"ಸಮಸಮಾಜ ನಿರ್ಮಾಣಕ್ಕೆ ಆಡುಭಾಷೆಯನ್ನೇ ಬಳಸಿದ ಲಿಂಗಾಯತ ಧರ್ಮ"
ಸಾರ್ವಜನಿಕ ಸಮಾವೇಶದಲ್ಲಿ ಶಿವಾನಂದ ಮಹಾಸ್ವಾಮಿ
ಉಡುಪಿ, ಸೆ.18: ಸಮಸಮಾಜ ನಿರ್ಮಾಣಕ್ಕಾಗಿ ಆಡುಭಾಷೆಯನ್ನೇ (ಕನ್ನಡ) ದೇವಭಾಷೆಯನ್ನಾಗಿ ಬಳಸಿಕೊ ಳ್ಳುವ ಮೂಲಕ ನುಡಿದಂತೆ ನಡೆದ ಧರ್ಮ ಲಿಂಗಾಯತ ಧರ್ಮವಾಗಿದೆ ಎಂದು ಹುಲಸೂರು ಶ್ರೀಮಠದ ಶಿವಾನಂದ ಮಹಾಸ್ವಾಮಿ ತಿಳಿಸಿದ್ದಾರೆ. ಅಂದು ಸಮಾಜದಲ್ಲಿದ್ದ ಶೋಷಣೆ, ಅಸಮಾನತೆ ವಿರುದ್ಧ ವಿಶ್ವಗುರು ಬಸವಣ್ಣ ಸಮಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು ಎಂದವರು ಹೇಳಿದರು.
ಶುದ್ಧ ಬಸವತತ್ವವನ್ನು ಪ್ರಚಾರ, ಪ್ರಸಾರ ಹಾಗೂ ಅನುಷ್ಠಾನ ಮಾಡುವ ಆಶಯದೊಂದಿಗೆ ಲಿಂಗಾಯತ ಮಠಾಪತಿಗಳ ಒಕ್ಕೂಟ ಸೆ.1ರಿಂದ ಅ.1ರವರೆಗೆ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಅಭಿಯಾನ ಗುರುವಾರ ಉಡುಪಿಗೆ ಆಗಮಿಸಿ ಸಂಜೆ ಪುರಭವನದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಅವರು ಮಾತನಾಡುತಿದ್ದರು.
ಹಿರಿಯ ಪತ್ರಕರ್ತ, ಪ್ರಗತಿಪರ ಕವಿ, ವಿಮರ್ಶಕ ರಂಜಾನ್ ದರ್ಗಾ ಮಾತನಾಡಿ, ಬಸವಣ್ಣನೆಂದರೆ ಕಲ್ಯಾಣದ ಬೆಳಕು. ಅವರ ಆದರ್ಶಗಳು ಇಂದಿಗೂ ಪ್ರಸ್ತುತ. ಜಗತ್ತಿಗೆ ಜ್ಞಾನ ನೀಡುವ ಶಕ್ತಿ ವಚನ ಸಾಹಿತ್ಯಕ್ಕಿತ್ತು. ಇದು ಸ್ವರ್ಗ, ನರಕಗಳಿಲ್ಲದ ಧರ್ಮ ಎಂದರು.
ಲಿಂಗಾಯತ ಧರ್ಮವು ಸ್ವರ್ಗ, ನರಕವನ್ನು ನಂಬದೇ ಜೀವ ಕಾರುಣ್ಯದ ಮೇಲೆ ನಿಂತಿದೆ. ಇವುಗಳ ಮೂಲಕವೇ ವಚನಗಳನ್ನು ಅರ್ಥೈಸಿಕೊಳ್ಳಬೇಕು. ಬಸವಣ್ಣನೇ ಧರ್ಮಗುರು, ವಚನ ಸಾಹಿತ್ಯವೇ ಧರ್ಮಗ್ರಂಥ, ಇಷ್ಟಲಿಂಗವೇ ಪೂಜಾ ಸಾಧನ. ಈ ಮಹತ್ವವನ್ನು ತಿಳಿದುಕೊಂಡರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎಂದು ದರ್ಗಾ ಹೇಳಿದರು.
