×
Ad

ತಾಂತ್ರಿಕಗಿಂತ ತಾತ್ವಿಕ ಪ್ರಜಾಪ್ರಭುತ್ವ ಇಂದಿನ ಅಗತ್ಯ: ಡಾ.ಬರಗೂರು

Update: 2025-09-19 19:00 IST

ಉಡುಪಿ, ಸೆ.19: ಪ್ರಜಾಪ್ರಭುತ್ವ ಅಂದರೆ ಕೇವಲ ಚುನಾವಣೆ ಮಾತ್ರ ಅಲ್ಲ. ಆದರೆ ಇಂದು ನಮ್ಮಲ್ಲಿ ಆ ರೀತಿಯ ತಾಂತ್ರಿಕ ಪ್ರಜಾಪ್ರಭುತ್ವ ಮಾತ್ರ ಇದೆ. ಆದರೆ ತಾತ್ವಿಕ ಪ್ರಜಾಪ್ರಭುತ್ವ ನಮ್ಮಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸರ್ವಾಧಿಕಾರ ವಿರುದ್ಧ ಹೋರಾಟ ಅನುಷ್ಠಾನಕ್ಕೆ ಬಂದಾಗ ಮಾತ್ರ ನಮ್ಮಲ್ಲಿ ತಾತ್ವಿಕ ಪ್ರಜಾಪ್ರಭುತ್ವ ಇರಲು ಸಾಧ್ಯವಾಗುತ್ತದೆ ಎಂದು ಚಿಂತಕ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಶುಕ್ರವಾರ ಕಾಲೇಜಿನ ಪಿಜಿ ಎವಿ ಹಾಲ್‌ನಲ್ಲಿ ರಾಜ್ಯ ಶಾಸ್ತ್ರ ಸಂಘವನ್ನು ಉದ್ಘಾಟಿಸಿದ ಅವರು, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯ ಎಂಬುದು ಅಂತರ್ ಸಂಬಂಧಿ ಯಾಗಿರುವ ಪರಿಕಲ್ಪನೆ. ಭಾರತದ ಸ್ವಾತಂತ್ರ್ಯ ಕ್ಕಾಗಿ ಗಾಂಧಿ ಪ್ರಣೀತವಾದ ರಾಜಕೀಯ ಸರ್ವಾಧಿಕಾರ ವಿರುದ್ಧ, ಅಂಬೇಡ್ಕರ್ ನೇತೃತ್ವದ ಸಾಮಾಜಿಕ ಸರ್ವಾ ಧಿಕಾರದ ವಿರುದ್ಧ ಹಾಗೂ ಸಮಾತವಾದಿಗಳ ನೇತೃತ್ವದಲ್ಲಿ ಆರ್ಥಿಕ ಸರ್ವಾಧಿಕಾರಿಗಳ ವಿರುದ್ಧ ಹೋರಾಟ ನಡೆದಿತ್ತು. ಈ ಮೂರನ್ನು ತೊಡೆದು ಹಾಕಿದಾಗ ಮಾತ್ರ ನಮಗೆ ನಿಜವಾದ ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯ ಸಿಗುತ್ತದೆ ಎಂದರು.

ಪ್ರಜಾಪ್ರಭುತ್ವದ ಬಹಳ ಮುಖ್ಯ ಗುಣ ಸಂವಾದ. ಸಂವಾದ ಇಲ್ಲದೇ ಇರುವಲ್ಲಿ ಪ್ರಜಾಪ್ರಭುತ್ವ ಇರಲು ಸಾಧ್ಯವೇ ಇಲ್ಲ. ಆದರೆ ನಮ್ಮಲ್ಲಿ ಇಂದು ಸಂವಾದದ ಜಾಗವನ್ನು ಉನ್ಮಾದ ಆವರಿಸಿದರೆ, ವಿವೇಕದ ಜಾಗವನ್ನು ಅವಿವೇಕ, ಸತ್ಯದ ಜಾಗವನ್ನು ಅಸತ್ಯ, ಮಾನವೀಯತೆ ಜಾಗವನ್ನು ಮತೀಯತೆ, ಸೌಹಾರ್ದದ ಜಾಗವನ್ನು ಸಂಘರ್ಷ ಹಾಗೂ ಪ್ರೀತಿಯ ಜಾಗವನ್ನು ದ್ವೇಷ ಆಕ್ರಮಿಸಿ ಕೊಳ್ಳುತ್ತಿದೆ. ಉನ್ಮಾದಕ್ಕೆ ಸಿಗುವ ಬೆಲೆ ಸಂವಾದಕ್ಕೆ ಸಿಗುತ್ತಿಲ್ಲ. ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದ ಲಕ್ಷಣವಾಗಿದೆ. ಆದರೆ ಇಂದು ಭಿನ್ನಾಭಿಪ್ರಾಯವು ಬೀದಿ ಜಗಳ ಆಗುತ್ತಿದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಸೋಜನ್ ಕೆ.ಜಿ. ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಪ್ರೊ.ಮಂಜುನಾಥ್ ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಸುಚಿತ್ರಾ ಟಿ. ಉಪಸ್ಥಿರಿದ್ದರು. ವಿದ್ಯಾರ್ಥಿ ಕ್ಷೇಮ ಪಾಲಕ ಪ್ರೊ.ನಿಕೇತನ ವಂದಿಸಿದರು. ವಿದ್ಯಾರ್ಥಿನಿ ಧನಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

