ ಇದರ ಸಣ್ಣ ಆವೃತ್ತಿ ಚಲನೆಯಲ್ಲಿದೆಯಾದರೂ ಇಷ್ಟು ಕೆಟ್ಟಿಲ್ಲ. ಹೇಗೆ ಧರ್ಮವು ರಾಜಕೀಯದಲ್ಲಿ ಸೇರಬಾರದೋ ಹಾಗೆಯೇ ರಾಜಕೀಯವೂ ಕ್ರೀಡೆಯಲ್ಲಿ ಸೇರಬಾರದು ಎಂಬುದನ್ನು ಈ ದೇಶ ಮರೆತು ಬಹಳ ಕಾಲವಾಯಿತು.

ಈ ಬಾರಿ ಏಕದಿನ ಕ್ರಿಕೆಟಿನ ವಿಶ್ವಕಪ್ ಭಾರತದಲ್ಲಿ ನಡೆಯಿತು. ವಸುಧೈವ ಕುಟುಂಬಕಂ ತತ್ವಾಧಾರಿತವಾಗಿ ಎಲ್ಲರಿಗೂ ನೆಲೆಯಾಗಿ ಸಂಭ್ರಮದಲ್ಲಿ ನಡೆಯಬೇಕಾದ ಪಂದ್ಯಾವಳಿ ಅನೇಕ ಗುಮಾನಿಗಳಿಗೆ ಎಡೆಮಾಡಿಕೊಟ್ಟಿತು. ಹೆಚ್ಚು ಜನರನ್ನು ಆಕರ್ಷಿಸಿ ಹಣಮಾಡಬಹುದಾದ ದಂಧೆಯಂತೆ ಭಾರತ ತನ್ನ ಆತಿಥೇಯ ನಡವಳಿಕೆಯನ್ನು ಬದಿಗೊತ್ತಿ ಐಪಿಎಲ್ನ ಮಾದರಿಯಲ್ಲಿ ತನಗೆ ಬೇಕಾದಂತೆ ಪಂದ್ಯಗಳನ್ನು ನಿಯೋಜಿಸಿದಂತೆ ಮೇಲ್ನೋಟಕ್ಕೇ ಕಾಣಿಸಿತು. ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣವನ್ನು ಬದಿಗೊತ್ತಿ ಪ್ರಧಾನಿಯ ಮೆಚ್ಚಿನ ಗುಜರಾತಿನ ಅಹಮದಾಬಾದಿನ ಕ್ರೀಡಾಂಗಣಕ್ಕೆ ಪ್ರಮುಖ ಪಂದ್ಯಗಳನ್ನು ನೀಡಲಾಯಿತು. ಭಾರತ-ಪಾಕಿಸ್ತಾನ ಮತ್ತು ಫೈನಲ್ ಪಂದ್ಯಗಳು ಈ ಕ್ರೀಡಾಂಗಣದ ಸ್ವತ್ತಾದವು. ಸ್ವತಃ ಪ್ರಧಾನಿ, ಗೃಹಮಂತ್ರಿ ಹೀಗೆ ಆಡಳಿತದ ಹತ್ತಾಳುಗಳು ಭಾಗವಹಿಸಿದರು. ಚೆನ್ನೈ ಕ್ರೀಡಾಂಗಣವು ಸ್ಪಿನ್ ಬೌಲಿಂಗಿಗೆ ಒಗ್ಗುತ್ತದೆಂದು ಅಲ್ಲಿನ ಪಂದ್ಯವನ್ನು ಭಾರತಕ್ಕೆ ಯೋಜಿಸಿ ಭಾರತದ ೪ ಸ್ಪಿನ್ ಬೌಲರ್ಗಳನ್ನು ನಿಯುಕ್ತಿಗೊಳಿಸಲಾಯಿತು. ಪಂದ್ಯದ ಹಿಂದಿನ ದಿನ ಭಾರತದ ಕ್ರಿಕೆಟ್ ಕೋಚ್ ರಾಹುಲ್ದ್ರಾವಿಡ್, ನಾಯಕ ರೋಹಿತ್ಶರ್ಮಾ ಮುಂತಾದವರು ಪಿಚ್ ಪರೀಕ್ಷೆ ನಡೆಸಲು ಹಕ್ಕುದಾರರಾದರು. ಈ ಪಿಚ್ ಬೇಡ, ಅದಿರಲಿ, ಎನ್ನುವವರೆಗೂ ಭಾರತ ಮೇಲುಗೈ ಸಾಧಿಸಿತು.

