ಬೈಂದೂರು: ಉಚಿತ ಡಯಾಲಿಸಿಸ್ ಕೇಂದ್ರ ಕಾರ್ಯಾರಂಭ
ಬೈಂದೂರು, ಆ.30: ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರ ಬೈಂದೂರಿನಲ್ಲಿ ಸ್ಥಾಪಿಸಲಾದ ಉಚಿತ ಡಯಾಲಿಸಿಸ್ ಯಂತ್ರಗಳ ಟ್ರಯಲ್ ರನ್ ಕಾರ್ಯಕ್ರಮ ನಡೆಯಿತು.
ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಡಯಾಲಿಸಿಸ್ ಯಂತ್ರಗಳ ಪರೀಕ್ಷಾರ್ಥ ಪ್ರಯೋಗ ನಡೆಸುವ ಬಗ್ಗೆ ಟ್ರಾಯಲ್ ರನ್‌ಗೆ ಚಾಲನೆ ನೀಡಿದರು. ಬೈಂದೂರಿನ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೊಂದ ಬಡ ಜನರ ಬೇಡಿಕೆಯಂತೆ ಬೈಂದೂರಿನ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಎದುರಾಗಿದ್ದ ನೀರಿನ ಸಮಸ್ಯೆ ಯನ್ನು ನಿವಾರಿಸಿಕೊಂಡು ಉಚಿತ ಡಯಾಲಿಸಿಸ್ ಸೇವೆ ಆರಂಭಗೊಂಡಿ ರುವುದರಿಂದ ಬೈಂದೂರಿನ ನೊಂದ ಬಡ ಜನರಿಗೆ ಅನುಕೂಲವಾಗಲಿದೆ ಎಂದರು.
ತಾಲೂಕು ಆಸ್ಪತ್ರೆ ಎನ್ನುವುದು ಬಹು ದೊಡ್ಡ ಬೇಡಿಕೆ. ಈ ಬಗ್ಗೆ ಈಗಾಗಲೇ ಜಿಲ್ಲೆಯಿಂದ ಪ್ರಸ್ತಾವನೆ ಹೋಗಿದೆ ಹಾಗೂ ಆರೋಗ್ಯ ಸಚಿವರಿಗೂ ಕನಿಷ್ಠ 100 ಹಾಸಿಗೆಗಳ ತಾಲೂಕು ಆಸ್ಪತ್ರೆ ಮಂಜೂರು ಮಾಡಲು ಈಗಾಗಲೇ ಮನವಿ ಮಾಡಲಾಗಿದೆ. ತಾಲೂಕು ಆಸ್ಪತ್ರೆ ಉದ್ದೇಶಕ್ಕೆ ಈಗಾಗಲೇ ಕಂದಾಯ ಇಲಾಖೆಯ ಮೂಲಕ ಜಾಗ ಮಂಜೂರು ಮಾಡಿಸಲಾಗಿದೆ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ.ರಾಜೇಶ್, ಹಾಗೂ ಆಸ್ಪತ್ರೆ ಸಿಬ್ಬಂದಿ ವರ್ಗ ಸ್ಥಳೀಯ ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.