×
Ad

ಕಲೆ, ಸಂಸ್ಕೃತಿ ಮೂಲಕ ಮಲಯಾಳಿಗಳು ಜನಪ್ರಿಯರು: ನ್ಯಾ.ಕಿರಣ್

ಉಡುಪಿ: ಕೇರಳ ಸಮಾಜಂನಿಂದ ಓಣಂ ಆಚರಣೆ

Update: 2025-09-14 19:47 IST

ಉಡುಪಿ, ಸೆ.14: ಶಿಕ್ಷಣ, ಸಾಕ್ಷರತೆ ಮೂಲಕ ಕೇರಳ ಪ್ರಸಿದ್ಧವಾದರೆ, ಕೇರಳದ ಮಲಯಾಳಿಗಳು ತಮ್ಮ ಕಲೆ, ಸಂಸ್ಕೃತಿ ಮೂಲಕ ರಾಜ್ಯದಿಂದ ಹೊರಗೆ ಜನಪ್ರಿಯರಾಗಿದ್ದಾರೆ ಎಂದು ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕಿರಣ್ ಎಸ್.ಗಂಗಣ್ಣನವರ್ ಹೇಳಿದ್ದಾರೆ.

ಉಡುಪಿಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕೇರಳ ಸಮಾಜಂನ ಪ್ರಥಮ ಓಣಂ ಸಂಭ್ರಮಾಚರಣೆಯನ್ನು ರವಿವಾರ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಓಣಂ ಹಬ್ಬ ಪ್ರತಿಯೊಬ್ಬ ಮಲಯಾಳಿಯೂ ಜಾತಿ, ಮತ,ಧರ್ಮದ ಬೇಧವಿಲ್ಲದೇ ಎಲ್ಲರೂ ಆಚರಿಸುವ ಹಬ್ಬವಾ ಗಿದ್ದು, ಇದು ಎಲ್ಲರನ್ನೂ ಒಗ್ಗೂಡಿಸುವ ಮೂಲಕ ಕೇರಳದ ನಿಜ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ವಿಶ್ವದ ಎಲ್ಲಾ ಕಡೆಯೂ ಪಸರಿಸಿರುವ ಕೇರಳಿಯರು ತಮ್ಮ ಛಲ, ಗುರಿಯ ಮೂಲಕ ಎಲ್ಲಡೆಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಉಡುಪಿ ಜಿಲ್ಲೆಯ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯಲ್ಲಿ ಮಲಯಾಳಿಗಳ ಕೊಡುಗೆಯೂ ದೊಡ್ಡದಿದೆ. ಕೇರಳ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರರ ಕೊಡು-ಕೊಳ್ಳುವಿಕೆಗೆ ಸುಧೀರ್ಘ ಇತಿಹಾಸವಿದೆ ಎಂದರು.

ಸಮಾರಂಭದಲ್ಲಿ 2025ನೇ ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಅದೇ ರೀತಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಮೂವರನ್ನು ಗುರುತಿಸಿ ಸನ್ಮಾನಿಸಲಾಯಿತು. ಇತ್ತೀಚೆಗೆ ಜಿಲ್ಲಾ ಶ್ರೇಷ್ಠ ಶಿಕ್ಷಕಿ ಪ್ರಶಸ್ತಿ ಪಡೆದ ಸರಸ್ವತಿ ಟೀಚರ್, ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ 9ನೇ ರಾಂಕ್ ಪಡೆದ ವಿವೆನ್ ವಿವೇಕ್ ಬಿಜೋಯ್, ರ್ಯಾಪ್ ಗಾಯನದಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿಷ್ಣು ನಂಬಿಯಾರ್ ಅವರು ಸನ್ಮಾನಕ್ಕೆ ಪಾತ್ರರಾದರು.

ಕೇರಳ ಸಮಾಜಂನ ಅಧ್ಯಕ್ಷ ಅರುಣಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳಗ್ಗೆ ಇಲ್ಲೇ ನಡೆದ ಪೂಕಳಂ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಗೋವಾದ ರಾಜ್ಯಪಾಲರಾದ ಪಿ.ಎಸ್.ಶ್ರೀಧರ ಪಿಳ್ಲೈ ಅವರು ಸಮಾರಂಭಕ್ಕೆ ನೀಡಿದ ಶುಭ ಸಂದೇಶವನ್ನು ವಿಡಿಯೋ ಮೂಲಕ ಪ್ರದರ್ಶಿಸಲಾಯಿತು.

ವೇದಿಕೆಯಲ್ಲಿ ಮಣಿಪಾಲ ಮಾಹೆಯ ಎಂಸಿಎಚ್‌ಪಿಯ ಮಾಜಿ ಸಹಾಯಕ ಡೀನ್ ಪ್ರೊ.ಡಾ.ಸಾಬೂ ಕೆಎಂ, ಮಲಯಾಳಂ ಚಿತ್ರರಂಗದ ಕಲಾವಿದರಾದ ವಿವೇಕ್ ಗೋಪನ್, ಸೀಮಾ ಜಿ ನಾಯರ್ ಹಾಗೂ ಇತರರು ಉಪಸ್ಥಿತರಿದ್ದರು.

ಕೇರಳ ಸಮಾಜಂ ಉಡುಪಿಯ ಓಣಂ ಆಚರಣಾ ಸಮಿತಿಯ ಅಧ್ಯಕ್ಷೆ ಪ್ರೊ.ಡಾ. ಬಿನ್ಸಿ ಎಂ.ಜಾರ್ಜ್ ಅತಿಥಿಗಳನ್ನು ಸ್ವಾಗತಿಸಿದರೆ, ಕಾರ್ಯದರ್ಶಿ ಪ್ರಶಾಂತ್ ಕುಮಾರ್ ವಂದಿಸಿದರು. ಏಂಜೆಲಾ ಮೆನನ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರೂ ಕಲ್ಲಿಕೋಟೆಯ ವಿನೋದ್ ಕುಮಾರ್ ತಂಡ ತಯಾರಿಸಿದ ವಿಶೇಷ ಓಣಂ ಸದ್ಯಾವನ್ನು ಸವಿದರು. ಬಳಿಕ ಕೇರಳದ ಸಿನೆಮಾ ಕಲಾವಿದರ ತಂಡದಿಂದ ವೈವಿಧ್ಯಮಯ ಸಂಗೀತ, ನೃತ್ಯ, ಮಿಮಿಕ್ರಿ, ಹಾಸ್ಯಭರಿತ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಸಂಜೆ ಜಯಕೇರಳ ಕಳರಿ ಸಂಘಮ್‌ನಿಂದ ಕಳರಿ ಪಯಟ್ಟು ಪ್ರದರ್ಶನ ನಡೆಯಿತು.





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News