ತುಮಕೂರು | ನಕಲಿ ಮದ್ಯ ಸೇವನೆ: 15 ಮಂದಿ ಅಸ್ವಸ್ಥ
Update: 2025-11-03 11:28 IST
ತುಮಕೂರು: ನಕಲಿ ಮದ್ಯ ಸೇವಿಸಿದ ಪರಿಣಾಮ 15 ಮಂದಿ ಅಸ್ವಸ್ಥಗೊಂಡ ಘಟನೆ ತುಮಕೂರು ಜಿಲ್ಲೆ ಗಡಿಭಾಗದ ಚರ್ಲೋಪಲ್ಲಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ತುಮಕೂರು ಮಧುಗಿರಿಯ ತೆರಿಯೂರು- ಚಿಕ್ಕದಾಳವಟ್ಟ ಗ್ರಾಮದ 10 ಮಂದಿ ಹಾಗೂ ಆಂಧ್ರ ಪ್ರದೇಶದ ಚೌಲೂರು ಗ್ರಾಮದ ಐವರು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಸ್ವಸ್ಥರಾಗಿರುವ ನಾಗರಾಜು ಮತ್ತು ನಿಂಗಕ್ಕ ಎಂಬವರನ್ನು ಹಿಂದೂಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ತೆರಿಯೂರು ಗ್ರಾಮದ ಮಾರಪ್ಪ, ದಾಸಪ್ಪ, ಚಿಕ್ಕನರಸಿಂಹಯ್ಯ ಹಾಗೂ ಟಿ. ನಾಗರಾಜು ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನುಳಿದವರು ಪ್ರಾಥಮಿಕ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸರು ಹಾಗೂ ಆಂಧ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.