×
Ad

ಎಂಎಸ್‌ಎಂಇ ಉದ್ದಿಮೆದಾರರ ಕೌಶಲ್ಯ, ಜ್ಞಾನ ಇನ್ನಷ್ಟು ವಿಸ್ತರಿಸಬೇಕು: ಉಡುಪಿ ಡಿಸಿ ಸ್ವರೂಪ ಟಿ.ಕೆ

Update: 2025-09-17 20:12 IST

ಉಡುಪಿ, ಸೆ.17: ದೇಶದ ಆರ್ಥಿಕ ವ್ಯವಸ್ಥೆಯ ಪ್ರಗತಿಯಲ್ಲಿ ಸಣ್ಣ ಕೈಗಾರಿಕೆಗಳು (ಎಂಎಸ್‌ಎಂಇ) ಮಹತ್ತರ ಪಾತ್ರ ವಹಿಸುತ್ತವೆ. ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ಅವರ ಕೌಶಲ್ಯ ಮತ್ತು ಜ್ಞಾನವನ್ನು ಇನ್ನಷ್ಟು ವಿಸ್ತರಿಸುವುದರೊಂದಿಗೆ ಉದ್ಯಮವನ್ನು ಅಭಿವೃದ್ಧಿ ಪಡಿಸಲು ಅರಿವು ಕಾರ್ಯಕ್ರಮ ಸಹಕಾರಿ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದ್ದಾರೆ.

ಬುಧವಾರ ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಭವನದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಎಂ.ಎಸ್.ಎಂ.ಇ ನಿರ್ದೇಶನಾಲಯ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ (ಕೆ.ಸಿ.ಟಿ.ಯು), ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (ಟೆಕ್ಸಾಕ್) ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಮಣಿಪಾಲ- ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ರ್ಯಾಂಪ್ ಯೋಜನೆಯಡಿ ಆಯೋಜಿಸಿದ ಟ್ರೇಡ್ಸ್ ಯೋಜನೆ ಕುರಿತ ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಗಾರಿಕೆಗಳ ಹೊಸ ಘಟಕ ಸ್ಥಾಪನೆಗೆ ಹಾಗೂ ಕೈಗಾರಿಕೆಗಳ ಉನ್ನತೀಕರ ಣಕ್ಕೆ ಸಾಕಷ್ಟು ಆರ್ಥಿಕ ನೆರವು ನೀಡುತ್ತಿವೆ. ಇವುಗಳ ಪ್ರಯೋಜನವನ್ನು ಉದ್ದಿಮೆದಾರರು ಪಡೆಯುವುದರೊಂದಿಗೆ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದ ಜಿಲ್ಲಾಧಿಕಾರಿ, ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು, ನವನವೀನ ಆವಿಷ್ಕಾರಗಳೊಂದಿಗೆ ಮಾರುಕ ಟ್ಟೆಯಲ್ಲಿ ಅವಶ್ಯವಿರುವ ವಸ್ತುಗಳ ಉತ್ಪಾದನೆಗೆ ಹಾಗೂ ಪಾರಂಪರಿಕ ಉದ್ಯಮಗಳಿಗೆ ಹೊಸ ರೂಪ ನೀಡಲು ಯುವಜನರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯ ಕಾರ್ಕಳ, ಹೆಬ್ರಿ ಹಾಗೂ ಕಾಪುವಿನಲ್ಲಿ ಹೊಸ ಕೈಗಾರಿಕಾ ಘಟಕ ಗಳ ಸ್ಥಾಪನೆಗೆ ಈಗಾಗಲೇ ಜಾಗವನ್ನು ಗುರುತಿಸಲಾಗಿದೆ. ಜಿಲ್ಲೆಯ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಆಯೋಜಿಸ ಲಾಗಿದೆ. ಉದ್ಯಮದಾರರು ತಾವು ಮಾಹಿತಿಗಳನ್ನು ಪಡೆದು ನೆರೆ-ಹೊರೆಯ ಉದ್ಯಮಿಗಳೊಂದಿಗೆ ಮಾಹಿತಿ ಹಂಚಿಕೊಂಡು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕೈಗಾರಿಕಾ ಘಟಕಗಳ ಸ್ಥಾಪನೆಗೆ ಮುಂದಾಗಬೇಕು ಎಂದರು.

ಉದ್ಯೋಗಕ್ಕೆ ಅವಕಾಶ: ಜಿಲ್ಲೆಯಲ್ಲಿ ಉದ್ಯಮಗಳು ಬೆಳೆದಂತೆ ಹೆಚ್ಚೆಚ್ಚು ಸ್ಥಳೀಯ ಜನರಿಗೆ ಉದ್ಯೋಗ ದೊರಕುವು ದರೊಂದಿಗೆ ನಗರಗಳತ್ತ ಉದ್ಯೋಗ ಅರಸಿ ವಲಸೆ ಹೋಗುವವರ ಸಂಖ್ಯೆ ಕಡಿಮೆಯಾಗಲಿದೆ. ಆಗ ಸಹಜವಾಗಿ ಜಿಲ್ಲೆ, ಆರ್ಥಿಕವಾಗಿ, ಸಾಮಾಜಿಕವಾಗಿ ಎಲ್ಲಾ ರೀತಿಯಲ್ಲೂ ಪ್ರಗತಿ ಕಾಣಲಿದೆ ಎಂದವರು ಹೇಳಿದರು.

