ಆಸ್ಕರ್ ಯುವ ನಾಯಕತ್ವವನ್ನು ಬೆಳೆಸಿದ ಸಜ್ಜನ ರಾಜಕಾರಣಿ: ಅಭಯ ಚಂದ್ರ ಜೈನ್
ದಿವಂಗತ ಆಸ್ಕರ್ ಫೆರ್ನಾಂಡಿಸ್ ಸ್ಮರಣಾರ್ಥ ಸ್ಪರ್ಧೆಗಳ ಸಮಾರೋಪ
ಉಡುಪಿ, ಸೆ.14: ಆಸ್ಕರ್ ಫೆರ್ನಾಂಡಿಸ್ ಪಕ್ಷದಲ್ಲಿ ತಮಗಿರುವ ಪ್ರಭಾವ ವನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳದೆ ಯುವ ನಾಯಕತ್ವವನ್ನು ಬೆಳೆಸುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾದರು. ಅವರ ನಿಧನದ ಬಳಿಕವೂ ಕಾರ್ಯ ಕರ್ತರು ಅವರನ್ನು ನೆನಪಿಸುವಂತಹ ಸಜ್ಜನ ರಾಜಕಾರಣಿ ಯಾಗಿದ್ದಾರೆ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ಹೇಳಿದ್ದಾರೆ.
ಆಸ್ಕರಣ್ಣನ ಕನಸಿನ ಮತ್ತು ನನಸಿನ ಉಡುಪಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಆಶ್ರಯದಲ್ಲಿ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಶನಿವಾರ ಆಯೋಜಿಸಲಾದ ಹಿರಿಯ ಕಾಂಗ್ರೆಸ್ ನಾಯಕ ದಿವಂಗತ ಆಸ್ಕರ್ ಫೆರ್ನಾಂಡಿಸ್ ಅವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಆಸ್ಕರ್ ಫೆರ್ನಾಂಡಿಸ್ ತಮ್ಮ ಜೀವನದುದ್ದಕ್ಕೂ ಜನರ ಭಾವನೆಗಳಿಗೆ ಬೆಲೆ ನೀಡಿದ ಓರ್ವ ಮುತ್ಸದ್ದಿ ನಾಯಕ. ಯಾವುದೇ ಪ್ರಚಾರ ಬಯಸದೆ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದರು. ಶಿಕ್ಷಣಕ್ಕೆ ಸದಾ ಬೆಂಬಲ ನೀಡುವ ಮೂಲಕ ಆ ಕ್ಷೇತ್ರಕ್ಕೆ ಯಾವುದೇ ರಾಜಕಾರಣಿ ಅನುದಾನ ಕೇಳಿದಷ್ಟು ಕೊಡುವ ಉದಾರ ಮನಸ್ಸನ್ನು ಹೊಂದಿದ್ದರು. ಅವರ ಸಂಯಮ ಹಾಗೂ ತಾಳ್ಮೆ ಇಂದಿನ ಯುವ ರಾಜಕಾರಣಿಗಳಿ ಮಾದರಿಯಾಗ ಬೇಕಿದೆ ಎಂದರು.
ಮಾಜಿ ಶಾಸಕ ಗೋಪಾಲ ಪೂಜಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಸಂಸದ ಕೆ.ಜಯ ಪ್ರಕಾಶ್ ಹೆಗ್ಡೆ ಸಹಿತ ಹಲವು ನಾಯಕರು ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ಮಾಜಿ ವಿಧಾನಪರಿಷತ್ ಸದಸ್ಯ ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಕೆಪಿಸಿಸಿ ಉಪಾಧ್ಯಕ್ಷ ಎಂ.ಎ. ಗಫೂರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಮೇಶ್ ಕಾಂಚನ್, ಹರಿ ಪ್ರಸಾದ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಹರಿಪ್ರಸಾದ್ ರೈ ರಾಜು ಪೂಜಾರಿ, ಮಲ್ಯಾಡಿ ಶಿವರಾಮ್ ಶೆಟ್ಟಿ, ಆಸ್ಕರ್ ಫೆರ್ನಾಂಡಿಸ್ ಅವರ ಧರ್ಮಪತ್ನಿ ಬ್ಲೋಸಮ್ ಫೆರ್ನಾಂಡಿಸ್, ಮುಖಂಡರಾದ ಸೂರ್ಯ ಪ್ರಕಾಶ್, ಮೇರಿ ಶ್ರೇಷ್ಠ, ಸಮಿತಿಯ ಪ್ರಮುಖರಾದ ಮಹಾಬಲ ಕುಂದರ್, ಯತೀಶ್ ಕರ್ಕೇರಾ, ಮುರಳಿ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಉಪೇಂದ್ರ ಮೆಂಡನ್, ಮನೋಜ್ ಮೊದಲಾದವರು ಉಪಸ್ಥಿತರಿದ್ದರು.