×
Ad

ಉಡುಪಿ ಜಿಲ್ಲಾಡಳಿತದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ

Update: 2025-08-16 20:48 IST

ಉಡುಪಿ, ಆ.16: ಭಗವದ್ಗೀತೆಯ ತತ್ವಗಳಲ್ಲಿ ಜೀವನದ ಸಾರ ಅಡಗಿದ್ದು, ಭಗವದ್ಗೀತೆ ಮೂಲಕ ಕೃಷ್ಣ ನೀಡಿದ ಸಂದೇಶ ಮಾನವ ಕುಲಕ್ಕೆ ಇಂದಿಗೂ ಪ್ರಸ್ತುತವೆನಿಸಿದೆ ಎಂದು ಉಡುಪಿ ನಗರಾಭಿವೃಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಹೇಳಿದ್ದಾರೆ.

ಎಂ.ಜಿ.ಎಂ ಕಾಲೇಜಿನ ಟಿ.ಮೋಹನದಾಸ್ ಪೈ ಪ್ಲಾಟಿನಂ ಜುಬಿಲಿ ಬ್ಲಾಕ್‌ನ ಸೆಮಿನಾರ್ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೃಷ್ಣನು ಬಾಲ್ಯದಿಂದಲೂ ದುಷ್ಟ ಶಕ್ತಿಗಳನ್ನು ನಿಗ್ರಹಿಸಿಕೊಂಡು ಬಂದಿದ್ದು, ಆತನ ಜೀವನಚರಿತ್ರೆ ಎಲ್ಲರಿಗೂ ಮಾದರಿ ಹಾಗೂ ಸ್ಪೂರ್ತಿ ನೀಡುತ್ತದೆ. ಕೃಷ್ಣ ಮಹಾಭಾರತದಂತಹ ಮಹಾಕಾವ್ಯದಲ್ಲಿ ಸರ್ವವ್ಯಾಪಿಯಾಗಿದ್ದಾರೆ ಎಂದರು.

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಪ್ರಜ್ಞಾ ಮಾರ್ಪಳ್ಳಿ, ಶ್ರೀಕೃಷ್ಣನ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ಸಂದೇಶಗಳನ್ನು ನಾವು ಭಗವದ್ಗೀತೆ ಯಲ್ಲಿ ಕಾಣಬಹುದು. ಕೃಷ್ಣ ಗುರುವಾಗಿ, ಸ್ನೇಹಿತನಾಗಿ, ಧರ್ಮಪ್ರವರ್ತಕ ನಾಗಿ,ವಾಗ್ಮಿಯಾಗಿ, ತಂತ್ರಜ್ಞಾನಿಯಾಗಿ ಕಾಣಿಸಿಕೊಳ್ಳುತ್ತಾನೆ ಎಂದರು.

ಕೃಷ್ಣನದು ಜಗತ್ತೇ ವಂದಿಸುವ ವ್ಯಕ್ತಿತ್ವ. ಯಾವ ಪ್ರತಿಫಲವನ್ನು ಅಪೇಕ್ಷಿಸದೇ ತನ್ನ ಕಾಯಕವನ್ನು ನಿಷ್ಠೆಯಿಂದ ಮಾಡಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದನ್ನು ಅವರ ಸಂದೇಶದಲ್ಲಿ ಕಾಣಬಹುದು ಎಂದು ಡಾ.ಪ್ರಜ್ಞಾ ಮಾರ್ಪಳ್ಳಿ ನುಡಿದರು.

ಅಧ್ಯಕ್ಷತೆಯನ್ನು ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮಯ್ಯ ವಹಿಸಿದ್ದರು. ಉಡುಪಿ ಯಾದವ ಗೊಲ್ಲ ಸಮಾಜ ಸಂಘದ ಅಧ್ಯಕ್ಷ ದಯಾನಂದ ಬಿ.ಆರ್ ಹಾಗೂ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ಸಾಂಸ್ಕೃತಿಕ ಚಿಂತಕ ಮಹೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News