×
Ad

ಸಾಹಿತಿ ಶಾರದಾ ಅಂಚನ್‌ಗೆ ಪಣಿಯಾಡಿ ಪ್ರಶಸ್ತಿ ಪ್ರದಾನ

Update: 2025-08-17 20:40 IST

ಉಡುಪಿ: ಮಕ್ಕಳಿಗೆ ತುಳುವನ್ನು ಎಳವೆಯಲ್ಲಿ ಕಲಿಸಿದರಷ್ಟೇ ಆ ಭಾಷೆ ಸಂಸ್ಕೃತಿ ಉಳಿಯಬಲ್ಲದು ಎಂದು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದ್ದಾರೆ.

ಉಡುಪಿ ಕಿದಿಯೂರು ಹೊಟೇಲ್ ಸಭಾಂಗಣದಲ್ಲಿ ರವಿವಾರ ನಡೆದ ಉಡುಪಿ ತುಳುಕೂಟದ 30ನೇ ವರ್ಷದ ’ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ’ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.

ಮಕ್ಕಳಿಗೆ ಉಪದೇಶ ಮಾಡುವುದಕ್ಕಿಂತ ಅವರಿಗೆ ಅವಕಾಶಗಳನ್ನು ಒದಗಿಸಿ ಕೊಡಬೇಕು. ಈ ನಿಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ತುಳು ಅಧ್ಯಯನಕ್ಕೆ ಅವಕಾಶ ಮಾಡಿಕೊಡುತ್ತಿರುವುದು ಆಶಾದಾಯಕವಾಗಿದೆ. ಮಕ್ಕಳು ತುಳು ಭಾಷೆಯ ಅಧ್ಯಯನ, ಬಳಕೆ ಕೇವಲ ಪರೀಕ್ಷೆಗಷ್ಟೇ ಸೀಮಿತಗೊಳಿಸದೇ ಮುಂದಿನ ಜೀವನದಲ್ಲಿಯೂ ಮುಂದುವರಿಸಬೇಕು ಎಂದರು.

ಮುಂಬಯಿಯ ಸಾಹಿತಿ ಶಾರದಾ ಎಂ.ಅಂಚನ್ ಕೊಡವೂರು ಅವರ ’ಅಕೇರಿದ ಎಕ್ಕ್’ ಕಾದಂಬರಿಗೆ ಪಣಿಯಾಡಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಾಹಿತಿ ಸುಲೋಚನಾ ಜನಾರ್ದನ್ ಪಚ್ಚಿನಡ್ಕ ಪ್ರಶಸ್ತಿ ಪುರಸ್ಕೃತ ಕಾದಂಬರಿಯನ್ನು ಪರಿಚಯಿಸಿದರು.

ಇದೇ ಸಂಧರ್ಭದಲ್ಲಿ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯ ತುಳುಪಠ್ಯದಲ್ಲಿ ಶೇ.100 ಅಂಕ ಗಳಿಸಿದ ವಿದ್ಯಾರ್ಥಿ ಗಳನ್ನು ಅಭಿನಂದಿಸಲಾಯಿತು. ಅಧ್ಯಕ್ಷತೆಯನ್ನು ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭದ್ರಾವತಿ ತುಳುಕೂಟದ ಅಧ್ಯಕ್ಷ ಸುಧಾಕರ ಶೆಟ್ಟಿ, ಉಡುಪಿ ಹೋಟೆಲ್ ಉದ್ಯಮಿ ಪ್ರಭಾಕರ್ ಪೂಜಾರಿ, ಸಮಾಜಸೇವಕ ಉಡುಪಿ ವಿಶ್ವನಾಥ ಶೆಣೆ ಉಪಸ್ಥಿತರಿದ್ದರು. ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು ಮತ್ತು ಕೋಶಾಧಿಕಾರಿ ಚೈತನ್ಯ ಎಂ.ಜಿ. ವೇದಿಕೆಯಲ್ಲಿದ್ದರು.

ತುಳುಕೂಟದ ಉಪಾಧ್ಯಕ್ಷ ದಿವಾಕರ ಸನಿಲ್ ಸ್ವಾಗತಿಸಿದರು. ಪಣಯಾಡಿ ಪ್ರಶಸ್ತಿ ಸಂಚಾಲಕಿ ಶಿಲ್ಪಾ ಜೋಶಿ ಪ್ರಾಸ್ತವಿಕವಾಗಿ ಮಾತನಾಡಿದರು. ತಾರಾ ಉಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News