ಇದನ್ನು ಇತರ ದೇಶಗಳ ಕ್ರಿಕೆಟ್ ಸಂಸ್ಥೆಗಳು ಅಡ್ಡಿಪಡಿಸಿದವೇ? ಇಲ್ಲ. ಅದನ್ನು ಸಜ್ಜನಿಕೆಯೆನ್ನಲಾಗದು. ಕೆಲವು ಗೊಣಗಾಟದ ಹೊರತು ಇನ್ನೇನೂ ನಡೆಯಲಿಲ್ಲ. ಈ (ಅ) ವ್ಯವಸ್ಥೆಯ ವಿರುದ್ಧ ಪ್ರತಿಭಟಿಸದಿರುವುದಕ್ಕೆ ಕಾರಣ ಪ್ರಾಯಃ ಅವರ ಆರ್ಥಿಕ ಅಸಹಾಯಕತೆ ಅಥವಾ ಹಿಂದುಳಿದಿರುವಿಕೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧ ಸರಕಾರ ಕ್ರಮ ಕೈಗೊಂಡರೆ ಅದರಲ್ಲಿ ಬಿಸಿಸಿಐ ಕಾರ್ಯದರ್ಶಿಯ ಕೈವಾಡವಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ಅಲ್ಲಿನ ಪ್ರಧಾನಿಯೇ ಜಯ್ಶಾ ಅವರಿಗೆ ದೂರವಾಣಿ ಮಾಡಿ ವಿಷಾದ ವ್ಯಕ್ತಪಡಿಸಿದರಂತೆ; ಕ್ಷಮೆ ಕೇಳಿರಲಿಕ್ಕೂ ಸಾಕು. ಕಾಂಚಾಣಂ ಕಾರ್ಯ ಸಿದ್ಧಿ!

ಈ ದೇಶದ ಒಂದು ಮಹತ್ವದ ಸಂಗತಿಯೆಂದರೆ ಎಲ್ಲ ಜಯಗಳಿಗೂ ಪ್ರಧಾನಿ ತಾನೇ ಕಾರಣವೆಂಬಂತೆ ನಡೆದುಕೊಳ್ಳುವುದು. ಭಾರತದ ದಿಗ್ವಿಜಯವು ಲೀಗ್ ಹಂತದಲ್ಲಿ ಅಜೇಯವಾಗಿ ಮುಂದುವರಿದಾಗ ಈ ಗೆಲುವನ್ನು ಶಾಶ್ವತ ಸಿದ್ಧಿಯಂತೆ ಕಾಣಲಾಯಿತು. ಸೆಮಿಫೈನಲ್ನಲ್ಲಿ ನ್ಯೂಝಿಲ್ಯಾಂಡನ್ನು ಸೋಲಿಸಿದಾಗ ಅದು ಇಮ್ಮಡಿಯಾಗಿ ಕಪ್ ನಮ್ಮದೇ ಎಂಬ ಜಾಹೀರಾತುಗಳು ಬಂದವು. ಫೈನಲ್ ಪಂದ್ಯಕ್ಕೆ ಪ್ರಧಾನಿಯೇ ಬಂದರು. ಪ್ರಾಯಃ ಭಾರತವು ಗೆದ್ದಿದ್ದರೆ ಈ ಹಿಂದಿನ ಗೆಲುವುಗಳನ್ನೆಲ್ಲ ಗೋಡೆಯಿಂದಾಚೆಗೆ ಮರೆಸಿ ನಭೂತೋ ನ ಭವಿಷ್ಯತಿ ಎಂದು ಜನರನ್ನು ನಂಬಿಸುತ್ತಿದ್ದರು. ಫೈನಲ್ ಪಂದ್ಯ ಎರಡು ತಂಡಗಳ ನಡುವೆ ನಡೆದ ಕ್ರಿಕೆಟ್ ಪಂದ್ಯವಾಗಿರಲಿಲ್ಲ; ಬದಲಿಗೆ ಬೇಟೆಗಾರ ಮತ್ತು ಬೇಟೆಯ ನಡುವಣ ಪಂದ್ಯವೆಂಬಂತೆ ಪ್ರಚಾರವಾಯಿತು.

