Tumakuru | ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಹತ್ಯೆಗೈದ ಪುತ್ರಿ !
ತುಮಕೂರು : ತಾಲೂಕಿನ ಅನುಪನಹಳ್ಳಿಯಲ್ಲಿ ಜ್ಯೋತಿಷಿಯ ಮಾತು ನಂಬಿ ಮಗಳೇ ತಾಯಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ಅನುಪನಹಳ್ಳಿಯ ಪುಷ್ಪಲತಾ (55) ಎಂದು ಗುರುತಿಸಲಾಗಿದೆ. ಅವರು ಇತ್ತೀಚೆಗೆ ತುಮಕೂರು ನಗರದ ಕ್ಯಾತ್ಸಂದ್ರ ಸಮೀಪದ ಗಿರಿನಗರದಲ್ಲಿ ವಾಸಿಸುತ್ತಿದ್ದ ಮಗಳು ಸುಚಿತ್ರ ಅವರ ಮನೆಯಲ್ಲಿ ಕೆಲ ದಿನಗಳಿಂದ ಇದ್ದರು ಎಂದು ತಿಳಿದು ಬಂದಿದೆ.
ಎರಡು ದಿನಗಳ ಹಿಂದೆ ಸುಚಿತ್ರ ತನ್ನ ತಾಯಿ ಮೃತಪಟ್ಟಿದ್ದಾರೆಂದು ಹೇಳಿ ರಾತ್ರಿ ವೇಳೆ ಮೃತದೇಹವನ್ನು ಅನುಪನಹಳ್ಳಿಗೆ ತಂದು ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದರು. ಈ ವೇಳೆ ಅನುಮಾನಗೊಂಡ ಗ್ರಾಮಸ್ಥರು ಮೃತರ ಸಹೋದರರಿಗೆ ಮಾಹಿತಿ ನೀಡಿದ್ದಾರೆ. ಅವರು ಬಂದು ಮೃತದೇಹ ಪರಿಶೀಲಿಸಿ ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮೃತರ ಸಹೋದರರ ದೂರಿನ ಮೇರೆಗೆ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಸುಚಿತ್ರ ತನ್ನ ತಂದೆಯ ಸಾವಿಗೆ ತಾಯಿಯೇ ಕಾರಣ ಎಂದು ಜ್ಯೋತಿಷಿ ಹೇಳಿದ್ದನ್ನು ನಂಬಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸುಮಾರು ಒಂದೂವರೆ ವರ್ಷದ ಹಿಂದೆ ಪುಷ್ಪಲತಾ ಅವರ ಪತಿ ಬಾಬು ಪ್ರಸನ್ನ ಮೃತಪಟ್ಟಿದ್ದರು. “ನಿಮ್ಮ ಅಮ್ಮನೇ ಮಾಟ ಮಾಡಿಸಿ ನಿಮ್ಮ ತಂದೆಯನ್ನು ಸಾಯಿಸಿದ್ದಾರೆ” ಎಂಬ ಜ್ಯೋತಿಷಿಯ ಮಾತನ್ನು ನಂಬಿ, ಸುಚಿತ್ರ ತನ್ನ ಪತಿ ಸುರೇಶ್ ಜೊತೆ ಸೇರಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.