ಹಂದಿಗುಂದ ಮಠದ ಶ್ರೀಶಿವನಾಂದ ಮಹಾಸ್ವಾಮಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮಿ, ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು, ಧಾರವಾಡ ನವಲಗುಂದ ಗವಿಮಠದ ಶ್ರೀಬಸವಲಿಂಗ ಮಹಾಸ್ವಾಮೀಜಿ, ಕಲಬುರ್ಗಿ ಷಣ್ಮುಖ ಶಿವಯೋಗಿಗಳ ಮಠದ ಶ್ರೀವೀರಸಿದ್ಧ ದೇವರು, ರಾಯಚೂರು ಶ್ರೀವೀರಭದ್ರ ಶಾಸ್ತಿಗಳು, ಬೆಳಗಾವಿ ಶ್ರೀಶಿವಬಸವ ದೇವರು, ಬಸವ ಕಲ್ಯಾಣದ ಶ್ರೀಬಸವರಾಜ ದೇವರು, ಮಮ್ಮಿಗಟ್ಟಿಯ ಬಸವನಂದ ಸ್ವಾಮೀಜಿ, ಬೆಳಗಾವಿ ಸೆಗುಣಿಸೆಯ ಶ್ರೀ ಡಾ. ಮಹಾಂತ ಪ್ರಭು ಸ್ವಾಮೀಜಿ ಭಾಗವಹಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಉಡುಪಿ ಜಿಲ್ಲೆ ಗೌರವಾಧ್ಯಕ್ಷ ಡಾ.ಜಿ.ಎಸ್. ಚಂದ್ರಶೇಖರ್, ಶರಣ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಅಧ್ಯಕ್ಷ ನಿರಂಜನ ಚೋಳಯ್ಯ ಉಪಸ್ಥಿತರಿದ್ದರು.
ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಮುಖಂಡ ಪ್ರಸಾದ್ ರಾಜ್ ಕಾಂಚನ್, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿಲ್ಲಾ ಪೊಲೀಸ್ ಅದೀಕ್ಷಕ ಹರಿರಾಂ ಶಂಕರ್, ಬಸವಣ್ಣ ವೇಷಧಾರಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿ ನೀಲಕಂಠಯ್ಯ ಕರಕಳ್ಳಿಮಠ ಉಪಸ್ಥಿತರಿದ್ದರು.
ಸಾರ್ವಜನಿಕ ಸಮಾವೇಶಕ್ಕೂ ಮುನ್ನ ಉಡುಪಿ ಸರ್ವೀಸ್ ಬಸ್ ನಿಲ್ದಾಣದ ಗಾಂಧಿ ಸ್ಮಾರಕದಿಂದ ಅಜ್ಜರಕಾಡಿನ ಪುರಭವನದವರೆಗೆ ಸಾಮರಸ್ಯ ನಡಿಗೆ ನಡೆಯಿತು. ನೂರಾರು ಮಂದಿ ಇದರಲ್ಲಿ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದ ಬಳಿ ಸಾಣೇಹಳ್ಳಿ ಶ್ರೀತರಳಬಾಳು ಜಗದ್ಗುರು ಶಾಖಾ ಮಠದ ಶ್ರೀಪಂಡಿತಾರಾಧ್ಯ ಶಿವಾ ಚಾರ್ಯ ಸ್ವಾಮೀಜಿಗಳ ರಚನೆಯ ‘ಜಂಗಮದೆಡೆಗೆ’ ನಾಟಕವು ಶಿವಸಂಚಾರ ಸಾಣೇಹಳ್ಳಿ ತಂಡದಿಂದ ಜಗದೀಶ್ ಆರ್. ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.