ಇಂದಿನ ಡಿಜಿಟಲ್ ಯುಗದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸವಾಲುಗಳನ್ನು ಎದುರಿಸಿ ಎಲ್ಲರಿಗೂ ಮಾದರಿಯಾಗುವ ನಿಟ್ಟಿನಲ್ಲಿ ಉದ್ದಿಮೆದಾರರು ಬೆಳೆಯಬೇಕು. ಎಂಎಸ್‌ಎಂಇಗಳು ಎದುರಿಸುತ್ತಿರುವ ಕ್ರೆಡಿಟ್ ಸವಾಲುಗಳನ್ನು ಪರಿಹರಿಸಲು ಟ್ರೇಡ್ ಸಿಸ್ಟಮ್ ಒಂದು ಉತ್ತಮ ವೇದಿಕೆಯಾಗಿದೆ ಎಂವರು ಅಭಿಪ್ರಾಯ ಪಟ್ಟರು.

ರ್ಯಾಂಪ್ ಯೋಜನೆ ಸಹಾಯಹಸ್ತ: ಟೆಕ್ಸಾಕ್‌ನ ಸಿ.ಇ.ಓ ಸಿದ್ದರಾಜು ಪ್ರಾಸ್ತಾವಿಕವಾಗಿ ಮಾತನಾಡಿ, 2019-20 ಸಾಲಿನ ಕೋವಿಡ್ ಸಮಯದಲ್ಲಿ ಸಣ್ಣ ಕೈಗಾರಿಕೆಗಳು ಸ್ಥಗಿತಗೊಳ್ಳುವ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಅದನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಾಗೂ ವಿಶ್ವಬ್ಯಾಂಕ್ ರ್ಯಾಂಪ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸಹಾಯಹಸ್ತ ನೀಡಿತು. ಕೈಗಾರಿಕೆಗಳನ್ನು ನಿರಂತರವಾಗಿ ಯಾವುದೇ ಅಡೆತಡೆ ಯಿಲ್ಲದೆ ನಡೆಸಿಕೊಂಡು ಹೋಗಲು ಉದ್ಯಮಿಗಳು ಟ್ರೇಡ್ಸ್‌ನಲ್ಲಿ ಕಡ್ಡಾಯ ವಾಗಿ ನೊಂದಣಿ ಮಾಡಿಕೊಳ್ಳ ಬೇಕು ಎಂದ ಅವರು, ಕೈಗಾರಿಕೆಗಳನ್ನು ಪ್ರಾರಂಭಿಸುವಾಗ ಪರಿಸರಕ್ಕೆ ಹಾನಿಯಾಗದಂತೆ ಉದ್ಯಮ ಕೈಗೊಳ್ಳಲು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಬಾಲಕೃಷ್ಣ, ಪಿ.ಪಿ ಸಿಂಗ್ ಹಾಗೂ ಜಯಾ ಶೆಟ್ಟಿ ಅವರು ಟ್ರೇಡ್ ರಿಸಿವಬಲ್ಸ್ ಡಿಸ್ಕೌಂಟಿಂಗ್ ಸಿಸ್ಟಮ್ ಹಾಗೂ ಎನ್ವಿರಾನಮೆಂಟ್ ಅಂಡ್ ಸೋಶಿಯಲ್ ಮ್ಯಾನೆಜ್‌ಮೆಂಟ್ ಸಪೋರ್ಟ್ ಫಾರ್ ಎಂ.ಎಸ್.ಎಂ.ಇ (ಇ.ಎಸ್.ಎಂ) ಬಗ್ಗೆ ಉದ್ಯಮಶೀಲರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಹರೀಶ್ ಕುಂದರ್, ಮಂಗಳೂರು ಸಿ.ಐ.ಐ ಚೇರ್‌ಮೆನ್ ನಟರಾಜ್ ಹೆಗ್ಡೆ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ಜಿಲ್ಲೆಯ ಎಂಎಸ್‌ಎಂಇ ಉದ್ಯಮಗಳ ಉದ್ದಿಮೆದಾರರು ಉಪಸ್ಥಿತರಿದ್ದರು.

ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್ ಸ್ವಾಗತಿಸಿ, ಉಡುಪಿ ಸಿಡಾಕ್ ಉಪನಿರ್ದೇಶಕ ಶಿವಾನಂದ ಎಲಿಗಾರ್ ಕಾರ್ಯಕ್ರಮ ನಿರೂಪಿಸಿದರು. ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಸೀತಾರಾಮ ಶೆಟ್ಟಿ ವಂದಿಸಿದರು.





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News