ಬಾಲ್ಯವಿವಾಹ ನಿಷೇಧ, ಮಕ್ಕಳಿಗೆ ಸಂಬಂಧಿತ ಕಾನೂನುಗಳ ಬಗ್ಗೆ ತರಬೇತಿ ಕಾರ್ಯಾಗಾರ
ಸಾಂದರ್ಭಿಕ ಚಿತ್ರ
ಉಡುಪಿ, ಆ.16: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಇವರ ಸಹಯೋಗದಲ್ಲಿ ಬಾಲ್ಯವಿವಾಹ ನಿಷೇಧ ಹಾಗೂ ಮಕ್ಕಳ ಸಂಬಂಧಿತ ಕಾನೂನುಗಳ ಬಗ್ಗೆ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೇನರ್ಸ್ ಇವರಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರ ಆಗಸ್ಟ್ 19 ಮತ್ತು 20 ರಂದು ಮಣಿಪಾಲ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಲಿದೆ.
ಆ.19ರಂದು ಬೆಳಗ್ಗೆ 10 ಗಂಟೆಗೆ ಜಿಪಂನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೀಶ್ ಪಿ.ಆರ್, ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಜೂಹಿ ದಾಮೋದರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲ ಸಿ.ಕೆ. ಭಾಗವಹಿಸಲಿದ್ದಾರೆ.
ಯುನಿಸೆಫ್‌ನ ಪ್ರಾದೇಶಿಕ ಸಂಯೋಜಕರಾದ ಡಾ. ಕೊಣಿಲ ರಾಘವೇಂದ್ರ ಹಾಗೂ ಹರೀಶ್ ಜೋಗಿ, ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.