ಸಾಹಿತ್ಯದ ಓದಿಗೆ ಮಗುತನ ಬೇಕು; ಪೂರ್ವಾಗ್ರಹ ರಹಿತವಾಗಿರಬೇಕು: ಬರಗೂರು ರಾಮಚಂದ್ರಪ್ಪ
ಹಿರಿಯಡ್ಕ : ಕಬ್ಬದುಳುವೆ ಹಳೆಗನ್ನಡ ಕಾವ್ಯದೋದು ಕಮ್ಮಟ
ಹಿರಿಯಡ್ಕ, ಸೆ.19: ಸಾಹಿತ್ಯದ ಮೊದಲ ಓದಿಗೆ ಮಗುತನ ಬೇಕು. ಸಾಹಿತ್ಯದ ಓದು ಪೂರ್ವಾಗ್ರಹ ರಹಿತವಾಗಿರ ಬೇಕು. ಹೀಗಾಗಿ ಓದು ಬಹಳ ಮುಖ್ಯವಾಗಿರುತ್ತದೆ. ಓದಿನಲ್ಲೂ ವೈವಿಧ್ಯತೆ ಇದೆ. ಓದಿಗೆ ಇರುವ ವಿವಿಧತೆ ಯನ್ನು ಗಮನಿಸಬೇಕು. ನಾವಿಂದು ವಿಭಜಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸನ್ನಿವೇಶದಲ್ಲಿದ್ದೇವೆ. ಹೀಗಾಗಿ ನಮ್ಮ ಓದು ಸಹ ವಿಭಜಕ ಆಗುವ ಅಪಾಯವಿರುತ್ತದೆ ಎಂದು ಹಿರಿಯ ಸಾಹಿತಿ, ಚಿಂತಕ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಪದವಿ ಪೂರ್ವ ಕಾಲೇಜು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ರಥಬೀದಿ ಗೆಳೆಯರು ಉಡುಪಿ ಹಾಗೂ ಹಿರಿಯಡಕ ಸರಕಾರಿ ಪದವಿ ಪೂರ್ವ ಕಾಲೇಜು ಇವುಗಳ ಸಹಯೋಗದಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರಿಗಾಗಿ ಇಂದು ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಕಬ್ಬದುಳುಮೆ ಹಳಗನ್ನಡ ಕಾವ್ಯದೋದು ಕಮ್ಮಟವನ್ನು ಮಣ್ಣಿನ ಮೇಲೆ ನೇಗಿಲು ಪ್ರತಿಕೃತಿಯನ್ನು ಚಲಾಯಿಸಿ, ಪಂಪ ಭಾರತದ ಪುಟಗಳನ್ನು ಬಿಡಿಸಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಿಭಜಕ ಓದು ಎಷ್ಟೋ ಸಾರಿ ಸಾಹಿತ್ಯಕೃತಿಯನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವುದನ್ನು ವಂಚಿ ಸುವ ಅಪಾಯವಿರುತ್ತದೆ. ಯಾವುದೇ ಪೂರ್ವಾಗ್ರಹವಿಲ್ಲದೇ ಸಾಹಿತ್ಯವನ್ನು ಓದಬೇಕು. ಅದನ್ನು ಒಪ್ಪುವುದು ಅಥವಾ ಒಪ್ಪದಿರುವುದು ನಂತರದ ಹಂತ. ಹೀಗೆ ಸಾಹಿತ್ಯದ ಮೊದಲ ಓದಿಗೆ ನಮಗೆ ಬೇಕಾಗಿರುವುದು ಮಗುತನ. ಮಗುತನ ಎಂದರೆ ನಮ್ಮ ಮೆದುಳಿನಲ್ಲಿ ಮಗುತನವಿದ್ದರೆ ಅಹಂಕಾರವಿಲ್ಲದ ಅರಿವಿನ ಆಸಕ್ತಿ ಇರುತ್ತೆ, ಕುತೂಹಲ ವಿರುತ್ತೆ ಎಂದವರು ಹೇಳಿದರು.
