ಜಗತ್ತಿನ ಅತ್ಯಂತ ದೊಡ್ಡ ಹಮ್ಮರ್ ಎಸ್‌ಯುವಿ ಬಗ್ಗೆ ಇಲ್ಲಿದೆ ಮಾಹಿತಿ…
ಹೊಸದಿಲ್ಲಿ : ಹಮ್ಮರ್ ಎಸ್‌ಯುವಿಯನ್ನು ಸಾಮಾನ್ಯವಾಗಿ ಅಮೆರಿಕಾದ ಸೇನೆ ತನ್ನ ಸಿಬ್ಬಂದಿಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಲು ಬಳಸುತ್ತದೆ. ಆದರೆ ಇತ್ತೀಚೆಗೆ ದೈತ್ಯ ಗಾತ್ರದ ಹಮ್ಮರ್ ಎಸ್‌ಯುವಿ ಕುರಿತಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದು ಜಗತ್ತಿನ ಅತ್ಯಂತ ದೊಡ್ಡ ಎಸ್‌ಯುವಿ ಎಂದು ಈ ವೀಡಿಯೋ ಪೋಸ್ಟ್ ಮಾಡಿದ ಟ್ವಿಟ್ಟರಿಗರೊಬ್ಬರು ಹೇಳಿದ್ದಾರೆ. ಈ ಹಮ್ಮರ್ H1 X3 ವಾಹನವು ಸಾಮಾನ್ಯ ಹಮ್ಮರ್ ವಾಹನದ ಮೂರು ಪಟ್ಟು ದೊಡ್ಡ ಗಾತ್ರ ಹೊಂದಿದೆ.
ಯುಟ್ಯೂಬ್ ಚಾನಲ್ ಆಟೊಮೋಟಿವ್‌ಕ್ರೇಝರ್ ಈ ಹಮ್ಮರ್‌ನ ವೀಡಿಯೋ ಅಪ್‌ಲೋಡ್ ಮಾಡಿದ್ದು ಅದು 6.6 ಮೀಟರ್ ಎತ್ತರವಿದೆ 14 ಮೀಟರ್ ಉದ್ದವಿದೆ ಹಾಗೂ ಆರು ಮೀಟರ್ ಆಗಲವಿದೆ. ಈ ದೈತ್ಯ ಹಮ್ಮರ್ ಯುಎಇ ರಾಜಮನೆತನದ ಪ್ರಮುಖ ಸದಸ್ಯರಾಗಿರುವ ಶೇಖ್ ಹಮದ್ ಬಿನ್ ಹಮ್ದಾನ್ ಅಲ್ ನಹ್ಯಾನ್ ಅವರದ್ದು ಎನ್ನಲಾಗಿದೆ.
ಈ ಕಸ್ಟಮ್ ನಿರ್ಮಿತ ಹಮ್ಮರ್ ಮೂಲ ಹಮ್ಮರ್‌ನಂತೆಯೇ ವಿನ್ಯಾಸಗೊಳಿಸಲಾಗಿದೆ ಹಾಗೂ ದಪ್ಪ ಲೋಹದ ಪದರಗಳನ್ನು ಅದು ಹೊಂದಿದೆ. ಹಮ್ಮರ್ H1 X3 ಒಳಗೆ ಮನೆಯ ರೀತಿ ವಿನ್ಯಾಸಗೊಳಿಸಲಾಗಿದೆ ಹಾಗೂ ಅಲ್ಲಿ ಬೆಡ್‌ರೂಂ, ಅಡುಗೆ ಕೋಣೆ ಮತ್ತು ಸ್ನಾನಗೃಹವಿದೆ. ಈ ಎಸ್‌ಯುವಿ ತಯಾರಿ ಕಾರ್ಯ ಇನ್ನೂ ಸಂಪೂರ್ಣವಾಗಿಲ್ಲ ಎಂದು ಹೇಳಲಾಗಿದೆ ಹಾಗೂ ಅದನ್ನು ಹತ್ತಲು ಏಣಿಯ ಸಹಾಯ ಬೇಕಿದೆ. ಒಳಗೆ ನೀರು ಸರಬರಾಜಿಗೆ ಪೈಪ್‌ಲೈನ್ ಗಳು ಹಾಗೂ ಚಕ್ರದ ವಾಯು ಒತ್ತಡ ತಿಳಿಯಲು ಮಾಪನಗಳಿವೆ.
ಹಮ್ಮರ್ ಹೊರತಾಗಿ ಶೇಖ್ ನಹ್ಯಾನ್ ಅವರ ಬಳಿ 21 ಅಡಿ ಅಗಲದ ವಿಲ್ಲೀಸ್ ಜೀಪ್ ಕೂಡ ಇದೆ. ಈ ಜೀಪ್ ಗಾತ್ರ ಅದೆಷ್ಟು ದೊಡ್ಡದಿದೆಯೆಂದರೆ ನಹ್ಯಾನ್ ಅವರು ತಮ್ಮ ಕಾರುಗಳನ್ನು ಪ್ರದರ್ಶಿಸಲು ಸ್ಥಾಪಿಸಲಾಗಿರುವ ಮ್ಯೂಸಿಯಂ ಒಳಗೆ ಅದನ್ನು ಇರಿಸಲು ಸಾಧ್ಯವಾಗುತ್ತಿಲ್ಲ.