ಪ್ರಮುಖ ಕ್ರಿಕೆಟ್ ರಾಷ್ಟ್ರಗಳ ಪೈಕಿ ಒಂದು ದಿನದ ಪಂದ್ಯ ಅಥವಾ ೨೦ ಓವರ್ಗಳ ಪಂದ್ಯದಲ್ಲಿ ಅಶಕ್ತರು ಯಾರೂ ಇಲ್ಲ. ಅಫ್ಘಾನಿಸ್ತಾನ, ಐರ್ಲ್ಯಾಂಡ್ಗಳೂ ತಮ್ಮ ನಿರೀಕ್ಷೆಗೆ ಮೀರಿದ ವರ್ಚಸ್ಸನ್ನು ಬೀರಿದ್ದು ಈ ಕಾರಣದಿಂದಲೇ. ಇದರಿಂದಾಗಿ ಅನಿರೀಕ್ಷಿತ ಫಲಿತಾಂಶಗಳು ಎದುರಾದವು. ಶ್ರೇಷ್ಠವೆಂದು ಭಾವಿಸಿದ್ದ ಹಿಂದಿನ ವಿಜಯಿ ಇಂಗ್ಲೆಂಡ್ ಈ ಬಾರಿ ಕೊನೆಗುಳಿಯಿತು. ಇವೆಲ್ಲ ಸಾಮಾನ್ಯ. ಆದರೆ ಭಾರತದ ಗೆಲುವುಗಳಿಗೆ ನಮ್ಮ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಶ್ರೇಷ್ಠ ತಂಡವೇ ಕಾರಣವೆಂದು ಹೇಳಲಾಯಿತು. ಹಾಗೆ ನೋಡಿದರೆ ವೆಸ್ಟ್ಇಂಡೀಸ್ ತಂಡ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅನಿರೀಕ್ಷಿತವಾಗಿ ಪುಟಿದೆದ್ದು ನಿಲ್ಲುವ ತಂಡ. ಪಂದ್ಯಾವಳಿಗೆ ಅತ್ಯಂತ ವರ್ಣಮಯ ಆಕರ್ಷಣೆಯನ್ನು ನೀಡಬಲ್ಲ ತಂಡ. ಆದರೆ ಅದು ಅರ್ಹತಾ ಸುತ್ತಿನಲ್ಲಿ ಅನರ್ಹವಾಯಿತು.

೧೯೮೩ರಲ್ಲಿ ಗೆದ್ದ ಭಾರತ ತಂಡ ಹೊಸ ಇತಿಹಾಸ ಸೃಷ್ಟಿಸಿತ್ತು. ಇಂಗ್ಲೆಂಡಿನಲ್ಲಿ ಕಪಿಲ್ ದೇವ್ ಗಳಿಸಿದ ೧೭೫ ಈಗಲೂ ಮಹತ್ವದ ಸಾಧನೆ. ಅದನ್ನು ಮೊನ್ನೆ ದ್ವಿಶತಕ ಗಳಿಸಿದ ಮ್ಯಾಕ್ಸ್ವೆಲ್ ಬ್ಯಾಟಿಂಗ್ ಮತ್ತೆ ನೆನಪಿಸಿತು. ಇಂಗ್ಲೆಂಡಿನಲ್ಲಿ ಯಾವುದೇ ತಂಡಕ್ಕೆ ಅನುಕೂಲದ ಪಿಚ್ಗಳನ್ನು ನಿರ್ಮಿಸಿದ ಉದಾಹರಣೆಯಿಲ್ಲ. ಕಳೆದ ಶತಮಾನದ ಮಧ್ಯಭಾಗದಲ್ಲಿ ಇಂಗ್ಲೆಂಡ್ ‘ಬಾಡಿಲೈನ್’ ಬೌಲಿಂಗಿನ ತಂತ್ರವನ್ನು ಹೂಡಿ ಆಸ್ತ್ರೇಲಿಯದ ಮತ್ತು ವಿಶೇಷವಾಗಿ ಅದರ ಪ್ರತಿಷ್ಠಿತ ಆಟಗಾರ ಡಾನ್ಬ್ರಾಡ್ಮನ್ ಅವರನ್ನು ಮಣಿಸಲು ಪ್ರಯೋಗಿಸಿದ್ದು ಒಂದು ಅಪರೂಪದ ಸಂಗತಿಯಾದರೂ ಅಲ್ಲಿ ಪಿಚ್ ಮುಖ್ಯ ಪಾತ್ರ ವಹಿಸಿರಲಿಲ್ಲ. ವೇಗದ ಬೌಲರ್ಗಳಿಗೆ ಅನುಕೂಲವಾದ ಪಿಚ್ನ್ನು ಇಂಗ್ಲೆಂಡ್ ತಯಾರಿಸುತ್ತಿದೆಯೆಂಬ ವ್ಯಾಖ್ಯಾನ ಹಳೆಯದು. ಅವರಲ್ಲಿರುವಷ್ಟೇ ಅಥವಾ ಇನ್ನೂ ಹೆಚ್ಚಿನ ಗುಣಮಟ್ಟದ ವೇಗಿಗಳನ್ನು ಭಾರತ, ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಹೊಂದಿವೆ. ಆದ್ದರಿಂದ ಯಾರಿಗೂ ಹೆಚ್ಚು ಅನುಕೂಲವಿಲ್ಲ. ಆದರೆ ಭಾರತದಲ್ಲಿ ವಿಶೇಷವಾಗಿ ಬ್ಯಾಟಿಂಗ್ ಪಿಚ್ಗಳನ್ನು ತಯಾರಿಸಲಾಗುತ್ತದೆ. ಒಂದು ರೀತಿಯಲ್ಲಿ ಇದು ನಮ್ಮ ವೇಗಿಗಳಿಗೆ ಮಾಡುವ ಅವಮಾನ. ನಮ್ಮ ಬೌಲರ್ಗಳಾದ ಬೂಮ್ರಾ, ಶಮಿ, ಸಿರಾಜ್ ಮುಂತಾದವರು ವಿಶ್ವದರ್ಜೆಯ ವೇಗಿಗಳು. ಆದರೆ ನಮ್ಮದೇ ಪಿಚ್ಗಳಲ್ಲಿ ಅಶ್ವಿನ್, ಕುಲ್ದೀಪ್ ಸಿಂಗ್, ರವೀಂದ್ರ ಜಡೆಜಾ ಮುಂತಾದವರು ನಮ್ಮ ಗೆಲುವಿನಲ್ಲಿ ನಾಯಕರು. ಒಂದೆರಡು ದಶಕಗಳ ಹಿಂದೆ ನಮ್ಮ ಸ್ಪಿನ್ನರ್ಗಳು ವಿದೇಶದಲ್ಲಿ ವಿಫಲರಾಗುತ್ತಿದ್ದರು. ಅದಕ್ಕೂ ಮೊದಲಿದ್ದ ಚಂದ್ರಶೇಖರ್, ಪ್ರಸನ್ನ, ಬೇಡಿ, ವೆಂಕಟರಾಘವನ್ ಮುಂತಾದವರು ಯಾವುದೇ ಪಿಚ್ನಲ್ಲೂ ತಮ್ಮ ಕೈಚಳಕವನ್ನು ತೋರಿಸಲು ಶಕ್ತರಾಗಿರುತ್ತಿದ್ದರು. ಅವರು ಪಿಚ್ ಮೇಲೆ ಭಾರ ಹಾಕಿದ್ದಿಲ್ಲ.

