×
Ad

Tumakuru | ಜಮೀನಿಗೆ ರಸ್ತೆ ಮಾಡಿಕೊಡದ ಅಧಿಕಾರಿಗಳು; ಮೂಲಂಗಿಯನ್ನೇ ಲಂಚವಾಗಿ ನೀಡಲು ಬಂದ ರೈತ

Update: 2026-02-06 01:11 IST

ತುಮಕೂರು : ತನ್ನ ಜಮೀನಿಗೆ ರಸ್ತೆ ಮಾಡಿಕೊಡಲು ಅರ್ಜಿ ನೀಡಿ ಮನವಿ ಮಾಡಿದ್ದು, ಲೋಕಾಯುಕ್ತರೇ ಸೂಚಿಸಿದರೂ ಕ್ಯಾರೆ ಎನ್ನದ ಕಂದಾಯ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಟ್ಟು ಅಲೆದಾಡಿಸಿದ್ದಕ್ಕೆ ಅಕ್ರೋಶಗೊಂಡ ರೈತನೊಬ್ಬ ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಲು ಬಂದಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನಲ್ಲಿ ವರದಿಯಾಗಿದೆ.

ಜಕ್ಕೇನಹಳ್ಳಿಯ ರೈತ ಪ್ರಸನ್ನಕುಮಾರ್ ಎಂಬವರು ಮಧುಗಿರಿ ತಾಲೂಕು ಕಚೇರಿಯ ಮುಂದೆ ಮೈಕ್ ಹಿಡಿದು ನನ್ನ ಬಳಿ ಲಂಚ ನೀಡಲು ಹಣವಿಲ್ಲ. ಬದಲಿಗೆ ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡುತ್ತೇನೆ. ಬನ್ನಿ ಬನ್ನಿ ಎಂದು ಘೋಷಣೆ ಕೂಗಿದ್ದಾರೆ. ಜಕ್ಕೇನಹಳ್ಳಿಯ ರೈತ ಪ್ರಸನ್ನ ಕುಮಾರ್ ಸರ್ವೇ ನಂ. 8/1ರ ಜಮೀನಿನಲ್ಲೇ ತರಕಾರಿ ಇತರೆ ಬೆಳೆಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ. ಆದರೆ ಆತನ ಜಮೀನಿಗೆ ರಸ್ತೆಯಿಲ್ಲದ ಕಾರಣ ರಸ್ತೆಗಾಗಿ 2 ವರ್ಷದ ಹಿಂದೆ ತಾಲೂಕು ಆಡಳಿತಕ್ಕೆ ಮನವಿ ನೀಡಿದ್ದರು. ಆದರೆ ಇತ್ತ ದಾರಿ ಒತ್ತುವರಿ ಬಿಡಿಸಿಕೊಡದೆ ಅತ್ತ ಹೊಸ ದಾರಿ ಮಾಡಿಕೊಡದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.

ನ್ಯಾಯಾಲಯ ರೈತನ ಜಮೀನಿಗೆ ಕಾನೂನು ಬದ್ಧವಾಗಿ 1 ತಿಂಗಳಲ್ಲಿ ರಸ್ತೆ ನಿರ್ಮಿಸಿಕೊಡಲು ಸೂಚಿಸಿತ್ತು. ಆದರೆ ರಸ್ತೆ ನಿರ್ಮಾಣಕ್ಕಾಗಿ ಸ್ಥಳ ಮಹಜರು ಹಾಗೂ ಕಾನೂನು ಬದ್ಧ ಪರಿಶೀಲನೆಗೆ ಬರಲು ಕೆಲವು ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹಣವಿಲ್ಲದ ರೈತ ಪ್ರಸನ್ನಕುಮಾರ್ ಅಧಿಕಾರಿಗಳ ಈ ನಡೆಗೆ ಬೇಸತ್ತು ತಹಶೀಲ್ದಾರ್‌ಗೂ ಮನವಿ ಮಾಡಿದಾಗ ರಸ್ತೆ ಮಾಡಿಕೊಡಲು ಸೂಚಿಸಿದ್ದರು. ಜಮೀನಿಗೆ ರಸ್ತೆ ಮಾಡಿಕೊಡುವ ಸಂಬಂಧ ಲಂಚ ನೀಡಲು ಹಣವಿಲ್ಲದೆ ತಾನು ಬೆಳೆದ ಮೂಲಂಗಿ ನೀಡಲು ನಾನು ಬಂದಿದ್ದೇನೆ. ಅದೂ ಸಾಲದಿದ್ದರೆ ನನ್ನ ಮನೆ ಬರೆದು ಕೊಡ್ತೀನಿ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತ ಪ್ರಸನ್ನ ಕುಮಾರ್, ಈ ಬಗ್ಗೆ ಸಿಎಂ ಬಳಿಗೂ ಹೋಗಿದ್ದು ಕಂದಾಯ ಸಚಿವ ಕೃಷ್ಣ ಬೈರೇಗೌಡರಿಂದ ಜಮೀನಿಗೆ ದಾರಿ ಬಿಡಿಸಿಕೊಡುವಂತೆ ಆದೇಶ ತಂದಿದ್ದೆ ಎಂದಿದ್ದಾರೆ.

ʼರೈತನ ಸಮಸ್ಯೆಗೆ ಕಂದಾಯ ಇಲಾಖೆ ಪರಿಹಾರ ನೀಡಲಿದೆ. ನಮ್ಮದು ಎಂದಿಗೂ ಪಾರದರ್ಶಕ ಕೆಲಸಕ್ಕೆ ಬೆಲೆ ನೀಡುವ ಇಲಾಖೆ, ಈ ರೈತನ ಬಗ್ಗೆ ತಿಳಿದಿದ್ದು ನಮ್ಮ ಅಧಿಕಾರಿಗಳ ತಪ್ಪಿದ್ದರೆ ಕಾನೂನು ರೀತಿ ಕ್ರಮಕ್ಕೆ ಮುಂದಾಗುತ್ತೇವೆ ಹಾಗೂ ನಕಾಶೆ ರಸ್ತೆಯಿದ್ದರೆ ವಾರದೊಳಗೆ ರಸ್ತೆ ನಿರ್ಮಿಸುವ ಕೆಲಸ ಮಾಡಿಕೊಡುತ್ತೇವೆʼ ಎಂದು ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News