×
Ad

28 ವರ್ಷಗಳ ಹಿಂದೆ ಕೋಣವನ್ನು ಸಾಯಿಸಿದ್ದಕ್ಕೆ ನ್ಯಾಯಾಲಯದಿಂದ ಸಮನ್ಸ್ ಪಡೆದ ಉತ್ತರಪ್ರದೇಶದ ಚಾಲಕ!

Update: 2023-06-29 16:53 IST

ಫೋಟೋ: Twitter@NDTV

ಲಕ್ನೊ: ದೇಶದಲ್ಲಿ ಕಾನೂನು ಪ್ರಕ್ರಿಯೆಗಳ ವೇಗವನ್ನು ವಿವರಿಸುವ ವಿಚಿತ್ರ ಪ್ರಕರಣವೊಂದರಲ್ಲಿ ಉತ್ತರ ಪ್ರದೇಶದ 83 ವರ್ಷದ ವೃದ್ದರೊಬ್ಬರು 28 ವರ್ಷಗಳ ಹಿಂದೆ ಕೋಣದ ಮೇಲೆ ವಾಹನ ಚಲಾಯಿಸಿ ಕೊಂದ ಪ್ರಕರಣಕ್ಕಾಗಿ ನ್ಯಾಯಾಲಯದಿಂದ ಸಮನ್ಸ್ ಸ್ವೀಕರಿಸಿದ್ದಾರೆ.

ಅಚ್ಚನ್ ಎರಡು ದಶಕಗಳ ಹಿಂದೆ ಚಾಲಕನಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದು, ಈಗ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಸೋಮವಾರ ಅವರ ಮನೆಗೆ ಅನಿರೀಕ್ಷಿತ ಅತಿಥಿಯ ಆಗಮನವಾಗಿತ್ತು. ಬರೇಲಿ ಪೊಲೀಸರ ತಂಡವು ಅಚ್ಚನ್ ಅವರ ಬಾರಾಬಂಕಿ ಮನೆಗೆ ತಲುಪಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸಮನ್ಸ್ ಹಸ್ತಾಂತರಿಸಿತು. ಆಘಾತಕ್ಕೊಳಗಾದ ಅಚ್ಚನ್ ಪೊಲೀಸರ ಮುಂದೆ ಅಳಲು ತೋಡಿಕೊಂಡರು.

ವಯೋವೃದ್ದರಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದ ಪೊಲೀಸರು, ನೀವು ನ್ಯಾಯಾಲಯಕ್ಕೆ ಹಾಜರಾಗಬೇಕು, ಇಲ್ಲದಿದ್ದರೆ ಕಾನೂನಿನ ಪ್ರಕಾರ ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

1994 ರ ಘಟನೆಯನ್ನು ನೆನಪಿಸಿಕೊಂಡ ಅಚ್ಚನ್ ಅವರು ಆಗ ನಾನು ಉತ್ತರ ಪ್ರದೇಶ ಸಾರಿಗೆ ಇಲಾಖೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದೆ. ಸರಕು ತೆಗೆದುಕೊಳ್ಳಲು ಬರೇಲಿಗೆ ಹೋಗಿದ್ದೆ. ಅಲ್ಲಿಂದ ಫರೀದ್ಪುರಕ್ಕೆ ಹೋಗಿದ್ದೆ. ರಾತ್ರಿ ವಾಹನ ಓಡಿಸುತ್ತಿದ್ದಾಗ ಕೋಣದ  ಗಾಡಿ ಹಠಾತ್ ತಿರುವು ಪಡೆದುಕೊಂಡಿತು. ಬ್ರೇಕ್ ಕೆಲಸ ಮಾಡದೆ ಢಿಕ್ಕಿ ಹೊಡೆದು ಕೋಣ ಸತ್ತುಹೋಯಿತು. ನಾನು ಫರೀದ್ಪುರ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದೆ ಎಂದು ಹೇಳಿದರು.

ನಾನು ಈ ಮೊದಲು ಎರಡು ಬಾರಿ ಸಮನ್ಸ್ ಸ್ವೀಕರಿಸಿದ್ದೆ, ಆದರೆ ಎರಡೂ ಸಂದರ್ಭಗಳಲ್ಲಿ ಜಾಮೀನು ಪಡೆದಿದ್ದೆ. ಎರಡು ದಶಕಗಳಿಂದ ಈ ವಿಚಾರ ಸಂಪೂರ್ಣ ಮರೆಯಾಗಿತ್ತು. ಇದೀಗ ಅದು ನನ್ನೆದುರು ಬಂದಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News