×
Ad

20 ವರ್ಷಗಳ ಬಳಿಕ ವೇದಿಕೆ ಹಂಚಿಕೊಳ್ಳಲಿರುವ ಉದ್ಧವ್, ರಾಜ್ ಠಾಕ್ರೆ

Update: 2025-07-05 08:15 IST

 ಉದ್ಧವ್ ಠಾಕ್ರೆ | ರಾಜ್ ಠಾಕ್ರೆ PC: PTI

ಮುಂಬೈ: ಪಕ್ಷದ ನಾಯಕತ್ವದ ಮೇಲಾಟದಲ್ಲಿ ಪರಸ್ಪರ ವಿಮುಖರಾಗಿ ಎರಡು ದಶಕಗಲು ಕಳೆದ ಬಳಿಕ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖಂಡ ರಾಜ್ ಠಾಕ್ರೆ ಮೊಟ್ಟಮೊದಲ ಬಾರಿಗೆ ವರ್ಲಿಯಲ್ಲಿ ನಡೆಯುವ ಜಂಟಿ ರ್ಯಾಲಿಯಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಹಿಂದಿಯನ್ನು ಕಡ್ಡಾಯಪಡಿಸುವ ಸರ್ಕಾರದ ಪ್ರಸ್ತಾವಕ್ಕೆ ರಾಜ್ ಹಾಗೂ ಉದ್ಧವ್, ಬುದ್ಧಿಜೀವಿಗಳು ಮತ್ತು ನಾಗರಿಕ ಸಮಾಜದಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಪ್ರಸ್ತಾವವನ್ನು ಮಹಾಯುತಿ ಸರ್ಕಾರ ಹಿಂದಕ್ಕೆ ಪಡೆದ ಹಿನ್ನೆಲೆಯಲ್ಲಿ "ಅವಾಜ್ ಮರಾಠಿಚ' (ಮರಾಠಿ ಧ್ವನಿ) ಎಂದು ಬಣ್ಣಿಸಲಾಗಿರುವ ವಿಜಯೋತ್ಸವ ಅಯೋಜಿಸಲಾಗಿದೆ.

ಈ ಪ್ರಾದೇಶಿಕ ಪಕ್ಷಗಳ ಮುಖಂಡರು ಒಂದೇ ಉದ್ದೇಶಕ್ಕೆ ಧ್ವನಿ ಎತ್ತಿದ್ದನ್ನು ರಾಜಕೀಯ ಪುನರ್ಮಿಲನದ ಪ್ರಥಮ ಹೆಜ್ಜೆ ಎಂದು ಬಣ್ಣಿಸಲಾಗುತ್ತಿದ್ದು, ಇಡೀ ರಾಜ್ಯ ರಾಜಕಾರಣ ಇದನ್ನು ಕುತೂಹಲದಿಂದ ನೋಡುತ್ತಿದೆ. ಈ ವರ್ಷದ ಕೊನೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಈ ಪುನರ್ ಮಿಲನಕ್ಕೆ ವಿಶೇಷ ಮಹತ್ವ ಬಂದಿದೆ.

ರ್ಯಾಲಿಯಲ್ಲಿ ತಮ್ಮ ಸಂಪೂರ್ಣ ಶಕ್ತಿಪ್ರದರ್ಶನಕ್ಕೆ ಉಭಯ ಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ. ವರ್ಲಿಯ ಎನ್ಎಸ್ಸಿಐ ಡೋಮ್ನಲ್ಲಿ ಸಮಾರಂಭ ನಡೆಯಲಿದೆ. ಈ ಸಭಾಂಗಣದ ಸಾಮಥ್ರ್ಯ 8000 ಅಗಿದ್ದು, ಇದರ ಹಲವು ಪಟ್ಟು ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆದಾಗ್ಯೂ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗದವರಿಗೆ ಸಭಾಗೃಹದ ಹೊರಗೆ ಅಳವಡಿಸಲಾಗಿರುವ ದೈತ್ಯ ಎಲ್ಇಡಿ ಪರದೆಗಳಲ್ಲಿ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತದೆ. ಮರಾಠಿ ಚಿತ್ರ ನಿರ್ದೇಶಕ- ನಿರ್ಮಾಪಕ ಅಜಿತ್ ಭೂರೆ ಕಾರ್ಯಕ್ರಮದ ನಿರೂಪಕರಾಗಿರುತ್ತಾರೆ.

ಕಾರ್ಯಕ್ರಮದ ಅಯೊಜನೆ ಮತ್ತು ಸಿದ್ಧತೆಗಳ ಹೊಣೆಯನ್ನು ಪಕ್ಷಗಳ ಹಿರಿಯ ಮುಖಂಡರಾದನಿಲ್ ಪ್ರಣಬ್ (ಶಿವಸೇನೆ-ಯುಬಿಟಿ) ಮತ್ತು ಬಾಲಾ ನಂದಗಾಂವ್ಕರ್ (ಎಂಎನ್ಎಸ್) ವಹಿಸಿರುವುದು ಇದರ ರಾಜಕೀಯ ಪರಿಣಾಮಗಳ ಸೂಚಕ ಎಂದು ವಿಶ್ಲೇಷಿಸಲಾಗುತ್ತಿದೆ. ಎಲ್ಲವೂ ಯೋಜಿತವಾಗಿ ನಡೆಯುವ ನಿಟ್ಟಿನಲ್ಲಿ ಉಭಯ ಮುಖಂಡರು ಹಲವು ಸಭೆಗಳನ್ನೂ ನಡೆಸಿದ್ದಾರೆ. ಎಲ್ಲ ಸ್ಥಳೀಯ ಮುಖಂಡರು ತಮ್ಮ ತಮ್ಮ ಪ್ರದೇಶದಲ್ಲಿ ಎಲ್ಇಡಿ ಪರದೆ ವ್ಯವಸ್ಥೆ ಮಾಡುವಂತೆಯೂ ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News