ಭಾರತ ಈಗಲೂ ಹಿಂದೆಯೂ ಶಕ್ತ ತಂಡ. ಆದರೆ ಕ್ರೀಡೆಯ ಕೊನೆಯ ವರೆಗೂ ಇರುವ ಅನಿಶ್ಚಿತತೆಯನ್ನು ಆಟಗಾರರು ಅರ್ಥಮಾಡಿಕೊಂಡರೂ ಅದರ ಪ್ರಾಯೋಜಕ ರಾಜಕಾರಣಿಗಳೂ ಅಭಿಮಾನಿ ಜನರೂ ಅರ್ಥಮಾಡಿಕೊಳ್ಳಲೇ ಇಲ್ಲ. ಭಾರತದ ಗೆಲುವನ್ನು ರಾಜಕೀಯಕ್ಕೆ ದಾಳವಾಗಿ ಬಳಸಲು ಪ್ರಯತ್ನಿಸಿದಾಗ ಆಟಗಾರರ ಮನಸ್ಥೈರ್ಯ ಸಹಜವಾಗಿಯೇ ಚಿಪ್ಪಿನೊಳಗೆ ಅಡಗುತ್ತದೆ. ಹಿಂದೆ ಚುನಾವಣೆ ಸಮೀಪಿಸಿದಾಗ ಸಚಿನ್ ತೆಂಡುಲ್ಕರ್ಗೆ ಅವಸರವಸರವಾಗಿ ‘ಭಾರತರತ್ನ’ ನೀಡಿದರೂ ಅದು ಕಾಂಗ್ರೆಸಿಗೆ ಸಹಾಯವಾಗಲಿಲ್ಲ. ಆದರೆ ಈಗಿನ ಪ್ರಧಾನಿ ಅವರಿಗಿಂತ ಹೆಚ್ಚು ಚಾಣಾಕ್ಷರು. ಯಾವುದನ್ನು ಎಲ್ಲಿ ಹೇಗೆ ಬಳಸಿಕೊಳ್ಳಬೇಕೆಂಬ ವಿಲಕ್ಷಣ ಜಾಣತನ ಅವರಿಗಿದೆ. ಆದರೆ ವೈಫಲ್ಯ ಎದುರಾಗಬಹುದೆಂಬ ನಿರೀಕ್ಷೆ ಅವರಿಗಿರಲಿಲ್ಲ. ಪರಿಣಾಮವಾಗಿ ಭಾರತವು ಸೋತಾಗ ಅನುಕಂಪದ ಅಲೆಯ ಮೇಲೆ ವಿಹರಿಸುವ ಯತ್ನವನ್ನೂ ಅವರು ಮಾಡಿದರು. ಅವರಿಗೆ ಸಹಜ ಕ್ರೀಡಾ ಸ್ಫೂರ್ತಿಯಿದ್ದಿದ್ದರೆ ಲಕ್ಷಕ್ಕೂ ಮಿಕ್ಕಿದ ಅವರ (ಕ್ರಿಕೆಟಿನ ಅಲ್ಲ) ಅಭಿಮಾನಿ ಪ್ರೇಕ್ಷಕರು ‘ಜೈ ಶ್ರೀರಾಮ್’ ಘೋಷಣೆಗಳನ್ನು ಮಾಡುತ್ತಿರಲಿಲ್ಲ. ಭಾರತದ ರನ್ಗಳಿಗೆ ಅಥವಾ ಭಾರತಕ್ಕೆ ವಿಕೆಟ್ ದಕ್ಕಿದಾಗ ಮಾತ್ರ ಚಪ್ಪಾಳೆ ತಟ್ಟುವವರು ಕ್ರೀಡಾಭಿಮಾನಿಯಲ್ಲ. ಫೈನಲ್ನ ಪಂದ್ಯ ಪುರುಷೋತ್ತಮ ಟ್ರೆವರ್ಹೆಡ್ ಶತಕಕ್ಕೂ ಅದೇ ಪ್ರೋತ್ಸಾಹ ಬರಬೇಕಿತ್ತು. ಆದರೆ ಆಸ್ಟ್ರೇಲಿಯ ಗೆದ್ದಾಗ ಅವಲಕ್ಷಣದ ಮುಖವನ್ನು ಪ್ರಧಾನಿಯಾದಿಯಾಗಿ ಎಲ್ಲರೂ ಹೊತ್ತದ್ದು ಕ್ರಿಕೆಟಿಗಗಲೀ ಈ ದೇಶಕ್ಕಾಗಲೀ ಶೋಭೆ ತರುವುದಿಲ್ಲ. ಆಸ್ಟ್ರೇಲಿಯಾ ತಂಡದ ನಾಯಕ ಕಮಿನ್ಸ್ ಹೇಳಿದಂತೆ ಲಕ್ಷ ಪ್ರೇಕ್ಷಕರ ಚಪ್ಪಾಳೆಗಿಂತಲೂ ಅವರನ್ನು ಮೌನವಾಗಿಸುವುದು ದೊಡ್ಡ ಸಾಧನೆ.

