ಅಹ್ಮದಾಬಾದ್ ನಲ್ಲಿ ಭಾರತ-ಪಾಕ್ ವಿಶ್ವಕಪ್ ಕ್ರಿಕೆಟ್ ಪಂದ್ಯಕ್ಕೆ ಎಂಎನ್ ಎಸ್ ನಾಯಕ ಆಕ್ಷೇಪ
ಮುಂಬೈ: ಐಸಿಸಿ ಪುರುಷರ 50 ಓವರ್ ಗಳ ವಿಶ್ವಕಪ್ ಪಂದ್ಯಾವಳಿಯ ಅಂಗವಾಗಿ ಅಹಮದಾಬಾದ್ ನಲ್ಲಿ ನಿಗದಿಯಾಗಿರುವ ಭಾರತ ಹಾಗೂ ಪಾಕಿಸ್ತಾನದ ನಡುವಿನ ಏಕದಿನ ಕ್ರಿಕೆಟ್ ಪಂದ್ಯಕ್ಕೆ ಮಹಾರಾಷ್ಟ್ರ ನವ ನಿರ್ಮಾಣ ಸೇನಾ (ಎಂಎನ್ಎಸ್) ನಾಯಕ ಸಂದೀಪ್ ದೇಶಪಾಂಡೆ ಆಕ್ಷೇಪಿಸಿದರು.
"ನಮ್ಮ ಸೈನಿಕರ ಮೇಲೆ ದಾಳಿ ಮಾಡಿದ ಹಾಗೂ ಕೊಂದವರ ಹಾಗೂ ನಮ್ಮ ಅಧಿಕಾರಿಗಳನ್ನು ಹನಿ ಟ್ರ್ಯಾಪ್ ಗೆ ಸಿಲುಕಿಸಿದಂತಹ ರಾಷ್ಟ್ರದೊಂದಿಗೆ ನಾವು ಆಟವಾಡಬೇಕೇ?" ಎಂದು ದೇಶಪಾಂಡೆ ಕೇಳಿದರು.
ಎಲ್ಲಾ ದಾಳಿಗಳ (ಭಯೋತ್ಪಾದನೆ) ಹಿಂದೆ ಪಾಕಿಸ್ತಾನವಿದೆ ಎಂದು ನೆನಪಿಡಿ. ನಾವು ಅಂತಹ ರಾಷ್ಟ್ರವನ್ನು ಸ್ವಾಗತಿಸಬೇಕೇ? ಇದು ರಾಜಕೀಯದ ಬಗ್ಗೆ ಅಲ್ಲ, ಆದರೆ ಇದು ರಾಷ್ಟ್ರದ ವಿಚಾರ ”ಎಂದು ಎಂಎನ್ಎಸ್ ನಾಯಕ ಹೇಳಿದರು.
ಅಂತಹ ಪಂದ್ಯಗಳು ನಡೆದಾಗ, ಪಾಕಿಸ್ತಾನಿ ನಾಗರಿಕರು ಕೂಡ ತಮ್ಮ ರಾಷ್ಟ್ರ ಧ್ವಜಗಳೊಂದಿಗೆ ಬರುತ್ತಾರೆ. ನಾವು ಇದನ್ನು ಸಹಿಸಬೇಕೇ? ಈ ಕುರಿತ ಚರ್ಚೆಯನ್ನು ರಾಷ್ಟ್ರದಾದ್ಯಂತ ನಡೆಸಬೇಕು ”ಎಂದು ಅವರು ಹೇಳಿದರು.
ಇಡೀ ರಾಷ್ಟ್ರವು ಈ ವಿಷಯವನ್ನು ಚರ್ಚಿಸಬೇಕು, ನನ್ನ ಪ್ರಶ್ನೆಗಳನ್ನು ಸರಕಾರ ಮತ್ತು ಪ್ರತಿಪಕ್ಷಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.