ಉಡುಪಿ| ಸರಕಾರದ ಸೌಲಭ್ಯ ಕಲ್ಪಿಸುವಲ್ಲಿ ವಿಳಂಬ ಧೋರಣೆ: ಲೋಕಾಯುಕ್ತದಿಂದ ದೂರು ದಾಖಲು, ವಿಚಾರಣೆ
Update: 2025-09-18 20:47 IST
ಉಡುಪಿ, ಸೆ.18: ಸ್ವಾತಂತ್ರ್ಯ ಯೋಧರು ಮತ್ತು ಅವರ ಅವಲಂಬಿತರು ಹಾಗೂ ಹುತಾತ್ಮ ಯೋಧರು ಮತ್ತು ಅವರ ಅವಲಂಬಿತರಿಗೆ ಸಂವಿಧಾನಾತ್ಮಕವಾಗಿ ನೀಡಬೇಕಾದ ಪರಿಹಾರವನ್ನು (ಜಮೀನು) ಕಲ್ಪಿಸುವಲ್ಲಿ ನಿರ್ಲಕ್ಷ್ಯ ಮತ್ತು ವಿಳಂಬ ಧೋರಣೆ ತೋರಿದ ಅರೋಪವು ಕೇಳಿ ಬಂದಿದೆ ಎಂದು ಜಿಲ್ಲಾ ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.
ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಕಾಲದಲ್ಲಿ ಕಲ್ಪಿಸಲು ಸರಕಾರದ ವಿವಿಧ ಇಲಾಖೆಗಳಿಂದ ಪೂರಕ ಸ್ಪಂದನೆ ದೊರೆಯದೇ ವಿನಾಃ ಕಾರಣ ವಿಳಂಬವಾಗುತ್ತಿದ್ದು, ಇದು ಲೋಕಾಯುಕ್ತ ಕಾಯ್ದೆಯಡಿ ದುರಾಡಳಿತ ವ್ಯಾಪ್ತಿಗೆ ಒಳಪಡುವುದರಿಂದ ಲೋಕಾಯುಕ್ತ ಸಂಸ್ಥೆಯಿಂದ ಜಿಲ್ಲಾ ವ್ಯಾಪ್ತಿಯ ಸಹಾಯಕ ಕಮಿಷನರ್ ಮತ್ತು ಎಲ್ಲಾ ತಾಲೂಕುಗಳ ತಹಶೀಲ್ದಾರರ ಮೇಲೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದು, ಈ ವಿಚಾರ ಲೋಕಾಯುಕ್ತ ಸಂಸ್ಥೆಯಲ್ಲಿ ವಿಚಾರಣೆಯಲ್ಲಿದೆ ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.