ಬೈಂದೂರು ಪ.ಪಂ. ಜನರಿಗೆ ಬೇಡವಾದರೆ ಬೆಂಬಲಿಸುತ್ತೇನೆ: ಸಂಸದ ಬಿವೈಆರ್
ಉಡುಪಿ, ಸೆ.23: ಬೈಂದೂರು ಪಟ್ಟಣ ಪಂಚಾಯತನ್ನು ನಮ್ಮ ಸರಕಾರ ಇದ್ದಾಗ ಒಳ್ಳೆಯ ಉದ್ದೇಶ ಇಟ್ಟುಕೊಂಡು ಮಾಡಿದ್ದು, ಆದರೆ ಜನ ಗ್ರಾಮಾಂತರ ಭಾಗದವರಿಗೆ ಸಮಸ್ಯೆಯಾಗುತ್ತಿದೆ ಎಂದು ಈಗ ಪಟ್ಟಣ ಪಂಚಾಯತ್ ಬೇಡ ಎಂದು ಹೇಳುತ್ತಿದ್ದಾರೆ. ಜನರಿಗೆ ಪಟ್ಟಣ ಪಂಚಾಯತ್ ಬೇಡವಾದರೆ ನಾನು ಅದಕ್ಕೆ ಬೆಂಬಲಿಸುತ್ತೇನೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭವಿಷ್ಯದ ಅಭಿವೃದ್ಧಿಗೆ ಪಟ್ಟಣ ಪಂಚಾಯತ್ ಬೇಕು ಎಂಬ ಉದ್ದೇಶದಿಂದ ನಾವು ರಚನೆ ಮಾಡಿದ್ದೇವೆ. ಆದರೆ ಜನರಿಗೆ ಇದರಿಂದ ಸಮಾಧಾನ ಇಲ್ಲದಿದ್ದರೆ ಪಟ್ಟಣ ಪಂಚಾಯತ್ ಬೇಡ. ಸಮಾಧಾನ ಇದ್ದವರಿಗೆ ಪಟ್ಟಣ ಪಂಚಾಯತ್‌ನಿಂದ ಒಳ್ಳೆದಾಗುತ್ತದೆ ಬೈಂದೂರು ತಾಲೂಕಿಗೆ ಒಂದಾದರೂ ಪಟ್ಟಣ ಕೇಂದ್ರ ಇರಬೇಕು ಎಂಬುದು ನಮ್ಮ ಆಶಯವಾಗಿತ್ತು ಎಂದರು.
ಕಾಂಗ್ರೆಸ್‌ನವರಿಗೆ ಒಳ್ಳೆಯದು ಮಾಡಲು ಆಗುವುದಿಲ್ಲ. ಅದಕ್ಕೆ ಈ ರೀತಿ ಮಾಡಲು ಹೊರಟಿದ್ದಾರೆ. ಬಿಜೆಪಿಗೆ ಯಾವ ನಾಯಕರನ್ನು ಕಾಂಗ್ರೆಸ್ ಬಳಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಕಾರ್ಯಕರ್ತರು ಬುದ್ಧಿವಂತರಿದ್ದಾರೆ. ಬೈಂದೂರಿನಲ್ಲಿ ಯಾರು ನಾಯಕರಿಲ್ಲ ಎಲ್ಲರೂ ಕಾರ್ಯಕರ್ತರೇ ಆಗಿದ್ದಾರೆ ಎಂದು ಅವರು ತಿಳಿಸಿದರು.
ಪಟ್ಟಣ ಪಂಚಾಯತ್ ಬೇಡ ಎಂದು ಹೋರಾಟ ನಡೆಸುತ್ತಿರುವ ದೀಪಕ್ ಕುಮಾರ್ ಶೆಟ್ಟಿ ಬಿಜೆಪಿಯ ತಾಲೂಕು ಅಧ್ಯಕ್ಷರಾಗಿದ್ದವರು. ಅವರು ಒಳ್ಳೆ ಕೆಲಸವನ್ನು ಮಾಡಿದ್ದಾರೆ. ಅವರ ಮನಸ್ಸಿನಲ್ಲಿ ಬೇರೆ ಆಲೋಚನೆಗಳು ಬರುತ್ತವೆ ಎಂದು ನನಗೆ ಅನಿಸುವುದಿಲ್ಲ ಎಂದು ಅವರು ಹೇಳಿದರು.
ಚರ್ಚೆಗಳು ನಡೆಯುತ್ತಿವೆ: ಗಂಟಿಹೊಳೆ
ಬೈಂದೂರು ಪಟ್ಟಣ ಪಂಚಾಯತ್‌ನ ಗ್ರಾಮಾಂತರ ಪ್ರದೇಶವನ್ನು ಕೈಬಿಡಬೇಕೆಂದು ಜನರು ಒತ್ತಾಯ ಮಾಡುತ್ತಿ ದ್ದಾರೆ. ಪಟ್ಟಣ ಪಂಚಾಯತ್ ವಿರುದ್ಧ ಯಾರು ಪ್ರತಿಭಟನೆ ಮಾಡಿದರೂ ಜನ ಬೆಂಬಲಿಸುತ್ತಾರೆ. ಪಟ್ಟಣ ಪಂಚಾಯ ತಿಗೆ ಯಾವ ಗ್ರಾಮಗಳು ಸೇರಬೇಕು ಬಿಡಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಎಲ್ಲ ಚರ್ಚೆಗಳು ಕಾರ್ಯಕರ್ತರು, ಶಾಸಕರು, ಅಧಿಕಾರಿಗಳ ಜೊತೆ ನಡೆಯುತ್ತಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಬೈಂದೂರು ಬಿಜೆಪಿಯ ಒಳಗೆ ಕಾರ್ಯಕರ್ತರು ಮಾತ್ರ ಕೈ ಆಡಿಸಲು ಸಾಧ್ಯ. ಇಲ್ಲಿ ಕಾರ್ಯಕರ್ತರು ಹೇಳಿದ್ದು ಮಾತ್ರ ನಡೆಯುವುದು. ಇದರಲ್ಲಿ ಕಾಂಗ್ರೆಸ್‌ನವರು ಕೈಯಾಡಿಸಲು ಸಾಧ್ಯ ಇಲ್ಲ. ಬೈಂದೂರಿನಲ್ಲಿ ಬಿಜೆಪಿ ನಾಯಕ ಪ್ರಧಾನವಾದ ಪಕ್ಷ ಅಲ್ಲ. ಬಿಜೆಪಿ ಕಾರ್ಯಕರ್ತರು ಸ್ಟ್ರಾಂಗ್ ಇರುವವರೆಗೆ ಇಂತದ್ದೆಲ್ಲ ನಡೆಯುವುದಿಲ್ಲ ಎಂದರು.