ಐತಿಹಾಸಿಕ ಸ್ಮಾರಕ, ಅವಶೇಷಗಳ ರಕ್ಷಣೆ ಎಲ್ಲರ ಜವಾಬ್ದಾರಿ: ತಾರಾನಾಥ ಗಟ್ಟಿ ಕಾಪಿಕಾಡು
ಬಾರಕೂರು: ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ
ಬಾರಕೂರು, ಆ.22: ನಮ್ಮ ಕಣ್ಮುಂದೆಯೇ ನಮ್ಮ ಪ್ರಾಚೀನ ಕೋಟೆಗಳು, ಸ್ಮಾರಕಗಳು, ಅವಶೇಷಗಳು ಅಭಿವೃದ್ಧಿಯ ಹೆಸರಿನಲ್ಲಿ ಕಣ್ಮರೆಯಾಗುತ್ತಿವೆ. ಹೀಗಾದರೆ ನಾಳಿನ ಯುವ ಜನಾಂಗಕ್ಕೆ ಇತಿಹಾಸದ ಅವಶೇಷಗಳೇ ಇಲ್ಲದೆ ನಮ್ಮ ಚರಿತ್ರೆ ನಾಶವಾಗುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡು ಹೇಳಿದ್ದಾರೆ.
ಬಾರಕೂರಿನ ರುಕ್ಮಿಣಿ ಶೆಡ್ತಿ ಸ್ಮಾರಕ ನೇಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ರಾಣಿ ಚಿಕ್ಕಾಯಿ ತಾಯಿ ಚಾರಿಟೇಬಲ್ ಟ್ರಸ್ಟ್ ಗುಳ್ಳಾಡಿ, ಆದಿಮ ಕಲಾ ಟ್ರಸ್ಟ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನೇಷನಲ್ ಸರಕಾರಿ ಕಾಲೇಜಿನಲ್ಲಿ ‘ಐತಿಹಾಸಿಕ ಪರಂಪರೆ ಉಳಿಸಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ತುಳು ಸಾಮ್ರಾಜ್ಯದ ರಾಜಧಾನಿ ಯಾಗಿದ್ದ ಬಾರಕೂರಿನ ಅಳಿದುಳಿದ ಸ್ಮಾರಕ ಅಥವಾ ಅವಶೇಷಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಗುಳ್ಳಾಡಿಯ ಚಿಕ್ಕಾಯಿ ತಾಯಿ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಡಾ. ರಘುರಾಮ್ ಶೆಟ್ಟಿ ಮಾತನಾಡಿ, ಆಳುಪ ಚಕ್ರವರ್ತಿ, ಹೊಯ್ಸಳ ಚಕ್ರವರ್ತಿಯ ಪಟ್ಟದ ರಾಣಿ ಚಿಕ್ಕಾಯಿ ತಾಯಿಯ ಹೆಸರಿನಲ್ಲಿ ಬಾರಕೂರಿನಲ್ಲಿ ಪ್ರತಿವರ್ಷ ಚಿಕ್ಕಾಯಿ ತಾಯಿಯ ಉತ್ಸವವನ್ನು ಸರಕಾರ ಹಮ್ಮಿಕೊಳ್ಳಬೇಕು ಹಾಗೂ ಬಾರಕೂರನ್ನು ಒಂದು ಪ್ರವಾಸಿಕೇಂದ್ರವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಾಯಿ ತಾಯಿ ಕುರಿತು ವಿಶೇಷ ಉಪನ್ಯಾಸ ನೀಡಿದ ಆದಿಮ ಕಲಾ ಟ್ರಸ್ಟ್‌ನ ಸ್ಥಾಪಕ ಆಡಳಿತ ಮುಖ್ಯಸ್ಥ ಪ್ರೊ.ಟಿ. ಮುರುಗೇಶಿ ಮಾತನಾಡಿ, ವಿಜಯ ನಗರ ಸಾಮ್ರಾಜ್ಯ ಸ್ಥಾಪನೆಯ ಹಿಂದಿನ ಧೀಶಕ್ತಿ ಯಾಗಿದ್ದ ರಾಣಿ ಚಿಕ್ಕಾಯಿ ತಾಯಿ ಹಾಗೂ ಸಾಮ್ರಾಜ್ಯವನ್ನು ಆಳ್ವಿಕೆ ಮಾಡಿದ ಸಾಳುವ ಮತ್ತು ತುಳುವ ರಾಜಮನೆತನಗಳು ತುಳುನಾಡಿನ ಎರಡು ಪ್ರತಿಷ್ಠಿತ ರಾಜಮನೆತನಗಳು ಎಂದು ಸೋದಾರಣವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ್ ಶೆಟ್ಟಿ ಎಸ್. ಮಾತನಾಡಿ, ತುಳುನಾಡಿನ ಸಾಂಸ್ಕೃತಿಕ ರಾಜಧಾನಿ ಬಾರಕೂರನ್ನು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಗಳು ನಿರ್ಲಕ್ಷಿಸಿರುವುದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದರು.
ಕಾಲೇಜಿನ ಐಕ್ಯೂಎಸಿ ಮುಖ್ಯಸ್ಥೆ ಪ್ರೊ. ಶೋಭಾ ಹಾಗೂ ಸಮಾಜಶಾಸ್ತ್ರ ವಿಭಾಗದ ಪ್ರೊ. ಅಮ್ರುತ ಉಪಸ್ಥಿತರಿದ್ದರು.