ಓದು ಪೂರ್ವಾಗ್ರಹದಿಂದ ಕೂಡಿರಬಾರದು. ಹಳೆಗನ್ನಡ ಕಾವ್ಯಗಳ ಓದಿಗೆ ಸಂಬಂಧಿಸಿದಂತೆ ನಾನು ಈ ಮಾತು ಗಳನ್ನು ಹೇಳುತಿದ್ದೇವೆ. ಹಳೆಗನ್ನಡ ಓದಿನ ಅಗತ್ಯದ ಬಗ್ಗೆ ಮಾತನಾಡಿದ ಬರಗೂರು, ಯಾವುದೇ ಗತಕಾಲದ ಇತಿಹಾಸ ವನ್ನಾಗಲಿ, ಸಾಹಿತ್ಯವನ್ನಾಗಲೀ ಓದಲು ಸಮಕಾಲೀನ ಪ್ರಜ್ಞೆಯ ಸಾಂಕೇತಿಕ ಅಗತ್ಯವಿದೆ ಎಂದವರು ಹೇಳಿದರು.
ಪರಂಪರೆ (ಚಲನಶೀಲ) ಹಾಗೂ ಸಂಪ್ರದಾಯ (ಜಡವಾದುದು) ಎರಡೂ ಒಂದೇ ಅಲ್ಲ. ಯಾವುದಕ್ಕೆ ಬೆಳವಣಿಗೆ ಇಲ್ಲದೆ ನಿಂತಿರುವುದೋ ಅದು ಸಂಪ್ರದಾಯ, ಯಾವುದು ಸದಾ ಚಲನಶೀಲವಾಗಿರುವುದೋ ಅದು ಪರಂಪರೆ. ಕಾಲದ ಜೊತೆ ಅನುಸಂಧಾನ ನಡೆಸುವ ಪರಂಪರೆಯನ್ನು ಅರ್ಥ ಮಾಡಿಕೊಳ್ಳಲು ಹಳೆಗನ್ನಡದ ಓದು ಮುಖ್ಯವಾಗುತ್ತದೆ. ಹಳೆಗನ್ನಡದ ಓದು ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಹಾಗೂ ಸಮಕಾಲೀನ ಪ್ರಸ್ತುತತೆ ಯನ್ನು ಕಂಡುಕೊಳ್ಳಲು ಅಗತ್ಯವಾಗಿದೆ ಎಂದವರು ಹೇಳಿದರು.
ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರಮದ ಕಾರಣಕ್ಕಾಗಿ ಇಂದು ಹಳೆಗನ್ನಡ ಓದನ್ನು ನಿರ್ಲಕ್ಷಿಸಲಾಗುತ್ತಿದೆ. ಕನ್ನಡ ಪರಂಪರೆಯ ಮಹಾನ್ ಕವಿ- ಪಂಪ, ರನ್ನ, ಲಕ್ಷ್ಮೀಶ, ಕುಮಾರವ್ಯಾಸ, ಶಿವಶರಣರು- ಗಳೆಲ್ಲರೂ ಹಳೆಗನ್ನಡ ಕವಿಗಳೇ ಆಗಿದ್ದು, ಸಮಕಾಲೀನವಾಗಿಯೂ ಬರೆದಿದ್ದಾರೆ. ಹೀಗಾಗಿ ಹಳೆಗನ್ನಡ ಓದು ಇಂದಿಗೂ ಮುಖ್ಯವಾಗುತ್ತದೆ ಎಂದರು.
ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಉದಯಕುಮಾರ್ ಶೆಟ್ಟ ಕಾಳಾವರ, ವಿಮರ್ಶಕರೂ ಆದ ಹೊಸಕೋಟೆ ಕಾಲೇಜು ಪ್ರಾಂಶುಪಾಲರಾದ ಪ್ರೊ.ರಾಮಲಿಂಗಪ್ಪ ಟಿ. ಬೇಗೂರು, ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ಮಂಗಳಗಂಗೋತ್ರಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ನಾಗಪ್ಪ ಗೌಡ, ಹಿರಿಯಡಕ ಪಿಯು ಕಾಲೇಜಿನ ರಮೇಶ್ ನಾಯಕ್ ಉಪಸ್ಥಿತರಿದ್ದರು.
ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಾಪಕ ನಂದೀಶ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ ದರೆ, ಕಾಲೇಜಿನ ಪ್ರಾಂಶುಪಾಲರಾದ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಆಶಯ ಭಾಷಣ ಮಾಡಿದರು. ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿಎಂ ವಂದಿಸಿದರೆ, ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಸೌಮ್ಯಲತಾ ಕಾರ್ಯಕ್ರಮ ನಿರೂಪಿಸಿದರು.