ತುಮಕೂರು | ಬಾವಿಗೆ ಬಿದ್ದ ಚಿರತೆ
Update: 2026-02-14 15:12 IST
ತಿಪಟೂರು: ನಗರದ ಹೊರವಲಯದಲ್ಲಿ ಆಹಾರ ಅರಸಿ ಬಂದಿದ್ದ ಚಿರತೆ ಬಾವಿಗೆ ಬಿದ್ದಿರುವ ಘಟನೆ ನಡೆದಿದೆ.
ನಗರದ ಗಾಂಧೀನಗರ ಹೊರವಲಯದಲ್ಲಿರುವ ಬೆಸ್ಕಾಂ ಇಲಾಖೆಯ ನೌಕರ ಕಾರ್ತಿಕ್ ಅವರ ತೋಟದ ಬಾವಿಗೆ ಚಿರತೆ ಬಿದ್ದಿದೆ. ಬೆಳಿಗ್ಗೆ ಎಂದಿನಂತೆ ತೋಟಕ್ಕೆ ತೆರಳಿದ ಕಾರ್ತಿಕ್ ಅವರ ಕುಟುಂಬಸ್ಥರು ಬಾವಿಯಿಂದ ಚಿರತೆ ಚೀರಾಟ ಕೇಳಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಮೇರೆಗೆ ಅರಣ್ಯಾಧಿಕಾರಿ ಮಧು ಹಾಗೂ ವಲಯ ಅರಣ್ಯ ಸಂರಕ್ಷಣಾಧಿಕಾರಿ ಭರತ್ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ, ಬಾವಿಯಲ್ಲಿ ಬಿದ್ದಿರುವ ಚಿರತೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವ ಕಾರ್ಯಾಚರಣೆಯಲ್ಲಿ ತೊಡಗಿದೆ.
ಚಿರತೆ ಬಾವಿಗೆ ಬಿದ್ದಿರುವ ಸುದ್ದಿ ತಿಳಿದ ಕೂಡಲೇ ಕಾರ್ತಿಕ್ ಅವರ ತೋಟದ ಬಳಿ ಸಾವಿರಾರು ಜನರು ಜಮಾಯಿಸಿದ್ದಾರೆ. ಜನರ ಕೂಗಾಟದಿಂದ ಚಿರತೆ ಗಾಬರಿಯಾಗದಂತೆ ತಡೆಯಲು ಸಾರ್ವಜನಿಕರನ್ನು ದೂರ ಸರಿಸುವ ಕಾರ್ಯವನ್ನು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕೈಗೊಂಡಿದ್ದಾರೆ.