ಫೈನಲ್ ಪಂದ್ಯಕ್ಕೆ ಮೊದಲು ಭಾರತದ ಗೆಲುವಿಗಾಗಿ ಈ ದೇಶದ ಜನರು ಯಜ್ಞಯಾಗಾದಿಗಳನ್ನು ಮಾಡಿರಬಹುದು; ಹರಕೆ ಹೊತ್ತಿರಬಹುದು. ಆದರೆ ಕ್ರೀಡಾಂಗಣದಲ್ಲಿ ೧೧ ಮಂದಿ ಏನು ಮಾಡುತ್ತಾರೆಂಬುದರ ಮೇಲೆ ಸೋಲು-ಗೆಲುವು ನಿಂತಿದೆಯೆಂಬುದನ್ನು ಮರೆತರು. ನಾವು ಹಾವಾಡಿಗರ ದೇಶವೆಂಬಲ್ಲಿಂದ ಈ ಆಧುನಿಕತೆಗೆ ಬಂದಿದ್ದು, ಬದುಕಿಗೆ ಮಾತ್ರವಲ್ಲ, ನಮ್ಮೆಲ್ಲ ಆದ್ಯತೆಗಳಿಗೆ ಹೊಸ ವಿಸ್ತಾರದ, ವಿಸ್ತೃತ ಆಯಾಮಗಳನ್ನು ಗುರುತಿಸಬೇಕಾಗಿದೆ. ಆದರೆ ಮತ್ತೆ ಹಿಂದೆ ಸರಿಯುವ ಯೋಜನೆಗಳಲ್ಲಿ ಕ್ರಿಕೆಟ್ ಕುರಿತ ಭ್ರಮೆ ಕೂಡಾ ಒಂದಾಗುವ ಸಂಕುಚಿತ ವಿಚಾರ ಮಾತ್ರ ಆತಂಕಕಾರಿ.

ಈ ಬಾರಿ ನಮ್ಮ ವಿದ್ಯಾವಂತರೂ ಪಾಕಿಸ್ತಾನವನ್ನು ಕ್ರಿಕೆಟ್ ವೈರಿಯಂತೆ ಕಂಡಿದ್ದಾರೆ. ಅವರನ್ನು ಸೋಲಿಸಿದರೆ ಕಪ್ ದಕ್ಕದಿದ್ದರೂ ಸರಿ ಎಂಬ ದೃಷ್ಟಿಕೋನದ ಮಂದಿ ಸಾಕಷ್ಟಿದ್ದರು. ಈ ನಿರೀಕ್ಷೆ, ಅಪೇಕ್ಷೆ ಯಶಸ್ವಿಯಾಗಿದೆ.

ಆದರೆ ಗೆದ್ದ ಆಸ್ಟ್ರೇಲಿಯ ನಮ್ಮ ವೈರಿಯಲ್ಲ; ಎದುರಾಳಿ ಅಷ್ಟೇ. ಅವರಿಗೆ ಅಭಿನಂದನೆಗಳು. ಅಂತಿಮ ಪಂದ್ಯದ ವರೆಗೆ ತಲುಪಿದ ಭಾರತಕ್ಕೆ ಬೆನ್ನುತಟ್ಟೋಣ. ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಾತ್ರವಲ್ಲ, ಕ್ರಿಕೆಟ್ ಎಂಬ ಸಂಗತ ವಿಚಾರದಲ್ಲಿ ವಸುಧೈವ ಕುಟುಂಬಕಂ ಎಂಬ ಉಲ್ಲೇಖಕ್ಕೆ ನ್ಯಾಯ ಸಲ್ಲಿಸೋಣ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News