×
Ad

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯಿಂದ ಗುರು ಸಂದೇಶ ಸಾಮರಸ್ಯ ಜಾಥ

Update: 2025-09-18 19:38 IST

ಉಡುಪಿ, ಸೆ.18: ಒಂದೇ ಜಾತಿ.. ಒಂದೇ ಮತ.. ಒಬ್ಬರೇ ದೇವರು. ಎಂದು ಸಂದೇಶ ಸಾರಿದ ಶ್ರೀನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಸೆ.21ರಂದು ಉಡುಪಿ ಬನ್ನಂಜೆಯಿಂದ ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರ ದವರೆಗೆ ‘ಗುರು ಸಂದೇಶ ಸಾಮರಸ್ಯ ಜಾಥಾ’ವನ್ನು ಹಮ್ಮಿ ಕೊಂಡಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಗೌರವಾಧ್ಯಕ್ಷ ದಿವಾಕರ್ ಸನಿಲ್ ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿಯ ಹರಿಕಾರ, ಸಮಾಜ ಸುಧಾರಣೆಯ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆ ಪ್ರಯುಕ್ತ ಗುರುಗಳ ಸಂದೇಶವನ್ನು ಜನಸಾಮಾನ್ಯರಿಗೆ ಮುಟ್ಟಿಸಿ, ಜನಜಾಗೃತಿ ಮೂಡಿಸುವ ಉದ್ದೇಶದಿಂದ ವೇದಿಕೆ, ಜಿಲ್ಲೆಯ ಎಲ್ಲಾ ಬಿಲ್ಲವ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ರವಿವಾರ ಅಪರಾಹ್ನ 2ಗಂಟೆಗೆ ಈ ವಾಹನ ಜಾಥಾವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಬನ್ನಂಜೆಯಲ್ಲಿರುವ ಬಿಲ್ಲವರ ಸೇವಾ ಸಂಘದ ಎದುರು ಅಪರಾಹ್ನ 2 ಗಂಟೆಗೆ ಗುರು ಸಂದೇಶ ಸಾಮರಸ್ಯ ಜಾಥ ರಥಕ್ಕೆ ಬೆಂಗಳೂರಿನಲ್ಲಿ ಎಸಿಪಿ ಆಗಿರುವ ರೀನಾ ಸುವರ್ಣ ಹಾಗೂ ದೈವ ನರ್ತಕ ರವಿ ಪಾಣಾರ ಅವರು ಚಾಲನೆ ನೀಡಲಿದ್ದಾರೆ ಎಂದು ದಿವಾಕರ ಸನಿಲ್ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಎಂ.ಪೂಜಾರಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಭಾಗವಹಿಸುವರು.ನಾಡಿನ ವಿವಿಧ ಬಿಲ್ಲವ ಸಂಘಸಂಸ್ಥೆಗಳ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿ ರುವರು.

ವಾಹನ ಜಾಥವು ಬನ್ನಂಜೆಯ ಜಯಲಕ್ಷ್ಮೀ ಎದುರಿನಿಂದ ಪ್ರಾರಂಬಗೊಂಡು ಸಿಟಿ ಬಸ್ ನಿಲ್ದಾಣ, ಕೋರ್ಟ್ ರಸ್ತೆ, ಮಿಷನ್ ಕಾಂಪೌಂಡ್, ಬೈಲೂರು ಮಹಿಷಮರ್ದಿನಿ ದೇವಸ್ಥಾನ, ಕೊರಂಗ್ರಪಾಡಿ, ಮಾರ್ಪಳ್ಳಿ, ಕುಕ್ಕುಕಟ್ಟೆ, ಅಲೆ ವೂರು, ರಾಂಪುರ, ದೆಂದೂರ್‌ಕಟ್ಟೆ, ಮಣಿಪುರ ಮಾರ್ಗವಾಗಿ ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದಲ್ಲಿ ಗುರುಪೂಜೆ ಯೊಂದಿಗೆ ಸಂಪನ್ನಗೊಳ್ಳಲಿದೆ ಎಂದು ದಿವಾಕರ ಸನಿಲ್ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ, ಉಪಾಧ್ಯಕ್ಷ ಮಹೇಶ್‌ಕುಮಾರ್ ಮಲ್ಪೆ, ವಿಜಯ್ ಕೋಟ್ಯಾನ್, ಸುಧಾಕರ ಅಮೀನ್ ಪಾಂಗಾಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News