×
Ad

ತಿಪಟೂರು | ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗಿಯಾಗಿದ್ದ ವೈದ್ಯನಿಗೆ ‘ಯಶಸ್ವಿನಿ ಟ್ರಸ್ಟ್’ನಲ್ಲಿ ಸ್ಥಾನ : ಕಾಂಗ್ರೆಸ್ ವಿರೋಧ

Update: 2025-10-26 20:02 IST

ಬೆಂಗಳೂರು : ತಿಪಟೂರಿನಲ್ಲಿ ಆರೆಸ್ಸೆಸ್ ಗಣವೇಶಧಾರಿಯಾಗಿ ಪಥಸಂಚಲನದಲ್ಲಿ ಭಾಗವಹಿಸಿದ್ದ ಡಾ.ಶ್ರೀಧರ್‌ ಎಂಬವರಿಗೆ ರಾಜ್ಯ ಸರಕಾರದ ‘ಯಶಸ್ವಿನಿ ಟ್ರಸ್ಟ್’ನ ಟ್ರಸ್ಟಿಯಾಗಿ ನೇಮಕ ಮಾಡಿದ್ದು ಮತ್ತು ಅವರ ಹೆಸರನ್ನು ಶಿಫಾರಸು ಮಾಡಿರುವ ತಿಪಟೂರು ಶಾಸಕ ಷಡಕ್ಷರಿ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ರವಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ತಿಪಟೂರು ಕ್ಷೇತ್ರದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಬಿ.ಶಶಿಧರ(ಟೂಡಾ), ಕೋಮುವಾದಿ ಸಂಘ ಪರಿವಾರದ ವಿರುದ್ಧ ಕಾಂಗ್ರೆಸ್ ನಾಯಕತ್ವ ರಾಜ್ಯ ಮತ್ತು ದೇಶವ್ಯಾಪಿ ಸಮರ ಸಾರಿರುವ ಸಂದರ್ಭದಲ್ಲಿ ಶಾಸಕ ಷಡಕ್ಷರಿ, ಪಕ್ಷದ ಸಿದ್ಧಾಂತಗಳಿಗೆ ವ್ಯತಿರಿಕ್ತ ಎನ್ನಿಸುವ ನಡೆಗಳನ್ನು ಅನುಸರಿಸುತ್ತಿರುವುದು ಆಘಾತಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಘ ಪರಿವಾರದ ಕಾರ್ಯಕರ್ತ ಡಾ.ಶ್ರೀಧರ್ ಅವರನ್ನು ಟ್ರಸ್ಟಿಯಾಗಿಸಿ ಹೊರಡಿಸಿದ ಸುತ್ತೋಲೆಯನ್ನು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಮನಿಸಿಲ್ಲವೇ ಎನ್ನುವುದು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಶಾಸಕ ಷಡಕ್ಷರಿ ಮುತುವರ್ಜಿವಹಿಸಿ ಸಂಘ ಪರಿವಾರಕ್ಕೆ ಸೇರಿದ ಕಾರ್ಯಕರ್ತನ ಹೆಸರನ್ನು ಯಶಸ್ವಿನಿ ಟ್ರಸ್ಟ್‌ಗೆ ಶಿಫಾರಸು ಮಾಡಿದ್ದು, ಈಗ ಗುಟ್ಟಾಗಿ ಉಳಿದಿಲ್ಲ ಎಂದು ಶಶಿಧರ ಹೇಳಿದ್ದಾರೆ.

ಕೋಮುವಾದಿಗಳ ಪರ ಎನ್ನಿಸುವ ಶಾಸಕರ ಇಂಥ ಧೋರಣೆಯನ್ನು ಸಹಿಸಲು ಅಸಾಧ್ಯ ಎಂದು ಕಾಂಗ್ರೆಸ್ ಕಾರ್ಯಕರ್ತರು ನನ್ನ ಬಳಿ ದೂರುತ್ತಿದ್ದಾರೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿಯೂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷದ ಕೋಮುವಾದ ವಿರೋಧಿ ನಿಲುವಿಗೆ, ಸಾಮರಸ್ಯ ನೀತಿಗೆ ಮತ್ತು ಘನತೆಗೆ ಚ್ಯುತಿ ಬಂದಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ತಿಪಟೂರು ಕ್ಷೇತ್ರದ ಮತ್ತು ತುಮಕೂರು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಮತ್ತು ಅಸಮಾಧಾನಗಳನ್ನು ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಹೈಕಮಾಂಡ್ ಗಮನಕ್ಕೆ ತರುವುದು ನನ್ನ ನೈತಿಕ ಹೊಣೆಗಾರಿಕೆಯಾಗಿದೆ. ಕೂಡಲೇ ಈ ಸುತ್ತೋಲೆಯನ್ನು ಹಿಂಪಡೆದು ಕ್ಷೇತ್ರದ ಕಾರ್ಯಕರ್ತರನ್ನು ತೀವ್ರ ಮುಜುಗರದಿಂದ ಪಾರು ಮಾಡುವಂತೆ ಮನವಿ ಮಾಡುತ್ತಿದ್ದೇನೆ ಎಂದು ಶಶಿಧರ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News