ಹದಿಹರೆಯದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ಜೈಲು ಅಧಿಕಾರಿಯಿಂದ ಅಪಹರಣ!
ಭೋಪಾಲ್: ಹದಿನೇಳು ವರ್ಷದ ಯುವತಿಯೊಬ್ಬಳ ಮೇಲೆ ಆರು ಮಂದಿಯ ಗುಂಪೊಂದು ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಮಧ್ಯಪ್ರದೇಶದ ಶಾಧೋಲ್ ಪಟ್ಟಣದಿಂದ ವರದಿಯಾಗಿದೆ. ಇದಾದ ಬಳಿಕ ಯುವತಿಯನ್ನು ಉಪ ಜೈಲು ಅಧಿಕಾರಿಯೊಬ್ಬರು ಹೋಟೆಲ್ ಗೆ ಕರೆದೊಯ್ದಿದ್ದು, ಗುರುವಾರ ಪೊಲೀಸರು ಸಂತ್ರಸ್ತೆ ಯುವತಿಯನ್ನು ರಕ್ಷಿಸಿದ್ದಾರೆ. ಎಲ್ಲ ಶಂಕಿತ ಅತ್ಯಾಚಾರಿಗಳನ್ನು ಬಂಧಿಸಲಾಗಿದೆ. ಬುಧಾರ್ ಉಪ ಕಾರಾಗೃಹದಲ್ಲಿ ಕರ್ತವ್ಯದಲ್ಲಿದ್ದ ಉಪ ಜೈಲು ಅಧಿಕಾರಿ ವಿಕಾಸ್ ಸಿಂಗ್, ಯುವತಿಯನ್ನು ಅಪಹರಿಸಿದ ಆರೋಪ ಎದುರಿಸುತ್ತಿದ್ದಾರೆ. ಮಾಲ್ಡಾದಲ್ಲಿ ಏಳನೇ ತರಗತಿಯ ಬಾಲಕಿಯೊಬ್ಬಳನ್ನು ಮನೆಯಲ್ಲಿ ಕೂಡಿ ಹಾಕಿ ಇಬ್ಬರು ಪದೇ ಪದೇ ಅತ್ಯಾಚಾರ ಎಸಗಿದ ಘಟನೆಯ ಮರುದಿನವೇ ಈ ಘಟನೆ ಬೆಳಕಿಗೆ ಬಂದಿದೆ.
ಸಂತ್ರಸ್ತೆ ಯುವತಿ ಏಪ್ರಿಲ್ 28ರಂದು ರಾತ್ರಿ ನಾಪತ್ತೆಯಾಗಿದ್ದು, ಎರಡು ದಿನಗಳ ಬಳಿಕ ಆಕೆಯ ಕುಟುಂಬದವರು ಸೋಹಾಗ್ ಪುರ ಎಸ್ಪಿಯನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಮರುದಿನ ಪಟ್ಟಣದ ಹೋಟೆಲ್ ಒಂದರಲ್ಲಿ ಯುವತಿ ಇರುವುದು ಪತ್ತೆಯಾಯಿತು. ಗುರುವಾರ ಸಂಜೆ ಸೊಹಾಗ್ಪುರ ಪೊಲೀಸರು ನಾಲ್ವರು ಅರೋಪಿಗಳನ್ನು ಬಂಧಿಸಿದ್ದು, ಬಳಿಕ ಮಧ್ಯರಾತ್ರಿ ವೇಳೆ ಮತ್ತಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಅಪ್ರಾಪ್ತ ವಯಸ್ಸಿನ ಯುವತಿ ಶುಕ್ರವಾರ ಕೋರ್ಟ್ನಲ್ಲಿ ಹೇಳಿಕೆ ದಾಖಲಿಸಿದ್ದು, ಆರೋಪಿಗಳ ಪೈಕಿ ಒಬ್ಬ ಏಪ್ರಿಲ್ 29ರಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಬಳಿಕಿಬ್ಬರು ಅಲ್ಲಿ ಅತ್ಯಾಚಾರ ಎಸಗಿದ್ದಾರೆ. ಮರುದಿನ ಮತ್ತೊಬ್ಬ ಆರೋಪಿ ಮತ್ತಿತರನ್ನು ಅಜ್ಞಾತ ಸ್ಥಳಕ್ಕೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ವಿವರಿಸಿದ್ದಾಳೆ.
ಬಳಿಕ ಶಾಡೋಲ್ ರೈಲು ನಿಲ್ದಾಣಕ್ಕೆ ಏಪ್ರಿಲ್ 30ರ ರಾತ್ರಿ ನಡೆದುಕೊಂಡು ಹೋಗುತ್ತಿದ್ದಾಗ, ಸಿಂಗ್ ವಾಹನದಲ್ಲಿ ಕರೆದೊಯ್ಯಲು ಮುಂದಾದರು. ಬಳಿಕ ಹೋಟೆಲ್ ಒಂದಕ್ಕೆ ಕರೆದೊಯ್ದಿದ್ದು, ಮೇ 1ರಂದು ಅಲ್ಲಿ ಯುವತಿ ಪೊಲೀಸರಿಗೆ ಪತ್ತೆಯಾಗಿದ್ದಾಳೆ. ಉಪ ಜೈಲು ಅಧಿಕಾರಿಗೆ ಹಿಂದಿನ ದಿನ ಅದೇ ಹೋಟೆಲ್ನಲ್ಲಿ ನಿಶ್ಚಿತಾರ್ಥ ನಡೆದಿದ್ದು, ಸಂಬಂಧಿಕರು ಇನ್ನೂ ಅದೇ ಹೋಟೆಲ್ನಲ್ಲಿ ಇದ್ದರು ಎನ್ನಲಾಗಿದೆ.