‘ಶಿಕ್ಷಣ ಕೇಂದ್ರಗಳು ಮೌಲ್ಯಕಟ್ಟೆಗಳಾಗಬೇಕು’

ದೇಶದ ಆರ್ಥಿಕ ನೀತಿಯಿಂದ ಇಂದು ಉದ್ಯೋಗದ ಕಾರಣಕ್ಕೆ ಮಕ್ಕಳು ಕಾಲೇಜು ಹಂತದಲ್ಲಿ ವಾಣಿಜ್ಯ ವಿಷಯ ವನ್ನು ಹೆಚ್ಚು ತೆಗೆದುಕೊಳ್ಳುತ್ತಿದ್ದಾರೆ. ಕನ್ನಡ, ವಿಜ್ಞಾನ ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ತೆಗೆದುಕೊಳ್ಳುತ್ತಿರುವವರ ಸಂಖ್ಯೆ ಕಡಿಮೆ ಆಗಿದೆ. ಪ್ರಜಾಪ್ರಭುತ್ವವೇ ಮಾರುಕಟ್ಟೆಯಾದರೆ ಹಣ ಕೊಟ್ಟು ಮತ ಪಡೆಯುವಂತಾಗುತ್ತದೆ. ಮೌಲ್ಯಕಟ್ಟೆಗಳು ಇರುವ ಸಮಾಜ ಮಾನವೀಯ ವಾಗಿರುತ್ತದೆ. ಅಲ್ಲಿ ಸಮಾನತೆ, ಸೌಹಾರ್ದತೆ, ಮನುಷ್ಯ ಸಂಬಂಧ ಗಾಢವಾಗಿರುತ್ತದೆ. ಶಿಕ್ಷಣ ಕೇಂದ್ರಗಳು ಅಂತಹ ಮೌಲ್ಯ ಕಟ್ಟೆಗಳನ್ನು ರೂಪಿಸುವ ತಾಣಗಳು ಆಗಬೇಕು ಎಂದು ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಭಾರತದಲ್ಲಿ ಮಾನವಿಕ ವಿಜ್ಞಾನವನ್ನು ಅಧ್ಯಯನ ಮಾಡುವವರ ಸಂಖ್ಯೆ ಇತ್ತೀಚಿಗಿನ ದಿನಗಳಲ್ಲಿ ಬಹಳ ಕಡಿಮೆ ಆಗುತ್ತಿದೆ. ಸಾಹಿತ್ಯ, ರಾಜ್ಯ ಶಾಸ್ತ್ರ, ಸಮಾಜ ಶಾಸ್ತ್ರ, ಇತಿಹಾಸವನ್ನು ಒಳಗೊಂಡ ಮಾನವಿಕ ವಿಜ್ಞಾನವನ್ನು ಓದುವವರ ಸಂಖ್ಯೆ ಕೇವಲ ಶೇ.5 ಮಾತ್ರ. ಇದು ಆತಂಕಕಾರಿ ಬೆಳವಣಿಗೆ ಯಾಗಿದೆ. ವಿಜ್ಞಾನ ತಂತ್ರಜ್ಞಾನ ಬ್ಯುಸಿನೆಲ್ ಮ್ಯಾನೇಂಜ್‌ಮೆಂಟ್ ಓದುವವರಿಗೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಪ್ರಜ್ಞೆ ಅತೀ ಅಗತ್ಯವಾಗಿದೆ. ಇದರಿಂದ ಅವರಲ್ಲಿ ಮಾನವೀಯ ಮೌಲ್ಯ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

‘ನುಡಿ ನೈತಿಕತೆ ನಾಶದತ್ತ ಹೊಗುತ್ತಿದೆ. ಇಂದಿನ ರಾಜಕಾರಣಿಗಳು ಪ್ರಜಾಪ್ರಭುತ್ವದ ಪರಿಭಾಷೆಯನ್ನೇ ರೂಢಿಸಿಕೊಂಡಿಲ್ಲ. ಸಂಸದೀಯ ಪರಿಭಾಷೆ ಧಕ್ಕೆ ಬರುವ ಸನ್ನೀವೇಶದಲ್ಲಿ ನಾವು ಇದ್ದೇವೆ’

-ಡಾ.ಬರಗೂರು ರಾಮಚಂದ್ರಪ್ಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News