ಉತ್ತರ ಪ್ರದೇಶ: ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಗುಫ್ರಾನ್ ಎನ್ ಕೌಂಟರ್ ನಲ್ಲಿ ಹತ್ಯೆ
ಲಕ್ನೋ: ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದ ಎನ್ ಕೌಂಟರ್ ನಲ್ಲಿ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಆರೋಪಿಯನ್ನು ಗುಫ್ರಾನ್ ಎಂದು ಗುರುತಿಸಲಾಗಿದ್ದು, ಈತ ಕೊಲೆ ಮತ್ತು ಡಕಾಯಿತಿ ಪ್ರಕರಣಗಳಲ್ಲಿ ಬೇಕಾಗಿದ್ದ.
ಯುಪಿ ಪೊಲೀಸರ ಪ್ರಕಾರ,ಇಂದು ಬೆಳಿಗ್ಗೆ 5:00 ಗಂಟೆಯ ಸುಮಾರಿಗೆ ವಿಶೇಷ ಕಾರ್ಯಪಡೆ ತಂಡವು ಕೌಶಂಬಿ ಜಿಲ್ಲೆಯಲ್ಲಿ ದಾಳಿ ನಡೆಸಿದೆ. ಗುಫ್ರಾನ್ ಟೀಮ್ ಹಾಗೂ ಪೊಲೀಸರ ತಂಡ ಮುಖಾಮುಖಿಯಾಯಿತು. ಗುಫ್ರಾನ್ ಗುಂಡು ಹಾರಿಸಿದ, ನಂತರ ಪೊಲೀಸರು ಪ್ರತಿದಾಳಿ ನಡೆಸಿದರು ಮತ್ತು ನಂತರದ ಕ್ರಾಸ್ ಫೈರಿಂಗ್ ನಲ್ಲಿ ಆತನಿಗೆ ಗುಂಡು ತಗಲಿತು. ಗಾಯಗೊಂಡ ಗುಫ್ರಾನ್ ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆತನು ಸಾವನ್ನಪ್ಪಿದನು.
ಪ್ರತಾಪ್ ಗಢ್ ಮತ್ತು ಉತ್ತರ ಪ್ರದೇಶದ ಇತರ ಜಿಲ್ಲೆಗಳಲ್ಲಿ ಕೊಲೆ, ಕೊಲೆ ಯತ್ನ ಮತ್ತು ದರೋಡೆ ಸೇರಿದಂತೆ 13 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಗುಫ್ರಾನ್ ಬೇಕಾಗಿದ್ದ. ಈತನ ಸೆರೆಗೆ ಉತ್ತರಪ್ರದೇಶ ಪೊಲೀಸರು 1,00,000 ಬಹುಮಾನ ಘೋಷಿಸಿದ್ದರು.
ಯುಪಿ ಪೊಲೀಸರು ಹಾಗೂ ಅಪರಾಧಿಗಳ ನಡುವಿನ ಸರಣಿ ಎನ್ ಕೌಂಟರ್ ಗಳಲ್ಲಿ ಇದು ಹೊಸ ಸೇರ್ಪಡೆ. 2017 ರಲ್ಲಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ನಂತರ, 10,900 ಕ್ಕೂ ಹೆಚ್ಚು ಎನ್ ಕೌಂಟರ್ ಗಳು ನಡೆದಿವೆ, ಇದರಲ್ಲಿ 185 ಕ್ಕೂ ಹೆಚ್ಚು ಕ್ರಿಮಿನಲ್ ಗಳು ಕೊಲ್ಲಲ್ಪಟ್ಟಿದ್ದಾರೆ.