×
Ad

ತಂಬಾಕು ಉತ್ಪನ್ನ ಮಾರಾಟಕ್ಕೆ ಪ್ರತ್ಯೇಕ ಪರವಾನಿಗೆ ಕಡ್ಡಾಯ: ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.

ಹೆಸ್ಕತ್ತೂರು, ಕೂರ್ಗಿ ಸೇರಿ ಜಿಲ್ಲೆಯ 5 ಗ್ರಾಪಂಗಳು ತಂಬಾಕು ಮುಕ್ತ

Update: 2025-09-19 19:57 IST

ಉಡುಪಿ, ಸೆ.19: ಜಿಲ್ಲೆಯ ಹೆಸ್ಕತ್ತೂರು ಹಾಗೂ ಕೊರ್ಗಿ ಗ್ರಾಮ ಪಂಚಾಯತ್‌ಗಳನ್ನು ತಂಬಾಕು ಮುಕ್ತ ಗ್ರಾಮ ವನ್ನಾಗಿ ಘೋಷಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ತಂಬಾಕು ಮುಕ್ತ ಹಳ್ಳಿ ಯೋಜನೆಯಡಿಯಲ್ಲಿ 5 ಗ್ರಾಮ ಪಂಚಾಯತ್‌ಗಳು ಆಯ್ಕೆಯಾದಂತಾಯಿತು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.ತಿಳಿಸಿದ್ದಾರೆ.

ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ ದಡಿಯಲ್ಲಿ ಕೋಟ್ಪಾ-2003 ಕಾಯಿದೆ ಕುರಿತ ದ್ವಿತೀಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಉಡುಪಿ ಜಿಲ್ಲೆಯಲ್ಲಿ ಒಟ್ಟು 155 ಗ್ರಾಮ ಪಂಚಾಯತ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಕೇವಲ ಐದು ಗ್ರಾಪಂಗಳು ಮಾತ್ರ ತಂಬಾಕು ಮುಕ್ತ ಗ್ರಾಮಗಳಾಗಿರುವುದು ಖಂಡಿತ ನಿರಾಶಾದಾಯಕ. ಜಿಲ್ಲೆಯಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗಬೇಕು ಎಂದ ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಜೊತೆ ಸಮಾಲೋಚನೆ ನಡೆಸಿ ಅವರ ಮನವೊಲಿಸಿ, ತಂಬಾಕು ಮುಕ್ತ ಹಳ್ಳಿಗಳ ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದರು.

ಅಧಿಕಾರಿಗಳು ತಂಬಾಕು ಮುಕ್ತ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ಆಗಿರುವ ಪ್ರಯೋಜನವನ್ನು ಇತರೆ ಗ್ರಾಮದವರಿಗೆ ತಿಳಿಯಪಡಿಸಿ ಅವರೂ ಕೂಡಾ ತಂಬಾಕು ಉತ್ಪನ್ನಗಳಿಂದ ಅಂತರ ಕಾಯ್ದುಕೊಳ್ಳುವಂತೆ ಮಾಡ ಬೇಕು ಎಂದು ಸ್ವರೂಪ ಟಿ.ಕೆ. ಸೂಚನೆಗಳನ್ನು ನೀಡಿದರು.

ಪ್ರತ್ಯೇಕ ಪರವಾನಿಗೆ: ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳು ಉದ್ದಿಮೆ ಪರವಾನಿಗೆ ಜೊತೆಗೆ ತಂಬಾಕು ಉತ್ಪನ್ನ ಮಾರಾಟಕ್ಕೆ ಪ್ರತ್ಯೇಕ ಪರವಾನಿಗೆ ಹೊಂದಿರಬೇಕು ಎಂಬ ನಿಯಮ ಜಾರಿಯಲ್ಲಿದ್ದು, ಪ್ರಸ್ತುತ ಇದರ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಎಲ್ಲರೂ ಪ್ರತ್ಯೇಕ ಪರವಾನಿಗೆ ಹೊಂದುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

ಜಿಲ್ಲೆಯ ಶಾಲಾ-ಕಾಲೇಜುಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವು ದಕ್ಕೆ ನಿಷೇಧ ಹೇರಲಾಗಿದೆ. ಈ ಬಗ್ಗೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ನಿಗಾ ವಹಿಸಬೇಕು. ಕೋಟ್ಪಾ ಕಾಯಿದೆಯ ಉಲ್ಲಂಘನೆ ಕಂಡುಬಂದಲ್ಲಿ ಕೂಡಲೇ ಸಮಿತಿಗೆ ಮಾಹಿತಿ ನೀಡಬೇಕು ಎಂದ ಅವರು, ಸ್ಥಳೀಯ ಸಂಸ್ಥೆಗಳು ನಿಯಮ ಮೀರಿದ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಪರವಾನಿಗೆಯನ್ನು ರದ್ದು ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ರಾಜ್ಯಮಟ್ಟದಲ್ಲಿ ಅಭಿವೃದ್ಧಿಪ ಡಿಸಿದ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗೆ ಸಂಬಂಧಿಸಿದ ವೆಬ್‌ಸೈಟ್ ಅನ್ನು ನೀಡಿದ್ದು, ಅದರಲ್ಲಿ ಪ್ರತೀ ಶಾಲಾ- ಕಾಲೇಜಿನವರು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಯ ಮಾನದಂಡಗಳಿಗೆ ಬದ್ದವಾಗಿರುವುದರ ಕುರಿತು ಪರಿಶೀಲಿಸಿ, ನಮೂದಿಸಬೇಕು. ಇದು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂದವರು ನಿರಾಶೆ ವ್ಯಕ್ತಪಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪಿಯಲ್ಲಿ ಬರುವ ಜಿಲ್ಲೆಯ 1069 ಶಾಲೆಗಳಲ್ಲಿ 504 ಶಾಲೆಗಳನ್ನು ಮಾತ್ರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿ ಗಳು ಒಂದು ವಾರದ ಒಳಗೆ ಜಿಲ್ಲೆಯ ಎಲ್ಲಾ ಶಾಲೆಗಳು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗುವಂತೆ ನೋಡಿಕೊಂಡು ಅಪ್‌ಡೇಟ್ ಮಾಡಲು ಸೂಚಿಸಿದರು.

ಜಿಲ್ಲೆಯಲ್ಲಿ 2025ರ ಎಪ್ರಿಲ್ ತಿಂಗಳಿನಿಂದ ಈವರೆಗೆ 23ಕ್ಕೂ ಅಧಿಕ ದಿಢೀರ್ ದಾಳಿಗಳನ್ನು ನಡೆಸಿ, ಸೆಕ್ಷನ್ 4, ಸೆಕ್ಷನ್ 6(ಎ), 6(ಬಿ) ಅಡಿಯಲ್ಲಿ 324ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ 52,900 ರೂ ದಂಡ ವಸೂಲಿ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿಯೂ ಸಹ ಕೋಟ್ಪಾ ಕಾಯಿದೆಯನ್ನು ಉಲ್ಲಂಘಿಸಿದ 60 ಪ್ರಕರಣ ಗಳಿಂದ 6750 ರೂ. ದಂಡ ವಸೂಲಿ ಮಾಡಲಾಗಿದೆ ಎಂದ ಅವರು, ಈ ದಾಳಿಗಳ ಪ್ರಮಾಣ ಇನ್ನೂ ಹೆಚ್ಚಾಗು ವಂತೆ ನೋಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ್ ಹುಬ್ಬಳ್ಳಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News